ಪಿ ಪಿ ಉಪಾಧ್ಯ ಸರಣಿ ಕಥೆ 65- ಆದಿ ಮತ್ತು ಅಂತ್ಯನಿಗೆ ಈಗ ಅವಳದೇ ಆಲೋಚನೆ…

ಪಿ ಪಿ ಉಪಾಧ್ಯ

ಆದಿ ಮತ್ತು ಅಂತ್ಯನಿಗೆ ಅಪ್ಪ ಸತ್ತದ್ದರ ದುಖದೊಂದಿಗೆ ಅಮ್ಮನಿಗೆ ಏನಾದರೂ ಆಗುತ್ತದೇನೋ ಎನ್ನುವ ಹೆದರಿಕೆಯೂ ಸುರುವಾಯ್ತು. ಹಿಂದೆ ಅನಂತನ ದೆಸೆಯಿಂದಾಗಿ ಅಮ್ಮ ಮಾನಸಿಕ ಗೊಂದಲಕ್ಕೆ ಒಳಗಾದದ್ದು ಅವರಿಬ್ಬರ ನೆನಪಿನಲ್ಲೂ ಇನ್ನೂ ಹಸಿ ಹಸಿಯಾಗಿಯೇ ಇದೆ. ಹಾಗೇನಾದರೂ ಆದರೆ ಎನ್ನುವ ಭಯ ಆವರಿಸಿತು ಈಗ. ಅಂತ್ಯ ಅಪ್ಪನ ಮಗ್ಗುಲಲ್ಲಿಯೇ ಕುಳಿತು ಇನ್ನೂ ಆಸೆಯಿಂದ ನೋಡುತ್ತಿದ್ದಾಗಲೇ ಆದಿ ಅಮ್ಮನ ಪಕ್ಕಕ್ಕೆ ಸರಿದವ ‘ಅಮ್ಮ ನೋಡು..’ ಎಂದರೆ ಆಕೆ ಕಣ್ಣರಳಿಸಿ ನೋಡಿದಳೇ ವಿನಃ ಮಾತನಾಡಲಿಲ್ಲ. ಆದಿಗೆ ಇದ್ದದ್ದೂ ಹೆದರಿಕೆ ಹೆಚ್ಚಾಯ್ತು. ‘ಅಂತ್ಯ ಇಲ್ಲಿ ನೋಡೋ.. ಅಮ್ಮನೂ ಮಾತನಾಡುತ್ತಿಲ್ಲ’

ಅಂತ್ಯ ಗಾಬರಿಯಿಂದ ಎದ್ದು ಈಚೆ ಬಂದ. ಅಷ್ಟರಲ್ಲಿ ಅವರಿಬ್ಬರಿಗೂ ಧೈರ್ಯ ತುಂಬಿಸುವವಳ೦ತೆ ಎದ್ದು ನಿಂತ ಅಮ್ಮ ಗಂಡ ಮಲಗಿದೆಡೆಗೆ ಹೋಗಿ ಅವರ ಕಾಲುಬುಡದಲ್ಲಿ ಕುಳಿತಳು. ಹಾಗೆಯೇ ಗಂಡನ ಎರಡೂ ಕಾಲುಗಳನ್ನು ತನ್ನ ಎರಡೂ ಕೈಗಳಿಂದ ಹಿಡಿದುಕೊಂಡು ಗೋಳೋ ಎಂದು ಅಳತೊಡಗಿದಳು. ಈಗ ಅಣ್ಣ ತಮ್ಮಂದಿರಿಬ್ಬರಿಗೂ ಇದ್ದುದರಲ್ಲಿಯೇ ಸಮಾಧಾನ. ಅಮ್ಮನಿಗೆ ಏನೂ ಆಗಲಿಲ್ಲವಲ್ಲ ಎಂದು.

ಅಷ್ಟು ಹೊತ್ತಿಗೆ ಮನೆಯ ಕೆಲಸದವರ ಮೂಲಕ ಸುದ್ದಿ ಹಬ್ಬಿ ಜನರು ಒಬ್ಬೊಬ್ಬರಾಗಿ ಬರತೊಡಗಿದ್ದರು. ಶಾಮಣ್ಣ ಸ್ಥಿತಿವಂತರು. ಮೇಲಾಗಿ ಊರಿನ ಮಂದಿಗೆ ಸಾಧ್ಯವಾದಲ್ಲೆಲ್ಲ ಸಹಾಯ ಮಾಡಿದವರು. ಅಷ್ಟೇ ಅಲ್ಲ ಮಕ್ಕಳಿಬ್ಬರೂ ಒಂದಲ್ಲ ಒಂದು ರೀತಿಯಿಂದ ಊರಿಗೆ ಬೇಕಾದವರು. ಆದಿಯಂತೂ ಸಹಾಯ ಮಾಡದ ಜನರೇ ಇರಲಿಲ್ಲ ಆ ಊರಲ್ಲಿ. ಹಾಗಿರುವಾಗ ಆ ಜನರು ಬಾರದೇ ಇರುತ್ತಾರೆಯೇ. ಸ್ವಲ್ಪ ಹೊತ್ತಿನಲ್ಲಿಯೇ ಮನೆ ಒಳಗೆ ಹೊರಗೆ ಮತ್ತು ಅಂಗಳದ ತುಂಬೆಲ್ಲ ಜನರೇ.

ಅಷ್ಟರಲ್ಲಿ ನೆರೆದ ಮಂದಿಯಲ್ಲಿ ಯಾರೋ ಮುಂದಿನ ಕಾರ್ಯಕ್ರಮಕ್ಕೆ ಗಡಿ ಬಿಡಿ ಮಾಡಲು ಸುರು ಮಾಡಿದ್ದರು. ಆಗ ತುಸು ಸುಧಾರಿಸಿಕೊಂಡಿದ್ದ ಆದಿಯೇ ಅವರನ್ನು ತಡೆದಿದ್ದ. ‘ಅಷ್ಟೆಲ್ಲ ಅವಸರ ಮಾಡಬೇಡಿ. ಬರುವವರೆಲ್ಲ ಬರಲಿ’ ಎಂದರೆ ಅಲ್ಲಿಯೇ ಇದ್ದವರೊಬ್ಬರು ‘ಯಾರು ಅಮೆರಿಕದಲ್ಲಿದ್ದವನೂ ಬರಬೇಕೇ’ ಎಂದು ಕೇಳಿದರು. ಅನಂತನಿಗೆ ಒಂದು ಸುದ್ದಿಯನ್ನಾದರೂ ಕೊಡಬೇಕು ಎಂದು ಆಗಲೇ ಹೊಳೆದದ್ದು ಆದಿಗೆ. ಹಾಗೆಯೇ ಇನ್ನೂ ಶಾಕಿನಿಂದ ಹೊರಬರಲು ಕಷ್ಟಪಡುತ್ತಲೇ ಇದ್ದ ಅಂತ್ಯನೆಡೆಗೆ ಹೋದವ ನಿಧಾನವಾಗಿ ‘ಅಂತ್ಯ, ಅನಂತನಿಗೊ೦ದು ಸುದ್ದಿ ತಲುಪಿಸಬೇಕಲ್ಲವೇ ಹೇಗೆ?’ ಈಗ ಅಂತ್ಯನಿಗೂ ಗೊಂದಲ. ಅನಂತನನ್ನು ಹೇಗೆ ಸಂಪರ್ಕಿಸುವುದು ಎನ್ನುವುದರ ಬಗ್ಗೆ ಅವನಿಗೂ ಅಂದಾಜಿರಲಿಲ್ಲ. ‘ಹೌದಲ್ಲ ಅಣ್ಣ. ಅದು ಹೇಗೆ’

ಮೊದಲೆಲ್ಲ ಅನಂತನ ಬಗ್ಗೆ ವರದಿ ಒಪ್ಪಿಸುತ್ತಿದ್ದ ಆ ಶಂಕ್ರನೂ ಈಗ ಖಾಯಂ ಆಗಿ ಇಂಡಿಯಾಕ್ಕೇ ಬಂದು ನೆಲೆಸಿ ವರ್ಷದ ಮೇಲಾಗಿದೆ. ಬೆಂಗಳೂರಿನಲ್ಲೇ ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಇತ್ತೀಚೆಗೆ ಒಮ್ಮೆ ಊರಿಗೆ ಬಂದವ ಇವರನ್ನು ಭೇಟಿಯಾಗಿ ‘ಅನಂತ ನನಗೂ ಸಿಗುತ್ತಿಲ್ಲ ಈಗ. ಕಂಪೆನಿಯನ್ನೂ ಬದಲಾಯಿಸಿದ್ದಾನೆ. ಅಲ್ಲದೆ ಅವನ ಫೋನ್ ನಂಬ್ರವೂ ಬದಲಾಗಿದೆ’ ಎಂದಿದ್ದ.

ಎಷ್ಟು ತಲೆ ಕೆರೆದುಕೊಂಡರೂ ಸಮಸ್ಯೆಗೆ ಪರಿಹಾರ ದೊರಕಲಿಲ್ಲ. ಬಂದವರೂ ಅದನ್ನೇ ಕೇಳಹತ್ತಿದ್ದರು. ಯಾರಿಗೆ ಉತ್ತರ ಕೊಡಲೂ ಸಾಧ್ಯವಾಗದೆ ಅಮ್ಮನ ಹತ್ತಿರವೇ ಹೋಗಿದ್ದರು. ಈಗ ಅವಳು ಅಳುವನ್ನು ತುಸು ಹತೋಟಿಗೆ ತಂದುಕೊ೦ಡಿದ್ದರೂ ಕಣ್ಣೀರಿಳಿಸುತ್ತ ಅಪ್ಪನ ಕಾಲು ಬುಡದಲ್ಲಿಯೇ ಕುಳಿತಿದ್ದಳು. ಆದಿ ಕೇಳಿದ ‘ಅಮ್ಮ ಸಮಾಧಾನ ಮಾಡಿಕೋ.. ಮುಂದಿನ ಕೆಲಸ ಆಗ ಬೇಕಲ್ಲ. ಈಗ ಅನಂತನಿಗೆ ಏನು ಮಾಡೋದು..’ ಅಂತಹ ದುಃಖದಲ್ಲೂ ಅಮ್ಮ ಕೆರಳಿದ್ದಳು. ‘ಯಾಕೆ ಅವ.. ಅವ ನಮ್ಮ ಪಾಲಿಗೆ ಇನ್ನೂ ಇದ್ದಾನೆಯೇ… ಸತ್ತು ಯಾವುದೋ ಕಾಲವಾಯ್ತು..  ಮರೆತುಬಿಡಿ. ನೀವೇ ಮುಂದುವರಿಸಿ’ ಎಂದಳು.

ಶಾಮಣ್ಣ ಸತ್ತ ಸುದ್ದಿ ಕೇಳಿಯೇ ಬಂದ ಪುರೋಹಿತರು ಹೇಳಿಕೊಟ್ಟಂತೆ ಮುಂದಿನ ಎಲ್ಲ ಕಾರ್ಯಕ್ರಮಗಳೂ ನಡೆದವು. ಮನೆಯ ಪಕ್ಕದ ಹಾಡಿಯಲ್ಲಿಯೇ ಸುಡುವ ಕೆಲಸವೂ ಮುಗಿಯಿತು. ಆದಿ ಮತ್ತು ಅಂತ್ಯ ಎಲ್ಲ ಕೆಲಸಗಳನ್ನೂ ಯಾಂತ್ರಿಕವಾಗಿಯೇ ಮುಗಿಸಿದರು. ಅಮ್ಮನ ಮುಖ ನೋಡುವ ಧೈರ್ಯ ಮಾತ್ರ ಅವರಿಗೆ ಬರಲಿಲ್ಲ.

ಯಕ್ಷಗಾನ ಕೇಂದ್ರದಿ೦ದಲೂ ಜನರೆಲ್ಲರೂ ಸುದ್ದಿ ತಿಳಿದಾಕ್ಷಣವೇ ಬಂದಿದ್ದರು. ನಾಲ್ಕೈದು ಆಟೋಗಳಲ್ಲಿ ಬಂದ ಅವರ ಜೊತೆ ಶಾಸ್ತ್ರೀಗಳೂ ಇದ್ದರು. ತಮ್ಮ ದುಃಖದ ನಡುವೆಯೂ ಆದಿ ಕೇಳಿದ ಅವರನ್ನು ‘ನೀವು ಯಾಕೆ ಬರಹೋದಿರಿ ಶಾಸ್ತ್ರೀಗಳೇ’ ಉತ್ತರಿಸಲು ಸಾಧ್ಯವಾಗದ ಶಾಸ್ತ್ರೀಗಳು ಮುಖ ತಿರುಗಿಸಿದರು.

ಮುಂದಿನ ಹತ್ತು ದಿನಗಳಲ್ಲೂ ಅಷ್ಟೆ. ಜನ ಬರುತ್ತಲೇ ಇದ್ದರು ಸಾವಿನ ಮನೆಗೆ ಮಾತನಾಡಿಸಿಕೊಂಡು ಹೋಗಲು. ಕಮಲಮ್ಮ ಮಾತ್ರ ಯಾರೊಂದಿಗೂ ಮಾತಾಡುತ್ತಿರಲಿಲ್ಲ. ಆದಿ ಮತ್ತು ಅಂತ್ಯನೇ ಎಲ್ಲರನ್ನೂ ಸುಧಾರಿಸಬೇಕಾಯ್ತು. ತೀರ್ಥಹಳ್ಳಿಯಿಂದ ಕಮಲಮ್ಮನ ಅಣ್ಣ ತಮ್ಮಂದಿರೂ ಅವರ ಕುಟುಂಬವೂ ಎರಡನೇ ದಿನವೇ ಬಂದಿತ್ತು ದಿನವಿಡೀ ಅಲ್ಲಿಯೇ ಕಳೆದ ಅವರು ಸಾಧ್ಯವಾದಷ್ಟು ಸಾಂತ್ವನ ಹೇಳಿ ಮತ್ತೆ ಹತ್ತನೆಯ ದಿನ ಬರುವುದಾಗಿ ಹೇಳಿ ಹೋದರು. ಪ್ರೊಫೆಸರರೂ ಬಂದರು.

ಹನ್ನೊ೦ದನೇ ದಿನ ಮತ್ತು ಹನ್ನೆರಡನೇ ದಿನ ಜನಸಂಖ್ಯೆ ಜಾಸ್ತಿಯಿತ್ತು. ವೈಕುಂಠದ ದಿನವಂತೂ ಜಾತ್ರೆಯೇ ಸೇರಿದಂತೆ. ಎಲ್ಲರಿಗೂ ಊಟ. ಸುಮಾರು ಸಂಜೆ ನಾಲ್ಕು ನಾಲ್ಕೂ ವರೆಯ ವರೆಗೆ ಊಟದ ಕಾರ್ಯಕ್ರಮ ಸಾಗಿತು. ಊರಿನ ಹತ್ತು ಹಲವು ಜನ ಸೇರಿ ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದರು. ಹಾಗಾಗಿ ಆದಿ ಮತ್ತು ಅಂತ್ಯ ಅಪ್ಪನ ಕಾರ್ಯಗಳನ್ನು ಯಾವುದೇ ಅಡಚಣಿಯಿಲ್ಲದೆ ಮಾಡಲು ಸಾಧ್ಯವಾಯ್ತು. ಕಮಲಮ್ಮ ಮಾತ್ರ ಮನೆಯಿಂದ ಅದೂ ಪಡಸಾಲೆಯಿಂದ ಹೊರಗೇ ಬರಲಿಲ್ಲ. ಮಾತನಾಡಿಸಲು ಬಂದವರೊ೦ದಿಗೂ ಹೂಂ.. ಊಹೂಂ… ಎನ್ನುತ್ತ ತಲೆಯಲ್ಲಾಡಿಸುತ್ತಿದ್ದಳಷ್ಟೇ ಬಿಟ್ಟರೆ ಬೇರೆ ಏನೂ ಮಾತನಾಡುತ್ತಿರಲಿಲ್ಲ.

ಅಪ್ಪನ ಸಾವಿನ ದು:ಖ ಜೊತೆಗೆ ಅಮ್ಮನ ಈ ಪರಿಸ್ಥಿತಿ ಮಕ್ಕಳಿಗೆ ಚಿಂತೆ ತಂದಿಟ್ಟಿತು. ಆದಿ ಮತ್ತು ಅಂತ್ಯನಿಗೆ ಈಗ ದಿನ ಬೆಳಗಾದರೆ ಅವಳದೇ ಆಲೋಚನೆ. ವೈಕುಂಠ ಸಮಾರಾಧನೆಯ ಮಾರನೆಯ ದಿನವೇ ಕೇಂದ್ರಕ್ಕೆ ಹೋಗಿದ್ದ ಅಂತ್ಯ. ಅಲ್ಲಿನ ಕೆಲಸ ಕರೆಯುತ್ತಿತ್ತಲ್ಲ. ಅಲ್ಲಿ ಅವನನ್ನು ನೋಡಿದ ಶಾಸ್ತ್ರೀಗಳೇ ಕೇಳಿದ್ದರು ‘ಅಷ್ಟು ಅರ್ಜೆಂಟಿನಲ್ಲಿ ಯಾಕೆ ಬಂದೆ. ಇನ್ನೊಂದೆರಡು ದಿನ ಅಮ್ಮನೊಡನೆ ಕಳೆದು ಬರಬಹುದಿತ್ತಲ್ಲ’ ಎಂದು. ‘ಇಲ್ಲ ಆದಿ ನೋಡಿಕೊಳ್ಳುತ್ತೇನೆಂದಿದ್ದಾನೆ. ಅವನೇ ಕಳುಹಿಸಿದ್ದು ನನ್ನನ್ನು’ ಎಂದ ಅಂತ್ಯ. 

। ಇನ್ನು ನಾಳೆಗೆ ।

‍ಲೇಖಕರು Admin

July 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: