ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆ ಅಪಘಾತ ಮತ್ತು ಒಂದು ಸಂವತ್ಸರದ ಮೌನ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

16

ಶ್ರೀಕಂಠನ್ ರವರ ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ಅವರ ಸುದೀರ್ಘ, ಸೃಜನಶೀಲ ಜೀವನದಲ್ಲಿ ಯಾವ ಕೊರತೆಯೂ ಇರಲಿಲ್ಲ. ಅವರ ಬಾಳಿನಲ್ಲಿ ವಿಶೇಷತಃ ನಾದದ ಹರಿವಿನಲ್ಲಿ ಯಾವುದೇ ಅಡೆತಡೆಯನ್ನೂ ಯಾರೂ ಮುಂಗ೦ಡಿರಲಿಲ್ಲ. ೧೯೯೫ರಲ್ಲಿ ಚೆನ್ನೈನ ಮ್ಯೂಸಿಕ್ ಅಕಾಡೆಮಿ, ೧೯೯೬ನೇ ಇಸವಿಯಲ್ಲಿ ತಾನು ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಶ್ರೀಕಂಠನ್ ರವರಿಗೆ ನೀಡುವುದಾಗಿ ಅದಾಗಲೇ ಪ್ರಕಟಿಸಿತ್ತು.

ಶ್ರೀಕಂಠನ್ ರವರು ಸ್ವಭಾವತಃ ವಿನಯ ಸಂಪನ್ನರಾದ್ದರಿ೦ದ ಮನೆಯ ದಿನನಿತ್ಯದ ಕೆಲಸಗಳಲ್ಲಿ ಕೈಜೋಡಿಸುವುದರಲ್ಲಿ ಅವರಿಗೆ ನೂರಕ್ಕೆ ನೂರು ನಂಬಿಕೆ. ನಿಜ ಹೇಳಬೇಕೆಂದರೆ ಅವರು ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸುತ್ತಿದ್ದುದಲ್ಲದೆ, ದೊಡ್ಡ ಹತ್ತಿಯ ಕೈಚೀಲದೊಡನೆ ಮನೆಗೆ ನಡೆದುಕೊಂಡುಬರುತ್ತಿದ್ದರು.

ಅದು ಬೆಂಗಳೂರಿನಲ್ಲಿ ರಾಮೋತ್ಸವದ ಸಮಯ. ನಗರದಲ್ಲಿ ಆಗತಾನೇ ಬಿದ್ದ ಮೊದಲ ಮಳೆಯ ಕಂತುಗಳು, ರಸ್ತೆಗಳು ಗುಂಡಿಗಳಾಗಿ ಅಗಲವಾಗಿ ಬಾಯ್ದೆರೆಯುವಂತೆ ಮಾಡಿದ್ದವು. ಶ್ರೀಕಂಠನ್ ರವರ ಕೈಯಲ್ಲಿದ್ದ ಚೀಲ ಸಾಮಾನಿನಿಂದ ತುಂಬಿತ್ತು. ತಮ್ಮ ಭಾವದಲ್ಲಿ ತಾವು ಹೆಜ್ಜೆಹಾಕುತ್ತಿದ್ದ ಅವರು ಪ್ಯಾಲೇಸ್ ಗುಟ್ಟಹಳ್ಳಿಯ ಬಳಿ ದೊಡ್ಡದೊಂದು ಹಳ್ಳವಿದ್ದುದನ್ನು ಗಮನಿಸಲೇ ಇಲ್ಲ. ತಮ್ಮ ಸಮತೋಲನವನ್ನು ಕಳೆದುಕೊಂಡು ಆ ದೊಡ್ಡ ಗುಂಡಿಯೊಳಗೆ ಬಿದ್ದುಬಿಟ್ಟರು. ಇದ್ದಕ್ಕಿದ್ದಂತೆ ಅವರು ಹೀಗೆ ರಸ್ತೆಯ ಮೇಲೆ ಬಿದ್ದುದರಿಂದ ಅವರ ಬೆನ್ನಿಗೆ ಪೆಟ್ಟು ತಗುಲಿತು. ಅವರು ಬಹಳ ಕಷ್ಟಪಟ್ಟು ಮನೆಗೆ ನಡೆದುಬಂದರು.

ನಂತರ ವೈದ್ಯರು ಅವರ ಮೂಳೆ ಮುರಿದಿರುವುದನ್ನು ಖಚಿತಪಡಿಸಿ, ಎಡಗಾಲಿಗೆ ಪ್ಲಾಸ್ಟರ್ ಹಾಕಿದರು. ಆದರೆ ಅವರು ಮನೆಯಲ್ಲೇ ಉಳಿದುಕೊಂಡು ರಾಮನವಮಿಯ ಕಛೇರಿಗಳನ್ನು ರದ್ದುಪಡಿಸಿಯಾರೆ? “ಈ ಪರಿಸ್ಥಿತಿಯಲ್ಲಿ ನಮ್ಮ ತಂದೆ ಹದಿನೈದು ಕಚೇರಿಗಳನ್ನು ಮಾಡಿದರು. ಕೋಲಿನ ಸಹಾಯದಿಂದ ಅವರು ಪ್ರತಿಯೊಂದು ವೇದಿಕೆಯನ್ನೂ ಏರಿದರು ಮತ್ತು ಎತ್ತರದ ಕುರ್ಚಿಯ ಮೇಲೆ ಕುಳಿತುಕೊಂಡು ಏನೂ ಆಗಿಯೇ ಇಲ್ಲ ಎಂಬ೦ತೆ ಹಾಡಿದರು” ಎಂದು ನೆನಪಿಸಿಕೊಳ್ಳುತ್ತಾರೆ ಮಗ ಕುಮಾರ್. ಮುಂದುವರಿಸುತ್ತ ಅವರು ಹೇಳುತ್ತಾರೆ, “೧೯೯೫ನ ಡಿಸೆಂಬರ್ ಮತ್ತು ೧೯೯೬ರ ಜನವರಿಯಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಗೆ ಆಯ್ಕೆಯಾದ ಪ್ರಯುಕ್ತ, ಅವರು ಚೆನ್ನೈನ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಡಿಸೆಂಬರ್ ಸಂಗೀತ ಋತುವಿನ ಅಧ್ಯಕ್ಷರಾಗಿ ಆಯ್ಕೆಗೊಂಡರು. ವಿಪರೀತ ಬೆನ್ನು ನೋವಿನ ನಡುವೆಯೂ ಅವರು ಅಲ್ಲಿಗೆ ಹೋಗಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು ಮತ್ತು ೧೯೯೬ನೇ ಇಸವಿಯ ಹೊಸವರ್ಷದ ದಿನದಂದು ಪ್ರಶಸ್ತಿಯನ್ನು ಸ್ವೀಕರಿಸಿದರು!”. ಆಗಿನಿಂದ ಕೆಲದಿನಗಳ ನಂತರ ಶ್ರೀಕಂಠನ್ ರವರ ಬೆನ್ನುನೋವು ಭಯಂಕರವಾಗಿ ಹೆಚ್ಚಿಬಿಟ್ಟಿತು. ಎಲ್ಲ ವಿಧದ ಅಲೋಪತಿ ಚಿಕಿತ್ಸೆಯನ್ನು ನೀಡಲಾಯಿತು. ಆದರೆ ಯಾವುದರಿಂದಲೂ ಏನೂ ಪ್ರಯೋಜನವಾಗಲಿಲ್ಲ. ೭೫ ವಯಸ್ಸಿನ ಶ್ರೀಕಂಠನ್ ಹಾಸಿಗೆ ಹಿಡಿಯಬೇಕಾಯಿತು. ಅವರ ಜೀವನದಲ್ಲಿ ಪ್ರಥಮ ಬಾರಿಗೆ ಅವರ ಹಾಡಿಕೆ ಸಂಪೂರ್ಣವಾಗಿ ನಿಂತುಹೋಯಿತು. ಕುಮಾರ್ ಹೇಳುತ್ತಾರೆ, “ಆ ಸಮಯದಲ್ಲಿ ಅವರ ಪರಿವಾರ ವರ್ಗ, ಸ್ನೇಹಿತರು ಮತ್ತು ಬಾಂಧವರೆಲ್ಲರೂ ಆಸೆಯನ್ನು ಬಿಟ್ಟುಬಿಟ್ಟಿದ್ದರು. ಇದು ಶ್ರೀಕಂಠನ್ ರವರ ಗಾನಜೀವನದ ಕೊನೆ ಎನ್ನುವುದು ಅವರೆಲ್ಲರ ಅನಿಸಿಕೆಯಾಗಿತ್ತು” ಎಂದು.

ಕುಮಾರ್ ಮತ್ತೂ ಹೇಳುತ್ತಾರೆ, “ಆದರೆ ಅದೃಷ್ಟವಶಾತ್, ಶ್ರೀ ಶ್ರೀನಿವಾಸನ್ ಎನ್ನುವ ಒಬ್ಬರು ಹಿತೈಷಿಗಳು ಸಹಾಯಹಸ್ತ ಚಾಚಿ ಶ್ರೀಕಂಠನ್ ಅವರನ್ನು ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿರುವ ಮೂಳೆತಜ್ಞ ಡಾ. ಶ್ರೀನಿವಾಸನ್ ಅವರ ಬಳಿ ಕರೆದೊಯ್ದರು. ಶ್ರೀಕಂಠನ್ ರವರ ಬೆನ್ನಿನಲ್ಲಿ ಸೋಂಕು ಇರಬಹುದೆಂದು ಅನುಮಾನಿಸಿದ ಡಾ.ಶ್ರೀನಿವಾಸನ್ ದೀರ್ಘಕಾಲದವರೆಗೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳುವಂತೆ ವಿಧಿಸಿದರು. ಈ ಸಮಯದಲ್ಲಿ ಆಯುರ್ವೇದದ ಅಶ್ವಗಂಧ ಬಾಲಲಕ್ಷ ತೈಲವೂ ಶ್ರೀಕಂಠನ್ ಅವರ ನೆರವಿಗೆ ಬಂತು. ನರ ಮತ್ತು ಮಾಂಸಖ೦ಡಗಳ ಬಲವನ್ನು ಮರಳಿ ಪಡೆಯುವುದಕ್ಕಾಗಿ ಈ ತೈಲವನ್ನು ಪ್ರತಿದಿನ ಹಚ್ಚಿಕೊಳ್ಳಬೇಕಾಗಿತ್ತು. ೧೯೯೭ರ ಮಾರ್ಚ್ ತಿಂಗಳವರೆಗೆ ಶ್ರೀಕಂಠನ್ ತಮ್ಮ ಆರೋಗ್ಯದತ್ತ ವಿಶೇಷವಾಗಿ ಗಮನ ಹರಿಸಿದರು. ಕ್ರಮೇಣ ಅವರ ಆರೋಗ್ಯ ಸುಧಾರಿಸಿತು. ಈ ಸಮಯದಲ್ಲೊಮ್ಮೆ ಅವರಿಗೆ ಎ.ಐ.ಆರ್.ನಿಂದ ತಿಂಗಳ ರೆಕಾರ್ಡಿಂಗ್‌ಗಾಗಿ ಕರೆಬಂತು. ಈ ಕುರಿತು ಅವರು ಉತ್ಸಾಹ ತೋರಿದ್ದನ್ನು ಕಂಡು ನಾನು ಅವರನ್ನು ಆಲ್ ಇಂಡಿಯಾ ರೇಡಿಯೋದ ಸ್ಟುಡಿಯೋಗೆ ಕರೆದುಕೊಂಡು ಹೋದೆ. ಧ್ವನಿಸುರಳಿಯ ರೆಕಾರ್ಡಿಂಗ್ ಪೂರ್ಣಗೊಂಡ ನಂತರ ಅವರು ಅದನ್ನು ಪುನಃ ಹಾಕಿ ತೋರಿಸುವಂತೆ ಅಧಿಕಾರಿಗಳನ್ನು ಕೇಳಿಕೊಂಡರು. ತಮ್ಮ ದನಿಯನ್ನು ಅವರು ಧ್ವನಿಸುರಳಿಯಲ್ಲಿ ಆಲಿಸಿದ ನಂತರವೇ ಅವರಿಗೆ ನೆಮ್ಮದಿ ಎನಿಸಿದ್ದು. ಅವರು ಹೆಮ್ಮೆಯಿಂದ ಉದ್ಗರಿಸಿದರು: “ದೇವರ ದಯೆ! ನನ್ನ ಧ್ವನಿ ಹೆಚ್ಚೇನೂ ಬದಲಾಗಿಲ್ಲ, ಅದು ಮೊದಲಿನಂತೆಯೇ ಇದೆ!”

ನಲವತ್ತು ವರ್ಷಗಳ ಹಿಂದೆ ಲಾಲ್‌ಗುಡಿ ಜಯರಾಮನ್ ರವರ

ಪಿಟೀಲು ಪಕ್ಕವಾದ್ಯದೊಂದಿಗೆ ತಿರುವನಂತಪುರದ

ನವರಾತ್ರಿ ಕಛೇರಿಯನ್ನು ತಾವು ನಡೆಸಿಕೊಟ್ಟಾಗ, ಸುಪ್ರಸಿದ್ಧ

ಮೃದಂಗವಾದಕರಾದ ಟಿ.ಎಸ್.ಮಣಿ ಅಯ್ಯರ್ ಅವರು ಆಡಿದ

ಮಾತುಗಳಿಂದ ತಮ್ಮ ಹೃದಯ ತುಂಬಿಬ೦ದಿತು ಎನ್ನುತ್ತಾರೆ

ಶ್ರೀಕಂಠನ್. ಕಛೇರಿ ಪೂರ್ಣಗೊಂಡ ನಂತರ ಶ್ರೀಕಂಠನ್

ರವರು ಆ ಮೃದಂಗ ವಿದ್ವಾಂಸರನ್ನು “ಸ್ವಾಮಿ, ಹೇಗಿತ್ತು?”

ಎಂದು ಕೇಳಿದಾಗ ಅಯ್ಯರ್ ಅವರು ಹೇಳಿದರು:

“ಬ್ರಹ್ಮಾನಂದ! ನಿಮ್ಮ ಸಂಗೀತ ಶಾಶ್ವತವಾಗಿ ಉಳಿಯುತ್ತದೆ,

ಏಕೆಂದರೆ ನಿಮ್ಮಲ್ಲಿರುವ ಸರಕು ಅಂಥದ್ದು!” ಎಂದು.

“ಎಲ್ಲರೂ ಶ್ರೀಕಂಠನ್ ರವರು ತಮ್ಮ ಸಂಗೀತಪಯಣದ ತುತ್ತತುದಿಯಲ್ಲಿದ್ದಾರೆ ಎಂದುಕೊ೦ಡಿದ್ದಾಗ, ಅವರು ಮಲ್ಲೇಶ್ವರಂನ ರಾಜರಾಜೇಶ್ವರಿ ಕಲಾ ಕೇಂದ್ರಕ್ಕಾಗಿ ಆದರ್ಶ ಭವನದಲ್ಲಿ ಸಾರ್ವಜನಿಕ ಕಛೇರಿ ನೀಡುವ ಮೂಲಕ ವೇದಿಕೆಗೆ ಮತ್ತೆ ಮರಳಿದರು. ಅವರು ಎಂದಿನ೦ತೆ ವರ್ಣ ಮತ್ತು ಕೃತಿಯನ್ನು ಪ್ರಾರಂಭಿಸಿದಾಗ, ಪಕ್ಕವಾದ್ಯದಲ್ಲಿ ಮೃದಂಗ ನುಡಿಸುತ್ತಿದ್ದ ಟಿ.ಎ.ಎಸ್.ಮಣಿ ರವರ ನಯನಗಳಿಂದ ಅಶ್ರುಬಿಂದುಗಳು ಜಾರಿದವು. ಅವರು ಧ್ವನಿವರ್ಧಕವನ್ನು ಕೈಗೆತ್ತಿಕೊಂಡು ಹೇಳಿದರು: “ಅಂತೂ ಶ್ರೀಕಂಠನ್ ಎಂದರೆ ಇದೇ. ಅವರೊಳಗಿನ ಚೈತನ್ಯ ಅವರು ಸದಾ ಮುಂದುವರಿಯುತ್ತಲೇ ಇರುವಂತೆ ನೋಡಿಕೊಳ್ಳುತ್ತದೆ” ಎಂದು. ಪಿಟೀಲಿನಲ್ಲಿ ಪಕ್ಕವಾದ್ಯದಲ್ಲಿದ್ದ ಶೇಷಗಿರಿರಾಯರು “ಅವರ ಸಂಗೀತಕ್ಕೆ ತಡೆ ಒಡ್ಡುವ ಕಾಯಿಲೆಯ ಕುರುಹೂ ಅವರ ಗಾಯನದಲ್ಲಿಲ್ಲ. ಅವರ ದೃಢತೆ ಮತ್ತು ಶಕ್ತಿಗಳು ಅವರ ಸಂಗೀತದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿವೆ” ಎನ್ನುವುದನ್ನು ಗಮನಿಸಿ ಅವಾಕ್ಕಾದರು.

ಈ ಘಟನೆ ಶ್ರೀಕಂಠನ್ ರವರ ನಾದಜೀವನದಲ್ಲಿ ಮತ್ತೊಂದು ತಿರುವಾಯಿತು. ಇದ್ದಕ್ಕಿದ್ದಂತೆ ಈ ಸಂಗೀತ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಎಲ್ಲೆಡೆಯಿಂದ ಕಛೇರಿಗಳಿಗೆ ಆಹ್ವಾನ ಬರಲಾರಂಭಿಸಿತು. ಅವರು ಮತ್ತೊಮ್ಮೆ ದ್ವಿಗುಣಿತ ಶಕ್ತಿಯಿಂದ ವೇದಿಕೆಗೆ ಮರಳಿದ್ದು ಜನರ ಹೃದಯವನ್ನು ಸ್ಪರ್ಶಿಸಿರಬೇಕು ಅಥವಾ ಅವರ ಕುರಿತ ಅನುಕಂಪದ ಅಲೆ ಕೆಲಸ ಮಾಡಿತ್ತೆ? “ಯಾವುದಾದರೂ ಅದರಿಂದೇನು? ನಮ್ಮ ತಂದೆ ತಾವು ಗಾಯನಕ್ಷೇತ್ರಕ್ಕೆ ಹಿಂದಿರುಗಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿದ್ದರು” ಎನ್ನುತ್ತಾರೆ ಕುಮಾರ್, “ಅವರು ಮತ್ತೆ ಸಂಗೀತದ ಹಾದಿಗೆ ತಮ್ಮನ್ನು ತಾವು ಕರೆದುಕೊಂಡು ಬಂದಿದ್ದರು. ಅದು ನಮ್ಮ ಪಾಲಿಗೆ ಅದ್ಭುತ ಎನಿಸಿತ್ತು”.

ಆದರೆ, ಕೆಲವು ದಿನಗಳ ನಂತರ ಅವರ ಎ.ಐ.ಆರ್ ಗೆಳೆಯರಾದ ದೊರೆಸ್ವಾಮಿ ಐಯ್ಯಂಗಾರರು ಕೊನೆಯುಸಿರೆಳೆದರು. ತಮ್ಮ ಸ್ನೇಹಿತರೂ ಸಹೋದ್ಯೋಗಿಗಳೂ ಆಗಿದ್ದ ಅವರನ್ನು ಕಳೆದುಕೊಂಡ ಶ್ರೀಕಂಠನ್ ರವರ ಮನಸ್ಸು ಕದಡಿತು. ಮೌನವಾಗಿಹೋದ ಆ ಶ್ರೇಷ್ಠ ವೈಣಿಕರನ್ನು ನೋಡಿಕೊಂಡು ಬಂದ ಶ್ರೀಕಂಠನ್,“ಇದೇ ಜೀವನ. ನೀವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ ಉಳಿಯುತ್ತವೆ. ನಾವು ಕೇವಲ ಇಲ್ಲಿಗೆ ಬಂದು ಹೋಗುವ ನಟರು ಮಾತ್ರ” ಎಂದು ಭಾರವಾದ ಹೃದಯದಿಂದ ಬಿಸುಸುಯ್ದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: