ಪಿ ಪಿ ಉಪಾಧ್ಯ ಸರಣಿ ಕಥೆ 63- ಅಂತ್ಯ ಮೌನ ಪ್ರೇಕ್ಷಕನೇ…

ಪಿ ಪಿ ಉಪಾಧ್ಯ

ಟಾನಿಕ್ಕು ಮಾತ್ರೆಗಳಿಂದ ಒಂದೆರಡು ದಿನಕ್ಕೇ ತುಸು ಸುಧಾರಿಸಿದಂತೆ ಕಂಡ ಶಾಸ್ತ್ರೀಗಳು ಪುನಃ ತಮ್ಮ ಮಾಮೂಲಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹವಣಿಸಿದರು. ಆದರೆ ಅಂತ್ಯ ಬಿಡಲಿಲ್ಲ. ‘ಪರವಾಯಿಲ್ಲ. ನಾನು ಮೆನೇಜು ಮಾಡಬಲ್ಲೆ’ ಎಂದು ಅವರಂದರೂ ಅಂತ್ಯ ಒಪ್ಪಲಿಲ್ಲ. ಅಷ್ಟೇ ಅಲ್ಲ ವಾರದ ನಡುವೆ ಬಂದ ಆದಿಯೂ ಶಾಸ್ತ್ರೀಗಳಿಗೆ ತುಸು ಜೋರಾಗಿಯೇ ಹೇಳಿದ. ಅವನೆದುರಿಗೆ ಒಪ್ಪಿದಂತೆ ನಟಿಸಿದ ಅವರು ಅವನು ಆಚೆ ಹೋದದ್ದೇ ತರಬೇತಿ ನಡೆಯುತ್ತಿದ್ದ ರೂಮಿಗೆ ಹೋಗಿ ಅಲ್ಲಿ ತಪ್ಪು ಹೆಜ್ಜೆ ಹಾಕುತ್ತಿದ್ದ ಇಬ್ಬರೆದುರಿಗೆ ತಾನೇ ಕುಣಿದು ತೋರಿಸಿದರು.

ಹತ್ತಿಪ್ಪತ್ತು ಹೆಜ್ಜೆ ಹಾಕಿದ ಅವರು ಎಲ್ಲರೂ ನೋಡುತ್ತಿದ್ದಂತೆ ಕುಸಿದೇ ಬಿಟ್ಟರು. ಹಿಂದಿನಿ೦ದಲೆ ಬಂದಿದ್ದ ಅಂತ್ಯ ಇಲ್ಲದಿರುತ್ತಿದ್ದರೆ ಹತ್ತಿರದಲ್ಲಿಯೇ ಇದ್ದ ಮೇಜಿಗೆ ತಲೆ ಬಡಿದೇ ಬಿಡುತ್ತಿತ್ತೇನೋ. ಅವರನ್ನು ಎದೆಗೊತ್ತಿ ಹಿಡಿದುಕೊಂಡ ಅಂತ್ಯ ನಿಧಾನವಾಗಿ ಅವರ ರೂಮಿಗೆ ಕರೆದುಕೊಂಡು ಹೋದ.

ಅಣ್ಣನಿಗೆ ಕೂಡಲೇ ಫೋನ್ ಮಾಡಿ ಹೇಳಿದರೆ ಯಾವುದೋ ಕೆಲಸದಲ್ಲಿದ್ದ ಆದಿ ಅದನ್ನು ಅಲ್ಲಿಗೇ ಬಿಟ್ಟು ಬಂದವ ಶಾಸ್ತ್ರೀಗಳನ್ನು ನೋಡಿದವನೇ ಡಾಕ್ಟರಿಗೆ ಫೋನ್ ಮಾಡಿದ. ಆದಿ ಹೇಳಿದನೆಂದ ಮೇಲೆ ಡಾಕ್ಟರು ತಡಮಾಡಲಿಕ್ಕುಂಟೆ. ಅದೂ ಶಾಸ್ತ್ರೀಗಳಿಗೋಸ್ಕರ ಎಂದಾಗ. ಹತ್ತೇ ನಿಮಿಷಗಳಲ್ಲಿ ಅಲ್ಲಿದ್ದರು.

ಮತ್ತೊಮ್ಮೆ ಶಾಸ್ತ್ರೀಗಳನ್ನು ಕೂಲಂಕುಷವಾಗಿ ಪರೀಕ್ಷಿಸಿದ ಅವರು ಹೇಳಿದ್ದು ಇಷ್ಟೆ ‘ಇನ್ನು ಮೇಲಿಂದ ಇವರು ಕುಣಿಯುವುದು, ಚಂಡೆ, ಮದ್ದಲೆ ಬಾರಿಸುವುದು ಮಾಡಬಾರದು. ಅಷ್ಟೇ ಅಲ್ಲ. ಯಾವುದೇ ಟೆನ್ಶನ್ ಆಗುವಂತಹ ಚಟುವಟಿಕೆಯಲ್ಲೂ ಭಾಗವಹಿಸಬಾರದು’ ಎಂದವರು ‘ವಯಸ್ಸಾಯಿತಲ್ಲವೇ ಇನ್ನು ಎಷ್ಟು ದಿನ ಈ ತರ ನಡೆಯಲು ಸಾಧ್ಯ. ಅಂದ ಹಾಗೆ ಎಷ್ಟು ವಯಸ್ಸು ಅವರಿಗೆ’ ಎಂದು ಆದಿಯತ್ತ ತಿರುಗಿ ಕೇಳಿದರು. ಆದಿ ಅಂತ್ಯ ಇಬ್ಬರೂ ಮುಖ ಮುಖ ನೋಡುತ್ತಿರುವಾಗಲೇ ‘ನಾಡಿದ್ದು ಜನವರಿ ಇಪ್ಪತ್ತಕ್ಕೆ ಎಂಭತ್ತೊ೦ದು ತುಂಬುತ್ತದೆ ಡಾಕ್ಟರೇ’ ಎಂದು ಶಾಸ್ತ್ರೀಗಳೇ ಹೇಳಿದರು. ಧ್ವನಿ ತುಸು ಕ್ಷೀಣವಾಗಿದ್ದರೂ ಸ್ಪಷ್ಟತೆಯಿತ್ತು.

‘ಮತ್ತೆ ಈ ವಯಸ್ಸಿನಲ್ಲೂ ಇಪ್ಪತ್ತರ ಹುಡುಗನಂತೆ ಇರುತ್ತೇನೆ ಎಂದರೆ ಆಗುತ್ತದೆಯೇ’ ಎಂದ ಡಾಕ್ಟರು ‘ಹಾಗೆ ನೋಡ ಹೋದರೆ ನೀವು ತುಂಬಾ ಆರೋಗ್ಯವಂತರೆ೦ದೇ ಹೇಳಬೇಕು. ಬಹುಶಃ ನಿಮ್ಮ ವಯಸ್ಸಿಗೆ ನಾವು ಹಾಸಿಗೆ ಹಿಡಿದಾಗಿರುತ್ತೇನೋ’ ಎನ್ನುತ್ತ ನಕ್ಕರು.

ಬೇರೆ ಏನೂ ಸಮಸ್ಯೆ ಇಲ್ಲವೆಂದು ಪುನಃ ಡಾಕ್ಟರು ಹೇಳಿದ್ದು ಕೇಳಿದ ಆದಿ ಮತ್ತು ಅಂತ್ಯ ಇಬ್ಬರಿಗೂ ನಿರಾಳವೆನಿಸಿದರೂ ಅವರನ್ನು ಚಟುವಟಿಕೆಗಳಲ್ಲಿ ತೊಡಗದಂತೆ ನೋಡಿಕೊಳ್ಳುವುದು ಹೇಗೆ ಎನ್ನುವುದೇ ಚಿಂತೆಯಾಯ್ತು. ಅದು ತಿಳಿಯಿತೇನೋ ಎನ್ನುವಂತೆ ಶಾಸ್ತ್ರೀಗಳೇ ಹೇಳಿದರು ‘ಇಲ್ಲ ಇನ್ನು ಮುಂದೆ ನಾನು ಅಂತಹ ಯಾವುದೇ ಕೆಲಸಕ್ಕೆ ಕೈ ಹಾಕುವುದಿಲ್ಲ. ಅದು ಬೇರೆ ಅಂತ್ಯನೂ ಸಾಕಷ್ಟು ಪರಿಣಿತನಾಗಿದ್ದಾನೆ ಈಗ. ವಿಷಯ ಜ್ಞಾನದಲ್ಲಂತೂ ನನಗಿಂತ ಎಷ್ಟೋ ಮುಂದಿದ್ದಾನೆ ಅವನು. ಹಾಗಾಗಿ ಇನ್ನು ಮೇಲಿಂದ ಅವನೇ ಎಲ್ಲ ನೋಡಿಕೊಳ್ಳಲಿ. ಎಲ್ಲರಿಗೂ ಅದನ್ನು ಹೇಳಿಯೂ ಬಿಡುತ್ತೇನೆ’ ಎಂದ ಅವರು ಅಂತ್ಯನೆಡೆಗೆ ತಿರುಗಿ ‘ಏನಾದರೂ ಕೇಳಬೇಕೆನಿಸಿದರೆ ಯಾವ ಹೊತ್ತಿಗೂ ನನ್ನನ್ನು ಕೇಳಬಹುದು. ನನಗೆ ಗೊತ್ತು  ಅಂತಹ ಅಗತ್ಯ ನಿನ್ನ ಮಟ್ಟಿಗೆ ಬರಲಿಕ್ಕಿಲ್ಲ. ಆದರೂ ಹೇಳುತ್ತಿದ್ದೇನೆ.’ ಎಂದರು.

ಆದಿಯೂ ಅಂತ್ಯನಿಗೆ ಧೈರ್ಯ ತುಂಬುವವನ೦ತೆ ‘ನೀನೇನೂ ಚಿಂತೆ ಮಾಡಬೇಡ. ಶಾಸ್ತ್ರೀಗಳು ಇಲ್ಲೇ ಇರುತ್ತಾರೆ. ನಾನು ಹೇಗೂ ಇದ್ದೇ ಇರುತ್ತೇನಲ್ಲ. ಬೇಕಾದಾಗ ಫೋನ್ ಮಾಡು ಅಷ್ಟೆ’ ಎಂದು ಹೇಳಿದ.

ಯಕ್ಷಗಾನ ಕೇಂದ್ರ ಈಗ ಪೂರ್ಣವಾಗಿ ಅಂತ್ಯನ ಕೈಗೇ ಬಂದಿದೆ. ಆದರೆ ಯಾವತ್ತೂ ಅವನು ಅದು ತನ್ನ ಆಸ್ತಿ ಎನ್ನುವಂತೆ ನಡೆದುಕೊಳ್ಳಲಿಲ್ಲ ಅಥವಾ ತಾನು ಅದರ ನಾಯಕ ಎಂದೂ ತೋರಿಸಿಕೊಳ್ಳಲಿಲ್ಲ. ಆ ಭಾವನೆ ಅವನಲ್ಲಿ ಬರಲೇ ಇಲ್ಲ. ಹಿಂದಿನ೦ತೆಯೇ ಅಲ್ಲಿನ ಸದಸ್ಯರಲ್ಲಿ ಒಬ್ಬನಂತೆಯೇ ಮುಂದುವರಿದ. ಹಿಂದಿನಿ೦ದಲೂ ನಡೆದುಕೊಂಡು ಬಂದ೦ತೆ ಹೆಚ್ಚಿನ ಹಣದ ಅಗತ್ಯ ಬಿದ್ದಾಗಲೆಲ್ಲ ಆದಿ ತುಂಬಿಸಿಬಿಡುತ್ತಿದ್ದ. ಎಷ್ಟೆಂದು ಇವರು ಯಾರು ಕೇಳುತ್ತಲೂ ಇರಲಿಲ್ಲ. ಅವನು ಹೇಳುತ್ತಲೂ ಇರಲಿಲ್ಲ. ಅಂತ್ಯನೇ ಒಮ್ಮೆ ‘ಅಣ್ಣ, ನನ್ನ ಅಕೌಂಟಿನಲ್ಲಿ ಹಣ ಹಾಗೆಯೇ ಬಿದ್ದಿದೆಯಲ್ಲ ಅದನ್ನೇ ಉಪಯೋಗಿಸಿಕೊಳ್ಳುತ್ತೇನೆ’ ಎಂದರೆ ಆದಿ ‘ನೋಡು ಅದನ್ನು ಮುಟ್ಟಬೇಡ. ಅದು ನಿನ್ನದು. ಈ ಖರ್ಚಿಗಲ್ಲ ಅದು. ಈಗ ನಾನು ಖರ್ಚು ಮಾಡುತ್ತಿರುವ ಹಣ ನಮ್ಮಿಬ್ಬರದ್ದೂ. ಅಂದರೆ ಅದರಲ್ಲಿ ನಿನ್ನದೂ ಪಾಲಿದೆ. ಹಾಗಾಗಿ ನೀನೇನೂ ಚಿಂತೆ ಮಾಡ ಬೇಡ’ ಎಂದ. ಅಂತ್ಯನೂ ಸುಮ್ಮನಾದ.

ಯಕ್ಷಗಾನ ಕೇಂದ್ರದ ಸಾಮಾನ್ಯ ಚಟುವಟಿಕೆಗಳು ಮೊದಲಿನಂತೆಯೇ ನಡೆಯುತ್ತಿದ್ದರೂ ಕೆಲವೊಂದು ಕ್ಷೇತ್ರಗಳಲ್ಲಿ ಮೊದಲಿಗಿಂತ ಜೋರಿನಿಂದ ನಡೆಯುತ್ತಿದ್ದಾವೆ. ವರ್ಷ ಎರಡು ವರ್ಷ ತರಬೇತಿ ಪಡೆದವರಿಗೆ ಹೊಸ ಹೊಸ ಪ್ರಸಂಗಗಳನ್ನು ಹೇಳಿಕೊಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು ಪ್ರದರ್ಶನಗಳೂ ನಡೆದಿವೆ. ಜನ ಎಂದಿನ೦ತೆಯೇ ಮೆಚ್ಚಿದ್ದಾರೆ. ಹೊಗಳಿದ್ದಾರೆ. ಶಾಸ್ತ್ರೀಗಳು ಇಲ್ಲದಿದ್ದರೂ ಅಂತ್ಯ ಚನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಅವನನ್ನು ಶ್ಲಾಘಿಸಿದ್ದಾರೆ. ಶಾಸ್ತ್ರೀಗಳು ತನ್ನ ರೂಮಿನಿಂದ ಆಗೀಗ್ಗೆ ಬಂದು ಆಫೀಸು ಕೋಣೆಯಲ್ಲಿ ಕುಳಿತುಕೊಂಡು ಹೋಗುತ್ತಿದ್ದವರು ತರಬೇತಿಯ ಕೊಠಡಿಗಳಿಗೆ ಹೋಗಬಾರದೆನ್ನುವ ಡಾಕ್ಟರರ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದಾರೆ. 

ಯಕ್ಷಗಾನದ ಬಗ್ಗೆ ಅಂತ್ಯ ಬರೆದ ಪುಸ್ತಕ ಈಗ ದಾಖಲೆಯನ್ನೇ ಸ್ಥಾಪಿಸಿತ್ತು. ಭಾರತದ ಎಲ್ಲ ಭಾಷೆಗಳಲ್ಲೂ ಪ್ರಕಟವಾದದ್ದಷ್ಟೇ ಅಲ್ಲದೆ ಅವುಗಳಲ್ಲಿ ಕೆಲವೊಂದು ಭಾಷೆಗಳಲ್ಲಿ ಎರಡು ಮೂರು ಮರು ಮುದ್ರಣಗಳನ್ನೂ ಕಂಡಿತ್ತು. ಅಂತ್ಯ ತಾನಾಗಿಯೇ ಆ ಬಗ್ಗೆ ಅಂತಹ ಉತ್ಸಾಹ ಅಥವಾ ಹೆಮ್ಮೆಯನ್ನು ತೋರಿಸದಿದ್ದರೂ ಅವನ ಸುತ್ತಿನವರು ಮಾತ್ರ ತಮ್ಮ ನಡುವಿನವನೊಬ್ಬ ಇಂತಹ ಸಾಧಕನಾಗಿದ್ದಾನೆಂಬ ಹೆಮ್ಮೆಯನ್ನು ಯಾವುದೇ ಎಗ್ಗಿಲ್ಲದೆ ತೋರಿಸಿಕೊಳ್ಳ ಹತ್ತಿದ್ದರು. ಅದಕ್ಕೂ ಅಂತ್ಯ ಮೌನ ಪ್ರೇಕ್ಷಕನೇ.

। ಇನ್ನು ನಾಳೆಗೆ ।

‍ಲೇಖಕರು Admin

July 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: