ಪಿ ಪಿ ಉಪಾಧ್ಯ ಸರಣಿ ಕಥೆ 6 – ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು…

ಪಿ ಪಿ ಉಪಾಧ್ಯ

6

ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು

ಅಮ್ಮ ಇರುವಷ್ಟು ದಿನವೂ ಮೂರು ದಿನ ಮುಂಚೆಯೇ ಹೋಗಿ ಆಮ್ಮನ ಉಪಚಾರದ ಸವಿಯನ್ನುಂಡು ಅಮ್ಮ ಹೇಳಿ ಅಡಿಗೆಯವಳಿಂದ ವಿಶೇಷವಾಗಿ ಮಾಡಿಸುತ್ತಿದ್ದ ತಿಂಡಿಗಳನ್ನು ತಿಂದು ಗಣೇಶನ ಹಬ್ಬ ಕಳೆದೇ ಬರುತ್ತಿದ್ದವಳು ಅಮ್ಮ ಸತ್ತ ಮೇಲೆ ಅಲ್ಲಿ ಉಳಿಯುವ ದಿನಗಳನ್ನು ಕಮ್ಮಿ ಮಾಡಿದ್ದರೂ ಗೌರಿ ಹಬ್ಬಕ್ಕೆ ಹೋಗುವುದನ್ನಂತೂ ತಪ್ಪಿಸಿರಲಿಲ್ಲ. ಹಾಗೆಯೇ ತೌರಿನವರು ಕೊಡುವ ಬಾಗಿನವೂ ತಪ್ಪಿರಲಿಲ್ಲ.

ಅದೇ ತಾನೂ ಹಾಗೆ ಬಾಗಿನ ಕೊಡಬೇಕೆನ್ನುವ ಆಸೆ ಅವಳಿಗೆ. ಅದಕ್ಕೇ ಒಬ್ಬಳು ಮಗಳು ಹುಟ್ಟಿದ್ದರೆ ಆಗುತ್ತಿತ್ತು ಎನ್ನುವ ಬಯಕೆ. ಅದು ಬೇರೆ ತವರು ಮನೆಯಲ್ಲಿ ಮಳೆಗಾಲದ ದಿನಗಳಲ್ಲಿ ಶೃಂಗೇರಿ ಕಡೆಯಿಂದ ಬರುತ್ತಿದ್ದ ಶಾಸ್ತಿçಗಳು ಅಪ್ಪನ ಮನೆಯ ಜಗುಲಿಯ ಮೇಲೆ ಕನ್ನಡಕವನ್ನು ಮೇಲೆ ಕೆಳಗೆ ಮಾಡುತ್ತ ತಮ್ಮ ಬಗಲಿನ ಚೀಲದಿಂದ ದೊಡ್ಡ ದೊಡ್ಡ ಕಡತಗಳನ್ನು ತೆಗೆದು ತಮ್ಮ ಮಧುರ ಕಂಠದಿಂದ ರಾಗವಾಗಿ ಓದುತ್ತ ಅಷ್ಟೇ ಮಧುರವಾಗಿ ಅದರ ಅರ್ಥ ಹೇಳುತ್ತ ಗ್ರಹಸ್ತನಾಗಿ ಬದುಕುವಾಗ ಒಬ್ಬ ಬ್ರಾಹ್ಮಣ ಕೆಲವು ಕರ್ತವ್ಯಗಳನ್ನು ನಿಭಾಯಿಸಬೇಕು. ಆಗಲೇ ಅವನ ಗ್ರಹಸ್ತತ್ವಕ್ಕೆ ಸಾಫಲ್ಯ. ಅನ್ನದಾನ, ವಿದ್ಯಾದಾನ ಎಲ್ಲಕ್ಕಿಂತ ಹೆಚ್ಚಾಗಿ ಕನ್ಯಾದಾನ ಮಾಡಬೇಕು.

ಈ ಕನ್ಯಾದಾನವೆಂದರೆ ಗೋದಾನ ಭೂದಾನವೂ ಸೇರಿದಂತೆ ಉಳಿದೆಲ್ಲ ದಾನಗಳಿಗಿಂತ ಶ್ರೇಷ್ಠವಾದದ್ದು ಎಂದು ಹೇಳುತ್ತಿದ್ದುದನ್ನು ಹುಡುಗಿಯಾಗಿದ್ದ ಕಮಲಮ್ಮ ಅವರೆದುರಿಗೆ ಶ್ರದ್ಧೆಯಿಂದ ಕುಳಿತು ಕೇಳಿದ್ದು ಈಗಲೂ ಆಗಾಗ್ಗೆ ಮನಸ್ಸಿನಲ್ಲಿ ಗುನುಗುನಿಸುತ್ತಿತ್ತು. ಮನಸ್ಸಿನ ಆಳದಲ್ಲಿ ಅದೊಂದು ಆಸೆ ಹುದಗಿ ಕುಳಿತೇ ಇತ್ತು. ಮೊದಲನೆಯದು ಎಲ್ಲರಂತೆಯೇ ಗಂಡಾಗಲಿ ಎಂದು ಹರಕೆ ಹೊತ್ತಿದ್ದು, ಎರಡನೆಯದು ಹೆಣ್ಣೇ ಆಗಲಿ ಎಂದು ಬಯಸಿದ್ದಳು. ಆದರೆ ಎರಡನೆಯದೂ ಗಂಡಾಗಿ ಮತ್ತೆ ವರ್ಷಗಳ ಕಾಲ ಬಸಿರಾಗದೇ ಇದ್ದಾಗ ಆ ಆಸೆ ನಿಧಾನವಾಗಿ ನಶಿಸುತ್ತ ಬಂದಿತ್ತು. ಪಾಲಿಗೆ ಬಂದದ್ದನ್ನು ಅನುಭವಿಸುವುದು ಎಂದುಕೊಂಡು ಎಂದಿಗೂ ಸೋಲನ್ನು ಒಪ್ಪಿಕೊಳ್ಳುವ ಜಾಯಮಾನದವಳಲ್ಲದ ಕಮಲಮ್ಮನೂ ಸುಮ್ಮನಾಗಿದ್ದಳು. ಆದರೆ ಅನಂತ ಹುಟ್ಟಿದ ಎಂಟು ವರ್ಷದ ನಂತರ ಇನ್ನೇನು ತನಗೂ ಮುಟ್ಟು ನಿಲ್ಲುವ ವಯಸ್ಸೇನೋ ಎಂದುಕೊಳ್ಳುತ್ತಿದ್ದ ಕಾಲದಲ್ಲಿ ಥಟ್ಟನೆ ಮತ್ತೊಮ್ಮೆ ಬಸಿರಾಗಿದ್ದಳು.

ಮೊದ ಮೊದಲು ಮುಟ್ಟು ನಿಲ್ಲವುದಕ್ಕೇ ಹೀಗಾಗಬಹುದೆಂದುಕೊಳ್ಳುತ್ತಿದ್ದವಳಿಗೆ ಹಿಂದಿನೆರಡು ಬಸಿರಿನ ಅನುಭವದ ಹಿನ್ನೆಲೆಯಲ್ಲಿ ಇದು ಅದಲ್ಲ ಬಸಿರೇ ಎಂದು ಖಾತ್ರಿಯಾಗುತ್ತ ಬಂದಂತೆ ಛೆ ಇದೇನು. ಋಷಿ ಪಂಚಮಿಯ ಕಾಲಕ್ಕೆ ಬಸಿರು ನಿಂತಿರುವುದಾ’ ಎಂದು ಒಮ್ಮೆಗೆ ಅನ್ನಿಸಿದರೂ.. ಕೊಡುವ ದೇವರು ಕೊಟ್ಟಿರುವಾಗ.. ಉಡಲು ಉಣ್ಣಲು ಕೊರತೆಯಿಲ್ಲದಿರುವಾಗ… ಯಾತಕ್ಕೆ ಚಿಂತೆ’ ಎಂದುಕೊಂಡು ನಿಧಾನವಾಗಿ ತನ್ನ ಬಹು ಹಿಂದಿನ ಒಂದು ಹೆಣ್ಣು ಮಗುಬೇಕು' ಎನ್ನುವ ಬಯಕೆಗೆ ಪುನರ್ಜೀವ ಕೊಟ್ಟದ್ದೂ ಹೌದು. ಆದರೆ ಅವರೆಲ್ಲರ ಆಸೆ ಮತ್ತು ನಿರೀಕ್ಷೆಯ ಹೊರತಾಗಿಯೂ ಹುಟ್ಟಿದ್ದು ಗಂಡೇ. ಬಸಿರಿನುದ್ದಕ್ಕೂ ಹೊಟ್ಟೆಯಲ್ಲಿರುವುದು ಹೆಣ್ಣೇ ಎನ್ನುವಂತಹ ಚಿಹ್ನೆಗಳು ಕಾಣಿಸಿಕೊಂಡಾಗ ಕಮಲಮ್ಮನಿಗೆ ನಿರಾಳವೆನಿಸಿತ್ತು.

ಕನಸಿನಲ್ಲಿಯೂ ಹೆಣ್ಣು ದೇವರುಗಳೇ ಬಂದು ಆಶೀರ್ವಾದ ಮಾಡಿ ಹೋದಾಗಲಂತೂ ಕಮಲಮ್ಮನಿಗೆ ಖಾತ್ರಿಯಾಗಿತ್ತು ಈ ಸಲ ತನಗೆ ಹುಟ್ಟುವುದು ಹೆಣ್ಣೇ ಎಂದು. ಅದರೆ ಕೊನೆಯಲ್ಲಿ ಮಾತ್ರ ಅವಳೆಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿ ಗಂಡೇ ಹುಟ್ಟಿತ್ತು. ಆಕೆಯ ತವರಿನವರು ಮಾತ್ರ ಯಾವುದೇ ಕೊರತೆಯಿಲ್ಲದಂತೆ ಇದನ್ನೂ ಹಿಂದಿನ ಬಾಣಂತನಗಳಷ್ಟೇ ಕ್ರಮಬದ್ಧವಾಗಿ ಮಾಡಿದರು. ಕಮಲಮ್ಮನ ಆ ಹಿರಿಯಣ್ಣ ಅಪ್ಪನ ಕಾಲದಿಂದಲೂ ಶಾಸ್ತ್ರೀಗಳ ಪ್ರವಚನವನ್ನು ಕೇಳುವುದರ ಜೊತೆಗೆ ಸಾಧ್ಯವಾದಷ್ಟು ಯಕ್ಷಗಾನ ಬಯಲಾಟಗಳನ್ನೂ ನೋಡಿ ತಾನೂ ಒಬ್ಬ ತಕ್ಕ ಮಟ್ಟಿನ ಜ್ಞಾನ ಉಳ್ಳವ ಎನ್ನುವ ಭ್ರಮೆಯಲ್ಲಿದ್ದವ. ಅಪ್ಪನ ಕಾಲದ ನಂತರವೂ ಶಾಸ್ತ್ರೀಗಳನ್ನು ಮನೆಗೆ ಕರೆಸುವುದನ್ನು ಬಿಟ್ಟಿರಲಿಲ್ಲ. ಅಷ್ಟೇ ಅಲ್ಲ ಘಟ್ಟದ ಕೆಳಗಿನ ಯಕ್ಷಗಾನ ಮೇಳಗಳು ಮೇಲಕ್ಕೆ ಬಂದರೆ ಸುರುವಿಗೆ ಬಂದು ಪೆಟ್ಟಿಗೆಯಿಳಿಸುವುದು ಇವರ ಮನೆಯಲ್ಲಿಯೇ.

ಕಾಲ ಕಾಲದಿಂದ ನಡೆದು ಬಂದ ಆ ಅಭ್ಯಾಸವನ್ನು ಅಪ್ಪನ ಕಾಲದ ನಂತರವೂ ಮುಂದುವರಿಯುವAತೆ ನೋಡಿಕೊಂಡಿದ್ದ. ಸುತ್ತ ಮುತ್ತ ಹತ್ತಿಪ್ಪತ್ತು ಕಿಲೋಮೀಟರು ದೂರದಲ್ಲಿ ಬಯಲಾಟ ನಡೆಯುವುದಿದ್ದರೂ ಮೇಳದವರ ವಾಸ್ತವ್ಯ ಮಾತ್ರ ಇವರ ಮನೆಯ ಹತ್ತಂಕಣದಷ್ಟಿದ್ದ ಹೆಬ್ಬಾಗಿಲಿನಲ್ಲಿಯೇ. ಅಲ್ಲಿರುವ ವಾರವೆರಡು ವಾರಗಳ ಕಾಲ ಊಟ ತಿಂಡಿಯೂ ಇವರ ಮನೆಯಲ್ಲಿಯೇ. ಹಾಗೆ ಅವರೊಂದಿಗೇ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದ ಈ ಅಣ್ಣನೂ ಅಷ್ಟು ದಿನಗಳ ಕಾಲ ಮನೆಯವರ ಪಾಲಿಗೆ ಇದ್ದೂ ಇಲ್ಲದವನಂತೆ.

ಆಟ ನಡೆಯುವ ದಿವಸಗಳಲ್ಲೆಲ್ಲ ಭಾಗವತರ ಪಕ್ಕದ್ದಲ್ಲಿಯೇ ಒಂದು ವಿಶೇಷ ಖುರ್ಚಿ ಇವರಿಗೆ. ತಂಗಿಯ ಕೊನೆಯ ಬಾಣಂತನ ನಡೆಯುವಾಗಲೂ ಮಾಮೂಲಿಯಂತೆ ವರ್ಷದ ತಮ್ಮ ತಿರುಗಾಟ ಮಾಡುತ್ತ ಅದೇ ಯಕ್ಷಗಾನ ಮೇಳದವರು ಇವರ ಮನೆಯ ಹೆಬ್ಬಾಗಿಲಿನಲ್ಲಿ ಬೀಡು ಬಿಟ್ಟಿದ್ದರು. ಅಷ್ಟೇ ಅಲ್ಲ ಆ ವರ್ಷ ಉಳಿದೆಲ್ಲ ವರ್ಷಗಳಿಗಿಂತ ಹೆಚ್ಚು ದಿನ ಅಲ್ಲಿಯೇ ಉಳಿದಿದ್ದರು. ಹಾಗೆ ಉಳಿದವರು ಆಟದ ಕಾರ್ಯಕ್ರಮವಿಲ್ಲದ ದಿನಗಳಲ್ಲಿ ಮನೆಯ ಹೆಬ್ಬಾಗಿಲಿನಲ್ಲೇ ಮಧ್ಯ ರಾತ್ರಿ ಕಳೆಯುವವರೆಗೆ ತಾಳ ಮದ್ದಲೆ ನಡೆಸಿದ್ದರು. ಅಂತ್ಯ ಚಿಕ್ಕ ಮಗು. ಮನೆಯಲ್ಲಿ ಉಳಿದವರು ರಾತ್ರಿಯೆಲ್ಲ ಅವರೆಬ್ಬಿಸುವ ಗಲಾಟೆಯಿಂದ ಮಗುವಿನ ನಿದ್ದೆಗೆ ಭಂಗ ಬಂದು ಅಳುತ್ತದೇನೋ ಎಂದು ಚಿಂತಿಸುತ್ತಿದ್ದರೆ ತೊಟ್ಟಿಲಲ್ಲಿ ಮಲಗಿದ್ದ ತಿಂಗಳೆರಡು ತಿಂಗಳ ಮಗು ಮದ್ದಲೆ ಮತ್ತು ತಾಳದ ಸದ್ದಿಗೆ ತನ್ನ ಬೊಚ್ಚು ಬಾಯಿಯನ್ನು ಬಿಟ್ಟುಕೊಂಡು ನಗುತ್ತ ನೋಡಿದವರನ್ನೆಲ್ಲ ಆಶ್ಚರ್ಯ ಪಡಿಸಿತ್ತು.

ಎಲ್ಲ ಹೆರಿಗೆಯೂ ಹೆಂಡತಿಯ ತವರು ಮನೆಯಲ್ಲಿಯೇ. ಮೊದಲನೆಯದು ಸರಿ. ಹೋಗಲಿ ಎರಡನೆಯದೂ ಪರವಾಯಿಲ್ಲ. ಆದರೆ ಮದುವೆಯಾಗಿ ಹದಿನಾರು ಹದಿನೇಳು ವರ್ಷಗಳ ನಂತರದ ಮೂರನೆಯ ಹೆರಿಗೆಯೂ ಆಕೆಯ ತವರಿನಲ್ಲಿಯೇ! ಹಾಗೆ ಪ್ರತಿ ಹೆರಿಗೆಗೆ ತಿಂಗಳು ದಿನ ಇದೆಯೆನ್ನುವಾಗಲೇ ಹೋಗುತ್ತಿದ್ದವಳು ತಿರುಗಿ ಬರುತ್ತಿದ್ದುದು ಮೂರು ತಿಂಗಳ ಬಾಣಂತನವನ್ನು ಮುಗಿಸಿಕೊಂಡೇ. ಕರಾವಳಿಯ ಸುಡುಬಿಸಿಲಿನಲ್ಲಿಯೂ ಬಿಳಿಯಾಗಿಯೇ ಇರುತ್ತಿದ್ದ ಅವಳು ಪ್ರತಿಸಲವೂ ಗಟ್ಟದ ಮೇಲಿನ ತವರು ಮನೆಯಲ್ಲಿ ಬಾಣಂತನವನ್ನು ಮುಗಿಸಿಕೊಂಡು ಕೆಂಪು ಕೆಂಪಾಗಿ ಅದಕ್ಕಿಂತ ಹೆಚ್ಚು ಕೆಂಪಾಗಿದ್ದ ಮಗುವನ್ನು ಹೊತ್ತುಕೊಂಡು ಬರುವಾಗ ಊರವರೆಲ್ಲರ ದೃಷ್ಟಿಯೂ ಅವಳ ಮೇಲೆಯೇ. ಆಗೆಲ್ಲ ಶಾಮಣ್ಣನ ಹೆಂಡತಿ ಊರಿಗೆ ಬಂದಿದ್ದಾಳೆ ಎನ್ನುವುದೇ ದೊಡ್ಡ ಸುದ್ದಿ. ಸುರುವಿನ ಹೆರಿಗೆಯಲ್ಲಂತೂ ಆರು ತಿಂಗಳಾಗುವವರೆಗೆ ಅಲ್ಲಿಯೇ ಉಳಿದವಳು ಆಕೆ.

ಮನೆಯ ಒಬ್ಬಳೇ ಹೆಣ್ಣು ಮಗಳು ಮೊದಲ ಹೆರಿಗೆಗೆ ಬಂದಿದ್ದಾಳೆ ಎಂದು ಮುಚ್ಚಟೆ ಮಾಡಿ ಆರು ತಿಂಗಳ ಕಾಲ ಉಳಿಸಿಕೊಂಡಿದ್ದರು ತವರಿನವರು. ಕೊನೆಗೆ ಶಾಮಣ್ಣ ಹೋಗಿ ರಗಳೆ ಮಾಡಿದ ಮೇಲೆಯೇ ಕಳುಹಿಸಲು ಒಪ್ಪಿದ್ದು. ಹಾಗೆ ಬಂದ ಅವಳನ್ನು ಇಡೀ ಊರಿಗೇ ಊರೇ ಸೇರಿ ಸ್ವಾಗತಿಸಿತ್ತು. ಪ್ರತಿ ಮಗು ಹುಟ್ಟಿದಾಗಲೂ ಅದ್ದೂರಿಯ ನಾಮಕರಣ. ಖರ್ಚಿಗೆ ಯಾವತ್ತೂ ಹೆದರದ ಆ ಅಣ್ಣ ಅವನ ಅಪ್ಪನಂತಲ್ಲ.

ಒಬ್ಬಳೇ ತಂಗಿಯ ಮಕ್ಕಳ ನಾಮಕರಣಕ್ಕೆ ಖರ್ಚು ಮಾಡಲು ಹೆದರಿಯಾನೇ. ನಾಮಕರಣದ ಮೊದಲೆರಡು ಮತ್ತು ನಂತರದ ಎರಡು ದಿನಗಳ ಕಾಲ ಅಲ್ಲಿಯೇ ಉಳಿದಿರುತ್ತಿದ್ದ ಶಾಮಣ್ಣನಿಗೂ ಅದ್ದೂರಿಯ ಉಪಚಾರ. ಅದೂ ಸಮಾನ ಅಭಿರುಚಿಯ ಭಾವ ಮತ್ತು ನೆಂಟ ಸೇರಿದರೆ ಕೇಳಬೇಕೇ. ಮಾತಾಡುತ್ತ ಆಡುತ್ತ ಅಲ್ಲೇ ಮನೆಯ ಹೆಬ್ಬಾಗಿಲಿನಲ್ಲಿ ತಾಳಮದ್ದಲೆ ಸುರು ಮಾಡಿದರೂ ಮಾಡಿದರೇ. ಹೇಗೂ ಇವರಿಬ್ಬರು ಸೇರಿದರೆಂದಾಗ ತಾನೇ ತಾನಾಗಿ ರೆಡಿಯಾಗುವ ಭರ್ಜರಿ ಊಟೋಪಚಾರಗಳಲ್ಲಿ ಪಾಲ್ಗೊಳ್ಳಲು ನೆರೆಯುವ ನೆರೆಕರೆಯ ಒಂದಿಷ್ಟು ಉತ್ಸುಕ ಮಂದಿಯಂತೂ ಇದ್ದೇ ಇರುತ್ತಾರೆ. ಅಂತಹ ಸಂದರ್ಭದಲ್ಲಿಯೇ ತಾಳ ಮದ್ದಲೆಗೆ ಮುಂಚೆಯೋ ಅಥವಾ ತಾಳ ಮದ್ದಲೆ ಮುಗಿದ ಮೇಲೆಯೋ ನಡೆಯುವ ಕೇಸರಿ ಭಾತು ಅವಲಕ್ಕಿ ಉಪ್ಪಿಟ್ಟುಗಳ ಸಮಾರಾಧನೆಯಾಗುವಾಗಲೇ ಮಕ್ಕಳ ಹೆಸರಿನ ಆಯ್ಕೆ ನಡೆಯುತ್ತಿದ್ದುದು. ತಾಳಮದ್ದಲೆಯ ಅರ್ಥ ಹೇಳುವ ಧಾಟಿಯಲ್ಲಿಯೇ ಈ ಭಾವ ಮತ್ತು ಭಾವ ಮೈದುನರ ಮಾತು ನಡೆಯುತ್ತದೆ. ಕಡಲ ತಡಿಯಿಂದ ಬಿಜಯಂಗೈದಂತಹ ಮಹಾನುಭಾವ ಭಾವಾ… ಜನ್ಮ ತಳೆದಿರುವ ಹಸು ಕೂಸಿಂಗೆ ಏನೆಂದು ಹೆಸರಿಡಲಿ ಹೇಳಿ…’

‘ತಂಗಿಯ ಮಗುವಿಗೆ ಹೆಸರಿಡುವ ಭಾಗ್ಯ ನಿನ್ನದಲ್ಲವೇ ನೆಂಟ…’ ಎನ್ನಬೇಕು ಆ ಭಾವ.

। ಇನ್ನು ನಾಳೆಗೆ ।

‍ಲೇಖಕರು Admin

May 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: