ಪಿ ಪಿ ಉಪಾಧ್ಯ ಸರಣಿ ಕಥೆ 55- ಆ ಅಣ್ಣ ತಮ್ಮಂದಿರಿಬ್ಬರಿಗೂ ಶಾಕ್…

ಪಿ ಪಿ ಉಪಾಧ್ಯ

ಮನೆಯವರಿಗೆಲ್ಲ ದಿನದಿಂದ ದಿನಕ್ಕೆ ಕಮಲಮ್ಮನ ಪರಿಸ್ಥಿತಿ ತೀರಾ ಕೆಡುತ್ತಿದೆ ಅನ್ನಿಸುತ್ತಿದೆ. ಹಾಗಿರುವಾಗಲೇ ತೀರ್ಥಹಳ್ಳಿಯಿಂದ ಅವರ ಅಣ್ಣ ಮತ್ತು ತಮ್ಮ ಇಬ್ಬರೂ ಬಂದಿದ್ದರು. ಬಹಳ ಅಪರೂಪಕ್ಕೆ ಬಂದ ಅವರನ್ನು ನೋಡಿ ಮನೆಯಲ್ಲಿ ಎಲ್ಲರಿಗೂ ಆಶ್ಚರ್ಯ. ಅದೂ ಇಬ್ಬರೂ ಒಟ್ಟೊಟ್ಟಿಗೇ. ಅಂತ್ಯ ಅವರಲ್ಲಿಯೇ ಇದ್ದ ಕಾಲದಲ್ಲಿ ಆಗಾಗ್ಗೆ ಅಣ್ಣನಾದವ ಬರುತ್ತಿದ್ದುದು ಬಿಟ್ಟರೆ ಆಮೇಲೆ ಅವರಿಬ್ಬರಲ್ಲಿ ಯಾರೂ ಇತ್ತ ತಲೆ ಹಾಕಿದ್ದೇ ಇಲ್ಲ. ಹಿಂದೆಲ್ಲ ಬರುವಾಗಲೂ ಅವರು ಒಟ್ಟೊಟ್ಟಿಗಂತೂ ಬಂದದ್ದೇ ಇಲ್ಲ. ಎಲ್ಲಾದರೂ ಇಲ್ಲಿನ ಕಾರ್ಯಕ್ರಮಗಳಿಗೆ ಬಂದರೂ ಇಬ್ಬರು ಬೇರೆ ಬೇರೆಯಾಗಿಯೇ ಬರುತ್ತಿದ್ದುದು. ಇಲ್ಲಿ ಬಂದ ಮೇಲೆಯೂ ಅಷ್ಟೆ.

ಒಬ್ಬರೊಡನೆ ಇನ್ನೊಬ್ಬರು ಮಾತನಾಡುತ್ತಿದ್ದುದೂ ಬಹಳ ಕಡಿಮೆ. ಬೇಕೋ ಬೇಡವೋ ಎನ್ನುವಂತೆ ಒಬ್ಬರನ್ನೊಬ್ಬರು ಮಾತನಾಡಿಸುತ್ತಿದ್ದರು. ಮತ್ತು ಹಾಗೆಯೇ ವಾಪಾಸು ಹೋಗುತ್ತಿದ್ದರು. ಅಂಥವರು ಇವತ್ತು ಒಟ್ಟಿಗೇ ಬಂದಿದ್ದಾರೆ. ವಾರಾಂತ್ಯವಾದ್ದರಿಂದ ಅಂತ್ಯನೂ ಮನೆಯಲ್ಲಿಯೇ ಇದ್ದ. ಅಮ್ಮ ಹೀಗಾದ ಮೇಲಂತೂ ಪ್ರತಿ ಶನಿವಾರ ಮತ್ತು ಭಾನುವರ ತಪ್ಪದೇ ಮನೆಗೆ ಬರುತ್ತಿದ್ದ ಅವನು ಬಹಳಷ್ಟು ಹೊತ್ತು ಮನೆಯ ಒಳಗಡೆಯೇ ಕಳೆಯುತ್ತಿದ್ದ. ಘಟ್ಟದ ಮೇಲಿದ್ದವ ರಜೆಯಲ್ಲಿ ಬಂದಾಗ ಹೆಚ್ಚಿನ ಹೊತ್ತು ಸಮುದ್ರದ ಬಳಿಯಲ್ಲಿ ಕಳೆಯುತ್ತಿದ್ದವ ಊರಿಗೆ ಬಂದು ನೆಲೆಸಿದ ಮೇಲೆ ಅದನ್ನು ಕಮ್ಮಿ ಮಾಡಿದ್ದರೂ ಶನಿವಾರ ಭಾನುವಾರಗಳಂದು ಮನೆಗೆ ಬಂದವ ತುಸು ಹೊತ್ತಾದರೂ ಹೋಗುತ್ತಿದ್ದ. ಈಗ ಅದನ್ನೂ ಸಂಪೂರ್ಣವಾಗಿ ಬಿಟ್ಟಿದ್ದ. ಮನೆಯಲ್ಲಿಯೇ ಅದೂ ಅಮ್ಮನ ಎದುರಿನಲ್ಲಿಯೇ ಕಳೆಯ ತೊಡಗಿದ್ದಾನೆ. ಆದಿಯೂ ಅಷ್ಟೆ. ತಮ್ಮ ಇರುವಷ್ಟು ಹೊತ್ತೂ ಅವನೊಂದಿಗೆ ಏನಾದರೂ ಮಾತನಾಡುತ್ತ ಮನೆಯಲ್ಲಿಯೇ ಅಮ್ಮನ ಎದುರಿಗೇ ಇರುತ್ತಾನೆ.

ಇಂದೂ ಹಾಗೆಯೇ ಆದಿ ಮತ್ತು ಅಂತ್ಯ ಮಾತನಾಡುತ್ತಿರುವಾಗಲೇ ಘಟ್ಟದ ಮೇಲಿಂದ ಇಲ್ಲಿಯ ವರೆಗಿನ ರಸ್ತೆಯ ಮೇಲಿನ ಧೂಳನ್ನೆಲ್ಲ ಹೊತ್ತುಕೊಂಡ ಆ ಕಾರು ಮಾವಂದಿರಿಬ್ಬರನ್ನೂ ಕೂರಿಸಿಕೊಂಡು ಇವರ ಮನೆಯೆದುರಿಗೆ ಬಂದು ನಿಂತದ್ದು. ಕಾರಿನಿಂದಿಳಿದ ಮಾವಂದಿರನ್ನು ಇಬ್ಬರೂ ಆದರದಿಂದಲೇ ಬರಮಾಡಿಕೊಂಡರು. ಅಂತ್ಯನಿಗೆ ವರ್ಷಗಳ ಕಾಲ ಅವರ ಮನೆಯಲ್ಲಿಯೇ ಉಳಿದು ಅವರ ಅನ್ನವನ್ನೇ ತಿಂದ ಋಣ. ಚಿಕ್ಕ ಮಾವ ಅವನನ್ನು ಯಾವಾಗಲೂ ಹೀಗಳೆಯುತ್ತಿದ್ದವರೇ ಆದರೂ ಅದೇನೂ ಮನಸ್ಸಿನಲ್ಲಿ ಉಳಿದಿರಲಿಲ್ಲ.

ಈಗ ಸೋದರಮಾವಂದಿರಿಬ್ಬರೂ ತಮ್ಮ ಮನೆಗೆ ಬಂದಿದ್ದರೆ ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳಬೇಕು ಎನ್ನುವುದು ಅಷ್ಟೆ. ಆದಿಗೂ ಅಷ್ಟೆ. ಮಾವಂದಿರೆಂದರೆ ಯಾವಾಗಲೂ ಆದರವೇ. ಅದೂ ದೊಡ್ಡ ಮಾವನೆಂದರೆ ವಯಸ್ಸಿನ ಅಂತರವಿದ್ದರೂ ಒಂದು ರೀತಿಯ ಸ್ನೇಹಿತನ ಹಾಗೆ.
ಎಲ್ಲಿ ಅಕ್ಕ...’ ಅವರು ಕೇಳಿ ಬಾಯಿ ಮುಚ್ಚುವ ಮೊದಲೇ ಎಲ್ಲಿಯೋ ತನ್ನಷ್ಟಕ್ಕೆ ಕುಳಿತಿದ್ದ ಆಕೆ ಬಂದಿದ್ದಳು. ಮುಖದ ಮೇಲೆ ಇತ್ತೀಚಿನ ದಿನಗಳಲ್ಲಿ ಇರುತ್ತಿದ್ದ ನಿರ್ಜೀವ ಕಳೆಯ ಬದಲಿಗೆ ತುಸುವೇ ಲವಲವಿಕೆ ಕಂಡು ಬಂದಿತ್ತು. ಬಹುಶಃ ತಮ್ಮಂದಿರ ಸ್ವರ ಕೇಳಿಸಿದ್ದಕ್ಕೂ ಇರಬಹುದು. ಆದಿ ಮತ್ತು ಅಂತ್ಯ ಇಬ್ಬರಿಗೂ ಆಶ್ಚರ್ಯ. ಇವರ ಆಗಮನವನ್ನು ಆಗಲೇ ಗಮನಿಸಿದ್ದ ಅಡಿಗೆಯವಳು ತಂಬಿಗೆಯಲ್ಲಿ ನೀರು ಮತ್ತು ಲೋಟಗಳಲ್ಲಿ ಕಾಫಿ ತೆಗೆದುಕೊಂಡು ಬಂದಿದ್ದಳು. ಕಾಫಿಯನ್ನು ಹೀರುತ್ತಹೇಗಿದ್ದೀಯ ಕಮಲ…’ ಕೇಳಿದ್ದ ಅಣ್ಣ.
ಆದಿ ಅಂತ್ಯ ಇಬ್ಬರೂ ಅಮ್ಮ ಏನು ಉತ್ತರ ಕೊಡುತ್ತಾಳೆ ಎನ್ನುವ ಕುತೂಹಲದಿಂದ ಕಾಯುತ್ತಿದ್ದಾಗಲೇ ಅಮ್ಮ ತೀರಾ ಸಾಮಾನ್ಯ ಧ್ವನಿಯಲ್ಲಿ ಏನು ಬಹಳ ಅಪರೂಪ. ಅದು ಬೇರೆ ಇಬ್ಬರೂ ಒಟ್ಟೊಟ್ಟಿಗೇ ಬಂದಿದ್ದೀರಿ’ ಎಂದು ಕೇಳಿದಳು.

ಮಾತು ಮುಂದುವರಿಸಲು ಮಾವಂದಿರಿಬ್ಬರೂ ತಡವರಿಸುತ್ತಿರುವಂತೆ ಕಂಡಿತು. ತಮ್ಮನಿದ್ದವ ಅಣ್ಣನಿಗೆ ಮಾತಾಡೆಂದು ತಿವಿಯುತ್ತಿರುವುದೂ ಕಾಣಿಸಿತು. ಸ್ವರವನ್ನು ಸರಿಪಡಿಸಿಕೊಳ್ಳುತ್ತ ದೊಡ್ಡ ಮಾವ ಅಮ್ಮನತ್ತ ನೋಡುತ್ತ ಮಾತಾಡಲು ಪ್ರಾರಂಭಿಸಿದರು. ‘ನೋಡು, ಕಮಲ, ನನ್ನ ತಮ್ಮ... ಇದೇ ಇವನ ಮಗಳು ವಯಸ್ಸಿಗೆ ಬಂದಿದ್ದಾಳೆ. ನಿಮಗೆಲ್ಲ ಗೊತ್ತೇ ಇದೆ. ಅವಳನ್ನು ನಿನ್ನ ಮಗ ಅನಂತನಿಗೆ ಕೊಡಬೇಕೆಂಬ ಮನಸ್ಸು ಅವನದ್ದು. ಅವನ ಹೆಂಡತಿಗೂ ಅದೇ ಆಸೆ. ಎಲ್ಲಕ್ಕಿಂತ ಹೆಚ್ಚಾಗಿ ಇವತ್ತು ನಮ್ಮನ್ನಿಲ್ಲಿಗೆ ಕಳುಹಿಸಿದ್ದು ಮದುವೆಯ ಹುಡುಗಿಯೇ. ಅವಳಿಗೆ ಎಂದೋ ಮನಸ್ಸಿಗೆ ಬಂದಿತ್ತಂತೆ ಮದುವೆಯಾಗುವುದಾದರೆ ಅನಂತನನ್ನೇ ಎಂದು’ ಎಂದಿದ್ದ. ಯಾರೂ ಉತ್ತರ ಕೊಡಲಿಲ್ಲ. ಏನು ಹೇಳುವುದು ಎನ್ನುವ ಗೊಂದಲದಲ್ಲಿ ಅವರೆಲ್ಲ ಇದ್ದ ಹಾಗೆಯೇ ದೊಡ್ಡ ಮಾವನೇ ಹೇಳಿದರು ‘ಅಲ್ಲ ಹುಡುಗಿಯೂ ಎಂಜಿನಿಯರಿಂಗ್ ಮಾಡಿದ್ದಾಳೆ. ಅವಳಿಗೂ ಅಮೆರಿಕಾದಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕೆಂಬ ಆಸೆ. ಅಮೆರಿಕದಲ್ಲಿದ್ದವನನ್ನು ಮದುವೆ ಮಾಡಿಕೊಂಡರೆ ಅದು ಸುಲಭದಲ್ಲಿ ಸಾಧ್ಯವಾಗುತ್ತದೆ ಅಲ್ಲವೇ. ಅದೂ ಮೊದಲಿನಿಂದಲೂ ಅವಳಿಗೆ ನಿಮ್ಮ ಅನಂತನ ಮೇಲೆ ಒಂದು ತೆರನ ಗೌರವ. ಈಗ ಆ ಗೌರವ ಪ್ರೀತಿಯಾಗಿ ಮಾರ್ಪಟ್ಟಿದೆ’ ಮಾವನ ಮಾತನ್ನು ಕೇಳಿದ ಎಲ್ಲರ ಗೊಂದಲ ಹೆಚ್ಚಾಯಿತೇ ವಿನಃ ಯಾರೂ ಬಾಯಿ ತೆರೆಯಲಿಲ್ಲ. ಅಷ್ಟರಲ್ಲಿ ಕಮಲಮ್ಮನೇ ಕುಳಿತಲ್ಲಿಂದ ಎದ್ದವಳೇ ಎಲ್ಲಿಯ ಅನಂತ… ಎಲ್ಲಿಯ ಅಮೆರಿಕ… ಅವನು ನನ್ನ ಮಗನೂ ಅಲ್ಲ. ನಾನು ಅವನ ತಾಯಿಯೂ ಅಲ್ಲ’ ಎಂದಳು. ಆಕೆ ಎದ್ದು ನಿಂತ ರಭಸ, ಮಾತುಗಳಲ್ಲಿನ ಬಿರುಸು, ಧ್ವನಿಯಲ್ಲಿನ ಉದ್ವೇಗ ಆ ಅಣ್ಣ ತಮ್ಮಂದಿರಿಬ್ಬರಿಗೂ ತೀರಾ ಹೊಸದು. ಈಕೆ ತಮ್ಮ ಒಡಹುಟ್ಟಿದ ಕಮಲಳೇ ಎನ್ನುವಷ್ಟರ ಮಟ್ಟಿಗೆ. ಆಕೆಯೇ ಮುಂದುವರಿಸಿದ್ದಳು. ‘ಅವ ಅಲ್ಲಿಯೇ ಯಾರನ್ನೋ ಕಟ್ಟಿಕೊಂಡು ಹಾಳಾಗಾಯ್ತು. ಇನ್ನೆಲ್ಲಿಯ ಮದುವೆ ಅವನಿಗೆ’

ಈಗಂತೂ ಆ ಅಣ್ಣ ತಮ್ಮಂದಿರಿಬ್ಬರಿಗೂ ಶಾಕ್. ಜೊತೆಗೆ ತಮ್ಮನಿಗೆ ಹೆದರಿಕೆಯೂ. ಎಲ್ಲಿಯಾದರೂ ಆದಿಗೋ ಅಂತ್ಯನಿಗೋ ಕೊಡಿ ಎಂದು ಕೇಳಿಯಾಳೇ ಎಂದು. ಆದರೆ ಹಾಗೇನೂ ಆಗಲಿಲ್ಲ. ಎಷ್ಟು ಬಿರುಸಿನಿಂದ ಹೊರಬಂದು ಮಾತನಾಡಿದ್ದಳೋ ಅಷ್ಟೇ ಬಿರುಸಿನಿಂದ ಮಾತು ಮುಗಿದ ಕೂಡಲೇ ಒಳಗೆ ಹೋಗಿದ್ದಳು. ಇದೂ ಆಶ್ಚರ್ಯ ಅಣ್ಣ ತಮ್ಮಂದಿರಿಗೆ. ಎಂದೂ ಹಾಗೆ ಮಾಡಿದವಳಲ್ಲ ಆಕೆ. ತವರಿನಿಂದ ಯಾರು ಬಂದರೂ ಸಂಭ್ರಮ ಆಕೆಗೆ. ಅದನ್ನು ಯಾವುದೇ ತಡೆಯಿಲ್ಲದೆ ತೋರಿಸಿಕೊಳ್ಳುತ್ತಿದ್ದಳು. ಅದೂ ಈ ಅಣ್ಣ ಮತ್ತು ತಮ್ಮನಲ್ಲಿ ಯಾರೊಬ್ಬರು ಬಂದರಂತೂ ಕೇಳುವುದೇ ಬೇಡ. ಅಂಥವಳು ಈಗ ಈ ತೆರನಲ್ಲಿ ನಡೆದುಕೊಳ್ಳುತ್ತಿದ್ದುದನ್ನು ತಡೆದುಕೊಳ್ಳಲೇ ಆಗಲಿಲ್ಲ ಅವರಿಗೆ. ಇಬ್ಬರೂ ಮುಖ ಮುಖ ನೋಡಿಕೊಳ್ಳತೊಡಗಿದರು.

ಆದಿ ಮತ್ತು ಅಂತ್ಯ ಇಬ್ಬರಿಗೂ ಸಂದಿಗ್ಧಕ್ಕಿಟ್ಟುಕೊಂಡಿತು. ಅಮ್ಮನಂತೂ ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಒಳಗೆ ಹೋಗುತ್ತಲೇ ಇದ್ದಾಳೆ. ಮಾವಂದಿರೆಂದರೆ ಇಬ್ಬರಿಗೂ ವಿಶ್ವಾಸ. ಅಂತ್ಯನಿಗೆ ತುಸು ಹೆಚ್ಚು. ‘ನನ್ನ ಬಾಲ್ಯವನ್ನು ಅತಿ ಸುಖವಾಗಿ ಕಳೆಯುವಂತೆ ಮಾಡಿದ ಮಾವನಿಗೆ ತನ್ನ ತಾಯಿಯೇ ಈ ತೆರನ ನಿರ್ಲಕ್ಷ್ಯ ತೋರುವುದೇ’ ಎಂದುಕೊಳ್ಳುತ್ತ ಬೇಜಾರು ಮಾಡಿಕೊಂಡ.

`ಮಾವ ಏನೂ ತಿಳ್ಕೋಬೇಡಿ. ಅನಂತ ಹಾಗೆಲ್ಲ ಮಾಡಿಕೊಂಡ ಎಂದು ಗೊತ್ತಾದಂದಿನಿಂದ ಸ್ವಲ್ಪ ಅಪ್‌ಸೆಟ್ ಆಗಿದ್ದಾಳೆ. ನಮ್ಮೊಂದಿಗೂ ಮೊದಲಿನಂತೆ ಮಾತನಾಡುವುದಿಲ್ಲ ಈಗ. ಹಾಗೆ ನೋಡಿದರೆ ಈಗ ನಿಮ್ಮೊಡನೆ ಮಾತನಾಡಿದ್ದೇ ಹೆಚ್ಚು’ ಆದಿಯೇ ತುಸು ತೇಪೆ ಹಚ್ಚುವವನಂತೆ ಮಾತನಾಡಿದ.

‘ಪರವಾಯಿಲ್ಲ ಬಿಡಪ್ಪ. ನಾವು ಬಂದ ಕೆಲಸವಂತೂ ಆಗಲಿಲ್ಲ. ಹೊರಟು ಬಿಡುತ್ತೇವೆ ಈಗಲೆ’ ಎಂದರೆ ಆದಿ ‘ಇದೇನು ಮಾವಾ.. ಹೀಗೆ. ಇರಿ ಮಧ್ಯಾಹ್ನದ ಊಟ ಮಾಡಿ ತುಸು ರೆಸ್ಟ್ ತೆಗೆದುಕೊಂಡು ಹೋಗುವಿರಂತೆ’

ಸ್ವಲ್ಪ ಹೆಚ್ಚೇ ಅಪ್‌ಸೆಟ್ ಆಗಿದ್ದ ಕಿರಿ ಮಾವ ಆಗಲೇ ಎದ್ದು ನಿಂತೂ ಆಗಿತ್ತು. ದೊಡ್ಡ ಮಾವನೇ ಹೇಳಿದರು ‘ಸ್ವಲ್ಪ ಇರು. ಊಟ ಮಾಡಿಕೊಂಡೇ ಹೋಗೋಣ. ಭಾವನನ್ನೂ ಮಾತನಾಡಿಸಿಕೊಂಡು ಹೋದ ಹಾಗಾಗುತ್ತೆ.’

| ಇನ್ನು ನಾಳೆಗೆ |

‍ಲೇಖಕರು Admin

June 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: