ಪಿ ಪಿ ಉಪಾಧ್ಯ ಸರಣಿ ಕಥೆ 46 – ಅಮೆರಿಕದ ಪೇಪರುಗಳಲ್ಲಿ ಅವನದ್ದೇ ಸುದ್ದಿ…

ಪಿ ಪಿ ಉಪಾಧ್ಯ

ಅಮೆರಿಕೆಗೆ ಹೋಗಿದ್ದ ಮಕ್ಕಳ ಮೇಳ ವಾಪಾಸು ಬಂದಿದೆ. ದೇಶಾದ್ಯಂತ ಪ್ರಸರಣವಿದ್ದ ಒಂದಿಷ್ಟು ಇಂಗ್ಲಿಷ್ ಪತ್ರಿಕೆಗಳು ಇವರ ಅಮೆರಿಕದಲ್ಲಿನ ಪ್ರರ್ಶನಗಳ ಬಗ್ಗೆ ಬರೆದಿದ್ದುವು. ಅವರ ಅಲ್ಲಿನ ಪ್ರತಿನಿಧಿಗಳು ಕಳುಹಿಸಿದ ವರದಿಯನ್ನು ಮೂಲೆಯೊಂದರಲ್ಲಿ ಪ್ರಕಟಿಸಿದ್ದುವು. ಆದರೆ ಒಂದು ಪತ್ರಿಕೆ ಮಾತ್ರ ತನ್ನ ವಾರದ ಪುರವಣಿಯ ಕಲಾ ವಿಭಾಗದಲ್ಲಿ ಈ ಮೇಳದ ಚಿಕ್ಕ ಇತಿಹಾಸವನ್ನೇ ಪ್ರಕಟಿಸಿ ಅಮೆರಿಕದ ಪ್ರದರ್ಶನದ ಒಂದೆರಡು ಫೋಟೊಗಳನ್ನೂ ಪ್ರಕಟಿಸಿತ್ತು. ಅವೆರಡೂ ಅಂತ್ಯನ ಫೋಟೊಗಳೇ. ಕೆಳಗಡೆ ಟಿಪ್ಪಣಿಯಲ್ಲಿ ಅಮೆರಿಕದ ನೋಡುಗರ ಮನಸೆಳೆದ ಅಂತ್ಯ ಬಬ್ರುವಾಹನನಾಗಿ ಮತ್ತು ವೃಷಸೇನನಾಗಿ' ಎಂದು ಬರೆದಿದ್ದುವು.

ಮೂಲೆಯಲ್ಲಿ ಈ ಯಶಸ್ಸಿನ ಹಿಂದಿನ ಶಕ್ತಿ ಎಂದು ಶಾಸ್ತ್ರೀಗಳ ಫೋಟೋವನ್ನೂ ಹಾಕಿದ್ದರು. ಮೇಳದ ಇತಿಹಾಸದಲ್ಲಿ ಆದಿಯ ಹೆಸರೂ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ ಶಾಸ್ತ್ರೀಗಳ ಜೊತೆ ಕೈಗೂಡಿಸಿದ ಆತ ಈ ಮಕ್ಕಳ ಮೇಳದ ಯಶಸ್ಸಿಗೆ ಹೇಗೆ ಕಾರಣಾನಾದ ಎನ್ನುವುದನ್ನು ಒಂದಿಷ್ಟು ವಿವರವಾಗಿ ಬರೆದಿದ್ದರು. ಪತ್ರಿಕೆಯಲ್ಲಿ ಬಂದದ್ದನ್ನು ಓದಿದ ಯಾರೋ ಅದೇ ಪತ್ರಿಕೆಯ ಸಮೇತ ಆದಿಯನ್ನು ಹುಡುಕಿಕೊಂಡು ಬಂದಿದ್ದರು. ಆದಿ ಆ ಪತ್ರಿಕೆನ್ನು ನೋಡಿದವನೇ ಅಂತ್ಯನ ಎರಡೆರಡು ಫೋಟೋಗಳನ್ನು ಅಮ್ಮ ಅಪ್ಪನಿಗೆ ತೋರಿಸಿದ್ದಷ್ಟೇ ಅಲ್ಲದೆ ಇಡೀ ಊರಿಗೇ ತೋರಿಸಿಕೊಂಡು ಬಂದಿದ್ದ. ನೋಡುವವರಿಗೂ ಆನಂದವೇ.

ತಮ್ಮೂರ ಹುಡುಗನ ಫೋಟೋ ಒಂದು ಇಂಗ್ಲೀಷ್ ಪತ್ರಿಕೆಯಲ್ಲಿ ಬಂದಿತೆ0ದರೆ! ಶಾಸ್ತ್ರೀಗಳಿಗೂ ಸಂಭ್ರಮವೇ. ಪತ್ರಿಕೆಯಲ್ಲಿ ಬಂದ ಮಗನ ಫೋಟೊ ನೋಡಿ ಆನಂದಿಸಿದ ತಾಯಿ ಹಿಂದಿನಿ0ದಲೇ ಕಣ್ಣೊರಸಿಕೊಂಡದ್ದು ಬೇರೆ ಯಾರ ಕಣ್ಣಿಗೆ ಬೀಳದಿದ್ದರೂ ಆದಿಯ ಕಣ್ಣಿಗೆ ಬಿದ್ದಿತ್ತು. ಮನೆಗೆ ಹಿಂದಿನ ದಿನವೇ ಬಂದಿದ್ದ ಅಂತ್ಯ ಹೇಳಿದ ‘ಕೊನೆಗೂ ಅನಂತಣ್ಣ ಮಾತ್ರ ಸಿಗಲೇ ಇಲ್ಲ. ಅವನಿದ್ದ ಊರಿನಿಂದ ಸುಮಾರು ಜನ ನಮ್ಮ ಆಟ ನೋಡಲು ಬಂದಿದ್ದರು. ಹೆಚ್ಚಿನವರು ಅನಂತಣ್ಣನ ಗುರುತಿದ್ದವರೇ.. ಕೇಳಿದರೆ ಓದಲಿಕ್ಕಿದೆ ಬರುವುದಿಲ್ಲ ಎಂದನ0ತೆ..’ ಎಂದದ್ದು ಕೇಳಿದ ಆಕೆ ರಾತ್ರಿಯಿಡೀ ನಿದ್ದೆಯಿಲ್ಲದೆ ಅಳುತ್ತ ಕಳೆದಿದ್ದಳು.

ಅಂತೂ ಅನಂತನಿಗೆ ಈ ಮನೆಯ ಸಂಬ0ಧವೇ ಬೇಡವಾಗಿದೆ. ಎಲ್ಲವನ್ನೂ ಹರಿದುಕೊಳ್ಳುವ ಆತುರದಲ್ಲಿದ್ದಾನೆ ಎಂದುಕೊ0ಡ ಆದಿಗೆ ಅವನ ಈ ಸಿಟ್ಟಿಗೆ ಯಾವುದೇ ಕಾರಣ ಕಾಣಿಸದೆ ಸಂಕಟಕ್ಕೆ ಒಳಗಾಗಿದ್ದ. ಅದೂ ಅಮ್ಮನ ಕಣ್ಣೀರನ್ನು ನೆನೆಸಿಕೊಂಡಾಗ ಸಂಕಟ ಹೆಚ್ಚಾಗುತ್ತಿತ್ತು. ಅಂತ್ಯನೂ ಬಹಳ ದಿನ ಆ ಚಿಂತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಲೇ ಇದ್ದ. ಆದರೆ ತನ್ನ ಮಾಮೂಲಿ ಚಟುವಟಿಕೆಗಳಿಗೆ ಅದರಿಂದ ಭಂಗ ಬರದಂತೆಯೂ ನೋಡಿಕೊಳ್ಳುತ್ತಿದ್ದ. ಹೊಸ ಪ್ರಸಂಗಗಳ ಪ್ರಾಕ್ಟೀಸಿನಲ್ಲಿ ಎಂದೂ ಅದು ಅಡ್ಡ ಬರದಂತೆ ಎಚ್ಚರಿಕೆ ವಹಿಸುತ್ತಿದ್ದ.

ಶಾಸ್ತ್ರೀಗಳಿಗಂತೂ ಅಮೆರಿಕ ಪ್ರವಾಸದಿಂದ ಬಂದಮೇಲೆ ಅಂತ್ಯನ ಮೇಲಿನ ಮೆಚ್ಚುಗೆ ಇದ್ದದ್ದೂ ಹೆಚ್ಚಾಗಿತ್ತು. ಅವನಣ್ಣ ಆದಿಯಿಲ್ಲದಿರುತ್ತಿದ್ದರೆ ತಮ್ಮ ಅಮೆರಿಕ ಪ್ರವಾಸದ ಕನಸು ಕನಸಾಗಿಯೇ ಉಳಿಯುತ್ತಿತ್ತು ಎನ್ನುವುದು ಒಂದಾದರೆ ಅಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ ಅಂತ್ಯನ ಅಭಿನಯ ಇನ್ನೊಂದು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಷ್ಟು ಗಾಂಭೀರ್ಯವನ್ನು ಬೆಳೆಸಿಕೊಂಡು ಪಾತ್ರ ನಿರ್ವಹಿಸುತ್ತ ಜೊತೆಗೇ ಜ್ಞಾನವನ್ನೂ ಬೆಳೆಸಿಕೊಳ್ಳುತ್ತಿದ್ದ ಅವನನ್ನು ಮೆಚ್ಚದೇ ಇರಲು ಹೇಗೆ ಸಾಧ್ಯ ಅವರಿಗೆ! ಈಗ ತರಬೇತಿ ಮತ್ತು ಪ್ರದರ್ಶನದಿಂದ ತುಸು ವಿರಾಮ ಶಾಸ್ತ್ರೀಗಳಿಗೆ ಮತ್ತು ಅವರ ತಂಡಕ್ಕೆ. ಹಾಗಿರುವಾಗ ಅಮೆರಿಕದ ಪ್ರವಾಸದ ಸುಸ್ತನ್ನು ಸುಧಾರಿಸಿಕೊಳ್ಳುವುದರೊಂದಿಗೆ ಅಲ್ಲಿನ ಕಾರ್ಯಕ್ರಮದ ಯಶಸ್ಸನ್ನು ಹೊಗಳಿ ಸನ್ಮಾನಿಸಿಲು ನಾ ಮುಂದು ತಾ ಮುಂದು ಎಂದು ಆತುರ ತೋರಿಸುತ್ತಿದ್ದ ಮಂದಿಗೆ ದಿನ ಮತ್ತು ಸಮಯವನ್ನು ಕೊಡುವುದೇ ಕಷ್ಟವಾಗುತ್ತಿತ್ತು. ಆದರೂ ಜನರ ಉತ್ಸಾಹಕ್ಕೆ ಇಲ್ಲವೆನ್ನುವಂತಿದೆಯೇ. ಒಪ್ಪುತ್ತಿದ್ದರು. ಸನ್ಮಾನವೆಂದರೆ ತಂಡದ ಎಲ್ಲರೂ ಇರಬೇಕು. ಈಗಷ್ಟೇ ಅಮೆರಿಕದಿಂದ ಹಿಂದಿರುಗಿ ಬಂದ ಹುಡುಗರಿಗೆ ಮನೆಯವರೊಂದಿಗೆ ಬಂಧು ಬಳಗದವರೊಂದಿಗೆ ಒಂದಷ್ಟು ಸಮಯ ಕಳೆಯುವ ಆತುರ. ಮನೆಯವರಿಗೂ ಅಷ್ಟೆ. ತಾಯಂದಿರಿಗೆ ತಿಂಗಳುಗಟ್ಟಲೆ ಮನೆಯಲ್ಲಿಲ್ಲದ ಮಕ್ಕಳಿಗೆ ಅವರಿಗೆ ಪ್ರೀತಿಯ ತಿಂಡಿ ಮಾಡಿ ಉಣಬಡಿಸುವ ಆಸೆ.

ತಂದೆಯ0ದಿರಿಗೆ ತಮ್ಮದೇ ಬಂಧುಗಳೆದುರಿಗೆ ತಮ್ಮ ಮಕ್ಕಳನ್ನು ಮೆರೆಸಿ ನಮ್ಮ ಪೈಕಿ ಯಾರೂ ಮಾಡದ್ದನ್ನು ತಮ್ಮ ಮಗ ಮಾಡಿದ ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎಂದು ಹೊಳಿಕೊಳ್ಳುವ ಕಾತುರ. ಶಾಸ್ತ್ರೀಗಳಿಗೆ ಕಷ್ಟ ಬಂದದ್ದು ಅಂತಹ ಮಕ್ಕಳನ್ನು ಕಲೆ ಹಾಕುವುದರಲ್ಲಿ. ಸನ್ಮಾನವೆಂದರೆ ಎಲ್ಲರಿಗೂ ಸಂತೋಷವೇ ಆದರೂ ಅಮೆರಿಕದ ಯಶಸ್ಸಿನ ಎದುರಿಗೆ ಇದು ಗೌಣ. ಹಾಗಾಗಿ ಮೊದಲೆಲ್ಲ ಪ್ರದರ್ಶನ ಮತ್ತು ಸನ್ಮಾನವೆಂದರೆ ಮಕ್ಕಳೊಂದಿಗೆ ತಾವೂ ಬಂದು ಗಂಟೆಗಟ್ಟಲೆ ನಿಲ್ಲುತ್ತಿದ್ದ ಅದೇ ತಂದೆ ತಾಯಂದಿರುಗಳಲ್ಲಿ ‘ಶಾಸ್ತ್ರೀಗಳೇ, ಸನ್ಮಾನ ಕಾರ್ಯಕ್ರಮವನ್ನು ಇನ್ನೊಂದೆರಡು ದಿನ ಬಿಟ್ಟು ಇಟ್ಟುಕೊಳ್ಳಲು ಹೇಳಿ’ ಎಂದವರೂ ಇದ್ದರು. ಹಾಗೆಲ್ಲ ಹೇಳಲಿಕ್ಕೆ ಸಾಧ್ಯವಿಲ್ಲ ಎನ್ನುವುದು ಶಾಸ್ತ್ರೀಗಳಿಗೆ ಮಾತ್ರ ಗೊತ್ತಿದ್ದ ವಿಷಯ. ಸನ್ಮಾನ ಮಾಡಲು ಕರೆಯುವವರು ಈ ಸಾಧನೆ ಮಾಡಿದವರನ್ನು ಸನ್ಮಾನಿಸುವುದರೊಂದಿಗೆ ತಮ್ಮದೂ ಒಂದಿಷ್ಟು ಹೇಳಿಕೊಳ್ಳಬೇಕು ಎನ್ನುವ ಆಸೆಯಿಂದಲೇ ಆ ಕಾರ್ಯಕ್ರಮವನ್ನು ಇಟ್ಟುಕೊಳ್ಳುವುದು ಎನ್ನುವುದು ಅವರಿಗೆ ತಿಳಿದಿದೆ. ಅಂತವರು ಈ ತಂದೆ ತಾಯಂದಿರ ಕೇಳಿಕೆಗಳನ್ನು ಮನ್ನಿಸುತ್ತಾರೆಯೇ. ‘ಬಹಳ ಕೆಲಸ ಕಾರ್ಯದ ನಡುವೆ ಪುರುಸೊತ್ತು ಮಾಡಿಕೊಂಡು ಇಂತಹದೊoದಕ್ಕೆ ಮನಸ್ಸು ಮಾಡಿದ್ದೇವೆ. ಈಗ ಆಗುವುದಿಲ್ಲ ಎಂದರೆ ಇನ್ನು ಯಾವಾಗಲೋ’ ಅವರ ಜೊತೆಯಲ್ಲಿಯೇ ಇದ್ದ ಇನ್ನೊಬ್ಬರು ಯಾರೋ ‘ಮುಂದೆ ಸಾಧ್ಯವಾಗುತ್ತದೆಯೋ ಇಲ್ಲವೋ’ ಎನ್ನುವ ಕೊಂಕು ಮಾತನ್ನೂ ತೆಗೆಯುತ್ತಾರೆ.

ಹಾಗಾಗಿ ಶಾಸ್ತ್ರೀಗಳಿಗೆ ಬೇರೆ ದಾರಿಯೇ ಇಲ್ಲ ಒಪ್ಪಲೇ ಬೇಕು. ಒಪ್ಪುತ್ತಿದ್ದರು ಕೂಡ. ಮತ್ತು ಮಕ್ಕಳೆಲ್ಲರನ್ನು ಅವರ ವಿರೋಧದ ಹೊರತಾಗಿಯೂ ಕಾರ್ಯಕ್ರಮದ ದಿನ ತಪ್ಪಿಸುವ ಹಾಗೆ ಇಲ್ಲವೇ ಇಲ್ಲ ಎಂದು ಒತ್ತಾಯಿಸುತ್ತಿದ್ದರು. ಅಷ್ಟಕ್ಕೂ ಕ್ಯಾತೇ ತೆಗೆಯುವವರನ್ನು ನೀವು ಹಾಗೆ ಮಾಡಿದರೆ ಮುಂದೆ ಇಂತಹ ಅವಕಾಶ ಬಂದಾಗ ನಿಮ್ಮನ್ನು ಟೀಮಿನಲ್ಲಿ ಸೇರಿಸಿಕೊಳ್ಳುವುದರ ಬಗ್ಗೆ ಆಲೋಚಿಸಬೇಕಾದೀತು’ ಎಂದು ಹೆದರಿಸಬೇಕಾಗಿ ಬಂದದ್ದೂ ಇತ್ತು.

ಅಷ್ಟೆಲ್ಲ ರಗಳೆಗಳ ನಡುವೆಯೂ ಸುಮಾರು ಸಮಾರಂಭಗಳೇ ನಡೆದಿದ್ದುವು. ಅಂತಹ ಪ್ರತಿಯೊಂದು ಸಮಾರಂಭದಲ್ಲೂ ಆದಿ ಇರುವಂತೆ ನೋಡಿಕೊಂಡಿದ್ದರು ಶಾಸ್ತ್ರೀಗಳು ಮತ್ತು ಅವನಿಗೆ ತಪ್ಪದೇ ಸ್ಟೇಜಿನ ಮೇಲೆ ಒಂದು ಸ್ಥಾನವನ್ನು ಕೊಡುವಂತೆಯೂ ಮಾಡಿದ್ದರು. ಪ್ರತಿ ಕಾರ್ಯಕ್ರಮದಲ್ಲಿಯೂ ಅವನು ಮಾತನಾಡುವಂತೆಯೂ ನೋಡಿಕೊಂಡಿದ್ದರು. ಮೊದಲನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ಆದಿ ಅಂತ್ಯನ ಬಗ್ಗೆ ತುಸು ಜಾಸ್ತಿಯೇ ಮಾತನಾಡಿದ್ದ.

ಪ್ರತಿ ಪ್ರದರ್ಶನದ ನಂತರವೂ ಅಮೆರಿಕದ ಪೇಪರುಗಳಲ್ಲಿ ಅವನದ್ದೇ ಸುದ್ದಿ ಎನ್ನುವುದನ್ನು ಒತ್ತಿ ಒತ್ತಿ ಹೇಳಿದ್ದ. ಆ ಕಾರ್ಯಕ್ರಮದ ನಂತರ ಅಂತ್ಯನೇ ಅಣ್ಣನಿಗೆ ಹೇಳಿದ್ದ. `ಅಷ್ಟೆಲ್ಲ ನನ್ನ ಬಗ್ಗೆ ಹೇಳಬೇಡ… ಉಳಿದವರಿಗೆ ಬೇಜಾರಾಗುತ್ತೆ ಅಷ್ಟೇ ಅಲ್ಲ. ನಾನು ನಿನ್ನ ತಮ್ಮ ಎನ್ನುವುದು ಎಲ್ಲರಿಗೂ ಗೊತ್ತಿದೆ ಇಲ್ಲಿ. ನೀನು ಬೇಕೆಂದೇ ಹೊಗಳುತ್ತಿದ್ದೀಯ ಎಂದುಕೊಳ್ಳುತ್ತಾರೆ..’ ಎರಡನೆಯ ಕಾರ್ಯಕ್ರಮದಿಂದ ಆದಿ ಆ ಬಗ್ಗೆ ಎಚ್ಚರಿಕೆ ವಹಿಸಲು ಪ್ರಾರಂಭಿಸಿದ್ದ. ಶಾಸ್ತ್ರೀಗಳ ಕಾರ್ಯಕ್ಷಮತೆಯನ್ನು ಹೊಗಳಿ ಮಕ್ಕಳ ಇಡೀ ಟೀಮನ್ನು ಹೊಗಳಿ ಅಮೆರಿಕದಲ್ಲಿಯೂ ಪ್ರಭಾವ ಬೀರಿಬಂದದ್ದರ ಬಗ್ಗೆ ಹೇಳಿ ಮುಗಿಸುತ್ತಿದ್ದ. ಆದರೆ ಶಾಸ್ತ್ರೀಗಳ ಒತ್ತಾಯಕ್ಕೆ ಕಟ್ಟು ಬಿದ್ದು ಸಾಧ್ಯವಾದಲ್ಲಿಗೆಲ್ಲ ಬರುತ್ತಿದ್ದ ಪ್ರೊಫೆಸರರೊಂದಿಗೆ ಮಾತ್ರ ಅಂತ್ಯ ಹಾಗೆ ಹೇಳುವ ಹಾಗಿರಲಿಲ್ಲವಲ್ಲ. ಹಾಗಾಗಿ ಅವರು ಅಂತ್ಯನನ್ನು ಹೊಗಳಿದ್ದೇ ಹೊಗಳಿದ್ದು.

ಅಮೆರಿಕದಲ್ಲಿದ್ದ ತನ್ನ ಸ್ನೇಹಿತರೊಂದಿಷ್ಟು ಮಂದಿ ಇವರ ಪ್ರದರ್ಶನವನ್ನು ನೋಡಿದವರು ಅಂತ್ಯನ ಬಗ್ಗೆ ಹೇಳಿದ್ದನ್ನು ಪ್ರಸ್ತಾವಿಸುತ್ತ ‘ಬಹುಶಃ ಹೀಗೆಯೇ ಮುಂದುವರಿದರೆ ಈ ಯಕ್ಷಗಾನವೆಂಬ ಕಲೆಯಲ್ಲಿ ಕ್ರಾಂತಿಯನ್ನೇ ಮಾಡಬಲ್ಲ ಇವನು’ ಎಂದಿದ್ದರು. ಹಾಗೆಯೇ ಯಕ್ಷಗಾನದ ಬಗ್ಗೆ ಅಂತ್ಯ ಬರೆದ ಪುಸ್ತಕದ ಬಗ್ಗೆ ಹೇಳುತ್ತ ‘ಅಷ್ಟು ಓದಿಕೊಂಡ ತನ್ನಂತಹ ಪ್ರೊಫೆಸರುಗಳಿಗೂ ಬರೆಯಲು ಕಷ್ಟವಾಗಬಹುದಾದಂತಹ ಮಹಾಗ್ರಂಥವಾಗಬಲ್ಲುದು ಅದು’ ಎಂದು ಹೇಳುತ್ತಿದ್ದರು.

ಈ ಸನ್ಮಾನ ಸಮಾರಂಭಗಳು ಸುಮಾರು ಒಂದು ತಿಂಗಳಿನಷ್ಟು ಸಮಯವನ್ನೇ ತೆಗೆದುಕೊಂಡವು. ಅದಾದ ನಂತರ ತುಸು ಬಿಡುವು. ಶಾಸ್ತ್ರೀಗಳ ಮನಸ್ಸಿನಲ್ಲಿ ಇನ್ನೊಂದೆರಡು ಹೊಸ ಪ್ರಸಂಗಗಳು ನಿಧಾನವಾಗಿ ರೂಪುಗೊಳ್ಳುತ್ತಿದ್ದುವು. ಮನಸ್ಸಿಗೆ ಬಂದುದನ್ನು ಬರೆಯುವ ಮೊದಲು ಅಂತ್ಯನನ್ನೊoದು ಮಾತು ಕೇಳುತ್ತಿದ್ದರು. ಹಿಂದಿನ ಯಾವ ಪ್ರಸಂಗವನ್ನು ಬರೆಯುವಾಗಲೂ ಯಾರನ್ನೂ ಕೇಳಿದವರಲ್ಲ ಅವರು. ಆದರೆ ಈಗ ಅಂತ್ಯನಿದ್ದಾನಲ್ಲ. ಯಕ್ಷಗಾನದ ಬಗ್ಗೆ ತನಗಿಂತ ಹೆಚ್ಚು ತಿಳಿದವನು. ಜೊತೆಗೇ ಅವನಪ್ಪ ಮತ್ತ ಅಣ್ಣನಿಂದ ಉಪಕೃತರಾದ ಋಣದ ಭಾವ ಇದ್ದರೂ ಇದ್ದೀತು. ಆದರೆ ಒಂದoತೂ ನಿಜ. ಹಾಗೆ ಅಂತ್ಯನೊoದಿಗೆ ಮಾಡಿದ ಚರ್ಚೆಗಳಲ್ಲಿ ಯಾವುದೂ ವ್ಯರ್ಥ ಅನಿಸಿದ್ದಿಲ್ಲ ಅವರಿಗೆ.

| ಇನ್ನು ನಾಳೆಗೆ |

‍ಲೇಖಕರು Admin

June 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: