ಪಿ ಪಿ ಉಪಾಧ್ಯ ಸರಣಿ ಕಥೆ 40- ಆ ಒಡಕು ದನಿ ಅಲ್ಲಿಯೇ ಅಡಗಿ ಹೋಗಿತ್ತು…

ಪಿ ಪಿ ಉಪಾಧ್ಯ

ಅಂತೂ ಎಲ್ಲ ತಯಾರಾಗಿ ಪ್ರ್ಯಾಕ್ಟೀಸು ಪ್ರಾರಂಭವಾಗಬೇಕಿತ್ತು. ಶಾಸ್ತ್ರೀಗಳು ಕನಸಿನಲ್ಲೂ ನಿರೀಕ್ಷಿಸಿರದಿದ್ದ ಸಮಸ್ಯೆಯೊಂದು ಎದುರಾಯ್ತು. ಎರಡು ತಿಂಗಳ ಹಿಂದೆ ದೇಶದೊಳಗಿನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ತಂಡವನ್ನೇ ಕರೆದುಕೊಂಡು ಹೋಗುವುದೆಂದು ನಿರ್ಧರಿಸಿದ್ದರೂ ಅವರಲ್ಲೇ ಒಂದಿಬ್ಬರನ್ನು ಕೈಬಿಡಬೇಕಾಗಿ ಬಂದದ್ದೇ ಸಮಸ್ಯೆ.

ಹೊರದೇಶದ ಪ್ರಯಾಣದ ಖರ್ಚಿಗೆ ಯಾರದೋ ಕೈ ಕಾಣುವ ಪರಿಸ್ಥಿತಿಯಿದ್ದುದರಿಂದ ಗುಂಪಿನ ಗಾತ್ರವನ್ನು ಕಡಿಮೆ ಮಾಡಬೇಕು ಎನ್ನುವ ಅವರೇ ಹೇರಿಕೊಂಡ ಮಿತಿಯ ಜೊತೆಗೆ ಹಿಂದಿನ ಪ್ರವಾಸದಲ್ಲಿ ಇವರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪಾತ್ರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲಾಗದ ಇಬ್ಬರನ್ನು ಕೈ ಬಿಡಲೇ ಬೇಕಾಗಿತ್ತು.

ಕೋಲ್ಕತಾದ ಪ್ರದರ್ಶನದ ನಂತರ ಕಲೆಗಾಗಿಯೇ ಮೀಸಲಿಟ್ಟ ಅಲ್ಲಿನ ಪತ್ರಿಕೆಯೊಂದು ಅವರಿಬ್ಬರನ್ನು ತಂಡದ ದೃಷ್ಟಿ ಬೊಟ್ಟುಗಳೆಂದು ಕರೆದಿತ್ತು. ಹಾಗಾಗಿ ಅವರಿಬ್ಬರನ್ನು ಕೈಬಿಡುವ ನಿರ್ಧಾರ ಮಾಡಿ ಅವರು ನಿರ್ವಹಿಸಿದ ಪಾತ್ರವನ್ನು ತಂಡದ ಉಳಿದವರೇ ಹಂಚಿಕೊಳ್ಳುವುದು ಎಂದು ತೀರ್ಮಾನಿಸಿದ್ದರು. ಅದರಿಂದ ಗುಂಪಿನ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡಿದ ಹಾಗೂ ಆಯ್ತು. ಪಾತ್ರ ನಿರ್ವಹಣೆಯಲ್ಲಿ ಪರಿಣಿತಿಯನ್ನು ಕಾಯ್ದುಕೊಂಡ ಹಾಗೂ ಆಯ್ತು ಎನ್ನುವುದು ಅವರ ಆಲೋಚನೆ. ಪ್ರೊಫೆಸರ್ ಗಣೇಶ ಸಹ ಅದಕ್ಕೆ ಒಪ್ಪಿದರು. ಅದೇ ತಪ್ಪಾದದ್ದು. ಎಲ್ಲ ನಿರ್ಧಾರವಾಗಿ ತರಬೇತಿ ಪ್ರಾರಂಭವಾಗಬೇಕು. ಆ ದಿನ ಬೆಳಿಗ್ಗೆ ತರಬೇತಿ ಕೇಂದ್ರದ ಹೊರಗಡೆ ಗಲಾಟೆಯೋ ಗಲಾಟೆ.

ಯಾರನ್ನು ಕೈ ಬಿಡಬೇಕೆಂದು ಆಲೋಚಿಸಿದ್ದರೋ ಅವರಿಬ್ಬರಿಗೆ ಅದರ ಸುಳಿವು ಸಿಕ್ಕಿ ತಮ್ಮೂರಿನವರನ್ನು ಅದಕ್ಕಿಂತ ಹೆಚ್ಚಾಗಿ ಸುತ್ತ ಮುತ್ತ ನಾಲ್ಕೂರಿನಲ್ಲಿನ ತಮ್ಮ ಜಾತಿಯವರನ್ನು ಯಾರ ಮೂಲಕವೋ ಸುದ್ದಿ ಕಳುಹಿಸಿ ಕರೆಸಿಕೊಂಡಿದ್ದರು. ಆ ಇಬ್ಬರು ಹುಡುಗರು ತಮ್ಮ ಜಾತಿಯವರಲ್ಲವೆಂದು ಈ ಶಾಸ್ತ್ರೀಗಳು ಅವರನ್ನು ಕೈ ಬಿಟ್ಟಿದ್ದಾರೆ. ಹಿಂದುಳಿದವರಿಗೆ ವಂಚನೆ ಮಾಡಿದ್ದಾರೆ' ಎಂದು ಏನೇನೋ ಹೇಳುತ್ತ ಬೊಬ್ಬಿಡಲಿಕ್ಕೆ ಸುರು ಮಾಡಿದ್ದರು. ಶಾಸ್ತ್ರೀಗಳಿಗೆ ದಿಕ್ಕೇ ತೋಚದಂತಾಯ್ತು.

ಶುದ್ಧ ಕಲೆಯ ದೃಷ್ಟಿಯಿಂದ ತೆಗೆದುಕೊಂಡ ತನ್ನ ನಿರ್ಧಾರಕ್ಕೆ ಇಂತಹ ಜಾತಿಯ ಬಣ್ಣ ಬಳಿಯುಯುವುದನ್ನು ನೋಡಿ ಅವರಿಗೆ ತೀವ್ರ ಸಂಕಟವಾಗತೊಡಗಿತು. ಅಂತಹ ಯಾವುದೇ ಭಾವನೆಯಿಲ್ಲದ ಶಾಸ್ತ್ರೀಗಳು ಜಾತಿಯ ಲೆಕ್ಕದಲ್ಲಿ ಅವರಿಬ್ಬರ ಜಾತಿಗಿಂತಲೂ ಹಿಂದುಳಿದ ಜಾತಿಯವರಿಬ್ಬರನ್ನು ತಂಡದಲ್ಲಿ ಇಟ್ಟುಕೊಂಡದ್ದೇ ಅಲ್ಲದೆ ಪ್ರತಿಭಾನ್ವಿತರಾದ ಅವರಿಗೆ ಪ್ರಮುಖ ಪಾತ್ರಗಳನ್ನೂ ಕೊಟ್ಟ್ಟಿದ್ದರು. ಆದರೆ ಅದನ್ನೆಲ್ಲ ಹೇಳಿದರೆ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುವುದು ಹಾವ ಭಾವಗಳ ಸಮೇತ ಎತ್ತರದ ದನಿಯಲ್ಲಿ ಘೋಷಣೆ ಕೂಗುತ್ತಿದ್ದ ಅವರನ್ನು ಕಂಡು ಅರಿವಾಗಿತ್ತು. ಇನ್ನೇನು ತರಬೇತಿ ಪ್ರಾರಂಭವಾಗುತ್ತದೆ ಎನ್ನುವ ಉತ್ಸಾಹದಲ್ಲಿ ತಯಾರಾಗಿ ನಿಂತಿದ್ದ ತಂಡದವರೆಲ್ಲರೂ ತಮ್ಮ ತರಗತಿಯ ಕೊಠಡಿಯಿಂದ ಹೊರಬಂದು ನೋಡ ತೊಡಗಿದ್ದರು. ತಮ್ಮವರೇ ಆಗಿದ್ದ ಇಬ್ಬರ ಬಗ್ಗೆ ಊರಿನ ಜನ ಸೇರಿ ಗಲಾಟೆ ಮಾಡುತ್ತಿದ್ದುದನ್ನು ನೋಡಿಯೂ ಅವರು ಯಾರೂ ಮುಂದೆ ಬರಲಿಲ್ಲ. ಅಂತ್ಯನೂ ಹೊರಬಂದವ ಏನೂ ಮಾಡಲು ತೋಚದೆ ನಿಂತ. ಶಾಸ್ತ್ರೀಗಳಿಗೂ ಏನೂ ತೋಚದಿದ್ದರೂ ಸಂಸ್ಥೆಯ ಹಿರಿಯರಾಗಿದ್ದ ಜವಾಬ್ದಾರಿ ಇದೆಯಲ್ಲ್ಲ. ಹೊರಬಂದಿದ್ದರು. ನೆರೆದವರ ಆವೇಶ ನೋಡಿ ಅವರಿಗೂ ತುಸು ಗಾಬರಿಯಾಗಿತ್ತು. ಅಷ್ಟರಲ್ಲಿ ಅಂತ್ಯನೂ ಹೋಗಿ ಶಾಸ್ತಿçಗಳ ಪಕ್ಕದಲ್ಲೇ ನಿಂತ. ಅವನನ್ನು ನೋಡಿದ್ದೇ ಅವರುಅಂತ್ಯ.. ನಿಮ್ಮಣ್ಣನನ್ನು ಕರೆಯುವುದೇ ವಾಸಿ ಎಂದು ಕಾಣತ್ತದೆ’ ಎಂದರು. ಅಂತ್ಯನಿಗೂ ಹಾಗೆಯೇ ಅನ್ನಿಸಿತು. ಸರಿಯೆಂದ. ಕೂಡಲೇ ಒಳ ಹೋದ ಶಾಸ್ತ್ರೀಗಳು ತಮ್ಮ ಕೋಣೆಯಲ್ಲಿದ್ದ ಫೋನಿನ ಮೂಲಕ ಆದಿಗೆ ಕರೆ ಮಾಡಿದರು. ಅದೃಷ್ಟ. ಅವನಿನ್ನೂ ಮನೆಯಲ್ಲೇ ಇದ್ದ. ಶಾಸ್ತ್ರೀ ಗಳ ಕರೆ ಬಂದದ್ದೇ ಕೂಡಲೇ ಹೊರಟು ಬಿಟ್ಟ. ಐದೇ ನಿಮಿಷಗಳಲ್ಲಿ ಗುಡು ಗುಡು ಸದ್ದು ಮಾಡುತ್ತ ಬಂದ ಆದಿಯ ಮೋಟಾರು ಸೈಕಲ್ಲಿಗೆ ನೆರೆದವರೆಲ್ಲ ದಾರಿ ಮಾಡಿ ಕೊಟ್ಟಿದ್ದರು. ಅದು ಜನ ಆದಿಗೆ ಕೊಡುವ ಗೌರವ.

ಗೌಜಿ ಮಾಡುತ್ತಿದ್ದವರೆಲ್ಲ ಒಂದು ಕ್ಷಣ ಸುಮ್ಮನಾಗಿ ಆದಿಯನ್ನು ಸುತ್ತುವರಿದರು. ಏನು ಏಕೆ ಹೀಗೆ ಗಲಾಟೆ ಮಾಡುತ್ತಿದ್ದೀರಿ' ಎಂದು ಕೇಳುತ್ತಲೇ ಶಾಸ್ತ್ರೀ ಗಳಿದ್ದಲ್ಲಿಗೆ ಹೋದರೆ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅವರೆಲ್ಲರೆದುರಿಗೇ ಶಾಸ್ತ್ರೀಗಳು ಅವರ ಗಲಾಟೆಯ ಕಾರಣವನ್ನು ವಿವರಿಸಿದರು. ಮಧ್ಯ ಮಧ್ಯ ನೆರೆದವರಲ್ಲಿ ಕೆಲವರು ಬಾಯಿ ಹಾಕಲು ನೋಡಿದರೂ ಅವರಲ್ಲೇ ಉಳಿದವರು ತಡೆದಿದ್ದರು. ಶಾಸ್ತ್ರೀ ಗಳು ಹೇಳಿದ್ದನ್ನೆಲ್ಲ ಕೇಳಿಸಿಕೊಂಡವ ನೆರೆದವರತ್ತ ದೃಷ್ಟಿ ಹಾಯಿಸಿದರೆ ಇಷ್ಟು ಹೊತ್ತಿನವರೆಗೆ ಕೂಗೆಬ್ಬಿಸುತ್ತಿದ್ದ ಗುಂಪಿನ ಮುಂದಾಳುಗಳೆನ್ನಿಸಿಕೊಂಡ ಮಂದಿ ತಲೆ ಕೆಳಗೆ ಹಾಕಿ ನಿಂತಿದ್ದರು.

ಆದಿ ಅವರನ್ನೇ ಮುಂದೆ ಕರೆದಿದ್ದ. ತರಬೇತಿ ಕೇಂದ್ರದ ಜಗಲಿಯ ಮೇಲೆ ನಿಂತೇ ಅವರನ್ನು ಮಾತಿಗೆಳೆದ. ‘ನೋಡಿ ಕಾರಣವಿಲ್ಲದೆ ಯಾರನ್ನೂ ಕೈ ಬಿಟ್ಟದ್ದಲ್ಲ. ನಿಮ್ಮವರಿಬ್ಬರ ಬಗ್ಗೆ ಈ ಕೋಲಕತ್ತಾದ ಪತ್ರಿಕೆ ಏನು ಬರೆದಿದೆ ನೋಡಿ. ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಎಲ್ಲರನ್ನೂ ಕಟ್ಟಿಕೊಂಡು ದೇಶವನ್ನೆಲ್ಲ ಸುತ್ತಿದ್ದಾರೆ ಶಾಸ್ತಿçಗಳು. ಅಂತಹುದರಲ್ಲಿ ಈ ಇಬ್ಬರ ಬಗ್ಗೆ ಇಂತಹ ಅಭಿಪ್ರಾಯ ಬಂದಿದೆ. ಇದು ಸಂಸ್ಥೆಯ ಮರ್ಯಾದೆಯ ಪ್ರಶ್ನೆ. ಅದು ಬೇರೆ ಈಗ ಹೋಗುತ್ತಿರುವುದು ಹೊರದೇಶಕ್ಕೆ. ಇದರಲ್ಲಿ ದೇಶದ ಮರ್ಯಾದೆಯ ಪ್ರಶ್ನೆಯೂ ಅಡಗಿದೆ. ಅಲ್ಲದೆ ತಂಡವನ್ನು ಕರೆಸಿಕೊಳ್ಳುವವರು ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದಾರೆ ಅವರಿಗೂ ಉತ್ತರ ಹೇಳಬೇಕಲ್ಲವೇ..’ ಎಂದು ಹೇಳಿ ಎಲ್ಲರತ್ತ ಒಂದು ದೃಷ್ಟಿ ಬೀರಿದ. ಹೆಚ್ಚಿನವರ ಅಡಿ ಹಾಕಿದ್ದ ಮುಖ ಮೇಲೆ ಬಂದಿರಲೇ ಇಲ್ಲ. ಯಾರೋ ಒಬ್ಬ ‘ಅಲ್ಲ ಸರಿಯಾದ ತರಬೇತಿ ದೊರಕಿದ್ದರೆ ನಮ್ಮ ಹುಡುಗರೂ ಎಲ್ಲರ ಸಮಕ್ಕೇ ಬರುತ್ತಿರಲಿಲ್ಲವೇ..?’ ತಾನು ಹೇಳುತ್ತಿರುವ ಮಾತಿನಲ್ಲಿ ನ್ಯಾಯ ಇಲ್ಲ ಎನ್ನುವುದು ಅವನಿಗೇ ಗೊತ್ತಿತ್ತು ಎನ್ನುವುದು ಅವನ ಧ್ವನಿಯಲ್ಲೇ ವ್ಯಕ್ತವಾಗುತ್ತಿತ್ತು. ಆದರೂ ಮಾತು ಮಾತೇ. ಉತ್ತರಿಸದಿದ್ದರೆ ಅದೇ ನಿಂತು ಬಿಡುತ್ತದೆ.

ಆ ಹುಡುಗರಿಗೆ ಬೇಕೆಂತಲೇ ಸರಿಯಾದ ತರಬೇತಿ ಕೊಡಲಿಲ್ಲ ಎಂದಾಗುತ್ತದೆ. ಕೂಡಲೇ ಪಕ್ಕದಲ್ಲಿಯೇ ವಿದ್ಯಾರ್ಥಿಗಳ ಗುಂಪಿನಲ್ಲಿ ಬೆರೆತೂ ಬೆರೆಯದವರಂತೆ ನಿಂತು ನೋಡುತ್ತಿದ್ದ ಆ ಹುಡುಗರಿಬ್ಬರನ್ನು ಆದಿ ಕರೆದ. ಅವರಿಗೆ ಎದೆ ಡವಗುಟ್ಟಲು ಪ್ರಾರಂಭಿಸಿತು. ಊರಿನವರು ಗುಂಪಾಗಿ ಬಂದು ದಾಂಧಲೆಯೆಬ್ಬಿಸಲು ಸುರು ಮಾಡಿದಾಗ ತಮಾಷೆ ನೋಡುವವರಂತೆ ಹೊರ ಬಂದಿದ್ದ ಅವರು ಆದಿ ಬಂದನೆಂದಾಗ ಹಿಂದೆ ಸರಿದಿದ್ದರು. ಆದರೆ ಈಗ ಅವನೇ ಕರೆದಾಗ ಬೇರೆ ದಾರಿಯೇ ಇಲ್ಲದೆ ಮುಂದೆ ಬಂದರು.ಇವರು ಹೇಳುತ್ತಿರುವುದು ನಿಜವಾ… ನಿಮಗೆ ಸರಿಯಾಗಿ ತರಬೇತಿ ಕೊಡಲಿಲ್ಲವೇ… ಎಲ್ಲಿಯಾದರೂ ನಿಮಗೆ ಮೋಸ ಮಾಡುತ್ತಿದ್ದಾರೆ ಅನ್ನಿಸಿದೆಯೇ…’ ನೇರವಾಗಿಯೇ ಕೇಳಿದ.

‘ಇಲ್ಲ… ಇಲ್ಲ…’ ತಡವರಿಸುತ್ತ ಉತ್ತರಿಸಿದರು.
‘ಮತ್ತೆ ಏಕೆ ನಿಮ್ಮವರೆಲ್ಲ ಹೀಗೆ ಬಂದು ಗಲಾಟೆ ಮಾಡುತ್ತಿದ್ದಾರೆ…?
ಉತ್ತರವನ್ನೇ ಕೊಡದೆ ಇಬ್ಬರೂ ತಲೆ ಅಡಿ ಹಾಕಿ ನಿಂತರು.
ಇಂತಹ ಒಂದು ಸಂದರ್ಭವನ್ನು ನಿರೀಕ್ಷಿಸಿಯೇ ಇರದಿದ್ದ ಇಲ್ಲಿಯವರೆಗೆ ಗಲಾಟೆ ಮಾಡುತ್ತಿದ್ದ ಆ ಗುಂಪಿನವರೂ ಪುನಃ ಒಮ್ಮೆ ತಲೆ ಅಡಿ ಹಾಕಿದರು.

ಅವರೆಲ್ಲ ಹೇಳುತ್ತಿದ್ದುದು ಸುಳ್ಳು ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದ್ದರೂ ಆದಿ ಕೂಡಲೇ ಹೇಳಿದ. ಶಾಸ್ತ್ರೀಗಳೂ ಕೇಳಿಸಿಕೊಳ್ಳುತ್ತಲೇ ಇದ್ದರು. ನೋಡಿ, ಈಗ ಗುಂಪಿನಲ್ಲಿ ಯಾರನ್ನೂ ಕೈ ಬಿಡುವುದಿಲ್ಲ. ತರಬೇತಿಯಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಲಾಗುತ್ತದೆ. ಆದರೆ ತರಬೇತಿ ಮುಗಿಯುತ್ತ ಬಂದಂತೆ ನಿಮ್ಮಿಬ್ಬರಲ್ಲಿ ಯಾರು ಉತ್ತಮ ಪ್ರಗತಿಯನ್ನು ತೋರಿಸುತ್ತಾರೋ ಅವರನ್ನು ವಿದೇಶ ಪ್ರವಾಸದ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ದಯವಿಟ್ಟು ಕೇಳಿಸಿಕೊಳ್ಳಿ ಇಬ್ಬರನ್ನೂ ಅಲ್ಲ ಒಬ್ಬರನ್ನು ಮಾತ್ರ. ಇದಕ್ಕೆ ನಿಮ್ಮೆಲ್ಲರದ್ದು ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ’ ಎಂದವ ಶಾಸ್ತ್ರೀಗಳತ್ತ ತಿರುಗಿಆಗಬಹುದು ತಾನೇ’ ಎಂದು ಕೇಳಿದ. ಅವರು ಹೂಂ..’ ಎಂದು ತಲೆಯಾಡಿಸುತ್ತಿದ್ದಂತೆಯೇ ಗುಂಪಿನಲ್ಲಿಇದೆಂತಹ ಖಾಜೀ ನ್ಯಾಯ… ನಮ್ಮವರಿಬ್ಬರನ್ನೂ ತೆಗೆದುಕೊಳ್ಳಬೇಕು’ ಎಂದು ಯಾರೋ ಒಡಕು ದನಿಯೆತ್ತತೊಡಗಿದ್ದರು. ಆದರೆ ಅವರಲ್ಲಿಯೇ ಕೆಲವರು ‘ಆದಿ ಅಣ್ಣ ಹೇಳಿದ್ದು ಸರಿಯೇ ಇದೆ. ಅದು ನಮಗೆಲ್ಲರಿಗೆ ಒಪ್ಪಿಗೆ’ ಎಂದು ದಬಾಯಿಸುವ ದನಿಯಲ್ಲಿ ಹೇಳಿದ್ದೇ ಆ ಒಡಕು ದನಿ ಅಲ್ಲಿಯೇ ಅಡಗಿ ಹೋಗಿತ್ತು.

|ಇನ್ನು ನಾಳೆಗೆ |

‍ಲೇಖಕರು Admin

June 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: