ಪಿ ಪಿ ಉಪಾಧ್ಯ ಸರಣಿ ಕಥೆ 4 – ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ…

ಪಿ ಪಿ ಉಪಾಧ್ಯ

4

ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ

ಶಾಮಣ್ಣನವರ ಬರವನ್ನು ನಿರೀಕ್ಷಿಸಿರದ ಸರಸ್ವತಿ ಯಾವುದೇ ತಯಾರಿಯನ್ನು ಮಾಡಿಕೊಳ್ಳದೆ ತನ್ನಷ್ಟಕ್ಕೆ ಅವರೇ ಮಾಡಿಕೊಟ್ಟ ಅನುಕೂಲತೆಯಲ್ಲಿ ಒಂದಿಷ್ಟು ಗಂಜಿ ತಿಂದು ಮಲಗಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ಬಂದ ಅವರನ್ನು ಕಂಡು ಆಶ್ಚರ್ಯಚಕಿತಳಾಗಿದ್ದಳು. ಆದರೂ ಅತೀವ ಸಂಭ್ರಮದಿಂದ ಅವರನ್ನು ಬರ ಮಾಡಿಕೊಂಡವಳು. ಏನು' ಎನ್ನುವ ಮುಖ ಭಾವವನ್ನು ತೋರಿಸಿದಳು. ಇಲ್ಲ ಸರಸ್ವತಿ.. ನಿನ್ನನ್ನು ಬಿಟ್ಟಿರಲಿಕ್ಕಾಗದು’ ಹಾಗೆ ಹೇಳಬಾರದು ಒಡೇರು... ಅಲ್ಲಿ ಮನೆಯಲ್ಲಿ ಮದುವೆಯಾದ ಹೆಂಡತಿಯನ್ನಿಟ್ಟುಕೊಂಡು ನೀವು ಇಲ್ಲಿಗೆಲ್ಲ ಬರಬಾರದು' ಅದೆಲ್ಲ ಇರಲಿ ಸರಸ್ವತಿ.. ಬಹುಶಃ ನಮ್ಮ ಸಂಬಂಧ ಹೀಗೇ ಮುಂದುವರಿಯಬೇಕೆಂಬುದು ಆ ಭಗವಂತನ ಇಚ್ಛೆಯೂ ಇರಬಹುದು’
ಅರ್ಥವಾಗಿರಲಿಲ್ಲ ಸರಸ್ವತಿಗೆ. ಆದರೆ ಅದೆಲ್ಲ ಕೇಳುತ್ತ ಕುಳಿತುಕೊಳ್ಳುವ ಸಮಯವೇ ಅದು? ಶಾಮಣ್ಣ ಸರಸ್ವತಿಯನ್ನು ತಳ್ಳಿಕೊಂಡೇ ಒಳ ಹೋಗಿದ್ದರು.

ಒಳಗಡೆ ಹೆಂಡತಿಯ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲೋಸುಗವೋ ಎನ್ನುವಂತೆ ಆಕೆಯ ಮೇಲೆ ಆಕ್ರಮಣ ನಡೆಸಿದ್ದರು. ಎಂದೂ ಅವರನ್ನು ಈ ತೆರನಲ್ಲಿ ಕಂಡಿರದ ಸರಸ್ವತಿಯಲ್ಲಿ ಅವರ ಹೊಸತನ ದಿಗ್ಬ್ರಮೆ ಹುಟ್ಟಿಸಿತ್ತು. ಮನಸೋ ಇಚ್ಛೆ ಸುಖ ಪಟ್ಟ ಶಾಮಣ್ಣ ಮನೆ ದಾರಿ ಹಿಡಿಯುವಾಗ ಬೆಳ್ಳಿ ಮೂಡುವ ಹೊತ್ತು.

ಅಲ್ಲಿಯೇ ಬಾಗಿಲ ಮರೆಯಲ್ಲಿ ನಿಂತು ಮುಸಿ ನಗುತ್ತಿದ್ದ ಅಬ್ಬೆಯನ್ನು ಗದರಿಕೊಂಡಿದ್ದಳು ಸರಸ್ವತಿ ನಿನ್ನ ಮಾತನ್ನು ಕೇಳಿ ಬೇರೆ ಯಾರನ್ನಾದರೂ ಮನೆಗೆ ಬರಲು ಬಿಟ್ಟಿದ್ದರೆ ಏನಾಗುತ್ತಿತ್ತು ಈಗ' ಎಂದು ಕೇಳುತ್ತ. ಶಾಮಣ್ಣನಿಗೆ ಮದುವೆ ನಿಶ್ಚಯವಾದದ್ದು ಗೊತ್ತಾಗುತ್ತಲೇ ಗಿರಿಜ ಮಗಳಿಗೆ ರಗಳೆ ಮಾಡಲು ಸುರುಮಾಡಿದ್ದಳು ಅಲ್ಲ ಸರಸ್ವತಿ.. ನಮ್ಮ ಕಸುಬೇ ಹಾಗೆ.. ಒಬ್ಬನಲ್ಲದಿದ್ದರೆ ಇನ್ನೊಬ್ಬ. ಒಬ್ಬನನ್ನೇ ನಂಬಿಕೊಂಡು ಬದುಕಲಿಕ್ಕೆ ಅವರೇನು ತಾಳಿ ಕಟ್ಟಿದ ಗಂಡಂದಿರೇ.. ನೀನು ಇನ್ನೊಬ್ಬನನ್ನು ಹುಡುಕಿಕೊಳ್ಳುವುದೇ ಒಳ್ಳೇದು’ ಎಂದು. ಆದರೆ ಸರಸ್ವತಿಗೆ ಅದು ಇಷ್ಟವಿರಲಿಲ್ಲ. ಶಾಮಣ್ಣನನ್ನು ತಾನು ಮದುವೆ ಮಾಡಿಕೊಳ್ಳಲಿಲ್ಲ ನಿಜ. ಆದರೆ ಹೆಂಡತಿಗಿಂತ ಹೆಚ್ಚಾಗಿ ನಡೆಸಿಕೊಂಡಿದ್ದಾರೆ. ಇನ್ನು ಮುಂದೆಯೂ ಹಾಗೆಯೇ ನೋಡಿಕೊಳ್ಳುತ್ತೇನೆಂದಿದ್ದಾರೆ. ಹಾಗಿರುವಾಗ ಅವರಿಗೆ ಮದುವೆ ಎಂದಾಕ್ಷಣ ತಾನು ಬೇರೆಯವರೊಂದಿಗೆ ಮಲಗಲು ಹವಣಿಸುವುದೇ.. ಅವಳಿಗೆ ಅದು ಸಹ್ಯವಾಗಿರಲಿಲ್ಲ.

ಹಾಗೆಂದು ಅವಳೂ ಅಂತಹ ಪತಿವ್ರತೆಯೆಂದೇನೂ ಅಲ್ಲ. ಶಾಮಣ್ಣನ ಸಂಪರ್ಕಕ್ಕೆ ಬರುವುದರ ಮುಂಚೆ ಹಲವಾರು ಪಡ್ಡೆ ಹುಡುಗರ ಸಂಗ ಮಾಡಿದವಳೇ. ಅದೂ ಅವರ ಮತ್ತು ಇವಳ ಅಗತ್ಯವನ್ನು ಹೊಂದಿಕೊಂಡು. ಆದರೆ ಯಾರೊಬ್ಬರೂ ಖಾಯಂ ಎಂದು ಇರಲಿಲ್ಲ. ಶಾಮಣ್ಣ ಬರಲು ಸುರುಮಾಡಿದ ಮೇಲೂ ಸುಮಾರು ದಿನಗಳ ವರೆಗೆ ಅದು ಮುಂದುವರಿದಿತ್ತು. ಶಾಮಣ್ಣ ಖಂಡಿತ ಬರಲಾರರು ಎಂಬಂಥ ದಿನಗಳಲ್ಲಿ ಅವರನ್ನು ಬಿಟ್ಟುಕೊಳ್ಳುತ್ತಿದ್ದಳು. ಅದೂ ತಾಯಿಯ ಒತ್ತಾಸೆಯ ಮೇರೆಗೆ. ಹಾಗೆಂದು ಕಳ್ಳತನವೆಂದಲ್ಲ. ಶಾಮಣ್ಣನಿಗೆ ಹೇಳುತ್ತಿರಲಿಲ್ಲ ಅಷ್ಟೆ. ಆದರೆ ದಿನ ಕಳೆದಂತೆ ಅವಳಲ್ಲಿಯೇ ಬದಲಾವಣೆ ಕಾಣಿಸಿಕೊಂಡಿತ್ತು. ಶಾಮಣ್ಣನೊಂದಿಗೆ ಒಂದು ತೆರನ ನಿಯತ್ತು ಬೆಳೆದಿತ್ತು. ಎಂದೂ ಯಾರೊಂದಿಗೂ ಬೆಳೆಯದ ಸಂಬಂಧ. ಆಗ ಅಬ್ಬೆಯೊಂದಿಗೆ ಕಟ್ಟುನಿಟ್ಟಾಗಿ ಹೇಳಿದ್ದಳು.

ಇನ್ನು ಮೇಲಿಂದ ಬೇರೆ ಯಾರೂ ಬೇಡ.. ಶಾಮೊಡೇರನ್ನು ಬಿಟ್ಟರೆ ಬೇರೆ ಯಾರಿಗೂ ಎಡೆಯಿಲ್ಲ ನನ್ನ ಹಾಸಿಗೆಯ ಮೇಲೆ' ಎಂದಿದ್ದಳು. ಆ ತಾಯಿ ಗಿರಿಜ ಎದೆಯೊಡೆದುಕೊಳ್ಳುವುದೊಂದೇ ಬಾಕಿ. ಈ ಮಗಳಿಗ್ಯಾಕೆ ಇಂತಹ ಬುದ್ಧಿ ಬಂತು ಎಂದು ಅಲವತ್ತುಕೊಂಡಿದ್ದಳು. ಶಾಮಣ್ಣನ ಶ್ರೀಮಂತಿಕೆಯ ಬಗ್ಗೆ ಗಿರಿಜನಿಗೆ ಮೆಚ್ಚುಗೆಯಿದ್ದುದು ನಿಜ. ಆದರೆ ಅಪ್ಪನ ಹಿಡಿತದಲ್ಲೇ ಇದ್ದ ಆ ಮಗ ತನ್ನ ಮಗಳಿಗಾಗಿ ಮಾಡುವ ಖರ್ಚು ಎಂದೂ ಅವಳಿಗೆ ಸಮಾಧಾನ ತಂದಿರಲಿಲ್ಲ. ಅದಕ್ಕೇ ಬಹಳ ಸಲ ಮಗಳೊಂದಿಗೆ ಹೇಳಿದ್ದಳು ಅಲ್ಲ ಮಗಳೇ ಚಿನ್ನದ ಕತ್ತಿಯೆಂದು ಕತ್ತು ಕುಯ್ದುಕೊಳ್ಳಲಿಕ್ಕೆ ಆಗುತ್ತದೆಯೇ.. ವರ್ಷಕ್ಕೆರಡು ವಾಯಿಲ್ ಸೀರೆ ತಂದು ಕೊಟ್ಟರೆ ಆಯ್ತೇ.. ತಿನ್ನಲಿಕ್ಕುಂಟೇ.. ಉಣಲಿಕ್ಕುಂಟೇ.. ಇಷ್ಟು ವರ್ಷ ಆಯ್ತು. ಒಂದು ತುಂಡು ಚಿನ್ನ..’ ಮಗಳು ಮಧ್ಯದಲ್ಲಿಯೇ ಮಾತನ್ನು ತುಂಡರಿಸುತ್ತ ಅದೆಲ್ಲ ಬೇಡ ಅಮ್ಮ. ನಾನು ಅವರಿಗೆ ನಿಯತ್ತಿನಿಂದಿರುತ್ತೇನೆ ಎಂದು ನಿರ್ಧರಿಸಿಯಾಗಿದೆ. ಅಲ್ಲಿಗೆ ಮುಗಿಯಿತು. ಅವರು ಚಿನ್ನ ಕೊಡಲಿ ಕೊಡದಿರಲಿ.. ಏನು ಕೊಡುತ್ತಾರೋ ಅದೇ ಸಾಕು' ಎಂದಾಗ ಏನು ಹೇಳಿದರೂ ಕೇಳದ ಮಗಳ ಬಗ್ಗೆ ತಲೆ ಚಚ್ಚಿಕೊಳ್ಳುತ್ತಲೇ ಸುಮ್ಮನಾಗಿದ್ದಳು. ಅಂತಹ ಶಾಮಣ್ಣ ಈಗ ಮದುವೆಯ ನಂತರ ಹೊಸ ಮದುಮಗಳ ಕೆನ್ನೆಯ ಮೇಲಿನ ಹಸಿ ಅರಸಿನ ಆರುವ ಮುನ್ನವೇ ಬಂದಿದ್ದಾರೆ.

ಒಂದು ವೇಳೆ ಅಮ್ಮ ಹೇಳಿದಳೆಂದು ಬೇರೆ ಯಾರನ್ನಾದರೂ ಬಿಟ್ಟುಕೊಂಡಿದ್ದರೆ…. ಎಂತಹ ಗತಿಯಾಗುತ್ತಿತ್ತು’ ಎಂದುಕೊಂಡ ಸರಸ್ವತಿಗೆ ಹಾಗೆ ಮಾಡದ ತನ್ನ ನಿಷ್ಠೆಯ ಬಗ್ಗೆ ಹೆಮ್ಮೆಯಾಗಿತ್ತು. ಅದೂ ಹೊರ ಹೋಗುವ ಮುನ್ನ ಅವರು ಹೇಳಿದ ಮಾತು ಸರಸ್ವತಿ, ನಾನು ಎಂದಿಗೂ ನಿನ್ನ ಕೈ ಬಿಡುವುದಿಲ್ಲ' ಎಂದು ಹೇಳಿದ್ದು ಅದೆಷ್ಟೋ ದಿನಗಳ ತನಕ ಅವಳ ಕಿವಿಯಲ್ಲಿ ಮಾರ್ದನಿಗೊಳ್ಳುತ್ತ ಅವಳನ್ನು ಪುಳಕಗೊಳಿಸುತ್ತಿತ್ತು. ಆದರೆ ಶಾಮಣ್ಣನವರಿಗೆ ಕಷ್ಟಕ್ಕೆ ಬಂದದ್ದು ಅವರ ಈ ವ್ಯವಹಾರದ ಸುಳಿವು ಕಮಲಮ್ಮನಿಗೆ ಹತ್ತಿದಾಗ. ಅದರಲ್ಲಿಯೂ ತನ್ನ ಯಜಮಾನಿಕೆಯ ಗತ್ತಿಗೆ ಧಕ್ಕೆ ಬಂತು ಎಂದು ಆಕೆಗೆ ಅನ್ನಿಸಿದಾಗ.

ಹಾಗೆ ನೋಡಿದರೆ ಇಂತಹ ವ್ಯವಹಾರದ ಬಗ್ಗೆ ಆಗಲೇ ಬಹಳಷ್ಟು ಕೇಳಿ ತಿಳಿದಿದ್ದ ಆಕೆಗೆ ಇದೇನೂ ಹೊಸತು ಎನ್ನಿಸಿರಲಿಲ್ಲ. ಅವಳೂರಿನ ಸಾಹುಕಾರರುಗಳು ಊರಿನಲ್ಲೇ ಮೂರು ನಾಲ್ಕು ಸಂಬAಧಗಳನ್ನಿಟ್ಟುಕೊಳ್ಳುವುದರ ಜೊತೆಗೆ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ತೀರ್ಥಳ್ಳಿಯ ಪೇಟೆಯಲ್ಲಿಯೂ ತಮ್ಮ ಯೋಗ್ಯತಾನುಸಾರ ಒಂದೋ ಎರಡೋ ಹೆಂಗಸರನ್ನು ಇಟ್ಟುಕೊಂಡದ್ದು, ಅವರಿಗೆಂದು ಸ್ವಂತ ಮನೆಗಳನ್ನೂ ಕಟ್ಟಿಸಿಕೊಟ್ಟು ವಾರಕ್ಕೋ ಹದಿನೈದು ದಿನಗಳಿಗೋ ಒಮ್ಮೆ ಹೋಗುತ್ತ ಒಂದೆರಡು ದಿನ ಅಲ್ಲೇ ಉಳಿದು ಬರುತ್ತಿದ್ದುದು ಅವಳಿಗೆ ತಿಳಿಯದ ವಿಷಯವೇನಲ್ಲ. ಅಡಿಕೆ ಸೀಸನ್ನಿನಲ್ಲಾದರೆ ಇನ್ನೊಂದೆರಡು ಬಾರಿ ಜಾಸ್ತಿ. ಹಾಗಿರುವಾಗ ತನ್ನ ಗಂಡ ಮಾಡಿದ್ದೇನೂ ವಿಶೇಷವಲ್ಲ ಅನ್ನಿಸಿದರೂ ತನ್ನ ಯಜಮಾನಿಕೆಯ ಅಹಂಗೆ ಪೆಟ್ಟು ಬಿದ್ದದ್ದು ಆಕೆಯನ್ನು ರೊಚ್ಚಿಗೇಳಿಸಿತ್ತು. ಮನೆಯಲ್ಲಿ ಸಿಗಲಾರದ್ದು ಗಂಡನಿಗೆ ಬೇರೆಲ್ಲಿಯೂ ಸಿಗಬಾರದು ಎನ್ನುವುದು ಆಕೆಯ ಹಠ. ಮನೆಯಲ್ಲಿ ಸಿಗಲಿಲ್ಲವೆಂದಾಕ್ಷಣ ಅವ ಹೊರ ಹೋಗಿ ಪಡೆದುಕೊಳ್ಳುವಂತಾದರೆ ತನ್ನ ಯಜಮಾನಿಕೆಗೆ ಬೆಲೆಯೇನು ಬಂತು... ತನ್ನ ಗಂಡನನ್ನು ತಾನೇ ಹಿಡಿತದಲ್ಲಿಟ್ಟುಕೊಳ್ಳಲಿಲ್ಲವೆಂದರೆ.... ಹಾಗೆಯೇ ಒಂದು ಬೆಳಗಿನ ಜಾವ ಸರಸ್ವತಿಯ ಮನೆಯಿಂದ ಬಂದ ಶಾಮಣ್ಣನವರು ಕೈ ಕಾಲು ತೊಳೆದುಕೊಂಡು ಮನೆಯೊಳಗೆ ಕಾಲಿಡುತ್ತಿದ್ದಾಗ ಎದುರಿಸಿದಳು ಕಮಲಮ್ಮ. ರಾತ್ರಿಯೆಲ್ಲ ಎಲ್ಲಿಗೆ ಹೋಗಿತ್ತು ಸವಾರಿ’ ಅಷ್ಟು ಹೊತ್ತಿಗೆ ಮನೆ ಬಾಗಿಲಿನಲ್ಲಿ ಹೆಂಡತಿಯನ್ನು ಮತ್ತು ಅವಳಿಂದ ಅಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರದಿದ್ದ ಶಾಮಣ್ಣ ತಬ್ಬಿಬ್ಬು. ಎಷ್ಟೋ ಸಲ ಹಿಂದೆ ಇಂತಹುದೇ ಪರಿಸ್ಥಿತಿಯಲ್ಲಿ ಅಪ್ಪನೇ ಎದುರಾದದ್ದೂ ಇತ್ತು. ಅಂತಹ ಅಪ್ಪನೇ ಮೀಸೆಯಡಿಯಲ್ಲಿ ನಕ್ಕು ಸುಮ್ಮನಾಗುತ್ತಿದ್ದರೇ ವಿನಃ ಇವನನ್ನು ಏನೂ ಕೇಳುತ್ತಿರಲಿಲ್ಲ. ಅಂತಹುದರಲ್ಲಿ ಇಂದು ನಿನ್ನೆ ಬಂದ ಹೆಂಡತಿ ಒಳ ಹೋಗಲೂ ಬಿಡದೆ ಬಾಗಿಲಿಗೆ ಅಡ್ಡಲಾಗಿ ನಿಂತು ಕೇಳುತ್ತಿದ್ದಾಳೆ. ಶಾಮಣ್ಣನಿಗೆ ಮಾತು ಹೊರಡಲೊಲ್ಲದು. ಇಲ್ಲೇ ಎಲ್ಲೋ ಹೋಗಿದ್ದೆ' ಇಲ್ಲೇ ಎಂದರೆ ಎಲ್ಲಿಗೆ’ ಕಮಲಮ್ಮ ಪಟ್ಟು ಬಿಡಲಿಲ್ಲ. ಶಾಮಣ್ಣ ಉಗುಳು ನುಂಗುತ್ತ ನಿಂತಿದ್ದರು. ಅಷ್ಟರಲ್ಲಿ ಒಳಗಿನಿಂದ ಬಂದ ಅಪ್ಪನೇ ಅವರನ್ನು ಬಚಾವು ಮಾಡಿದ್ದು. `ಅಲ್ಲ ಇದೇನಿದು. ಗಂಡಸರೆಂದ ಮೇಲೆ ಹೊರಗಡೆ ಹತ್ತು ಹಲವು ಕೆಲಸಗಳಿರುತ್ತಾವೆ ಎಲ್ಲೋ ಹೋಗಿರುತ್ತಾನೆ. ಈಗ ಬಂದಿದ್ದಾನೆ. ಅಷ್ಟಕ್ಕೇ ಗಂಡನನ್ನು ಹೀಗೆ ಬಾಗಿಲಿನಲ್ಲಿ ನಿಲ್ಲಿಸಿಕೊಂಡು ಕೇಳುವುದೇ..’ ಕಮಲಮ್ಮ ಆ ಕ್ಷಣದಲ್ಲಿ ಮಾವ ಅಲ್ಲಿಗೆ ಬರುತ್ತಾರೆಂದುಕೊಂಡಿರಲಿಲ್ಲ.

ಈಗ ತಬ್ಬಿಬ್ಬಾಗುವ ಸರದಿ ಅವಳದ್ದು. ಎಷ್ಟು ದೊಡ್ಡಸ್ತಿಕೆಯ ಹೆಮ್ಮೆಯಿದ್ದರೂ ಮಾವನಿಗೆ ಎದುರಾಡುವಷ್ಟು ಧೈರ್ಯ ಅವಳಲ್ಲಿ ಇನ್ನೂ ಬಂದಿರಲಿಲ್ಲ. ಮನೆಯ ಅಂಗಳದಲ್ಲಿ ಕೆಲಸದವರು ಆರಡಿ ದೇಹವನ್ನು ಮೂರಡಿ ಮಾಡಿಕೊಂಡು ಮಾವನೆದುರಿಗೆ ಭಯ ಭಕ್ತಿಯನ್ನು ತೋರಿಸುತ್ತ ನಿಲ್ಲುತ್ತಿದ್ದುದನ್ನ ನೋಡಿದ್ದ ಅವಳಿಗೆ ಘಟ್ಟದ ಮೇಲೆ ಇವರಿಗಿಂತ ಹತ್ತು ಪಾಲು ಶ್ರೀಮಂತನಾಗಿದ್ದ ತನ್ನ ಅಪ್ಪನಿಗಿಂತಲೂ ದೊಡ್ಡವರಾಗಿ ಕಾಣಿಸತೊಡಗಿದ್ದ ಅವರ ಬಗ್ಗೆ ಹೆದರಿಕೆ ತುಂಬಿದ ಗೌರವವಿತ್ತು. ಅಂಥವರ ಪ್ರವೇಶದಿಂದ ಈಗ ಉಂಟಾದ ಗೊಂದಲದಿಂದ ಆಕೆ ಹೊರ ಬರಲು ಪ್ರಯತ್ನಿಸುತ್ತಿದ್ದಾಗಲೇ ನುಸುಳಿಕೊಂಡು ಒಳ ಹೋದರು ಶಾಮಣ್ಣನವರು.

ಅಷ್ಟಾದರೂ ಶಾಮಣ್ಣನ ಚಾಳಿಯೇನೂ ನಿಲ್ಲಲಿಲ್ಲ. ನಿಧಾನವಾಗಿಯಾದರೂ ಈ ಒಂದು ವಿಷಯದ ಮಟ್ಟಿಗೆ ಹೆಂಡತಿಯ ವಿರೋಧವನ್ನು ಜೀರ್ಣಿಸಿಕೊಳ್ಳುವ ತಾಕತ್ತನ್ನೂ ರೂಢಿಸಿಕೊಂಡರು. ಆದರೆ ಕಮಲಮ್ಮ ಮಾತ್ರ ಬಡ ಪೆಟ್ಟಿಗೆ ಸೋಲನ್ನು ಒಪ್ಪಿಕೊಳ್ಳುವ ಜಾಯಮಾನದವಳೇ! ಗಂಡನೊಂದಿಗೆ ತನಗೆ ಬಗೆಹರಿಸಿಕೊಳ್ಳಲು ಸಾಧ್ಯವಾಗದ ವಿಷಯದ ಬಗ್ಗೆ ಯಾರು ಯಾರ ಮೂಲಕವೋ ಸ್ವಲ್ಪ ಸ್ವಲ್ಪವೇ ಮಾಹಿತಿ ಸಂಗ್ರಹಿಸಿದ ಅವಳು ಸರಸ್ವತಿಯನ್ನೇ ವಿಚಾರಿಸಿಕೊಳ್ಳುತ್ತೇನೆ ಎಂದು ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿದ್ದಳು.

|ಇನ್ನು ನಾಳೆಗೆ |

‍ಲೇಖಕರು Admin

May 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: