ಪಿ ಪಿ ಉಪಾಧ್ಯ ಸರಣಿ ಕಥೆ ಆರಂಭ – ಮೂವರು ಮಕ್ಕಳು…

ಪಿ ಪಿ ಉಪಾಧ್ಯ

1

ಅಪ್ಪ ಹೇಳಿದ ಹಾಗೆಯೇ ನಡೆದದ್ದು

ಶಾಮಣ್ಣ ತನ್ನದೇ ಸಂಸಾರ ಪ್ರಾರಂಭಿಸುವಾಗ ಅವರಿಗೆ ಇಪ್ಪತ್ತಾರೋ ಇಪ್ಪತ್ತೇಳೊ. ಅವರ ಅಪ್ಪನೇ ಜಾತಕ ನೋಡಿಸಿ ಕೂಡಿ ಬರುತ್ತದೆ ಎಂದಾದ ಮೇಲೆ ಮಾಡಿಸಿದ ಮದುವೆ. ಅದರಲ್ಲೇನೂ ವಿಶೇಷವಿಲ್ಲ. ಯಾಕೆಂದರೆ ಶಾಮಣ್ಣನ ಬದುಕಿನಲ್ಲಿ ಹೆಚ್ಚಿನದೆಲ್ಲ ಅಪ್ಪ ಹೇಳಿದ ಹಾಗೆಯೇ ನಡೆದದ್ದು. ಅಪ್ಪನದೇ ಮಾತು. ಅಪ್ಪನದೇ ತೀರ್ಮಾನ.

ಶಾಮಣ್ಣ ಹೆಣ್ಣು ನೋಡಿದ್ದೂ ಹಾಗೆಯೇ. ಅಪ್ಪ ಒಂದು ದಿನ ಬೆಳಿಗ್ಗೆ ಎದ್ದವರು ಮಗನನ್ನು ಕರೆದು ಹೇಳಿದ್ದರು ಶಾಮ.. ಒಂದು ಹೆಣ್ಣಿನ ಜಾತಕ ನೋಡಿದ್ದೇವೆ. ಹೊಂದುತ್ತದೆ ಎಂದು ಅಡಿಗರು ಹೇಳಿದ್ದಾರೆ. ನೋಡಿಕೊಂಡು ಬರುವ’. ಏನು ಎತ್ತ ಎಂದು ಕೇಳದ ಶ್ಯಾಮ ಅಪ್ಪನನ್ನು ಹಿಂಬಾಲಿಸಿದ್ದ. ಬಸ್ಸು ಹತ್ತಿ ಬಸ್ಸು ಇಳಿದು ಹೊಳೆ ದಾಟಿ ಘಟ್ಟ ಹತ್ತಿ ತೀರ್ಥಳ್ಳಿಗೆ ಬಂದಾಗಲೇ ಗೊತ್ತಾಗಿದ್ದು ಘಟ್ಟದ ಮೇಲಿನ ಹೆಣ್ಣನ್ನು ಗೊತ್ತು ಮಾಡಲಿದ್ದಾರೆ ಎಂದು. ತೀರ್ಥಹಳ್ಳಿಯ ಆ ಸಾಹುಕಾರರ ಎದುರಿಗೆ ಅಪ್ಪನೊಂದಿಗೆ ಕುಳಿತ ಇವನಿಗೆ ಆಶ್ಚರ್ಯ.

ಬಹುಶಃ ಅಪ್ಪ ಅರ್ಧ ಆಸ್ತಿಯನ್ನು ಸ್ವಯಂ ಇಚ್ಛೆಯಿಂದ ಗೇಣಿದಾರರಿಗೇ ಬಿಟ್ಟುಕೊಡದೇ ಇದ್ದಿದ್ದರೂ ಅವರಿಗೆ ಸರಿ ಸಮನಾಗುತ್ತಿರಲಿಲ್ಲ. ಅಷ್ಟು ಶ್ರೀಮಂತರು ಅವರು. ಅಷ್ಟೊಂದು ಆಳು ಕಾಳುಗಳು. ಜೊತೆಯಲ್ಲಿಯೇ ದೊಡ್ಡಸ್ತಿಕೆಯಲ್ಲಿಯೂ. ಬಾಯಿ ತಪ್ಪಿಯೋ ಎನ್ನುವಂತೆ ಅಪ್ಪ ತಾನು ಗದ್ದೆಗಳನ್ನು ಗೇಣಿ ಮಾಡುತ್ತಿದ್ದವರಿಗೇ ಬಿಟ್ಟದ್ದನ್ನು ಹೇಳಿದರೆ ನಕ್ಕಿದ್ದರು. ಅವರ ದೃಷ್ಟಿಯಲ್ಲಿ ಏನೂ ಪ್ರಚಾರವಿಲ್ಲದೆ ಜಮೀನು ಬಿಟ್ಟು ಕೊಟ್ಟಿದ್ದು ಹೆಡ್ಡತನ. ದುಡ್ಡು ಬ್ಯಾಡಾಂತಿದ್ದರೆ ಹೋಗಲಿ. ಅಂತಹ ದೊಡ್ಡ ದಾನ ಮಾಡಿ ಅದು ಊರಿಗೆಲ್ಲ ತಿಳಿಯಲೂಬಾರದು ಎಂದರೆ ಅದಕ್ಕೆ ಇನ್ನೇನರ್ಥ’ ಎಂದು ತಮ್ಮ ದೊಡ್ಡಸ್ತಿಕೆಯ ಜಂಬದಲ್ಲಿ ಅಪ್ಪನನ್ನು ಹೀಯಾಳಿಸಿ ಹೇಳಿದರೆ ಅಪ್ಪ ಸುಮ್ಮನೇ ನಕ್ಕು ಬಿಟ್ಟಿದ್ದರು.

ಅವರ ಮನೆಯೂ ಹಾಗೆಯೇ. ನೋಡಿಯೇ ದಂಗು ಬಡಿದಿದ್ದ ಹುಡುಗನಾಗಿದ್ದ ಶಾಮಣ್ಣ. ತಮ್ಮೂರಲ್ಲಿ ತಮ್ಮದೇ ದೊಡ್ಡ ಮನೆ. ಆದರೆ ಈ ಮನೆ ಅದರ ನಾಲ್ಕು ಪಾಲಷ್ಟಿದ್ದಿರಬಹುದು. ಒಂದೇ ಒಂದು ಮಾತಿಲ್ಲದೆ ಹುಡಗಿಯನ್ನು ಒಪ್ಪಿದ್ದ. ಅಲ್ಲ ಆ ಮನೆಯ ಗಾತ್ರ ಅವನನ್ನು ಹೆದರಿಸಿ ಒಪ್ಪಿಸಿತ್ತು. ಹಾಗೆ ನೋಡಲು ಹೋದರೆ ಆಗಿನ್ನೂ ಕಮಲ ಆಗಿದ್ದ ಈ ಕಮಲಮ್ಮ ಕಳಪೆಯೆನಿಸದಿದ್ದರೂ ಇವನು ಯಕ್ಷಗಾನದ ಹಾಡುಗಳಲ್ಲಿ ‘ಸುಂದರಾಂಗಿ ಚಲುವೇ…’ ಎನ್ನುವುದನ್ನು ಕೇಳುವಾಗ ಕಲ್ಪಿಸಿಕೊಳ್ಳುತ್ತಿದ್ದಂತಹ ಸುಂದರಾಂಗಿಯೇನೂ ಆಗಿರಲಿಲ್ಲ. ಆದರೂ ಮಲೆನಾಡಿನ ಅಡಿಕೆ ತೋಟದ ನಡುವೆ ಬಿಸಿಲಿಗೆ ಮೈಯೊಡ್ಡದೆ ಬೆಳೆದ ಬಿಳೀ ಚರ್ಮದವಳಾಗಿದ್ದ ಹುಡುಗಿ ಪರವಾಯಿಲ್ಲ ಎನ್ನಿಸಿದ್ದಳು. ಜೊತೆಗೆ ಪ್ರಾಯವೂ ಸೇರಿತ್ತಲ್ಲ. ಅಷ್ಟೇ ಆಗಿದ್ದರೆ ಅಪ್ಪ ಕಣ್ಣು ಬಿಟ್ಟರೇ ಹೆದರುತ್ತಿದ್ದ ಶಾಮಣ್ಣ ಒಪ್ಪುತ್ತಿದ್ದನೋ ಇಲ್ಲವೋ. ಅಲ್ಲಿನ ಮನೆಯ ಗಾತ್ರದ ಜೊತೆಗೆ ಆ ಮನೆಯವರ ಗತ್ತು ಎರಡೂ ಸೇರಿ ಶಾಮಣ್ಣನನ್ನು ವಶೀಕರಿಸಿ ಒಪ್ಪಿಸಿದ್ದುವು.

ಮತ್ತೊಂದು ತಿಂಗಳಲ್ಲಿ ನಡೆದ ಮದುವೆ ಅದೇ ತೀರ್ಥ ಹಳ್ಳಿಯಿಂದ ಇಪ್ಪತ್ತು ಮೈಲು ದೂರವಿದ್ದ ಅಡವೀ ಹಳ್ಳಿಯ ತೋಟದ ಮನೆಯಲ್ಲಿ. ಎಂಬತ್ತು ಮೈಲಿ ದೂರವನ್ನು ಎಂಟು ಗಂಟೆಗಳ ಕಾಲ ನಾಲ್ಕು ಬಸ್ಸು ಬದಲಾಯಿಸಿ ಜೊತೆಯಲ್ಲಿ ಕರೆದುಕೊಂಡಿದ್ದ ಊರಿನ ಇಪ್ಪತ್ತೈದು ಜನರೊಂದಿಗೆ ತೀರ್ಥಹಳ್ಳಿಯ ಪೇಟೆಯಲ್ಲಿಳಿದು ಮುಂದೆ ಅಲ್ಲಿಯೇ ಕಾಯುತ್ತಿದ್ದ ಅವರದ್ದೇ ಜೀಪಿನಲ್ಲಿ ಡ್ರೈವರು ಸಾಕೆನ್ನುತ್ತಿದ್ದರೂ ನಾವು ಎಜಸ್ಟ್ ಮಾಡಿಕೊಳ್ಳುತ್ತೇವೆ ಎನ್ನುತ್ತ ಆರು ಜನ ಕೂರಲಿಕ್ಕಾಗುವಲ್ಲಿ ಹನ್ನೆರಡು ಜನ ಕುಳಿತು ಎರಡೇ ಟ್ರಿಪ್ಪಿಗೆ ಆ ತೋಟದ ಮನೆಗೆ ಹೋಗಿದ್ದರು. ಮಾರನೆಯ ದಿನದ ಮದುವೆಗೆ ಮುನ್ನಾದಿನ ಸಂಜೆ ಹೋದ ಎಲ್ಲರೂ ಆ ಮನೆಯನ್ನು ನೋಡಿ ದಂಗಾಗಿದ್ದರು. ತೀರ್ಥಹಳ್ಳಿಯಲ್ಲಿ ನೋಡಿದ್ದ ಮನೆಯ ಮೂರು ಪಾಲು ದೊಡ್ಡದು. ನೂರಿನ್ನೂರು ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಝಗ ಝಗಿಸುತ್ತಿದ್ದ ಮದುವೆ ಮನೆ ಮತ್ತು ಅದರ ಶೃಂಗಾರ ನೋಡಿ ಶಾಮಣ್ಣ ಪೂರ್ತಿಯಾಗಿ ಸೋತಿದ್ದ. ತಮ್ಮ ಆಸ್ತಿ, ತಮ್ಮ ಶ್ರೀಮಂತಿಕೆ ಅದರೆದುರಿಗೆ ಏನೂ ಅಲ್ಲ ಅನ್ನಿಸಿತ್ತು.

ಜೊತೆಗೆ ಹೋದ ಪ್ರತಿಯೊಬ್ಬರಿಗೂ ಅಷ್ಟೆ. ಊರಲ್ಲಿ ತಮ್ಮ ಚಿಕ್ಕ ಚಿಕ್ಕ ಮನೆಗಳು ಈ ಮನೆಯೆದುರಿಗೆ ಕೋಳಿ ಗೂಡುಗಳಂತೆ ಕಾಣಿಸಬಹುದು ಅನ್ನಿಸಿತ್ತು. ಅಲ್ಲಿನ ಉಪಚಾರವೋ. ಅವರು ಯಾರೂ ಕೇಳಿಯೂ ಇರದಂತಹುದು. ಇಕ್ಕಟ್ಟಾಗಿ ಕುಳಿತಿದ್ದ ಜೀಪಿನಿಂದ ಇಳಿದೊಡನೆಯೇ ಕೈ ಕಾಲು ತೊಳೆಯಿರಿ’ ಎಂದು ತೀರ ವಿನೀತರಾಗಿ ಹೇಳಿದ ಹದ ಮಾಡಿದ ಬಿಸಿ ನೀರನ್ನು ರೆಡಿ ಮಾಡಿಟ್ಟು ಕಾಯುತ್ತಿದ್ದ ಜನ. ಕಾಲು ತೊಳೆದುಕೊಂಡು ಬರುತ್ತಲೇ ಬಿಸಿ ಕಾಫಿ. ತಿಂಡಿ. ಮತ್ತೆ ರಾತ್ರಿ ಪ್ರಶಸ್ತವಾದ ಭೋಜನ. ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿ ಹಾಸಿ ರೆಡಿ ಮಾಡಿಟ್ಟ ಹಾಸಿಗೆಯಲ್ಲಿ ಮಲಗುವ ಮುನ್ನ ಬಿಸಿ ಬಿಸಿ ಕಷಾಯ.

ಯಕ್ಷಗಾನದ ಪ್ರಸಂಗಗಳಲ್ಲಿ ರಾಜರುಗಳು ಹೇಳುತ್ತಿದ್ದಂತಹ ಹಂಸತೂಲಿಕಾ ತಲ್ಪ. ಹಾಸಿದರೆ ಹೊದೆಯಲಿಕ್ಕೆ ಹೊದೆದರೆ ಹಾಸಲಿಕ್ಕೆ ಇಲ್ಲ ಎನ್ನುವಂತಹ ಮನೆಯಲ್ಲಿ ಚಾಪೆಯ ಅಣೆತಕ್ಕೆ ಮೈಯ್ಯೊಡ್ಡಿ ಮಲಗುತ್ತಿದ್ದ ಮಂದಿಗೆ ಇದು ಸ್ವರ್ಗ ಸಮಾನವಾಗಿ ಕಾಣಿಸಿತ್ತು. ಬೆಳಿಗ್ಗೆಯೆದ್ದೊಡನೆ ಪುನಃ ಬಿಸಿ ನೀರ ಸೇವೆ. ಬಿಸಿ ಬಿಸಿ ಕಾಫಿ. ಸ್ನಾನದ ನಂತರ ತಿಂಡಿ. ಬೆಳಿಗ್ಗಿನ ತಿಂಡಿಯೇ ಇಷ್ಟು ಭರ್ಜರಿಯಾಗಿದೆಯೆಂದರೆ ಮಧ್ಯಾಹ್ನ ಮದುವೆಯ ಊಟ ಹೇಗಿರಲಿಕ್ಕಿಲ್ಲ ಎಂದು ಮಂಡಿಗೆ ತಿನ್ನುವಷ್ಟರ ಮಟ್ಟಿಗೆ. ಅಂತೂ ಎರಡು ದಿನಗಳ ಭರ್ಜರಿ ಮದುವೆ ಮುಗಿದು ಹೊರಡುವಾಗ ಪ್ರತಿಯೊಬ್ಬರ ಬಾಯಿಗೂ ಬೀಗ. ಹೊಗಳಲು ಶಬ್ದವೇ ಸಿಗುತ್ತಿಲ್ಲ. ಹಾಗೆ ಹೊರಟು ನಿಂತ ಪ್ರತಿಯೊಬ್ಬರಿಗೂ ಒಂದೊಂದು ತುಂಬಿದ ಚೀಲ. ಕುತೂಹಲ ತಡೆಯಲಾರದೆ ಕೈ ಹಾಕಿ ಒಳಗೊಳಗೇ ತಡವಿದವರು ಅಲ್ಲ ಮಾರಾಯ.. ಈ ಸಾಹುಕಾರರಿಗೆ ಕೊಟ್ಟಷ್ಟೂ ಸಮಾಧಾನವಿಲ್ಲವಲ್ಲ. ಈ ತರ ರಾಜೋಪಚಾರ.

ಜೊತೆಗೆ ಇದೇನು ಚೀಲದಲ್ಲಿ ಕಟ್ಟಿ ಕೊಟ್ಟದ್ದು. ಮದುವೆಯ ಭಕ್ಷ್ಯಗಳ ಜೊತೆಗೆ ಅದೇನು ಅಡಿಕೆ, ಏಲಕ್ಕಿಯೂ ಇದ್ದ ಹಾಗಿದೆ. ಧರ್ಮರಾಯರಯ್ಯ ಶಾಮನ ಮಾವ..’ ಆಗಲೇ ಗಂಡನೊಂದಿಗೆ ಹೊರಟ ಕಮಲಮ್ಮನ ಕಿವಿಯ ಮೇಲೆ ಈ ಮಾತುಗಳೆಲ್ಲ ಬಿದ್ದಿದ್ದವು. ತನ್ನ ಗಂಡ, ಅವರಪ್ಪ ಅಮ್ಮ ಮತ್ತು ಅವರ ಊರಿನವರ ಬಗ್ಗೆ ಅಭಿಪ್ರಾಯ ಮೂಡಲು ಸುರುವಾಗಿತ್ತು. ಮತ್ತು ಊರು ಮುಟ್ಟಿ ಗಂಡನ ಮನೆಯನ್ನು ಸೇರಿದಾಗ ನಿಚ್ಚಳವಾಗಿ ಅವಳ ಮನದಲ್ಲಿ ಮೂಡಿದ್ದೆಂದರೆ ನಮ್ಮಪ್ಪನ ಸಮಕ್ಕೆ ಬರಲು ಇವರಿಗೆ ಈ ಜನ್ಮದಲ್ಲಂತೂ ಸಾಧ್ಯವಿಲ್ಲ. ಆಗಲೇ ನಿರ್ಧಾರ ಮೂಡಿದ್ದು ಕೆಲವೇ ದಿನಗಳಲ್ಲಿ ಗಟ್ಟಿಯಾಗಿತ್ತು. ತಾನು ಶಾಮಣ್ಣನ ಹೃದಯಕ್ಕೆ ಮಾತ್ರವಲ್ಲ ಈ ಮನೆಯ ವ್ಯವಹಾರಕ್ಕೆಲ್ಲ ಒಡತಿಯಾಗುವ ಅರ್ಹತೆಯುಳ್ಳವಳು ಎಂದು.

ಅದೆಲ್ಲ ಏನೇ ಇದ್ದರೂ ತವರಿನ ದೊಡ್ಡಸ್ತಿಕೆಯನ್ನು ಧಾರಾಳವಾಗಿಯೇ ಹೊತ್ತುಕೊಂಡು ಬಂದ ಕಮಲಮ್ಮ ಮಾವ ಇದ್ದಷ್ಟು ದಿನವೂ ಇನ್ನೂ ಹೊಸತಷ್ಟೇ ಎನ್ನುವ ದಾಕ್ಷಿಣ್ಯಕ್ಕೊಳಗಾಗಿಯೋ ಅಥವಾ ಹಿರಿಯರೆದುರಿಗೆ ತನ್ನ ಬೇಳೆ ಬೇಯಲಾರದು ಎನ್ನುವ ಹೆದರಿಕೆಯಿಂದಲೋ ಸುಮ್ಮನಿದ್ದವಳು ಮಾವ ಹೋದ ಮಾರನೆಯ ದಿನವೇ ಸುರು ಮಾಡಿದ್ದಳು. ಸತ್ತ ಅಪ್ಪನ ಹೆಣ ಸುಟ್ಟು ಬಂದವನನ್ನೇ ತರಾಟೆಗೆ ತೆಗೆದುಕೊಂಡಿದ್ದಳು ಬಂದ ಕೂಡಲೇ ಸ್ನಾನ ಯಾಕೆ ಮಾಡಲಿಲ್ಲ’ ಎಂದು. ಅದು ಪ್ರಾರಂಭ ಅಷ್ಟೆ. ಅಲ್ಲಿಯ ವರೆಗೆ ಹೆದರಿಕೊಂಡು ಬೆಣ್ಣೆ ತಿಂದ ಬೆಕ್ಕಿನಂತೆ ಇರುತ್ತಿದ್ದ ಕಮಲಮ್ಮ ಹಾಗೆ ತನ್ನ ದರ್ಪ ತೋರಿಸಲು ಪ್ರಾರಂಭಿಸಿದವಳು ಅದನ್ನೇ ಚಾ ಚೂ ತಪ್ಪದೆ ನಡೆಸಿಕೊಂಡು ಬಂದಿದ್ದಳು. ಹೊರಗೆಲ್ಲ ಹುಲಿಯಂತೆ ಹೂಂಕರಿಸುವ ಶಾಮಣ್ಣ ಮನೆಯಲ್ಲಿ ತೀರಾ ಸಾಧು. ಹಾಗಿಟ್ಟುಕೊಂಡಿದ್ದಳು ಆಕೆ.

ಮೊದ ಮೊದಲು ಅವಳು ದರ್ಪ ತೋರಿಸಿದಾಗಲೆಲ್ಲ ಕಿರಿಕಿರಿಯೆನಿಸಿ ಗಾಯಗೊಂಡ ಹುಲಿಯಂತೆ ಗುರುಗುಟ್ಟಲು ನೋಡಿದ್ದರು ಶಾಮಣ್ಣ. ಆದರೆ ಯಾವಾಗ ಅವರ ಸಿಟ್ಟಿಗೆ ಕ್ಯಾರೇ ಮಾಡದೆ ನಮ್ಮಪ್ಪನ ಮನೆಯಲ್ಲಿ ಆಳುಗಳಿಗೆ ಮಾಡಿ ಹಾಕುವ ಊಟಕ್ಕೇ ದಿನಕ್ಕೆ ನಾಲ್ಕು ತೆಂಗಿನ ಕಾಯಿ ಒಡೆಯುತ್ತೇವೆ’ ಎನ್ನುತ್ತಲೋ `ಹಬ್ಬಕ್ಕೆ ನಮ್ಮಪ್ಪನ ಮನೆಯಲ್ಲಿ ತೀರ್ಥಹಳ್ಳಿಯ ಪೇಟೆಯಿಂದ ತರುವ ಬಟ್ಟೆಯ ಗಂಟುಗಳನ್ನು ಇಡಲು ನಮ್ಮ ಈ ಮಲಗುವ ಕೋಣೆಯೇ ಸಾಕಾಗದು’ ಎಂದು ಕೊಚ್ಚಿಕೊಳ್ಳುತ್ತಲೋ ಗಂಡನ ದನಿ ಗಂಟಲಿನಿಂದ ಹೊರಗೆ ಬರದಂತೆ ಮಾಡಲಿಕ್ಕೆ ಪ್ರಾರಂಭಿಸಿದಾಗ ಶಾಮಣ್ಣನೂ ಅಭ್ಯಾಸ ಮಾಡಿಕೊಂಡಿದ್ದರು. ಜೀವನವಿಡೀ ಏಗಬೇಕಿದ್ದ ಅವಳೊಂದಿಗೆ ಜಗಳಾಡುವುದು ತರವಲ್ಲ ಎನ್ನುವ ಅವರ ವಿವೇಕ. ಜೊತೆಗೆ ಮನೆಯಲ್ಲಿ ಶಾಂತಿ ನೆಲೆಸಬೇಕೆನ್ನುವ ಅವರ ತೀವ್ರವಾದ ಬಯಕೆ ಎರಡೂ ಸೇರಿ ಆಕೆಯ ದರ್ಪವನ್ನು ಅರಗಿಸಿಕೊಳ್ಳುವಂತೆ ಮಾಡಿದ್ದುವು.

ಜೊತೆಗೇ ತಮ್ಮ ಮನೆಯ ಅಡಿಗೆಯವರಿಂದ ಕಲಿತದ್ದೆಂದು ಹೇಳಿ ಇಲ್ಲಿನ ಅಡಿಗೆಯ ರಂಗಮ್ಮನನ್ನು ದೂರ ನಿಲ್ಲಿಸಿ ಕೆಲವೊಮ್ಮೆ ಕಮಲಮ್ಮ ತಾನೇ ಕೈಯ್ಯಾರ ಧಂಡಿಯಾಗಿ ತುಪ್ಪ ಬಳಸಿ ಮಾಡುತ್ತಿದ್ದ ಆ ಮೈಸೂರು ಪಾಕು ಮತ್ತು ಕೇಸರೀ ಭಾತುಗಳ ಅಡಿಯಲ್ಲಿ ಅವರ ರೋಷವೆಲ್ಲ ಹುದುಗಿ ಹೋಗುತ್ತಿದ್ದುದೂ ಹೌದು. ಹಾಗಾಗಿಯೇ ಇವತ್ತೂ ಹೊರಗೆ ಜನ ಮಾರು ದೂರ ಹಾರಿ ದಾರಿ ಬಿಡುತ್ತಿದ್ದ ಶಾಮಣ್ಣ ಮನೆಯೊಳಗೆ ಹೆಂಡತಿ ಬಾಯಿ ತೆರೆದರೆ ನಡುಗುವ ಗಂಡನಾಗಿದ್ದರು. ಅವರ ಆ ತೆರನ ವರ್ತನೆಗೆ ಇನ್ನೊಂದು ದೊಡ್ಡ ಕಾರಣ ಅವರನ್ನು ಒಳಗಿನಿಂದಲೇ ಕೊರೆಯುತ್ತಿದ್ದ ಅಪರಾಧೀ ಭಾವ.

| ಇನ್ನು ನಾಳೆಗೆ ।

‍ಲೇಖಕರು Admin

May 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: