ಪಿ ಪಿ ಉಪಾಧ್ಯ ಅಂಕಣ- ಶಿಸ್ತಿನ ಸಿಪಾಯಿಗಳ ಫುಟ್…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

16

ಶಿಸ್ತಿನ ಸಿಪಾಯಿಗಳ ಫುಟ್‍ಬಾಲ್ ಪಂದ್ಯ

ಇಂಗ್ಲೆಂಡಿನ ಜನ ಶಿಸ್ತಿಗೆ ಹೆಸರಾದವರು. ಅದೂ ಬಿಳಿಯರಲ್ಲದವರೊಂದಿಗೆ ವ್ಯವಹರಿಸುವಾಗಲಂತೂ ಅವರು ಶಿಸ್ತಿನ ಸಿಪಾಯಿಗಳೇ ಆಗಿರುತ್ತಾರೆ. ತಮ್ಮ ಮೇಲ್ಮೆಯನ್ನು ತೋರಿಸಬೇಕಲ್ಲ. ಪಾರ್ಟಿಗಳಿಗೆ ಆಹ್ವಾನಿಸುವಾಗ ಆಹ್ವಾನ ಪತ್ರದಲ್ಲಿ ತಪ್ಪದೇ ನಮೂದಿಸುತ್ತಾರೆ – ಯಾವ ತೆರನ ಡ್ರೆಸ್ಸಿನಲ್ಲಿ ಬರಬೇಕು ಎಂದು. ಅದೇ ತೆರನ ಡ್ರೆಸ್ಸಿನಲ್ಲಿ ಹೋದರೆ ಮಾತ್ರ ಪ್ರವೇಶ. ದೊಡ್ಡ ದೊಡ್ಡ ಪಾರ್ಟಿಗಳಿಗೆ ಹೋಗುವಾಗ ಕಂದು ಬಣ್ಣದ ಶೂ ಧರಿಸುವುದು ಅಷ್ಟೊಂದು ಶಿಸ್ತು ಅನ್ನಿಸುವುದಿಲ್ಲ. ಆಫೀಸಿಗೆ ಬರುವಾಗ ಜೀನ್ಸ್, ಟೀ ಶರ್ಟ್‍ಗಳನ್ನು ತೊಡುವುದನ್ನು ಜನ ಅಷ್ಟು ಮೆಚ್ಚುವುದಿಲ್ಲ. ಅದೊಂದು ತೆರನ ನಿರ್ಲಕ್ಷತೆಯ ಸಂಕೇತವೆನಿಸುತ್ತದೆ. ಕೆಲಸದ ಪರಿಸರದಲ್ಲಿ ಅಂತಹ ನಿರ್ಲಕ್ಷತೆಯನ್ನು ಎಂದಿಗೂ ಸಹಿಸರು ಅವರು.

ಪಬ್ಲಿಕ್ ಸ್ಥಳದಲ್ಲಿ ಉಗುಳುವುದು, ನಾಲ್ಕು ಜನರ ನಡುವೆ ತೇಗುವುದು, ತೀರ ಗಟ್ಟಿಯಾಗಿ ಕೆಮ್ಮುವುದು ಎಲ್ಲ ವಜ್ರ್ಯ. ಊಟ ಮಾಡುವಾಗಂತೂ ಕಚಕ್ ಪಚಕ್ ಅಂತ ಅಗಿಯುತ್ತ ಬಾಯಿಯನ್ನು ದೊಡ್ಡದಾಗಿ ತೆರೆದು ತಿನ್ನುವುದನ್ನೆಂದಿಗೂ ನಿಮ್ಮ ಪಕ್ಕದ ಟೇಬಲ್ಲಿನ ಬಿಳಿಯ ಸಹಿಸಲಾರ. ಹಾಗೇನಾದರೂ ನೀವು ಮಾಡಿದರೆ ನಿಮ್ಮ ಮುಖದ ಮೇಲೆ ಹೊಡೆದಂತೆ ನಿಮ್ಮೆದುರಿನಿಂದ ಎದ್ದು ಇನ್ನೊಂದು ಟೇಬಲ್ಲಿಗೆ ಹೋದಾನು. ಇನ್ನೊಬ್ಬರೊಡನೆ ಮಾತನಾಡುತ್ತಿರುವಾಗ ನೀವು ಕೈ ಗಡಿಯಾರದತ್ತ ನೋಡುವುದಂತೂ ಅಕ್ಷಮ್ಯ ಅಪರಾಧ. ನಮಗೆ ನಿಮಗೆ ಕರಕರೆಯಾಗುವಷ್ಟು ಸಲ ಥ್ಯಾಂಕ್ಸ್ ಹೇಳಿಯಾರು. ಮತ್ತು ಅಷ್ಟೇ ಸಲ ನಿಮ್ಮಿಂದ ಅದನ್ನು ನಿರೀಕ್ಷಿಸುತ್ತಾರೆ.

ಇಂಡಿಯಾದಿಂದ ಬಂದಿದ್ದ ನಮ್ಮ ಗೆಳೆಯರೊಬ್ಬರು ತಾತ್ಕಾಲಿಕವಾಗಿ ಒಂದು ಮನೆಯ ಮಹಡಿಯಲ್ಲಿ ತಂಗಿದ್ದರು. ಕೆಳಗಡೆ ಭಾಗದಲ್ಲಿ ಮನೆಯ ಒಡತಿ. ಮುದುಕಿ ಮತ್ತು ಒಂಟಿ ಹೆಂಗಸು. ಒಮ್ಮೆ ಆಕೆ ಮನೆಯಲ್ಲಿಲ್ಲದಾಗ ಆಕೆಯ ಸಂಬಂಧಿಕಳೊಬ್ಬಳು ನನ್ನ ಸ್ನೇಹಿತರೊಂದಿಗೆ ಆ ಮುದುಕಿಗೆ ತಲಪಿಸುವಂತೆ ಹೇಳಿ ಕೊಟ್ಟು ಹೋದ ಚೀಲವನ್ನು ಸ್ವಲ್ಪ ಹೊತ್ತಿನ ನಂತರ ಬಂದ ಆ ಮುದುಕಿ ಸ್ವೀಕರಿಸಿದ್ದು `ಹೀಗೆ ನನ್ನ ಪರವಾಗಿ ಚೀಲವನ್ನು ತೆಗೆದಿಟ್ಟುಕೊಂಡದ್ದಕ್ಕೆ ಆಕೆ ನಿಮಗೆ ಥ್ಯಾಂಕ್ಸ್ ಹೇಳಿದಳು ತಾನೇ’ ಎನ್ನುವ ಪ್ರಶ್ನೆಗೆ ತೃಪ್ತಿಕರ ಉತ್ತರವನ್ನು ಪಡೆದುಕೊಂಡಮೇಲೆಯೇ. ದಾರಿಯ ಮೇಲೆ ತಿರುಗುವಾಗ ಎದುರಿನವನಿಗೆ ದಾರಿ ಬಿಟ್ಟು ಸರಿಯಿರಿ. `ಥ್ಯಾಂಕ್ಸ್’. ಅಂಗಡಿಯಿಂದ ವ್ಯಾಪಾರ ಮಾಡಿ ಹೊರಬರುವಾಗ ಅಲ್ಲಿನ ಸ್ವಯಂಚಾಲಿತ ಬಾಗಿಲನ್ನು ಬೇರೊಬ್ಬರಿಗೆ ಅನುವು ಮಾಡಿಕೊಡಲು ಸ್ವಲ್ಪ ಹೊತ್ತು ಹಿಡಿದು ನಿಲ್ಲಿ- ಥ್ಯಾಂಕ್ಸ್. ಕೊನೆಗೆ ರಸ್ತೆಯಲ್ಲಿ ಇನ್ನೊಬ್ಬ ಕಾರಿನವನಿಗೆ ಮುಂದೆ ಹೋಗಲು ಬಿಡಿ. ಅದಕ್ಕೂ ಥ್ಯಾಂಕ್ಸ್.

ವಾಹನ ಚಲಿಸುವಾಗ ರಸ್ತೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಎಷ್ಟು ಕಷ್ಟವಾದರೂ ನಿಯಮವನ್ನು ಮೀರುವುದಿಲ್ಲ. ಎಷ್ಟೇ ಅವಸರದಲ್ಲಿದ್ದರೂ ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲಾರರು. ಸಹ ಚಾಲಕನಿಗೆ ಅನಾನುಕೂಲತೆಯನ್ನುಂಟು ಮಾಡುವ ಯಾವ ಚಲನೆಯನ್ನೂ ಮಾಡರು. ಹಾಗೆಯೇ ಇನ್ನೊಬ್ಬರ ಹಕ್ಕನ್ನು ಗೌರವಿಸುವಷ್ಟೇ ತೀವ್ರವಾಗಿ ತಮ್ಮ ಹಕ್ಕನ್ನು ಕಾಯ್ದುಕೊಳ್ಳಲೂ ಅಷ್ಟೇ ಹಠದಿಂದ ಪ್ರಯತ್ನಿಸುತ್ತಾರೆ. ಆ ದೇಶದಲ್ಲಿ ವಾಹನವೆಲ್ಲಿಯಾದರೂ ರಸ್ತೆ ನಿಯಮವನ್ನು ಉಲ್ಲಂಘಿಸಿ ಓಡುತ್ತಿದೆಯೆಂದಾದರೆ ಖಂಡಿತವಾಗಿ ಹೇಳಬಹುದು ಅದು ಬಿಳಿಯನ ಕಾರು ಅಲ್ಲವೆಂದು. ತೀರ ರಭಸದಿಂದ ಓಡುತ್ತಿದ್ದರೆ ಅದು ನೀಗ್ರೋನದ್ದಿರುತ್ತದೆ ( ಕ್ಷಮಿಸಿ, ಅಲ್ಲಿ ನೀಗ್ರೋ ಎನ್ನುವ ಪದವನ್ನು ಬಳಸುವ ಹಾಗಿಲ್ಲ. ಬದಲಿಗೆ ಬ್ಲ್ಯಾಕ್ ಆಫ್ರಿಕನ್ ಎನ್ನಬೇಕು.) ಹೆದರುತ್ತ ಹೆದರುತ್ತ ನಿಯಮಗಳ ಪರಿವೆಯಿಲ್ಲದೆ ಚಲಾಯಿಸುತ್ತಿದ್ದರೆ ಅದು ಒಬ್ಬ ಏಷಿಯನ್ನನದಿರುತ್ತದೆ. ಅದರಲ್ಲೂ ಇಂಡಿಯನ್ನರೇ ಜಾಸ್ತಿ.

ಅಲ್ಲಿನ ಸಮಾಜದಲ್ಲಿ ಮೂರು ಗುಂಪುಗಳನ್ನು ಗುರುತಿಸುತ್ತಾರೆ. ಒಂದು ಗುಂಪು ಬಿಳಿಯರದ್ದು. ಅವರು ಯೂರೋಪಿನ ಯಾವ ಭಾಗದವರೇ ಆಗಿರಲಿ ಬಿಳಿಯ ಚರ್ಮದವರಿದ್ದರೆ ಸಾಕು. ಅವರೊಳಗಿನ ಭೇದ ಎಷ್ಟೇ ಇದ್ದರೂ ಹೊರಗಿನ ಪ್ರಪಂಚಕ್ಕೆ ತೋರಿಸಿಕೊಳ್ಳಲಿಕ್ಕೆ ಅವರೆಲ್ಲ ಒಂದು. ಎರಡನೆಯ ಗುಂಪು ಸ್ವಭಾವತಃ ಬಂಡುಕೋರ ಪ್ರವರ್ತಿಯ ಕಪ್ಪು ಆಫ್ರಿಕನ್ನರು. ಮೂರನೆಯ ಗುಂಪು ಏಷಿಯನ್ನರು. ಸ್ಥಳೀಯರಾದ ಬಿಳಿಯರು ಕಪ್ಪು ಆಫ್ರಿಕನರ ದೈಹಿಕ ಶಕ್ತಿಗೆ ಮತ್ತು ಅವರ ದಾಳಿಯ ಪ್ರವರ್ತಿಗೆ ಹೆದರುತ್ತಾರೆ. ಆದರೂ ಅವರು ಹೆಚ್ಚು ಹೆದರುವುದು ಬೆಳೆಯುತ್ತಿರುವ ಏಷಿಯನರ ಜನಸಂಖ್ಯೆಗೆ.

ಕಳೆದ ಸುಮಾರು ಹದಿನೈದು ವರ್ಷಗಳಿಂದ ಒಂದೇ ಮಟ್ಟದಲ್ಲಿ ನಿಂತಿದ್ದ ಆ ದೇಶದ ಜನ ಸಂಖ್ಯೆ ಈಗ ಒಂದೇ ಸಮನೆ ಏರುತ್ತಿರುವುದು ಏಷಿಯನರಿಂದಾಗಿಯೇ ಎನ್ನುವುದು ಅವರಲ್ಲಿ ಘಾಬರಿ ಹುಟ್ಟಿಸುತ್ತಿದೆ. ಅದೂ ಬ್ರಾಡ್‍ಫರ್ಡ್, ಲ್ಯೂಟನ್, ಬ್ರಿಸ್ಟಾಲ್‍ನಂತಹ ಊರುಗಳಲ್ಲಿ ಏಶಿಯನರದ್ದೇ ಕೋಟೆ ನಿರ್ಮಾಣವಾಗುತ್ತಿದೆಯೆಂದೆನಿಸಿ ತೀರಾ ಗಡಿಬಿಡಿಗೊಳ್ಳುತ್ತಿದ್ದಾರೆ. ವೆಂಬ್ಲೆ, ಸೌತ್ ಹಾಲ್‍ನಂತಹ ಪ್ರದೇಶಗಳನ್ನು ಪ್ರವೇಶಿಸಲು ಸ್ವತಹ ಬಿಳಿಯರೇ ಪಾಸ್ ಫೋರ್ಟ್ ಪಡೆದುಕೊಳ್ಳಬೇಕು ಎನ್ನುವ ಮಾತು ತಮಾಷೆಯದಾಗಿ ಕಂಡರೂ ಅದರಲ್ಲಿ ಹುರುಳಿಲ್ಲದಿಲ್ಲ. ಇಲ್ಲಿ ಶ್ರೀಲಂಕಾದವರು. ಇಂಡಿಯನರು, ಪಾಕಿಸ್ತಾನದವರು ಮತ್ತು ಬಾಂಗ್ಲಾ ದೇಶದವರು ಎನ್ನುವ ಅಂತರವನ್ನು ಗುರುತಿಸಲಾರರು. ಅವರ ಮಟ್ಟಿಗೆ ಎಲ್ಲರೂ ಬ್ರೌನ್ ಏಶಿಯನ್ನರು.

ಅದು ಬೇರೆ ಎಪ್ಪತ್ತರ ದಶಕದ ಆದಿ ಭಾಗದಲ್ಲಿ ಇದಿ ಅಮೀನನ ದಬ್ಬಾಳಿಕೆಗೆ ಒಳಗಾದ ಉಗಾಂಡಾದಲ್ಲಿದ್ದ ಗುಜರಾತಿ ಭಾರತೀಯರು ಉಟ್ಟ ಬಟ್ಟೆಯಲ್ಲಿಯೇ ದೇಶ ಬಿಟ್ಟು ಬಂದವರು ಆರ್ಥಿಕವಾಗಿ ಪ್ರಬಲರಾಗುತ್ತಿರುವುದು ಸ್ಥಳೀಯರಿಗೆ ನುಂಗಲಾರದ ತುತ್ತು. ಇದಿ ಅಮೀನ ದೇಶ ಬಿಟ್ಟೋಡಿಸಿದಾಗ ಆ ಗುಜರಾತಿಗಳಿಗಿದ್ದ ಆಯ್ಕೆ ಒಂದೋ ಭಾರತಕ್ಕೆ ಮರಳುವುದು ಅಥವಾ ತಮ್ಮ ಹಕ್ಕಾದ ಇಂಗ್ಲೆಂಡಿಗೆ ಹೋಗುವುದು. ಸ್ವಭಾವತಹ ಸಾಹಸಿಗಳಾಗಿದ್ದ ಗುಜರಾತಿಗಳು ಇಂಗ್ಲೆಂಡನ್ನೇ ಆಯ್ದುಕೊಂಡಿದ್ದರು.

ಹೀತ್ರೋ ವಿಮಾನ ನಿಲ್ದಾಣದಲ್ಲಿ ಉಟ್ಟ ಬಟ್ಟೆಯಲ್ಲಿ ಬಂದಿಳಿದ ಅವರಿಗೆ ಅಂತಹ ಸ್ವಾಗತವೇನೂ ಕಾದಿರಲಿಲ್ಲ. ಅನಿವಾರ್ಯತೆಯಿಂದಾಗಿ ಬರಮಾಡಿಕೊಂಡ ಆ ದೇಶ ಅವರ ಬಗ್ಗೆ ಉದಾರವಾಗಿ ವರ್ತಿಸಲೂ ಇಲ್ಲ. ಆ ದಿನಗಳ ಕಷ್ಟ, ಆ ಚಳಿಯಲ್ಲಿ ಗುಂಪು ಗುಂಪಾಗಿ ಸರಕಾರ ಒದಗಿಸಿದ ತಾತ್ಕಾಲಿಕ ಆಶ್ರಯಗಳಲ್ಲಿ ಬದುಕಿದ್ದು. ಮುಂದೆ ತಮ್ಮದೇ ಆದ ಬದುಕನ್ನು ಅರಸುತ್ತ ದೇಶದ ಉದ್ದಗಲಕ್ಕೆ ಸಂಚರಿಸುತ್ತ ಮೊದ ಮೊದಲು ಉಣ್ಣುವುದಕ್ಕಾಗಿ ಉಡುವುದಕ್ಕಾಗಿ ಸ್ಥಳೀಯರು ತುಚ್ಛೀಕರಿಸಿಬಿಟ್ಟ ಕೆಲಸಗಳನ್ನು ಮಾಡಿದ್ದು ಮತ್ತು ಕ್ರಮೇಣ ಅದೇ ಕೆಲಸಕ್ಕೆ ಮರ್ಯಾದೆಯನ್ನು ತಂದುಕೊಟ್ಟಿದ್ದನ್ನು ವಯಸ್ಸಾದ ಗುಜರಾತಿಗಳು ಈಗಲೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.

ಆದರೆ ಹಠವಾದಿಗಳಾದ ಅವರು ಒಮ್ಮೆ ನೆಲೆಯೂರಿದ್ದೇ ಮತ್ತೆ ಹಿಂದೆ ನೋಡಲಿಲ್ಲ. ಬರೀ ಶ್ರಮದಿಂದಲೇ ಮುಂದೆ ಬರಲು ಪಣ ತೊಟ್ಟ ಅವರನ್ನು ಬಿಳಿಯರೂ ತಮಗೆ ಅಗತ್ಯವಿದ್ದಾಗ ಚನ್ನಾಗಿಯೇ ಉಪಯೋಗಿಸಿಕೊಂಡರು. ಹಾಗೆ ಒಮ್ಮೆ ತಮ್ಮ ಅಸ್ಥಿತ್ವವನ್ನು ಭದ್ರಪಡಿಸಿಕೊಂಡ ಗುಜರಾತಿಗಳು ಆರ್ಥಿಕ ನಿಚ್ಚಣಿಕೆಯಲ್ಲಿ ಮೇಲೇರುತ್ತಲೇ ಬಂದರು ಮತ್ತು ಇನ್ನೂ ಮೇಲೇರುತ್ತಲೇ ಇದ್ದಾರೆ. ಇದನ್ನು ಗಮನಿಸಿದ ಬಿಳಿಯರು ಈಗ ಅಪಾಯದ ಅರಿವಾದವರಂತೆ ಚಡಪಡಿಸಹತ್ತಿದ್ದಾರೆ. ಗುಜರಾತಿಗಳು, ಪಂಜಾಬಿಗಳು, ಮದ್ರಾಸಿಗಳು ಎನ್ನುವ ಬೇಧವಿಲ್ಲದೆ ಎಲ್ಲರನ್ನೂ ದ್ವೇಷಿಸ ಹತ್ತಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಿಂದ ಬಂದವರ ಆರ್ಥಿಕ ಉನ್ನತಿಯಷ್ಟೇ ಅಲ್ಲ ಅವರ ಸಂಖ್ಯಾ ಬಾಹುಳ್ಯದ ಬಗ್ಗೆಯೂ ಹೆದರುತಿದ್ದಾರೆ. ಆದರೆ ಯಾವುದನ್ನೂ ಪ್ರಕಟವಾಗಿ ತೋರಿಸರು ಅವರು. ಅದು ಅವರ ಶಿಸ್ತು! ಆದರೆ ಅವರಲ್ಲಿಯೂ ತೀವ್ರವಾದಿಗಳೆನಿಸಿಕೊಂಡ ಕೆಲವರು ಆ ಶಿಸ್ತನ್ನೂ ಮುರಿದು ತಮ್ಮ ಅಸಮಾಧಾನವನ್ನು ತೋರಿಸಹತ್ತಿದ್ದಾರೆ. ಅವರೇ `ಬ್ರಿಟಿಷರಿಗಾಗಿಯೇ ಬ್ರಿಟನ್’ ಎನ್ನುವ ಘೋಷಣೆಯೊಂದಿಗೆ ಬ್ರಿಟಿಷ್ ನೇಷನಲ್ ಪಾರ್ಟಿ ಕಟ್ಟಿಕೊಂಡ ಮಂದಿ. ಆ ಪಾರ್ಟಿ ಬಹಳಷ್ಟು ಜನಪ್ರಿಯವಾಗದಿದ್ದರೂ ಕೆಲವೊಂದು ಜಾಗಗಳಲ್ಲಿ ಏಷಿಯನ್ನರಿಗೆ ಅಸ್ಥಿರತೆಯ ಭಾವನೆಯನ್ನು ತಂದೊಡ್ಡಿ ಅವರ ನಿದ್ದೆ ಹಾಳು ಮಾಡುತ್ತಿದೆಯೆಂಬುದಂತೂ ಸತ್ಯ.

ಹೀಗೆ ಜನಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಬಿಳಿಯರ `ತಮ್ಮದು ದೊಡ್ಡ ಶಿಸ್ತಿನ ಸಿಪಾಯಿಗಳ ದೇಶ’ ಎನ್ನುವ ಅಹಂಗೆ ಏಟು ಬೀಳುತ್ತಿದೆ. ಎಷ್ಟೆಂದರೂ ಹೊರಗಿನಿಂದ ಬಂದವರು ತಮ್ಮ ಶಿಸ್ತನ್ನು ಅಳವಡಿಸಿಕೊಳ್ಳಲಾರರು ಎನ್ನುವುದು ಅವರ ಮನಸ್ಸಿನಲ್ಲಿ ನಾಟಿದೆ. ಅಷ್ಟೇ ಅಲ್ಲ ಎಷ್ಟೇ ಅಭಿವೃದ್ಧಿ ಹೊಂದಿದರೂ ಏಷಿಯಾ ಖಂಡವನ್ನಿನ್ನೂ ಹಾವುಗಳ ಮತ್ತು ಸನ್ಯಾಸಿಗಳ ದೇಶವೆಂದೇ ಪರಿಗಣಿಸುವ ಬ್ರಿಟಿಷ್ ನಾಗರಿಕ ಆ ಭಾಗದಿಂದ ಬಂದ ಜನರನ್ನು ತನ್ನ ಸಮಕ್ಕೆ ಕೂರಿಸಿಕೊಳ್ಳಲಾರ. ದೇಶದಲ್ಲಿನ ಕಾನೂನಿನಿಂದಾಗಿ ಎಲ್ಲಾ ಕಡೆಯಲ್ಲೂ ಈ ಭಾವನೆಯನ್ನು ವ್ಯಕ್ತ ಪಡಿಸಲು ಹೆದರಿದರೂ ಅವಕಾಶ ಸಿಕ್ಕಿದಾಗಲೆಲ್ಲ ತಾನು ಇವರಿಗಿಂತ ಒಂದು ಕೈ ಮೇಲು ಎನ್ನುವುದನ್ನು ತೋರಿಸಿಕೊಳ್ಳದೇ ಬಿಡಲಾರ. ಜತೆ ಜತೆಗೆ ಶತಮಾನಗಳ ಕಾಲ ಇವರೆಲ್ಲ ತಮ್ಮ ಗುಲಾಮರಾಗಿದ್ದರೆನ್ನುವ ಚಾರಿತ್ರಿಕ ಹೆಗ್ಗಳಿಕೆ ಬೇರೆ.

ಇಷ್ಟೆಲ್ಲ ಶಿಸ್ತಿನ ಸಿಪಾಯಿಗಳೆಂದುಕೊಂಡ ಬ್ರಿಟಿಷರು ಅಶಿಸ್ತಿನ ಮೊಟ್ಟೆಗಳಾಗುವುದು ಫುಟ್‍ಬಾಲ್ ಮ್ಯಾಚಿನ ಸಂದರ್ಭದಲ್ಲಿ. ಸ್ಟೇಡಿಯಮ್‍ನ ಒಳಗೆ ಹೊರಗೆ ಮತ್ತು ಎಲ್ಲೆಲ್ಲೂ. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದ ಕ್ರಿಕೆಟ್ ಅವರಿಗೆ ಆಟವೇ ಅಲ್ಲ. ಲಾಡ್ರ್ಸ್‍ನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆಯೆಂದರೆ ಗ್ಯಾಲರಿಯಲ್ಲಿ ಕಾಣುವ ಮುಖಗಳಲ್ಲಿ ತೊಂಭತ್ತೊಂಭತ್ತು ಭಾಗ ಏಷಿಯನರದ್ದೆ ಇರುತ್ತದೆ. ಅದೂ ಆಡುತ್ತಿರುವ ಟೀಮುಗಳ ದೇಶವನ್ನು ಹೊಂದಿಕೊಂಡು. ಭಾರತೀಯರು, ಪಾಕಿಸ್ತಾನಿಗಳು. ಶ್ರೀ ಲಂಕದವರು… ಹೀಗೆ.

ಅದೇ ವೆಂಬ್ಲೆ ಸ್ಟೇಡಿಯಮ್‍ನಲ್ಲಿ ಫುಟ್‍ಬಾಲ್ ಮ್ಯಾಚ್ ಇದೆಯೆಂದರೆ ಜನ ಮುಗಿ ಬೀಳುತ್ತಾರೆ. ಪ್ರೀಮಿಯರ್ ಲೀಗ್ ಪಂದ್ಯವಿದೆಯೆಂದಾದರೆ ಸಂಜೆ ಐದು ಗಂಟೆಯ ಪಂದ್ಯಕ್ಕೆ ಮಧಾಹ್ನ ಹನ್ನೆರಡು ಗಂಟೆಗೆ ಬಂದಿಳಿಯ ತೊಡಗುತ್ತಾರೆ. ನಾಲ್ಕೈದು ಮೈಲಿಗಳ ವರೆಗೆ ಕಾರುಗಳ ಸಾಲು. ಮ್ಯಾಂಚೆಸ್ಟೆರ್, ಲಿವರ್‍ಪೂಲ್ ಡರ್ಬಿಗಳಿಂದ ಹಿಡಿದು ಎಡಿನ್‍ಬರೋ ವರೆಗಿಂದ ಜನ ಕಾರಿನಲ್ಲಿ ಬರುತ್ತಾರೆ. ಆ ಸಾಲುಗಳಲ್ಲಿ ಎಲ್ಲಿಯೂ ಶಿಸ್ತನ್ನು ಮೀರಲಾರರು. ಎಲ್ಲಾದರೂ ಕುಡಿದು ಮಜಾ ಮಾಡಬೇಕೆನ್ನುವವರು ಮಾತ್ರ ಸಾರ್ವಜನಿಕ ಸಾರಿಗೆಯಾದ ಟ್ರೈನ್ ಇಲ್ಲವೇ ಟ್ಯೂಬನ್ನು ಉಪಯೋಗಿಸುತ್ತಾರೆ. ಯಾಕೆಂದರೆ ಕುಡಿತದ ಅಮಲಿಳಿಯುವವರೆಗೆ ಸ್ಟಿಯರಿಂಗ್ ಹಿಡಿಯುವ ಹಾಗಿಲ್ಲವಲ್ಲ. ಅಂತಹ ದಿನಗಳಲ್ಲಿ ಸ್ಟೇಡಿಯಮ್ ಪಕ್ಕದಲ್ಲಿಯೇ ಇರುವ ನಮ್ಮ ಆಫೀಸಿನವರಿಗೂ ಗಮ್ಮತ್ತು. ಲಂಚಿನ ನಂತರ ಆಫೀಸಿಗೆ ಅಘೋಷಿತ ರಜೆ. ಆಗಲೇ ಆಫೀಸು ಬಿಡದಿದ್ದರೆ ಮತ್ತೆ ಮನೆಗೆ ಹೋಗುವುದು ಮ್ಯಾಚು ಮುಗಿದು ಟ್ರಾಫಿಕ್ ಎಲ್ಲ ಕ್ಲಿಯರ್ ಆದ ಮೇಲೆಯೇ. ಅದು ರಾತ್ರಿ ಹತ್ತಾದರೂ ಆದೀತು. ಇಲ್ಲ ಹನ್ನೊಂದಾದರೂ ಆದೀತು.

ಆ ಫುಟ್‍ಬಾಲ್ ಪ್ರೇಮಿಗಳ ಶಿಸ್ತು ಸಡಿಲವಾಗುವುದು ಒಮ್ಮೆ ಅವರು ಸ್ಟೇಡಿಯಮ್ ಒಳಗೆ ಕಾಲಿಟ್ಟಾಗಲೆ. ಕ್ಯಾನುಗಟ್ಟಲೆ ಬಿಯರ್ ಹೀರುತ್ತ ಹಾರುತ್ತಾರೆ, ಕುಣಿಯುತ್ತಾರೆ ಲಾಗ ಹಾಕುತ್ತಾರೆ. ತಮ್ಮ ತಮ್ಮ ಮೆಚ್ಚಿನ ಟೀಮುಗಳ ಲಾಂಛನವನ್ನು ಹಲವು ಹತ್ತು ರೀತಿಯಿಂದ ಧರಿಸುತ್ತಾರೆ. ಎತ್ತಿನ ಲಾಂಛನದ ಟೀಮಿನ ಹಿಂಬಾಲಕರು ಎರಡೆರಡು ಕೊಂಬುಗಳನ್ನಿಟ್ಟುಕೊಂಡು ಮೈ ತುಂಬ ಬಣ್ಣ ಬಣ್ಣದ ಪಟ್ಟೆಗಳನ್ನು ಹಾಕಿಕೊಂಡು ನಮ್ಮೂರ ಹುಲಿ ವೇಷಗಳಂತೆ ಕುಣಿಯುತ್ತಾರೆ. ಶಿಳ್ಳೆ ಹೊಡೆಯುತ್ತ ಪಕ್ಕದವನೊಂದಿಗೆ ಜಗಳ ತೆಗೆಯುತ್ತಾರೆ. ದುರಾದೃಷ್ಟವಶಾತ್ ಪಕ್ಕದವನೆಲ್ಲಿಯಾದರೂ ಎದುರು ಟೀಮಿನ ಫ್ಯಾನ್ ಅಗಿದ್ದರಂತೂ ಮುಗಿದೇ ಹೋಯ್ತು.

ನಮ್ಮಲ್ಲಿನ ರೌಡಿ ಶೀಟರುಗಳಂತೆ ಅಲ್ಲಿ ಫುಟ್‍ಬಾಲ್ ಹೂಲಿಗನ್ಸ್ ಅಂತ ಗುರುತಿಸಲ್ಪಟ್ಟವರಿರುತ್ತಾರೆ. ಯಾವುದೇ ದೊಡ್ಡ ಮ್ಯಾಚಿಗೆ ಮೊದಲು ಅಂತಹವರನ್ನು ಹುಡುಕಿ ಹಿಡಿದು ಹಾಕುತ್ತಾರೆ. ಇಲ್ಲವೇ ಅಂತಹವರನ್ನು ಗಮನಿಸಿಕೊಳ್ಳಲು ವಿಶೇಷವಾಗಿ ತರಬೇತಾದ ಪೋಲೀಸರನ್ನು ನಿಯಮಿಸಿರುತ್ತಾರೆ. ಅಷ್ಟೇ ಅಲ್ಲ. ಬೇರೆ ದೇಶಗಳಲ್ಲಿ ನಡೆಯುವ ಮ್ಯಾಚುಗಳಿಗೆ ಅವರು ಹೋಗದಿರುವಂತೆ ತಡೆಯಲು ಅವರಿಗೆ ವೀಸಾವನ್ನೆ ನಿರಾಕರಿಸುತ್ತಾರೆ. ಹೊರಗಿನ ದೇಶಗಳಲ್ಲಿ ತಮ್ಮ ಮರ್ಯಾದೆ ಕಳೆಯಬಾರದಲ್ಲ ಎನ್ನುವ ಕಾಳಜಿ.

ಪೋಲೀಸು ರಕ್ಷಣಾ ಪಡೆಯವರು ಬೆಳಿಗ್ಗೆಯಿಂದಲೇ ಹೆಲಿಕಾಪ್ಟರುಗಳ ಮೂಲಕ ಸ್ಟೇಡಿಯಮ್ ಮೇಲೆ ಸುತ್ತು ಹಾಕುತ್ತಾ ಕಾವಲು ಕಾಯುವುದು ಇನ್ನೊಂದು ವಿಶೇಷ. ನಮ್ಮ ಶಿಸ್ತಿನ ಸೀಪಾಯಿಗಳ ಶಿಸ್ತು ಕಟ್ಟು ಹರಿಯುವ ಸಂಭವಿರುವುದರಿಂದಲೇ ಅಂತಹ ಕಟ್ಟು ನಿಟ್ಟಿನ ಕಾವಲು.
ಜೀವನಾಡಿಯಾದ ಫುಟ್‍ಬಾಲಿನ ಮಟ್ಟಿಗೆ ಅವರ ಸಿಪಾಯಿ ಮಟ್ಟದ ಶಿಸ್ತೂ ಸಡಿಲಗೊಳ್ಳುತ್ತದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Avadhi

March 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: