ಪಿ ಪಿ ಉಪಾಧ್ಯ ಅಂಕಣ- ಬ್ರಿಸ್ಟಾಲ್ ನಲ್ಲಿ ಬಿಸಿ ಬಿಸಿ ದೋಸೆ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

13

ಬ್ರಿಸ್ಟಾಲ್‍ನಲ್ಲಿ ಬಿಸಿ ಬಿಸಿ ದೋಸೆ

ವೆಂಬ್ಲೆ ಲಂಡನ್ನಿನ ಭಾಗವಾಗಿಯೇ ಕಂಡರೂ ಅದು ಬೇರೆಯೇ ಜಿಲ್ಲೆ. ಲಂಡನ್ನಿನ ಹೊರ ಭಾಗದಲ್ಲಿರುವ ಒಂದು ಉಪನಗರದ ರೀತಿ. ನಮ್ಮ ಕಚೇರಿಯಿರುವುದು ಅಲ್ಲಿಯೇ. ನಮ್ಮ ಮನೆಯ ಪ್ರದೇಶ ಲಂಡನ್ ಪಟ್ಟಣದ ಒಂದು ಭಾಗ. ಒಮ್ಮೆ ಒಂದು ಟ್ರೈನಿಂಗ್ ಕಾರ್ಯಕ್ರಮಕ್ಕಾಗಿ ನಾನು ನನ್ನ ಸಹ ಅಧಿಕಾರಿಯೊಬ್ಬರ ಜತೆ ಇನ್ನೊಂದು ಪಟ್ಟಣವಾದ ಬ್ರಿಸ್ಟಾಲ್‍ಗೆ ಹೋಗಿದ್ದೆ. ಅಲ್ಲಿನ ನಮ್ಮ ಶಾಖೆಯಲ್ಲಿ ಕೆಲಸ ಮಾಡುವ ನಮ್ಮ ಸಹೋದ್ಯೋಗಿ ಅಧಿಕಾರಿಗಳಿಗೆ ತೊಂದರೆ ಕೊಡುವುದು ನನಗೆ ಇಷ್ಟವಿಲ್ಲ ಎಂದು ಖಡಾ ಖಂಡಿತವಾಗಿ ಮೊದಲೇ ಹೇಳಿದ್ದರಿಂದ ನಮ್ಮ ಎರಡು ದಿನಗಳ ವಾಸ್ತವ್ಯಕ್ಕೆ ಉತ್ತಮ ತರಗತಿಯ ಹೋಟೆಲೊಂದರಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕಾರಿನಲ್ಲಿ ನೂರಾ ಇಪ್ಪತ್ತು ಮೈಲಿ (ಸುಮಾರು ಇನ್ನೂರು ಕಿ.ಮೀ.) ಡ್ರೈವ್ ಮಾಡಿಕೊಂಡು ಬ್ರಿಸ್ಟಾಲ್ ಮುಟ್ಟುವಾಗ ಮಧ್ಯಾಹ್ನ. ಹೋಟೆಲಿನ ಪಾರ್ಕಿಂಗ್ ಜಾಗದಲ್ಲಿ ಕಾರನ್ನಿಟ್ಟು ರೂಮಿನೊಳಗೆ ಕಾಲಿಡುವಾಗ ಊಟದ ಹೊತ್ತು. ಅಲ್ಲಿಂದ ನೇರ ರೆಸ್ಟಾರೆಂಟಿಗೆ ಹೋಗಿದ್ದೆವು. ಆ ದೇಶದಲ್ಲಿ ಲಂಚ್ ಎಂದರೆ ನಮ್ಮಲ್ಲಿಯ ಹಾಗೆ ಅನ್ನ ಸಾರು ಹಪ್ಪಳ ಚಪಾತಿ ಎಂದೆಲ್ಲ ಕೇಳಬೇಡಿ. ಹತ್ತು ರೀತಿಯ ಅಲೂಗಡ್ಡೆಯ ತಯಾರಿಗಳು-ಸುಟ್ಟದ್ದು,ಬೇಯಿಸಿದ್ದು,ಹುರಿದದ್ದು, ಕರಿದದ್ದು, ಪುಡಿಮಾಡಿದ್ದು,ಅರೆದದ್ದು ಹೀಗೆ ತರಹೇವಾರಿ… ಇನ್ನುಳಿದಂತೆ ಕೆಲ ತರಕಾರಿಗಳು.

ಕತ್ತರಿಸಿ ಬೇಯಿಸಿದವು ಹಾಗೆಯೇ ಇಡಿ ಇಡೀ ಬೇಯಿಸಿಟ್ಟವು….ನಾಲ್ಕಾರು ಹಸಿರು ಬಟಾಣಿ ಮತ್ತು ಬೀನ್ಸಿನ ತಯಾರಿಗಳು. ಒಂದಕ್ಕೂ ಉಪ್ಪಿಲ್ಲ ಹುಳಿಯಿಲ್ಲ. ಜೊತೆಗೆ ಬ್ರೆಡ್ ಮತ್ತು ಕ್ರಾಯಿಸೆಂಟ್‍ಗಳು (ಬನ್ನಿನ ತರಹದವು) ಇತ್ಯಾದಿ ಇತ್ಯಾದಿಗಳೊಂದಿಗೆ ಅಮೆರಿಕನ್ ಲಾಂಗ್ ಗ್ರೈನ್ ರೈಸ್-ಅರೆ ಬೆಂದ ಅನ್ನ. ಇನ್ನು ಮಾಂಸಾಹಾರಿಗಳಿಗೆ ಕೆಲ ನಾನ್‍ವೆಜ್ ಐಟಮ್‍ಗಳು. ಅಂತಹುದರಲ್ಲಿ ಬಹಳ ಹಸಿದಿದ್ದ ನನ್ನ ಸಹೋದ್ಯೋಗಿ ಮಾಂಸ ಮತ್ತು ತರಕಾರಿಯ ಭೇದವನ್ನೆಣಿಸದೆ ಪಟ್ಟಾಗಿ ಹೊಡೆದಿದ್ದ ಪ್ರತಿಯೊಂದನ್ನೂ ತನ್ನದೇ ಆದ ಶೈಲಿಯಲ್ಲಿ ದೂರುತ್ತ.

ಬರಿಯ ತರಕಾರಿಯ ಐಟಮ್‍ಗಳಿಗೇ ನನ್ನ ಆಯ್ಕೆಯನ್ನು ಸೀಮಿತಗೊಳಿಸಿ ಪ್ಲೇಟಿನಲ್ಲಿ ಅವುಗಳನ್ನಿಟ್ಟುಕೊಂಡು ಕೆದಕುತ್ತಿದ್ದ ನನ್ನನ್ನು ದೂರದಿಂದಲೇ ಗಮನಿಸುತ್ತಿದ್ದ ಮುಖ್ಯ ಅಡುಗೆಯವನು ಹತ್ತಿರಕ್ಕೆ ಬಂದಿದ್ದ. ಬ್ರಿಸ್ಟಾಲಿನಂತಹ ಊರಿನಲ್ಲಿ ಆ ಕಾಲದಲ್ಲಿ ಏಷಿಯನ್ನರ ಸಂಖ್ಯೆಯೇ ಕಡಿಮೆ. ಅದರಲ್ಲಿಯೂ ಅಂತಹ ಹೋಟೆಲಿಗೆ ಬರುವವರಂತೂ ತೀರ ವಿರಳ. ಅಂತಹುದರಲ್ಲಿ ನಮ್ಮ ಹತ್ತಿರ ಬಂದು ವಿಚಾರಿಸಿದ್ದ. ಪಕ್ಕಾ ಸಸ್ಯಾಹಾರಿಯಾಗಿದ್ದ ನನ್ನ ಕಷ್ಟವನ್ನು ಹೇಳಿಕೊಂಡರೆ ತೀರ ನೊಂದಿದ್ದ.

‘ನೀವು ಹೋಟೆಲು ರೂಮು ಬುಕ್ ಮಾಡುವಾಗ ಒಂದು ಸೂಚನೆ ಕೊಟ್ಟಿದ್ದಿದ್ದರೆ ನಾನು ವ್ಯವಸ್ಥೆ ಮಾಡುತ್ತಿದ್ದೆ’ ಎಂದವ ಸೀದಾ ಹೋಗಿ ಒಂದು ಹೊಸಾ ಪ್ಲೇಟಿನಲ್ಲಿ ಇನ್ನೊಂದಿಷ್ಟು ಐಟಮ್‍ಗಳನ್ನಿಟ್ಟುಕೊಂಡು `ನೋಡಿ ಸರ್, ಟೇಸ್ಟ್ ಮಾಡಿ… ಪ್ಯೂರ್ ವೆಜ್ ಐಟಮ್‍ಗಳು’ ಎಂದು ನನ್ನ ಮುಂದಿರಿಸಿದ್ದ- ಅಷ್ಟು ದೊಡ್ಡ ಹೋಟಲಿನ ಚೀಫ್ ಶೆಫ್… ನಮ್ಮಲ್ಲಿನ ಹೋಟಲುಗಳಲ್ಲಿ ಸಪ್ಲೈಯರ್ ಹುಡುಗರೇ ಕ್ಯಾರೇ ಎನ್ನುವುದಿಲ್ಲ. ಅಂತಹುದರಲ್ಲಿ ಇವ! ಅಷ್ಟೇ ಅಲ್ಲ.“ಸರ್ ನಾವು ಪಾನ್ ಕೇಕ್ ಎಕ್ಸ್ ಪರ್ಟ್ಸ್ . ರಾತ್ರಿಯ ನಿಮ್ಮ ಊಟಕ್ಕೆ ನಮ್ಮ ಸ್ಪೆಶಲ್ ಪಾನ್ ಕೇಕ್. ನೀವು ಇಂಡಿಯಾದಲ್ಲಿ ದೋಸಾ ಅನ್ನುತ್ತೀರಲ್ಲ… ಇಂದು ರಾತ್ರಿ ನಮ್ಮ ಸ್ಪೆಶಲ್ ಮಸಾಲ ದೋಸಾ” `ಓ.ಕೆ. ಓ.ಕೆ. ಟೇಕ್ ಇಟ್ ಈಸೀ..’ ಎಂದು ಹೇಳಿ ನಾನೇ ಹಗುರಾಗಿ ತೆಗೆದುಕೊಂಡಿದ್ದೆ.


ಸಂಜೆಯ ತನಕ ಬೇರೆ ಕೆಲಸವಿರಲಿಲ್ಲ. ಮಿತ್ರ `ಛೆ ಊಟ ಏನೂ ಚನ್ನಾಗಿರಲಿಲ್ಲ’ ಎನ್ನುತ್ತಲೇ ಇದ್ದ. `ಒಂದು ವೇಳೆ ಇನ್ನೂ ಚನ್ನಾಗಿ ಇದ್ದಿದ್ದರೆ ಏನು ಗತಿಯಾಗುತ್ತಿತ್ತು’ ಎಂದುಕೊಳ್ಳುತ್ತ ರೂಮಿಗೆ ತೆರಳಿದ್ದೆ. ಗಂಟೆಯೆರಡು ಗಂಟೆ ರೆಸ್ಟ್ ಟೀವಿ ಎಲ್ಲ ಮುಗಿದಾಗ ಸಹೋದ್ಯೋಗಿ ಬಾಗಿಲು ಬಡಿದಿದ್ದ. ಹೋಟಲಿನಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡು ಬಂದಿದ್ದ ಆತ ಸ್ಟೀಮ್ ಬಾತ್ ಬಿಸಿಯಿರಲಿಲ್ಲವೆಂದೂ ಶವರ್ ಬಾತ್‍ನ ಶವರ್‍ನಲ್ಲಿ ಪ್ರೆಶರ್ ಇರಲಿಲ್ಲವೆಂದೂ ಸ್ವಿಮ್ಮಿಂಗ್ ಪೂಲಿನ ನೀರಿಗೆ ಬೆರೆಸಿದ ಪರಿಮಳ ಕಡಿಮೆಯಿತ್ತೆಂದೂ ದೂರಿದ್ದ. ಮನೆಯಲ್ಲಿ ಗ್ಯಾಸ್ ಬಿಲ್ ಹೆಚ್ಚಾಗುತ್ತದೆಂದು ಡಿಸೆಂಬರ್ ಚಳಿಯಲ್ಲೂ ತಣ್ಣೀರ ಸ್ನಾನ ಮಾಡಿ ಆರೋಗ್ಯದ ಬಗ್ಗೆ ವ್ಯಾಖ್ಯಾನಿಸುವ, ಚಳಿಗೆ ಸೆಂಟ್ರಲ್ ಹೀಟಿಂಗ್‍ನ ಬದಲು ರಜಾಯಿ ಹೊದ್ದು ಮಲಗುವ ಅವ ಹೇಳುವ ಮಾತುಗಳು.

ರಾತ್ರಿ ಊಟಕ್ಕೆ ಪುನಃ ರೆಸ್ಟಾರೆಂಟಿಗೆ ಕಾಲಿಡುತ್ತಿದ್ದಂತೆಯೇ ನಮ್ಮನ್ನೇ ಕಾಯುತ್ತಿದ್ದವನಂತೆ `ವೆಲ್‍ಕಮ್ ಸರ್, ನಿಮ್ಮ ಮಸಾಲ ದೋಸಾ ರೆಡಿ . . ನಿಮಗಾಗಿಯೇ ಮಾಡಿಟ್ಟಿದ್ದೀನಿ..’ಎನ್ನುತ್ತ ಆ ಅಡುಗೆಯವ ನಮಗಾಗಿಯೇ ರಿಸರ್ವ್ ಮಾಡಿಟ್ಟಿದ್ದ ಟೇಬಲಿನೆದುರಿಗೆ ಕೂರಿಸಿ ಎರಡೇ ನಿಮಿಷದಲ್ಲಿ ಹೊಗೆಯಾಡುತ್ತಿದ್ದ ಪಾನ್ ಕೇಕಿನೊಂದಿಗೆ ಹಾಜರ್. ಮಸಾಲೆ ದೋಸೆಯೆಂದರೆ ಪ್ರಾಣ ನನಗೆ. ಮಧ್ಯಾಹ್ನದ ಊಟ ಬೇರೆ ಸರಿಯಾಗದ ಕಾರಣ ಎರಡು ಹೊಟ್ಟೆ ಮಾಡಿಕೊಂಡು ಕಾಯುತ್ತಿದ್ದವನಿಗೆ ಆ ಹೊಂಬಣ್ಣದ ಹೊಗೆಯಾಡುತ್ತಿದ್ದ ದೋಸೆ ನಿಧಿಯಂತೆ ಕಂಡಿತ್ತು.

ದೋಸೆ ನೀಡಿ ಕೃತಾರ್ಥ ಭಾವನೆಯೊಂದಿಗೆ ನಿಂತ ಅವನಿಗೆ ಥ್ಯಾಂಕ್ಸ್ ಹೇಳಿ ದೋಸೆ ಬಿಡಿಸಿದರೆ ಅದರೊಳಗಿನ ಪಲ್ಯ ಆಣಬೆಯದ್ದು! ಉತ್ಕೃಷ್ಟ ಆಲೂ ಪಲ್ಯದ ದೋಸೆಗಳನ್ನೇ ತಿನ್ನುತ್ತಿದ್ದು ಅದನ್ನೇ ನಿರೀಕ್ಷಿಸುತ್ತಿದ್ದವನಿಗೆ ನಿರಾಸೆಯಾದರೂ ಪರವಾಯಿಲ್ಲ ಎಂದು ಅದನ್ನು ಸರಿಸಿ ದೋಸೆ ಮುರಿದು ಬಾಯಿಗಿಟ್ಟರೆ ಒಗರು ಒಗರು . ವಿಚಿತ್ರ ರುಚಿ. ಅಂಟಂಟು. ಏನೆಂದು ನೋಡಿದರೆ ಫ್ರೆಶ್ ಚೀಸ್ ಕರಗಿಸಿ ಸುರಿದಿದ್ದ. ಅದೇ ಅವನ ಸ್ಪೆಶಾಲಿಟಿ ಪಾನ್ ಕೇಕ್. ನನಗೋ ಹಸಿವೆಯಂತೂ ಎಲ್ಲೋ ಓಡಿಹೋಗಿತ್ತು.

ದೋಸೆ ಒಳಗಿಳಿಯದು. ಹೊರ ಬರದು. ಹೆಮ್ಮೆಯಿಂದ ಬೀಗುತ್ತ ನಿಂತಿದ್ದ ಅವನೆದುರಿಗೆ ದೋಸೆಯನ್ನು ಬದಿಗೆ ಸರಿಸುವಂತೆಯೂ ಇಲ್ಲ. ಸಾಧ್ಯವಾದಷ್ಟೂ ನನ್ನ ಭಾವನೆಗಳನ್ನು ನಿಯಂತ್ರಿಸುತ್ತ ಅತ್ಯುತ್ಸಾಹದಿಂದ ನನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದ ಅವನ ಉತ್ಸಾಹಕ್ಕೆ ಭಂಗ ಬರದಂತೆ ನಿಧಾನವಾಗಿ ದೋಸೆ ಸವಿಯುವವನಂತೆ ನಟಿಸುತ್ತಾ `ಅದ್ಭುತ… ಅದ್ಭುತ..’ ಎಂದು ನಡು ನಡುವೆ ಉದ್ಗರಿಸುತ್ತಾ ಒಂದೊಂದೇ ಚೂರನ್ನು ತಿನ್ನ ತೊಡಗಿದ್ದೆ. ಅವನು ಮುಖದ ಮೇಲೆ ಕೃತಾರ್ಥ ಭಾವನೆಯನ್ನು ಮೂಡಿಸುತ್ತಾ ಅಲ್ಲಿಂದ ಹೋದದ್ದೇ ತಟ್ಟೆಯಲ್ಲಿದ್ದುದೆಲ್ಲವನ್ನೂ ಪಕ್ಕದಲ್ಲಿದ್ದ ಬಿನ್‍ಗೆ ಸುರುವಿ ಮಧ್ಯಾಹ್ನದಂತೆಯೇ ಏನೇನೋ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದೆ. ಆದರೆ ಊಟ ಮುಗಿಸಿ ಹೋಗುವಾಗ ಮಾತ್ರ ತಪ್ಪದೇ ಅವನನ್ನು ಕಂಡು `ದೋಸೆ ಅದ್ಭುತವಾಗಿತ್ತು’ ಎಂದು ಹೇಳಿ ಅವನ ಮುಖದ ಮೇಲೆ ಅತಿಥಿ ಸತ್ಕಾರವನ್ನು ಪೂರ್ತಿಯಾಗಿ ಮಾಡಿದ ತೃಪ್ತಿ ಮಿನುಗುವುದನ್ನು ಕಂಡು ಹೊರಗೆ ಕಾಲಿಟ್ಟಿದ್ದೆ.

ಬೆಳಿಗ್ಗೆ ಬ್ರೇಕ್‍ಫಾಸ್ಟಿಗೆ ದೋಸೆಯ ಪರಿ ಪಾಠವಿಲ್ಲ ಅಲ್ಲಿ. ಮಧ್ಯಾಹ್ನದ ಊಟಕ್ಕೆ ಬೇರೆ ಕಡೆಯೆ ಏರ್ಪಾಟಾಗಿದೆ. ಪುನಹ ರಾತ್ರಿಯಂತೂ ಲಂಡನ್ನಿಗೆ ವಾಪಾಸು. ಅಂದಮೇಲೆ ಅವನ ದೋಸೆಯ ಪ್ರಯೋಗಕ್ಕೆ ಇನ್ನೊಮ್ಮೆ ಬಲಿ ಪಶುವಾಗಬೇಕಿಲ್ಲ ಎನ್ನುವ ಸಮಾಧಾನವೂ ಇತ್ತು. ಆದರೂ ಗ್ರಾಹಕರ ಬಗ್ಗೆ ಅವರು ತೋರುವ ಕಾಳಜಿ ಮನಸ್ಸನ್ನು ತಟ್ಟಿತ್ತು.

ನಮ್ಮಲ್ಲಿ ಚಿಕ್ಕ ಚಿಕ್ಕ ದರ್ಶಿನಿಗಳಿಂದ ಹಿಡಿದು ದೊಡ್ಡ ಸ್ಟಾರ್ ಹೋಟೆಲುಗಳ ವರೆಗೆ ಅವರಲ್ಲಿಲ್ಲದ ಪದಾರ್ಥಗಳನ್ನು ಕೇಳಿದರೆ ವಿಶೇಷವಾಗಿ ಮಾಡಿ ಬಡಿಸಿದ್ದಿದೆಯಾ. `ಇಡ್ಲಿ ಇದೆಯ’ ಎಂದು ಕೇಳಿದರೆ `ವಡೆ ಇದೆ’, `ವಡೆ ಕೊಡಿ’ ಎಂದರೆ `ಉಪ್ಪಿಟ್ಟು ತರಲೇ’ ಎನ್ನುವ ತರಲೆ ಮಾಣಿಗಳಿರುವ ಹೋಟೆಲುಗಳ ನೆನಪು ಪದೇ ಪದೇ ಬರುತ್ತಿತ್ತು ನನಗೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Avadhi

February 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: