ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಹುಟ್ಟುವ ಮೊದಲೇ ಸತ್ತ ಐನ್‍ಸ್ಟೀನ್…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

3

ಹುಟ್ಟುವ ಮೊದಲೇ ಸತ್ತ ಐನ್‍ಸ್ಟೀನ್

ಮಕ್ಕಳನ್ನು ಶಾಲೆಗೆ ಸೇರಿಸುವ ಬೃಹತ್ ಗಂಡವನ್ನು ಈ ಮೊದಲು ಎರಡೆರಡು ಬಾರಿ ನಮ್ಮ ದೇಶದಲ್ಲಿ ಎದುರಿಸಿದ್ದೆವು. ಅಲ್ಲಿ ಕಂಡ ಕಂಡ ಕಂಬ ಕಿಟಿಕಿಗಳಿಗೆಲ್ಲ ಕೈಮುಗಿದು ಹಲ್ಲು ಕಿಸಿದವರಿಗೆಲ್ಲ ಐವತ್ತು ನೂರು ತಳ್ಳಿ ಜೇಬು ಸಾಕಷ್ಟು ಹಗುರ ಮಾಡಿಕೊಂಡು ಕೊನೆಗೊಮ್ಮೆ ಸೀಟು ಗಿಟ್ಟಿಸಿಕೊಂಡಾಗ ಕೃತಾರ್ಥರಾದೆವು ಎಂದುಕೊಂಡದ್ದಿತ್ತು. ಅದೇ ಮನಸ್ಸಿನಲ್ಲಿಟ್ಟುಕೊಂಡು ಕಂಡರಿಯದ ದೇಶದಲ್ಲಿ ಹೇಗಪ್ಪಾ ಎಂದುಕೊಂಡು ಹೆದರಿ ಹೆದರಿ ಮಕ್ಕಳು- ದೊಡ್ಡವಳು ಮಗಳು- ಅವಳನ್ನು ಆರನೇ ತರಗತಿಗೆ ಮತ್ತು ಮಗನನ್ನು ಒಂದನೇ ತರಗತಿಗೆ ಸೇರಿಸಲು ಕರೆದುಕೊಂಡು ಹೋಗಿದ್ದೆವು.

ನಮ್ಮ ಮಗಳು ಆರು ವರ್ಷದ ಹಿಂದೆ ನರ್ಸರಿ ರೈಮ್‍ನಲ್ಲಿ ಮೊದಲ ಬಹುಮಾನ ಪಡೆದುದರಿಂದ ಹಿಡಿದು ಇತ್ತೀಚೆಗಷ್ಟೆ ಇನ್ನೂರು ಮಕ್ಕಳ ಅವಳ ಶಾಲೆಯಲ್ಲಿ ಲಾಂಗ್ ಜಂಪಿನಲ್ಲಿ ಮೂರನೇ ಬಹುಮಾನ ಪಡೆದುದರ ವರೆಗಿನ ಸರ್ಟಿಫಿಕೇಟುಗಳ ಒಂದೂವರೆ ಕೇಜಿ ತೂಕದ ಕಟ್ಟುಗಳೊಂದಿಗೆ ಹೋದರೆ ಅದ್ಯಾವುದನ್ನೂ ಕಣ್ಣೆತ್ತಿಯೂ ನೋಡದೆ ಬರೀ ಹುಟ್ಟಿದ ತಾರೀಕಿನ ಸರ್ಟಿಫಿಕೇಟನ್ನಷ್ಟೇ ಎತ್ತಿಕೊಂಡು ತಂದೆ ತಾಯಿಯರಾದ ನಮ್ಮ ಹೆಸರು ಮತ್ತು ಫೋನ್ ನಂಬರ್ ಗಳನ್ನಷ್ಟೇ ಬರೆದುಕೊಂಡು ಆರನೇ ತರಗತಿಗೆ ಸೇರಿಸಿಕೊಂಡಿದ್ದರು.

ಹಾಗೆಯೇ ಮಗನನ್ನು ಒಂದನೇ ತರಗತಿಗೆ. ಎಲ್ಲ ಮುಗಿಸಿದ ಆ ಬಿಳಿ ಹೆಂಗಸು ಮುಗುಳ್ನಗುತ್ತ ನಮಗೆ ಹಸ್ತ ಲಾಘವ ನೀಡಿದ್ದಳು – ನಿಮ್ಮ ಕೆಲಸ ಮುಗಿಯಿತು ನೀವಿನ್ನು ಹೋಗಬಹುದು – ಎನ್ನುವುದರ ಸೂಚನೆಯಾಗಿ. ಈ ಎಲ್ಲ ಕೆಲಸಗಳಿಗೆ ಒಟ್ಟಿಗೆ ತಗುಲಿದ್ದು ನಾಲ್ಕು ನಿಮಿಷಗಳು! ಎಲ್ಲಿ ಪ್ರಿನ್ಸಿಪಾಲರು… ಎಲ್ಲಿ ಶಾಲೆಯ ಪ್ರೆಸಿಡೆಂಟರು ಎಲ್ಲಿ ಶಾಲೆಯ ಜಗಲಿ ಕಾಯುವುದು?…

ಪುಸ್ತಕ ಫೀಸು ಎಂದು ನಾವು ಗೊಣಗುತ್ತಿರುವಾಗಲೇ ನಮ್ಮ ಕಷ್ಟವನ್ನು ಅರಿತವಳಂತೆ ‘ಅದೆಲ್ಲ ಇಂದು ಸಂಜೆ ನಿಮ್ಮ ಮಕ್ಕಳು ಮನೆಗೆ ಬರುವಾಗ ತರುತ್ತಾರೆ. ಇಲ್ಲಿ ನೀವು ಕೊಡಬೇಕಾದ ಫೀಸ್ ಏನೂ ಇಲ್ಲ. ಪುಸ್ತಕ ಮತ್ತು ಬರೆಯುವ ಸಾಮಗ್ರಿಗಳನ್ನು ನಾವೇ ಕೊಡುತ್ತೇವೆ. ಅಷ್ಟೇ ಅಲ್ಲ. ಮಧ್ಯಾಹ್ನದ ಊಟವನ್ನೂ ನಾವೇ ಕೊಡುತ್ತೇವೆ. ನಿಮ್ಮ ಮಕ್ಕಳಿಗೆ ಹಿಡಿಸಿದರೆ ಮಾಡಬಹುದು. ಇಲ್ಲವೆಂದರೆ ಮನೆಯಿಂದ ತರಬಹುದು. ಕಡ್ಡಾಯವೇನೂ ಇಲ್ಲ..’ ಎಂದವಳು ನಾಚಿಕೊಂಡು ನಮ್ಮ ಹಿಂದೆ ಹಿಂದೆ ಅಡಗಿಕೊಳ್ಳುತ್ತಿದ್ದ ನಮ್ಮ ಮಗನನ್ನು ಬಾಚಿ ತಬ್ಬಿಕೊಳ್ಳುತ್ತ ‘ಈ ಚಿಕ್ಕ ಪೋರನಿಗೆ ಬುತ್ತಿ ಬಿಡಿಸಿ ಊಟಕ್ಕೆ ಸಹಾಯ ಮಾಡಲು ನಮ್ಮಲ್ಲೇ ಜನರಿದ್ದಾರೆ ನೀವೇನೂ ಅದರ ಬಗ್ಗೆ ಕಾಳಜಿ ಮಾಡಬೇಕಾದದ್ದಿಲ್ಲ..’ ಎಂದಿದ್ದಳು.

ನಮಗೆ ಶಾಕ್‍ನ ಮೇಲೆ ಶಾಕ್. ಅಲ್ಲದೆ ಪ್ರತಿ ಬಾರಿಯೂ ನಮ್ಮ ಮಕ್ಕಳ ಭಾರತೀಯ ಹೆಸರನ್ನು ಹೇಳಿಯೇ ಮುಂದುವರಿಸುತ್ತಿದ್ದಳು. ಅದೂ ಸ್ಪಷ್ಟವಾಗಿ. ಅದು ಕಲ್ಯಾಣ ರಾಜ್ಯದ ವಿದ್ಯಾಭ್ಯಾಸ ಪದ್ಧತಿ. ಕಲ್ಯಾಣ ರಾಜ್ಯವಾದ್ದರಿಂದ ಅಲ್ಲಿ ಜನ ಹಾಗಾದರೋ. ಅಥವಾ ಜನರ ಅಂತಹ ಗುಣದಿಂದಾಗಿ ಅದು ಕಲ್ಯಾಣ ರಾಜ್ಯವಾಯಿತೋ? ಆ ಪ್ರಶ್ನೆಗೆ ಉತ್ತರ ಸಿಗಲು ನಾವು ನಾಲ್ಕು ವರ್ಷವೇ ಕಾಯಬೇಕಾಯ್ತು.

ಆ ನಾಲ್ಕು ವರ್ಷಗಳ ಸುಖದ ಜೀವನವನ್ನು ಕಳೆದು ಇಂಡಿಯಕ್ಕೆ ಬಂದಾಗ ನಮ್ಮ ಬವಣೆ ಹೇಳಿತೀರದು. ಸಾಕಷ್ಟು ಹೆಸರು ಗಳಿಸಿ ಬೆಳೆಸಿದ್ದ ಸಂಬಂಧಿಕರುಗಳಿದ್ದೂ ಶಾಲೆಯ ಪ್ರಿನ್ಸಿಪಾಲರಿಗೆ ಆಡಳಿತ ಮಂಡಳಿಯವರಿಗೆ ಸಲಾಮು ಹೊಡೆದದ್ದೇ ಹೊಡೆದದ್ದು. ಆಗಷ್ಟೇ ಪೌಂಡುಗಳನ್ನು ಪರಿವರ್ತಿಸಿದ ರೂಪಾಯಿಗಳನ್ನು ಹಿಡಿದುಕೊಂಡೂ ಭಿಕ್ಷುಕರಂತೆ ಅವರ ಬಾಗಿಲುಗಳನ್ನು ಕಾದಿದ್ದು! ಫಾರಿನ್ ಅಂದರೆ ತೆರಿಗೆಯ ಹೊರೆಯಿಲ್ಲದ ಖರ್ಚು ಮಾಡಲು ಅವಕಾಶವಿಲ್ಲದ ಸಂಪಾದನೆಯ ತಾಣವಾದ ಕೊಲ್ಲಿ ರಾಷ್ಟ್ರಗಳನ್ನಷ್ಟೇ ಮನಸಿನಲ್ಲಿಟ್ಟುಕೊಂಡಿರುವ ನಮ್ಮ ವಿದ್ಯಾ ಸಂಸ್ಥೆಯ ಮಾಲೀಕರುಗಳಿಗೆ ಸಂಪಾದನೆಯ ಪ್ರತೀ ಕಾಸಿಗೂ ಕಡ್ಡಾಯವಾಗಿ ತೆರಿಗೆ ಕಟ್ಟಲೇಬೇಕು ಮತ್ತು ಬದುಕುವ ಎಲ್ಲ ಅನುಕೂಲತೆಗಳೂ ಇರುವ ದೇಶಗಳಲ್ಲಿ ಖರ್ಚೂ ಮಾಡಬೇಕಾಗುತ್ತದೆ ಎನ್ನುವ ಹೊರದೇಶವೊಂದು ಕನಸಿನಲ್ಲಿಯೂ ಬಾರದು. ಹಾಗಾಗಿ ಅಮೆರಿಕಾದ ಡಾಲರುಗಳನ್ನು ಗೋಣಿ ಚೀಲದಲ್ಲಿಯೇ ತುಂಬಿಸಿ ತಂದಿರುತ್ತಾರೇನೋ ಎನ್ನುವ ನಂಬಿಕೆಯಿಂದ ವರ್ತಿಸುತ್ತಾರೆ. ಅಂತೂ ಕೊನೆಗೊಮ್ಮೆ ನಮ್ಮ ಮಕ್ಕಳಿಗೂ ಈ ದೇಶದಲ್ಲಿ ವಿದ್ಯಾಭ್ಯಾಸದ ಅವಕಾಶ ಇದೆಯೆಂಬುದು ಖಾತ್ರಿಯಾದಾಗ ನಮಗನ್ನಿಸಿದ್ದು ಅಬ್ಬಾ ಈ ದೇಶದಲ್ಲಿನ ವಿದ್ಯಾಭ್ಯಾಸವೇ… ಅದೂ ಪ್ರಾಥಮಿಕ ವಿದ್ಯಾಭ್ಯಾಸದ ಬೆಲೆಯೇ!

ಅಷ್ಟು ಮಾಡಿಯೂ ಪ್ರಥಮ ದಿನವೇ ಕ್ಲಾಸಿನಲ್ಲಿ ‘ಸುಮ್ಮನೆ ಕುಳಿತಿದ್ದೀಯ ಯಾಕೆ’ ಎಂದು ಹಿಂದಿನಿಂದ ಬಂದ ಕನ್ನಡ ಟೀಚರು ಇವ ಉತ್ತರ ಕೊಡುವ ಅವಕಾಶವನ್ನೂ ಕೊಡದೆ ನನ್ನ ಮಗನ ತಲೆಯ ಮೇಲೆ ಮೊಟಕಿದ್ದಳು. ದಿನವಿಡೀ ಅಳುತ್ತಲೇ ಇದ್ದ ಐದನೇ ತರಗತಿಗೆ ಸೇರಿದ್ದ ಅವ ‘ನನ್ನ ತಪ್ಪಿಲ್ಲದೆಯೇ ನನಗೆ ಹೊಡೆದುಬಿಟ್ಟರಲ್ಲ ಟೀಚರು’ ಎನ್ನುತ್ತಿದ್ದ. ಆದದ್ದಿಷ್ಟೆ. ಕನ್ನಡ ಪುಸ್ತಕವನ್ನು ತರಗತಿಯಲ್ಲಿಯೇ ಕೊಡುತ್ತೇನೆಂದು ಹಣ ತೆಗೆದುಕೊಂಡ ಶಾಲೆಯವರು ಪುಸ್ತಕ ಸ್ಟಾಕಿಲ್ಲವೆಂದು ಕೊಟ್ಟಿರಲಿಲ್ಲ. ಇವ ಏನೂ ಮಾಡಲು ತಿಳಿಯದೆ ಸುಮ್ಮನೇ ಕುಳಿತಿದ್ದ.

ಇಂಗ್ಲಂಡಿನ ವಿಶಿಷ್ಟ ವಾತಾವರಣದಲ್ಲಿ ಬೆಳೆದು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಕಷ್ಟ ಪಡುತ್ತಿದ್ದ ಅವನಿಗೆ ಬಿದ್ದ ಆ ಪೆಟ್ಟಿನ ಪರಿಣಾಮವನ್ನು ಇಷ್ಟು ವರ್ಷಗಳ ಮೇಲೂ ಪೂರ್ತಿಯಾಗಿ ತೊಡೆದು ಹಾಕಲಿಕ್ಕೆ ಆಗುತ್ತಾ ಇಲ್ಲ. ನಮ್ಮ ದೇಶದ ವಿದ್ಯಾಭ್ಯಾಸ ಪದ್ಧತಿಯೇ ಶ್ರೇಷ್ಠ ಎಂದು ಅವನ ಮನದಲ್ಲಿ ಬಿಂಬಿಸುವ ಅನಿವಾರ್ಯ ಪ್ರಯತ್ನದಲ್ಲಿ ತೊಡಗಿರುವ ನಮಗೆ ಅವನೇ ಸವಾಲು ಹಾಕುತ್ತಾನೆ. `ಇದೇ ನಿಮ್ಮ ಶ್ರೇಷ್ಠ ವ್ಯವಸ್ಥೆಯೇ’ಎಂದು. ಹೌದು. ಉತ್ತರಕ್ಕಾಗಿ ನಾವೂ ಹುಡುಕಾಡುತಿದ್ದೇವೆ.

ಬೇಡ ಬೇಡವೆಂದರೂ ನೆನಪಾಗುತ್ತದೆ. ನಮ್ಮ ಮಗ ಆಗ ಮೂರನೇ ತರಗತಿಯಲ್ಲಿದ್ದ. ಅವನ ಕ್ಲಾಸ್ ಟೀಚರ್ ಹೆಸರು ಮಿಸ್ಟರ್ ಎಲ್ಲಿಸ್. ವಿಜ್ಞಾನ ಮತ್ತು ಲೆಕ್ಕ ಬೋಧಿಸುತ್ತಿದ್ದ. ಇಪ್ಪತ್ತೈದರ ಅಂಚಿನಲ್ಲಿದ್ದ ಆತ ತೀರ ಫುಟ್ ಬಾಲ್ ಗೀಳನ್ನು ಹತ್ತಿಸಿಕೊಂಡವ. ಆಗಲೆ ಇಂಗ್ಲಂಡಿನ ಲೀಗ್ ಟೀಮುಗಳ ಮತ್ತು ಅವರಲ್ಲಿನ ಆಟಗಾರರ ಬಗ್ಗೆ ಅಧಿಕಾರಯುತವಾಗಿ ಮಾತಾಡುವಷ್ಟು ಫುಟ್ ಬಾಲ್ ಜ್ಞಾನ ಸಂಪಾದಿಸಿದ್ದ ನನ್ನ ಮಗನೊಂದಿಗೆ ಚರ್ಚಿಸುತ್ತಿದ್ದ ಅವ ಲಿವರ್‍ಪೂಲ್ ಟೀಮಿನ ಫ್ಯಾನು. ನನ್ನ ಮಗ ಅವರ ತದ್ವಿರುದ್ಧ ಮ್ಯಾಂಚೆಸ್ಟರ್ ಯುನೈಟೆಡ್‍ನ ಫ್ಯಾನು. (ಅದನ್ನಿನ್ನೂ ಬಿಟ್ಟಿಲ್ಲ ಅವನು. ಮ್ಯಾಂಚೆಸ್ಟರ್ ಯುನೈಟೆಡ್‍ನವರು ಆಡುವ ಮ್ಯಾಚ್ ಇದೆಯೆಂದರೆ ಒಂದೂವರೆ ಗಂಟೆಗಳ ಕಾಲ ಪ್ರಳಯವೇ ಆದರೂ ಅವನು ಟೀವಿಯನ್ನು ಬಿಟ್ಟು ಈಚೆ ಬರುವುದಿಲ್ಲ) ಮೇಷ್ಟರೆನ್ನುವ ಮುಲಾಜೂ ಇಲ್ಲದೆ ಸೇರಿಗೆ ಸವಾ ಸೇರಾಗಿ ಅವರೊಂದಿಗೆ ವಾದಕ್ಕಿಳಿಯುತ್ತಿದ್ದ.

ಅಂತಹ ಮೇಷ್ಟ್ರು ಅವರ ಮೆಚ್ಚಿನ ಆಟಗಾರನೊಬ್ಬ ಲಿವರ್‍ಪೂಲ್ ತಂಡ ಬಿಟ್ಟು ಮ್ಯಾಂಚೆಸ್ಟರ್ ಯುನೈಟೆಡ್ ಟೀಮನ್ನು ಸೇರಿದಾಗ ಮುಖ ತೀರ ಚಿಕ್ಕದು ಮಾಡಿಕೊಂಡು ಎಂಟು ವರ್ಷದ ತನ್ನ ಶಿಷ್ಯನೊಂದಿಗೆ ಸೋಲನ್ನೊಪ್ಪಿಕೊಂಡಿದ್ದ. ಅಂತಹ ಮಿ. ಎಲ್ಲಿಸ್ ಕಾಲ ಕಾಲಕ್ಕೆ ತಪ್ಪದೆ ನಡೆಯುವ ಪೇರೆಂಟ್ಸ್ ಮೀಟಿಂಗ್ ಒಂದರಲ್ಲಿ ನನ್ನೊಡನೆ `ನಿಮ್ಮ ಮಗನಲ್ಲಿ ಭವಿಷ್ಯತ್ತಿನ ಐನ್‍ಸ್ಟೀನ್‍ನನ್ನು ಕಾಣುತ್ತಿದ್ದೇನೆ’ ಎಂದು ಭಾವುಕನಾಗಿ ಹೇಳಿದ್ದ. ಆಗಲೇ ಲೆಕ್ಕ ಮತ್ತು ಸೈನ್ಸ್ ನಲ್ಲಿ ಕ್ರಮವಾಗಿ 13 ಮತ್ತು 14ರ ವಯಸ್ಸಿನವರಷ್ಟು ಮಾನಸಿಕ ಬೆಳವಣಿಗೆಯನ್ನು ತಲುಪಿದ್ದ ಮಗನ ಬಗ್ಗೆ ಹೆಮ್ಮೆಯೆನಿಸಿತ್ತು. ಆದರೆ ಮುಂದೊಂದು ವರ್ಷದಲ್ಲಿಯೇ ಭಾರತಕ್ಕೆ ನಮ್ಮೊಂದಿಗೆ ಹಿಂದಿರುಗಿದ ನನ್ನ ಮಗನ ಒಳಗಿದ್ದ ಐನ್‍ಸ್ಟೀನ್ ಈ ದೇಶಕ್ಕೆ ಕಾಲಿಟ್ಟ ತಿಂಗಳಿನಲ್ಲಿಯೇ ಸತ್ತು ಹೋಗಿದ್ದ. ಅಲ್ಲ. ಎಲ್ಲ ಸೇರಿ ಕೊಂದುಬಿಟ್ಟಿದ್ದರು.

ಈ ಭಾರತದ ಮಣ್ಣಿನಲ್ಲಿ ಐನ್‍ಸ್ಟೀನ್ ಹೇಗೆ ತಾನೇ ಬದುಕಬಲ್ಲ… ಬೆಳೆಯಬಲ್ಲ ಹೇಳಿ! ನಾಲ್ಕು ಶಬ್ದಗಳ ವಾಕ್ಯವನ್ನು ಸರಿಯಾಗಿ ಇಂಗ್ಲೀಷಿನಲ್ಲಿ ಬರೆಯಲು ಬಾರದ ಇಂಗ್ಲೀಷು ಮೇಷ್ಟರುಗಳು. ಪುಸ್ತಕದಲ್ಲಿನ ಸುಲಭದ ಲೆಕ್ಕಗಳನ್ನು ತಾವೇ ಬೋರ್ಡಿನ ಮೇಲೆ ಬಿಡಿಸಿ ಕಷ್ಟದವುಗಳನ್ನು ಮಕ್ಕಳಿಗೇ ಬಿಡುವ ಲೆಕ್ಕದ ಮೇಷ್ಟರು. ಬುನ್‍ಸನ್ ಬರ್ನರ್ ಹತ್ತಿಸಲಿಕ್ಕೆ ಬಾರದ ವಿಜ್ಞಾನ ಮೇಷ್ಟರುಗಳು. ಇಂತಹವರ ಹತ್ತಿರ ಕಲಿಯುವ ನಮ್ಮ ಮಕ್ಕಳು ಐನ್‍ಸ್ಟೀನ್ ಆಗುವ ಕನಸು ಕಾಣಲು ಸಾಧ್ಯವೇ. ವರ್ಷದ ಮೊದಲಿಗೆ ಮತ್ತು ನಂತರ ಪ್ರತಿ ಮೂರು ತಿಂಗಳಿಗೆ ಸಾವಿರ ಸಾವಿರಗಳಲ್ಲಿ ವಸೂಲಿ ಮಾಡುವ ಹಣ ದಾಹದ ಸಂಸ್ಥೆಗಳು ಐನ್‍ಸ್ಟೀನ್‍ರಂತಹವರನ್ನು ಸೃಷ್ಟಿಸಿಯಾವೆ.. ಬೆಳೆಸಿಯಾವೆ?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Avadhi

December 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: