ಜಯಂತ ಕಾಯ್ಕಿಣಿ ಅವರಿಗೊಂದು ಪತ್ರ…

ಎದೆಯೊಳಗೆ ರೈಲೊಂದು ಓಡಿದೆ…

ಸದಾಶಿವ್ ಸೊರಟೂರು

ಜಯಂತ ಕಾಯ್ಕಿಣಿ ಸರ್, 

ನಾನೆಂದೂ ನಿಮ್ಮನ್ನು ಕ್ಷಮಿಸಲಾರೆ. ನೀವು ನನ್ನ ಎದೆಯೊಳಗೆ ಅದೆಷ್ಟು ಟ್ರೈನ್ಗಳನ್ನು ನುಗ್ಗಿಸಿದ್ದೀರಿ. ಅದರಲ್ಲೂ ಮುಂಬಯಿ ಲೋಕಲ್ ಟ್ರೈನ್ ಗಳನಂತೂ ಲೆಕ್ಕವಿಲ್ಲದೆ ಹಾಯಿಸಿದ್ದೀರಿ. ಹೀಗೆ ಬರೆದುಕೊಂಡು ನಿಮ್ಮ ಮೇಲೆ ಒಂದು ಮುದ್ದಾದ ಜಿದ್ದನ್ನು ತೀರಿಸಿಕೊಳ್ಳುತ್ತಿದ್ದೇನೆ. ನನ್ನ ಎದೆಯೊಳಗಿರುವುದು ರೈಲಿನ ದಢದಢ ಸದ್ದೊ; ಹೃದಯದ ಡಬಡಬ ಸದ್ದೊ ನನಗೆ ಅದರ ಅಂದಾಜು ಸಿಗುತ್ತಿಲ್ಲ. 

ಹದಿನೇಳು ವರ್ಷಗಳ ನನ್ನ ಸತತ ಪ್ರಯಾಣದ ಕಾಲಮಾನವನ್ನು before general bogie ಮತ್ತು after general bogie ಅಂತ ಬದಲಾಯಿಸಿಕೊಂಡಿದ್ದೇನೆ. ಅದು ನನ್ನ ಬದುಕಿನ ಹೊಸ ಬೈ ಲೈನ್. ನೀವು ರೈಲಿನ ನೆಪದಲ್ಲಿ ನನ್ನೊಳಗೊಂದು ಹೊಸ ಉಗಮವೊಂದನ್ನು ದಯಪಾಲಿಸಿದಿರಿ. ನಾನು ನಿಮಗೆ ಋಣಿ. 

ಗುಲ್ ಮೊಹರ್ ಪುಸ್ತಕದಲ್ಲಿ ಅಹೋಬಲರ ಕುರಿತಾಗಿ ನೀವೇ ಬರೆದ ಒಂದು ಸಾಲು ಹೀಗಿದೆ. ‘ಐಹಿಕ ರೋಗಕ್ಕೆ ತುತ್ತಾಗಿ ಬದುಕಿನ ರುಚಿಯನ್ನು ಕಳೆದುಕೊಂಡಿರುವ ನಮಗೆ ಇಂಥ ಓದೇ ಜ್ಯೇಷ್ಠ ಮಧು!’ ಎನ್ನುತ್ತೀರಿ. ನಿಜಕ್ಕೂ ನನಗೆ ಬದುಕಿನ ರುಚಿ ಹತ್ತಿದ್ದು ನಿಮ್ಮ ಓದಿನಿಂದ. ನನ್ನ ಗೆಳೆತಿಯೊಬ್ಬಳು ಏಳೆಂಟು ವರ್ಷಗಳ ಹಿಂದೆ ನಿಮ್ಮ ‘ತೂಫಾನ್ ಮೇಲ್’ ಮತ್ತು ‘ಒಂದು ಜಿಲೇಬಿ’ ಪುಸ್ತಕ ಕಳುಹಿಸಿಕೊಟ್ಟಿದ್ದಳು. ನಿಮ್ಮ ಪುಸ್ತಕ ಅನ್ನುವುದಕ್ಕಿಂತ ಅವಳು ಕೊಟ್ಟ ಪುಸ್ತಕ ಅನ್ನುವ ಕಾರಣಕ್ಕಾಗಿ ಓದ ತೊಡಗಿದೆ. ರುಚಿ ಯಾವ ಪರಿ ಸೆಳೆಯಿತು ಅಂದ್ರೆ ನಿಮ್ಮ ಅಷ್ಟೂ ಪುಸ್ತಕಗಳನ್ನು ಕೊಂಡು ತಂದೆ. ಸಂಜೆ ಶಾಲೆಯಿಂದ ಬಂದ ಮಗುವೊಂದು ಸಕ್ಕರೆ ಡಬ್ಬಿಯಲ್ಲಿನ ಅಷ್ಟೂ ಸಕ್ಕರೆಯನ್ನು ಮುಕ್ಕುವಂತೆ ನಿಮ್ಮ ಬರಹಗಳನ್ನು ಸವಿದು ಹಾಕಿದೆ. ಮತ್ತೆ ಮತ್ತೆ ಓದಿದೆ. ಮುಂಬಯಿ ಲೋಕಲ್ ಟ್ರೈನ್ ಗಳನ್ನು ಮತ್ತೆ ಮತ್ತೆ ಹಾಯಿಸಿಕೊಂಡೆ. ಬದುಕನ್ನು ಬಿಚ್ಚಿ ತೋರಿಸುವ ರೈಲ್ವೆ ಜಗತ್ತನ್ನು ಹುಡುಕಿ ಹೊರಟೆ! 

‘ಬೊಗಸೆಯಲ್ಲಿ ಮಳೆ’ ಪುಸ್ತಕದ ಅರ್ಪಣೆಯಲ್ಲಿ ನೀವು ‘ಸೀಸನ್ ಪಾಸು, ಬಾಚಣಿಗೆ, ಬುತ್ತಿಯ ಪುಟ್ಟ ಚಪ್ಪಟೆಯ ಡಬ್ಬಿಯೊಂದಿಗೆ, ಪ್ಲಾಟ್ ಫಾರ್ಮಿನ ಮೇಲೆ ಓಡುತ್ತೋಡುತ್ತ ಇಕೋ ಇಂದಿನ ದೈನಿಕದ ಲೋಕಲ್ ರೈಲೊಳಗೆ ಫಕ್ಕನೆ ಸೇರಿಕೊಂಡ ಮುಂಬಯಿಯ ಅನಾಮಿಕ ನಿತ್ಯಯಾತ್ರಿಗೆ..’  ಎಂದು ಬರಿಯುತ್ತೀರಿ. ಆ ಅನಾಮಿಕ ಯಾತ್ರೆ ನಾನೇ ಇರಬಹುದು ಅಂದುಕೊಳ್ಳುತ್ತೇನೆ.ಅಲ್ಲಿ ಮುಂಬಯಿಯ ಬದಲು‌ ಇಲ್ಲಿ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಅಥವಾ ಶಿವಮೊಗ್ಗದಲ್ಲಿ ರೈಲು ಹತ್ತಿ ಹೊರಟ ಬಿಡುವ ನಾನೇ ಆ ಅನಾಮಿಕ. 

ಚಾರ್ ಮಿನಾರ್ ಕಥೆಯಲ್ಲಿ ಬರುವ ನೈಋತ್ಯ ಪಾತ್ರದೊಂದಿಗೆ ನಾನು ಹೆಚ್ಚು ಗುರುತಿಸಿಕೊಳ್ಳುತ್ತೇನೆ. ಅಲ್ಲಿ ಬರುವ ರೈಲಿನ ವಿವರಣೆಗಳೇ ಹುಚ್ಚು ಹಿಡಿಸುತ್ತವೆ. ಆ ಮುಗ್ಧ ಮಕ್ಕಳು ರೈಲಿನ ಮೋಹಕ್ಕೆ ಒಳಗಾದಂತೆ ನಾನೂ ಸೆಳೆಯಲ್ಪಟ್ಟಿದ್ದೀನಿ. 

ರೈಲ್ವೆ ಪ್ಲಾಟ್ ಫಾರ್ಮಿನ ಬೆಂಚೊಂದರಲ್ಲಿ‌ ಕೂತಿರುವ ಹುಡುಗ-ಹುಡುಗಿ ಪೋಪಟ್- ಅಸಾವರಿ ಲೋಖಂಡೆ ಇರಬಹುದಾ ಅಂತ ಯೋಚಿಸುತ್ತೇನೆ. ಅಲ್ಲಿಯೇ ರೈಲಿನ ಸದ್ದಿಗೂ ಮೌನದ ಹೊದಿಕೆ ಹೊದಿಸುತ್ತೀರಿ. ಸದ್ದು ಕೂಡ ಒಂದು ಮೌನವೇ!. ಬೊಗಸೆಯಲ್ಲಿ ಮಳೆ ಪುಸ್ತಕದಲ್ಲಿ ಮುಂಬಯಿಂದ ಮೂರು ಮೂವತ್ತಕ್ಕೆ ಹೊರಡುವ ಮೊದಲ ಲೋಕಲ್ ರೈಲಿನ ಬಗ್ಗೆ ಬರೆಯುತ್ತೀರಿ. ಆ ಒಂದು ಚಿತ್ರಣ ಇಡೀ ಬದುಕಿನ ಚಿತ್ರಣವೇ ಆಗಿದೆ. ‘ಒಪೇರಾ ಹೌಸ್’ ಕಥೆಯಲಿ ನಡುರಾತ್ರಿ ವೇಳಿಗೆ ಥರ್ಮಾಪ್ಲಾಸ್ಕ್ ಹಿಡಿದು ಹೊರಡುವ ಇಂದ್ರನೀಲನಿಗೆ ಎಲ್ಲಿಂದಲೊ ಕೇಳಿಬರುವ ರೈಲಿನ ಸದ್ದು ಅವನ ನರ-ನಾಡಿಯೊಳಗೆ ನುಸುಳುವಂತೆ ಮಾಡುತ್ತೀರಿ. ಕಣ್ಮರೆಯ ಕಾಡಿನ ಕಥೆಯಲ್ಲಿ ಪುರುಳೇಕರ್ ತನ್ನ ಮಗನನ್ನು ಹುಡುಕುವ ನೆವದಲ್ಲಿ ರಾತ್ರಿ ಪ್ಲಾಟ್ ಫಾರ್ಮಿನಲ್ಲಿ ಮಲಗಿದವರ ಮುಖಗಳನ್ನು ಓದಿಕೊಳ್ಳುತ್ತಾನೆ. ದಾರುಣ ಬದುಕು ಕೂಡ ಅಲ್ಲಿ ಸೊಗಸಾಗಿ ಬರೆಯಲ್ಪಟ್ಟಿದೆ.

ಧನಂಜಯ, ಮಧುಬಾಲ ಕತೆಗಳಲ್ಲೂ ರೈಲುಗಳು ಹಾದು ಹೋಗುತ್ತವೆ. ವೇಗವಾಗಿ ಓಡುವ ರೈಲನ್ನು ಕಂಡಾಗ ನನಗೆ ತೂಫಾನ್ ಮೇಲ್ ಕತೆ ನೆನಪಾಗುತ್ತದೆ. ರೈಲು ಹೋದಮೇಲೆ ತೂಫಾನ್ ನ ಅಪ್ಪ ರೈಲಿನಿಂದ ಎಲ್ಲಾದರೂ ಜಿಗಿದರಬಹುದಾ ಎಂದು ಹುಡುಕುತ್ತೇನೆ. 

ನೀವು ಆಗಾಗ ಬಳಸುವ ಅಂಧೇರಿ, ಬೊರಿವಿಲಿ, ಠಾಣಾ, ವಿ.ಟಿ, ಚರ್ಚ್ ಗೇಟ್ ಇವು ನಮ್ಮ ಪಕ್ಕದ ಬೀದಿಯ ಏರಿಯಗಳೆಂದೆ ಭಾಸವಾಗುತ್ತವೆ. ಮೀನಿನ ಮಾರುಕಟ್ಟೆಯೊ, ಕಾಯಿಪಲ್ಯಯ ಅಂಗಡಿಯೊ ಅನ್ನುವಷ್ಟು ಸಲುಗೆ ಆ ಸ್ಥಳಗಳೊಂದಿಗೆ ನನ್ನನ್ನು ಬೆಸೆದಿವೆ. ಕತೆಗಳಲಿ ನಮ್ಮ ಉಸಿರಾಟದಷ್ಟೇ ಸಹಜವಾಗಿ ರೈಲುಗಳು ಓಡಿವೆ. ಸುಮ್ಮನೆ ಓಡದೆ ಬದುಕನ್ನು ತೆರೆದಿಟ್ಟು ಸಾಗಿವೆ. 

ನಿಮ್ಮ ಪುಸ್ತಕಗಳನ್ನು ಓದುವ ಮೊದಲು ನನಗೊಂದು ಹುಂಬತನವಿತ್ತು. ಎಸಿ ಬೋಗಿಯ ಮೇಲೆ ವಿಚಿತ್ರ ಮೋಹವಿತ್ತು. ಟು ಟಯರ್ ಎಸಿ ಬೋಗಿಯಷ್ಟೆ ನನ್ನ ಪಾಲಿಗೆ ಜರ್ನಿ ಕರುಣಿಸುವ ಲೋಕವಾಗಿತ್ತು. ರೈಲು ನಿಲ್ದಾಣದಲ್ಲಿ ನೆರೆಯುವ ಜನರ ಮಧ್ಯೆ ನನ್ನಷ್ಟಕ್ಕೆ ನಾನೇ ವಿಶೇಷವಾಗಿ ಬೀಗುತ್ತಿದ್ದೆ. ನನ್ನದು ಎಸಿ ಬೋಗಿ ಅನ್ನುವ ಹುಚ್ಚು ಬಿಗುಮಾನವಿತ್ತು. ಮೆತ್ತನೆಯ ಹಾಸಿಗೆ ಮೇಲೆ ಮಲಗಿ‌ ಮುರುಕು ಕನಸುಗಳನ್ನು ಕಾಣುವುದು, ವೃದ್ದರ ಕೆಮ್ಮುಗಳಿಗೆ ಕಿವಿಯಾಗುವುದು. ಒಂದು ನಿರ್ಜೀವ ಮೌನಕ್ಕೆ ಒಗ್ಗುವುದು. ವಿಚಿತ್ರ ಶೋಕಿಯನ್ನು ಆವಾಹಿಸಿಕೊಂಡವನಂತೆ ರಾತ್ರಿಯೆಲ್ಲಾ ಬೀಗುವುದು. ಮುಂಜಾನೆಗೆ ಟ್ರೈನ್ ಇಳಿಯುವಾಗ ಎದೆ ಸೆಟೆಸಿಕೊಂಡು ಒಂದು ಅಹಂ ಧರಿಸುವುದು, ಇವರೆಲ್ಲರಿಗಿಂತ ನನ್ನ ಜಗತ್ತು ಬೇರೆಯದೆ ಎಂದು ಭಾವಿಸುವುದು. ಇಳಿದು ಹೋಗುತ್ತಿರುವವರ ಕಥೆಗಳಿಗೂ ನನ್ನ ಕಥೆಗೂ ಎಲ್ಲಿಯ ಹೋಲಿಕೆ ಎಂದು ಮೂಢ ಲಹರಿಯಲಿ ತೇಲುತ್ತಾ ಹೋಗುವುದು.. ಇದು ನನ್ನ ಪಾಲಿನ ಪ್ರಯಾಣದ ದಿನಚರಿಯಾಗಿತ್ತು. 

ಬರೀ ಓದಿನಿಂದ ಅಂತ ಆಕರ್ಷಣೆಯೊಂದು ಮೂಡುತ್ತದಾ? ಅನ್ನುವ ಪ್ರಶ್ನೆಗೆ ಹೌದು ಖಂಡಿತ ಸಾಧ್ಯವಾಗುತ್ತದೆ ಅನ್ನುವುದು ನನ್ನ ಅನುಭವದಿಂದ ದಕ್ಕಿದ ಉತ್ತರ. ಓದಿನಿಂದ ಏನೆಲ್ಲವೂ ಸಾಧ್ಯವಾಗಿರುವಾಗ ಇದು ಸಾಧ್ಯವಾಗದೆ ಇರುವುದೆ? ನಿಮ್ಮ ಚಾರ್ ಮಿನಾರ್ ಕತೆಯಲ್ಲಿ ಬರುವ ಮಕ್ಕಳು ರೈಲಿನ ಮೇಲೆ ಒಂದು ಮೋಹ ಬೆಳೆಸಿಕೊಳ್ಳುವ ರೀತಿ ನನ್ನನ್ನು ಎಬ್ಬಿಸಿಕೂರಿಸಿತ್ತು. ದುಡಿಯುವ ಜರೂರತ್ತು ಇಲ್ಲದ ಮಕ್ಕಳು ರೈಲಿನ ಚುಂಬಕ ಶಕ್ತಿಗೆ ಮನೆ ಬಿಟ್ಟು ಬಂದು ಏನಾದ್ರೂ ದುಡಿಯುವ ಹುಕಿಗೆ ಬೀಳುತ್ತಾರಲ್ಲ ಅಂತದ್ದೆ ಹುಕಿಗೆ ನಾನು ಬಿದ್ದೆ. 

ರೈಲಿನ ಲೋಹದ ಘಾಟು, ಹಳಿಗಳ ಮೇಲೆ ತೀಡುವ ಕ್ರೀಚ್ ಕ್ರೀಚ್ ಸದ್ದು, ಭಾರೀ ಸದ್ದಿನ ಡೀಸೆಲ್‌ ಎಂಜಿನ್, ಒಂದು ನೀರವತೆಯನ್ನು ಸೀಳುವ ಅದರ ಕೂಗು ಇವೆಲ್ಲಕ್ಕೂ ಸುಮ್ಮನೆ ಮನಸ್ಸು ತೆರೆದು ಕೂತು ಹೃದಯದಿಂದ ನೋಡಿದ್ದೆ. ಕಿಂದರಿಜೋಗಿಯಂತೆ ನನ್ನನ್ನು ಸೆಳೆದುಕೊಂಡು ಹೊರಟೆ ಬಿಟ್ಟಿತು ಅದ್ಭುತ ಲೋಕವನ್ನು ತೋರಿಸಲು. 

ಅದೊಂದಿನ ಟಿಕೆಟ್ ಕೊಂಡು ಜನರಲ್ ಬೋಗಿಯಲ್ಲಿ ಕೂತುಕೊಂಡೆ. ಎರಡ್ಮೂರು ನಿಲ್ದಾಣ ದಾಟುತ್ತಲೇ ಹೊರಗಿನ ಸಮಾಜದ ಒಂದು ಸ್ಯಾಂಪಲ್ ಅಲ್ಲಿ ತೆರೆದುಕೊಂಡಿತು. ಅದೆಲ್ಲವನ್ನೂ ನೀವು ತೆರೆಸಿದ ಕಣ್ಣುಗಳಿಂದಲೇ ನೋಡಿದೆ. ಯಾವುದೇ ಪದಮಿತಿಯಿಲ್ಲದ, ರೂಪಕಗಳ ಗೊಡವೆ ಇಲ್ಲದ, ಉಪಮೆಗಳ ಹಂಗಿಲ್ಲದ ಖಾಸ ಅಸಲಿ ಕಥೆಗಳು ಒಬ್ಬೊಬ್ಬರ ಮುಖದಲ್ಲೂ ಒಂದೊಂದು. ಪಿಯ್ಯಾಂ ಪಿಯ್ಯಾಂ ಅನ್ನುವ ಬೂಟು ತೊಟ್ಟ ಕಂದನಿಂದ ಹಿಡಿದು ಸುಕ್ಕುಗಳಿಂದಲೇ ಸಿಂಗಾರಗೊಂಡ ವೃದ್ದರವರಿಗೂ ಅಲ್ಲಿದ್ದರು. ಒಬ್ಬರ ಮುಖದಲ್ಲೂ ಒಂದೊಂದು ನೋವು, ಖುಷಿ, ಸಂಕಟ, ನಗು, ಚಡಪಡಿಕೆ, ಆತಂಕ, ತಲ್ಲಣ ಅಬ್ಬಾ ಎಷ್ಟೊಂದು ಭಾವಗಳು ಈ ಬದುಕಿಗೆ. ಮನೆ ಬಿಟ್ಟವರು, ಮನೆ ಸೇರುವವರು, ಪ್ರೀತಿಯಲಿ ಅದ್ದಿದ ತರುಣಿಯರು, ಕೀಟಲೆಯ ತರುಣರು, ಗಂಟಲಿಗೆ ಟೈ ಬಿಗಿದುಕೊಂಡ ಸಾಫ್ಟ್‌ವೇರ್ನವ, ಮಾಸಲು ಮಾಸಲು ಬಟ್ಟೆಯಲ್ಲೆ ಬಂದಿರುವ ಹಳ್ಳಿಯವ, ಕಿವಿಗೆ ಹೆಡ್ಫೋನ್ ತೂರಿಸಿಕೊಂಡು ಆಶರೀರವಾಣಿಗೆ ಕಿವಿಗೊಟ್ಟು  ಕಿಟಕಿಯಿಂದ ಬರುವ ಅಷ್ಟೂ ಗಾಳಿಯನ್ನು ಕುಡಿದು ಬಿಡುವಂತೆ ಕೂತವ, ಕಾದಂಬರಿ, ದೈನಿಕ ಓದುವವರು, ತೂಕಡಿಸುವವರು, ನನ್ನಂತೆಯೇ ಎಲ್ಲರ ಮುಖಗಳಿಂದ ಅದೇನನ್ನೊ ಆಯ್ದುಕೊಂಡು ಬ್ಯಾಗಿನೊಳಗಿ ತುಂಬಿಕೊಳ್ಳುವಂತೆ ಕೂತವರು.. ಹೇಳಿ ಯಾರು ಬೇಕು ನಿಮಗೆ ಅಲ್ಲಿ? ಎಲ್ಲರೂ ಸಿಗುತ್ತಾರೆ. ಜಸ್ಟ್ ಒಂದು ಬೋಗಿಯಲ್ಲಿ. 

‘ಚಾಯ್ ಚಾಯ್.., ಕಾಫಿರೇ ಕಾಫಿರೇ…, ಇಡ್ಲಿ ಇಡ್ಲಿ…, ವಡಾ ವಡಾ ಮದ್ದೂರು ವಡಾ.., ಯಾರ್ರೀ ಚುರುಮುರಿ-ಚುರುಮುರಿ ಇಲ್ಲಿ.., ಯಾರಿಗಿಲ್ಲ ನೋವಿಲ್ಲ ಯಾರಿಗಿಲ್ಲ ಸಾವಿಲ್ಲ.. ಅಂತ ಹಾಡುವ ದನಿ ಮತ್ತು ಚಾಚಿದ ಕೈ.. ಬಟ್ಟೆಯನ್ನು ಹರಾಜು ಹಾಕುವವರು, ಅಡುಗೆ ಪುಸ್ತಕ ಮಾರುವವರು ಇಂತಹ ನೂರೆಂಟು  ದುಡಿತದ ಜಗತ್ತು ಇನ್ನೊಂದು ಪುಳಕ. 

ಸತತ ಹತ್ತು ವರ್ಷಗಳಿಂದ ಹೀಗೆಯೇ ಅಲೆಯುತ್ತಿದ್ದೇನೆ; ಸಿರ್ಫ್ ಜನರಲ್ ಬೋಗಿಯಲ್ಲಿ!. ಕಥೆ ಓದುವುದು ಕಡಿಮೆಯಾಗಿದೆ. ಕಣ್ಣಿನ ಎದುರಿಗೇ ತಾಜಾ ತಾಜಾ ಕಥೆಗಳಿರುವಾಗ ಇನ್ಯಾವ ಕಥೆಗಳು ಬೇಕು? ಬೇಜಾರಾದಾಗ ಒಂದು ಪ್ಲಾಟ್ ಫಾರಂ ಟಿಕೆಟ್ ಕೊಂಡು ಮೆಜೆಸ್ಟಿಕ್ಕಿಗೆ ಇಳಿಯುತ್ತೇನೆ. ಹತ್ತೂರು ರೈಲುಗಳಿಂದ ಹೆರಿಗೆಯಾಗುವ ಸಾವಿರಾರು ಹೆಸರುಗಳು ಹಾಗೆ ಹಾಗೆ ಮರೆಯಾಗುತ್ತವೆ.

ಹಳ್ಳಿಯಿಂದ ಚೀಲಗಳಲಿ ಬಡತನವನ್ನು ತುಂಬಿಕೊಂಡು ಬಂದು ಇಲ್ಲಿ ಇಷ್ಟಿಷ್ಟೆ ಸವೆಸುವ ಹಟವನ್ನು ಹುಡುಕುತ್ತೇನೆ ಅವರ ಕಣ್ಣುಗಳಲಿ. ತಪ್ಪಿದ ರೈಲಿಗಾಗಿ, ಬಾರದ ರೈಲಿಗಾಗಿ, ಬರಬಹುದಾದ ರೈಲಿಗಾಗಿ ಚಡಪಡಿಸುತ್ತಾ ಕೂತವರ ಮುಖಗಳನ್ನು ಓದಿಕೊಳ್ಳುತ್ತೇನೆ. ಅಲ್ಲಿ ಮಲಗಿ ತಮ್ಮ ಪಾಲಿನ ಜಾಗತಿಕ ದಿನವನ್ನೂ ಕಳೆಯುವ ಅತೀ ದಾರಾಳಿಯೂ ಅಲ್ಲಿ ಸಿಗುತ್ತಾನೆ. ಬರೀ ಒಂದೆ ಒಂದು ರೈಲು ಬರುವ ಚಿಂತಾಮಣಿಯಂತಹ ರೈಲು ನಿಲ್ದಾಣದ್ದು ಮತ್ತೊಂದು ಸೊಗಸು. ಸಂಜೆ ಅಪ್ಪ ತರುವ ತಿಂಡಿಗಾಗಿ ಕಾದು ಕುಳಿತ ಸೊಬಗು ಅದರದು. 

ರೈಲುಗಳ ಹೈಬ್ರಿಡ್ ತಳಿಯಂತಿರುವ ಮೆಟ್ರೊ ನನ್ನನ್ನು ಈ ಪರಿ ಸೆಳೆಯಲೆ ಇಲ್ಲ. ಗುಮ್ಮನಗುಸಕನಂತೆ ಬಂದು ಓಡಿ ಹೋಗುವ ಅದಕ್ಕೆ ಅಂತಹ ಆಕರ್ಷಣೆಗಳು ಇಲ್ಲ. ಮೆಟ್ರೊ ತುಂಬಾ ಬರೀ ಮೊಬೈಲ್ ನೋಡುತ್ತಲೇ ಪ್ರತಿಯೊಬ್ಬರೂ ಒಂದೊಂದು ದ್ವೀಪದಂತೆ ಹತ್ತಾರು ನಿಮಿಷ ಇದ್ದು ಹೋಗುವ ಅಲ್ಲಿ ಬದುಕು ಕೂಡ ತನ್ನ ಗರಿಬಿಚ್ಚಲು ಹಿಂದೇಟು ಹಾಕುತ್ತದೆಯೇನೊ!

ಸಣ್ಣ ಬೇಸರ ಕಾಡಿದಾಗ ಯಾವುದಾದರೂ ಒಂದು ರೈಲು ನಿಲ್ದಾಣಕ್ಕೆ ನುಗ್ಗುತ್ತೇನೆ. ಅದು ಬೇರೆಯದೆ ಪ್ರಪಂಚ. ಆಚೆಗಿನ ಜಗತ್ತಿಗೆ ಸಂಬಂಧವೇ ಇಲ್ಲದಂತೆ ಉಳಿದು ಬಿಡುತ್ತದೆ. ಹಳದಿ ಬಣ್ಣದ ಬೋರ್ಡ್ ಮೇಲಿನ ಕಪ್ಪ ಅಕ್ಷರದಿಂದ ಮೂರು ಭಾಷೆಯಲ್ಲಿ ಬರೆಯಲ್ಪಟ್ಟ ಊರಿನ ಹೆಸರುಗಳೇ ಒಂದು ವಿಶೇಷ ಆಕರ್ಷಣೆ, ರೈಲು ಬರುವ ಹೊತ್ತಿಗೆ ಒಂದು ಚಿಲ್ ಎನ್ನುವ ಮ್ಯೂಸಿಕ್ ನೊಂದಿಗೆ ವಿವರಣೆಗಳನ್ನು ಹೇಳುವ ಹುಡುಗಿ ನಮ್ಮನ್ನು ಬೇರೆಯದ ಲೋಕಕ್ಕೆ ಕರೆಯುತ್ತಾಳೆ. ಬರುವ ರೈಲುಗಳಿಗಾಗಿ ಬೆನ್ನು ಮೇಲೆ ಮಾಡಿಕೊಂಡು ಮಲಗಿರುವ ಹಳಿಗಳು ಇಡೀ ನಿಲ್ದಾಣಕ್ಕೊಂದು ಕಳೆ ತರುತ್ತವೆ. ಪ್ರತಿಬಾರಿಯೂ ಅದು ಹೊಸ ಜಗತ್ತು ; ನಿತ್ಯಂ ಪೊಸತು! 

ಸುಮ್-ಸುಮ್ಮನೆ ಒಂದು ಸೀಸನ್ ಪಾಸ್ ಕೊಳ್ಳುತ್ತೇನೆ. ನನ್ನ ಸಂಭ್ರಮದಿಂದಲೇ ಅದಕ್ಕೊಂದು ಜೀವ ಬಂದು ಬಿಡುತ್ತದೆ. ರೈಲು ಹತ್ತದಿದ್ದರೂ ಆ ಪಾಸ್ ನೊಳಗಿನಿಂದ ಹತ್ತಾರು ರೈಲುಗಳು ಮನಸಿನೊಳಗೆ ಹಾದು ಬರುತ್ತವೆ. ಹಿತವಾದ ಕಚಗುಳಿ ಅದು. ರೈಲಿನ ಅದ್ಬುತ ಜಗತ್ತಿನೊಳಗೆ ನಾನು ನುಗ್ಗಲು ನಿಮ್ಮ ಬರವಣಿಗೆ ನನಗೆ ಒಂದು ‘ಸೀಸನ್ ಪಾಸ್’. ಅಂತಹ ಪಾಸ್ ಕರುಣಿಸಿದ ನಿಮಗೆ ನಾನು ಎಂದಿಗೂ ಕೃತಜ್ಞ. 

ನಮಸ್ಕಾರಗಳು. 

‍ಲೇಖಕರು Admin

December 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: