ಪಾರ್ವತಿ ಜಿ ಐತಾಳ್ ಓದಿದ- ಕಾಂಚನಸೀತ…

 ಕಾಂಚನಸೀತ ಮತ್ತು ಮೋಹಮುಕ್ತಿ

ಪಾರ್ವತಿ ಜಿ ಐತಾಳ್

ಸುಮಾರು ಐವತ್ತು ವರ್ಷಗಳಿಂದ ಕೆನಡಾ ನಿವಾಸಿಯಾಗಿದ್ದು ಮೈಸೂರಿನಿಂದ ಅಲ್ಲಿಗೆ ಹೋಗಿ ನೆಲೆಸಿ ಮದುವೆ, ಕುಟುಂಬ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಈಗ ವಿಧುರರೂ ವೃದ್ಧರೂ ಆಗಿರುವ ವೆಂಕಟಸುಬ್ಬರಾಯರು ಇದರ ಪ್ರತಿನಾಯಕ. ಹಲವು ವರ್ಷಗಳಿಂದ ಸ್ವದೇಶವನ್ನೂ ಸ್ವಜನರನ್ನೂ ಮರೆತಂತೇ ಇದ್ದ ರಾಯರಿಗೆ ಇದ್ದಕ್ಕಿದ್ದಂತೆ ಯಾವುದೋ ರೆಸ್ಟುರಾದಲ್ಲಿ  ತನ್ನ ಬಾಲ್ಯದ ಗೆಳತಿ ಕಾಂಚನಾಳನ್ನು ಹೋಲುವ ಓರ್ವ ಸ್ತ್ರೀಯನ್ನು ಕಂಡುದೇ ನೆಪವಾಗಿ ಅವಳಿಗೆ ಅಂದು ‘ತಾನು ಮತ್ತೆ ಬರುವೆನೆಂದು’ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಉದ್ದೇಶವಿಟ್ಟುಕೊಂಡು ಅವರಿಬ್ಬರೂ ಮೊದಲು ವಾಸಿಸುತ್ತಿದ್ದ ಚಾಮರಾಜನಗರಕ್ಕೆ ಬಂದಿಳಿಯುತ್ತಾರೆ. ಪಾರ್ವತಿ ಜಿ ಐತಾಳ್

ಅಲ್ಲಿಂದ ಮುಂದೆ ಅವಳಿಗಾಗಿ ನಡೆಸುವ ಹುಡುಕಾಟ, ಹಳೆಯ ಬಂಧು ಮಿತ್ರರ ಭೇಟಿ, ಅವರೊಂದಿಗಿನ ಹೊಸ ಅನುಭವಗಳು, ‘ಸುಬ್ಬ’ ತನ್ನ ಪ್ರೀತಿಯ ‘ಕಾಂಚಿ’ಯೊಂದಿಗೆ  ಕಳೆದ ಅಪೂರ್ವ ಕ್ಷಣಗಳ ಕಚಗುಳಿಯಿಡುವ ನೆನಪುಗಳೊಂದಿಗೆ ಕಥೆ ಮುಂದೆ ಸಾಗುತ್ತದೆ. ಕೊನೆಯಲ್ಲಿ ರಾಯರು ಕಾಂಚನಾಳನ್ನು ಭೇಟಿಯಾಗುತ್ತಾರೆಯೇ ಇಲ್ಲವೇ ಮತ್ತು ಇದರಿಂದ ಅವರಲ್ಲಾಗುವ ಬದಲಾವಣೆ ಏನು ಅನ್ನುವುದನ್ನು ದಾಖಲಿಸುವುದೇ ಕಥೆಯ ಉದ್ದೇಶ. ವಿದೇಶಕ್ಕೆ ಹಣಸಂಪಾದನೆಗಾಗಿ ಹೋಗಿ ಅಲ್ಲಿನ ಭೋಗಸುಖವೇ ಬದುಕೆಂದು ತಿಳಿದುಕೊಂಡ ಒಬ್ಬ ಭಾರತೀಯನ ಮನಸ್ಸು ಹೇಗೆ ಅಪ್ಪಟ ಭಾರತೀಯ ಚಿಂತನೆಗೆ ಹಿಂತಿರುಗುತ್ತದೆ ಅನ್ನುವುದನ್ನು ತೋರಿಸುವುದೇ ಲೇಖಕರ ಉದ್ದೇಶವಾಗಿ ಕಾಣುತ್ತದೆ.

ವಿದೇಶದಲ್ಲಿ ತಾನು ಬದುಕಿದ ಥಳಕು ಬಳುಕಿನ ಭೋಗಮಯ ಪರಿಸರಕ್ಕಿಂತ ಸ್ವದೇಶದಲ್ಲಿರುವ ಬಂಧು ಬಳಗದವರ ಅಪ್ಪಟ ಪ್ರೀತಿಯಲ್ಲಿ ಹೆಚ್ಚು ಸುಖವಿದೆ ಎಂಬ ರಾಯರ ಅರಿವು ಕಥೆಯುದ್ದಕ್ಕೂ ಹರಿಯುತ್ತದೆ. ಅದರೆ ಈ ಬಾಂಧವ್ಯಕ್ಕೆ ಕಾರಣ ಪಾಶ್ಚಾತ್ಯ ಸಂಸ್ಕೃತಿ ನಕಾರಾತ್ಮಕವೆಂದೋ ಭಾರತೀಯ ಸಂಸ್ಕೃತಿ ಸಕಾರಾತ್ಮಕವೆಂದೋ ಲೇಖಕರಲ್ಲಿ ಮೂಡಿದ ಭಾವನೆಯಲ್ಲ. ವೃದ್ಧಾಪ್ಯದ ಕಾಲದಲ್ಲಿ ಗತ ಬದುಕಿನ ಬಗ್ಗೆ ಮೂಡುವ ಒಲವು ಮನುಷ್ಯ ಸಹಜವಾದದ್ದು ಎಂದಷ್ಟೇ ತೋರಿಸುವುದಾಗಿದೆ.

ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಲೇಖಕರ ನಿಲುವು ನೇರವಾಗಿ ಎಲ್ಲೂ ವ್ಯಕ್ತವಾಗಿಲ್ಲದಿದ್ದರೂ ಹಲವು ದಶಕಗಳಿಂದ ಅಲ್ಲಿ ನೆಲೆಸಿದ ಕಾರಣದಿಂದ ಅಲ್ಲಿಯ ಸಂಸ್ಕೃತಿಗೆ ಅವರು ತಮಗರಿವಿಲ್ಲದೇ ಒಗ್ಗಿಕೊಂಡಿದ್ದಾರೆ ಅನ್ನುವುದು ಅಲ್ಲಲ್ಲಿ ಅಗತ್ಯವಿಲ್ಲದಾಗಲೂ ಬಳಸುವ ಇಂಗ್ಲಿಷ್ ಪದಗಳಿಂದ ಪ್ರಕಟವಾಗುತ್ತದೆ. ಆದರೆ ದೇವಸ್ಥಾನದಲ್ಲಿ ಸೇವೆ ಮಾಡಿಸುವಾಗ ಅವರ ನೆನಪಿನಲ್ಲಿ ಭದ್ರವಾಗಿ ಉಳಿದಿರುವ ಗೋತ್ರ-ನಕ್ಷತ್ರಗಳ ಹೆಸರುಗಳು ತಮ್ಮ ಬೇರುಗಳ ಬಗೆಗಿನ ಅವರ ಪ್ರೀತಿಯನ್ನು ತೋರಿಸುತ್ತದೆ. 

ಕಾಲದ ಹರಿವಿನೊಂದಿಗೆ ಸ್ವದೇಶದ ಪರಿಸರದಲ್ಲೂ ಸಾಕಷ್ಟು ಪಲ್ಲಟಗಳಾಗಿದ್ದರೂ ಆಂತರಿಕವಾಗಿ ಮನುಷ್ಯ ಸಂಬಂಧಗಳ ಸ್ವರೂಪ ಹಾಗೆಯೇ ಉಳಿದಿದೆ ಅನ್ನುವುದನ್ನು ರಾಯರು ಗುರುತಿಸುತ್ತಾರೆ. ರಾಯರಿಗೆ ರೈಲಿನಲ್ಲಿ ಪರಿಚಯವಾಗುವ ಸತ್ಯನ ಪ್ರಾಮಾಣಿಕತೆ ಮತ್ತು ಅಪರಿಚಿತರಿಗೂ ಸಹಾಯ ಮಾಡುವ ಗುಣ ಪ್ರಪಂಚದಲ್ಲಿ ಬೇರೆಲ್ಲೂ ಕಾಣ ಸಿಗದಂಥ ವಿಚಾರ. ಕಾಂಚನಾಳನ್ನು ಹುಡುಕಿ ಹಿಡಿಯುವಲ್ಲಿ ಸತ್ಯ ಮಾಡಿದ ಸಹಾಯ ಅಚ್ಚರಿ ಪಡುವಂಥದ್ದು.

ಕಾದಂಬರಿಯ ಘಟನೆಗಳು ಹಿಂಬೆಳಕಿನ ತಂತ್ರದ ಮೂಲಕ ನಿರೂಪಿತವಾಗಿವೆ. ಕಾಂಚನಾ ಸುಮಾರು ಅರ್ಧ ಭಾಗವನ್ನು ಆವರಿಸಿಕೊಂಡರೂ ಆಕೆ ನೇರವಾಗಿ ಕಾಣಿಸಿಕೊಳ್ಳುವುದು ಕೊಟ್ಟ ಕೊನೆಯ ಒಂದು ಮಬ್ಬು ಬೆಳಕಿನ ದೃಶ್ಯದಲ್ಲಿ. ಅದೂ ಆಕೆಯ ಹೊರ ಆಕೃತಿಯಷ್ಟೇ ಗೋಚರವಾಗುತ್ತದೆ. ಮುಖವಿಲ್ಲ. ಮಾತುಗಳೂ ಇಲ್ಲ. ಆಕೆ ಅಪಾರ ಆಸ್ತಿಯ ಒಡತಿಯಾಗಿದ್ದಳೆಂದೂ ವಿಧವೆಯಾದ ನಂತರ ತನ್ನೆಲ್ಲ ಆಸ್ತಿಯನ್ನು ಸಮಾಜ ಸೇವೆಗೆ ಬಳಸಿ ತಾನು ಸನ್ಯಾಸಿನಿಯಾಗಿ ದಿನದ ಬಹುಪಾಲು ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದಾಳೆ ಎಂಬ ಮಾಹಿತಿ ಆಕೆ ಜೀರ್ಣೋದ್ಧಾರ ಮಾಡಿಸಿದ ದೇವಸ್ಥಾನದ ಅರ್ಚಕರಿಂದ ಸಿಗುತ್ತದೆ.

ಆಕೆಯನ್ನು ಹುಡುಕಿ ಹಿಡಿಯುವ ಉತ್ಸಾಹ ರಾಯರಲ್ಲಿ ಎಷ್ಟು ಇರುತ್ತದೆ ಅಂದರೆ ಅವರು ತಮ್ಮ ಜೀವದ ಹಂಗು ತೊರೆದು ಆಳವಾದ ಹಾಗೂ ಜಾರುವ ನೆಲವಿರುವ ಗುಹೆಯೊಳಕ್ಕೆ ಕಾಲಿಟ್ಟು ನಂತರ ಹೊಸ ಹುಟ್ಟು ಪಡೆದವರಂತೆ ಅಲ್ಲಿಂದ ಪಾರಾಗಿ ಬರಿಗೈಯಲ್ಲಿ ಮರಳುತ್ತಾರೆ. ಕೊನೆಗೂ ಆಕೆ ಸಿಕ್ಕಾಗ ಎಲ್ಲವನ್ನೂ ಪರಿತ್ಯಜಿಸಿ ವಿರಾಗಿಣಿಯಾಗಿ ಧ್ಯಾನಸ್ಥಿತಿಯಲ್ಲಿದ್ದ ಆಕೆಯ ದರ್ಶನ ರಾಯರಲ್ಲಿ ಅದ್ಭುತ ಪರಿವರ್ತನೆಯನ್ನುಂಟು ಮಾಡುತ್ತದೆ. ಲೇಖಕರು ಇಲ್ಲಿ ಸ್ಪಷ್ಟವಾಗಿ ಏನೂ ಹೇಳದಿದ್ದರೂ  ಬಯಸಿದ್ದನ್ನು ಪಡೆದೇ ತೀರಬೇಕೆಂಬ ಮೋಹದಿಂದ ಅವರು ಮುಕ್ತರಾಗುತ್ತಾರೆ ಎಂಬ ಸೂಚನೆ ಇಲ್ಲಿದೆ. ಗುಹೆಯಿಂದ ತಲೆಗೆ ಹೊಡೆಸಿಕೊಂಡು ಹೊರಬಂದು ಜ್ವರಪೀಡಿತರಾದಾಗ ಆರಂಭವಾದ ಅವರೊಳಗಿನ ಪರಿವರ್ತನೆ ಬಹುಶಃ ಇಲ್ಲಿ ಕೊನೆಗೊಳ್ಳುತ್ತದೆ.

ಕಾಂಚನ ಸೀತೆಯ ಉಲ್ಲೇಖ ಉತ್ತರ ರಾಮಾಯಣದಲ್ಲಿ ಬರುತ್ತದೆ. ಕಾಂಚನಮೃಗವೆಂಬ ಮಾಯಾಮೃಗ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ಸೀತೆಯ ಕಾಂಚನ ಮೋಹವು ಇಡೀ ರಾಮಾಯಣದಲ್ಲಿ ನಡೆಯುವ ಅನಾಹುತಗಳಿಗೆ ಕಾರಣವಾಗುವುದನ್ನು ನಾವು ಮರೆಯುವಂತಿಲ್ಲ. 

ಉತ್ತರ ರಾಮಾಯಣದಲ್ಲಿ ಶ್ರೀರಾಮನು ಸೀತೆಯ ಕಾಂಚನ ಪ್ರತಿಮೆಯನ್ನು ಮಾಡಿಸುವುದು ಅನಿವಾರ್ಯ ಸ್ಥಿತಿಯಲ್ಲಿ. ಆದರೆ ಕೊನೆಗೆ ಕಾಂಚನ ಮೋಹಮುಕ್ತಳಾದ ಸೀತೆ ಶ್ರೀರಾಮನ ಪಾಲಿಗೆ ವಾಸ್ತವ ಸತ್ಯದ ಅರಿವು ಮೂಡಿಸುವ ಮತ್ತು ಅದನ್ನು ಒಪ್ಪಿಕೊಳ್ಳುವಂತೆ ಮಾಡುವ ಸತ್ಯದೇವತೆಯಾಗುತ್ತಾಳೆ. ಅದೇ ರೀತಿ ‘ಕಾಂಚನಸೀತ’ ಕಾದಂಬರಿಯಲ್ಲಿ ಲೌಕಿಕವನ್ನು ತ್ಯಜಿಸಿ ಧ್ಯಾನಸ್ಥ ಸ್ಥಿತಿಯಲ್ಲಿರುವ  ಕಾಂಚನಾ ಬಯಕೆಯ ಉತ್ಕಟ ಸ್ಥಿತಿಯಲ್ಲಿ  ಹೊಯ್ದಾಡುತ್ತಿರುವ ವೆಂಕಟಸುಬ್ಬರಾಯರ ಚಿತ್ತಾವರಣವನ್ನು ಭಗ್ನಗೊಳಿಸಿ ‘ಮನಸ್ಸನ್ನು ನಿಶ್ಶಬ್ದವಾಗಿಸಿ’ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿ ಇನ್ನೊಬ್ಬ ಸೀತೆಯಾಗುತ್ತಾಳೆ.

ಕಾಂಚನ ಸೀತೆಯ ರೂಪಕವು ಕಾದಂಬರಿಯ ವಸ್ತುವಿನ ಆಶಯಕ್ಕೆ ಪೂರಕವಾಗಿದೆ. ನಿರೂಪಣೆಯ ಭಾಷೆಯಲ್ಲಿ ಕಾವ್ಯಾತ್ಮಕತೆ ಇಲ್ಲದಿದ್ದರೂ ಉದ್ದಕ್ಕೂ ಪ್ರಸ್ತುತವಿರುವ ಧ್ವನಿಪೂರ್ಣತೆಯ ಒಳಹರಿವಿನಲ್ಲಿ ಓದುಗನ ಮನಸ್ಸನ್ನು ಹಿಡಿದಿಡುವ ಕಾವ್ಯಾತ್ಮಕತೆಯಿದೆ. ಸರಳ ನಿರೂಪಣೆಯ ಕಾದಂಬರಿ ಒಂದೇ ಓಟಕ್ಕೆ ಓದಿಸಿಕೊಂಡು ಹೋಗುವುದರೊಂದಿಗೆ ಮತ್ತೆ ಮತ್ತೆ ತಿರುಗಿ ನೋಡುವಂತೆ ಮಾಡುತ್ತದೆ.

‍ಲೇಖಕರು Admin

December 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: