ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ –ಎಚ್ಚರಕ್ಕೂ ಮುನ್ನ ಕಾಡಿದ ಮಾಯಕದ ನಿದ್ದೆ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

 

ಮಾತಂಗಿ ನನ್ನ ಬಾಲ್ಯ ಸಖಿ, ಬಾಲ್ಯದ ಕಸುವಿಗೆ ಹೊಸ ಅರ್ಥ ಕೊಟ್ಟವಳು, ಹೋರಾಟದ ಕಾವನ್ನು ಏರಿಸಿಕೊಂಡಾಗ ಅದಕ್ಕೆ ತುಪ್ಪವಾದವಳು. ಹೇಗಿದ್ದಾಳು ಈಗ? ಪ್ರತಿಭಟನೆಯ ಅರ್ಥವೇನೋ ಎನ್ನುವಂತೆ ನನ್ನೆದುರು ನಿಂತಿದ್ದ ಅವಳಿಗೆ ಸಣ್ಣ ಸಪೋರ್ಟ್ ಸಿಕ್ಕಿದ್ದರೂ ಏನೋ ಆಗಿಬಿಡುತ್ತಿದ್ದಳು. ಅವಳೇ ಬರುತ್ತಾಳೆ ಎಂದು ಅತ್ತೆ ಹೇಳುತ್ತಿದ್ದರೂ ನಾನೇ ಅಲ್ಲಿಗೆ ಹೋಗಬೇಕು ಎಂದೆನ್ನಿಸಿದ್ದು ಖಂಡಿತಾ ಸುಮ್ಮನೆ ಅಲ್ಲ. ಸುತ್ತುತ್ತಿದ್ದ ಕಾಡಿನ ಮರಗಳಿಗೆ ಪುಳಕ ಮೂಡಿಸುತ್ತಿದ್ದ ಅವಳ ನಡೆ ಈಗಲೂ ನನ್ನ ಎದೆಯಲ್ಲಿ ಸಾವಿರ ಕನಸುಗಳನ್ನು ತೆರೆದುಬಿಡುತ್ತದೆ. ಕಳಚಿಬಿಟ್ಟರೆ ಇವತ್ತನ್ನು ನೆನ್ನೆಗಳಿಗೆ ಸಲ್ಲುವ ನೆನಪುಗಳಲ್ಲಿ ಕರಗಿಹೋಗಿಬಿಡುವ ತವಕವೇ ಅವಳಲ್ಲಿಗೆ ನನ್ನನ್ನು ಎಳೆದು ಹೊರಟಿದ್ದು. ಅತ್ತೆ, ಮಾವ, ಆಶಾ ಎಲ್ಲರೆದುರು ಅವಳೊಂದಿಗೆ  ಆಡಲಾರದ ಅನೇಕ ಸಂಗತಿಗಳಿವೆ. ಎಲ್ಲವನ್ನೂ ಇವತ್ತು ಆಡಿಬಿಡಬೇಕು. ಹೆಜ್ಜೆಗಳಿಗೆ ಹುರುಪು, ಮೈಯ್ಯೆಲ್ಲಾ ಉತ್ಸಾಹದ ಊಟೆ.   

ಮಾತಂಗಿಯ ಅಪ್ಪ ಚಿಕ್ಕಬುಡ್ಡಿ ಮಾವನ ಹೆಸರು ಬೇರೆ ಏನೋ ಇತ್ತು. ಅದನ್ನು ಊರ ಜನ ಮರೆತೇ ಬಿಟ್ಟಿದ್ದರು. ತೆಂಗಿನ ನಾರನ್ನು ತೆಗೆದು ಹದಮಾಡಿ ನೀರಲ್ಲಿ ನೆನೆಸಿ ಹಗ್ಗ ಮಾಡುತ್ತಿದ್ದ. ಎಷ್ಟು ಗಟ್ಟಿ ಇರ್ತಾ ಇತ್ತು ಅಂದ್ರೆ ಕೊಂಡವರಿಗೆ ಎಷ್ಟು ವರ್ಷಗಳ ಹಿಂದೆ ಕೊಂಡಿದ್ದು? ಅಂತಲೂ ಮರೆತು ಹೋಗುತ್ತಿತ್ತು. ಹಗ್ಗ ನಾರಿನ ಒರಟುತನವನ್ನು ಕಳೆದುಕೊಂಡರೂ ಹರಿಯುತ್ತಿರಲಿಲ್ಲ. ಅದಕ್ಕೆ ಆ ಹಗ್ಗಕ್ಕೆ ನಮ್ಮೂರು ಬಿಟ್ಟೂ ಬೇರೆ ಕಡೆಯೂ ತುಂಬಾ ಬೇಡಿಕೆ ಇತ್ತು. ಹೊಸಬರು ಯಾರಾದರೂ ʻಚಿಕ್ಬುಡ್ಡಿʼ ಅಂತ ಕರೆಯುವುದನ್ನು ಕೇಳಿಸಿಕೊಂಡುಬಿಟ್ಟರೆ ಸಾಕು, ಯಾರು ನಿಮಗೆ ನನ್ನ ಅಡ್ದ ಹೆಸರನ್ನು ಹೇಳಿದ್ದು ಎಂದು ರೇಗುತ್ತಿದ್ದ. ʻನಮಗೇನು ಗೊತ್ತು ಊರವರು ಹಗ್ಗ ಬೇಕಿತ್ತು, ಅವರ ಮನೆ ಎಲ್ಲಿ ಎಂದು ಕೇಳಿದಾಗ ಈ ಹೆಸರನ್ನು ಹೇಳಿದ್ದರುʼ ಎಂದರೆ, ʻಸರಿ ಬಿಡಿʼ ಎನ್ನುತ್ತಿದ್ದ. ಬಂದವರೂ ಮತ್ತೆ ಅವನ ಹೆಸರನ್ನು ಕೇಳುತ್ತಿರಲಿಲ್ಲ. ಅವನೂ ಹೇಳುತ್ತಿರಲಿಲ್ಲ. ನಾನು ಮಾತಂಗಿಗೆ ʻನಿಮ್ಮಪ್ಪನ ಹೆಸರೇನೇ?ʼ ಎಂದು ಕೇಳಿದ್ದಕ್ಕೆ, ʻಅವನೇ ಅವನ ಹೆಸರನ್ನು ಮರೆತುಬಿಟ್ಟಿದ್ದಾನೆʼ ಎಂದು ನಕ್ಕಿದ್ದಳು. ʻಇಟ್ಟ ಹೆಸರನ್ನು ಯಾರು ಮರೆಯುತ್ತಾರೆ?ʼ ಎಂದಿದ್ದೆ. ವಿಚಿತ್ರ ಎಂದರೆ ನಾನೇ ಇಟ್ಟ ಹೆಸರನ್ನು ಮರೆತು, ಕೊಟ್ಟ ಹೆಸರಲ್ಲೇ ಉಳಿದೆ. ಆತನನ್ನು ನೋಡಿದಾಗೆಲ್ಲಾ ನನಗೆ ಅಪ್ಪನ ನೆನಪು ಕಾಡುತ್ತಿತ್ತು. ಅವನು ಹಗ್ಗ ಮಾರಲು ಹೊರಟರೆ, ಅಮ್ಮ, ಅಜ್ಜಿಯರಿಗೆ ಗೊತ್ತಾಗದಂತೆ ಅವುಸಿಕೊಂಡು ಹೋಗಿ, ʻಮಾವ ನಮ್ಮಪ್ಪನ್ನ ಕಂಡ್ರೆ ಒಂಚೂರು ರಾಜ್ಯ ಕಾಯ್ತಿದಾಳೆ ಅಂತ ಹೇಳುʼ ಎಂದು ಗೋಗರೆಯುತ್ತಿದ್ದೆ. ನನ್ನ ಸಂಕಟ ನೋಡಿ ತಡೆಯಲಾರದೆ ಮಾತಂಗಿ, ʻಬಿಡು ನಮ್ಮಯ್ಯ ನಿಮ್ಮಪ್ಪಯ್ಯನನ್ನು ಹುಡುಕಿ ಬರ್ತಾನೆʼ ಎನ್ನುತ್ತಿದ್ದಳು.

ಪೇಟೆಯಿಂದ ಬರ್ತಾ ಚಿಕ್ಬುಡ್ಡಿ ಮಾವ ನನಗೆ ಸಕ್ಕರೆ ಕಡ್ಡಿಯನ್ನು ತರುತ್ತಿದ್ದ. ನನಗೆ ಅಪ್ಪ ಸಿಕ್ಕ ಎನ್ನುವ ಸುದ್ದಿ ಬೇಕಿರುತ್ತಿತ್ತು. ಕಟ್ಟೆಗೆ ಕೂತು ಬಸ್ಸು ಬರುವ ಹೊತ್ತಿಗೆ ವಾಪಾಸು ಬರುವ ಮಾವನಿಗಾಗಿ ಕಾಯುತ್ತಿರುತ್ತಿದ್ದೆ. ಹತ್ತು ಸಲ ಹೋಗಿ ಬರೋರಿಗೆ ಬಸ್ಸು ಬಂತಾ? ಎಂದು ಕೇಳುತ್ತಿದ್ದೆ. ʻಇಷ್ಟಗಲದ ಊರಿಗೆ ಹಾರ್ನ್ ಹಾಕ್ಕೊಂಡ್ ಬಸ್ಸು ಬರೋದು ನಿಂಗೊಬ್ಬಳಿಗೆ ಕೇಳಲ್ವೇನೆ? ಏನೇ ನಿಮ್ಮಾವಂಗೆ ಇಷ್ಟು ಕಾಯ್ತಾ ಇದೀಯಾ? ಏನಾದ್ರೂ ಗಂಡನ್ನು ನೋಡಿಕೊಂಡು ಬರ್ತೀನಿ ಅಂತಾ ಹೇಳಿದ್ದಾನಾ ಏನು?ʼ ಎಂದು ಗೌರತ್ತೆ ನನ್ನ ತಮಾಷಿ ಮಾಡುತ್ತಿದ್ಲು. ʻಮೊದ್ಲು ಮಾತಂಗಿಗೆ ಮಾಡು ಆಮೇಲೆ ನಂಗೆʼ ಎಂದು ಮುಖ ಉಬ್ಬಿಸಿ ಹೇಳುತ್ತಿದ್ದೆ. ನನ್ನ ಗಲ್ಲವನ್ನು ಸವರಿ, ʻಮಾತಂಗಿ ಏನಾದ್ರೂ ಗಂಡುಮಗ ಆಗಿದ್ದಿದ್ರೆ ನೀನೆ ಈ ಮನೆ ಸೊಸೆ ಆಗ್ತಾ ಇದ್ದೆʼ ಎಂದಿದ್ದಳು. ಚಿಕ್ಕ ಊರು, ಬಸ್ಸಂತೂ ಸುಮ್ಮನೆ ಬರುತ್ತಿರಲಿಲ್ಲ ʻಪಾಂ…ʼ ಎಂದು ಹಾರನ್ ಮಾಡಿಕೊಂಡೇ ಊರೊಳಗೆ ಬರುತ್ತಿದ್ದುದು. ಸಂಜೆ ದನಕರುಗಳನ್ನು, ಆಡುಗಳನ್ನು ಬಿಟ್ಟುಕೊಂಡು ಜನ ಮನೆಯ ಕಡೆಗೆ ಹೊರಡುತ್ತಿದ್ದುದರಿಂದ ಡ್ರೈವರ್‌ಗೆ ಬಸ್ಸು ಓಡಿಸುವುದು ಕಷ್ಟ ಆಗುತ್ತಿತ್ತು.  ಆದರೂ ನಾನು ಕೇಳುವುದಕ್ಕೆ ಕಾರಣ ಇರಲೇ ಬೇಕು ಎಂದು ಭಾವಿಸಿ, ʻಪೇಟೆಯಿಂದ ಏನಾದರೂ ತರುವುದಕ್ಕೆ ಹೇಳಿದ್ದಾಳೆ, ಅದಕ್ಕೆ ಹೀಗೆ ಕಾಯ್ತಾ ಇದಾಳೆʼ ಎಂದು ಅಜ್ಜಿ ಗೊಣಗಿದರೆ, ಈಗಾಗಲೇ ಮಾವನ ಮೇಲಿನ ನಮ್ಮ ಋಣಭಾರವನ್ನು ನೆನಸಿಕೊಂಡು ಅಮ್ಮ, ʻಅವರಿವರನ್ನ ಕೇಳಬಾರದು, ಮನೇಲಿ ಏನಿರುತ್ತೆ ಅದರಲ್ಲೇ ಸರಿತೂಗಿಸಿಕೊಳ್ಳಬೇಕುʼ ಎನ್ನುತ್ತಿದ್ದಳು. ನನ್ನ ಕಾಯುವಿಕೆಯ ಕಾರಣವನ್ನು ಹೇಳಲಿಲ್ಲ. ಮಾತಂಗಿಗೆ ಎಲ್ಲಾ ಗೊತ್ತಿದ್ದೂ ಅವಳು ಮಾತಾಡಲಿಲ್ಲ. ನಾನು ಹೀಗೆ ಅಪ್ಪನಿಗಾಗಿ ಹೇಳಿಕಳಿಸಿರುವೆ ಎಂದು ಗೊತ್ತಾದರೆ ಅಮ್ಮ ಬೈಯ್ಯಬಹುದು ಇಲ್ಲವೇ ಬೇಜಾರೂ ಮಾಡಿಕೊಳ್ಳಬಹುದು. ಹೀಗೇ ನಾಕಾರು ಸಾರಿ ಆದ ಮೇಲೆ ಚಿಕ್ಕಬುಡ್ಡಿ ಮಾವನಿಗೆ ಅಜ್ಜಿ, ʻಅದೇನು ಮಗೂಗೆ ಆಸೆ ಇಡಿಸಿದ್ದೀʼ ಎಂದು ಕೇಳೇಬಿಟ್ಟಳು. ʻನಾನ್ಯಾಕೆ ಆಸೆ ಇಡುಸ್ಲೀ? ಅಪ್ಪನ ಆಸೆ ಯಾವ ಮಗ್ಳಿಗಿರಲ್ಲ, ಕೇಳ್ತಾಳೆ. ನಾನು ವಾಪಾಸು ಬರೋವಾಗ ಕಾಯ್ತಾ ಕೂತಿರ್ತಾಳೆ. ಏನ್ ಮಾಡೋದು? ನಿನ್ನ ಮಗಂಗೆ ಏನಾಯ್ತೋ, ಇಷ್ಟು ಚೆಂದದ ಸಂಸಾರಾನ ಬಿಟ್ಟು ಹೋದ. ಮನೆ ಒಡೆದ ಕನ್ನಡಿ ಆಗೋಯ್ತುʼ ಎಂದು ಬೇಸರಿಸಿಕೊಂಡಿದ್ದ. ಈ ವಿಷಯ ತಿಳಿದು ಅಮ್ಮ ನನ್ನ ಹೊಡೀಬಹ್ದು ಎಂದು ಅಂದುಕೊಂಡೆ. ಹಾಗೇನೂ ನಡೀಲಿಲ್ಲ. ಅಜ್ಜಿ ಕೂಡಾ ಮಾತಾಡಲಿಲ್ಲ, ಮೌನ ಮನೆಯನ್ನು ತುಂಬಿತ್ತು. ರಾತ್ರಿ ಎಂದಿನಂತೆ ನನ್ನ ಪಕ್ಕ ಕೂತು ತನ್ನ ಪಾಡಿಗೆ ತಾನು ಮಾತಾಡಿಕೊಳ್ಳುತ್ತಿದ್ದ ಅಮ್ಮನನ್ನು ತಬ್ಬಿ ಅತ್ತುಬಿಟ್ಟಿದ್ದೆ. ʻನಿಮ್ಮಪ್ಪ ಬರೋರಾಗಿದ್ದಿದ್ರೆ ಯಾವತ್ತೋ ಬರ್ತಾ ಇದ್ದ, ಅವನಿಗೆ ಎಲ್ಲೋ ಸುಖ ಇದೆ ಹೋಗಿದ್ದಾನೆ. ಇನ್ನೊಂದು ಸಲ ಅವರಿವರಿಗೆ ಒಪ್ಪಿಸಿ ಬೇಸರ ತರಿಸಬೇಡʼ ಎಂದಿದ್ದಳು ಅಜ್ಜಿ. ಹುಟ್ಟಿದಾಗಿನಿಂದ ಇದ್ದಿದ್ದು ನಾವು ಮೂವರೇ ಎಂದು ಅನ್ನಿಸಿಬಿಟ್ಟಿತ್ತು. ಬೆಳಗ್ಗೆ ಎದ್ದಾಗ ಅಜ್ಜಿಯ ಕಣ್ಣುಗಳು ಬಾತುಕೊಂಡಿದ್ದವು. ನನಗೆ ಹೇಳಿಕೊಳ್ಳಲಿಕ್ಕೆ ಅಮ್ಮ ಇದ್ದಾಳೆ ಅಮ್ಮನಿಗೆ ನಾನಿದ್ದೀನಿ. ಅಜ್ಜಿಗೆ ಯಾರಿದ್ದಾರೆ?

ನಾನಾದರೂ ಅಲ್ಪಸ್ವಲ್ಪವಾದರೂ ಓದಿದೆ. ಮಾತಂಗಿಗೆ ಓದೇ ಹತ್ತಲಿಲ್ಲ. ʻಆ ಸ್ಕೂಲಲ್ಲಿ ಹೇಳೋದು ನನಗೆ ಅರ್ಥ ಆಗಲ್ಲ ಬೇಡʼ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರಿಂದ, ಚಿಕ್ಬುಡ್ಡಿ ಮಾವ, ʻನಿನ್ನ ಮದುವೆಯ ಹೊತ್ತಿಗೆ ಆದೀತುʼ ಎಂದು ನಾಕು ಕುರಿಗಳನ್ನು ತಂದುಕೊಟ್ಟಿದ್ದ. ದಿನೇದಿನೆ ಅವುಗಳ ಸಂತತಿ ದೊಡ್ಡದಾಗುತ್ತಾ ಐದಾರು ವರ್ಷಗಳಲ್ಲೇ ರೊಪ್ಪದ ತುಂಬಾ ತುಂಬಿ ತುಳುಕಾಡುತ್ತಿದ್ದವು. ಮನೆಯ ಪರಿಸ್ಥಿತಿ ನಾನೂ ಓದುಬಿಟ್ಟೆ. ಮಗಳ ಜೊತೆ ಕುರಿಗಳನ್ನು ಕಾಯ್ಸಿ ಮೇಯ್ಸಿ ಕೊಟ್ಟರೆ ಒಂದಿಷ್ಟು ದುಡ್ಡನ್ನು ಕೊಡುತ್ತಿದ್ದ. ಜೊತೆಗೆ ಹಬ್ಬಗಳಲ್ಲಿ ಮಾರಲಿಕ್ಕೆ ಕೊಯ್ದ ಕುರಿ ಮಾಂಸದಲ್ಲಿ ಒಳ್ಳೆ ಚರ್ಬಿಯಾದ ಒಂದಿಷ್ಟನ್ನು ನಮಗೂ ಕೊಡುತ್ತಿದ್ದ. ನಾವವನಿಗೆ ತುಂಬ ಕೃತಜ್ಞರಾಗಿರುತ್ತಿದ್ದೆವು. ಇಲ್ಲದಿದ್ದರೆ ಮಾಂಸವನ್ನು ತಿನ್ನುವ ಸಿರಿತನ ನಮಗೆಲ್ಲಿಂದ ಬರಬೇಕು? ನಾವು ಇರಲಿಕ್ಕೆ ಬಿಟ್ಟಿದ್ದ ಕೊಟ್ಟಿಗೆಯನ್ನೂ ಆಗೀಗ ರಿಪೇರಿ ಮಾಡಿಸಿಕೊಡುತ್ತಿದ್ದ. ಬಿಡುವಿದ್ದಾಗ ನಾನೂ ಊರು ತೋಟಗಳನ್ನೆಲ್ಲಾ ಸುತ್ತಿ, ತೆಂಗಿನ ಗರಿಯ ಮಟ್ಟೆಯನ್ನು ಬಿಟ್ಟು, ಬೇಡವೆಂದು ಸುಟ್ಟು ಹಾಕುತ್ತಿದ್ದ ಮಡಿಲನ್ನು ಕತ್ತರಿಸಿ ತರುತ್ತಿದ್ದೆ. ನನ್ನ ಶ್ರಮವನ್ನೂ ನೋಡಿ ಊರ ಜನ, ʻಈ ಹುಡುಗಿ ಯಾರ ಮನೆಯನ್ನು ಸೇರುತ್ತೋ ಕಾಣೆ, ಆ ಮನೆ ಉದ್ದಾರ ಆಗುತ್ತೆʼ ಎನ್ನುತ್ತಿದ್ದರು.

ಮಾತಂಗಿಗೆ ಯಾವ ಕಷ್ಟವೂ ಗೊತ್ತಿರಲಿಲ್ಲ. ಬೇಕಾದ್ದು ತಿನ್ನುತ್ತಾ, ಕುರಿ ಮಾರಿದ ದುಡ್ಡಿಂದ ಹೊಸ ಬಟ್ಟೆಗಳನ್ನು ಕೊಂಡು ಅರಾಮಾಗಿದ್ದಳು. ಅದಕ್ಕೆ ಇರಬೇಕು ಅವಳ ಮೈ ಹೆಚ್ಚು ಪುಷ್ಟವಾಗಿ ಬೆಳೆದಿತ್ತು. ಅವಳಿಗಿಂತ ಸ್ವಲ್ಪವೇ ಸಣ್ಣವಳಾಗಿದ್ದ ನಾನು ತೀರಾ ಸಣ್ಣ ಹುಡುಗಿಯಂತೆ ಕಾಣುತ್ತಿದ್ದೆ. ತಮಾಷಿಯಾಗಿ ನನ್ನನ್ನು ಅವಳು ಕಂಕಳಲ್ಲಿ ಇರುಕಿಸಿ ಎತ್ತಿಕೊಂಡೂ ಹೋಗಿಬಿಡುತ್ತಿದ್ದಳು. ಸತೀಶನ ಜೊತೆ ಮಾತುಕಥೆ ಶುರುವಾದಾಗ ಮೊದಲು ನಾನು ಹೇಳಿದ್ದು ಮಾತಂಗಿಗೇ. ನಂತರ ನನಗೆ ಹೋರಾಟದ ಬೇರೆಯದೇ ಲೋಕ ತೆರೆದುಕೊಂಡರೂ ಬಿಡುವಿದ್ದಾಗಲೆಲ್ಲಾ ಅವಳ ಜೊತೆ ಕುರಿ ಕಾಯಲು ಕಾಡಿಗೆ ಹೋಗುತ್ತಿದ್ದೆ.

ಒಮ್ಮೆ ನಾನು ಕಾರ್ಯಕ್ರಮ ಮುಗಿಸಿ ಬಸ್ಸಿನಲ್ಲಿ ಇಳಿವಾಗ ಊರು ಯಾಕೋ ಮಾಮೂಲಿಯ ಹಾಗೆ ಇಲ್ಲ ಅಂತ ಅನ್ನಿಸಿತು. ಬಸ್ಸು ಇಳಿದಿದ್ದು ನೋಡಿಯೂ ಕಟ್ಟೆಗೆ ಕೂತವರು ಈಗ ಬಂದ್ಯಾಂತ ಎಂದಿನಂತೆ ವಿಚಾರಿಸಲಿಲ್ಲ. ಬಹುಶಃ ನಾನು ಸತೀಶ ಇಬ್ಬರೂ ಒಟ್ಟಿಗೆ ಬಂದಿದ್ದು ಈ ಊರವರಿಗೆ ಕಷ್ಟ ಆಗಿರಬೇಕು ಎಂದುಕೊಂಡೆ. ಸತೀಶ ತಮಾಷೆಯಾಗಿ ʻಯಾಕೆ?ʼ ಎಂದ. ʻಪ್ರಾಣಾದ ಪದ್ಮಪುರುಷನೇ ಅರ್ಥ ಮಾಡಿಕೋʼ ಎಂದು ನಾಟಕದ ಶೈಲಿಯಲ್ಲಿ ನಕ್ಕಿದ್ದೆ. ಮನೆಗೆ ಬರುವಾಗ ಚಿಕ್ಬುಡ್ಡಿ ಮಾವ ಹೊರಗೆ ಕೂತಿದ್ದ. ಗೌರತ್ತೆ ಅಳುತ್ತಿದ್ದಳು. ಅಮ್ಮ ಸಮಾಧಾನ ಮಾಡುತ್ತಾ ಕೂತಿದ್ದಳು. ಸತೀಶ ನನ್ನ ಮನೆ ತನಕ ಬಿಟ್ಟು ಹೋಗಲು ಬಂದವ ಪರಿಸ್ಥಿತಿ ನೋಡಿ ಅಲ್ಲೇ ನಿಂತ. ಅಮ್ಮ ನನ್ನ ಕೈಗಳನ್ನು ಹಿಡಿದು ಒಳಗೆ ಕರೆದುಕೊಂಡು ಹೋಗಿ ʻಸದ್ಯ ಬಂದ್ಯಲ್ಲಾʼ ಎಂದಳು. ʻಅಮ್ಮ, ಆತಂಕ ಪಡುವಂಥಾದ್ದು ನನಗೇನಾಗಿದೆ?ʼ ಅತ್ತು ಕೆಂಪಾಗಿದ್ದ ಅವಳ ಮೂಗಿನ ನತ್ತು ಮಂಕಾಗಿತ್ತು. ಗುಟ್ಟು ಮಾಡುವವಳಂತೆ ʻಮಾತಂಗಿ ಯಾರನ್ನಾದರೂ ಇಷ್ಟ ಪಡ್ತಾ ಇದ್ಲಾ?ʼ ಅಂದಳು. ನನಗೆ ಸ್ಪಷ್ಟವಾಗಿ ಗೊತ್ತಿತ್ತು ಅವಳು ಹಾಗೆ ಯಾರನ್ನೂ ಇಷ್ಟ ಪಡ್ತಾ ಇರಲಿಲ್ಲವೆಂದು.  ನನ್ನ, ಅಮ್ಮನ ಮಾತುಗಳು ತಾಳೆ ಆಗದೆ ಹೋಗುತ್ತಿದ್ದುದರಿಂದ ನಾನು ಅಸಹನೆಯನ್ನು ವ್ಯಕ್ತಪಡಿಸಿದ್ದೆ. ʻಮಾತಂಗಿ ಸಂಜೆಯಿಂದ ಕಾಣ್ತಾ ಇಲ್ಲʼ ಎನ್ನುವ ಸುದ್ದಿ ನನ್ನ ತಲೆಗೆ ಸಿಡಿಲು ಬಡಿದ ಹಾಗಾಗಿತ್ತು. ನನ್ನ ಮನಸ್ಸು ಕೆಂಡವಾಗುತ್ತಿತ್ತು.

ʻಇಲ್ಲ ಮಾತಂಗಿ ಯಾವ ಪ್ರೀತಿಯಲ್ಲೂ ಬಿದ್ದಿರಲಿಲ್ಲ. ಊರುಬಿಟ್ಟು ಓಡಿಹೋಗುವ ಯಾವ ಕೆಲಸವನ್ನೂ ಅವಳು ಮಾಡಿಲ್ಲ. ನನಗೆ ಚೆನ್ನಾಗಿ ಗೊತ್ತು. ಹಾಗೆ ಯಾರಾದರೂ ಯೋಚನೆ ಮಾಡಿದರೂ ನನಗೆ ಸಹಿಸಿಕೊಳ್ಳಲಿಕ್ಕೆ ಕಷ್ಟವಾಗುತ್ತೆʼ ಎಂದೆ. ʻಹಾಗಾದರೆ ಅವಳು ಎಲ್ಲಿ ಹೋಗಿದ್ದಾಳೆ? ಬೆಳಗಿನಿಂದ ಬೇಸರ ಎಂದು ಕುರಿಗೂ ಹೋಗಿರಲಿಲ್ಲ. ಮಾವನೇ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದನಂತೆ. ಮಧ್ಯಾಹ್ನ ಮಕ್ಕಳು ಆಟ ಆಡುತ್ತಾ ಕೂಗಾಡುತ್ತಿದ್ದಕ್ಕೆ ಬೈಯ್ಯಲು ಎದ್ದು ಹೊರಗೆ ಹೋದಳಂತೆ. ಅಲ್ಲಿಂದ ಎಲ್ಲಿ ಹೋದಳೋ ಗೊತ್ತಿಲ್ಲ. ಸಂಜೆ ಕುರಿಗಳನ್ನು ಹೊಡೆದುಕೊಂಡು ನಿಮ್ಮಾವ ಬಂದರೂ ಬರಲಿಲ್ಲʼ ಎಂದು ಗೌರತ್ತೆ ಅತ್ತಿದ್ದಳು. ಹಾಗಾದರೆ ಮಾತಂಗಿ ಎಲ್ಲಿ ಹೋದಳು? ಮನೆಗೆ ಬಾರದೇ ಇರೋ ಅಂಥಾ ಪರಿಸ್ಥಿತಿಯಾದರೂ ಏನಾಗಿತ್ತು ಎಂದು ಯೋಚಿಸತೊಡಗಿದೆ.

ರಾತ್ರಿಗಳು ಕರುಣೆ ಇಲ್ಲದೆ ದೀರ್ಘವಾಗುವುದು ಇಂಥಾ ಹೊತ್ತುಗಳಲ್ಲೇ. ಎಲ್ಲರ ಮನಸ್ಸಿನಲ್ಲೂ ದುಃಖ ಮಡುಗಟ್ಟಿದೆ. ಚಿಕ್ಬುಡ್ಡಿ ಮಾವ ಹುಚ್ಚನ ಹಾಗೆ ಅಂಗಲಾಚಿ ಎದುರುಮನೆಯಲ್ಲಿದ್ದ ಹುಳ್ಳೆಯನ್ನು ಜೊತೆಗೆ ಬಾ ಎಂದು ಕರಕೊಂಡು ಊರೆಲ್ಲಾ ಸುತ್ತಿಬಂದ. ಸತೀಶನೂ ಅವರ ಜೊತೆಯಾದ. ಆಡನ್ನು ಅಟ್ಟಿಕೊಂಡು ಹೋಗುತ್ತಿದ್ದ ಕಾಡಿನಲ್ಲೆಲ್ಲಾ ಅಲೆದ, ಕಂಡ ಕಂಡವರ ಮನೆಯ ಮುಂದೆ ಹೋಗಿ, ʻನನ್ನ ಮಗಳನ್ನು ನೋಡಿದಿರಾ?ʼ ಎಂದು ಹಲುಬಿದ. ಮತ್ತೆ ಮನೆಗೆ ಬಂದು ಜಗುಲಿಯಲ್ಲಿ ಕೂತು ಅತ್ತೇ ಅತ್ತ. ʻಮದುವೆಗೆ ಬಂದ ಹುಡುಗೀನ ಮನೆಯಲ್ಲಿಟ್ಟುಕೊಳ್ಳಬೇಡಿ ಎಂದು ಹೇಳಿದರೂ ಕೇಳಲಿಲ್ಲ. ಮದುವೆ ಮಾಡಿಬಿಟ್ಟಿದ್ದರೆ ಹಿಂಗೆಲ್ಲಾ ಆಗ್ತಾ ಇತ್ತಾ?ʼ ಮನಸ್ಸಿನಲ್ಲಿದ್ದದ್ದು ಒಂದೊಂದೆ ಮಾತಾಗಿ ಹೊರಗೆ ಬರುತ್ತಿದ್ದವು. ಮಾತಂಗಿ ಮಾತ್ರ ಎಲ್ಲಿದ್ದಾಳೆ ಎನ್ನುವ ಸಣ್ಣ ಸುಳಿವು ಕೂಡಾ ಸಿಗಲಿಲ್ಲ. ನಾಗಿಯ ವಿಷಯದಲ್ಲಿ ಆಗಿದ್ದು ಯಾರೂ ಮರೆತಿರಲಿಲ್ಲ. ಜಾವಗಳು ಉರುಳುತ್ತಿದ್ದ ಹಾಗೆ ಕೂತಲ್ಲೇ ಎಲ್ಲರೂ ಮಾಯಕ ನಿದ್ದೆಗೆ ಜಾರಿದೆವು.

ಬೆಳಗಿನ ಜಾವಕ್ಕೆ ಯಾರೋ ಬಾಗಿಲನ್ನು ತಟ್ಟುವುದು ಕೇಳಿಸಿತು. ಕಣ್ಣು ಸರಿಸಿಕೊಂಡು ಏಳುವಾಗ ಹೊರಗಡೆಯಿಂದ ʻಚಿಕ್ಬುಡ್ಡಿ, ಬೇಗ ಬಾ…ʼ ಎಂದು ಯಾರೋ ಅವಸರ ಮತ್ತು ಗಾಬರಿಯಿಂದ ಕೂಗುತ್ತಿದ್ದರು. ಆ ಧ್ವನಿಯಲ್ಲಿ ಮಾತಂಗಿಗೆ ಏನೋ ಅಪಾಯ ಆಗಿದೆ ಎನ್ನುವ ಸೂಚನೆ ಸಿಕ್ಕಿಬಿಟ್ಟಿತ್ತು. ಭರ‍್ರೆಂದು ಎದ್ದು ಬಾಗಿಲ ಕಡೆ ಓಡಿದೆ. ಬಾಗಿಲು ತೆಗೆದರೆ ಎದುರು ಹುಳ್ಳೆ ಕಾಣಿಸಿದ. ʻಏನಾಯ್ತು?ʼ ಎಂದು ಅವನನ್ನು ಕೇಳಿದೆ. ನನ್ನ ಹಿಂದೆ ಮನೆಯಲ್ಲಿದ್ದವರೆಲ್ಲರೂ ಬಂದರು. ಹುಳ್ಳೆ ನಡುಗುತ್ತಿದ್ದ, ಆ ಚಳಿಯಲ್ಲೂ ಅವನ ಮುಖದಲ್ಲಿ ಸೆಖೆಯ ಗುಳ್ಳೆಗಳು ಮೂಡಿದ್ದವು. ʻಏನಾಯ್ತು?ʼ ಎಂದು ಚಿಕ್ಬುಡ್ಡಿ ಮಾವ ಮುಂದೆ ಬಂದ. ʻಅಲ್ಲಿ ಬಾವಿ… ಬಾವಿ… ಮಾತಂಗಿʼ ಎಂದು ಏನೇನೋ ಬಡಬಡಿಸಿದ. ಆಗಲೇ ಊರು ಏಳುತ್ತಿದ್ದುದರಿಂದ ಹೊರಗೆ ಬಂದವರಿಗೆ ನಮ್ಮ ಮನೆಯ ಮುಂದೆ ನಡೆಯುತ್ತಿದ್ದುದು ಕಾಣಿಸಿ ಎಲ್ಲರೂ ಸೇರತೊಡಗಿದರು. ಗೌರತ್ತೆ, ʻಅಯ್ಯೋ ಮಾತಂಗಿ…ʼ ಎಂದು ಅಳಲಿಕ್ಕೆ ಶುರು ಮಾಡಿದಳು. ʻಏಯ್ ಸುಮ್ನಿರುʼ ಎಂದು ಚಿಕ್ಬುಡ್ಡಿ ಮಾವ ಬಾವಿಯ ಕಡೆಗೆ ಓಡತೊಡಗಿದ. ಅವನ ಹಿಂದೆ ನಾವೂ ಎಲ್ಲರೂ ಓಡಿದೆವು. ಮಾವ ಬಂದವನೇ ಸೀದಾ ಬಾವಿಯ ಒಳಗೆ ನೋಡಿದ ಏನೂ ಕಾಣಲಿಲ್ಲ. ಅವನು ತನ್ನ ಕಣ್ಣುಗಳನ್ನು ಬಾವಿಯ ಕತ್ತಲೆಯ ಜೊತೆ ಹೊಂದಿಸಿಕೊಳ್ಳುವಾಗ ಯಾರೋ, ʻಅಯ್ಯೋ ಇಲ್ಲಿದ್ದಾಳೆ…ʼ ಎಂದು ಕೂಗಿದರು. ಬಾವಿಯ ಪಕ್ಕದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಮಾತಂಗಿ ಬಿದ್ದಿದ್ದಳು. ಅಲ್ಲಲ್ಲಿ ತರಚಿದ ಹಾಗೆ ಗಾಯಗಳೂ ಆಗಿದ್ದವು. ಅವಳನ್ನು ಹಾಗೆ ನೋಡಿದ ತಕ್ಷಣ ಎಲ್ಲರೂ ರೋಧಿಸತೊಡಗಿದೆವು. ಮಾತಂಗಿಗೆ ಏನಾಗಿದೆ ಎಂದು ಯಾರೂ ವಿವರಿಸದಿದ್ದರೂ ಎಲ್ಲರಿಗೂ ಅರ್ಥವಾಗಿಬಿಟ್ಟಿತ್ತು. ಈಗ ಮಾತಂಗಿಯ ಜೀವ ಉಳಿಸುವುದೊಂದೇ ಎಲ್ಲರ ಗುರಿಯಾಗಿತ್ತು.

ಆಘಾತದಲ್ಲಿದ್ದ ಚಿಕ್ಬುಡ್ಡಿ ಮಾವ ಮತ್ತು ಗೌರತ್ತೆಯರಿಗೆ, ʻಮೊದಲು ಆಸ್ಪತ್ರೆಗೆ ಕರೆದೊಯ್ಯೋಣ, ಆಮೇಲೆ ಮಿಕ್ಕೆಲ್ಲಾ ಸಂಗತಿʼ ಎಂದು ತಕ್ಷಣ ಮಾತಂಗಿಯನ್ನು ಪಕ್ಕದೂರಲ್ಲಿದ್ದ ಆಸ್ಪತ್ರೆಗೆ ಕರೆದೊಯ್ಯುವ ಏರ್ಪಾಡನ್ನು ಮಾಡಿದರು. ಹುಳ್ಳೆ ಎತ್ತಿನ ಬಂಡಿಯನ್ನು ತರುವಾಗ ಮಾತಂಗಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದೆ. ಅವಳ ನೀಳ ತೋಳುಗಳು ಕಳಾಹೀನವಾಗಿ ನೆಲಕ್ಕೆ ಒರಗಿದ್ದವು. ಮಿಂಚಿನ ವೇಗದಲ್ಲಿ ಮೊಲಗಳನ್ನು ಹಿಡಿಯುತ್ತಿದ್ದ ತೋಳುಗಳು ಇವೇನಾ? ಎಂದು ನನಗೆ ನಾನೇ ಕೇಳಿಕೊಂಡೆ. ಚಿಕ್ಬುಡ್ಡಿ ಮಾವ ಹುಳ್ಳೆಗೆ ಏನೋ ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದ. ಅಜ್ಜಿ, ʻಮೊದಲು ಜೀವ ಉಳೀಲಿ ಕರ್ಕೊಂಡ್ ಹೋಗುʼ ಎಂದು ಅವನನ್ನು ಸಮಾಧಾನ ಮಾಡಿದಳು. ಅಮ್ಮ ಗೌರತ್ತೆಯ ಜೊತೆ ಎತ್ತಿನ ಬಂಡಿ ಹತ್ತಿದರೆ, ಚಿಕ್ಬುಡ್ಡಿ ಮಾವನ ಜೊತೆ ನಾನು ಬಂಡಿಯ ಪಕ್ಕದಲ್ಲಿ ನಡೆಯತೊಡಗಿದೆ – ನಿಸ್ತೇಜವಾಗಿ ಮಲಗಿದ್ದ ಮಾತಂಗಿಯ ಒಳಗೆ ಪ್ರತಿಭಟನೆಯ ಬಲ ಅಡಗಿದೆ. ಆ ಹೊಸ ರೂಪವನ್ನು ನನ್ನೆದುರಿಗೆ ಅವಳು ತೆರೆದಿಡಲಿದ್ದಾಳೆ ಎನ್ನುವ ಕಲ್ಪನೆ ಕೂಡಾ ಇಲ್ಲದೆ. 

‍ಲೇಖಕರು avadhi

June 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: