ನನ್ನವ್ವ ಮತ್ತು ಸಾರಂಗ, ಸಿರಿಮಂತ, ಶಿಖರ, ಕಲ್ಯಾಣಿ, ಚೆಂಗಳಿ, ಕಾಶಿಯರು

ಮಲ್ಲಿಕಾರ್ಜುನ ಕಡಕೋಳ

ಅವು ಎಪ್ಪತ್ತರ ದಶಕದ ದುಷ್ಕಾಳದ ದಿನಮಾನಗಳು. ಗಂಜಿಗೂ ಗತಿಯಿಲ್ಲದ, ತತ್ರಾಪಿ ಕುಡಿಯುವ ನೀರಿಗೂ ತತ್ವಾರ. ನಿರಂತರ ನಾಕೈದು ವರ್ಷಗಳ ಕಾಲ ಮಳೆಯಿಲ್ಲದ ಭೀಕರ ಬರಗಾಲ. ಮನುಷ್ಯರಿಗಿಂತ ದನಕರುಗಳದ್ದು ಅಕ್ಷರಗಳಲ್ಲಿ ಬಣ್ಣಿಸಲಾಗದ ಘೋರಸ್ಥಿತಿ. ನಮ್ಮ ಮನೆಯಲ್ಲಿದ್ದ ಕಲ್ಯಾಣಿ ಹೆಸರಿನ ಆಕಳು ಅಕ್ಷರಶಃ ನೀರು ಕೂಳಿಲ್ಲದೇ ತಿಂಗಳುಗಟ್ಟಲೇ ನರಳಿ, ನರಳಿ ಗಂಟಲ ಪಸೆ ಒಣಗಿ ನರಳಾಟ ಕೂಡಾ ನಿಲ್ಲಿಸಿತ್ತು. ಒಂದು ಮಟಮಟ ಮಧ್ಯಾಹ್ನ ಬೆಂಕಿಯುಗುಳುವ ಬಿಸಿಲಲ್ಲಿ ನಮ್ಮೆಲ್ಲರ ಕಣ್ಣೆದುರೇ ದಪ್ಪಂತ ಕಲ್ಯಾಣಿ ನೆಲಕ್ಕುರುಳಿ ಬಿದ್ದಾಗ ಒಣಗಿದ ಔಡಲ ಗಿಡದ ಕಟಿಗೆ ಮುರಿದಂತೆ ಕಲ್ಯಾಣಿಯ ಪಕ್ಕೆಲುಬುಗಳು ಲಟಲಟನೆ ಮುರಿದ ಶಬುದ ಕೇಳಿ ಬಂದಿತ್ತು. ಕಲ್ಯಾಣಿಯ ಋಣಾನುಬಂಧ ಅಲ್ಲಿಗೆ ಮುಗಿದಿತ್ತು.

ಆಗ ನನ್ನವ್ವ ತನ್ನ ಒಡಹುಟ್ಟಿದ ಬಂಧುಗಳೇ ತೀರಿಹೋದಾಗ ಅಳುವಂತೆ ಗೋಳಾಡಿಕೊಂಡು ಅತ್ತಿದ್ದಳು. ಅವ್ವ ಹಾಗೆ ಅತ್ತದ್ದು ಶಿಖರ ಎಂಬ ತಾನು ಸಾಕಿದ ಗೂಳಿಯಂತಹ ಹೋರಿ ಸತ್ತಾಗ. ಅವತ್ತಿನ ಅವಳ ರೋದನದ ಇಂಚಿಂಚು ನೆನಪು ನನಗಿದೆ. ಶಿಖರನಿಗೆ ಹೆಗಲ ಬಳಿ ಅದೆಂಥದೋ ತತ್ರಾಣಿ ಹುಣ್ಣು ಹುಟ್ಟಿತಂತೆ. ನಾಟೀವೈದ್ಯ ಮಾಲಿ ರಾವುತಪ್ಪಗೌಡ ಮಾವ ಹುಣ್ಣಿಗೆ ಹೆಸರಿಟ್ಟು ಗಿಡಮೂಲಿಕೆ ತಪ್ಪಲಿನ ರಸಚಿಕಿತ್ಸೆ ನೀಡಿದ್ದರೂ ನೆಟ್ಟಗಾಗಿರಲಿಲ್ಲ. ತೀರಿಹೋದ ಕಲ್ಯಾಣಿ ಶಿಖರನ ಚಿಗವ್ವ ಆಗಿದ್ದಳು. ಶಿಖರ ಮತ್ತು ಕಲ್ಯಾಣಿ ಅವೆರಡರ ಸಾವಿಗೆ ಮೊದಲು ಸಾರಂಗ ಮತ್ತು ಸಿರಿಮಂತ ಎಂಬೆರಡು ಜೋಡೆತ್ತುಗಳ ಸಾವುಗಳು. ಈ ಎಲ್ಲ ಸಾವುಗಳನ್ನು ಅವ್ವ ತನ್ನ ಸಾವಿನವರೆಗೂ ಮರೆಯದೇ ನೆನಪಿಟ್ಟುಕೊಂಡಿದ್ದಳು. ಅವು ತನ್ನ ಒಡಹುಟ್ಟಿದ ಸಂಬಂಧಗಳಂತೆ ಅವ್ವ ಆಗಾಗ ಅವುಗಳ ಹೆಸರಿಡಿದು ಮಾತಾಡಿ ಥೇಟ್ ಮನುಷ್ಯರ ಸಾವಿನಂತೆಯೇ ತಾನು ಸಾಕಿದ ಪ್ರಾಣಿಗಳ ಸಾವು ಸ್ಮರಿಸುತ್ತಿದ್ದಳು.

ಅವಳು ಬೆಕ್ಕು, ನಾಯಿ, ಆಕಳು, ಕರು, ಹೋರಿ, ಮಣಕ, ಎತ್ತು, ಎಮ್ಮೆ ಮೊದಲಾದ ಪ್ರಾಣಿಗಳಿಗೆ ಚೆಂದ ಚೆಂದದ ಹೆಸರಿಟ್ಟು ಅದೇ ಹೆಸರಿನಿಂದ ಕರೆದು ಅವುಗಳೊಂದಿಗಿನ ಭಾವಸಂಬಂಧಗಳನ್ನು ಬಂಧುರಗೊಳಿಸಿದ್ದಳು. ಅವು ಕೂಡಾ ತಮ್ಮ ಹೆಸರಿಡಿದು ಕರೆದರೆ ಸಾಕು, ಬಾಲ ಅಲ್ಲಾಡಿಸುತ್ತಾ ಹಂಬಲಿಸಿ ಓಡೋಡಿ ಅಮ್ಮನ ಬಳಿ ಬರುತ್ತಿದ್ದವು. ಅದೊಂದು ಅಪರೂಪದ ಮತ್ತು ಅಂತಃಕರಣ ತುಂಬಿದ ಸಂಬಂಧವೇ ಆಗಿತ್ತು. ತಾನು ಸಾಕಿದ ಪ್ರಾಣಿಗಳಿಗೆ ಜಡ್ಡು ಜಾಪತ್ರಿ ಬಂದರೆ ನಮ್ಮೂರ ರಾವುತಪ್ಪಗೌಡ ಮಾವನಿಗೆ ತೋರಿಸುತ್ತಿದ್ದಳು. ಅವನಿಂದ ಕಾಯಿಲೆ ನೀಗದಿದ್ದರೆ ಮಳ್ಳಿ ನಿಂಗಪ್ಪೂಜಾರಿ, ಇಲ್ಲವೇ ತೆಲಗಬಾಳದ ನಾಟೀವೈದ್ಯ ಕ್ಯಾರಬೀಜ ತಜ್ಞ ಮಲ್ಲಪ್ಪನನ್ನು ಕರಕೊಂಡು ಬಂದು ತೋರಿಸುತ್ತಿದ್ದಳು.

ಒಮ್ಮೆ ತೆಲಗಬಾಳದ ಮಲ್ಲಪ್ಪ, ಸಾರಂಗನಿಗೆ ಜುಲಾಬಿನ ಅಗಸುದ್ಯಾ ಅಂದರೆ ಔಷಧಿ ನೀಡಿದ್ದಕ್ಕೆ ಇಡೀ ದಿನ ಜುಲಾಬಾಗಿ ಸಾರಂಗನ ಶರೀರದಲ್ಲಿ ನೀರಿನಂಶವೇ ಕಮ್ಮಿಯಾಗಿತ್ತು. ಅದಕ್ಕಾಗಿ ಕಬ್ಬಿಣ ಬುಟ್ಟಿಯಲ್ಲಿ ದೀಡೀಕೊಡಗಟ್ಟಲೇ ನೀರು ಕುಡಿಸಿದ ನೆನಪಿದೆ. ಇವು ಯಾವುದರಿಂದಲೂ ಜಡ್ಡು ನೆಟ್ಟಗಾಗದಿದ್ದರೆ ಕಟ್ಟ ಕಡೆಯ ಪ್ರಯತ್ನ ಎಂಬಂತೆ ಯಡ್ರಾಮಿಯ ಪದುಮಯ್ಯ ಶಾಸ್ತ್ರಿಯಿಂದ ಕುರುಣಿ ಲಾಡಿಯಲ್ಲಿ ತಾಮ್ರದ ತಾಯತ ಕಟ್ಟಿಸುತ್ತಿದ್ದಳು. ನನಗೆ ನೆನಪಿರುವಂತೆ ಶಿಖರನಿಗೆ ಅಂತಹದ್ದೊಂದು ತಾಯತ ಕಟ್ಟಿಸಿದ್ದಳು. ಅದು ಶಿಖರನ ಬದುಕಿನ ಅಂತಿಮ ಚಣಗಳವರೆಗೂ ಕೊರಳಲ್ಲಿ ಇದ್ದುದನ್ನು ನಾನು ಖುದ್ದು ಕಂಡಿದ್ದೇನೆ.

ಸಾಕುಪ್ರಾಣಿಗಳ ಜೀವ ಜಿಂದಗಾನಿಯ ರೇಖದೇಖಿಯೆಂದರೆ ಕೇವಲ ಕಾಯಿಲೆ ಕಸಾಲೆಗೆ ಸೀಮಿತ ಆಗಿರದೇ ಅವುಗಳ ನಿತ್ಯದ ಊಟೋಪಚಾರದಲ್ಲಿಯೂ ಅವ್ವ ಅಷ್ಟೇ ಮುತುವರ್ಜಿತನ ಕಾಪಿಟ್ಟುಕೊಂಡಿದ್ದಳು. ನಡುರಾತ್ರಿಯಲ್ಲೂ ಅವುಗಳಿಗೆ ಒಂದೆರಡು ಬಾರಿಯಾದರೂ ಹಸಿರು ಹುಲ್ಲು ಇಲ್ಲವೇ ಜೋಳದ ಕಣಕಿಯ ಮೇವು ಹಾಕಿ ಬರುತ್ತಿದ್ದಳು. ಅಂತೆಯೇ ಆ ಎಲ್ಲ ಪ್ರಾಣಿಗಳು ಅಮ್ಮನನ್ನು ಹೆತ್ತತಾಯಿಯಂತೆ ಕಾಣುತ್ತಿದ್ದವು. ನಮ್ಮನೆಯಲ್ಲಿ ಚೆಂಗಳಿ ಎಂಬ ಹೆಸರಿನ ಹೆಣ್ಣುನಾಯಿ ಇತ್ತು. ಅದರ ಬಾಣಂತನದ ಹೊಣೆ ಅವ್ವನದೇ. ಕೊಟ್ಟಿಗೆ ಮೇಲಿನ‌ ಜೋಳದ ಒಣದಂಟಿನ ಡೊಗರು ಜಾಗವೇ ಚೆಂಗಳಿಯ ಹೆರಿಗೆಮನೆ.

ಹೆರಿಗೆಮನೆಗೆ ಗಾಳಿ, ಮಳೆ, ಬಿಸಿಲು ತಾಗದಂತೆ ಅವ್ವ ಸೂಕ್ತವಾದ ಚಾಟು ಮಾಡುತ್ತಿದ್ದಳು. ಚೆಂಗಳಿಯ ಬಾಣಂತನಕ್ಕೆ ಗೋಧಿ, ಸಜ್ಜೆ, ಜೋಳದ ಬಿಸಿ ಬಿಸಿಯಾದ ನುಚ್ಚಂಬಲಿ ಮಾಡಿ ನೀಡುತ್ತಿದ್ದಳು. ಅದಕ್ಕೆ ರುಚಿಗೆ ತಕ್ಕ ಕಾಳುಪ್ಪು ಬೆರೆಸುತ್ತಿದ್ದಳು. ಒಂದು ಪರ್ಯಾಣದ ತುಂಬಾ ಬಿಸಿನುಚ್ಚು ಬಡಿಸುತ್ತಿದ್ದಳು. ಚೆಂಗಳಿ ತನ್ನ ಹಡೆದಹೊಟ್ಟೆ ತುಂಬುವಂತೆ ಲೊಚ ಲೊಚ ನೆಕ್ಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಕೊಟ್ಟಿಗೆಯ ಮಾಳಿಗೆ ಮೇಲಿನ ಚೆಂಗಳಿಯ ಹೆರಿಗೆಮನೆಗೆ ಅವ್ವಗೆ ಮಾತ್ರ ಪ್ರವೇಶವಿತ್ತು. ಬೇರೆ ಯಾರಾದರೂ ಹತ್ತಿರ ಸುಳಿದರೆ ಸಾಕು ಚೆಂಗಳಿ ಗುರಾಯಿಸಿ ಓಡಿಸಿ ಬಿಡುತ್ತಿದ್ದಳು. ಕುನ್ನಿ ಮರಿಗಳು ಬೆಳೆದು ಓಡಾಡುವಷ್ಟರ ಮಟ್ಟಿಗೆ ಅವ್ವ ಬಹಳೇ ಇಂತೇಜಾಮ (ಕಾಳಜಿ) ಮಾಡುತ್ತಿದ್ದಳು. ಅದನ್ನು ಚೆಂಗಳಿ ಮನಗಂಡಿದ್ದಳು.

ಅವ್ವ ಸಾಕಿದ ‘ಕಾಶಿ’ ಎಂಬ ಹೆಸರಿನ ಬೆಕ್ಕು ಕೂಡಾ ಅಮ್ಮನಿಂದ ಯಥೇಚ್ಛವಾದ ಆರೈಕೆ ಪಡೆದ ಗಟ್ಟಿ ಮುಟ್ಟಾದ ನೆನಪು ನನ್ನದು. ಕಾಶಿಯ ಕತೆ ಸಹ ಅಷ್ಟೇ ಸೊಗಸಾದುದು. ಒಮ್ಮೆ ರಾತ್ರಿಹೊತ್ತು ಒಂದು ಘಟನೆ ಜರುಗಿತು. ಮಣ್ಣಿನ ಮಾಳಿಗೆಯ ಮುರುಕು ಜಂತಿಯೊಳಗಿಂದ ಕೆಳಗೆ ನೆಲಕ್ಕಿಳಿಯುತ್ತಿದ್ದ ಹಾವನ್ನು ಕೊಂದು ನೆಲದ ಮೇಲೆ ಮಲಗಿದ್ದ ನಮ್ಮೆಲ್ಲರನ್ನು ಪ್ರಾಣಪಾಯದಿಂದ ಕಾಶಿ ಪಾರು ಮಾಡಿದ್ದಳು. ಆ ಕಾರಣಕ್ಕೆ ಮನೇಸು ಮಂದಿ ನಾವೆಲ್ಲ ಕಾಶಿಗೆ ಋಣಿಯಾಗಿದ್ದೆವು. ಮನೆಯಲ್ಲಿ ತಾನು ಸಾಕಿದ ಈ ನಾಯಿ ಬೆಕ್ಕುಗಳ ಮಕ್ಕಳನ್ನು ಸಹಿತ ಅವ್ವ ಅಷ್ಟೇ ಪ್ರಮಾಣದ ಪ್ರೀತಿಯಿಂದ ಕಾಣುತ್ತಿದ್ದಳು. ದಯೆಯುಳ್ಳ ದವುಳವರ ಮನೆಗಳಿಗೆ ಅವುಗಳನ್ನು ಸಾಕಲು ಪ್ರೀತಿಯಿಂದ ನೀಡುತ್ತಿದ್ದಳು. ಹೀಗೆ ಅವ್ವನ ಪ್ರಾಣಿಪ್ರೀತಿ ಮನುಷ್ಯರ ಜತೆಗಿನ ಸಂಬಂಧಗಳಷ್ಟೇ ಸಮಾನ ಮಹತ್ವದ್ದಾಗಿತ್ತು.

ಹುರ್ಮಂಜು ಬಣ್ಣದ ನಾಯಿಮರಿಯನ್ನು ದೂರದ ಬೀಗರ ಊರು ಅಂಬರಖೇಡದಿಂದ ಅಪ್ಪ ತಂದು ಸಾಕಿದ್ದ. ಅದಕ್ಕೆ ‘ಮಲ್ಲಯ್ಯ’ ಅಂತ ಹೆಸರಿಟ್ಟಿದ್ದ. ಚಿಕ್ಕಂದಿನಿಂದಲೂ ಅಪ್ಪನ ಜತೆ ಚಕ್ಕಂದವಾಡುತ್ತಲೇ ಮಲ್ಲಯ್ಯ ಬೆಳೆಯಿತು. ಹೀಂಗಾಗಿ ಅದಕ್ಕೆ ಅಪ್ಪನೆಂದರೆ ಅಪಾಟ ಸಲುಗೆ. ಅಪ್ಪ ಊಟ ಮಾಡುವಾಗಲೇ ಅವನು ಹಾಕಿದ ರೊಟ್ಟಿ, ಅಂಬಲಿ ತಿನ್ನುತ್ತಿತ್ತು. ಅವನು ಊರಲ್ಲಿ ಇಲ್ಲದಾಗ ಉಪವಾಸ ಮಲಗುತ್ತಿತ್ತು. ಅಂತೆಯೇ ಪ್ರತಿನಿತ್ಯ ಅಪ್ಪನೊಂದಿಗೆ ಹೊಲಕ್ಕೆ ಹೋಗುತ್ತಿತ್ತು. ಅಪ್ಪ ಹೊಲದಲ್ಲೇ ಉಳಿದರೆ ಅದೂ ಅವನೊಂದಿಗೆ ಉಳಿದು ಕೊಳ್ಳುತ್ತಿತ್ತು. ಅವನು ಹೊದ್ದು ಮಲಗಿದ ಗೊಂಗಡಿಯೊಳಕ್ಕೆ ಮೂತಿ ತೂರಿಸಿ ಮಲಗುತ್ತಿತ್ತು. ಅಪ್ಪನಿಗೆ ಮಲ್ಲಯ್ಯನ ಮುದ್ದಾಟವೇ ಚೆಂದ. ರಾಶಿಯ ಕಣದ ಸಮಯದಲ್ಲಿ ಕಣದ ಸುತ್ಲೂ ಕಾವಲು ಕಾಯುತ್ತಿತ್ತು. ಮಲ್ಲಯ್ಯ ಇದ್ದಾನೆಂದರೆ ಮಿಲ್ಟ್ರಿಯ ಗಸ್ತು ಇದೆಯೆಂದೇ ನಂಬುಗೆ ಮನೆಯವರೆಲ್ಲರದು. ಒಮ್ಮೆ ರಾತ್ರಿ ಹಂತಿ ಮುಗಿದು ‘ರಾಶಿಮದ’ ಮುರಿಯದೇ ಕಣ ತುಂಬಿತ್ತು.

ಅದನ್ನು ಗಮನಿಸಿ ಯಾರೂ ಇಲ್ಲದ ಹಾಡುಹಗಲೇ ದೂರ್ತ ಕಳ್ಳನೊಬ್ಬ ಕಣದ ಜೋಳದ ರಾಶಿಯನ್ನೇ ತುಂಬ ತೊಡಗಿದ. ಅದನು ಕಂಡ ಮಲ್ಲಯ್ಯ ಚೆಂಗನೆ ಎಗರಿ ಅವನ ಮರ್ಮಾಂಗಕ್ಕೆ ಬಾಯಿ ಹಾಕಿ ಗಾಯ ಮಾಡಿತ್ತು. ಕಚ್ಚಿಸಿಕೊಂಡ ಅವನು ರೊಚ್ಚಿಗೆದ್ದು ಮಲ್ಲಯ್ಯನತ್ತ ದೊಡ್ಡದೊಂದು ಕಲ್ಲು ಬೀಸಿದ ರಭಸಕ್ಕೆ ಮಲ್ಲಯ್ಯನ ಎಡಗಣ್ಣು ಗುಡ್ಡೆಯೇ ಉದುರಿ ಬಿದ್ದಿತ್ತು. ನೆಲಕ್ಕುರುಳಿದ ಮಲ್ಲಯ್ಯ ಬಿದ್ದಲ್ಲಿಂದಲೇ ಪ್ರತಿಭಟನೆಯ ಸೊಲ್ಲು ತೋರಿತ್ತು. ಇನ್ನೇನು ಮಲ್ಲಯ್ಯ ಸತ್ತೇ ಹೋಯಿತೆಂಬಷ್ಟು ಗಾಯಗಳು. ಕಣ್ಣು ಕಪೋಲ ತುಂಬೆಲ್ಲಾ ರಾಮಾ ರಗುತವಾಗಿತ್ತು. ಅಪ್ಪ ನೀಡಿದ ದೇಸಿಯ ಚಿಕಿತ್ಸೆ, ಆರೈಕೆಯಲ್ಲಿ ಹೆಂಗ ಹ್ಯಂಗೋ ಒಂಟಿ ಕಣ್ಣಲ್ಲೇ ಒಂದೆರಡು ವರ್ಷಗಳ ಕಾಲ ಮಲ್ಲಯ್ಯ ಬದುಕಿದ್ದ.

ಅದಾದ ಮೇಲೆ ಮತ್ತೊಂದು ನಾಯಿ ಅಪ್ಪನ ಮುಪ್ಪಿನ ಕಾಲದಲ್ಲಿ ಇತ್ತು. ಅದರ ಹೆಸರು ಮರೆತು ಹೋಗಿದ್ದು, ಪ್ರಾಯಶಃ ಚಿನ್ನು ಎಂಬ ದ್ಯಾಸ. ಮನೆಯ ವಾತಾವರಣದ ಗ್ರಹಿಕೆ ಚಿನ್ನುವಿನಷ್ಟು ಖಚಿತವಾಗಿ ನಮಗೇ ಸಾಧ್ಯವಾಗುತ್ತಿರಲಿಲ್ಲ. ಅಪ್ಪನ ಸಾವಿನ ಕ್ಷಣದವರೆಗಿನ ಇಪ್ಪತ್ಮೂರು ದಿನಗಳಲ್ಲಿ ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಅಪ್ಪ ತೀರಿದ ದಿನ ಅದು ಮಮ್ಮಲ ಮರುಗಿ ವಿಚಿತ್ರವಾಗಿ ಚಡಪಡಿಸಿತ್ತು. ಮಡಿವಾಳಪ್ಪನ ಸಾಧುರ ಬೆಂಚಿಯೊಳಗಿನ ಅಪ್ಪನ ಸಮಾಧಿ ಸಮೀಪ ಹೋಗಿ ಒಂದೆರಡು ದಿನ ಸಮಾಧಿ ಮೇಲೆಯೇ ಮಲಗಿತ್ತು. ಅದನ್ನು ಕಣ್ಣಾರೆ ಕಂಡವರು ಅವ್ವನ ಮುಂದೆ ಬಂದು ಹೇಳಿದ್ದಾರೆ. ಅವ್ವ ಅದನ್ನೆಲ್ಲ ಪ್ರತ್ಯಕ್ಷ ಗಮನಿಸಿ ಮತ್ತೆ ಮತ್ತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅಪ್ಪ ಮರಳಿ ಬರಲಾರನೆಂಬುದು ಚಿನ್ನುಗೂ ಖಚಿತವೆನಿಸಿ ಗೋರಿ ಬಳಿ ಸುಳಿಯುವುದನ್ನು ಕಡಿಮೆ ಮಾಡಿತು.

ಒಂದೆರಡು ತಿಂಗಳುಗಳ ತರುವಾಯ ಅಮ್ಮನನ್ನು ನಾನಿರುವ ದಾವಣಗೆರೆಗೆ ಕರೆದುಕೊಂಡು ಹೋದೆ. ಆಗ ಚಿನ್ನು ಮನೆಯಲ್ಲಿ ಇರಲಿಲ್ಲ. ಹೊರಗಡೆ ಎಲ್ಲೋ ಹೋಗಿತ್ತು. ಅವ್ವ ಇಲ್ಲೆ ದಾವಣಗೆರೆಯಲ್ಲಿ ನಮ್ಮೊಂದಿಗೇ ಇರತೊಡಗಿದಳು. ಕೆಲವು ದಿನಗಳ ಕಾಲ ಮಂಕು ಕವಿದಂತೆ ‘ಚಿನ್ನು’ ದಿಕ್ಕಾ ಪಾಲಾಗಿ ತಿರುಗಿ, ತಿರುಗಿ ಅಪ್ಪನ‌ ಸಮಾಧಿ ಬಳಿ ಹೋಗಿ ಮೂಸುವುದನ್ನು ಮಾಡುತ್ತಿತ್ತಂತೆ. ಅದು ಹಾಗೂ ಹೀಗೂ ಹೇಗೋ ಮಾಡಿ ಜೀವ ಸಾಗಿಸಿದೆ. ಅಕ್ಕಪಕ್ಕದ ಮನೆಯಲ್ಲೋ ಎಲ್ಲೆಲ್ಲೋ ಅವರಿವರು ಹಾಕಿದ ತಂಗಳ ತುಕಡಿ ತಿಂದು ಬದುಕಿದೆ. ಹತ್ತು ತಿಂಗಳ ನಂತರ ಬರೋಬ್ಬರಿ ಮೊದಲ ವರ್ಷದ ಅಪ್ಪನ ಪುಣ್ಯತಿಥಿಗೆಂದು ನಾನು ಮತ್ತು ಅವ್ವ ಕಡಕೋಳಕ್ಕೆ ಹೋದೆವು.

ಅಬ್ಬಾ ಅದೆಲ್ಲಿತ್ತೋ ‘ಚಿನ್ನು’ ನಾತ ಸಂಬಂಧದ ಪ್ರಜ್ಞೆಯಿಂದ ಅಬ್ಬರಿಸಿದಂತೆ ಓಡೋಡಿ ಬಂತು. ಕುಳಿತಿದ್ದ ಅಮ್ಮನ ಕೈಕಾಲು ತೊಡೆಯ ತುಂಬೆಲ್ಲ ಹೊರಳಾಡ ತೊಡಗಿತು. ಅವಳ ಮೈ, ಕೈ ನೆಕ್ಕ ತೊಡಗಿತು. ಅದೇನೋ ಸುದೀರ್ಘವಾಗಿ ಕುಂಯ್ ಗುಟ್ಟಿ ಅಳತೊಡಗಿತು. ಸಮಾಧಾನವಾಗದೆ ಅವಳ ಮುಂದೆ ನೆಲದ ಮೇಲೆ ಬಿದ್ದು ಒದ್ದಾಡ ತೊಡಗಿತು. “ತನ್ನನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ. ಇನ್ಮುಂದೆ ತನ್ನನ್ನು ಹೀಗೆ ಒಂಟಿಯಾಗಿ ಬಿಟ್ಟು ಹೋಗಬೇಡಮ್ಮ” ಎಂಬ ಹೃದಯ ತುಂಬಿದ ಅಳಲು ಅದರದಾಗಿತ್ತು. ಅಮ್ಮನಿಗೆ ಅದೆಲ್ಲ ಅರ್ಥವಾಗಿ ಅವಳ ದುಃಖದ ಒಡಲು ಒಡೆದು ಹೋಯಿತು. ಅಷ್ಟೊತ್ತಿನವರೆಗೆ ಅಳುವನ್ನು ಅದೆಲ್ಲಿ ಬಚ್ಚಿಟ್ಟುಕೊಂಡಿದ್ದಳೋ ಗೊತ್ತಿಲ್ಲ. ತೀರಿಹೋದ ಅಪ್ಪನನ್ನು ಚಿನ್ನುವಿನ ವರ್ತನೆ ಮೂಲಕ ಸ್ಮರಿಸಿಕೊಳ್ಳುತ್ತಾ ಸೆರಗು ತೊಯ್ಯುವ ಕಣ್ಣೀರು ಸುರಿಸಿ ಭೋರ್ಗರೆದು ಅಳ ತೊಡಗಿದಳು. ಸಂಜೆಯ ಅಪ್ಪನ ಪುಣ್ಯತಿಥಿಗೂ ಚಿನ್ನು ಬಾಲ ಅಲ್ಲಾಡಿಸುತ್ತಾ ಹಾಜರಿ ಹಾಕಿತ್ತು.

ಅವ್ವ ಚಿನ್ನುವನ್ನು ಸಹಿತ ದಾವಣಗೆರೆಗೆ ಕರಕೊಂಡು ಹೋಗೋಣ ಎಂದು ಹಟ ಹಿಡಿದಳು. ಅದನ್ನು ಬಸ್ಸಿನಲ್ಲಿ ಕರಕೊಂಡು ಹೋಗಲು ಸಾಧ್ಯವಿಲ್ಲ ಎಂದು ಪರಿಪರಿಯಾಗಿ ಸಂಭಾಳಿಸಿ ಹೇಳಿದೆ. ಅವ್ವ ಅದಕ್ಕೆ ಒಪ್ಪಲಿಲ್ಲ. ಅವ್ವನ ಹಟ ಕಡಿಮೆ ಆಗಲಿಲ್ಲ. ಅದಕ್ಕಾಗಿ ಒಂದೆರಡು ದಿನ ವೇಟ್ ಮಾಡಿದೆ. ಕಡೆಗೂ ಅವ್ವ ಹಟ ಬಿಡಲಿಲ್ಲ. ಚಿನ್ನುಗಾಗಿ ಕೆಲವು ದಿನ, ತಿಂಗಳುಗಳವರೆಗೆ ಊರಲ್ಲಿಯೇ ಉಳಿದುಕೊಂಡಳು. ಅವಳು ಅನಾರೋಗ್ಯಪೀಡಿತಳಾದಾಗ ಅನಿವಾರ್ಯ ಎಂಬಂತೆ ನಮ್ಮಲ್ಲಿಗೆ ಬಂದಳು. ಅಷ್ಟಕ್ಕೂ ಆಗ ಅಕ್ಕ ಚಿನ್ನುವನ್ನು ಚಕ್ಕಡಿಗಾಡಿ ಜತೆ ತಮ್ಮೂರಿಗೆ ಕರಕೊಂಡು ಹೋಗಿದ್ದಳು.

‍ಲೇಖಕರು avadhi

June 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: