ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’- ನೆರೆ ಬಂದ ನದಿಗೆ ದಡವೇ ಇಲ್ಲ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

28

ವಲ್ಲಿಯ ದೃಷ್ಟಿಯಲ್ಲಿ ಹಾಗನ್ನಿಸಿದ್ದರಲ್ಲಿ ತಪ್ಪೆಂದು ನನಗೆ ಈಗಲೂ ಅನ್ನಿಸಿಲ್ಲ. ಯಾವ ಹೆಣ್ಣಿಗೇ ಆದರೂ ತನ್ನ ಗಂಡನ ಕೆಲಸದ ಮೇಲೆ ಗೌರವ ಬಂದುಬಿಟ್ಟರೆ ಅವನು ದೊಡ್ಡವನೇ. ಅವನ ಕನಸುಗಳನ್ನು ತನ್ನ ಕನಸೆಂದು ಅಂದುಕೊಳ್ಳದೆ ಅವಳಿಗೆ ವಿಧಿಯೇ ಇರುವುದಿಲ್ಲ. ಚಿಕ್ಕಂದಿನಿಂದ ಆದ ಪಾಠವೋ, ನಮಗೆ ನಾವೇ ಹಾಕಿಕೊಳ್ಳುವ ಮಿತಿಯೋ? ಗೊತ್ತಿಲ್ಲ. ನನಗೂ ಎಷ್ಟೋ ಸಲ ʻನನ್ನ ಗಂಡ ಈ ಎಲ್ಲರಿಗಿಂತ ಗ್ರೇಟ್ʼ ಅನ್ನಿಸಿದೆ. ಅವನ ಕನಸುಗಳು ನನ್ನ ಎದೆಯ ಆಳದ ಬೇರುಗಳಲ್ಲಿ ಸತ್ವವಾಗಿ ಇಂದೂ ಉಳಿದಿವೆ. ಅಹಂ ಇಲ್ಲದ ಸ್ಥಿತಿಯಲ್ಲಿ ನಿಂತು ಎಲ್ಲವನ್ನೂ ಸ್ವೀಕರಿಸುತ್ತಿದ್ದ ಸತೀಶ. ತಾನು ಮಾಡಿದೆ ಎಂದು ಅವನ ನೆನಪಿಂದ ಎದ್ದು ಬಂದ ಸಂಗತಿಯನ್ನು ನಾನು ಕೇಳಲೇ ಇಲ್ಲ. ಸಾಂಘಿಕ ಹೋರಾಟ, ಸಾಂಘಿಕ ಗೆಲುವಿನಲ್ಲಿ ನಂಬಿಕೆ ಇಟ್ಟವನು – ಅವನು ಗತಿಸುವ ಮುನ್ನ ನೂರಾರು ಕನಸುಗಳು ನನ್ನ ತೆಕ್ಕೆಯಲ್ಲಿದ್ದವು. ಈಗ ಆವನು ನನ್ನ ಜಗತ್ತಿನ ಜೊತೆಗೆ ಬಿಟ್ಟು ಹೋದ ನೋವಿನ ಸೆಲೆಗಳೊಂದಿಗೆ ಕನಸುಗಳು ಜುಗಲ್ಬಂದಿಯಾಗುತ್ತಾ ನನ್ನೊಳಗೆ ಆತ್ಮವಿಶ್ವಾಸವನ್ನು ತುಂಬುತ್ತಿವೆ.

ಅವನಿಗೆ ಯಾವ ದೊಡ್ಡ ಆಸೆಗಳೂ, ನಾನೇನೋ ಸಾಧಿಸುವೆ ಎನ್ನುವ ಆಶಾಭಾವನೆಯೋ ಇರಲಿಲ್ಲ. ತನ್ನ ಪಾಡಿಗೆ ತಾನಿದ್ದು ನಕ್ಕಾಗ ನಗುವ, ಅತ್ತಾಗ ಅಳುವ ಒಳಗಿನ ದುಮ್ಮಾನಗಳನ್ನು ಒಂದೇ ಕಡೆ ಹಿಡಿದಿಟ್ಟು ಹಾಡತೊಡಗಿದ ನನಗೆ ಬದುಕುವುದೊಂದೇ ಧ್ಯಾನವಾಗಿಬಿಟ್ಟಿತ್ತು. ಸುಳಿಗೆ ಸಿಲುಕಿದ ಅವನ ಜೀವದೋಣಿಗೆ ಎತ್ತ ಕಡೆ ದಿಕ್ಕೆಂದು ತಿಳಿಯದೆ ಹುಟ್ಟು ಹಾಕೇ ಹಾಕಿದೆವು. ದೂರ ಹೋಗಬೇಕು ಎಂದಾಗಲೆಲ್ಲಾ ನನ್ನ ಕರೆದ ಎರಡು ತೀರಗಳು ಅತ್ತೆ ಮಾವ, ಅಜ್ಜಿ ಅಮ್ಮ. ನನಗೆ ಬದುಕುವ ಛಲ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲರಿಗೋಸ್ಕರ ಬದುಕುವ ಹಠ ಮಾತ್ರ ಇತ್ತು. ವಿನಾಕಾರಣ ನಗುವ, ಯಾವ ನಿರೀಕ್ಷೆಯೂ ಇಲ್ಲದ ಆಶಾ, ಸಹಜ ಉಸಿರಾಡಿದ ಹಾಗೆ ಒದಗಿದ್ದಳು. ಜಗತ್ತು ನನ್ನ ಕಿವಿಗೆ ಬರೀ ಹೆಸರು, ನನ್ನ ಕಣ್ಣಿಗೆ ಸುಮ್ಮನೆ ವಸ್ತು. ಜ್ಯಾಮಿತಿಯ ಪರಿಧಿಯಲಿ ಸುತ್ತುವ ಪಕ್ಷಿಯ ಹಾಗೆ ಅಲ್ಲೇ ಸುತ್ತುತ್ತಾ ನನ್ನ ಕೈಗಳಲ್ಲಿ ಕಂದನನ್ನು, ಶೋಕ ಪುಷ್ಪಗಳನ್ನು ಹಿಡಿದೇ ಇದ್ದೆ. ಅತ್ತೆ ಮಾವರ ಹೃದಯ ಬರಿಯ ಹೃದಯ ಮಾತ್ರ ಆಗಿರಲಿಲ್ಲ, ಕರುಣೆಯ ಸಮುದ್ರವೇ ಆಗಿತ್ತು. ʻಕತ್ತರಿಸಬೇಡ ಋಣದ ಹಂಗನ್ನು, ನಂಟನ್ನುʼ ಎಂದು ಬೇಡುವಂತೆ ನನ್ನ ಕಡೆ ನೋಡಿದ್ದರಾ? ಗೊತ್ತಿಲ್ಲ ನನ್ನ ಹೃದಯವನ್ನು ಕಲ್ಲಾಗಿಸಬೇಕಿತ್ತು. ಮತ್ತೆ ಅತ್ತ ಕಡೆ ನೋಡಲಿಲ್ಲ – ಮುಗಿದು ಹೋದ ಸುಖದ ಊಟೆಯೊಂದು ಸುಮ್ಮನೆ ಚಿಲ್ಲೆಂದು ಚಿಮ್ಮುವ ಉಮೇದಿಗೆ ಬಿದ್ದಾಗ. ಆದರೆ ಆಗಲಿಲ್ಲ, ಇವೆಲ್ಲ ಸುಮ್ಮನೆ ಪ್ರಯತ್ನಗಳೇ. ಸತೀಶನ ನೆನಪು ತಪ್ಪಿಸಿಕೊಳ್ಳಲಾಗದೆ, ಕಾಡಿ ಹುಚ್ಚಿಯ ಹಾಗಾಗುತ್ತಿತ್ತು. ಇಂಥ ನನಗೆ ವಲ್ಲಿಯ ಭಾವನೆಗಳನ್ನು ಹೇಗೆ ಅಲ್ಲಗಳೆಯಲು ಸಾಧ್ಯವಾದೀತು? 

ಅದರ ಪರಿಣಾಮಗಳನ್ನು ಮಾತ್ರ ನಾನು ಕಣ್ಣಾರೆ ಕಂಡೆನಲ್ಲಾ! ಅದು ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು.     

ಗಂಡ ಬದುಕಿದ್ದಾಗ ಅವನ ಮೇಲೆ ಕಂಪ್ಲೇಟ್ ಹೇಳುತ್ತಾ ಇದ್ದ ವಲ್ಲಿ ಇವಳೇನಾ? ಎಂದು ಅಚ್ಚರಿಯಾಗುವಂಥ ಮಾರ್ಪಾಡು ಅವಳಲ್ಲಿ ಬಂದುಬಿಟ್ಟಿತ್ತು. ಸಹಜವಾಗೇ ಮಹದೇವಯ್ಯನ ಆಪ್ತವಲಯ ಅವಳನ್ನು ಸುತ್ತುವರೆದಿತ್ತು. ಅವಳ ಭಾವನೆಗಳಿಗೆ ಕುಮ್ಮಕ್ಕು ಕೊಡುವಂತೆ ಮಾತುಗಳನ್ನು ಹೇಳಿಕೊಟ್ಟಿತ್ತು. ವಲ್ಲಿ ಅದರೊಂದಿಗೆ ತನಗೆ ಗೊತ್ತಿದ್ದ ಮಾತುಗಳನ್ನೂ ಸೇರಿಸತೊಡಗಿದ್ದಳು. ಸಹಾರಿಗೆ ಈ ವಿಷಯ ಗೊತ್ತಿರಲಿಲ್ಲ ಅಂತ ಅಲ್ಲ, ಗೊತ್ತಿದ್ದರೂ ಮಾತಾಡುತ್ತಿರಲಿಲ್ಲ. ನಾನು ಹೇಳಲು ಹೋದರೆ ʻಇರಲಿ, ಇರಲಿ, ಪರವಾಗಿಲ್ಲ…ʼ ಎನ್ನುವ ಮಾತುಗಳಲ್ಲಿ ತೇಲಿಸುತ್ತಿದ್ದರು. ʻನಮ್ಮ ಮಧ್ಯೆ ಇರುವ ಅಭಿಪ್ರಾಯಗಳು, ಭಿನ್ನನಿಲುವುಗಳು, ಕಡೆಗೆ ಜಗಳಗಳು ನೀರು ಸೀಳಿದ ಹಾಗಿರಬೇಕು ಸಹಾ, ಮುಂದೆ ಸೀಳಿದರೆ ಹಿಂದೆ ಸರಿಯಾಗಬೇಕು. ಇಲ್ಲದಿದ್ದರೆ ಹೋರಾಟ, ಸಂಘಟನೆ ಬಹುದೂರ ಒಯ್ಯುವುದು ಅಸಾಧ್ಯʼ ಎಂದಿದ್ದೆ. ಸಹಾ ನನ್ನ ಮಾತನ್ನು ಕೇಳುವ ಉಮೇದಿನಲ್ಲಿರಲಿಲ್ಲ. ಸಣ್ಣಪುಟ್ಟ ವಿಷಯಗಳನ್ನು ತುಂಬಾ ಗಂಭೀರವಾಗಿ ಚರ್ಚಿಸುವ, ಯಾರೋ ಹೇಳಿದ ಮುಖ್ಯವಲ್ಲದ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಂಡು ಚರ್ಚೆ ಮಾಡುವ ಸಹಾ, ಇಂಥಾ ದೊಡ್ಡ ಸಂಗತಿಗಳನ್ನು ಯಾಕೆ ಕಡೆಗಾಣಿಸುತ್ತಾರೆ? ಎನ್ನುವುದು ಗೊತ್ತಾಗುವುದೇ ಇಲ್ಲ. ಆದರೆ ಒಳಗೆ ಕುದಿಯುತ್ತಿದ್ದ ವಲ್ಲಿ ಸಿಡಿದು ಏಳಲಿಕ್ಕೆ ಒಂದು ಘಟನೆ ಬಹುಮುಖ್ಯವಾಯಿತು. 

ಮಹದೇವಯ್ಯನ ಮರಣ ಅದು ಹಾರ್ಟ್‌ಅಟ್ಯಾಕ್ ಎಂದು ಸಹಾ ತನ್ನ ಪ್ರಭಾವದಿಂದ ಮಾಡಿಸಿದ ನಂತರ ಸರ್ಕಾರಿ ಕೆಲಸದಲ್ಲಿದ್ದ ಆತನಿಗೆ ಬರಬೇಕಾದ ಎಲ್ಲಾ ಹಣವೂ ಬಂತು. ಅನುಕಂಪದ ಆಧಾರದಲ್ಲಿ ಕೆಲಸವೂ ಆಯಿತು. ಅತ್ತೆಯನ್ನು ಚೆನ್ನಾಗೆ ನೋಡಿಕೊಳ್ಳುತ್ತಿದ್ದ ವಲ್ಲಿ, ಸ್ವಲ್ಪಕಾಲದ ಅಂತರದಲ್ಲೇ ಕಡೆಗಣಿಸಲಾರಂಭಿಸಿದಳು. ನಾಮಿನಿ ವಲ್ಲಿಯೇ ಆದ್ದರಿಂದ ಎಲ್ಲ ಹಣವೂ ಅವಳಿಗೆ ಬಂದಿತು. ಪೇಟೆಯಲ್ಲಿ ಮನೆ ಮಾಡಿಕೊಂಡು ಉಳಿದಿದ್ದವಳು ಯಾವಾಗಲಾದರೊಮ್ಮೆ ಊರಿಗೆ ಹೋಗಿ ಅತ್ತೆಯ ಕೈಗೆ ಹಣ ಕೊಟ್ಟು ಬರುತ್ತಿದ್ದವಳು, ಮುಂದಿನ ದಿನಗಳಲ್ಲಿ ಅತ್ತೆಯನ್ನು ನೋಡಲು ಹೋಗುವುದಿರಲಿ, ಊಟಕ್ಕೆ ಕಷ್ಟ ಅಂತ ಯಾರಿಂದಲೋ ಹೇಳಿ ಕಳಿಸಿದಾಗ, ʻನನ್ನ ಅನ್ನ ನಾನು ದುಡಿಯುತ್ತಿರುವೆ. ಮಗುವನ್ನು ಸಾಕಲೋ? ಇವರನ್ನೋ?ʼ ಎಂದು ಪ್ರತಿಪ್ರಶ್ನೆ ಕಳಿಸಿದ್ದಳು. ಹಣವೇ ಹಾಗೆ! ಎಲ್ಲಾ ಸಂಬಂಧಗಳನ್ನೂ, ಎಲ್ಲ ಪ್ರೀತಿಯನ್ನೂ ಕಳೆದು ಬಿಡುತ್ತದೆ. ಗಂಡನ ಸಾವಿನಿಂದ ಕಂಗೆಟ್ಟ ವಲ್ಲಿಗೆ ಹಣ ಆಸರೆಯಾಗಿ ಸಿಕ್ಕಿತು. ಕೆಲಸವು ಅವಳ ಆತ್ಮವಿಶ್ವಾಸವನ್ನೂ, ಅಹಂ ಅನ್ನು ಹೆಚ್ಚಿಸಿತ್ತು. ನಿನ್ನ ಗಂಡನ ಹಾಡುಗಳು ಸಂಘಟನೆಯನ್ನು ಮುಂದೊಯ್ಯುತ್ತಿದ್ದ ಹಡಗೆಂದು ಸುತ್ತಲಿನವರು ಹೇಳಿದ್ದರಿಂದ, ಅವನ ನಂತರ ತಾನೆ ನಾಯಕಿಯಾಗುವ ಕನಸನ್ನು ಕಾಣತೊಡಗಿದಳು. ಇವೆಲ್ಲವೂ ನಿಜಗಳೇ, ಆದರೆ ಇಲ್ಲೇನೋ ವ್ಯತ್ಯಾಸವಿದೆ. ಆ ವ್ಯತ್ಯಾಸಗಳೇ ಎಲ್ಲ ನಿಜಗಳೂ ಹೊರಳು ದಾರಿಗೆ ಸಿಕ್ಕು ನಮಗೆ ಅರ್ಥಗಳನ್ನು ಹೇಳಿಕೊಡಲು ಆರಂಭಿಸಿದ್ದು.

ಬಲ್ಲಿದರು ವಲ್ಲಿ ಅತ್ತೆಯನ್ನು ದೂರವಿಟ್ಟು ನೋಡಲಿಕ್ಕೂ ಕಾರಣವಿದೆ. ಒಂಟಿಯಾಗಿದ್ದ ಅವಳು ತನ್ನ ಬದುಕಿನ ದಾರಿಗಳ ಹುಡುಕಾಟದಲ್ಲಿ ಇನ್ನೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದರು. ಅವಳಿಗೆ ಇದರಿಂದ ಯಾವ ವ್ಯತ್ಯಾಸವೂ ಆಗಲಿಲ್ಲ. ಗಂಡ ಬದುಕಿದ್ದಾಗ ಅವನು ಮಾತ್ರ ಈ ಆರೋಪ ಮಾಡುತ್ತಿದ್ದ. ಒಂಟಿ ನಿಂತ ಹೆಣ್ಣಿನ ಸುತ್ತ ಇಂಥಾ ಮಾತುಗಳು ಎಷ್ಟು ಸಹಜ ಅನ್ನುವುದನ್ನು ಯಾರೂ ಊಹಿಸಬಹುದು. ಸಹಾರ ಜೊತೆ ಬಂದಾಗ ನನ್ನೂ ಜಗತ್ತು ಆಡಿಕೊಂಡಿರಬಹುದಲ್ಲ! ನನ್ನ ಕಿವಿಗೆ ಬಿದ್ದದ್ದು ಕಡಿಮೆ ಮತ್ತು ಮೃದುವಾದ ಭಾಗಗಳು ಮಾತ್ರ. ಹೆಣ್ಣು ಗಂಡಿನ ಸಂಬಂಧ ದೇಹಕ್ಕೆ ಗೊತ್ತಿರುವ ಆಟ. ಮನಸ್ಸಿಗೆ ಬೇಕಿರುವ ಮಾಟ. ಮೈಥುನ ಎನ್ನುವುದು ದೇಹ ಬೆರೆಸಿಯೇ ಆಗಬೇಕಿಲ್ಲ. ಮಾನಸಿಕವಾಗಿಯೂ ಆಗಬಹುದು. ಆದರೆ ಅದಕ್ಕೂ ಒಂದು ಜೊತೆ ಬೇಕೇ ಬೇಕು. ಹೆಸರು, ಆಕಾರ ಎಲ್ಲವೂ. ಇದೆಂಥಾ ಕ್ಲೀಷೆಯ ಜಾಡು?! ಇಲ್ಲ ನಾನು, ವಲ್ಲಿಯೂ ಈ ವಿಷಯದಲ್ಲಿ ಬೇರೆ ಅಲ್ಲ. ಸಹಾ ಅಲ್ಲದಿದ್ದಿದ್ದರೆ ಇನ್ನೊಬ್ಬನ ಜೊತೆ ಇರುತ್ತಿದ್ದೆ. ಆದರೆ ಈಗ ಏನಾಗಿದೆಯೋ ಅದು ಆಗ ಆಗದೆ ಹೋಗುತ್ತಿತ್ತು ಅಷ್ಟೆ. ವಲ್ಲಿಯ ಬಗ್ಗೆ ನನ್ನೆದುರು ಯಾರೂ ಮಾತಾಡದೆ ಇದ್ದರೂ (ನಾನೂ ಕೂಡಾ ಅವಳ ಹಾಗೆ ಎಂದು ಜಗತ್ತು ಪರಿಗಣಿಸಿದ್ದರಿಂದ) ಹಿಂದೆ ಮಾತಾಡುತ್ತಿದ್ದರು. ಅದು ಹೇಗೋ ನನಗೆ ತಲುಪುತ್ತಿತ್ತು.  

ಹೆಣ್ತನಕ್ಕೆ ಗಂಡಿನ ಬಯಕೆ ಎಂಬ ಹೆಮ್ಮೆ ಬೇಕು. ವಲ್ಲಿ ಹೋರಾಟಕ್ಕೆ ಬಂದಿದ್ದಳು. ಅವಳ ಸುತ್ತ ಸಣ್ಣ ವಲಯ ಬೆಳೆಯುತ್ತಿತ್ತು. ತಪ್ಪಿಲ್ಲ, ಹೋರಾಟ ಯಾವ ಹಾದಿಯಲ್ಲಾದರೂ ಇರಲಿ, ನೊಂದವರಿಗೆ ಒಳ್ಳೆಯದಾಗಲಿ. ʻಗಂಡನ ಹಾಗೆ ಮಾಡಲಿಕ್ಕಾಗುತ್ತಾ? ಬರಿಯ ಆಸೆʼ ಎಂದು ಮೊದಲು ಅವಳ ಹೋರಾಟವನ್ನು ವಿರೋಧಿಸಿದವರು, ನಂತರದ ದಿನಗಳಲ್ಲಿ, ʻಅವಳು ಹೋರಾಟ ಮಾಡಿಕೊಂಡು ಎಲ್ಲವನ್ನು ಮರೆಯಬಹುದಿತ್ತು. ಇನ್ನೊಂದು ಗಂಡಿನ ಸಹವಾಸ ಯಾಕೆ ಬೇಕಿತ್ತು?ʼ ಎಂದರು. ಹೋರಾಟದ ಹಾದಿಗೂ, ಶೃಂಗಾರದ ಭಾವಕ್ಕೂ ಎಲ್ಲಿಗೆಲ್ಲಿಗೆ ಸಂಬಂಧ? ಅದವರವರ ಇಚ್ಚೆ. ನೋಟದಲ್ಲಿನ ಆರ್ದ್ರತೆಗೆ ಕರಗುವುದು ಅವಳಿಗೆ ಬಿಟ್ಟಿದ್ದು. ಸ್ಪರ್ಶ ಬೇಕೆಂದು ಬಯಸುವುದು ಅವಳ ಹಕ್ಕು. ನದಿ ತುಂಬುವವರೆಗೂ ಪಾತ್ರಕ್ಕೆ ಎರಡೇ ದಡ. ತುಂಬಿದ ಮೇಲೆ ದಡಗಳನ್ನು ದಾಟಿ ಹೇಗೆ ಹರಿದು ಹೋಗುತ್ತೋ ಯಾರಿಗೆ ಗೊತ್ತು? ಈ ಭಾವಗಳು ಹೀಗೆ. ಇಂಥ ವಿಷಯಗಳಲ್ಲಿ ಸಹಾಗೆ ಆಸಕ್ತಿ ಇರಲಿಲ್ಲ. ಯಾವಾಗಲಾದರೊಮ್ಮೆ ಹುಕಿ ಬಂದಾಗ, ಅದೂ ಯಾರಾದರೂ ತಾನಾಗೇ ವಿಷಯ ತೆಗೆದರೆ ತಾವೂ ಹರಟುತ್ತಿದ್ದರಾದರೂ ಅದು ತುಂಬಾ ಅಪರೂಪ. 

ಮಹದೇವಯ್ಯನ ತಾಯಿ ಸಹಾಗೆ ಕೆಲಸಂಗತಿಗಳನ್ನು ಮಾತಾಡಬೇಕೆಂದು ಹೇಳಿ ಕಳಿಸಿದ್ದರು. ಅವರ ಆರ್ಥಿಕ ಸ್ಥಿತಿ ಗೊತ್ತಿದ್ದರಿಂದ ಸಹಾಗೂ ವಯಸ್ಸಿನ ಕಾರಣಕ್ಕೆ ಅವರು ಸಫರ್ ಆಗುವುದು ಬೇಡ ಎನ್ನಿಸಿ, ಈ ವಿಷಯದಲ್ಲಿ ಏನನ್ನಾದರೂ ಮಾಡುವ ಎಂದುಕೊಂಡರು. ʻನಮಗ್ಯಾಕೆ ಇನ್ನೊಬ್ಬರ ಗೊಡವೆʼಯೆನ್ನದೆ ಹೊರಟರು. ಆಕೆ ಮೊದಲು, ʻಮಗನ ಜಾಗದಲ್ಲಿ ಮೊಮ್ಮಗುವನ್ನು ನೋಡಿಕೊಂಡಿರುತ್ತೇನೆ, ವಲ್ಲಿಯ ಜೊತೆಗೇ ಇರುತ್ತೇನೆʼ ಎಂದೆಲ್ಲ ಹೇಳಿದರೂ, ಆಕೆಯ ಮಾತಲ್ಲಿ ಆ ಉದ್ದೇಶ ಇರಲಿಲ್ಲ. ಈಗ ಮಗನ ಜಾಗಕ್ಕೆ ಬೇರೆಯವ ಬಂದಿದ್ದಾನೆ. ಇನ್ನು ಮೊಮ್ಮಗುವಿನ ಹೊರತು, ವಲ್ಲಿಯ ಜೊತೆ ಸಂಬಂಧವಿಲ್ಲ ಎನ್ನುವ ತೀರ್ಮಾನಕ್ಕೆ ಮೊದಲೇ ಆಕೆ ಬಂದಂತಿತ್ತು. ಅತ್ತೆ ಮಾವರ ದೊಡ್ಡ ಗುಣ ಎಲ್ಲರಿಗೂ ಬರಲಿಕ್ಕೆ ಹೇಗೆ ಸಾಧ್ಯ?! ಅದು ಅವರವರು ಬದುಕನ್ನು ಅರ್ಥ ಮಾಡಿಕೊಳ್ಳುವಂತೆ ಇರುತ್ತದೆ. ಇದು ಆಕೆಗೇ ಹೊಳೆಯಿತೋ ಅಥವಾ ಸುತ್ತಲಿರುವವರು ಹೇಳಿಕೊಟ್ಟರೋ? ಅಂತೂ ಮಗನ ಸಾವಿನ ನಂತರದ ವಲ್ಲಿಗೆ ಬಂದ ಹಣದಲ್ಲಿ ಹೇಗಾದರೂ ತನ್ನ ಜೀವನಕ್ಕೂ ಆಗುವಂತೆ ಒಂದಿಷ್ಟನ್ನಾದರೂ ಕೊಡಿಸಿ ಎಂದು ಕೇಳಿಕೊಂಡರು.

ಮಧ್ಯಾಹ್ನವೂ ಅಲ್ಲದ ಸಂಜೆಯೂ ಅಲ್ಲದ ಹೊತ್ತದು. ನಾವು ವಲ್ಲಿಯ ಮನೆಗೆ ಹೋದಾಗ ಆಕೆ ಮನೆಯಲ್ಲಿ ಕಟ್ಟಿದ್ದ ಜೇಡಜಾಲವನ್ನು ಕೊಡುವುತ್ತಲಿದ್ದಳು. ಸಹಾರನ್ನು ನೋಡಿದ ಕೂಡಲೆ ಆಕೆಗೆ ವ್ಯಾಜ್ಯದ ಇತ್ಯರ್ಥಕ್ಕಾಗಿ ಬಂದದ್ದು ಆಕೆಗೆ ಅರ್ಥವಾಗಿತ್ತು. ಸೊಂಟಕ್ಕೆ ಕಟ್ಟಿಕೊಂಡಿದ್ದ ಸೆರಗನ್ನು ಬಿಚ್ಚಿ ಸರಿಮಾಡಿಕೊಳ್ಳುತ್ತಾ ಸೌಜನ್ಯಕ್ಕಾಗಿ ಒಳಗೆ ಬರುವಂತೆ ಕರೆದಳು. ಸಹಾ, ʻಮೂಗಿಗೆ ಬಟ್ಟೆಯನ್ನಾದರೂ ಕಟ್ಟಿಕೊಳ್ಳಿ, ಹಾಗೇ ಧೂಳು ಹೊಡುದ್ರೆ ಆಸ್ತಮಾ ಬಂದುಬಿಡುತ್ತೆʼ ಎಂದರು. ಆ ಮಾತುಗಳಲ್ಲಿನ ಕಕ್ಕುಲಾತಿಗೆ ಬೇರೆ ಯಾರಾಗಿದ್ದರೂ ಸೋತು ಹೋಗುತ್ತಿದ್ದರು. ʻಬರುವುದನ್ನು ಯಾರೂ ತಡೆಯಲಾಗುವುದಿಲ್ಲ ಬಿಡಿʼ ಎಂದಿದ್ದಳು ವಲ್ಲಿ. ಒಳಗೆ ಬರುತ್ತಾ ಮನೆಯನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ, ʻಹೇಗಿದ್ದೀರಿ?ʼ ಎಂದೆ ನಾನು. ಮಾತು ಹಾಗೆ, ಹೀಗೆ ಹೊರಳುತ್ತಾ ಟೀ ಕೈಗೆ ಬಂದಾಗ ಸಹಾ, ʻವಲ್ಲಿ ನಿಮಗೆ ನನ್ನ ಕಡೆಯಿಂದ ಒಂದು ಸಣ್ಣ ಸಲಹೆ ಇದೆʼ ಎಂದರು. ನಿರೀಕ್ಷೆಗಳು ಆಕೆಗೂ ಇದ್ದಿದ್ದರಿಂದ ಮಾತುಗಳ ಹಿಂದಿನ ಭಾವವನ್ನು ಹುಡುಕುವವಳಂತೆ ಕುಳಿತಳು.

ʻವಲ್ಲಿ ನಿಮಗೆ ಕೆಲಸ ಸಿಕ್ಕು ಜೀವನದ ದಾರಿ ಸುಗಮವಾಯಿತು. ಜೀವನ ನಡೆಸುವುದು, ಮಗುವನ್ನು ಬೆಳೆಸುವುದು ಕಷ್ಟದ ಕೆಲಸವಲ್ಲ. ಈಗ ನಿಮ್ಮ ಅತ್ತೆಯವರು ಬದುಕಬೇಕಲ್ಲ. ಅವರಿಗೆ ನೀವಲ್ಲದೆ ಬೇರೆ ಯಾರೂ ಇಲ್ಲʼ ಎಂದರು. ಆ ಮಾತಿಗೆ ವಲ್ಲಿಗೆ ಸ್ವಲ್ಪ ಕೋಪವೂ ಬಂದಂತಿತ್ತು. ʻಅದಕ್ಕೆ ನಾನೇನು ಮಾಡಲಿ? ನನ್ನ ಕೆಲಸವನ್ನು ಬಿಟ್ಟುಕೊಡುತ್ತೇನೆ. ಅವರೇ ಮಾಡಲಿʼ ಎಂದಳು. ಅವಳ ಮಾತಿನ ಭಾವವನ್ನು ಅರ್ಥ ಮಾಡಿಕೊಳುತ್ತಾ ನಾನು, ʻಅದು ಹಾಗಲ್ಲ ವಲ್ಲಿ, ಸಹಾರ ಮಾತಿನ ಅರ್ಥ, ಆಕೆಗೆ ಬೇರೆ ಯಾರೂ ಇಲ್ಲದ ಕಾರಣ ನೀವೇ ನೋಡಿಕೊಳ್ಳಬೇಕಲ್ಲ, ವಯಸ್ಸಾಗಿದೆʼ ಎಂದೆ. ಪಟ್ಟೆಂದು, ʻನಿಮ್ಮ ಅತ್ತೆಯನ್ನು ನೀವು ನೋಡಿಕೊಳ್ಳುತ್ತಿದ್ದೀರಾ?ʼ ಎಂದುಬಿಟ್ಟಳು. ಇನ್ನು ಮಾತಾಡಲಿಕ್ಕೆ ನನ್ನ ಬಳಿ ಮಾತೂ ಇರಲಿಲ್ಲ.

ಸಹಾ ವಿಷಯ ಪ್ರಸ್ತಾಪ ಮಾಡುವಾಗ ಗಂಭೀರವಾಗಿದ್ದ ವಲ್ಲಿ, ʻಇದನ್ನು ನಿಮಗೆ ಯಾರು ಹೇಳಿದರು? ನನ್ನ ಪರಿಸ್ಥಿತಿ ನಿಮಗೆ ಗೊತ್ತೇ? ನಿಮ್ಮ ಪ್ರಿಯ ಶಿಷ್ಯ ಕುಡಿತಕ್ಕೆ ಬಿದ್ದು ಮಾಡಿರುವ ಸಾಲ ನೀವು ತೀರಿಸುವಿರಾ? ಇದೆಲ್ಲ ಆ ಮುದುಕಿಗೆ ಗೊತ್ತಿಲ್ಲವಾ? ಮಗನ ದುಡ್ಡನ್ನು ಕೇಳುವವಳು ಸಾಲವನ್ನೂ ಹೊತ್ತುಕೊಳ್ಳಬೇಕಲ್ಲಾವಾ?ʼ ಎಂದೆಲ್ಲಾ ಪ್ರಶ್ನೆಗಳ ಸರಮಾಲೆಯನ್ನೇ ಇಟ್ಟಿದ್ದಳು. ಮುದುಕಿ ಅಂದದ್ದು ನಮಗೆಲ್ಲಾ ನೋವು ತಂದಿತ್ತು. ʻಏನೋ ದೊಡ್ಡ ಮನಸ್ಸು ಮಾಡಿ ಸ್ವಲ್ಪವಾದರೂ ಹಣವನ್ನು ಕೊಡಿ, ನಾಳೆ ಅವರಿಗೆ ಏನಾದರೂ ಆದರೆ ನೀವೇ ನೋವು ತಿನ್ನುವವರುʼ ಎಂದ ಸಹಾರ ʻದೊಡ್ಡ ಮನಸ್ಸುʼ ಎನ್ನುವ ಮಾತಿನಲ್ಲಿ ವ್ಯಂಗ್ಯ ಕಂಡು ಕೆರಳಿದ ವಲ್ಲಿ, ʻನೀವು ಪ್ರಪಂಚಕ್ಕೆ ದೊಡ್ಡವರು. ದೊಡ್ಡ ಮನಸ್ಸಿನವರು. ನಮ್ಮಂಥ ಸಣ್ಣ ಮನಸ್ಸಿನವರಾ? ಸಣ್ಣ ಜನರ ಹತ್ತಿರ ಮಾತಾಡದೆ ನೀವೇ ವ್ಯವಸ್ಥೆ ಮಾಡಿಬಿಡಿʼ ಎಂದಿದ್ದಳು. ಸಹಾರ ಪ್ರಸ್ತಾಪ ಆಕೆಗೆ ನಖಶಿಖಾಂತ ಉರಿದು ಹೋಗಿತ್ತು ಎನ್ನುವುದು ಆಕೆಯ ಮಾತಿನಿಂದಲೇ ಅರ್ಥವಾಗುತ್ತಿತ್ತು.

ಇದು ಆಗದ ಕೆಲಸ ಎಂದು ನಾವು ವಲ್ಲಿಯ ಮನೆಯಿಂದ ಹೊರಡುವಾಗ ಆಕೆ, ʻಇನ್ನು ನನ್ನ ಗಂಡನ ಹೆಸರನ್ನು ಇಟ್ಟುಕೊಂಡು ಯಾವ ರಾಜಕೀಯವನ್ನೂ ಮಾಡಲಿಕ್ಕೆ ಬರಬೇಡಿʼ ಎನ್ನುವುದನ್ನು ಖಡಾಖಂಡಿತವಾಗಿ ಹೇಳಿಬಿಟ್ಟಳು. ಸಹಾ ಸಮಾಧಾನದಿಂದಲೇ, ʻನಿಮ್ಮ ಗಂಡನನ್ನು ಹಿಡಿದು ವ್ಯವಹಾರ ನಾನೇಕೆ ಮಾಡಲಿ? ಸ್ನೇಹಿತ ಎನ್ನುವ ಕಾರಣಕ್ಕೆ ಮಾತಾಡಲಿಕ್ಕೆ ಬಂದೆ. ಆಗದಿದ್ದರೆ ಆಗಲ್ಲ ಎನ್ನಿ, ನಿಮಗೂ ನನಗೂ ಯಾವ ವ್ಯವಹಾರವೂ ಇಲ್ಲʼ ಎಂದಿದ್ದರು. ವಲ್ಲಿಯ ಮಾತು ಸಹಾರನ್ನು ಘಾಸಿಗೊಳಿಸಿತ್ತು. ವಲ್ಲಿಯೂ ಸಹಾ ತನ್ನ ಅಸ್ತಿತ್ವವನ್ನೇ ಅಲ್ಲಾಡಿಸುತ್ತಿದ್ದಾರೆ ಎಂದುಕೊಂಡಿದ್ದಳು. ಇಬ್ಬರ ಮಧ್ಯೆ ಎಂದೆಂದಿಗೂ ಸರಿ ಮಾಡಲಿಕ್ಕಾಗದ ಬಿರುಕೊಂದು ಹೀಗೆ ಮೂಡಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು.

‍ಲೇಖಕರು avadhi

August 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: