ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಮೇಡಂ ಚಿಟ್ಟಿ ದೊಡ್ಡವಳಾದಳು!’

(ಇಲ್ಲಿಯವರೆಗೆ…)

ಏನಿದು? ಚಿಟ್ಟಿ ತನ್ನೊಳಗೆ ಜೀವಪಡೆಯುತ್ತಿದ್ದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗದೆ ತಡಬಡಾಯಿಸುತ್ತಿದ್ದಳು. ಮೈಮೇಲಿನ ಸ್ವೆಟರ್ನ್ನು ಸರಿಮಾಡಿಕೊಂಡು, ಸರಿಯಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು. ಯಾರು ಆಡಿಕೊಂದರೂ ಅದರ ಬಗ್ಗೆ ಚಿಟ್ಟಿಗೆ ಗಮನವಿಲ್ಲ. ತನ್ನ ಗುಟ್ಟು ಗುಟ್ಟಾಗಿ ಉಳಿಯುತ್ತಿದೆಯಲ್ಲ ಅಷ್ಟೇ ಸಾಕು. ಇಷ್ಟಾಗಿಯೂ ಜಗತ್ತನ್ನ ಕಾಣುತ್ತಿದ್ದ ಕಣ್ಣು ಇದ್ದಕ್ಕಿದ್ದಂತೆ ವಿಸ್ತಾರವನ್ನು ಪಡೆದುಕೊಂಡು ಬಟ್ಟಲುಕಂಗಳ ಒಳಗೆ ಏನೇನೋ ಕಲ್ಪನೆಗಳನ್ನು ಹುಟ್ಟುಹಾಕುತ್ತಿತ್ತು. ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗೂ, ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದ್ದ ಕಲ್ಪನೆಗೂ ಏನೋ ಸಂಬಂಧ ಇದೆ ಎನ್ನುವುದು ಅವಳಿಗೆ ಅರ್ಥವಾದರೂ; `ಏನು’ ಎನ್ನುವುದು ಸ್ಪಷ್ಟವಾಗುತ್ತಿರಲಿಲ್ಲ. `ಚಿಟ್ಟಿ ಮುಖದಲ್ಲಿ ಕಳೆ ಬಂದಿದೆ, ಇನ್ನೆರಡು ತಿಂಗಳು ತಡೆದರೆ ಅದೇ ಹೆಚ್ಚು’ ಅಜ್ಜಿ ತನ್ನ ಅನುಭವದ ಕಣ್ಣುಗಳಿಂದ ಚಿಟ್ಟಿಯನ್ನು ಅಳೆಯತೊಡಗಿದಳು. ಹಾಗೆನ್ನುವಾಗಲೆಲ್ಲಾ ಚಿಟ್ಟಿಗೆ ಎಂಥದ್ದೋ ಮುಜುಗರ.
ನಿಜ ಈಗ ಚಿಟ್ಟಿ ಮೊದಲಿನ ಹಾಗಿಲ್ಲ. ಸದಾ ಸ್ನೇಹಿತರು, ಕಾಡು, ಅದೂ ಇದೂ ಎಂದು ಓಡಾಡುತ್ತಿದ್ದವಳು, ಈಗ ಮನಸ್ಸಿಗೆ ಬಂದರೆ ಸ್ನೇಹಿತರು, ಇಲ್ಲದಿದ್ದರೆ ತಾನಾಯಿತು ತನ್ನ ಪಾಡಾಯಿತು ಎಂದು ಇದ್ದು ಬಿಡುತ್ತಿದ್ದಳು. `ಏನಾಯ್ತೆ ಚಿಟ್ಟಿ?’ ಎಂದರೆ `ಯಾಕೋ ತಲೆ ನೋವು’ ಎನ್ನುತ್ತಿದ್ದಳು. ಅಪ್ಪ ಹುಬ್ಬುಗಂಟು ಹಾಕಿದರೆ ಅಮ್ಮ ಒಳಗೆ ನಗುತ್ತಿದ್ದಳು. ಮೊಗ್ಗು ಹೂವಾಗಿ ಅರಳುವಾಗಿನ ಹಿಂಸೆ ಅರಳಿದ ಹೂವಿಗಷ್ಟೇ ಗೊತ್ತಲ್ಲವಾ?
ಅವತ್ತು ಹೀಗೆ ನವರಾತ್ರಿಯ ಸಂಭ್ರಮ. ಹಬ್ಬದ ಮೊದಲ ದಿನ. ಊರಿನ ಸಣ್ಣ ಹೆಣ್ಣುಮಕ್ಕಳು ಸೀರೆ ಉಟ್ಟು ತಾವೇ ಪುಟ್ಟಗೌರಿಯರಂತೆ ಪುಟಪುಟನೆ ನಡೆದಾಡುತ್ತಾ, ಮನೆ ಮನೆಯ ಬೊಂಬೆಗಳನ್ನ ನೋಡಲು ಹೊರಡುತ್ತಿದ್ದರು. ಅಮ್ಮ ಮಾಳಿಗೆಯ ಮೇಲಿಟ್ಟಿದ್ದ ಬೊಂಬೆಗಳನ್ನ ಇಳಿಸಿ ಅವಕ್ಕೆ ಸಿಂಗಾರ ಮಾಡುತ್ತಿದ್ದಳು. ತಾಯಂದಿರೆಲ್ಲಾ ತಮಗೆ ಮದುವೆಯಲ್ಲಿ ಕೊಟ್ಟ ಪಟ್ಟದಗೊಂಬೆಗಳೆರಡಕ್ಕೂ ಸೀರೆ ಉಡಿಸಿ ಕಿರೀಟ ಇಟ್ಟು ಸಿದ್ಧ ಮಾಡುತ್ತಿದ್ದರೆ ಮನೆಯ ಹುಡುಗರೆಲ್ಲಾ ಆಕಾಶ ಮಲ್ಲಿಗೆಗೆ ಮುಗಿಬೀಳುತ್ತಿದ್ದರು.
ಆಕಾಶಕ್ಕೆ ಬೆಳೆದುನಿಂತ ಮರದಲ್ಲಿ ಭೂಮಿಯ ಕಡೆಗೆ ಮುಖಮಾಡಿ ಬಿಡುತ್ತಿದ್ದ ಹೂಗಳು, ಎಂಥವರ ಕಣ್ಣನ್ನೂ ಸೆಳೆಯುತ್ತಿತ್ತು. ಇನ್ನು ಆ ಹೂಗಳ ವಾಸನೆಯೋ ತಾಳೆಯ ಹೂವಿನಷ್ಟೇ ಕಟು, ಯೋಜನಾಗಂಧಿ. ಯಾರು ಅದಕ್ಕೆ ಆ ಹೆಸರನ್ನು ಕೊಟ್ಟರೋ ಗೊತ್ತಿಲ್ಲ, ರಾತ್ರಿ ನಕ್ಷತ್ರಗಳ ಹಾಗೆ ಗಿಡದ ತುಂಬಾ ಅರಳಿ ನಿಂತಿರುತ್ತಿದ್ದವು. ಎಲ್ಲರಿಗೂ ಈ ಹೂವಿನ ಅಗತ್ಯ ಇರುವುದರಿಂದ ಜೊಂಪೆ ಜೊಂಪೆಯಾಗಿ ಬಿಟ್ಟ ಹೂವಿನ ಗೊಂಚಲಿಗೆ ಕೋಲನ್ನು ಹೊಡೆದು ಕೆಳಕ್ಕೆ ಬೀಳುವ ಹಾಗೆ ಮಾಡುತ್ತಿದ್ದರು. ಆ ಹೂವನ್ನು ತಂದು ಹೊಸಿಲಿಗೆ ಇಟ್ಟು ಪೂಜೆ ಮಾಡುವುದು ರೂಢಿ.
ಕುಸುಮೆ ಇದ್ದರೂ ಇನ್ಯಾವ ಪೂಜೆಗೂ ಬಾರದ ಆ ಹೂವು ಈ ಹಬ್ಬದಲ್ಲಿ ಮಾತ್ರ ಹೊಸಿಲನ್ನ ಅಲಂಕರಿಸಿ ಮನೆಯ ತುಂಬಾ ವಾಸನೆಯನ್ನು ಅರಳಿಸಿ, ಬೊಂಬೆ ಬಾಗಿನದ ಘಮಲಿನೊಂದಿಗೆ ಬೆರೆಯದಿದ್ದರೆ ನವರಾತ್ರಿ ಅನ್ನಿಸುತ್ತಲೇ ಇರಲಿಲ್ಲ. `ಊರಿಗೊಬ್ಳೆ ಪದ್ಮಾವತಿ’ ಎನ್ನುವ ಹಾಗೆ ಶಾಂತಾರ ಮನೆಯ ಹಿತ್ತಲಿನಲ್ಲಿ ಸೊಗಸಾದ ಆಕಾಶಮಲ್ಲಿಗೆಯ ಮರವಿತ್ತು. ಅದರ ಉದ್ದ ತೊಟ್ಟುಗಳನ್ನು ಒಂದರೊಳಗೆ ಒಂದಾಗಿ ಹೆಣೆದು ದಾರವೇ ಇಲ್ಲದೆ ಸಲೀಸಾಗಿ ಹಾರ ಮಾಡಬಹುದಿತ್ತು. ಅದರ ಘಮಲಿಗೆ ಮುಡಿಯಲು ಆಸೆ ಆಗುತ್ತಿದ್ದಿತಾದರೂ ಮುಡಿಯುವ ಧೈರ್ಯ ಮಾಡುತ್ತಿರಲಿಲ್ಲ. ಅಕಸ್ಮಾತ್ ಮುಡಿದರೆ ತಲೆಯ ತುಂಬಾ ಹೇನು, ನವುಟು ತುಂಬಿಬಿಡುತ್ತಿದ್ದವು. ಆ ಹಿಂಸೆ ಬೇಡವೇ ಬೇಡ ಎಂದು ಹೂವಿನ ತಂಟೆಗೆ ಯಾರೂ ಹೋಗುತ್ತಿರಲಿಲ್ಲ. ಹಾಗೆಂದು ಮಕ್ಕಳ ತಲೆಗಳಲ್ಲಿ ಹೇನುಗಳಿಗೇನು ಬರವೂ ಇರುತ್ತಿರಲಿಲ್ಲ. ಅಕಸ್ಮಾತ್ ಆ ಕಡೆ ಬರುವಾಗ ದಾರಿಯಲ್ಲಿ ಉದುರಿದ್ದ ಒಂದೆರಡು ಹೂವುಗಳನ್ನ ಆರಿಸಿಕೊಂಡು, ದಳವನ್ನು ಬಿಡಿಸಿ ಅದನ್ನು ಕೈಲಿ ಸ್ವಲ್ಪವೇ ಉಜ್ಜಿ, ಬಾಡಿಸಿ ನಂತರ ಬಾಯಲ್ಲಿ ಇಟ್ಟು ಒಳಕ್ಕೆ ಚೀಪಿಕೊಂಡರೆ ಪುಟ್ಟ ಗುಳ್ಳೆ ಏಳುತ್ತಿತ್ತು. ಅದನ್ನು ಹಣೆಗೆ ಬಡಿದುಕೊಂಡು ಟಪ್ಪೆಂದು ಒಡೆಯುತ್ತಿದ್ದುದು ಆಟವಾಗುತ್ತಿತ್ತು.
ನವರಾತ್ರಿ ಬಂತೆಂದರೆ ಶಾಂತಾರ ಮನೆಯ ಹಿತ್ತಿಲು ಹುಡುಗರಿಂದ ತುಂಬಿಬಿಡುತ್ತಿತ್ತು. ಒಣಗಿದ ಕೋಲುಗಳನ್ನು ಹುಡುಕಿ, ಆಕಾಶಮಲ್ಲಿಗೆ ಮರಕ್ಕೆ ಹೊಡೆಯುತ್ತಿದ್ದರು. ಹುಡುಗರೆಲ್ಲಾ ಹೋದಮೇಲೆ ಶಾಂತಾ ಆ ಕಟ್ಟಿಗೆಯನ್ನು ಆರಿಸಿ ನಾಳೆ ಒಲೆ ಉರಿಗಾಯಿತು ಎಂದು ಎತ್ತಿಡುತ್ತಿದ್ದರು. ಊರಿನ ದೊಡವರು, ಚಿಕ್ಕವರು ಸಕಲಾದಿಗೂ ಆಕೆ ಶಾಂತಾನೇ. ಚಿಟ್ಟಿ, ಭಾರತಿ, ನಕ್ಕತ್ತು ಎಲ್ಲರೂ ತಮಗಿಂತ ಸ್ವಲ್ಪ ದೊಡ್ಡವರೇನೋ ಎನ್ನುವ ಹಾಗೇ ಶಾಂತಾರನ್ನ `ಏನ್ರೀ ಶಾಂತಾ’ ಎಂದೆ ಮಾತಾಡುತ್ತಿದ್ದುದು.
ಶಾಂತಾರ ಗಂಡ ಸತ್ಯಣ್ಣ ಪೋಸ್ಟ್ಮ್ಯಾನ್, ಮಹಾನ್ ಸಂಸ್ಕೃತ ಪಂಡಿತ. ಆದರೆ ಯಾವ ಕಾರಣಕ್ಕೋ ಗೊತ್ತಿಲ್ಲ ಅವರನ್ನ ಕಂಡರೆ ಊರ ಜನಕ್ಕೆ ಅಂಥಾ ಗೌರವ ಇದ್ದ ಹಾಗಿರಲಿಲ್ಲ. ಬಹುಶಃ ಅವರ ದೇಹದಲ್ಲಿ ಸ್ವಲ್ಪವೂ ಜಾಗವಿಲ್ಲದಂತೆ ಗಂಟುಗಳಿದ್ದಿದ್ದು ನೋಡೋದಕ್ಕೆ ವಿಕಾರವಾಗಿದ್ದಿದ್ದೆ ಕಾರಣವಿರಬೇಕು. ಇಲ್ಲದಿದ್ದರೆ ಅಷ್ಟು ಸಂಸ್ಕೃತ ಶ್ಲೋಕಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದ ಅವರನ್ನು ಅವಜ್ಞೆಗೆ ಗುರಿ ಮಾಡುವುದು ಎಂದರೇನು? ಅಪ್ಪ ಮಾತ್ರ ಚಿಟ್ಟಿಯನ್ನು ಅವರ ಹತ್ತಿರ ಅಮರಕೋಶ ಕಲಿಯಲು ಕಳಿಸುತ್ತಿದ್ದ. . . ಮಗಳ ಬಾಯಲ್ಲಿ ಒಂದೂ ಅಪಭ್ರಂಶ ಬರಬಾರದು ಎಂದು. `ಯಸ್ಯಜ್ಞಾನ ದಯಸಿಂಧು ರಗಾದಸ್ಯ ನಗಾ ಗುಣಾಃ . . . ‘ ಎಂದು ಹೇಳುವಾಗಲೇ ಒಳಗೆ ಶಾಂತ ರಾತ್ರಿ ತಿಂಡಿಗೆ ತಯಾರಿ ನಡೆಸುತ್ತಿದ್ದರು. ಹೀಗೆ ಅಮರಕೋಶ ಮುಂದುವರೆಯುವಾಗ ಚಿಟ್ಟಿ `ಕಾರ ತಿರತ್ಯಪಿ’ ಎನ್ನುವ ಸಾಲಿಗೆ ಬದಲಾಗಿ `ಕಾರತಿರುವ್ತೀನಿ’ ಎಂದುಬಿಟ್ಟಿದ್ದಳು. ಎದುರಿಗೆ ಇಟ್ಟುಕೊಂಡಿದ್ದ ರೂಲುದೊಣ್ಣೆಯಲ್ಲಿ ಪಟ್ಟೆಂದು ನೆಲಕ್ಕೆ ಕುಟ್ಟಿ `ಅಮರ ಕೋಶ ಕಲಿ ಅಂದ್ರೆ ತಿರುವ್ತೀನಿ ಅಂತಾಳೆ! ಎಷ್ಟಾದ್ರೂ ಅಷ್ಟೇಬಿಡು, ಕಾರ ತಿರುವಿ ಸಾರು ಮಾಡು’ ಎಂದು ಬೈದಿದ್ದರು. ಅವರಿಗೆ ಮಕ್ಕಳನ್ನ ಹಿಂಸಿಸುವುದಾಗಲೀ, ಅವರ ಮೇಲೆ ದೊಡ್ಡವರಲ್ಲಿ ದೂರು ಹೇಳುವುದಾಗಲೀ ಸಾಧ್ಯವೇ ಇರಲಿಲ್ಲ. ಹೀಗಾಗಿ ಮೈತುಂಬಾ ಗಂಟುಗಳಿದ್ದ ಸತ್ಯಣ್ಣ ಚಿಟ್ಟಿ ಪಾಲಿಗೆ ಮೇಷ್ಟ್ರು. ಮಕ್ಕಳಿಲ್ಲದ ಇಬ್ಬರಿಗೂ ಊರಲ್ಲಿರುವವರೆಲ್ಲಾ ಮಕ್ಕಳೇ. ಎಲ್ಲರನ್ನೂ ಮರಿ ಎಂದೇ ಮಾತಾಡಿಸುತ್ತಿದ್ದರು.
ಶಾಂತಾ ಪೀಚು ಹೆಣ್ಣು, ನೋಡೋದಕ್ಕೆ ಸುಂದರಿ ಅಲ್ಲದಿದ್ದರೂ ಅವರ ಉಬ್ಬು ಹಲ್ಲು ಅವರನ್ನ ವಿಚಿತ್ರವಾಗಿ ಕಾಣುವ ಹಾಗೆ ಮಾಡುತ್ತಿತ್ತು. ಬೇರೆ ಕೆಲಸ ಇಲ್ಲದ್ದರಿಂದಲೋ ಏನೋ ಮನೆಯನ್ನು ಓರಣ ಮಾಡುವುದರಲ್ಲೇ ಜನ್ಮ ಕಳೆಯುತ್ತಿದ್ದ ಶಾಂತಾಗೆ ತನ್ನನ್ನು ಹೇಗೆ ಇರಿಸಿಕೊಳ್ಳಬೇಕು ಎನ್ನುವುದೇ ಗೊತ್ತಿರಲಿಲ್ಲ. ಕಿಟ್ಟ ಕಟ್ಟಿದ್ದ ಹಲ್ಲುಗಳು, ಮಾತಾಡುವಾಗ ಹಲ್ಲಿನ ಕಾರಣಕ್ಕೋ ಏನೋ ಅಷ್ಟು ದೂರ ಹಾರುತ್ತಿದ್ದ ಎಂಜಲ ತುಂತುರು… ಶಾಂತಾರ ಹತ್ತಿರಕ್ಕೆ ಯಾರನ್ನೂ ಬರಗೊಡುತ್ತಿರಲಿಲ್ಲ. ಬಾಯ ವಾಸನೆ ಕಡಿಮೆಯಾಗಲೆಂದು ಹಾಕಿದ ಎಲಡಿಕೆ ಕೆಂಪು, ಅವರ ಹಲ್ಲಿನ ಕಿಟ್ಟದ ಮೇಲೆ ಕೂತು ವಿಚಿತ್ರ ಆಕಾರಗಳನ್ನು ಸೃಷ್ಟಿಸುತ್ತಿತ್ತು. ಆಗೀಗ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಅದನ್ನು ತನ್ನ ಸೀರೆಯ ಸೆರಗಿನಲ್ಲಿ ಉಜ್ಜಿ ತೆಗೆಯುತ್ತಾ ನಿಂತಿದ್ದನ್ನ ಚಿಟ್ಟಿಯೇ ನೋಡಿದ್ದಳು. ಇಷ್ಟೆಲ್ಲಾ ಮಾಡುವ ಬದಲು ಹಲ್ಲು ಉಜ್ಜಬಾರದೇ ಎಂದು ಅನ್ನಿಸಿತ್ತಾದರೂ ಪಾಪ ಅನ್ನಿಸಿ ಅವರಿಗೆ ಹೇಳದೆ ಉಳಿದಿದ್ದಳು. ಶಾಂತಾಗೆ ಯಾವುದೂ ಗೊತ್ತೇ ಆಗುತ್ತಿರಲಿಲ್ಲ. `ಅದ್ಯಾಕ್ ಹಾಗ್ ಹೋಗ್ತೀರ ಬನ್ನಿ’ ಎಂದು ಎಲ್ಲರನ್ನೂ ಕರೆದು ಕರೆದು ಮಾತಾಡಿಸುತ್ತಿದ್ದರು.
ರಾತ್ರಿಯಾಯಿತೆಂದರೆ ಮಾಡುತ್ತಿದ್ದ ತಿಂಡಿಯಲ್ಲಿ ಭಾರತಿಗೊಂದು, ಚಿಟ್ಟಿಗೊಂದು ಪಾಲು ಪಕ್ಕಕ್ಕೆ ಕೂತು ಪಾಠ ಮುಗಿಯುವುದನ್ನೆ ಕಾಯುತ್ತಿರುತ್ತಿತ್ತು. ಶಾಂತಾ ಕೈಲಿ ಏನೋ ಜಾದೂ ಅಂತೂ ಇತ್ತು. ತಿಂಡಿಯ ಘಮಲು ಪಾಠಕ್ಕೆ ಕೂತವರ ಉಸಿರನ್ನ ತಾಕಿ ತಿನ್ನುವ ಆಸೆ ಹೆಚ್ಚುತ್ತಿತ್ತು. ಪಾಠ ಮುಗಿದ ಮೇಲೆ ಬಾಳೆ ಎಲೆಯ ಮೇಲೆ ಹಾಕಿದ ರೊಟ್ಟಿಯೋ, ದೋಸೆಯೋ ಯಾವುದೋ ಒಂದು ಮುಂದೆ ಬಂದು ತಿನ್ನು ಎಂದು ಕೂರುತ್ತಿದ್ದವು. ಎದುರಿಗೆ ನಿಂತ ಶಾಂತ `ತಿನ್ನಿ’ ಎಂದು ಬಲವಂತ ಮಾಡುತ್ತಿದ್ದರು. `ಅರೆ ಹೆಂಗಸೆ ಮಾಡುವಾಗ ಹೇಗೆ ಮಾಡಿದೆ ಅಂತ ಕೇಳಲ್ಲ; ಆದ್ರೆ ತಿನ್ನುವಾಗ ಹೀಗೆ ಎದುರಿಗೆ ನಿಂತು ಯಾಕೆ ಹಿಂಸೆ ಕೊಡ್ತೀಯಾ’ ಎಂದು ಮನಸ್ಸಿನಲ್ಲೇ ಅಂದುಕೊಂಡರೂ ಬಿಡದೆ ಕಷ್ಟಪಟ್ಟು ಅದನ್ನೂ ಇಬ್ಬರೂ ತಿನ್ನುತ್ತಿದ್ದರು. ಅವರನ್ನೆ ನೋಡುತ್ತಾ ಕಣ್ಣು ತುಂಬಿಕೊಳ್ಳುತ್ತಿದ್ದ ಶಾಂತಾ ಅಪರೂಪಕ್ಕೆ ಎನ್ನುವಂತೆ ನಿಮಗೆ ಒಪ್ಪುವ ಹುಡುಗನನ್ನು ಮಾತ್ರ ಮದುವೆ ಆಗಿ ಎನ್ನುತ್ತಿದ್ದರು. ಇಬ್ಬರೂ ಒಳ್ಳೆಯವರೇ, ಒಳಗೆ ಏನೋ ಯಾರಿಗೆ ಗೊತ್ತು? ಹಾಗಂತ ಮೇಷ್ಟ್ರ ಬಗ್ಗೆ ಯಾವತ್ತೂ ಯಾರಲ್ಲೂ ಶಾಂತ ಏನು ದೂರನ್ನೂ ಹೇಳಿದವರಲ್ಲ. ಇಷ್ಟೆಲ್ಲಾ ಇದ್ದರೂ `ಶಾಂತಾವ್ರೆ’ ಎನ್ನುತ್ತಾ ಹೋಗಿ ಅವರ ಜೊತೆ ಅಡುಗೆ ಮನೆಯಲ್ಲಿ ಕೂತು ಹರಟುತ್ತಿದ್ದಳು.

ಹೀಗಿದ್ದವರು ಹಿತ್ತಲಿಗೆ ಮಕ್ಕಳು ಬಂದರೆ ಗದರುತ್ತಾರೆಯೇ? ಹಿತ್ತಲಲ್ಲಿ ಹಾಕಿರುವ ಬೆಟ್ಟತಾವರೆ, ಸೀಬೆ, ಕಿತ್ತಳೆ ಎಲ್ಲವೂ ಕಂಡವರ ಪಾಲೇ! ಶಾಂತಾ ಆಗಲಿ, ಸತ್ಯಣ್ಣ ಮೇಷ್ಟ್ರಾಗಲಿ ಯಾವತ್ತೂ ಗೊಣಗಿದ್ದನ್ನ ನೋಡೇ ಇಲ್ಲ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಓಡಾಡುವ ಹುಡುಗರು ಮಾತ್ರಾ ಇವರ ಮನೆಯ ಹಿತ್ತಲಿಗೆ ಬರುವಾಗ ಹುಷಾರಿಂದ ಹೆಜ್ಜೆಗಳನ್ನು ಇಡುತ್ತಿದ್ದರು.
`ಈ ಶಾಂತಾಗೆ ಯಾಕೆ ಬುದ್ಧಿ ಇಲ್ವೋ ಕಾಣೆ. ತಾನು ಮುಸುಗು ಹಾಕಿಕೊಂಡು ಬಯಲಿಗೆ ಹೋದ್ರೆ ಜಗತ್ತಿಗೆ ಕಾಣಲ್ಲ ಅಂತ ಯಾಕೆ ಅಂದುಕೊಳ್ತಾಳೊ?’ ಹಿತ್ತಲಿನಿಂದ ಬರುತ್ತಾ ಭಾರತಿಯ ತಂದೆ ಮಂಜಣ್ಣನವರು ಗೊಣಗುತ್ತಿದ್ದರು. ತಿಂದರೆ, ಕುಡಿದರೆ ಬಯಲಿಗೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದ ಶಾಂತಾರಿಗೆ `ಅದಕ್ಕೆ ತಿಂದಿದ್ದು ಮೈಗೆ ಅಂಟಲ್ಲ ಈ ಅಭ್ಯಾಸ ಬಿಡು’ ಎಂದು ಬುದ್ದಿ ಹೇಳಿದ್ರೂ ಹೆಂಡತಿ ತನ್ನ ಮಾತನ್ನ ಕೇಳಲ್ಲ ಅನ್ನಿಸಿ ಸತ್ಯಣ್ಣ ಮೇಷ್ಟ್ರು ಅದಕ್ಕಾಗಿ ಕಕ್ಕಸು ಮನೆಯನ್ನೇ ಕಟ್ಟಿಸಿದ್ದರು. ಶಾಂತಾಗೆ ಮಾತ್ರ ಅದರಲ್ಲಿ ಸುಖ ಕಾಣದೆ ಬಯಲಿಗೆ ಕೂರುತ್ತಿದ್ದರು. ಮೊಣಕಾಲಿನ ನೋವಿನಿಂದ ನರಳುತ್ತಿದ್ದ ಅವರಿಗೆ ಕೂರುವುದು ಏಳುವುದು ಕಷ್ಟವಾಗಿತ್ತು. ಏಳುವ ಮುಂಚೆ ಕೈಯ್ಯನ್ನು ನೆಲಕ್ಕೆ ಕೊಟ್ಟು ಏಳುತ್ತಿದ್ದರು. ಹಾಗೆ ಏಳುವಾಗ ವಾರದಲ್ಲಿ ನಾಕು ದಿನವಾದರೂ ಮುಟ್ಟಿದರೆ ಮುನಿಯ ಮುಳ್ಳು ಮುರಿದು ಶಾಂತಾರ ಕೈಗಳನ್ನು ಚುಚ್ಚಿಕೊಳ್ಳುತ್ತಿತ್ತು. ಚುಚ್ಚಿದ ಮುಳ್ಳನ್ನ ಗಂಡನ ಹತ್ತಿರ ತೆಗೆಸಿಕೊಳ್ಳಲು ಪ್ರಯತ್ನಿಸಿ ಕಣ್ಣು ಕಾಣದ ಸತ್ಯಣ್ಣ ಮೇಷ್ಟ್ರು ತನ್ನ ಸೋಡಾ ಗ್ಲಾಸನ್ನು ಸರಿ ಮಾಡಿಕೊಂಡು ನಿಂತು ಆಗದೆ `ಮರೀ’ ಎಂದು ಪಕ್ಕದ ಮನೆಯ ಭಾರತಿಯನ್ನು ಕರೆಯುತ್ತಿದ್ದರು.
ಮಂಜಣ್ಣ `ಹೋಗೆ ಭಾರತಿ ಶಾಂತಾಳ ಮೂಗಿಗೆ ಮುಳ್ಳು ಚುಚ್ಚಿದೆಯಂತೆ, ತೆಗೆದು ಬಾ’ ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು. ಭಾರತಿಗೆ ಅರ್ಥವಾಗದೆ `ಮುಳ್ಳು ಚುಚ್ಚಿರೋದು ಮೂಗಿಗಲ್ಲಪ್ಪ ಕೈಗೆ’ ಎಂದು ತಿದ್ದಿ ಹೋಗುತ್ತಿದ್ದಳು. ಚಿಟ್ಟಿಗೆ ಆಗೆಲ್ಲಾ ಭಾರತಿಯ ತಂದೆಗೆ ಮೂಗಿಗೂ ಕೈಗೂ ವ್ಯತ್ಯಾಸ ಗೊತ್ತಾಗದೆ ಹೋಗಿದ್ದಕ್ಕೆ ವಿಷಾಧ ಅನ್ನಿಸುತ್ತಿತ್ತು. ಅದನ್ನ ಭಾರತಿಯ ಹತ್ತಿರ ಹೇಳಿದರೆ ನೋವಾದೀತು ಎನ್ನಿಸಿ ಸುಮ್ಮನಾಗಿಬಿಡುತ್ತಿದ್ದಳು. `ಶಾಂತಾ ಚೆನ್ನಾಗಿ ಗೊಬ್ಬರ ಹಾಕ್ತಾಳೆ ಗಿಡ ಸೊಂಪಾಗಿ ಬೆಳೆಯುತ್ತೆ’ ಅನ್ನೋದು ಅವರ ಓರಿಗೆಯ-ಹಿರಿಯರ ತಮಾಷೆಯ ಮಾತಾಗಿತ್ತು. ಆದ್ರೆ ನಲವತ್ತೈದನ್ನ ದಾಟಿದ ಶಾಂತಾರ ಮನಸ್ಸಿನಲ್ಲಿ ನೋವು ಮಡುಗಟ್ಟಿತ್ತು. `ಏನೋ ಗಂಡ ಅಂತ ಸಿಗ್ತಿದ್ದಾನೆ ಮದ್ವೆ ಮಾಡ್ಕೊಂಡ್ಬಿಡು. ಇಲ್ಲಾಂದ್ರೆ ಇದೂ ಆಗಲ್ಲ. ಜೀವ್ನ ಪೂರ್ತಿ ಹೀಗೆ ಕನ್ಯೆಯಾಗೆ ಸತ್ತು ಹೋಗ್ತೀಯ ನಿಂಗೆ ಮೋಕ್ಷ ಸಿಗಲ್ಲ’ ಅಂತ ಮನೆಯಲ್ಲಿ ಬಲವಂತ ಮಾಡಿದ್ದರಿಂದ ಶಾಂತಾ ಸತ್ಯಣ್ಣ ಮೇಷ್ಟ್ರನ್ನ ಮದ್ವೆ ಆಗಿದ್ದರು.
ಒಂದು ದಿನ ಹೀಗೆ ಅಮ್ಮನ ಜೊತೆ ಚಕ್ರತೀರ್ಥಕ್ಕೆ ಬಂದಾಗ ಪದ್ದಮ್ಮ ಆಗಲೇ ಬಟ್ಟೆ ಒಗೆದು ಹಿಂಡುತ್ತಿದ್ದಳು. ಅಮ್ಮನನ್ನು ನೋಡಿದವಳೆ `ತಡ ಆಯ್ತಲ್ಲಾ?’ ಎಂದಳು. ಬಂಡೆ ಮೇಲೆ ಬಟ್ಟೆ ಒಣಹಾಕುವ ಸಲುವಾಗಿ ಶಾಂತಾಗೂ ಪದ್ದಕ್ಕನಿಗೂ ನಡೆದ ಜಗಳ ಊರಿಗೇ ಗೊತ್ತಾಗಿತ್ತು. `ಪಾಪದ ಹೆಣ್ಣು ಶಾಂತಾ ಯಾರೊಂದಿಗೂ ಜಗಳ ಮಾಡದವರು ಈ ಪದ್ದಮ್ಮನ ಜೊತೆ ಜಗಳ ಮಾಡಿದ್ದಾರೆ ಎಂದರೆ ಅವಳು ಶಾಂತರನ್ನು ಎಷ್ಟು ನೋಯಿಸಿರಬೇಕು!’ ಎಂದಿದ್ದರು. ತನ್ನ ಬಾಯಶುದ್ಧತೆಯನ್ನು ಪದ್ದಮ್ಮ ಅಮ್ಮನೊಂದಿಗೆ ಸಾರಿ ಹೇಳುವಂತೆ ಶಾಂತಾರನ್ನ ಬೈಯ್ಯತೊಡಗಿದಳು`. . . ಅದಕ್ಕೆ ಅವಳಿಗೆ ಮಕ್ಕಳಾಗಿಲ್ಲ ನಿಮಗ್ ಗೊತ್ತಾ ಅವಳು ಗಂಡನನ ತಬ್ಬಿ ಮಲಗೋದೇ ಇಲ್ವಂತೆ ಮೈತುಂಬಾ ಗಂಟು ಗಂಟು. ಮರದ ದಂಟನ್ನ ತಬ್ಬಿದ ಹಾಗೆ ಆಗುತ್ತೆ . . . ಇವಳಿಗೇ ಇಂಥಾ ಕೊಬ್ಬಿರಬೇಕಾದರೆ ನಂಗ್ಯಾಕೆ ಇರಬಾರದು ಐದು ಮಕ್ಕಳ ತಾಯಿ’ ಎಂದಿದ್ದಳು.
ಅಮ್ಮನಿಗೆ ಈ ಮಾತೆಲ್ಲಾ ಚಿಟ್ಟಿ ಎದ್ರೂಗೆ ಆಗ್ತಾ ಇರೋದು ಸಂಕೋಚ ಅನ್ನಿಸಿತ್ತು. `ಪದ್ದಮ್ಮ ಮಗು ಇದೆ ಬೇಡ ಸುಮ್ನೆ ಇರಿ’ ಎಂದರೂ ಕೇಳಿಸಿಕೊಳ್ಳದೆ ಎಲ್ಲಾ ಮಾತಾಡಿದ್ದಳು. ಚಿಟ್ಟಿಗೆ ರೇಗು ಹತ್ತಿ `ಇನ್ನೊಬ್ರ ಬಗ್ಗೆ ಕೆಟ್ಟದಾಗಿ ಮಾತಾಡ್ಬಾರ್ದು ಅಂತ ನಮ್ಮ ಸ್ಕೂಲಲ್ಲಿ ಹೇಳಿದ್ದಾರೆ’ ಎಂದುಬಿಟ್ಟಿದ್ದಳು. `ಅಯ್ಯೋ ಅಯ್ಯೋ ನಿನ್ನ ಬಾಯಿ ಸೇದ್ಹೋಗಾ, ನನ್ನೇ ಅಂತೀಯಾ? ನೋಡಿದ್ರಾ ನಿಮ್ಮ ಮಗಳ ಮಾತನ್ನ? ಇವಳು ಇನ್ನ ನಿಮ್ಮ ಕೈ ತಪ್ಪಿದ ಹಾಗೆ ಬಿಡಿ’ ಎಂದುಬಿಟ್ಟಿದ್ದಳು. `ತಿಳಿದಿರೋ ಹುಡ್ಗಿ ಹೀಗೆಲ್ಲಾ ಶಾಪ ಹಾಕ್ಬೇಡಿ’ ಎಂದು ಅಮ್ಮಾ ಕೂಡಾ ಅವಳನ್ನ ಗದರಿದ್ದಳು. ಶಾಪ ಎನ್ನುವ ಮಾತು ಚಿಟ್ಟಿಯ ತಲೆಯಲ್ಲಿ ಕೂತುಬಿಟ್ಟಿತ್ತು. ತನಗೆ ಏನಾಗಬಹುದು ಎನ್ನುವ ಯೋಚನೆ ಅವಳನ್ನ ಪದೇ ಪದೇ ಕಾಡುತ್ತಿತ್ತು. ಅಕಸ್ಮಾತ್ ಪದ್ದಮ್ಮ ಹಾಕಿದ ಶಾಪ ನಿಜವೇ ಆಗಿಬಿಟ್ಟರೆ? ಚಿಟ್ಟಿಯ ಮೈ ಜುಂ ಎಂದಿತು. ತಾನು ಸುಮ್ಮನೆ ಇರಬೇಕಿತ್ತು ಎಂದು ಸಾವಿರ ಸಲ ಹೇಳಿಕೊಂಡಿದ್ದಳು. ಈ ಘಟನೆಯಿಂದ ಪದ್ದಮ್ಮನಿಗೂ ಅಮ್ಮನಿಗೂ ಅಷ್ಟಕ್ಕಷ್ಟೇ ಎನ್ನುವ ಹಾಗಿರುತ್ತಿತ್ತು.
ಆಮೇಲೆ ಪುಟ್ಟಿಯ ಕೈಲಿ ಶುಕ್ರವಾರದ ದಿನ ಅಮ್ಮ `ಕುಂಕುಮಕ್ಕೆ ಬರಬೇಕಂತೆ’ ಅಂತ ಹೇಳಿಕಳಿಸಿದಾಗ `ಒಳಗಿಲ್ಲಂತೆ’ ಎಂದು ಎದುರು ಹೇಳಿಕಳಿಸಿದ್ದಳು ಪದ್ದಮ್ಮ. ಪುಟ್ಟಿ ಆ ಮಾತನ್ನ ಹಾಗೆ ಹೇಳುವಾಗ ಅಜ್ಜಿ ಮೂಲೇಲಿ ಕೂತು `ಚಟ್ಟಕ್ಕೆ ಏರೋ ಹೊತ್ತು ಬಂದ್ರೂ ಪಟ್ಟ ಹತ್ತೋದು ನಿಂತಿಲ್ಲ ಅಂತ ಸಾರ್ತಾಳೆ ಆ ಪದ್ದಮ್ಮ ಇನ್ನೂ ಹುಡ್ಗಿ. . . ಇನ್ನೂ ಹುಡ್ಗಿ ಅಂದ್ಕೊಂಡಿದ್ದಾಳೆ’ ಅಂತ ಗೊಣಗಿದ್ದಳು. ಚಟ್ಟ ಪಟ್ಟ ಪ್ರಾಸ ಚೆನ್ನಾಗಿದೆ ಎಂದು ಅಜ್ಜಿಯ ಮಾತಿಗೆ ಕೈ ತಟ್ಟಿ ನಕ್ಕಳು ಪುಟ್ಟಿ. `ಸದ್ಯ ನೀವ್ ಇವ್ಳ ಎದ್ರೂಗೆ ಮಾತಾಡಿ ಹೊರಗೂ ಹಾಗೇ ಮಾತಾಡ್ತಾಳೆ ಅಷ್ಟೇ’ ಎಂದು ಅಮ್ಮ ಅಜ್ಜಿಯ ಬಾಯನ್ನ ಮುಚ್ಚಿಸಿದ್ದಳು. ಅದೇ ಹೊತ್ತಿಗೆ ಶಾಂತಾ ಮಾತ್ರ ಎಂದಿನಂತೆ ಸ್ನಾನ ಮುಗಿಸಿ ಮೈಲಿಗೆ ಬಟ್ಟೆಯನ್ನು ಮುಟ್ಟಿಕೊಳ್ಳದೆ ಗಳಕ್ಕೆ ಹಾಕಿದ್ದ ಸೀರೆಯನ್ನು ಕೋಲಿನಿಂದಲೇ ಎಳೆದುಕೊಂಡು ಮೈಮೇಲೆ ಹಾಕಿಕೊಂಡಿದ್ದರು.
ಇಂಥಾ ಶಾಂತಾರ ಮನೆಯ ಹಿತ್ತಲಲ್ಲಿ ಎಲ್ಲೆಲ್ಲಿ ಏನೇನಿರುತ್ತೆ ಅಂತ ಗೊತ್ತಿರದ ಹುಡುಗರು ಕಾಲಿಟ್ಟು `ಇಸ್ಸಿ ‘ ಅಂತ ಸಾವಿರ ಸಲ ಹೇಳಿಕೊಂಡು ಈಗ ಹುಷಾರಾಗಿದ್ದಾರೆ. ಹಾಗಿದ್ದೂ ದಿಕ್ಕು ತಪ್ಪಿ ಹೋದ ಸಂದರ್ಭ ತುಂಬಾ ಇದೆ. ಹೇಸಿಗೆಯ ಮೇಲೆ ಕಾಲಿಟ್ಟವರನ್ನ ಮುಟ್ಟಿಸಿಕೊಂಡರೆ ಅದು ತಮಗೆ ತಗಲುತ್ತೆ ಅಂತ ಹಸಿರನ್ನ ಹಿಡಿದುಕೊಳ್ಳಲು ಓಡುತ್ತಿದ್ದರು. `ನನ್ನ ಹತ್ರ ಹಸ್ರು ಇದೆ, ನನ್ನ್ ಹತ್ರ ಹಸಿರು ಇದೆ’ ಎನ್ನುವಾಗ ಹೇಸಿಗೆ ತುಳಿದವರ ಮುಖ ಅವಮಾನದಿಂದ ಕಂದಿಹೋಗುತ್ತಿತ್ತು. ಅದಕ್ಕಾಗಿ ಎಷ್ಟೋ ವೇಳೆ ಜಗಳ, ಮಾತು ಬಿಡುವುದು ಎಲ್ಲಾ ನಡೆದಿದೆ. ಅಂಥಾ ಹಿತ್ತಲಲ್ಲಿ ಜೋಪಾನವಾಗಿ ಕಾಲಿಟ್ಟು ಆಕಾಶಮಲ್ಲಿಗೆಯನ್ನು ಕಿತ್ತು ತಂದ ಚಿಟ್ಟಿ, ನಕ್ಕತ್ತು, ಭಾರತಿ, ಸರೋಜಾ, ಆರೋಗ್ಯ ಎಲ್ಲರೂ ಒಂದು ಕಡೆ ಕುಳಿತರು. ಅವರ ತಲೆಯಲ್ಲಿ ಸುಳಿದ ಯೋಚನೆ ಇವತ್ತು ಬೊಂಬೆ ಬಾಗಿನಕ್ಕೆ ಎಲ್ಲರೂ ಸೀರೆ ಉಟ್ಟು ಬರುವುದು.
ನಕ್ಕತ್ತು ಚಿಟ್ಟಿಗೆ `ಏಯ್ ಚಿಟ್ಟಿ ಈಚೆಗೆ ನಿಂಗೆ ತುಂಬಾ ತಲೆ ತಿರುಗ್ಬಿಟ್ಟಿದೆ ಅಂತ ಗೊತ್ತು. (ಚಿಟ್ಟಿಯ ಮೈಮೇಲಿದ್ದ ಸ್ವೆಟರ್ ಅನ್ನು ತೋರಿಸುತ್ತ) ಮೊದಲು ಈ ದೀಕ್ಷಾವಸ್ತ್ರವನ್ನು ತೆಗೆದು ಹಾಕು. ನಿಂಬೆಕಾಯಿ ಕಂಡ್ರೆ ಏನೂ ಆಗಲ್ಲ. ಇವತ್ತೇನಾದ್ರೂ ನಮ್ಮ ಜೊತೆ ಸೀರೆ ಉಟ್ಟಿಲ್ಲಾಂದ್ರೆ ನಿನ್ನ ಯಾವತ್ತೂ ಮಾತಾಡಿಸಲ್ಲ ತಿಳ್ಕಾ’ ಎಂದಿದ್ದಳು. ಚಿಟ್ಟಿ ಮಾತಾಡಲಿಲ್ಲ. ಮಂಗಳಿ ಮಾತ್ರ ದುಸು ಮುಸು ಮಾಡುತ್ತಾ ಎದ್ದು ಸಾಗಿದ್ದಳು. `ಅರೆ! ಬೈದಿದ್ದು ಚಿಟ್ಟೀನ ಎದ್ದು ಹೋಗಿದ್ದು ಮಾತ್ರ ಇವಳು- ಯಾಕೆ ಏನಾಯ್ತೇ’ ಎಂದಳು ನಕ್ಕತ್ತು. ಚಿಟ್ಟಿಗೆ ಈಗ ಯೋಚನೆ ಆಗಿದ್ದು ಸೀರೆಯದ್ದಲ್ಲ, ಅಜ್ಜಿ ನಕ್ಕತ್ತು ಮನೆಗೆ ಬಂದಿದ್ದನ್ನ ನೋಡಿ `ಇಮಾಂ ಸಾಬೀಗೂ ಗೋಕುಲಾಷ್ಟಮಿಗೂ ಎಲ್ಲಿ ಸಂಬಂಧ?’ ಅಂತ ಬೈದು ಜಗಳ ತೆಗೆದರೆ ಎನ್ನುವುದಕ್ಕೆ. ಕ್ರಿಶ್ಚಿಯನ್ ಆದ್ರೂ ಆರೋಗ್ಯಾಳನ್ನ ಒಪ್ಪಿಕೊಳ್ಳುವ ಅಜ್ಜಿ ನಕ್ಕತ್ತುವನ್ನ ಯಾಕೆ ಒಪ್ಪಲ್ಲ? ಅನ್ನೋದು ಬೇತಾಳ ಪ್ರಶ್ನೆಯಾಗಿತ್ತು. ಮೆಲ್ಲಗೆ ಗೊಣಗಿದಳು `ನಕ್ಕತ್ತು ನೀನೂ ಬೊಂಬೆ ಬಾಗಿನಕ್ಕೆ ಬರ್ತೀಯಾ ?’ ನಕ್ಕತ್ತುವಿಗೆ ಕೇಳಲಿಲ್ಲ. ಕೇಳಿದ್ದಿದ್ರೆ . . .!
ಭಾರತಿ, ಸರೋಜಾ, ಆರೋಗ್ಯ ಹೀಗೆ ಎಲ್ಲರ ಬಲವಂತಕ್ಕೆ ಚಿಟ್ಟಿ ಪೆಟ್ಟಿಗೆಯಿಂದ ಅಮ್ಮನ ಸೀರೆಯನ್ನು ತೆಗೆದಳು. ಅದನ್ನ ನೋಡಿ ಪುಟ್ಟಿ `ಅಮ್ಮ ಇದನ್ನೆ ಅಲ್ವಾ ನೀನು ಮದುವೇಲಿ ಉಟ್ಟಿದ್ದು?’ ಎಂದಳು. ಚಿಟ್ಟಿ `ಅಲ್ಲ ಕಣೆ’ ಎಂದು ವಾದ ಮಾಡಿದಳು. ಇಬ್ಬರ ನಡುವೆ ಮಾತುಕಥೆ ನಡೆದು ಮಾತು ಜಗಳಕ್ಕೆ ತಿರುಗಿತು. ಪುಟ್ಟಿ `ನಾನು ನೋಡಿದ್ದೆ ಕಣೆ, ಅಮ್ಮ ಇದೇ ಸೀರೆ ಉಟ್ಟುಕೊಂಡು ಅಪ್ಪನ ಪಕ್ಕ ಕೂತಿದ್ದಳು’ ಎಂದಳು. ಚಿಟ್ಟಿಗೆ ಸಂಕಟವಾಯಿತು `ಅರೆ ಪುಟ್ಟಿ ನೋಡಿದ್ದಾಳೆ ಅಂದಮೇಲೆ ಅಪ್ಪ ಅಮ್ಮ ತಮ್ಮ ಮದುವೆಯನ್ನು ಯಾಕೆ ನನಗೆ ತೋರಿಸಲಿಲ್ಲ? ಅಮ್ಮ ನನ್ನ ವಿಷಯಕ್ಕೆ ಯಾಕೆ ಕೆಟ್ಟವಳಾದಳು?’ ಎಂದು ಸಂಕಟಪಟ್ಟುಕೊಂಡಳು. ಅಮ್ಮನಿಗೆ ಈಗ ದಿಕ್ಕುತೋಚದ ಸ್ಥಿತಿ. ಅವರಿಬ್ಬರ ಜಗಳಕ್ಕೆ ಅಜ್ಜಿ ಮುಸಿ ಮುಸಿ ನಕ್ಕಿದ್ದಳು. ಕೊನೆಗೆ ಅಮ್ಮನೇ ಅವಳಿಗೆ ವಿವರಿಸಿ `ನೀನೇ ಹುಟ್ಟಿರಲಿಲ್ಲ ಅಂದ್ಮೇಲೆ ಇವಳು ಇರೋಕ್ಕೆ ಎಲ್ಲೇ ಸಾಧ್ಯ?’ ಎಂದು ಸಮಾಧಾನ ಮಾಡಿದ್ದಳು.
ಸ್ವೆಟರ್ ಅನ್ನು ಪಕ್ಕಕ್ಕಿಟ್ಟು ಸೀರೆಯುಟ್ಟ ಚಿಟ್ಟಿ, ತನ್ನನ್ನು ಕನ್ನಡಿಯ ಮುಂದೆ ನಿಂತು ನೋಡಿಕೊಂಡಳು. ಯಾಕೋ ತನ್ನಲ್ಲಿ ತುಂಬಾ ಬದಲಾವಣೆ ಆಗ್ತಾ ಇದೆ ಅನ್ನಿಸಿತು. ಸೀರೆ ಮೈಮೇಲೆ ಹಿತವೆನ್ನಿಸಿ ತಾನು ಬೆಳೆದಂತೆ ಭಾಸವಾಗಿ ನಕ್ಕಳು. `ವಯಸ್ಸಿಗೆ ಬರೋ ಹುಡುಗೀರಿಗೆ ಅಂತಾನೇ ಬ್ರಹ್ಮ ಈ ಕನ್ನಡಿಯನ್ನು ಹುಟ್ಟುಹಾಕಿದ’ ಎಂದಳು ಅಜ್ಜಿ. ಅಲ್ಲಿಗೆ ಬಂದ ಅಪ್ಪ ಚಿಟ್ಟಿಯನ್ನ ನೋಡಿದ. ಅವನ ಕಣ್ಣುಗಳು ಹೊಳೆದವು. ಈಚೆಗೆ ಇಬ್ಬರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶಕ್ಕೆ `ಅರೆ ಇದ್ಯಾರು ಚಿಟ್ಟೀನಾ? ನಾನ್ಯಾರೋ ದೊಡ್ದ ಹೆಂಗಸು ಅಂದ್ಕೊಂಡಿದ್ದೆ. ತುಂಬಾ ಬೆಳೆದುಬಿಟ್ಟಳು ಅಲ್ವಾ? ಈ ವರ್ಷ ಮದ್ವೆ ಮಾಡಿಬಿಡಬೇಕು ಕಣೆ’ ಎನ್ನುತ್ತಾ ಅಮ್ಮನಿಗೆ ಹೇಳಿದಾಗ ಚಿಟ್ಟಿ ನಾಚಿಕೊಂಡು `ಹೋಗಪ್ಪ’ ಎನ್ನುತ್ತಾ ಓಡಿದಳು.
ಮಂಗಳಿ ಒಬ್ಬಳನ್ನ ಬಿಟ್ಟು ಎಲ್ಲರೂ ಸೀರೆ ಉಟ್ಟು ಒಂದೆಡೆಗೆ ಸೇರಿದ್ದರು. ಭಾರತಿ ಅವಳನ್ನ ಕರೆಯಲು ಹೋಗಿ ಸಪ್ಪೆ ಮೋರೆ ಹಾಕಿಕೊಂಡು ಬಂದಿದ್ದಳು, ಅವರ ಅಮ್ಮ ಕಮಲಮ್ಮನಿಗೆ ತಮ್ಮ ಮನೆಯಲ್ಲಿ ಆದ ಕಳ್ಳತನ, ಕಳೆದುಹೋದ ಸೀರೆ, ಒಡವೆ ಎಲ್ಲ ನೆನಪಾಗಿ ಭಾರತಿಯನ್ನು ಬೈದು ಕಳಿಸಿದ್ದರು. ಮಂಗಳಿ ಸೀರೆ ಉಡಲಿಕ್ಕೆ ಆಗದ ಕಾರಣಕ್ಕೋ, ಅವಳಿಗೂ ಕಳುವಾಗಿದ್ದು ನೆನಪಾಗೋ ಅತ್ತುಕೊಂಡು ಒಳಗೆ ಹೋಗಿದ್ದಳು. `ನೋಡೆ ಮತ್ತೆ ಮತ್ತೆ ಕರೆಯೋಕ್ಕೆ ಯಾರೂ ಬರಬೇಡಿ ನಮ್ಮ ಮಂಗ್ಳಿ ಬರಲ್ಲ ತಿಳೀತಾ’ ಎಂದಿದ್ದರು ಕಮಲಮ್ಮ.
`ಇವ್ಳು ಬರಲಿಲ್ಲ ಅಂದ್ರೆ ಹಬ್ಬ ಆಗಲ್ವಾ ನಡೀರೇ’ ಎನ್ನುತ್ತಾ ಮುಂದೆ ಹೊರಟಳು ಕೊಡಗೂಸು ಮುತ್ತೈದೆ ನಕ್ಕತ್ತು. ಆದ್ರೆ ಅವತ್ತು ಮಾತ್ರ ಎಲ್ಲರೂ ಚಿಟ್ಟಿಯನ್ನೇ ಹೊಗಳಿದ್ದು `ಒಳ್ಳೆ ಗೊಂಬೆ ಹಾಗಿದ್ದೀಯಲ್ಲೆ ಚಿಟ್ಟಿ. ಮೊದ್ಲು ಇವತ್ತು ದೃಷ್ಟಿ ತೆಗೆಸಿಕೋ’ ಚಿಟ್ಟಿಗೆ ಸಂತೋಷವಾಯಿತು, ಜೊತೆಗೆ ಮುಜುಗರ ಕೂಡಾ. ಹಬ್ಬಕ್ಕೆ ಬಂದಿದ್ದ ಪೇಟೆಯಲ್ಲಿ ದೊಡ್ಡ ಓದು ಓದುತ್ತಿದ್ದ ಸೌಭಾಗ್ಯಮ್ಮನ ಮಗ ಸೀತಾರಾಮು ಚಿಟ್ಟಿಯನ್ನು ಕದ್ದು ನೋಡತೊಡಗಿದ. ಅದನ್ನ ತಪ್ಪಿಸಿಕೊಳ್ಳಲೆಂದೇ ಚಿಟ್ಟಿ ಕೈ ತೊಳೆಯುವ ನೆಪದಲ್ಲಿ ಅಲ್ಲಿಂದ ಹೊರಟಳು. ಅವನೂ ನೆಪ ಹೂಡಿಕೊಂಡು ಅವಳ ಹಿಂದೆ ಬಂದ. ಕೈ ತೊಳೆಯುತ್ತಿದ್ದ ಚಿಟ್ಟಿಯನ್ನ ನೋಡುತ್ತಾ ಹತ್ತಿರಕ್ಕೆ ಬಂದು `ಚಿಟ್ಟಿ ಈಗ್ಲೇ ಇಷ್ಟ್ ಚೆನ್ನಾಗಿದ್ದೀಯಾ. ದೊಡ್ಡವಳಾದ್ರೆ ರಂಭೆ ಥರ ಇರ್ತೀಯ? ನನ್ನ ಪ್ರೀತಿ ಮಾಡ್ತೀಯಾ? ನೀನು ದೊಡ್ಡವಳಾಗೋ ವರ್ಗೂ ನಿನಗೋಸ್ಕರ ಕಾಯ್ತೀನಿ’ ಎಂದುಬಿಟ್ಟಿದ್ದ. ಅವಳ ಜೀವನದಲ್ಲಿ ಮೊದಲ ಸಲ ಇಂಥಾ ಮಾತನ್ನ ಕೇಳಿದ್ದು. ಜೋಸೆಫನ `ಬರ್ತೀಯೇನೇ? ಎನ್ನುವ ಒರಟು ಮಾತಿಗಿಂತಲೂ ಸೀತಾರಾಮುವಿನ ಮಾತಿನಲ್ಲಿನ ಮಾಧುರ್ಯತೆ ಚಿಟ್ಟಿಯ ಮನಸ್ಸನ್ನು ತಟ್ಟಿತು. ಏನೂ ಹೇಳಲೂ ಗೊತ್ತಾಗದೆ ಅಲ್ಲಿಂದ ಓಡಿದಳು. ಸೀತಾರಾಮು ಕಂಬಕ್ಕೆ ಒರಗಿ ನಿಂತು ಅವಳನ್ನೆ ನೋಡತೊಡಗಿದ. ತಿರುಗಿ ನೋಡಿದ ಚಿಟ್ಟಿಗೆ ಅವನೊಂದು ಚಿತ್ರದಂತೆ ಭಾಸವಾದ.
ಮನೆಗೆ ಬಂದ ಚಿಟ್ಟಿ ಸೀರೆಯನ್ನು ಬಿಚ್ಚಲು ಮನಸ್ಸಿಲ್ಲದೆ ಕೂತಳು. ಅವಳ ಪುಟ್ಟ ಮೈಗೆ ಹತ್ತಿಕೊಂಡಂತೆ ಇತ್ತು. ಚಿಟ್ಟಿಯ ಮುಖದಲ್ಲಿ ಪ್ರಸನ್ನತೆ ಕಾಣ್ತಾ ಇತ್ತಾದರೂ ಅಜ್ಜಿ ಹಂಚಿಕಡ್ಡಿಯನ್ನು ತಂದು `ಪಾಪಿ ದೃಷ್ಟಿ, ಪಾರಯ್ ದೃಷ್ಟಿ, ರಂಡೇರ್ ದೃಷ್ಟಿ ಮುಂಡೇರ್ ದೃಷ್ಟಿ, ನಾಯಿ ದೃಷ್ಟಿ ತಾಯಿ ದೃಷ್ಟಿ ಎಲ್ಲಾ ದೃಷ್ಟೀನೂ ಥೂ ಥೂ ಥೂ. . .’ ಎನ್ನುತ್ತಾ ನೀವಾಳಿಸಿದಳು. ಒಲೆಯಿಂದ ಆ ಕಡ್ಡಿಗೆ ಬೆಂಕಿಯನ್ನು ಹೊತ್ತಿಸಿ ಮೂಲೆಯಲ್ಲಿರಿಸಿ ಲಟಪಟನೆ ಲಟಿಕೆ ತೆಗೆದಳು. ಹಂಚಿಕಡ್ಡಿ ಚಟಚಟ ಎಂದು ತುದಿ ಉರಿಯೋವರೆಗೂ ಹೊಡೆದುಕೊಂಡು ಭಸ್ಮವಾಯಿತು. ಅಜ್ಜಿ ಅದರ ಕಪ್ಪನ್ನ ಚಿಟ್ಟಿಯ ಹಣೆ ಮತ್ತು ಅಂಗಾಲಿಗೆ ಹಚ್ಚಿದಳು. `ತನಗೇನಾಗಿದೆ?…’ ಚಿಟ್ಟಿಗೆ ಅಚ್ಚರಿ. ಇದ್ದಕ್ಕಿದ್ದ ಹಾಗೆ ಹೊಕ್ಕುಳಾಳಗಳಲ್ಲಿ ಮಿಲುಕಾಟ ಶುರುವಾಗಿ ನೋವಿಂದ `ಅಮ್ಮಾ’ ಎನ್ನುತ್ತಾ ಬಿದ್ದುಬಿಟ್ಟಳು.
ಭಟ್ಟಿ ಬಿದ್ದಿರಬೇಕೆಂದು ಅಜ್ಜಿ ದೀಪ ಹಚ್ಚಿ ಅದನ್ನು ಚಿಟ್ಟಿಯ ಹೊಟ್ಟೆಯ ಮೇಲೆ ಇಟ್ಟು ಹಸುವಿನ ಸೆಗಣಿಯನ್ನು ನೀರಲ್ಲಿ ಬೆರೆಸಿ ಹೊಕ್ಕುಳ ಮೇಲಿಟ್ಟ ದೀಪದ ಮೇಲೆ ಬಟ್ಟಲ ಸಮೇತ ಬೋರಲು ಹಾಕಿದಳು. ಹೊಟ್ಟೆಗೆ ಬಟ್ಟಲು ಕಚ್ಚಿಕೊಂಡಿತೇ ವಿನಾ ಹೊಟ್ಟೆ ನೋವು ಕಡಿಮೆಯಾಗಲಿಲ್ಲ. ರಾತ್ರಿಯಿಡೀ ಯಾತನೆ ಅನುಭವಿಸಿದ ಚಿಟ್ಟಿಗೆ ಬೆಳಗಿನ ಹೊತ್ತಿಗೆ ಸ್ವಲ್ಪ ನಿರಾಳತೆ ಸಿಕ್ಕಿತ್ತು. ಸ್ಕೂಲಿಗೆ ಹೋಗಬೇಡ ಎಂದು ಹೇಳಿದರೂ ಕೇಳದೆ ಮನೆಯಲ್ಲಿದ್ದರೆ ಬೇಜಾರೆಂದು, ಅದಕ್ಕಿಂತ ಹೆಚ್ಚಾಗಿ ಅದೂ, ಇದೂ ಹೇಳಿ ಅಜ್ಜಿ ತಲೆ ತಿಂದು ಬಿಡುತ್ತಾಳೆಂದು ಮಾಮೂಲಿನಂತೆ ಸ್ವೆಟರ್ ಹಾಕಿಕೊಂಡಳು. ಯಾಕೋ ಕ್ಷಣ ಕಾಲ ಹಾಕಿಕೊಳ್ಳದಿದ್ದರೆ ಚೆನ್ನಗಿರಬಹುದು ಎನ್ನಿಸಿತು. ಸೀತಾರಾಮು ಹೇಳಿದ ಮಾತುಗಳು ಅವಳ ಕಿವಿಯೊಳಗೆ ಗುಯ್ಗುಟ್ಟಿ ನಕ್ಕಳು. ಕೊನೆಗೆ ಇರಲಿ ಬಿಡು ಎಂದು ಅದೇ ಸ್ವೆಟರ್ ಅನ್ನು ಹಾಕಿಕೊಂಡು ಸ್ಕೂಲಿಗೆ ಹೊರಟು ನಿಂತಳು. ಅಮ್ಮ ಅನುಮಾನದಿಂದಲೇ ಸ್ನಾನದ ನಂತರ ಬಟ್ಟೆಯನ್ನು ಹುಡುಕಿ ನೋಡಿದಳು ಏನೂ ಕಾಣಲಿಲ್ಲ ಸದ್ಯ! ಎಂದು ನಿಟ್ಟುಸಿರುಬಿಟ್ಟಳು.
ಹೊಟ್ಟೆಯಲ್ಲೇನೋ ತಳಮಳ. ಮಾಮೂಲಿನ ಹಾಗಿಲ್ಲ, ಏನು ತಿಂದರೂ ಅರಗಿಸಿಕೊಳ್ಳುವ ತನಗೆ ಎಂಥಾ ದುರಾವಸ್ಥೆ ಬಂದಿತು ಎಂದು ಮಿಲುಕಾಡತೊಡಗಿದಳು. ತನ್ನ ಕೆಳಗೆ ಒದ್ದೆಯಾಗುತ್ತಿದ್ದಂತೆ ಅನ್ನಿಸಿತು. ಮನೆಯಿಂದ ಬರುವ ಮುಂಚೆ ಬಚ್ಚಲಿಗೆ ಹೋಗೇ ಬಂದಿದ್ದಳು ಆದರೂ. . . ಕೂತ ಕಡೆ ಕೂರಲಾರದೆ ಚಿಟ್ಟಿ ಒದ್ದಾಡತೊಡಗಿದಳು. ತಾನು ಪಾಠ ಮಾಡುತ್ತಿದ್ದರೆ ಚಿಟ್ಟಿ ಅನ್ನೋ ಈ ಕುನ್ನಿ ಹೀಗೆ ಆಡಬಹುದೇ ಎಂದು ಚಂದ್ರಮ್ಮ ಟೀಚರ್ ಉತ್ತರ ಹೇಳುವಂತೆ ಅವಳನ್ನ ನಿಲ್ಲಿಸಿದಾಗ ಹಿಂದೆ ಕೂತಿದ್ದ ಸರೋಜ `ಚಿಟ್ಟಿ’ ಎಂದು ಚೀರಿದ್ದಳು. ಎಲ್ಲರೂ ಚಿಟ್ಟಿಯ ಕಡೆಗೆ ನೋಡಿದರು. ಚಂದ್ರಮ್ಮ ಟೀಚರ್ `ಏನಾಯ್ತು?’ ಎನ್ನುತ್ತಾ ಕೋಲನ್ನು ಹಿಡಿದು ಸರೋಜಾಳ ಹತ್ತಿರಕ್ಕೆ ಬಂದರು. ಇನ್ನು ಹೊಡೆದುಬಿಡುತ್ತಾರೆ ಎನ್ನುವ ಕಾರಣದಿಂದಲೋ ಏನೋ ಸುತ್ತಾ ಹುಡುಗರು ಇದ್ದಾರೆ ಅನೋದನ್ನೂ ಮರೆತು ಉಗುಳು ನುಂಗುತ್ತಾ `ಮೇಡಂ ಚಿಟ್ಟಿ ದೊಡ್ಡವಳಾಗಿದ್ದಾಳೆ’ ಎಂದುಬಿಟ್ಟಳು. ತಾನು ದೊಡ್ದವಳಾಗಿದ್ದು ಇವಳಿಗೆ ಹೇಗೆ ಗೊತ್ತಾಯಿತು? ತಾನೆಲ್ಲಿ ದೊಡ್ಡವಳಾದೆ? ಅಷ್ಟು ಹೊತ್ತಿಗೆ ಮರದ ಬೊಡ್ಡೆಗೆ ಆತುಕೊಂಡು ಮಾಂಸದ ಮುದ್ದೆಯಂತಿದ್ದ ಚಿಟ್ಟೆಯ ಲಾರ್ವಾ ಕಂಬಳಿಹುಳುವಾಗಿ, ಕಂಬಳಿಹುಳು ಹೆಗಲಿಗೆ ರೆಕ್ಕೆಗಳನ್ನು ಹಾಕಿಕೊಂಡು ಹಾರಿಹೋಗಿತ್ತು. ಚಿಟ್ಟಿ ಯೋಚಿಸಿದ್ದಳು ಈ ರೆಕ್ಕೆಗಳು ಬಂದಿದ್ದು ಎಲ್ಲಿಂದ?
ಚಿಟ್ಟಿಯನ್ನು ಮನೆ ಸೇರಿಸಲು ಚಂದ್ರಮ್ಮಾ ಟೀಚರ್ರೇ ಅವಳ ಸ್ನೇಹಿತರನ್ನ ಕಳಿಸಿದರು. ಎಷ್ಟಾದರೂ ಹೆಣ್ಣಲ್ಲವೆ? ಮಿಲಿಟ್ರಿಯವನ ಹೆಂಡತಿಯಾದರೇನು? ದಾರಿಯಲ್ಲಿ ಅವಳನ್ನ ಕರೆದು ಬರುತ್ತಾ ನಕ್ಕತ್ತು ಅವಳನ್ನ ಅಭಿನಂದಿಸುವವಳಂತೆ `ಅಂತೂ ನೀನೂ ತೂಬು ಒಡಕೊಂಡ್ಯಾ’ ಎಂದು ಹಗುರಾಗಿ ನಕ್ಕಳು. ರಕ್ತ ಚಿಟ್ಟಿಯ ಕಾಲ ಮೇಲೆ ಜಾರಿ ಪಾದಗಳನ್ನ ತೋಯಿಸುತ್ತಿತ್ತು.
ಲಂಗವನ್ನು ಹಿಂದಿನಿಂದ ಮುಂದಕ್ಕೆ ತಂದು ಮುಚ್ಚಿಟ್ಟುಕೊಂಡ ಚಿಟ್ಟಿ ಅಳುತ್ತಾ ಮನೆಗೆ ಬಂದಳು. ಅಮ್ಮನಿಗೆ ಸದ್ಯ ಮೊದಲು ಇದನ್ನು ತಾನು ನೋಡಲಿಲ್ಲವಲ್ಲ ಎನ್ನುವ ಸಮಾಧಾನ. ಅಳುತ್ತಾ ನಿಂತ ಚಿಟ್ಟಿಯನ್ನ ನೋಡಿ ಯಾಕೋ ಸಂಕಟ ಅಲೆಅಲೆಯಾಗಿ ಹೊಕ್ಕಳಿಂದ ಮೇಲೆಕ್ಕೆ ಬಂದು ಇದ್ದಕ್ಕಿದ್ದಂತೆ ಜೋರಾಗಿ ಅವಳನ್ನ ಹಿಡಿದುಕೊಂಡು ಅತ್ತುಬಿಟ್ಟಳು. `ಮಡಿ ಇಲ್ಲ ಮೈಲಿಗೆ ಇಲ್ಲ ಇವಳನ್ನ ಮುಟ್ತಾರೇನೆ? ಹೋಗಿ ನಾಕ್ ಜನ ಮುತ್ತೈದೆಯರಿಗೆ ಹೇಳಿಬಾ. ಹರಿಸಿನದ ನೀರು ಮೈಗೆ ಬೀಳಬೇಕು. ಆ ನಾಕು ಜನರ ಜೊತೆ ನೀನೂ ನೀರು ಹಾಕಬೇಕು. ಇವಳನ್ನ ಮುಟ್ಟಿ ಮೈಲಿಗೆ ಆಗಿದ್ದೀಯಾ, ಮೊದ್ಲು ನೀನ್ ಸ್ನಾನ ಮಾಡಿಬಾ. ಹಾಂ ಹಾಗೆ ಆ ಅಗಸಗಿತ್ತಿಗೆ ಹೇಳು ಬಟ್ಟ್ತೆ ತಗೊಂಡ್ ಹೋಗ್ಲಿ’ ಎಂದಳು ಅಜ್ಜಿ. ಅಮ್ಮ ಚಿಟ್ಟಿಯನ್ನ ಬಿಟ್ಟು ಹೊರಟಳು. ಚಿಟ್ಟಿಗೆ ಇನ್ನಷ್ಟು ದುಃಖ ಹೆಚ್ಚಾಯಿತು, ಅವಳಿಗೆ ಈಗ ಎಲ್ಲವೂ ಅರ್ಥವಾಗಿತ್ತು- ಒಂದು ವಿಷಯವನ್ನು ಮಾತ್ರ ಬಿಟ್ಟು. ಮತ್ತೆ ಮತ್ತೆ ಕೇಳಿಕೊಂಡಳು `ನಾನ್ಯಾಕೆ ಮುಟ್ಟಿಸಿಕೊಳ್ಳದವಳಾಗಿ ಬಿಟ್ಟೆ?’
(ಮುಂದುವರಿಯುವುದು…)

‍ಲೇಖಕರು avadhi

September 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. g.n.nagaraj

    ಕಾದಂಬರಿ ಬಹಳ ಸಾಂದ್ರವಾಗಿ ಮಹಿಳಾ ಸಂವೇದನೆಯ ನೈಜ ಚಿತ್ರಣವಾಗಿ ಹೊಮ್ಮುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: