ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಚಿಟ್ಟಿ ಚಿಟ್ಟೆಯಾಗುತ್ತಿದ್ದಾಳೆ…

(ಇಲ್ಲಿಯವರೆಗೆ…)

ಶಾಂತಪ್ಪನಿಗೆ ಊರವರೆಲ್ಲಾ ಸೇರಿ ಬಹಿಷ್ಕಾರ ಹಾಕಿದ್ದರು. ಕಮಲಳನ್ನ ಯಾರಿಗಾದರೂ ಕೂಡಿಕೆ ಮಾಡಿಕೊಡದ ಹೊರತು ಈ ಬಹಿಷ್ಕಾರವನ್ನು ಹಿತೆಗೆದುಕೊಳ್ಳುವುದಿಲ್ಲ ಎನ್ನುವುದು ಅವರ ಕರಾರಾಗಿತ್ತು. ನಂಜಕ್ಕ ಹುಚ್ಚಿಯ ಹಾಗೆ ಆಡುತ್ತಾ ತೋಟದ ಮನೆಯಲ್ಲೇ ಉಳಿದಳು. ಆ ಕಡೆಗೆ ಸುಳಿದವರನ್ನ ಕರೆದು ರಾಗವನ್ನು ತೆಗೆದು `ಹಿಂಗಿಂಗೆ’ ಎನ್ನುತ್ತಾ ವರದಿ ಒಪ್ಪಿಸುತ್ತಿದ್ದಳು. ಅಮಾವಾಸ್ಯೆ-ಹುಣ್ಣಿಮೆ ಬಂತೆಂದರೆ ಅವಳಿಗೆ ಅದೇನನ್ನಿಸುತ್ತಿತ್ತೋ ರಾತ್ರಿಯೆಲ್ಲಾ ಚೀರಾಡಿ ರಂಪ ಎಬ್ಬಿಸುತ್ತಿದ್ದಳು. ದಿನಮಾನ ಅರಿಯದ ಜನ ಅವಳ ರಂಪಾಟವನ್ನು ನೋಡೇ ರಾತ್ರಿಗೂ ಮುನ್ನವೇ `ಇವತ್ತು ಅಮಾವಾಸ್ಯೆ ಇವತ್ತು ಹುಣ್ಣಿಮೆ’ ಎಂದು ಗುರುತಿಸುತ್ತಿದ್ದರು. ಶಾಂತಪ್ಪ ಮಾತ್ರ `ಯಾವುದೂ ನನಗಲ್ಲ’ ಅಂತ ಸುಮ್ಮನಾಗಿಬಿಟ್ಟಿದ್ದ. ಊರ ಜನ ಸ್ವಲ್ಪ ದಿನ ಮಾತಾಡಿ ನಂತರ `ಇದೂ ಸಾಧಾರಣ ವಿಷಯ’ ಎನ್ನುವಂತೆ ಸುಮ್ಮನಾಗಿಬಿಟ್ಟಿದ್ದರು.
ನಾರಾಯಣಗೌಡರ ಮನೆಯ ಹಿತ್ತಿಲಲ್ಲಿ ಬೆಳೆದಿದ್ದ ಕಾಕಡ-ಕನಕಾಂಬರಗಳನ್ನ ಕಿತ್ತು ತಂದು ಶುಕ್ರವಾರದ ಪೂಜೆಗೆ ಅಣಿ ಮಾಡುವಾಗಲೇ `ದಾರಿಯಲ್ಲಿ ಬರ್ತಾ ಸಿಕ್ತು’ ಎಂದು ಯಾರೊ ಜಾಲದ ಹೂಗಳನ್ನು ತಂದುಕೊಟ್ಟಿದ್ದರು. ಅದರ ಅಮಲೇರಿಸುವ ಘಮಲು ಚಿಟ್ಟಿಯನ್ನು ಪರವಶಗೊಳಿಸಿತ್ತು. ಅದನ್ನು ದಾರ ತೆಗೆದುಕೊಂಡು ಪೋಣಿಸಿ ಜಡೆಗೆ ಏರಿಸುತ್ತಿದ್ದ ಹುಡುಗಿಯರ ಗತ್ತೇ ಬೇರೆ. ಜಡೇ ಇರೋದೇ ಹೂವಿನ ಹೊರೆ ಹೊರಲಿಕ್ಕೆ ಎನ್ನುವಂತೆ ತಲೆಯ ತುಂಬಾ ಹೂವೆ.
ಅವತ್ತು ಬೆಳಗಿನಿಂದಲೂ ಚಿಟ್ಟಿಗೆ ಮುಜುಗರವೇ! ಗಾಳಿಯೊಂದು ತನ್ನ ಮೈಯ್ಯಲ್ಲಿ ಸೇರಿಕೊಂಡು ಏನೋ ಆಡಿಸುತ್ತಿದೆ ಎನ್ನುವ ಭಾವನೆ ಮೂಡಿ ಖಿನ್ನತೆ ಆವರಿಸಿಕೊಳ್ಳುತ್ತಿತ್ತು. ಪೂಜೆಯಲ್ಲಿ ಚಿಟ್ಟಿ ಮಾತ್ರ ಆಗಾಗ ತನ್ನ ಅಂಗಿಯನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಆರೋಗ್ಯಾ `ಯಾಕೆ?’ ಎನ್ನುವಂತೆ ಸನ್ನೆ ಮಾಡಿದಳು. ಚಿಟ್ಟಿಗೆ ಹೇಳಿಕೊಳ್ಳಲಾಗದ ಮುಜುಗರ. ಯಾಕೋ ಮುನಿಯಪ್ಪ ಮಾಷ್ಟ್ರು ತನ್ನನ್ನೇ ನೋಡ್ತಾ ಇದ್ದಾರೆ ಎನ್ನಿಸಿಬಿಟ್ಟಿತ್ತು ಅವಳಿಗೆ. ಹಾಗನ್ನಿಸಿದ್ದೇ ತಡ ಹಿಂಬದಿಗೆ ಕೈಯ್ಯನ್ನೂ ಹಾಕಿ ಅಂಗಿಯನ್ನು ಬಿಗಿಗೊಳಿಸಿಕೊಂಡಳು. ಇದನ್ನ ಗಮನಿಸಿದ ಮೇಷ್ಟ್ರ ಮುಖದಲ್ಲಿ ಸಣ್ಣ ಮಂದಹಾಸ ತೇಲಿ ಹೋಯಿತು. ಚಿಟ್ಟಿಗೆ ಆ ನಗು ಸಹಿಸಲಾರದ ಅವಮಾನವನ್ನು ತುಂಬಿಬಿಟ್ಟಿತ್ತು.
ತನ್ನ ದೇಹದಲ್ಲಿ ಏನೋ ಬದಲಾವಣೆ ಆಗ್ತಾ ಇದೆ. ಏನದು? ಯಾಕೆ ಆಗ್ತಾ ಇದೆ? ಆಗಲೇ ಅವಳಿಗೆ ಅನ್ನಿಸಿದ್ದು ತನ್ನದು ಎನ್ನುವ ಒಂದು ಗುಟ್ಟುಬೇಕು. ಹೀಗೆ ನಾಳೆಯಿಂದ ಓಡಿದ್ರೆ ನನ್ನಲ್ಲಿ ಆಗುತ್ತಿರುವ ಬದಲಾವಣೆ ಎಲ್ಲರಿಗೂ ಕಾಣುತ್ತೆ. ಅದಾಗಬಾರದು ಪೂಜೆಯನ್ನು ಮುಗಿಸಿ ಚರ್ಪನ್ನು ತಿನ್ನುವ ಹೊತ್ತಿಗೆ ಚಿಟ್ಟಿ ಒಂದು ನಿರ್ಧಾರಕ್ಕೆ ಬಂದಿದ್ದಳು. ತನ್ನ ದೇಹದ ಬದಲಾವಣೆ ಯಾರಿಗೂ ಗೊತ್ತಾಗಲ್ಲ. ಆದರೆ ಹೇಗೆ!
ಚಿಟ್ಟಿ ಮನೆಗೆ ಬಂದವಳೇ ಟ್ರಂಕಿನಲ್ಲಿ ಚಳಿಗಾಲಕ್ಕೆ ಎಂದು ಎತ್ತಿಟ್ಟಿದ್ದ ಸ್ವೆಟರ್ ತೆಗೆದಳು. ಅದರ ಧೂಳನ್ನು ಕೊಡವಿ ನಾಕು ಸಲ ಸೀನಿದಳು. ಅದರ ಶಬ್ದಕ್ಕೆ ಅಮ್ಮಾ ಓಡಿ ಬಂದಳು `ಯಾಕೇ ಚಿಟ್ಟಿ? ಈಗ ಸ್ವೆಟರ್ ತೆಗೀತಾ ಇದೀಯಾ?’ ಚಿಟ್ಟಿ ಚಳಿಯ ಕಾರಣ ಕೊಟ್ಟಳು. `ಈ ಬೇಸಿಗೆಯಲ್ಲಿ ಚಳಿಯಾ? ನಿಂಗೆ ತಲೆ ನೆಟ್ಟಗಿಲ್ಲ ಬಿಡು’ ಅಮ್ಮಾ ಗೊಣಗುತ್ತಾ ಸಾಗಿದಳು. ಅವಳಿಗೂ ಚಿಟ್ಟಿಯ ಒಳಗೆ ಏನಾಗ್ತಾ ಇದೆ ಎನ್ನುವುದರ ಬಗ್ಗೆ ಮಾತಾಡಲು ಸಮಯ ಇರಲಿಲ್ಲ.
`ಅದ್ ಹೇಗೆ ಇಂಥಾ ಸೆಖೆಲೂ ಸ್ವೆಟರ್ ಹಾಕೂಂಡಿದ್ದೀಯಾ?’ ಎಂದ ಸ್ನೇಹಿತರಿಗೆ ಬಗೆ ಬಗೆಯ ಸಬೂಬು ಹೇಳಿದಳು. ಆರೋಗ್ಯ ಮಾತ್ರ `ನಿನ್ನ ಗುಟ್ಟು ನಂಗೆ ಗೊತ್ತು’ ಎಂದು ನಕ್ಕಳು. ಚಿಟ್ಟಿ ಅವಳ ನಗುವಿಗೆ ಪ್ರತಿಕ್ರಿಯಿಸದೆ ತಲೆ ತಗ್ಗಿಸಿದಳು. ಅವತ್ತಿನಿಂದ ಮುಂದೆ ಎಷ್ಟೋ ವರ್ಷಗಳವರೆಗೂ ಚಿಟ್ಟಿಯ ದೇಹದ ಒಂದು ಅಂಗವಾಗೇ ಆ ಸ್ವೆಟರ್ ನೇತಾಡತೊಡಗಿತು. ಚಿಟ್ಟಿ ತನ್ನ ದೇಹದಲ್ಲಿ ಆಗುತ್ತಿದ್ದ ಬದಲಾವಣೆ ಯಾರಿಗೂ ಗೊತ್ತಾಗಬಾರದು ಅಂತ ಬೆನ್ನನ್ನು ಗೂನು ಮಾಡಿಕೊಂಡಳು. ಸಹಜವಾಗೇ ಎತ್ತರಕ್ಕಿದ್ದ ಚಿಟ್ಟಿ ಇದ್ದಕ್ಕಿದ್ದ ಹಾಗೆ ಎಲ್ಲರಿಗೂ ಕುಬ್ಜ ಅನ್ನಿಸತೊಡಗಿದಳು.
ಚಿಟ್ಟಿಯಲ್ಲಿ ಆಗುತ್ತಿದ್ದ ಈ ಬದಲಾವಣೆ ಅಮ್ಮನಿಗೆ ಗೊತ್ತಾಗಲಿಲ್ಲ ಎಂದಲ್ಲ ಆದರೆ ಅದು ಸಹಜ ತಾನೆ? ಅವಳು ಏನೂ ಹೇಳಲಿಲ್ಲ. ಎರಡು ದಿನ ಎಲ್ಲ ಸರಿಯಾಗುತ್ತೆ ಹೆಣ್ತನದ ಹೆಮ್ಮೆ ಯಾವತ್ತಿದ್ದರೂ ಅರಳಲೇ ಬೇಕಲ್ಲವೇ? ಎಂದು ಕಂಡರೂಕಾಣದಂತೆ ಓಡಾಡಿದಳು. ಅಪ್ಪ `ಇದೇನ್ ಅವತಾರ?’ ಎಂದರು. ಚಿಟ್ಟಿ ಮಾತ್ರ ಯಾವುದಕ್ಕೂ ಜಗ್ಗಲಿಲ್ಲ. ಶುಕ್ರವಾದರ ಮುತ್ತೈದೆ ಪದ್ದಮ್ಮ ಮಾತ್ರ ಒಂಟಿಯಾಗಿ ಸಿಕ್ಕಾಗ `ಅಲ್ವೇ ಚಿಟ್ಟಿ ಸಮ್ಯ ಬಂದಾಗ ನಿಮ್ಮಮ್ಮ ಬಾಡಿ ಹೊಲಿಸಿಕೊಡ್ತಾರೆ. ಮುಚ್ಚಿಟ್ಟುಕೊಳ್ಳೋದು ಏನೂ ಇಲ್ಲಬಿಡು’ ಎಂದಿದ್ದಳು. `ನನಗಿಂತ ದೊಡ್ಡವರೂ, ನನ್ನ ಜೊತೆಯವಯರ್ಾರಿಗೂ ಕಾಡದೇ ಇರೋ ಸಮಸ್ಯೆ ನನ್ನನ್ನೇ ಯಾಕೆ ಕಾಡ್ತಾ ಇದೆ? ಸರೋಜ, ಭಾರತಿ, ನಕ್ಕತ್ತು, ಮಂಗಳಾ, ಆರೋಗ್ಯಾ ಎಲ್ಲರ ದೇಹದಲ್ಲೂ ಈ ಬದಲಾವಣೆ ಬಂದಿದೆ ಅಲ್ಲವೇ? ಅವರಿಗೆಲ್ಲಾ ಆಗದ ಅವಮಾನ ನನಗೆ ಮಾತ್ರಾ ಯಾಕೆ? ಹಾಳು ಈ ಪದ್ದಮ್ಮನಿಗೆ ಮಾಡೋಕ್ಕೆ ಏನು ಕೆಲ್ಸ ಇಲ್ಲ ಅದಕ್ಕೆ ನನ್ನ ದೇಹದ ಬಗ್ಗೆ ಮಾತಾಡ್ತಾ ಇದಾಳೆ. ಬಹುಶಃ ಅಮ್ಮ ಇದನ್ನೂ ಅವಳ ಹತ್ತಿರ ಹೇಳಿರಬೇಕು ಛೇ’ ಎಂದು ಬೈದುಕೊಂಡಳು. ಚಿಟ್ಟಿಗೆ ಅಸಮಾಧಾನ ಮುಖದಲ್ಲಿ ಹೆಪ್ಪಾಗಿ ಕಣ್ಣಲ್ಲಿ ನೀರು ಫಳ್ಳೆಂದು ಚಿಮ್ಮಿತ್ತು. `ಯಾಕೆ ನಂಗೆ ಹೀಗಾಗ್ತಾ ಇದೆ?’ ಯಾರನ್ನ ಕೇಳುವುದು? ಕೇಳಬೇಕೆಂದುಕೊಂಡ ಎಲ್ಲಾ ಮಾತುಗಳು ಮನಸ್ಸಿನ ಒಳಗೆ ಉಳಿದವು.
ಚಿಟ್ಟಿ ಈಗ ಮುಂಚಿನ ಹಾಗಿಲ್ಲ. ಮಾತನ್ನು ಕಡಿಮೆ ಮಾಡಿದ್ದಳು. `ಅಂತೂ ಚಿಟ್ಟಿ ದೊಡ್ಡವಳಾಗುತ್ತಿದ್ದಾಳೆ ಹೆಣ್ಣುಮಕ್ಕಳೆ ಹೀಗೆ ಎಷ್ಟು ಗಂಭೀರ ಆಗಿಬಿಡ್ತಾರೆ ಅಲ್ವಾ?’ ಅಮ್ಮ ಸಮಾಧಾನದಿಂದ ನಿಟ್ಟುಸಿರಿಟ್ಟಿದ್ದಳು.
ಇದು ಅವಳ ಎಲ್ಲ ಸ್ನೇಹಿತೆಯರಿಗೂ ದೊಡ್ದ ಸಮಸ್ಯೆಯಾಗಿಬಿಟ್ಟಿತ್ತು. `ಯಾರ್ಗೂ ಬರ್ದೇ ಇರೋದು ಇವಳಿಗೆ ಬಂತಾ? ಏನೇ ಇವ್ಳು ಹಿಂಗೆ’ ಎಂದಳು ಆರೋಗ್ಯ. ನಕ್ಕತ್ತು `ಚಿಟ್ಟಿ ಇದನ್ನೆಲ್ಲಾ ತಲೆಗೆ ಹಚ್ಚಿಕೊಂಡರೆ ಆದೀತೇ? ನಡೀ ಸುಮ್ನೆ’ ಎಂದು ಜಬ್ಬರಿಸಿದ್ದಳು. ಉಬ್ಬಿಬರುತ್ತಿದ್ದ ಭಾಗಕ್ಕೆ ಕಟ್ಟಿದ್ದ ಟೇಪು ಒಳಗೆ ಒತ್ತತೊಡಗಿತ್ತು. ಏನೂ ಇಲ್ಲ ಕಣೆ ಎಂದು ಮಾತನ್ನು ಹರಿಸಿದ್ದಳು. ಎಲ್ಲರೂ ಮಂಗಳಾನ ಮನೆಯ ಮೂಲೆಯಲ್ಲಿ ಯಾವುದೋ ಹಕ್ಕಿ ತಿಂದು ಎಸೆದಿದ್ದ ಬೀಜಬಾಳೆ ಗೊನೆಯನ್ನು ಕಡಿಯಲು ಹೊರಟರು. ಹೊರಡುವಾಗ ಭಾರತಿ `ಸುಮ್ನೆ ಏನೇನೋ ಯೋಚ್ನೆ ಮಾಡ್ಬೇಡ ಈಚಲಗೊನೆ ಹಣ್ಣಾಗಿರುತ್ತೆ. ನಿಂಗೇ ಇಲ್ದಿರೋ ಹಾಗ್ ಆಗುತ್ತೆ ನೋಡು’ ಎಂದಳು.
ಗೊನೆ ಕಡಿದು ಹುಲ್ಲಿನ ಮೆದೆಯಲ್ಲಿಟ್ಟು ಹಣ್ಣು ಮಾಡಿ ತಿನ್ನುವಾಗ ತಿರುಳಿಗಿಂತ ಅದರ ತುಂಬಾ ಇರುವ ಮೆಣಸಿನ ಕಾಳಿನಂಥಾ ಬೀಜ ನಾಲಿಗೆ ಮತ್ತು ಬಾಯ ಅಂಗಳಕ್ಕೆ ತಾಕಿ ಉರಿ ಹತ್ತುತ್ತಿತ್ತು. ನಂತರ ಅದರ ರುಚಿ ಏನು ಎಂದೂ ಅರಿವಿಗೆ ಬರುತ್ತಿರಲಿಲ್ಲ. `ಅದೇನ್ ರುಚೀನಾ ಪಚೀನಾ? ಆ ತಿರುಳಿನ ಲೋಳೆ ಬಾಯಿಗ್ ಹಾಕೋದನ್ನ  ನೋಡಿದ್ರೆ ಸಾಕು ದೂರಕ್ಕೆ ಓಡ್ ಹೋಗೋಣ ಅನ್ಸುತ್ತೆ. ಹಾಳ್ ಹುಡುಗ್ರು ಎಲ್ಲಿಂದ ಹುಡುಕ್ಕೊಂಡ್ ಬರ್ತಾರೋ ನಾನಾಂತೂ ಕಾಣೆ’ ಎನ್ನುತ್ತಾ ತಾಯಂದಿರು ಬೈತಾ ಗಾಯವಾದ ಬಾಯಿಗೆ ಜೇನುತುಪ್ಪ ಹಚ್ಚುತ್ತಿದ್ದರೆ ಉರಿ ತಡಿಯಲಾರದೆ `ಹೋ’ ಎಂದು ಕೂಗುತ್ತಿದ್ದರು. ಇಷ್ಟೆಲ್ಲಾ ಆಗಿದ್ದು ಮರೆತೆಹೋಯಿತು ಎನ್ನುವ ಹಾಗೆ ಮತ್ತೆ ಬೀಜಬಾಳೆ ಗೊನೆ ಬಿಟ್ಟ ತಕ್ಷಣ ಬಾಳೆಯ ತೋಟದ ಪಕ್ಕದ ಕಾಡಲ್ಲಿ ವಾಸಿಸುವ ಮಂಗಗಳ ದಂಡಿನ ಹಾಗೆ ಲಗ್ಗೆ ಇಡುತ್ತಿದ್ದುದು ಮಾತ್ರ ತಪ್ಪುತ್ತಿರಲಿಲ್ಲ.
ರುಚಿಯೆಂದೇನೂ ಅಲ್ಲ; ದೇಹಕ್ಕೆ ತೊಂದರೆ ಕೊಡದೆ ಇರುವ ಯಾವುದೇ ಕಾಯಿ ಹಣ್ಣುಗಳು ಸಲೀಸಾಗಿ ಹೊಟ್ಟೆಗೆ ಸೇರುತ್ತಿದ್ದವು. ಕೊನೆಗೆ ಬೇಲಿಯ ಮೇಲಿನ ಕಹಿ ಕವಟೆ ಹಣ್ಣು, ಪಾಪಾಸುಕಳ್ಳಿಯ ಮುಳ್ಳು ಮೆತ್ತಿಸಿಕೊಂಡ ಕೆಂಪು ಹಣ್ಣು ಯಾವುದಾದರೂ ಸರಿಯೇ. ನಾಲಿಗೆಗೆ ಯಾವುದೋ ರುಚಿಯನ್ನು ಕೊಟ್ಟು ಮೆಲ್ಲಗೆ ಒಳಗೆ ಇಳಿಯುತ್ತಿದ್ದವು. ಹೊಟ್ಟೆಯ ಜೀರ್ಣಾಗ್ನಿ ದೊಡ್ಡದು.. ಎಲ್ಲವನ್ನೂ ಅರಗಿಸಿಕೊಂಡು ಭಸ್ಮ ಮಾಡಿಬಿಡುತ್ತಿತ್ತು. ಹೀಗೆ ಮುಳ್ಳು ಹಣ್ಣುಗಳನ್ನು ಸಿಕ್ಕ ಬಂಡೆಗೆ ಉಜ್ಜಿ ಗುರುತಾದ ಬಂಡೆಗಳನ್ನು ಊರ ಜನ ಅಚ್ಚರಿಯಿಂದ ನೋಡುತ್ತಾ ತಮ್ಮ ಬಾಲ್ಯಕ್ಕೆ ಜಾರುತ್ತಿದ್ದರು.
ಈಗ ಚಿಟ್ಟಿಗೂ ಬೀಜಬಾಳೆ ಗೊನೆ ಕಡಿದು ಹುಲ್ಲಿನ ಮೆದೆಯಲ್ಲಿ ಅಡಗಿಸಿಟ್ಟು, ಅಲ್ಲೇ ಅಡಗಿಸಿಟ್ಟ ಈಚಲ ಹಣ್ಣನ್ನು ತಿನ್ನಲಿಕ್ಕೆ ಅವರ ಜೊತೆ ಹೋಗಬೇಕು ಅನ್ನಿಸಿತ್ತು. ಆದರೆ ತನಗೆ ಏನೋ ಆಗುತ್ತಿದೆಯಲ್ಲ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಎನ್ನುವ ಯೋಚನೆ ಅವಳನ್ನ ಗಾಢವಾಗಿ ತಬ್ಬಿ, ಹೋಗುತ್ತಿದ್ದವರ ಬೆನ್ನನ್ನೇ ನೋಡುತ್ತಾ ನಿಂತುಬಿಟ್ಟಿದ್ದಳು.
ಅವರ ಜೊತೆ ಹೋಗದೆ ತಾನು ತಪ್ಪು ಮಾಡಿಬಿಟ್ಟೆನೇ? ಚಿಟ್ಟಿಗೆ ಗೊಂದಲವಾಯಿತು. ಆದರೆ ತಾನು ಒಂಟಿಯಾಗಿರಬೇಕು ಎಂದು ಪದೇ ಪದೇ ಅನ್ನಿಸಲಿಕ್ಕೆ ಕಾರಣವೇನು?… ತಿಳಿಯಲಿಲ್ಲ. ಪುಟ್ಟಿ ಮಾತಾಡಿಸಿದರೂ ಬೇಡ ಅನ್ನಿಸುತ್ತಿತ್ತು. ಈ ಹಿಂಸೆಯನ್ನು ಆ ದೇವ್ರು ತನಗಾಗಿ ಯಾಕೆ ಕೊಟ್ಟ? ಚಿಟ್ಟಿಗೆ ಮರಕ್ಕೆ ಅಂಟಿಕೊಂಡಿದ್ದ ಚಿಟ್ಟೆಯ ಲಾರ್ವ ಕಂಡಿತು. ಮಾಂಸದ ಮುದ್ದೆಯಂತೆ ಅಸಹ್ಯ ತರಿಸುತ್ತಿದ್ದ ಅದನ್ನ ನೋಡಿ ಚಿಟ್ಟಿ ಒಂದು ಕ್ಷಣ ಅಚ್ಚರಿಯಲ್ಲಿ ನಿಂತಳು. `ಇದೆ ಅಲ್ಲವೇ ನಾಳೆ ಮೈಯ್ಯೆಲ್ಲಾ ಮುಳ್ಳಾಗಿ ಕಂಬಳಿ ಹುಳುವಾಗಿ ತಾಕಿದರೆ ಮುಳ್ಳುನಾಟಿ ಕಡೆತ ತರುವುದು!? ನಂತರ ಬಗಲಲ್ಲಿ ರೆಕ್ಕೆಗಳನ್ನು ಬೆಳೆಸಿಕೊಂಡು ಆ ರೆಕ್ಕೆಗಳಿಗೆ ಬಣ್ಣಗಳನ್ನು ಹಚ್ಚಿಕೊಂಡು ಸುಂದರವಾದ ಚಿಟ್ಟೆಯಾಗುವುದು?… ಆ ಸುಂದರ ರೆಕ್ಕೆಗಳನ್ನು ಗಾಳಿಯಲ್ಲಿ ಬೀಸುತ್ತಾ ಹಾರುತ್ತಾ, ಹಾರುತ್ತಾ ತೇಲಿ ಹೋಗುವುದು?!. ..’ ಹೀಗೆ ಅವಳ ಮನಸ್ಸಿನಲ್ಲಿ ಒಂದು ಮಿಂಚು ಹಾದುಹೋಯಿತು. ಅವಳಿಗೆ ಬೀಜಬಾಳೆ ಗೊನೆ, ಈಚಲ ಹಣ್ಣು ಎಲ್ಲವೂ ಕ್ಷಣ ಹೊತ್ತು ಮರೆತು ತನ್ಮಯಳಾಗಿ ಆ ಲಾರ್ವಗಳನ್ನೇ ನೋಡುತ್ತಾ ನಿಂತಳು; ಚಿಟ್ಟಿ ಎನ್ನುವ ಆ ಪುಟ್ಟ ಹುಡುಗಿಯಲ್ಲಿ ಹೀಗೆ ಸೌಂದರ್ಯ ಅರಳುತ್ತದೆ ಎನ್ನುವ ಅರಿವೂ ಇಲ್ಲದೆ!
ಅಷ್ಟರಲ್ಲಿ ಅಲ್ಲಿಗೆ ಕಲಾಯೀ ಸಾಬುವಿನ ಮಗಳು ಹಸೀನ, ಮುತ್ತುಬ್ಯಾರಿಯ ಮಗಳು ನುಸೈಬಾ ಮತ್ತವಳ ತಂಗಿ ಜಮ್ಮು ಬಂದರು. ಮುಖವೊಂದನ್ನು ಬಿಟ್ಟು ತಲೆಯಿಂದ ಕೈಕಾಲುಗಳು ಕೂಡಾ ಕಾಣದಂತೆ ಪೂರ್ತಿಯಾಗಿ ಹೊದ್ದುಕೊಂಡಿದ್ದ ಅವರನ್ನ ನೋಡಿ ಚಿಟ್ಟಿಗೆ ಏನೋ ಹೊಳೆಯಿತು. ಓ ಇದಕ್ಕೆ ಇರಬೇಕು ಸಾಬರ ಹೆಣ್ಣುಮಕ್ಕಳು ದೇಹವನ್ನು ಹೀಗೆ ಮುಚ್ಚಿಕೊಳ್ಳುವುದು. ತಾನು ಸಾಬಿಯಾಗಿದ್ದರೆ ಮುನಿಯಪ್ಪ ಮೇಷ್ಟ್ರ ಕಣ್ಣು ತನ್ನ ಮೇಲೆ ಬೀಳುತ್ತಿರಲಿಲ್ಲ. ಹೆಂಗೆ ನೋಡುತ್ತಿದ್ದರು?… ತನಗೆ ಶಕ್ತಿಯಿದ್ದಿದ್ದರೆ ಅವರ ಕಣ್ಣುಗಳನ್ನು ಕಿತ್ತುಬಿಡುತ್ತಿದ್ದೆ ಎಂದುಕೊಂಡಳು. ಅಷ್ಟರಲ್ಲಿ ಹಸೀನಾ ತನ್ನ ಉರ್ದು ಮಿಶ್ರಿತವಾದ ಕನ್ನಡದಲ್ಲಿ `ನಿಂದು ಫ್ರಂಡ್ಸು ಎಲ್ಲಾ ಅಲ್ಲಿ ಬಾಳೇದು ಗಿಡಕ್ಕೆ ಹೋಗಿದ್ದಾವು ನಿಂದು ಯಾಕೆ ಹೋಗಿಲ್ಲ’ ಅಂದಳು. ಅವಳ ಮಾತಿಗೆ ಚಿಟ್ಟಿಯ ದುಮ್ಮಾನ ಹರಿದು ನಗು ಬಂತು. `ಯಾಕೆ ನಿಂದು ಹಿಂಗೆ ನಗೆ ಆಡ್ತಾವು’ ಎಂದು ಮತ್ತೆ ಹಸೀನ ಕೇಳಿದಳು. ಊರಲ್ಲಿನ ಎಲ್ಲಾ ಮುಸಲ್ಮಾನರು ಹೀಗೆ ಮಾತಾಡಲ್ಲ. ಕಲಾಯಿ ಸಾಬು ಆಂಧ್ರ್ರಾದಿಂದ ಬಂದಿದ್ದ. ಅವನಿಗೆ ಅವನ ಮನೆಯ ಜನರಿಗೆ ಉರ್ದುವೂ ಸರಿಯಾಗಿ ಗೊತ್ತಿರಲಿಲ್ಲ, ತೆಲುಗೂ ಗೊತ್ತಿರಲಿಲ್ಲ. ಈಗ ಕನ್ನಡವೂ ಅವರ ಬಾಯಲ್ಲಿ ಕುಲಗೆಡುತ್ತಿತ್ತು. `ಏನಿಲ್ಲ ಕಣೆ’ ಎಂದರೂ ಆರೋಗ್ಯಾನ ಮಾತು ನೆನಪಾಗಿ ಮತ್ತೆ ನಗು ಉಕ್ಕಿಸುತ್ತಿತ್ತು.
ಹಸೀನಾ ನುಸೀಬಾ ಗಳಸ್ಯ ಕಂಠಸ್ಯ. ಯಾವಾಗಲೂ ಜೋಡೀಯಾಗೆ ತಿರುಗುತ್ತಿದ್ದರು. ನಕ್ಕತ್ತುವಿನ ಜೊತೆ ಕೂಡಾ ಅವರು ಸೇರುತ್ತಿರಲಿಲ್ಲ. ಕಾಫಿರರ ಜೊತೆ ಸೇರಿದ್ರೆ ಅಲ್ಲ ನಮಗೆ ಶಿಕ್ಷೆ ಕೊಡ್ತಾರೆ ಅನ್ನೋದು ಅವರ ಅಭಿಪ್ರಾಯ. ಆಟಕ್ಕೆ ಬಿಟ್ಟಾಗ ಆರೋಗ್ಯಾಗೂ ಹಸೀನಾಗೂ ಜಗಳ ಶುರುವಾಗಿಬಿಟ್ಟಿತ್ತು. ಹಸೀನಾ `ಆರೋಗ್ಯಾಳ ಪಕ್ಕ ನಿಲ್ಲಲ್ಲ’ ಎಂದುಬಿಟ್ಟಿದ್ದಳು. ಆರೋಗ್ಯಾಗೆ ಅದೆಲ್ಲಿತ್ತೋ ಕೋಪ `ನನ್ನನ್ಯಾಕೆ ಮುಟ್ಟಿಸಿಕೊಳ್ಳಲ್ಲ ನಿನ್ನ್ ಮೈ ಯಾವಾಗ್ಲೂ `ಹಸೀ’ನಾ?’ ಎಂದಿದ್ದಳು. ಅವಳ ಮಾತಿಗೆ ಕೆರಳಿದ ನುಸೈಬಾ ಕೂಡಾ ಜಗಳಕ್ಕೆ ಹಸೀನಾಳ ಜೊತೆ ಸೇರಿದ್ದಳು. ಆರೋಗ್ಯಾ ಕಾಲುಗಳನ್ನು ಅಗಲ ಹಾಕಿ ನಿಂತು `ಏಯ್ ನುಸೈಬಾ ನನ್ನ ಕಾಲ್ ಕೆಳಗೆ ನುಸೀಬಾ’ ಎಂದಳು. ಅವತ್ತು ಮೈದು ಸಾಬರ ಮಗಳು ನಕ್ಕತ್ತು ಕೂಡಾ ಜೋರಾಗಿ ಚಪ್ಪಾಳೆ ತಟ್ಟಿಕೊಂಡು ನಕ್ಕಳು. ಇದು ಅಷ್ಟಕ್ಕೆ ನಿಲ್ಲದೆ ಹಸೀನಾ ನುಸೈಬಾ ಮನೆಯವರು ಬಂದು ಸ್ಕೂಲಲ್ಲಿ ಜಗಳ ಆಡಿ ಆರೋಗ್ಯನಿಗೆ `ಇನ್ನೊಂದ್ ಸಲ ಹೀಗೆಲ್ಲಾ ಮಾಡಿದ್ರೆ ನಿಮ್ಮನೇಗ್ ಬತರ್ಿವಿ’ ಎಂದು ಎಚ್ಚರಿಸಿದ್ದರು. ಎಲ್ಲರಲ್ಲು ಆತಂಕ ಇದ್ದರೂ ಆರೋಗ್ಯ ಮಾತ್ರ ಯಾವುದೂ ತನಗಲ್ಲ ಅಂತ ಇದ್ದುಬಿಟ್ಟಿದ್ದಳು. `ಅಲ್ವೇ ನಿಮ್ಮನೇತನ್ಕ ಬಂದ್ರೆ ಏನ್ ಗತೀನೇ?’ ಎಂದ ಸ್ನೇಹಿತರಿಗೆ `ನಮ್ಮವ್ವ ಕಲ್ಲವ್ವ ನಮ್ಮಪ್ಪ ಭೈರ ಡಿಸೋಜಾ ಅವ್ರಿಗ್ ಬಾಯ್ ಕೊಟ್ಟ್ ಬದ್ಕಾದೀತೇ ಬಿಡು’ ಎಂದಿದ್ದಳು ಸಲೀಸಾಗಿ. `ಹಸೀನಾ ನುಸೀಬಾ’ ಎನ್ನುವುದು ಮಾತ್ರಾ ಎಲ್ಲರ ಬಾಯಲ್ಲಿ ಎಲಡಿಕೆಯಾಗಿ ಜಿಗಿಯತೊಡಗಿತ್ತು.
ಅಂಥಾ ಹಸೀನಾ ನುಸೈಬಾರಿಗೆ ತಾನು ಸ್ನೇಹಿತರ ಜೊತೆ ಸೇರದೆ ನಿಂತಿರುವುದಕ್ಕೆ ಕಾರಣ ಹೇಳಲಾಗದೇ ಅವರು ಹಾಕಿಕೊಂಡಿದ್ದ ಬಟ್ಟೆಯನ್ನು ಮುಟ್ಟುತ್ತಾ ಚಿಟ್ಟಿ `ಈ ಬಟ್ಟೆ ಚೆನ್ನಾಗಿದೆ ಎಲ್ಲೇ ಸಿಗುತ್ತೆ’ ಎಂದಳು. `ನಿಮ್ಮಂಥಾ ಕಾಫಿರರಿಗೆ ಇದು ಸಿಗಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಸಾಗಿದ್ದರು ಇಬ್ಬರೂ. ಚಿಟ್ಟಿ ಮಂಕಾದಳು. ಅವಳಿಗೆ ಯಾಕೋ ತಾನು ಒಂಟಿ ಅನ್ನಿಸಲಿಕ್ಕೆ ಶುರುವಾಯಿತು. ಅಲ್ಲಿಂದ ಮೆಲ್ಲಗೆ ಕಾಲನ್ನು ಎಳೆದು ಹಾಕುತ್ತಾ ಹೊರಟಳು.
ತನಗೆ ಆಗಿರೋದಾದ್ರೂ ಏನು? ಅರ್ಥವಾಗದೆ ಚಿಟ್ಟಿ ಗೊಂದಲಕ್ಕೆ ಬಿದ್ದಳು. ಅದೇ ಗೊಂದಲದಲ್ಲಿ ಅವಳಿಗೆ ತಿಳಿಯದೆ ನಂಜಕ್ಕನ ತೋಟದ ಹತ್ತಿರಕ್ಕೆ ಬಂದಳು. ನಂಜಕ್ಕ ತನ್ನ ಮೈಮೇಲೆ ಬಟ್ಟೆಯ ಪರಿವೆಯೂ ಇಲ್ಲದೆ ಹಣ್ಣುಗಳನ್ನು ಕಚ್ಚುತ್ತಾ ಕಚ್ಚಿದ ಹಣ್ಣನ್ನ ನೋಡುತ್ತಾ `ತಾನು ಬೆಳೆದ ಹಣ್ನನ್ನ ತಾನೇ ತಿನ್ನಬೇಕು’.. ಎಂದು ಮಾತಾಡಿಕೊಳ್ಳುತ್ತಿದ್ದಳು. ಚಿಟ್ಟಿ ಅವಳನ್ನೇ ನೋಡುತ್ತಾ ನಿಂತಳು. ಮಕ್ಕಳನ್ನು ಹೆತ್ತು ಹೊತ್ತು ಬೆಳೆಸಿ ತೋಟಕ್ಕೆ ಜೀವ ತೇದಿದ್ದ ನಂಜಕ್ಕನ ಧರ್ಮ ಎಲುಬುಗಳಿಗೆ ಅಂಟಿಕೊಂಡಂತೆ ಇತ್ತು. ಹಣ್ಣನ್ನು ಕಿತ್ತು ತಿನ್ನುತ್ತಿದ್ದ ನಂಜಕ್ಕ ಚಿಟ್ಟಿಯನ್ನು ನೋಡಿದಳು. ತನ್ನ ನಿರ್ಬಲವಾದ ಕೈಗಳನ್ನು ಗಾಳಿಯಲ್ಲಿ ಆಡಿಸುತ್ತಾ `ಬಾ’ ಎನ್ನುವಂತೆ ಕರೆದಳು. ಚಿಟ್ಟಿಗೆ ಹೋಗುವುದಾ? ಬೇಡವಾ? ಎನ್ನುವ ಅನುಮಾನ. ನಂಜಕ್ಕನೇ ಚಿಟ್ಟಿಯ ಹತ್ತಿರಕ್ಕೆ ಬಂದು ಅವಳ ಭುಜವನ್ನು ಹಿಡಿದು `ನೀನು ಹೆಣ್ಣ್ಣಾಗಿ ಹುಟ್ಟಿ ತಪ್ಪ್ ಮಾಡ್ಬಿಟ್ಟೆ, ಗಂಡಾಗಿದ್ದಿರೆ ಸಂಕಟಾನೇ ಇರ್ತಾ ಇರ್ಲಿಲ್ಲ. ನಿನ್ನಂಥಾವ್ರು ಬದುಕ್ಬಾರ್ದು ಬಾ ನಿನ್ನ ಮೆಟ್ಟ್ ಹಿಸ್ಕು ಸಾಯಿಸ್ ಬಿಡ್ತೀನಿ’ ಎಂದು ಜೋರಾಗಿ ನಕ್ಕಳು. ಚಿಟ್ಟಿಗೆ ಭಯ ಆಯ್ತು ಸಾಯಿಸಿಬಿಟ್ಟರೆ ಎಂದು ಅಲ್ಲಿಂದ ಓಡಿಬಿಟ್ಟಳು.
ಏದುಸಿರು ಬಿಡುತ್ತಾ ಮನೆಯನ್ನು ತಲುಪುವ ಹೊತ್ತಿಗೆ ಪುಟ್ಟ ನಾಯೀಮರಿಯೊಂದು ಕುಯ್ಯ್ಗುಡುತ್ತಿತ್ತು. ಪುಟ್ಟಿ, ಸೀನು ಅಪ್ಪ ಎಲ್ಲಾ ಅದರ ಮುಂದೆ ಕೂತಿದ್ದರು. ತಿಳಿ ಚಾಕೋಲೇಟ್ ಬಣ್ಣದ ಕಂತ್ರಿ ನಾಯಿ ಮರಿ ಅದಾಗಿತ್ತು. ಯಾವ ಮಾಯದಲ್ಲಿ ಮನೆಯೊಳಗೆ ಬಂದುಬಿಟ್ಟಿತ್ತೋ ಗೊತ್ತಿಲ್ಲ. ಅಪ್ಪ ಅದನ್ನಟ್ಟಲು ನೋಡುವಾಗ ಗುರ್ರೆಂದು ಅಪ್ಪನಿಗೆ ತಿರುಗಿಬಿದ್ದಿದೆ. `ಅರೇ ಮುಂಡೇದೇ ಸಖತ್ ಜೋರಾಗಿದ್ಯಲ್ಲಾ, ಇದನ್ನ ನಾವೇ ಸಾಕಿಬಿಡೋಣ’ ಅಂತ ಮನೆಯಲ್ಲೇ ಇದ್ದ ಗೋಣಿ ಹುರಿಯನ್ನು ಆಗಲೇ ಅದರ ಕುತ್ತಿಗೆಗೆ ಬಿಗಿದು ಬಿಟ್ಟಿದ್ದ. ಅಜ್ಜಿ ಒಳಗಿನಿಂದ `ನೋಡಿದ್ರೆ ಹದಿನೈದು ದಿನಗಳ ಮರಿಯಿರಬೇಕು ಅನ್ಸುತ್ತೆ ಬಿಟ್ರೆ ಅದ್ರ ಅಮ್ಮನನ್ನು ಹುಡುಕಿ ಹೋಗುತ್ತೆ, ಬಿಟ್ಟ್ ಬಿಡೋ’ ಎಂದಳು. ಅಪ್ಪ ಅದನ್ನ ಸಾಕುವ ನಿಧರ್ಾರ ಮಾಡಿದ್ದ. `ಟಾಮಿ’ ಅಂತ ನಾಮಕರಣವನ್ನೂ ಮಾಡಿಬಿಟ್ಟ. ಮಾತಾಡುವ ಮೂವರು ಮಕ್ಕಳ ಜೊತೆ ಮಾತಾಡದ ಟಾಮಿ ಕೂಡಾ ಒಂದಾಗಿಹೋಗಿತ್ತು.
ತಾನ್ಯಾಕೆ ಗಂಡಾಗಿ ಹುಟ್ಟಲಿಲ್ಲ. ಹುಟ್ಟಿದ್ದಿದ್ದರೆ ಯಾವ ಸಂಕಟವೂ ಇರುತ್ತಿರಲಿಲ್ಲ ನಂಜಕ್ಕನ ಮಾತುಗಳಲ್ಲಿ ಸತ್ಯವನ್ನು ಹುಡುಕುತ್ತಾ ಕೂತಳು ಚಿಟ್ಟಿ. ಗಂಡಾಗಬೇಕಿತ್ತು ಸೀನು ಹುಟ್ಟಿದಾಗ ಅಪ್ಪ ಎಂಥಾ ಸಂಭ್ರಮ ಪಟ್ಟಿದ್ದ ತನ್ನ ಸ್ನೇಹಿತರ ಜೊತೆ ಇವತ್ತಿಗೆ ತನ್ನ ಜನ್ಮ ಸಾರ್ಥಕವಾಯ್ತು ಅಂತ ಹೇಳಿರಲಿಲ್ಲವೇ? ನಾನಾಗಲೀ ಪುಟ್ಟಿಯಾಗಲೀ ಹುಟ್ಟಿದ್ದು ಅವನಿಗೆ ಯಾಕೆ ಸಾರ್ಥಕ ಆನ್ನಿಸಲಿಲ್ಲ. ಅಜ್ಜಿ ಕದ್ದು ಮುಚ್ಚಿ ಸೀನುವಿಗೆ ಹಾಲಿನ ಖೆನೆ ತಿನ್ನಿಸುತ್ತಾಳೆ. ತನಗಿಷ್ಟ ಎಂದರೂ ಕೊಡುವುದಿಲ್ಲ. ಅವನಿಗೆ ಮಾತ್ರ ಬೆಣ್ಣೆ, ಹಬ್ಬಕ್ಕೆ ಬಟ್ಟೆ … ಇಲ್ಲ ಇಲ್ಲಿ ಏನೋ ಇದೆ ಏನದು? ರಾತ್ರಿ ಎಷ್ಟೋ ಹೊತ್ತಿನ ತನಕ ಅವಳಿಗೆ ನಿದ್ದೆ ಬರಲಿಲ್ಲ.
ಬೆಳಗ್ಗೆ ಸ್ವೆಟರ್ ಅನ್ನು ಜತನವಾಗಿ ಎತ್ತಿ ಭುಜದ ಮೇಲೆ ಹಾಕಿಕೊಂಡಳು ಚಿಟ್ಟಿ, ಮುನಿಯಪ್ಪ ಮಾಷ್ಟ್ರ ಕಣ್ಣು ನನ್ನ ಮೇಲೆ ಹರಿಯಬಾರದು ಅದಕ್ಕೆ ರಕ್ಷಣೆಗಾಗಿ. ರಕ್ಷಣೆಗಾಗಿ! ಮೊದಲ ಬಾರಿಗೆ ಆ ಪದ ಅವಳಿಗೆ ಹೊಳೆದದ್ದು. ಕೆಲವು ವಿಷಯಗಳನ್ನ ಅರ್ಥ ಮಾದಿಕೊಳ್ಳಲೇ ಬೇಕು ಎಂದು ನಿಧರ್ಾರಕ್ಕೆ ಚಿಟ್ಟಿ ಬರುವಾಗ್ಗಲೇ ಅಮ್ಮ `ಪುಟ್ಟಿಯನ್ನು ಕರೆದುಕೊಂಡು ಹೋಗೆ’ ಎಂದಳು.` ಅಯ್ಯೋ ಹೋಗಮ್ಮಾ ಅವ್ಳು ನನ್ನ ಮಾತನ್ನ ಕೇಳಲ್ಲ ಬೇಕಿದ್ರೆ ನೀನೇ ಕರ್ಕೊಂಡ್ ಹೋಗಿ ಬಿಡು’ ಎಂದು ಮುಂದಿನ ಮಾತಿಗೂ ಕಾಯದೆ ಹೊರಟು ಬಿಟ್ಟಳು.
ಹಾಗೆ ನಡೆಯುತ್ತಾ ಬರುವಾಗ ನಂಜಕ್ಕನ ತೋಟದ ಬಳಿಗೆ ಬಂದಳು ನೆನ್ನೆಯೆಲ್ಲಾ ನಂಜಕ್ಕ ಹುಚ್ಚು ಹುಚ್ಚಾಗಿ ಆಡಿದ್ದು ನೆನಪಾಗಿ ಭಯವಾದರೂ ಹುಚ್ಚಿಯಾದರೇನು ಅವಳಿಂದ ವಿಷಯ ತಿಳಿದುಕೊಳ್ಳ ಬಹುದಲ್ಲವಾ? ಮೇಲಾಗಿ ಅವಳು ತಾನು ಹೀಗೆ ಕೇಳಿದೆ ಅಂತ ಯಾರಿಗೂ ಹೇಳೋದಿಲ್ಲ, ಹೇಳಿದರೂ ಜನ ಅದನ್ನ ಗಂಭೀರವಾಗಿ ತಗೊಳಲ್ಲ ಅನ್ನಿಸಿ ನಂಜಕ್ಕನನ್ನು ಹುಡುಕಿಕೊಂಡು ಹೊರಟಳು. ನಂಜಕ್ಕನ ಸುಳಿವು ಎಲ್ಲೂ ಇಲ್ಲ. ನಂಜಕ್ಕಾ ಎನ್ನುತ್ತಾ ಹುಡುಕುತ್ತಾ ಹೊರಟ ಅವಳಿಗೆ ತೋಟದ ಮೂಲೆಯಲ್ಲಿ ಸೀರೆಯೊಂದು ನೇತಾಡುತ್ತಿದ್ದ ಹಾಗೆ ಅನ್ನಿಸಿತು. ಹತ್ತಿರಕ್ಕೆ ಹೋದ ಹಾಗೆ ದಿಗಿಲು ಅವಳನ್ನು ಆವರಿಸಿಬಿಟ್ಟಿತು. ನಾಲಗೆಯನ್ನು ಹೊರಕ್ಕೆ ಹಾಕಿ ಭಯಂಕರವಾಗಿ ಕಾಣುತ್ತಿದ್ದ ನಂಜಕ್ಕ ತಾನು ಬೆಳೆಸಿದ ಗಿಡದಲ್ಲಿ ತಾನೊಂದು ಕಾಯೇನೋ ಎನ್ನುವ ಹಾಗೇ ಜೋತಾಡುತ್ತಿದ್ದಳು. ಅದನ್ನ ನೋಡಿ ಚಿಟ್ಟಿ ಚಿಟ್ಟನೆ ಚೀರುತ್ತಾ ನೆಲಕ್ಕೆ ಕುಸಿದು ಬಿದ್ದಳು. ಜನ ಮಾತಾಡಿಕೊಂಡರು, ಹುಚ್ಚ ನಂಜಕ್ಕನನ್ನೂ ಯಾರೋ ಒಬ್ಬ ಗಂಡಸು ಬಸಿರು ಮಾಡಿಬಿಟ್ಟಿದ್ದನಂತೆ!
(ಮುಂದುವರೆಯುವುದು…)

‍ಲೇಖಕರು avadhi

September 10, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: