ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಮುಂದೆ ಈಗ ನಾಳಿನ ಪ್ರಶ್ನೆ

(ಇಲ್ಲಿಯವರೆಗೆ…)

ಕೊಟ್ಟಿಗೆ ಮನೆಯಲ್ಲಿ ಆತಂಕದ ಮಧ್ಯೆ ಬಾರದ ನಿದ್ದೆಗಾಗಿ ಪ್ರಾರ್ಥಿಸುತ್ತಾ ಕೂತ ಚಿಟ್ಟಿಯ ಸುತ್ತಾ ಜೀರುಂಡೆಯ ಶಬ್ದ ಗವ್ವೆನ್ನುವ ಕತ್ತಲೆಯನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಭಾರತಿ ತಂದಿಟ್ಟಿದ್ದ ಅನ್ನ ಅಲ್ಲೆ ತಣ್ಣಗಾಗುತ್ತಾ ಕೂತಿತ್ತಾದರೂ ಅವಳಿಗೆ ತಿನ್ನುವ ಮನಸ್ಸಾಗಲಿಲ್ಲ. ಒಂಟಿತನ ಕಾಡಿದ್ದರಿಂದಲೋ ಏನೋ ಯಾರಾದರೂ ಜೊತೆಗಿರಬಾರದೇ ಅನ್ನಿಸಿತ್ತು. ಹಾಗೆ ನೆನಪಾದ ತಕ್ಷಣ ಸತ್ತುಹೋದ ಎಲ್ಲರೂ ಸಾಲಾಗಿ ಎದ್ದು ಬಂದಂತಾಗಿ ಬೆಚ್ಚಿಬಿದ್ದಳು. ಅಷ್ಟರವರೆಗೂ ಆಗದಿದ್ದ ಭಯ ಆವರಿಸಿ ಎದ್ದು ಮನೆಗೆ ಓಡಿಬಿಡಬೇಕು ಅನ್ನಿಸಿತಾದರೂ ಹಾಗೇ ಹೋಗಲಿಕ್ಕೆ ಧೈರ್ಯ ಸಾಲದೆ ಅಳುತ್ತಾ ಹುಲ್ಲುಹಾಸಿಗೆಯ ಮೇಲೆ ಮಲಗಿಬಿಟ್ಟಿದ್ದಳು. ಹಾಗೇ ಮಲಗಿದ ಚಿಟ್ಟಿಗೆ ನಿದ್ದೆ ಯಾವಾಗ ಆವರಿಸಿತು ಎಂದು ಗೊತ್ತಾಗಲಿಲ್ಲ. ಎಲ್ಲವನ್ನೂ ಮರೆತು ಮಲಗಿದ ಅವಳಿಗೆ ಮಧ್ಯರಾತ್ರಿ ಏನೇನೋ ಕನಸುಗಳು.
ಎಲ್ಲೋ ಹರಡಿದ್ದ ರಕ್ತ, ಮುರಿದುಬಿದ್ದ ಮನೆ, ಕೋರೆ ದಡೆಯ ರಾಕ್ಷಸರು, ಅವರಲ್ಲಿ ಇದ್ದಕ್ಕಿದ್ದ ಹಾಗೇ ಸುರೇಶಣ್ಣ ಕಾಣಿಸಿಕೊಂಡು ‘ಏನೇ ಚಿಟ್ಟಿ ನನ್ನನ್ನೇ ಅನ್ನೋ ಮಟ್ಟಿಗೆ ಆದ್ಯಾ’ ಎನ್ನುತ್ತಾ ಹತ್ತಿರ ಬರತೊಡಗಿದ. ಅವನ ತುಟಿಯ ತುದಿಯಲ್ಲಿ ಸಣ್ಣಗೆ ಕೋರೆ ಹಲ್ಲುಗಳು ಕಾಣಿಸಿಕೊಂಡಿದ್ದೆ ತಡ ಚಿಟ್ಟಿಯ ಮೈ ಬೆವರತೊಡಗಿತ್ತು. ‘ಇಲ್ಲ ಸುರೇಶಣ್ಣ ನನ್ನನ್ನು ಏನೂ ಮಾಡಬೇಡ ಇನ್ನೊಂದು ಸಲ ನಾನು ನಿನಗೆ ಏನೂ ಅನ್ನೊಲ್ಲ’ ಎನ್ನುತ್ತಾ ಹಿಂದೆ ಸರಿಯತೊಡಗಿದಳು. ಹಾಗೆ ಸರೀತಾ ಸರೀತಾ ಹೋದಾಗ ಅವಳ ಕಾಲಿಗೆ ಏನೋ ಸಿಕ್ಕು ಟಳ್ಳ್ ಎಂದು ಕೆಳಗೆ ಬಿತ್ತು. ಇದ್ದಕ್ಕಿದ್ದ ಹಾಗೇ ಕೇಳಿದ ಶಬ್ದಕ್ಕೆ ಎಚ್ಚರವಾಯಿತು. ಅರೆ! ಕನಸಿನಲ್ಲಿ ಆ ವಸ್ತು ಬಿದ್ದಿದ್ದಾ? ನಿಜವಾಗ್ಲೂನಾ? ಎನ್ನುತ್ತಾ ಆಚೀಚೆ ಕಣ್ಣರಳಿಸುವಾಗಲೇ ಚಿಟ್ಟಿಗೆ ಯಾರೋ ಒಳಗೆ ಬಂದ ಹಾಗಾಯಿತು. ದಡಬಡಿಸಿ ಎದ್ದು ಹುಡುಕತೊಡಗಿದಾಗ, ಕತ್ತಲೆಯಲ್ಲಿ ಯಾರು ಬಂದರು ಎಂದು ಗೊತ್ತಾಗದಿದ್ದರೂ ಅವರ ಧ್ವನಿ ಗೊತ್ತಾಗುವಂತ್ತಿತ್ತು.
ಭಾರತಿಯ ಕೊನೆಯ ಅಣ್ಣ ಕಂಠಿ. ಯಾರ ಜೊತೆಗೋ ಹಣದ ವ್ಯವಹಾರ ಮಾತಾಡುತ್ತಿದ್ದ. ಆಗೀಗ ಅವನ ಕೈಲಿದ್ದ ಬ್ಯಾಟರಿಯ ಬೆಳಕು ಹಿತ್ತಲಲೆಲ್ಲಾ ಓಡಾಡುವಾಗ ತನ್ನ ಮೇಲೆ ಎಲ್ಲಿ ಬೀಳುತ್ತೋ ಎನ್ನುವ ಭಯದಲ್ಲಿ ಮತ್ತಷ್ಟು ಮೂಲೆಗೆ ಸರಿದು ಕೂತಳು. ಕಂಠಿ ಯಾರ ಜೊತೆಗೋ ಗಂಭೀರವಾಗಿ ಮಾತಾಡುತ್ತಿದ್ದ. ಆ ಬೆಳಕಲ್ಲಿ ತನ್ನ ಕೈಗಳನ್ನು ಆಡಿಸುತ್ತಾ ಏನೋ ಹೇಳುತ್ತಿದ್ದುದು ಕೇಳುತ್ತಿದ್ದಾದರೂ ಎಲ್ಲವೂ ಅಸ್ಪಷ್ಟವಾಗಿತ್ತು. ಮಾತಿನ ಮಧ್ಯೆ ಹಣದ ಪ್ರಸ್ತಾಪ ಬರುತ್ತಿತ್ತು.
ಭಾರತಿಗಿಂತ ಕೇವಲ ಎರಡು-ಮೂರು ವರ್ಷಕ್ಕೆ ದೊಡ್ಡವನಾದ ಇವನದ್ದು ಎಂಥಾ ಹಣದ ವ್ಯವಹಾರ? ಚಿಟ್ಟಿಗೆ ಅಚ್ಚರಿಯಾಯಿತು. ಸುಮಾರು ಹೊತ್ತಿನವರೆಗೂ ಆ ವ್ಯಕ್ತಿ ಏನೋ ಹೇಳುತ್ತಾ ಕೇಳುತ್ತಾ ನಿಂತಿದ್ದನಾದರೂ ಅದ್ಯಾರು? ಎನ್ನುವುದು ಚಿಟ್ಟಿಗೆ ಗೊತ್ತಾಗಲಿಲ್ಲ. ಅಂಥಾ ಸ್ಥಿತಿಯಲ್ಲಿ ಕೂಡಾ ಅವಳು ಅದ್ಯಾರಿರಬಹುದು ಎನ್ನುವ ಕುತೂಹಲಕ್ಕೆ ಬಿದ್ದಳು. ಭಾರತಿಗೆ ಇದೇನೋ ವ್ಯವಹಾರ ನಡೀತಾ ಇದೆ ಎನ್ನುವುದನ್ನು ಹೇಳಿಬಿಡಬೇಕು ಇಲ್ಲದಿದ್ದರೆ ಈ ಕಂಠಿ ತುಂಬಾ ಸಾಲ ಮಾಡಿಕೊಂಡುಬಿಡುತ್ತಾನೆ ಎಂದು ಮನಸ್ಸಿನಲ್ಲಿ ಬಂದಿತಾದರೂ ಹಿಂದೆಯೇ ಅಯ್ಯೋ ಬೇಡಪ್ಪಾ ಒಂದು ವಿಷಯಕ್ಕೆ ತಾನು ಹೀಗೆ ಒಂಟಿಯಾಗಿ ಕೂತಿದ್ದೀನಿ. ಇನ್ನು ಈ ವಿಷಯವನ್ನು ಹೇಳಿಬಿಟ್ಟರೆ ಮತ್ತೆನು ಸಂಕಷ್ಟ ಎದುರಾಗುತ್ತೋ ಅನ್ನಿಸಿ ಮಾತಾಡದಿರುವುದೇ ಒಳ್ಳೆಯದು ಎಂದು ನಿರ್ಧಾರ ಮಾಡಿದಳು.
ಅರ್ಧ-ಮುಕ್ಕಾಲು ಗಂಟೆಯ ನಂತರ ಮಾತಾಡುತ್ತಿದ್ದ ಆ ವ್ಯಕ್ತಿ ಹೊರಟುಹೋದ. ಕಂಠಿ ಕೂಡಾ ಒಳಗೆ ಸಾಗಿದ. ಅಷ್ಟರವರೆಗೆ ಏನೋ ನಡೆಯುತ್ತೆ ಎನ್ನುವ ಕುತೂಹಲದಿಂದ ಕಾದಿದ್ದ ಚಿಟ್ಟಿಗೆ ಮತ್ತೆ ಶೂನ್ಯ ಆವರಿಸಿಕೊಂಡಿತ್ತು. ಅಳುವುದೆ ತನ್ನ ಜೀವನ ಎಂದು ಅಳುತ್ತಾ ಅಳುತ್ತಾ ಆ ರಾತ್ರಿಯನ್ನ ಕಳೆದ ಚಿಟ್ಟಿಗೆ ಬೆಳಗಿನ ಜಾವದ ಹೊತ್ತಿಗೆ ನಿದ್ದೆ ಆವರಿಸಿತ್ತು. ಇದ್ದಕ್ಕಿದ್ದಂತೆ ಜಗತ್ತನ್ನು ಮರೆತು ಮಲಗಿದ್ದ ಅವಳನ್ನು ಯಾರೋ ಹೊಡೆಯಲು ಆರಂಭಿಸಿದರು. ಕಣ್ಣನ್ನು ತೆರೆದು ಯಾರು ಎಂದು ನೋಡುವುದರೊಳಗೆ ನಾಲ್ಕಾರು ಏಟು ಅವಳ ಮೈಮೇಲೆ ಬಿದ್ದಿದ್ದವು. ‘ಅಯ್ಯೋ’ ಎನ್ನುತ್ತಾ ಕಣ್ಣು ಬಿಡಿಸಿಕೊಂಡು ಸರಿಯಾಗಿ ನೋಡುವಾಗ ಅವಳಿಗೆ ಕಂಡಿದ್ದು ಅಮ್ಮನ ಮುಖ!
ಅಮ್ಮನ ಮುಖದಲ್ಲಿ ಅಷ್ಟು ಕೋಪವನ್ನು ಅವಳು ಯಾವತ್ತೂ ನೋಡಿರಲಿಲ್ಲ. ‘ಅಯ್ಯೋ ಬಿಟ್ಟುಬಿಡಮ್ಮಾ’ ಎಂದು ಅಮ್ಮನ ಹೊಡೆತವನ್ನು ತಡೆಯುತ್ತಾ ಕೂಗುತ್ತಿದ್ದ ಚಿಟ್ಟಿಯ ಯಾವ ಮಾತೂ ಅವಳ ಕಿವಿಗೆ ಬೀಳಲಿಲ್ಲ. ‘ಹಾಳ್ ಲೌಡಿ ಮಾಡೋ ಕೆಲ್ಸಾನೆಲ್ಲಾಮಾಡಿ ಇಲ್ಲ್ ಬಂದ್ ಮಲ್ಗಿದ್ದೀಯಾ? ನಮ್ಮನ್ನೇನ್ ಉಳುಸ್ಬೇಕೂಂತ ಮಾಡಿದ್ದೀಯೋ ಇಲ್ಲ ಸಾಯಿಸ್ಬೇಕೂಂತಿದೀಯೋ’ ಎನ್ನುತ್ತಾ ಮತ್ತಷ್ಟು ಹೊಡೆದಾಗ ಅಪ್ಪ ಅಮ್ಮನನ್ನು ತಡೆದಿದ್ದ. ಅಲ್ಲಿವರೆಗೂ ಅಪ್ಪ ಕೂಡಾ ಅವ್ಳ ಜೊತೆ ಇದ್ದಾನೆ ಎನ್ನುವ ಅರಿವು ಕೂಡಾ ಚಿಟ್ಟಿಗಿರಲಿಲ್ಲ. ಅಪ್ಪನ ಆಸರೆಯಲ್ಲಿ ಅಳುತ್ತಾ ಕೊಟ್ಟಿಗೆಯಿಂದ ಮನೆಯ ಕಡೆಗೆ ಸಾಗುವಾಗ ಊರಿನ ಅರ್ಧ ಜನ ಅಲ್ಲಿದ್ದರು. ಭಾರತಿಯ ಅತ್ತಿಗೆ ಸುಮಾ ‘ನೋಡಿದ್ರಾ ನಾನ್ ಹೇಳಿದ್ರೆ ನಂಬಲಿಲ್ಲ, ಈಗ ನೀವೇ ನೋಡಿ, ಇವ್ಳು ಎಂಥಾವ್ಳು ಅಂತ ಈಗಲಾದ್ರೂ ಅರ್ಥ ಆಯ್ತಲ್ಲಾ?’ ಎಂದು ಮೊದಲೇ ಕಂಗಾಲಾದ ಚಿಟ್ಟಿಗೆ ಮತ್ತಷ್ಟು ಗಾಬರಿ ಹುಟ್ಟಿಸಿದಳು. ಏನೋ ಹೇಳಲು ಹೊರಟ ಚಿಟ್ಟಿಯನ್ನು ಅಪ್ಪ ತಡೆಯುತ್ತಾ ‘ನಡೀ ಚಿಟ್ಟಿ ಆಮೇಲ್ ಮಾತಾಡೋಣ’ ಎಂದು ಕರೆದೊಯ್ದಿದ್ದ.
ಹಿಂದೆ ಬಂದ ಅಮ್ಮ ಮಾತ್ರ ಚಿಟ್ಟಿ ತನ್ನ ಮಗಳಾಗಿ ಹುಟ್ಟಿ ಹೀಗೆ ತನ್ನ ಮಾರ್ಯಾದೆಯನ್ನು ಹರಾಜು ಹಾಕಿದ್ದಕ್ಕೆ ಸಾವಿರ ಶಾಪ ಹಾಕುತ್ತಿದ್ದಳು. ಮನೆಗೆ ಬಂದ ಚಿಟ್ಟಿಗೆ ಅಮ್ಮನಿಂದ ಒಂದೇ ಒಂದು ಏಟನ್ನೂ ಬೀಳದಂತೆ ಅಪ್ಪ ನೋಡಿಕೊಂಡ. ಅಜ್ಜಿ ಒಂದೂ ಮಾತಾಡಲಿಲ್ಲ. ಹಾಗೆಂದು ಅವಳು ಸಮಾಧಾನವಾಗೇನೂ ಇರಲಿಲ್ಲ. ಅವಳಿಗೆ ತನ್ನ ಕೊನೆಯ ಮಗಳು ಮನೆ ಬಿಟ್ಟು ಹೋಗಿದ್ದು ನೆನಪಾಗಿತ್ತು. ಅಮ್ಮ ‘ನಮ್ಮ ವಂಶದಲ್ಲೇ ನಿನ್ನಂಥ ಹುಡುಗಿ ಇರಲಿಲ್ಲ. ಈಗ ನೋಡು ಮಾನ ಮರ್ಯಾದೆ ಹೇಗ್ ಹರಾಜಾಯ್ತು? ನಿನಗೆ ಇದೆಲ್ಲಾ ಬೇಕಿತ್ತಾ? ಯಾರ್ ಮನೇಲ್ ಏನ್ ಹಾದ್ರ ಬೇಕಾದ್ರೂ ನಡೀಲಿ, ನಿಂಗ್ಯಾಕೆ ಅದ್ರಲ್ಲಿ ಆಸಕ್ತಿ? ನೀನಿನ್ನೂ ಸಣ್ಣ ಹುಡ್ಗಿ ಹಾಗೆ ಇರೋಕ್ ನೋಡು . . .’ ಎಂದು ಕೂಗಾಡುತ್ತಿದ್ದಳು. ಅವಳ ಮಾತನ್ನು ಕೇಳುತ್ತಾ ಕೇಳುತ್ತಾ ಅಜ್ಜಿಯ ಮುಖಕಪ್ಪಿಡುತ್ತಿತ್ತು.
‘ಅಪ್ಪ ಖಂಡಿತಾ ನನ್ನ ತಪ್ಪು ಇದ್ರಲ್ಲಿ ಏನೂ ಇಲ್ಲ, ನಾನೇನೂ ಮಾಡಿಲ್ಲ ಎಲ್ಲಾ ಆ ಭಾರತಿಯ ಅತ್ತಿಗೆಯದ್ದೇ ಕಿತಾಪತಿ. ವಿಷ್ಯ ಎಲ್ಲಾರ್ಗೂ ಗೊತ್ತಾಗುತ್ತೆ ಅಂತ…’ ಎಂದು ಚಿಟ್ಟಿ ಅಪ್ಪನಿಗೆ ಒಪ್ಪಿಸಲಿಕ್ಕೆ ಪ್ರಯತ್ನಿಸುತ್ತಿರುವಾಗಲೇ ಅಮ್ಮ ರೌದ್ರಾವತಾರ ತಾಳಿ ‘ನೀನ್ ಮಾತಾಡ್ಬೇಡ, ತಪ್ಪು ಮಾಡಿದ್ದೂ ಅಲ್ದೆ ಮನೆಗೂ ಬರ್ದೆ ರಾತ್ರಿ ಅಬ್ಬೆಪಾರಿ ಥರಾ ಎಲ್ಲೋ ಹೋಗ್ ಮಲ್ಗಿದ್ದೀಯಲ್ಲಾ? ಏನಾದ್ರೂ ಹೆಚ್ಚೂ ಕಡ್ಮೆ ಆಗಿದ್ರೆ. . . ? ಒಂದ್ ತಪ್ಪಾದ್ರೆ ಹೇಗೋ ಕ್ಷಮಿಸ್ಬಹ್ದುತ್ತು, ಮತ್ತೆ ಮತ್ತೆ ಇಂಥದ್ದೇ ತಪ್ಪನ್ನ ಮಾಡ್ತಾ ಇದ್ರೆ ಹೇಗೆ?. . . ರೀ ನಂಗಿದೆಲ್ಲ ಗೊತ್ತಿಲ್ಲ ನಮ್ಮ್ ಮರ್ಯಾದೆ ಊರಲ್ಲಿ ಹೋಗೋ ಮೊದ್ಲು ಏನಾದ್ರೂ ವ್ಯವಸ್ಥೆ ಮಾಡಿ’ ಎಂದಿದ್ದಳು. ಚಿಟ್ಟಿಗೆ ಬೇಸರವಾಗಿತ್ತು. ತಾನಲ್ಲಿದ್ದಿದ್ದು ಇವರ್ಯಾರಿಗೂ ಗೊತ್ತೇ ಆಗಬಾರದಿತ್ತು, ಇನ್ನು ಎರಡು ದಿನ ಹೇಗೋ ಕಳೆದ್ ಬಿಟ್ಟಿದ್ದಿದ್ರೆ ಇವ್ರಿಗೆಲ್ಲಾ ಬುದ್ಧಿ ಬರ್ತಿತ್ತು, ಹಾಳಾದ್ದು ಆ ದನದ ಕೊಟ್ಟಿಗೆಯ ಛಾವಣಿ ಕಳಚಿ ತನ್ನ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು? ಹಾವೋ ಚೇಳೋ ಬಂದು ತನ್ನ ಕಚ್ಚಿದ್ದಿದ್ದರೆ ಆಗುತ್ತಿರಲಿಲ್ಲವಾ? ಇಡೀ ಜಗತ್ತೇ ನನ್ನ ವಿರುದ್ಧ ನಿಂತು ಬಿಟ್ಟಿದೆಯಲ್ಲಾ? ಆ ದೇವರು ಅನ್ನೋನಿಗೆ ಸ್ವಲ್ಪ ನಾದ್ರೂ ಕರುಣೆ ಇದ್ದಿದ್ರೆ ನನಗೀ ಪರಿಸ್ಥಿತಿಯನ್ನು ತಂದೊಡ್ಡುತ್ತಿದ್ದನಾ?. . . ಎಂದೆಲ್ಲಾ ಅಂದುಕೊಂಡಳು.

ಇಷ್ಟೆಲ್ಲಾ ಆದರೂ ಆ ದನದ ಮನೆಯ ಒಳಗೆ ಬಗ್ಗಿ ನೋಡಿದ್ದು ಯಾರು? ಇದನ್ನೆಲ್ಲಾ ತಂದು ಹೇಳಿದ್ದು ಯಾರು ಎನ್ನುವ ಪ್ರಶ್ನೆ ಅವಳಲ್ಲೇ ಉಳಿದಿತ್ತು. ಅದಕ್ಕೆ ಉತ್ತರ ಸಿಕ್ಕುವುದೇನೂ ಕಷ್ಟದ ಕೆಲಸ ಆಗಿರಲಿಲ್ಲ. ರಾತ್ರಿಯೆಲ್ಲಾ ಚಿಟ್ಟಿಗಾಗಿ ಹುಡುಕಿ ಹುಡುಕಿ ಸುಸ್ತಾದ ಅಪ್ಪ ಚಿಟ್ಟಿಯಿಲ್ಲದೆ ಮನೆಗೆ ಬಂದಾಗ ಅಮ್ಮ ಹುಚ್ಚಿಯ ಹಾಗೇ ಆಡಿದ್ದಳು. ಅಪ್ಪನಿಗೆ ಅವಳನ್ನು ಸಮಾಧಾನ ಮಾಡುವುದೇ ದೊಡ್ದ ಕೆಲಸ ಆಯ್ತು. ಅತ್ತೂ ಅತ್ತೂ ಸುಸ್ತಾದ ಅಮ್ಮ ಊದಿಕೊಂಡಿದ್ದ ತನ್ನ ಕಣ್ಣುಗಳಲ್ಲಿ ನೀರು ಬರದೇ ಮತ್ತಷ್ಟು ಉರಿಯಲಿಕ್ಕೆ ಶುರುವಾದಾಗ ಅಪ್ಪನ ಮೇಲೆ ಹರಿಹಾಯ್ದಿದ್ದಳು. ಅಪ್ಪ ಅವಳನ್ನು ಕೂಡಿಸಿಕೊಂಡು ನನಗೂ ಅವಳು ಮಗಳೇ ಅಲ್ಲವಾ? ಹೀಗೆಲ್ಲಾ ಮಾತಡಿದ್ರೆ ಹೇಗೆ ಎಂದು ಸಮಾಧಾನ ಹೇಳಿದ್ದ. ಅಮ್ಮನ ಮುಸುಮುಸು ಅಳು ಮಾತ್ರ ಸ್ವಲ್ಪವೂ ಕಡಿಮೆ ಆಗಿರಲಿಲ್ಲ. ಮನೆಯ ಈ ರಗಳೆಯ ಮಧ್ಯೆಯೇ ಬೆಳಬೆಳಗ್ಗೇನೆ ಸೀನು ಹಟಹಿಡಿದಿದ್ದ. ಎದ್ದ ತಕ್ಷಣ ಸೀನುಪುಟ್ಟ ಎಂದು ಮುದ್ದು ಮುದ್ದಾಗಿ ಮಾತಾಡಿಸುತ್ತಿದ್ದ ಚಿಟ್ಟಿ ಇಲ್ಲದಿದ್ದುದ್ದೋ ಯಾರೂ ತನ್ನ ಕಡೆಗೆ ಗಮನ ಕೊಡದೆ ಇದ್ದುದಕ್ಕೋ ಏನೋ ಅಲೆ ಅಲೆಯಾಗಿ ರಾಗ ತೆಗೆದು ಹೋ ಎಂದು ಅಳುತ್ತಿದ್ದ.
ಹಾಳಾದವನು ಇಂಥಾ ಹೊತ್ತಲ್ಲೇ ಇವನಿಗೂ ಏನೋ ರೋಗ ಏ ಪುಟ್ಟಿ ಕರ್ಕೊಂಡ್ ಹೋಗೇ ಇವನ್ನ ಅಂತಾವಳ ಸುಪರ್ದಿಗೆ ಬಿಟ್ಟಿದ್ದಳು. ಪುಟ್ಟಿ ಅವನನ್ನು ಸಮಾಧಾನ ಮಾಡ್ತಾ ಅವನ ಜೊತೆ ಚಂಡನ್ನ ಹಿಡಿದು ಆಟಕ್ಕೆ ಇಳಿದಿದ್ದಳು. ಹಾಗೇ ಆಡ್ತಾ ಇರಬೇಕಾದ್ರೆ ಚಂಡನ್ನು ಸೀನು ಪೊದೆಯ ಒಳಗೆ ಎಸೆದಿದ್ದ. ಪುಟ್ಟಿ ಪೊದೆಯ ಸಂದಿಯಲ್ಲಿ ನುಗ್ಗಿದ ಚಂಡಿಗಾಗಿ ಹುಡುಕಾಟ ನಡುಸ್ತಾ ದನದ ಕೊಟ್ಟಿಗೆಯ ಕಿಟಕಿಯ ಹತ್ತಿರ ಬಂದಿದ್ದಳು. ಅಚಾನಕ್ ಆಗಿ ಅಲ್ಲಿ ಮಲಗಿದ್ದ ಚಿಟ್ಟಿಯನ್ನೂ ನೋಡಿದ್ದಳು. ನೆನ್ನೆಯಿಂದ ನಾಪತ್ತೆಯಾದ ಚಿಟ್ಟಿ ಹೀಗೆ ದನದ ಕೊಟ್ಟಿಗೆಯಲ್ಲಿ ಯಾಕಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದಷ್ಟು ಸಣ್ಣವಳಲ್ಲವಾದ್ದರಿಂದ ಅಮ್ಮನಿಗೆ ‘ನಿನ್ನ ಮುದ್ದಿನ ಮಗಳು ದನ ಕೊಟ್ಟಿಗೆಯಲ್ಲಿ ಸೊಳ್ಳೆ ನೊಣಗಳ ಜೊತೆ ಮಲಗಿ ಗಡದ್ದು ನಿದ್ದೆ ಹೊಡೀತಿದ್ದಾಳೆ, ನೀನಿಲ್ಲಿ ಅಳ್ತಾ ಕೂತಿರು’ ಎಂದು ವರದಿ ಒಪ್ಪಿಸಿದ್ದಳು.
ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ‘ನನ್ನ ಮಗಳನ್ನ ಯಾವ ಬರ್ಕ ಬಂದು ಎತ್ತಿಕೊಂಡು ಹೋಯಿತೋ? ಯಾವ ತೋಳ ಸೀಳಿಹಾಕಿತೋ, ಯಾವ ಕರಡಿಯ ಕೈಗೆ ಸಿಕ್ಕಳೋ. . .’ ಎಂದೆಲ್ಲಾ ಗೋಳಾಡುತ್ತಾ ಕೂತಿದ್ದ ಅಮ್ಮನಿಗೆ ಸರ್ರನೆ ನೆತ್ತಿಗೆ ಕೋಪ ಹತ್ತಿದ್ದೆ ದನದ ಕೊಟ್ಟಿಗೆಯ ಹತ್ತಿರ ಒಂದೇ ಉಸುರಿಗೆ ಬಂದಿದ್ದಳು. ಮುಂದಿನದ್ದೆಲ್ಲಾ ಚಿಟ್ಟಿಯ ಅರಿವಿಗೆ ಬಂದ ಸಂಗತಿಯಾಗಿತ್ತು. ಈಗ ಚಿಟ್ಟಿ ಮನೆಯನ್ನು ಬಿಟ್ಟು ಹೊರಗೇ ಹೋಗುತ್ತಿರಲಿಲ್ಲ. ಅಮ್ಮ ಅಜ್ಜಿಯ ಕಟ್ಟೆಚ್ಚರದ ನಡುವೆ ಬದುಕಬೇಕಿತ್ತು. ಅವಳಿಗೆ ಇದೆಲ್ಲಾ ಬೇಸರ ಅನ್ನಿಸಿದರೂ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗಿತ್ತು. ಅಜ್ಜಿ ಆಗೀಗ ‘ರಾಜನ ಜೊತೆ ಚಿಟ್ಟಿಯ ಮದುವೆ ಆಗಿಬಿಟ್ಟಿದ್ದರೆ…’ ಎಂಬ ರಾಗವನ್ನು ಎಳೆಯುತ್ತಲೇ ಇದ್ದಳು. ಅಮ್ಮ ಮಾತ್ರ ಚಿಟ್ಟಿಯ ಭವಿಷ್ಯದ ಬಗ್ಗೆ ತುಂಬಾ ಚಿಂತಿತಳಾಗಿದ್ದಳು. ಆಸ್ತಿಯಲ್ಲಿ ಪಾಲು ಕೇಳಲು ಬಂದಿದ್ದ ಸುಮಾ ತನ್ನ ಗಂಡನ ತಮ್ಮನ ಜೊತೆ ಸಂಸಾರವನ್ನೂ ಶುರು ಮಾಡಿದ್ದು ಊರಿಗೇ ಗೊತ್ತಾಗಿಬಿಟ್ಟಿತ್ತು. ‘ಈಗೇನು ಹೇಳ್ತೀಯ?’ ಅಂತ ಅಮ್ಮನನ್ನು ಕೇಳಬೇಕೆಂದುಕೊಂಡರೂ ಚಿಟ್ಟಿ ಕೇಳಲಿಲ್ಲ. ಕೇಳುವುದರಿಂದ ಹೇಳುವುದರಿಂದ ಯಾವುದೂ ನಡೆಯುವುದಿಲ್ಲ ಎನ್ನುವುದು ಅವಳಿಗೆ ಅರ್ಥವಾಗಿತ್ತು. ಹಾಗಾಗಿ ಚಿಟ್ಟಿ ಈಗ ತುಂಬಾ ಗಂಭೀರವಾಗಿದ್ದಳು.
ಚಿಟ್ಟಿಯ ಎಸ್ ಎಸ್ ಎಲ್ ಸಿ ಯ ಫಲಿತಾಂಶ ಪ್ರಕಟವಾಗಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಳು. ಚಿಟ್ಟಿಯನ್ನೂ ಒಳಗೊಂಡಂತೆ ಮನೆಯವರೆಲ್ಲಾ ‘ಸಧ್ಯ ಫೇಲ್ ಆಗಲಿಲ್ಲವಲ್ಲಾ!’ ಎನ್ನುವ ನಿರಾಳತೆಯನ್ನು ಅನುಭವಿಸುವಾಗಲೇ ‘ಬೇರೆಲ್ಲಾ ತರಲೆ ಬಿಟ್ಟಿದ್ದರೆ ನಿಮ್ಮ ಮಗಳು ಫಸ್ಟ್‌ಕ್ಲಾಸ್‌ನಲ್ಲೆ ಪಾಸ್ ಮಾಡುತ್ತಿದ್ದಳು’ ಎಂದು ಪಾಪೇಗೌಡ ಮೇಷ್ಟ್ರು ಬತ್ತಿ ಇಟ್ಟಿದ್ದರು. ಚಿಟ್ಟಿ ಮುಂದೆ ಓದಿ ಏನು ಮಾಡಬೇಕಿದೆ? ಎಂದು ಅಮ್ಮ ಮೊದಲೇ ನಿರ್ಧರಿಸಿದ್ದರಿಂದ ಅವರ ಮಾತು ಅವಳ ಮೇಲೆ ಗಾಢವಾಗಿ ಪ್ರಭಾವ ಬೀರಲಿಲ್ಲ. ಚಿಟ್ಟಿಗೆ ತನ್ನ ದುಃಖಕ್ಕೆ ಯಾರ ಹತ್ತಿರವೂ ಮಾತಿಲ್ಲವಾದ್ದರಿಂದ ಅವಳು ಹೆಚ್ಚು ಹೊತ್ತು ಟಾಮಿಯ ಜೊತೆ ಇರತೊಡಗಿದಳು. ಟಾಮಿಯ ಜೊತೆ ಡ್ಯಾನ್ಸಿಯೂ (ವಿಪರೀತ ಸೊಂಟ ಕುಲುಕಿಸುತ್ತಿದ್ದುದರಿಂದ ಅದಕ್ಕೆಡ್ಯಾನ್ಸಿ ಎಂದು ಹೆಸರು ಬಂದಿತ್ತು) ಸೇರಿದ್ದರಿಂದಲೋ ಏನೋ ಟಾಮಿಗೆ ಚಿಟ್ಟಿಗಿಂತಲೂ ಡ್ಯಾನ್ಸಿಯೇ ಇಷ್ಟವಾಗತೊಡಗಿತ್ತು. ಅದು ರಸ್ತೆಯಲ್ಲಿ ಕಾಣಿಸಿದ್ದೇ ತಡ ಏನಾದರೂ ನೆಪ ಹುಡುಕಿ ಓಡಿಬಿಡುತ್ತಿತ್ತು. ಮತ್ತೆ ಬರುತ್ತಿದ್ದುದು ತನಗೆ ಮನಸು ತಿಳಿದಾಗಲೇ. ‘ನಿಂಗೆ ಜೊತೆ ಸಿಕ್ತು ಅಂತ ನನ್ನನ್ನು ಬಿಟ್ಟು ಓಡಿಹೋಗ್ತೀಯಾ’ ಟಾಮಿಯನ್ನು ಚಿಟ್ಟಿ ಬೈಯ್ಯುತ್ತಿದ್ದಳಾದರೂ ಬೇರೆ ಏನು ಮಾಡಲು ಸಾಧ್ಯವಿತ್ತು? ನಡೆದಿದ್ದೆಲ್ಲಾ ಎಲ್ಲರಿಗೂ ಮರೆತೇ ಹೋಗಿತ್ತು.
ನಕ್ಕತ್ತು, ಸರೋಜಾ ಯಾರಿಗೂ ಇದರ ಬಗ್ಗೆ ಮಾತಾಡುವಷ್ಟು ವ್ಯವಧಾನ ಉಳಿದಿರಲಿಲ್ಲ. ಆದರೆ ಭಾರತಿ ಮಾತ್ರ ಇಡೀ ಘಟನೆಯಲ್ಲಿ ತನ್ನ ಪಾಲಿದೆ ಎನ್ನುವಂತೆ ಪಾಪಪ್ರಜ್ಞೆಯನ್ನು ಅನುಭವಿಸುತ್ತಿದ್ದಳು. ಹಾಗೆ ಕಾಡಿಸಿದಾಗೆಲ್ಲಾ ಕಾರಣ ತೆಗೆದು ಅವಳನ್ನು ಮಾತಾಡಿಸುತ್ತಿದ್ದಳು. ಮನೆಯಲ್ಲಿ ಮಗಳನ್ನು ಕಾಲೇಜಿಗೆ ಸೇರಿಸುವುದೋ ಬೇಡವೋ ಎನ್ನುವ ಚರ್ಚೆ ಬಂದು ಅಮ್ಮ ‘ಅಡಿಗರನ್ನು ಒಂದು ಮಾತು ಕೇಳಿಬಿಡೋಣ’ ಎಂದು ಅಪ್ಪನ ಹತ್ತಿರ ಹೇಳುತ್ತಿದ್ದಳು. ‘ಅಡಿಗರನ್ನ ಕೇಳುವಂಥಾದ್ದು ಏನಿದೆ?’ ಚಿಟ್ಟಿಗೆ ಈಗ ದೊಡ್ಡ ಪ್ರಶ್ನೆ ಎದುರಾಗಿತ್ತು. ಅಡಿಗರು ದೊಡ್ಡ ಜ್ಯೋತಿಷಿಗಳು. ಅತ್ತೆಯ ಮನೆಯಲ್ಲಿ ಏನೇ ಆದರೂ ಅವರನ್ನೇ ಮೊದಲು ಕೇಳುತ್ತಿದ್ದುದು. ಅವರ ಮಾತು ಯಾವತ್ತೂ ಸುಳ್ಳಾಗಿಲ್ಲ ಎನ್ನುವ ನಂಬಿಕೆ ಮನೆಯಲ್ಲಿತ್ತು. ಉದ್ದವಾಗಿ ಬೆಳೆಸಿದ್ದ ಬಿಳಿಯ ಕೂದಲನ್ನು ಮೇಲಕ್ಕೆತ್ತಿ ಗಂಟುಹಾಕಿದ್ದ ಅಡಿಗರು ತಮ್ಮ ಹಾವಿನಂಥಾ ಕಣ್ಣುಗಳಲ್ಲಿ ಚಿಟ್ಟಿಯ ಜಾತಕವನ್ನು ನೋಡುತ್ತಾ, ಎದುರಿಗೆ ಇಟ್ಟುಕೊಂಡಿದ್ದ ಕವಡೆಗಳನ್ನು ಪದೇ ಪದೇ ಹಾಕಿದರು. ಹಾಗೇ ಹಾಕಿದ ಪ್ರತಿಸಲವೂ ಅವರ ತಲೆ ಮತ್ತೆ ಮತ್ತೆ ಅಲ್ಲ ಎನ್ನುವ ಹಾಗೆ ತೂಗುತ್ತಿತ್ತು. ಅಮ್ಮ ಅಪ್ಪ ಅವರನ್ನೇ ನೋಡುತ್ತಾ ಕೂತಿದ್ದರು. ಚಿಟ್ಟಿಗೆ ಅವರು ಏನು ಹೇಳಬಹುದು ಎನ್ನುವ ಕಾತರ.
‘ಮುಂದೆ ಓದಿ ದೊಡ್ದ ಆಫೀಸರ್ ಆಗ್ತಾಳೆ, ಇವಳ ಬಗ್ಗೆ ನಿಮಗೆ ಯೋಚನೆ ಬೇಡ’ ಎಂದು ಹೇಳಬಹುದೆನ್ನುವ ನಿರೀಕ್ಷೆ ಚಿಟ್ಟಿಲ್ಲಿತ್ತಾದರೂ ಅಡಿಗರು ಮಾತ್ರ ‘ಈ ಹುಡುಗಿಗೆ ವಿದ್ಯೆ ಇಲ್ಲ. ಸುಮ್ನೆ ಯಾಕೆ ಕಷ್ಟ ಪಡ್ತೀರ? ಇನ್ನೊಂದು ವರ್ಷ ಬಿಟ್ಟು ಮದುವೆ ಮಾಡಿಬಿಡಿ’ ಎಂದಿದ್ದರು. ‘ಇವರ್ಯಾರು ನನ್ನ ಭವಿಷ್ಯದ ಬಗ್ಗೆ ಹೇಳಲಿಕ್ಕೆ?’ ಚಿಟ್ಟಿ ಆ ಕ್ಷಣದಲ್ಲೇ ನಿರ್ಧರಿಸಿದಳು. ಅಡಿಗರ ಜೊತೆ ಒಂದೂ ಆಡಲಿಲ್ಲ. ಅದರ ಅಗತ್ಯವೂ ಅವಳಿಗೆ ಇರಲಿಲ್ಲ. ‘ಕೇಳಿದ್ರಲ್ಲಾ ಸುಮ್ನೆ ಕಾಲೇಜು ಅದೂ ಇದೂಂತ ಹೋಗಿ ಏನೋ ಅವಾಂತ್ರ ಆಗೋ ಮೊದ್ಲು ಇವಳನ್ನ ಮದುವೆ ಮಾಡಿ ಕಳಿಸಿಬಿಡಿ’ ಎಂದ ಅಮ್ಮನ ಎದುರು ನಿಂತು ‘ಅಮ್ಮಾ ನಾನು ಅವರ ಭವಿಷ್ಯದ ಮಾತುಗಳನ್ನು ಸುಳ್ಳು ಮಾಡ್ತೀನಿ. ಅದೇಗ್ ನಾನ್ ಓದಲ್ಲ ನೋಡ್ತೀನಿ’ ಎಂದಿದ್ದಳು ದೃಢವಾಗಿ. ಅಮ್ಮನಿಗೆ ಅರೆ ಬೇಸರ ಅರೆ ಆಶ್ಚರ್ಯ. ಚಿಟ್ಟಿಗೆ ಇಂಥಾ ಮಾತುಗಳನ್ನು ಆಡಲಿಕ್ಕೆ ಬರುತ್ತಾ ಎಂದು. ಆದರೂ ಅವಳ ಮನಸ್ಸಿನಲ್ಲಿ ಒಂದು ವಿಚಾರ ಸ್ಪಷ್ಟವಾಗಿತ್ತು-ಇನ್ನು ಚಿಟ್ಟಿಯನ್ನು ಓದಿಸುವುದು ಬೇಡ ಅಂತ. ಈಗ ಚಿಟ್ಟಿಯ ಸತ್ವ ಪರೀಕ್ಷೆಯ ಕ್ಷಣಗಳು ಅವಳ ಎದುರು ನಿಂತಿದ್ದವು.
(ಮುಂದುವರಿಯುವುದು…)
 

‍ಲೇಖಕರು G

March 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: