ನೈಲ್ ನದಿಯ ಮಡಿಲಲ್ಲಿ – ಇಜಿಪ್ತ ಎನ್ನುವ ಕೌತುಕದತ್ತ

ಹುಟ್ಟಿದ ಹಂಬಲ

ಆಕಾಶದಲ್ಲಿ ವಿಮಾನ ಹಾರುತ್ತಿದ್ದರೆ ಮಕ್ಕಳೆಲ್ಲ ವಿಮಾನ ವಿಮಾನ ಎಂದು ಆಕಾಶದೆಡೆಗೆ ನೋಡುತ್ತಾ ಕುಣಿಯುತ್ತ ಕೇಕೆ ಹಾಕುವುದು ಸರ್ವಸಾಮಾನ್ಯ ದೃಶ್ಯ, ಮಗುವಾಗಿದ್ದಾಗ ನಾನೂ ಹಾಗೇ ಮಾಡಿದ್ದರೂ, ಇಂದಿಗೂ ಮಕ್ಕಳೊಡನೆ ನೋಟ ಆಕಾಶ ನೋಡುತ್ತದೆ, ಹೃದಯ ಹೂವಾಗುತ್ತದೆ. ವಿಮಾನವಾಗಲಿ, ಹೆಲಿಕಾಪ್ಟರ್ ಆಗಲಿ ತೀರ ಕೆಳಗಿದ್ದರಂತೂ ಮನಸ್ಸು ಮಗುವಾಗುತ್ತದೆ. ಯಾರಿಗೆ ಹಾಗಾಗುವುದಿಲ್ಲ ಹೇಳಿ? ರೆಕ್ಕೆ ಕಟ್ಟಿಕೊಂಡು ಬಾನಂಗಳದಲ್ಲಿ ಹಾರುವ ಈ ಲೋಹದ ಹಕ್ಕಿ ಎಷ್ಟು ನೋಡಿದರೂ ಎಂದೆಂದಿಗೂ ಕೌತುಕ!, ಮಹಾಕೌತುಕ! ಈ ವಿಮಾನದ ವಿಷಯದಲ್ಲಿ ಇನ್ನೂ ಅನಕ್ಷರಸ್ಥಳೇ ಆಗಿರುವ ನನಗೆ ಒಂದೇ ಒಂದು ಸಲ ಅದನ್ನು ತೀರ ಹತ್ತಿರದಿಂದ ನೋಡುವ ಸ್ಪರ್ಶಿಸುವ, ಅದರಲ್ಲಿ ಹಾರುವ ಹಂಬಲ. ಹಂಬಲ ಒಂದಿದ್ದರೇ ಸಾಕೇ? ಅದಕ್ಕೆ ಧೈರ್ಯ ಬೇಕು. ಪ್ರಬಲ ಮನಸ್ಥಿತಿ ಬೇಕು, ಸದೃಢ ಶರೀರ ಹಾಗೂ ಪರ್ಸ್ ಮತ್ತು ಬ್ಯಾಂಕ್ ಬ್ಯಾಲೆನ್ಸ್ಗಳು ಗಟ್ಟಿಯಾಗಿರಬೇಕು. ನನ್ನದು ಮುಕ್ತ ಮನಸ್ಥಿತಿ ಎಲ್ಲಿದ್ದರೇನು? ಆಗುವುದನ್ನು ತಪ್ಪಿಸಲಿಕ್ಕಾಗದು. ಹಾಗೆಂದುಕೊಂಡು ಕುಳಿತರೆ ಹೆಜ್ಜೆ ಎತ್ತುವುದ್ಯಾವಾಗ? ಗುರಿ ಮುಟ್ಟುವುದ್ಯಾವಾಗ? ಏನಾದರೊಂದು ಹೊಸದನ್ನ ಮಾಡಬೇಕು. ಮಾಡುವುದರಲ್ಲಿ ಹೊಸತನ ಇರಬೇಕು.
ಇನ್ನು ಶರೀರದ ಪ್ರಶ್ನೆ. ಈಗಾಗಲೇ ನಲ್ವತ್ತು ತುಂಬಿರುವ ನನಗೆ ಈ ದೇಹ ಮತ್ತು ಆರೋಗ್ಯ ಹೀಗೇ ಇದ್ದೀತೆ? ದಿನೇ-ದಿನೇ ಹೆಚ್ಚುತ್ತಿರುವ ತೂಕ ಇಂಥ ಒಂದು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟೀತೆ? ಇದ್ದುದರಲ್ಲಿ ಕೈಕಾಲು ಗಟ್ಟಿಯಾಗಿರುವಾಗ ಒಮ್ಮೆ ವಿದೇಶಿ ಪ್ರಯಾಣ ಮಾಡೋಣ ಎಂಬ ಒತ್ತಾಸೆ. ಇಷ್ಟೆಲ್ಲಾ ಇದ್ದು ಹಣ ಹೊಂದಾಣಿಕೆಗೆ ವಿಚಾರಿಸಿದರೆ ಗೆಝೆಟೆಡ್ ಹುದ್ದೆಗೆ ಅವಮಾನವಾಗುವುದಿಲ್ಲವೆ? ಈ ಎಲ್ಲ ಹಿನ್ನೆಲೆಯಲ್ಲಿ ನಾನಿದ್ದರೂ ಅಂತಹ ಅವಕಾಶಗಳೇನೂ ಬಂದಿರಲಿಲ್ಲ. ಈಗಾಗಲೇ ಅಖಿಲ ಭಾರತ ಕವಿಯಿತ್ರಿಯರ ಸಂಘದವರೆಲ್ಲ ಸೇರಿ ಹೊರದೇಶಗಳಿಗೆ ಹೋಗುವಾಗ ಒಂದೆರಡು ಬಾರಿ ಆ ಪ್ರಸ್ತಾವನೆಯಾಗಿತ್ತಾದರೂ ನನಗೇನೂ ಹೋಗಬೇಕೆಂದು ಅನ್ನಿಸಿರಲೇ ಇಲ್ಲ. ಅಷ್ಟುದೊಡ್ಡ ಪ್ರಮಾಣದಲ್ಲಿ ಪ್ರವಾಸ ಮಾಡುವುದರ ಬಗ್ಗೆ ಕನಸೂ ಕಂಡಿರಲಿಲ್ಲ. ಆ ವಿಷಯ ಅಷ್ಟು ಹತ್ತಿರದಿಂದ ತೆಕ್ಕೆಗೆ ಸಿಕ್ಕಿರಲೇ ಇಲ್ಲ. ಶ್ರೀ ಸಾಮಾನ್ಯಳಾದ ನನಗೆ ಪದೇ ಪದೇ ಆ ಕುರಿತು ವಿಚಾರಿಸುವ ಸಂದರ್ಭ, ಸನ್ನಿವೇಶವಾದರೂ ಎಲ್ಲಿ ಬರುತ್ತದೆ? ಆದರೆ 2010ರ ಏಪ್ರಿಲ್ ಮೂರನೇ ವಾರದಲ್ಲಿ ಅಖಿಲ ಭಾರತೀಯ ಕವಿಯಿತ್ರಿ ಸಂಘದ ಸಂಸ್ಥಾಪಕ ಲಾರಿಸರ್ ಪೋನ್ ಮಾಡಿ ‘ಈ ಸಲ ಜೂನನಲ್ಲಿ ಇಜಿಪ್ತ ಮತ್ತು ಟರ್ಕಿ ದೇಶಗಳಲ್ಲಿ ನಮ್ಮ ಅಂತರಾಷ್ಟ್ರೀಯ ಕವಿಯಿತ್ರಿ ಸಮ್ಮೇಳನ ನಡೆಯುತ್ತದೆ, ನೀವೂ ಸಿದ್ಧರಾಗಿ. ಬರುವುದಾದರೇ ಮೇ ಮೊದಲ ವಾರದಲ್ಲಿ ಪಾಸಪೋರ್ಟ್ ಬೇಕು. ಪಾಸಪೋರ್ಟಗೆ ಈಗಲೇ ತತ್ಕಾಲ ಅರ್ಜಿ ಸಲ್ಲಿಸಿದರೆ ಬೇಗ ಸಿಗುತ್ತದೆ ಎಂದು ದಾರಿಯನ್ನೂ ಹೇಳಿಕೊಟ್ಟರು.
ಆ ದಿನ ತಲೆಯಲ್ಲಿ ಹುಳ ಹೊಕ್ಕು ಬಿಟ್ಟಿತು. ಈವರೆಗೆ ಅಂಥ ಪ್ರಸ್ತಾವನೆ ಬಂದಿದ್ದರೂ ತಲೆ ಕೆಡಿಸಿಕೊಳ್ಳದ ನಾನು ಇಜಿಪ್ತ ಎಂದಾಗ ಹೋಗಲೇಬೇಕೆಂಬ ಬಯಕೆ ಬಲವಾಯಿತು. ಕಣ್ಮುಂದೆ ಜಗತ್ತಿನ ಅದ್ಭುತ ಪಿರ್ಯಾಮಿಡ್ಡುಗಳೇ! ನನ್ನ ಹತ್ತಿರ ಪಾಸಪೋರ್ಟ್ ಕೂಡ ಇಲ್ಲ. ಇನ್ಮೇಲೆಯೇ ಉತ್ತುವುದು, ಬಿತ್ತುವುದು. ಪ್ರಾಥಮಿಕ ಶಾಲೆಯಲ್ಲಿರಬೇಕಾದರೆ 6ನೇ ತರಗತಿ ಮತ್ತು 8ನೇ ತರಗತಿಯಲ್ಲಿ ಇಜಿಪ್ಟನ ಪಿರ್ಯಾಮಿಡ್ಡುಗಳ ಬಗ್ಗೆ ಮತ್ತು ಇಜಿಪ್ತ ನಾಗರಿಕತೆಗಳ ಬಗ್ಗೆ ಅಲ್ವಸ್ವಲ್ಪ ಓದಿದ ನೆನಪು. ಜಗತ್ತಿನ ಪುರಾತನ ಅದ್ಭುತಗಳಲ್ಲಿ ಒಂದಾದ ಪಿರ್ಯಾಮಿಡ್ಡುಗಳನ್ನು ನೋಡುವುದಾದರೆ ಯಾಕೆ ಹೋಗಬಾರದು? ಜೀವನದಲ್ಲಿ ಎಷ್ಟು ದುಡಿದು ಮನೆಮಠವನ್ನು ಕಟ್ಟಿ ಏನು ಮಾಡಿದರೇನು? ಇಲ್ಲಿ ಇದ್ದುಕೊಂಡೆ ಮಾಡುವುದಲ್ಲವೆ? ವಿದೇಶಕ್ಕೆ ಹೋಗಿ ಬರುವುದೂ ಒಂದು ಸಾಧನೆಯೇ. ಇದು ಎಲ್ಲರೂ ಮಾಡುವಂಥದ್ದಲ್ಲ. ಎಲ್ಲರಿಗೂ ಒದಗುವುಂಥದ್ದೂ ಅಲ್ಲ ಮತ್ತು ಎಲ್ಲರಿಗೂ ಸಿಗುವಂಥದ್ದೂ ಅಲ್ಲ. ಯಾಕೆ ಹೋಗಬಾರದು? ದುಡ್ಡು ಹೇಗೋ ಹೊಂದಿಸಬಹುದು. ನೋಡುವುದಾದರೆ ಇಂಥ ಅದ್ಭುತಗಳನ್ನು ನೋಡಬೇಕು. ಶೋಕಿಗಾಗಿ ಹೋಗಿ ನೋಡಬೇಕೆಂದು ನೋಡುವುದೂ ನನ್ನಳವಲ್ಲ, ನನಗೆ ಆ ಸಾಮಥ್ರ್ಯವೂ ಇಲ್ಲ ಎಂದು ವಿಚಾರಿಸುತ್ತ ತಕ್ಷಣ ಸಂಗಾತಿಗೆ ಫೋನು ಮಾಡಿದೆ, “ಈ ಸಲ ಇಜಿಪ್ತನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಇದೆ ಹೋಗೋಣ ಅಂತ ಅಂದುಕೊಳ್ತಾ ಇದೀನಿ. ಹೇಂಗ ಮಾಡೋದು?” ಎಂದೆ ಅಳುಕುತ್ತಲೇ. “ಭಾರತದಲ್ಲಿ ಎಲ್ಲೆ ಇದ್ದರೂ ಹತ್ತಿಪ್ಪತ್ತು ಸಾವಿರ ಖರ್ಚು ಆದರೂ ಹೋಗಿ ಬರಬಹುದು. ವಿದೇಶಕ್ಕಾದ್ರೆ ದುಡ್ಡು ಹೊಂದಿಸಬೇಕಲ್ಲ, ಎಷ್ಟು ಖರ್ಚಾಗುತ್ತಂತೆ? ಎಂದರು. “ಒಂದು ಲಕ್ಷದವರೆಗೂ” ಎಂದೆ. “ನೀನು ದುಡ್ಡು ಹೊಂದಿಸಿಕೊಳ್ಳೂದಾದ್ರೆ ನಂದೇನೂ ಅಭ್ಯಂತರವಿಲ್ಲ. ನೋಡು ಏನ್ ಮಾಡ್ತೀಯಾ?” ಎಂದರು ಅಡ್ಡಗೋಡೆ ಮೇಲೆ ದೀಪ ಇಟ್ಟಹಾಗೆ. ಸದ್ಯ ಗ್ರೀನ್ ಸಿಗ್ನಲ್ ಬಿದ್ದಿತ್ತು.
ಎದ್ದವಳೇ ನಮ್ಮ ಕಾರ್ಯಾಲಯದ ದ್ವಿತೀಯ ದರ್ಜಿ ಸಹಾಯಕರಾದ ಸುನೀಲ ಅವರ ಕಡೆ ಹೋದೆ. ಅವರು ಸದ್ಯದಲ್ಲಿಯೇ ಪಾಸಪೋರ್ಟ್ ಮಾಡಿಸಿದ್ದರಿಂದ ಅವರಿಗೆ ಮಾಹಿತಿ ಗೊತ್ತಿತ್ತು. ಅವರಿಂದ ಸಂಪೂರ್ಣ ಮಾಹಿತಿ ಪಡೆದು, 3.5 ಥ 3.5ನ ಬಿಳಿ ಹಿನ್ನಲೆಯಿರುವ ಫೋಟೋ ತೆಗೆಸಿಕೊಂಡು ನೇರವಾಗಿ ನವನಗರದಲ್ಲಿರುವ ಪೋಲೀಸ ಕಮೀಷನರ್ ಆಫೀಸಿನಲ್ಲಿರುವ ಪಾಸಪೋರ್ಟ್ ಬ್ರ್ಯಾಂಚಿಗೆ ಹೋಗಿ 10ರೂ ಕೊಟ್ಟು ಅರ್ಜಿ ನಮೂನೆ ತೆಗೆದುಕೊಂಡು, ತಾತ್ಕಾಲಿಕ ಪಾಸಪೋರ್ಟ್ ಗೆ ಅಗತ್ಯ ಮಾಹಿತಿ ಪಡೆದುಕೊಂಡೆ. ಸಾಮಾನ್ಯ ಅರ್ಜಿ ಸಲ್ಲಿಕೆಗೆ (36 ಪುಟಗಳ ಪಾಸಪೋರ್ಟ್ ಗಾಗಿ) ಒಂದು ಸಾವಿರ, 36 ಪುಟಗಳ ಪಾಸಪೋರ್ಟ್ ನ್ನ ತತ್ಕಾಲ ಅರ್ಜಿ ಸಲ್ಲಿಕೆಗೆ 2500/- ಶುಲ್ಕ. ನಾನೀಗ ಆರಂಭಿಸುತ್ತಿರುವುದು ಜೀರೋದಿಂದ. ಏಕೆಂದರೆ ನನಗೆ ಆ ಕುರಿತು ಹಿಂದೂ ಗೊತ್ತಿಲ್ಲ, ಮುಂದೂ ಗೊತ್ತಿಲ್ಲ. ಕುಟುಂಬದಲ್ಲಿ ಪರಿಸರದಲ್ಲಿ, ಕಚೇರಿಯಲ್ಲಿ ಯಾರಾದರೂ ಹೋಗಿಬಂದಿದ್ದರೆ ಒಂಚೂರಾದರೂ ಗೊತ್ತಿರುತ್ತಿತ್ತು. ಆದರೂ ಜೈಹಿಂದ್ ಎಂದು ಮುಂದುವರೆದೆ. ಮಾಡಲೇಬೇಕೆಂದು ಮನಸ್ಸು ಮಾಡಿದರೆ ಯಾವುದು ತಾನೇ ಅಸಾಧ್ಯ? ಅರ್ಜಿ ತೆಗೆದುಕೊಂಡು ಬಂದು ಸುನೀಲ ಅವರ ಮಾರ್ಗದರ್ಶನದಂತೆ, ನಮೂನೆಯಲ್ಲಿರುವ ಸೂಚನೆಯಂತೆ ಎಲ್ಲವನ್ನೂ ತುಂಬಿ ಸಿದ್ಧಮಾಡಿದೆ.

ತತ್ಕಾಲ ಅರ್ಜಿಯನ್ನು ಬ್ರ್ಯಾಂಚ್ ಆಫೀಸಿನಲ್ಲಿ ಸ್ವೀಕರಿಸುವುದಿಲ್ಲ. ಪ್ರಧಾನ ಕಛೇರಿಗೆನೆ ಸಲ್ಲಿಸಬೇಕು. ಪ್ರಧಾನ ಕಛೇರಿ ಇರುವುದು ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕಿನ 80 ಅಡಿ ರಸ್ತೆಯಲ್ಲಿ. ಜುಲೈ 24 ಶನಿವಾರದಂದು ಪಾಸಪೋರ್ಟ್ ಆಫೀಸ್ ತೆರೆದಿರುವುದಿಲ್ಲ. 26, 27ರಂದು ನನ್ನ ಜೊತೆ ಬೆಳಗಾವಿಯಿಂದ ಬರಲಿದ್ದ ಇನ್ನೊಬ್ಬರ ಕಾಗದ ಪತ್ರಗಳು ಬೇಗ ಸಿಗದೆ ಇದ್ದುದರಿಂದ 27ರ ರಾತ್ರಿ ಬೆಂಗಳೂರು ಬಸ್ ಹತ್ತಿದೆವು. ಬೆಂಗಳೂರಿನ ಕಛೇರಿಯಲ್ಲಿ ಅರ್ಜಿ ಸಲ್ಲಿಸುವುದೇ ಒಂದು ಸಾಹಸ. ನಸುಕಿನಲ್ಲಿಯೇ ಸರದಿ ಸಾಲು ಸಿದ್ಧವಾಗಿರುತ್ತದೆ. 28 ರ ಬೆಳಿಗ್ಗೆ 4 ಗಂಟೆಗೆ ಬಸ್ಸಿಳಿದು ಮೆಜೆಸ್ಟಿಕ್ನಲ್ಲಿ ಕೋರಮಂಗಲದ ಸಿಟಿ ಬಸ್ಸೇರಿದೆವು. ಮುಂಗತ್ತಲೆ ಬಸ್ಸುಗಳು ತೀರ ಕಡಿಮೆ. ಕಂಡಕ್ಟರ್ ಹುಬ್ಬಳ್ಳಿಯವನಾಗಿದ್ದ. ಪಾಪ! ಆತ ಕಛೇರಿಯ ಹತ್ತಿರದ ತಿರುವಿಗೇನೇ ನಮ್ಮನ್ನಿಳಿಸಿದ. ಅಷ್ಟು ಬೆಳ್ಳಂಬೆಳಿಗ್ಗೆ ಸಿಟಿ ಬಸ್ಸಲ್ಲಿ ಬಂದರೂ ಸುಮಾರು 45 ನಿಮಿಷದ ದಾರಿ ಅದು, ಪಾಸಪೋರ್ಟ್ ಕಛೇರಿಗೆ ಬಂದಾಗ 5-30. ಆಗಲೇ ಸರದಿ ಸಾಲು ಆರಂಭವಾಗಿತ್ತು. ನನ್ನ ನಂಬರ್ ಹನ್ನೊಂದನೆಯದಾಗಿತ್ತು. ಅಲ್ಲಿ ನಮ್ಮ ಬ್ಯಾಗ್ಗಳನ್ನು ಇಟ್ಟು ಒಬ್ಬೊಬ್ಬರೆ ಬಾತ್ರೂಮಿಗೆ ಹೋಗಿ ಪ್ರಾತಃ ವಿಧಿಗಳನ್ನು ಮುಗಿಸಿದೆವು. ಖುರ್ಚಿಯಲ್ಲಿ ಪೇಪರ್ ಇಟ್ಟು ಪಕ್ಕದವರಿಗೆ ಹೇಳಿ, ಹೋಗಿ ಕಾಫಿ ಕುಡಿದು ಬಂದೆವು. ಬೆಳಕಾಗಿ, ಬಿಸಿಲು ಬಂದು, ಚುರುಕಾಗತೊಡಗಿದಂತೆ ಹೊಟ್ಟೆ ಚುರುಗುಟ್ಟ ತೊಡಗಿತು. ಕುದುರೆ ಬಾಲ [ಪೋನಿಟೆಲ್] ಕಟ್ಟಿ ಕಿವಿಗೆ ಹರಳೋಲೆ ಧರಿಸಿದ್ದ ಧಡೂತಿ ಆಸಾಮಿ, ರಸ್ತೆ ಪಕ್ಕದಲ್ಲೆ ಇಡ್ಲಿ ಸಾಂಬರ ಸಿಗುವುದಾಗಿ ತಿಳಿಸಿದ. ಒಂಭತ್ತು ಗಂಟೆಗೆ ಹೋಗಿ ತಿಂಡಿ ತಿಂದು ಬಂದಾಯಿತು. ಅಷ್ಟರೊಳಗೆ ಸರದಿ ಸಾಲು ಮುಕ್ಕಾಲು ಭಾಗ ಕಛೇರಿ ಸುತ್ತುವರೆದು ರಸ್ತೆಗೆ ಬಂದಿತ್ತು.
ಹತ್ತುಗಂಟೆಗೆ ಕಛೇರಿ ತೆಗೆದು ನಾಲ್ಕು ಹಂತಗಳಲ್ಲಿ ನಮ್ಮ ಒಂದೊಂದೆ ಕಾಗದ ಪತ್ರಗಳನ್ನು ತಪಾಸಿಸಿದರು. ನಾಲ್ಕನೇ ಹಂತದಲ್ಲಿ ಅನುಬಂಧ `ಬಿ’ ಗೆ ತಕರಾರು ತೆಗೆದರು. ಕೊನೆಗೆ 3ನೇ ಅಂತಸ್ತಿನಲ್ಲಿರುವ 11 ನಂಬರ್ ರೂಮಿನಲ್ಲಿದ್ದ ಒಬ್ಬ ಮೇಡಮ್ ಅನುಮೋದನೆ ಮಾಡಿ ಕೊಟ್ಟರು. ಇಷ್ಟೆಲ್ಲ ಮುಗಿದು ಅರ್ಜಿ ಸಲ್ಲಿಕೆಗೆ ಬಂದರೆ ಸರದಿ ಸಾಲು ಹನುಮನ ಬಾಲವಾಗಿತ್ತು. ಈ ಪಾಸಪೋರ್ಟ್ ಆಫೀಸನಲ್ಲಿ ಮಹಿಳೆ ಅಬಾಲವೃದ್ಧರಾಗಿ ಮುಸ್ಲಿಂ ಜನಾಂಗದ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿ ಇತ್ತು. ಬಹುಶಃ ಹಜ್ಗೆ ಹೋಗಲು ಮತ್ತು ಅರಬ್ ದೇಶಗಳಿಗೆ ಕೆಲಸಕ್ಕಾಗಿಹೋಗುವವರಿರಬಹುದೇನೋ? ಒಂದು ಕುರ್ಚಿಯಿಂದ ಇನ್ನೊಂದಕ್ಕೆ ಉಟ್ ಬೈಟ್ ಮಾಡುತ್ತ ನನ್ನ ಸರದಿ ಬಂದಾಗ 12 ಗಂಟೆಯಾಗಿತ್ತು. ಎರಡುವರೆ ಸಾವಿರ ತುಂಬಿ, ಪರತ ಪಾವತಿ ಕೊಡುವಾಗ ಹೇಳಿದರು 5.5.2010 ರಂದು ಪಾಸಪೋರ್ಟ್ ಸ್ಟೀಡ್ಪೋಸ್ಟ್ನಲ್ಲಿ ನಿಮ್ಮ ಮನೆಗೆ ಬರುತ್ತದೆ ಎಂದು. ಹನ್ನೆರಡುವರೆಗೆ ಸಿಟಿ ಬಸ್ ಏರಿದರೆ ಮೆಜೆಸ್ಟಿಕ್ ತಲುಪಿದ್ದು 2-15 ಕ್ಕೆ. ಅಷ್ಟೊಂದು ಟ್ರಾಫಿಕ್ ಜಾಮ್ ಆಗಿತ್ತು. ಒಂದೊಮ್ಮೆ ಬರುವಾಗ ಹೀಗಾಗಿದ್ದರೆ?
ನಾನಿನ್ನೂ ಇಲಾಖಾ ಅನುಮತಿ ಪಡೆಯುವುದು ಬಾಕಿ ಇತ್ತು. ಇದಕ್ಕಾಗಿ ವಿದೇಶ ಪ್ರಯಾಣದ ಅವಧಿ, ಎಲ್ಲಿಂದ, ಎಲ್ಲಿಯವರೆಗೆ ಮುಂತಾದ ಮಾಹಿತಿಗಳ ಅವಶ್ಯಕತೆ ಇತ್ತು, ದಿನಾಂಕ ನಿಗದಿಯಾಗದ ಹೊರತು ಅನುಮತಿಗೆ ಅರ್ಜಿ ಹಾಕಲಾಗದು. ಹಾಗಾದರೆ ಅನುಮತಿ ಪಡೆಯಲು ಕಾಲಾವಕಾಶ ಇದೆಯಲ್ಲ ಎಂದು ನಿರಾಳವಾಗಿ ಉಸಿರು ಬಿಟ್ಟೆ. ಇನ್ನೂ ಹೆಚ್ಚಿನ ಸಮಯ ಸಿಕ್ಕಿದ್ದರಿಂದ ಇಜಿಪ್ತಿನ ಇತಿಹಾಸ ಮತ್ತು ನಾಗರಿಕತೆಯ ಬಗೆಗೆ ಮಾಹಿತಿ ಕಲೆ ಹಾಕ ತೊಡಗಿದೆ. ನೋಡಲು ಹೋಗುತ್ತಿರುವ ದೇಶದ ಬಗೆಗೆ ಮೊದಲೇ ಅಲ್ಪಸ್ವಲ್ಪ ಮಾಹಿತಿ ಗೊತ್ತಿದ್ದರೆ ಒಳ್ಳೆಯದು. ಮೊದಲು ಹುಡಕಿದ್ದು ನನ್ನ ಆರನೆಯ ಇಯತ್ತೆಯ ಪುಸ್ತಕ. ಅಲ್ಪಸ್ವಲ್ಪ ಜೀರ್ಣವಾಗಿದ್ದರೂ ಬೇಕಾದ ವಿಷಯ ಸಂಗ್ರಹಕ್ಕೆ ಮಾರ್ಗದರ್ಶಿಯಾಯಿತು.
ಇಜಿಪ್ಟ್ ಪ್ರಾಚೀನ ನಾಗರಿಕತೆಗೆ ಹೆಸರಾದ ದೇಶ. `ಕಗ್ಗತ್ತಲೆಯ ಖಂಡ’ ಎಂದವರಿಗೆ ಶೆಡ್ಡು ಹೊಡೆದು ನಿಂತಿರುವ ಈ ದೇಶದ ನಿಗೂಢವನ್ನು ಇನ್ನೂ ಯಾರೂ ಭೇದಿಸಿಲ್ಲ. ಇಂಥ ಅಭೇಧ್ಯ ಜ್ಞಾನ ನಿಧಿಯನ್ನು ಹೊಂದಿರುವ ಇಜಿಪ್ಟಿನ ನೈಲ್ ನದಿಯ ಬಯಲಿನಲ್ಲಿ ಆರಂಭವಾದ ನಾಗರಿಕತೆ ಪ್ರಪಂಚದಲ್ಲಿ ಅತ್ಯಂತ ಹಳೆಯ ನಾಗರಿಕತೆಯಲ್ಲಿ ಒಂದಾಗಿದೆ. ಇಲ್ಲಿಯ ಪುರಾತನ ವೈಭವವನ್ನು ತಿಳಿಸಬಲ್ಲಬರಹ ಹಾಗೂ ಅವಶೇಷಗಳು ಪುರಾತನ ಇಜಿಪ್ಟ್ನಲ್ಲಿದ್ದ ಜ್ಞಾನ ವೈಭವ, ಶಕ್ತಿ ವೈಭವ ಹಾಗೂ ಸಂಪತ್ತಿನ ವೈಭವಗಳಿಗೆ ಸಾಕ್ಷಿಯಾಗಿವೆ. ಅತ್ಯದ್ಭುತವಾದ ಪಿರ್ಯಾಮಿಡ್ಡುಗಳು ಭವ್ಯವಾದ ದೇವಾಲಯಗಳು ಅಗಾಧವಾದ ಮೂರ್ತಿಶಿಲ್ಪಗಳು, ಜೀವಕಳೆಯನ್ನು ತುಂಬಿ ನಿಂತಿರುವ ಪ್ರತಿಮೆಗಳು ಹಾಗೂ ಚಿತ್ರ ವಿಚಿತ್ರವಾದ ಸ್ಪಿಂಕ್ಸ್ಗಳು ಅಂದಿನ ಅವರ ರೌದ್ರ ಆಡಳಿತ, ಭಯಂಕರ ಶಕ್ತಿ ಸಾಮಥ್ರ್ಯ, ಅತುಲ್ಯ ಸಂಪತ್ತು, ವಿಸ್ಮಯಜನ್ಯ ಕಲಾತ್ಮಕತೆ, ಕುಶಲ ಕಾರ್ಯಕ್ಷಮತೆ ಹಾಗೂ ದಿವ್ಯ ದೂರ ದೃಷ್ಟಿಗಳನ್ನು ಎತ್ತಿ ತೋರುತ್ತವೆ. ಪ್ರಪಂಚಕ್ಕೆ ಲೆಕ್ಕವಿಲ್ಲದಷ್ಟು ಪ್ರಥಮಗಳನ್ನು ನೀಡಿದ ದೇಶ ಮತ್ತು ನಾಗರಿಕತೆ ಎಂದರೆ ಈ ಇಜಿಪ್ಟ್ ಒಂದೇ.
ಪ್ರಥಮ ಆಡಳಿತಗಾರ್ತಿ (ಮಹಿಳಾ ದೊರೆ), ಪ್ರಥಮ ತತ್ವಜ್ಞಾನಿ, ಪ್ರಥಮ ಅಂಚೆ ವ್ಯವಸ್ಥೆ, ಜನಗಣತಿ, ಪ್ರಥಮ ಕಾಗದ ಬಳಕೆ, ಪ್ರಥಮ ಪಂಚಾಂಗ, ಪ್ರಥಮ ಲಿಪಿ, ಜ್ಯಾಮಿತಿ, ಖಗೋಳಶಾಸ್ತ್ರ, ಔಷಧಿಶಾಸ್ತ್ರ, ಶಸ್ತ್ರ ಚಿಕಿತ್ಸೆ, ಗಾಜುಗಳ ಬಳಕೆ, ಸೌಂದರ್ಯ ವರ್ಧಕಗಳ ಬಳಕೆ, ಜ್ಯೋತಿಶ್ಯಾಸ್ತ್ರ, ವಾಸ್ತು ಶಿಲ್ಪ ಇವುಗಳನ್ನೆಲ್ಲ ಪ್ರಥಮವಾಗಿ ಬಳಸಿ ಭದ್ರ ಬುನಾದಿ ಹಾಕಿದವರು ಇಜಿಪ್ತ್ ನಾಗರಿಕತೆಯ ಜನರು. 1798ರಲ್ಲಿ ನೆಪೋಲಿಯನ್ ಇಜಿಪ್ತ್ ಮೇಲೆ ದಾಳಿ ಮಾಡಿದ ನಂತರ ಇಲ್ಲಿನ ಒಂದೊಂದೆ ಭೂಗತ ರಹಸ್ಯಗಳು ಹೊರ ಮುಖ ತೋರ ತೊಡಗಿದವು. ಪುರಾತತ್ವ ಶೋಧನೆಗೆ ಕಾರಣರಾದವರಲ್ಲಿ ಪ್ರಮುಖನಾದ ನೆಪೋಲಿಯನ್ ಇಜಿಪ್ತ್ ಮೇಲೆ ದಂಡೆತ್ತಿ ಹೋದಾಗ ಸೈನಿಕರ ಜೊತೆಗೆ ವಿಜ್ಞಾನಿಗಳನ್ನು, ಕಲಾವಿದರನ್ನು ಕರೆದುಕೊಂಡು ಹೋಗಿ ಇಜಿಪ್ತ್ನ ಪ್ರಾಚೀನ ಇತಿಹಾಸವನ್ನೆಲ್ಲ ಶೋಧಿಸಿ ತೆಗೆಯಲು ಆಜ್ಞೆ ಇತ್ತ. ಆಗಲೇ ಆಫ್ರಿಕಾ ಖಂಡದ ಕಗ್ಗತ್ತಲೇ ಕಳೆದು ಬೆಳಕು ಮೂಡಲಾರಂಭಿಸಿತು.
ಜೂನ್ ತಿಂಗಳಲ್ಲಿ ನಮ್ಮ ಪಾಸ್ಪೋರ್ಟ್ ಮತ್ತು ತುಂಬಿದ ವಿಸಾ ಅರ್ಜಿ ನಮೂನೆಗಳು ಹಾಗೂ ಹಣ ಕಳುಹಿಸುವಂತೆ ಇ-ಮೇಲ್ ಬಂದಿತು. ಲಾರಿಸರ್ ವಿಸಾ ನಮೂನೆಗಳನ್ನು ಕಳುಹಿಸಿದ್ದರು. ಹೋಗಲು ಕರ್ನಾಟಕದಿಂದ ತಯಾರಾದ 12 ಜನರ ಪಾಸ್ಪೋರ್ಟ್, ವಿಸಾ ನಮೂನೆಗಳು ಮತ್ತು ಹಣವನ್ನು ಒಟ್ಟುಗೂಡಿಸಿ ಎ.ಐ.ಪಿ.ಸಿಯ ಕಾರ್ಯದರ್ಶಿ ಸರಸ್ವತಿ ಚಿಮ್ಮಲಗಿಯವರ ಮಗನ ಮೂಲಕ ಲಾರಿಸರ್ಗೆ ತಲುಪಿಸಿದೆವು. ಇಲ್ಲಿ ಹಣ ಅಕೌಂಟ್ ಟ್ರಾನ್ಸ್ಪರ್ ಮಾಡುವ ಹಾಗಿರಲಿಲ್ಲ. ಏಕೆಂದರೆ ಆದಾಯ ತೆರಿಗೆಯ ಪ್ರಶ್ನೆ. ಅಂತೂ ಇವೆಲ್ಲ ತಲುಪಿ ಒಂದು ವಾರವಾದರೂ ದಿನಾಂಕ ನಿಗದಿಯಾದ ಕುರಿತು ಯಾವ ಸಂದೇಶಗಳು ಬರಲಿಲ್ಲ. ನನಗೆ ಇಲಾಖಾ ಅನುಮತಿ ಪಡೆಯುವ, ರಜೆಯ ಮುಂಜೂರಿ ಪಡೆಯುವ ಒತ್ತಡ. ವಿಸಾ ಆಗಬೇಕು ಆಮೇಲೆ ಟಿಕೆಟ್.
ಅದು ಸಾಮೂಹಿಕ ಪ್ರಯಾಣ, ಟ್ರಾವೆಲ್ ಏಜೆನ್ಸಿಯವರು ಇದನ್ನೆಲ್ಲಾ ನಿಭಾಯಿಸುತ್ತಾರಾದರೂ ಎಲ್ಲವೂ ಆಗಬೇಕಲ್ಲ? ಕೊನೆಗೆ ಪ್ರಯಾಣ ಜುಲೈ 16 ರಿಂದ 25ರವರೆಗೆ ಎಂದು ನಿರ್ಧಾರವಾದುದರ ಮಾಹಿತಿ ಸಿಕ್ಕಿದ್ದು ಜುಲೈ 6 ರಂದು. ಆ ದಿನವೇ ರಜೆಗೆ ಅರ್ಜಿಸಲ್ಲಿಸಿ, ಅನುಮತಿಗೆ ಅವಶ್ಯಕವಾದ ಅರ್ಜಿ, ಚೆಕ್ಲಿಸ್ಟ್ ತುಂಬಿ, ಜುಲೈ 7 ರಂದು ಆಫೀಸಿಗೆ ಸಲ್ಲಿಸಿದೆ. ಅದು ಅಲ್ಲಿಂದ ಕಮೀಷನರ್ ಆಫೀಸಿಗೆ ರವಾನೆಯಾಗಬೇಕು. ಅದನ್ನೂ ಅದೇ ದಿನ ನಾನೇ ಮಾಡಿದೆ. ಅದು ಕೇಸ್ವರ್ಕರ್ ಟೇಬಲ್ಲಿನಿಂದ ಕಮಿಷನರ್ವರೆಗೆ 7 ಟೇಬಲ್ಗಳಿಗೆ ಮೂರು ಬಾರಿ ಹಾಯ್ದು ಬರಬೇಕು. ಒಮ್ಮೆ ನೋಟ್ ಮಂಡನೆ, ಇನ್ನೊಮ್ಮೆ ಕರಡು ಪ್ರತಿ ಸಹಿ, ಕೊನೆಯದಾಗಿ ಅಸಲು ಪ್ರತಿ ಸಹಿ. ನಾನು ಸರೋಜ ಹುಬ್ಬಳ್ಳಿಯಿಂದ ಮೂರು ಸಾವಿರದ ಎರಡು ನೂರು ಕೊಟ್ಟು ಇಪ್ಪತ್ತೈದು ಕಿಲೋ ಸಾಮರ್ಥ್ಯಾದ ಟ್ರೋಲಿಬ್ಯಾಗ್, ಎಂಟುನೂರು ಕೊಟ್ಟು ಹ್ಯಾಂಡ್ ಬ್ಯಾಗನ್ನು ಖರೀದಿಸಿದೆವು. ವಿಮಾನದಲ್ಲಿ ನಮ್ಮೊಂದಿಗಿರುವ ಬ್ಯಾಗ್ ಕ್ಯಾರಿ ಆನ್ ಬ್ಯಾಗೇಝ. ಇದು ಗರಿಷ್ಠ 10 ಕಿಲೋ ಇರಬೇಕು. ತಪಾಸಣೆಯಾಗಿ ಕಾರ್ಗೋಕ್ಕೆ ಹೋಗುವ ಬ್ಯಾಗ್ ಚೆಕ್ ಬ್ಯಾಗೆಝ. ಇದು ಗರಿಷ್ಠ ಇಪ್ಪತ್ತೈದು ಕಿಲೋ ಇರಬೇಕು. ಅಲ್ಲಿ ಹತ್ತಿ ಇಳಿಯುವ, ದೂರ-ದೂರ ನಡೆಯುವ ಪ್ರಸಂಗಗಳಿರುವುದರಿಂದ ಕಾಲಿಗೆ ತೊಡರುವ ಸೀರೆಗಳಂಥವನ್ನು ಹೆಚ್ಚಿಗೆ ತೆಗೆದುಕೊಳ್ಳದೆ ಆರಾಮವಾಗಿ ಓಡಾಡಲು ಅನುಕೂಲವಾಗುವ ಚೂಡಿ, ಪ್ಯಾಂಟಗಳಂಥವನ್ನೇ ತೆಗೆದುಕೊಳ್ಳುವುದು ಎಂಬ ಮುನ್ನೆಚ್ಚರಿಕೆಯನ್ನು ಮೊದಲೇ ಕೊಟ್ಟಿದ್ದರಿಂದ ಐದು ಸೆಟ್ ಚೂಡಿ, ಕಡಿಮೆ ಭಾರವುಳ್ಳ ಚಿಕ್ಕ ಮಡಿಕೆಯಾಗಬಲ್ಲ ನಾಲ್ಕು ಸೀರೆ ಆಯ್ದುಕೊಂಡೆ. ಬೇರೆನಾದರೂ ವಸ್ತು ಇಟ್ಟರೆ ಬ್ಯಾಗನ್ನು ಎತ್ತಿ ಎತ್ತಿ ನೋಡುವುದೇ ಆಗಿತ್ತು.
ಈ ಮಧ್ಯ ಎರಡು ಬಾರಿ ಆಯುಕ್ತರ ಕಚೇರಿಯತ್ತ ಹಾಯ್ದು ಬಂದೆ. ಹದಿನೈದರ ಬೆಳಿಗ್ಗೆ ಧಾರವಾಡ ಬಿಡುತ್ತಿರುವುದಾಗಿ ವಿನಂತಿಸಿ ಬಂದೆ. ಶಿಕ್ಷಕರ ವರ್ಗಾವಣೆ ಕೌಸಲಿಂಗ್ ಬೇರೆ ನಡೆದಿತ್ತು. ಜುಲೈ 10. 2ನೇ ಶನಿವಾರ ರಜೆ. ಸೋಮವಾರ 12ನೇ ತಾರಿಖಿಗೆ ಹೋದರೆ ನನ್ನ ಕಡತ ಎಲ್ಲೋ ಮಧ್ಯದಲ್ಲಿ ನಿಂತು ಬಿಟ್ಟಿತ್ತು. ಆಯುಕ್ತರು ರಜೆ ಮೇಲಿದ್ದುದರಿಂದ ಪ್ರಭಾರ ನಿರ್ದೇಶಕರಿಗಿತ್ತು. ಅವರಿಗೂ ಭೇಟಿಯಾದೆ. `ಆಯ್ತು ಕಡತ ಬರಲಿ’ ಎಂದರು. ಖುದ್ದಾಗಿ ನಿಂತು ನೋಟ್ ಮಂಡನೆ ಮಾಡಿಸಿದೆ. ಮರುದಿನ 13ನೇ ತಾರೀಖು, ಕರಡು ಅನುಮತಿ ಪ್ರತಿಯನ್ನು ಸಿದ್ಧಗೊಳಿಸಿ ಮಂಡಿಸಬೇಕು. ಯಾರೊಬ್ಬ ಕಾರಕೂನರಿರಲಿಲ್ಲ. ಎಲ್ಲರೂ ಕೌನ್ಸಿಲಿಂಗ್ ಕ್ರಿಯೆಯಲ್ಲಿ ನಿರತರು. ಕೆಸ್ವರ್ಕರ್ ಮತ್ತೊಬ್ಬ ಕಾರಕೂನರಿಗೆ ಹೇಳಿ ಕರಡು ಪ್ರತಿ ತಯಾರಿಸಿ ಮಂಡಿಸಿದರು. ಸಮಯ ಕಡಿಮೆ ಇತ್ತು. ಹಾಗಾಗಿ ಸಿಪಾಯಿಯ ಹಿಂದ್ಹಿಂದೆ ನಾನೂ ಅಲೆದು ಕಡತ ಮುಂದೂಡಿಸಿದೆ. ಸರಿ ಅದು ನಿರ್ದೇಶಕರ ಟೇಬಲ್ಲಿಗೆ ಬರಲು ಸಂಜೆಯೇ ಆಯಿತು. ಆದರೆ ನಿರ್ದೇಶಕರು ಕೌನ್ಸಿಲಿಂಗ್ ನಲ್ಲಿ ನಿರತರಾಗಿದ್ದರು. ಆ ದಿನವು ಅನುಮತಿ ಪತ್ರ ಸಿಗಲಿಲ್ಲ. ಮರುದಿನ ಹದಿನಾಲ್ಕನೆಯ ತಾರೀಖುನಿರ್ದೇಶಕರು ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಸಿ ಮೂರು ಗಂಟೆಗೆ ತಮ್ಮ ಚೆಂಬರಿಗೆ ಬಂದರು. ಹೋಗಿ ಮತ್ತೆ ವಿನಂತಿಸಿದೆ. “ಸ್ವಲ್ಪ ತಡಿರಿ” ಎಂದರು. ಒಂದು ಗಂಟೆ ಕಾದೆ. ಮತ್ತೆ ಹೋದೆ. “ನೀವು ಕುದುರೆ ಮೇಲೆ ಬರ್ತಿರಿ, ಹೀಗೆ ಬೆನ್ನು ಹತ್ತುತ್ತಿರಿ ಹ್ಯಾಗೆ ಮಾಡೋದು. ಮತ್ತೆ ಕೆಲ್ಸ ಇರಲ್ವ ನಮಗೆ” ಎಂದರು. ನನ್ನೊಳಗಿನ ಆತ್ಮವಿಶ್ವಾಸ ಸಡಿಲಿಸತೊಡಗಿತು.
ಕಡತ ತೆರೆದು ನೋಡಿ “ಇದಕ್ಕೆ ದುಡ್ಡು ಎಲ್ಲಿಂದ ಹೊಂದಿಸ್ತಿರಿ?” ಎಂದರು. ಹೇಳಿದೆ. “ಎಲ್ಲಿದೆ ದಾಖಲೆ?” ಎಂದರು. ಸಾಲಕ್ಕೆ ಹಾಕಿದ್ದ ಅರ್ಜಿ ಮತ್ತು ರಜೆ ನಗದೀಕರಣಗೊಂಡಿದ್ದನ್ನು ತೋರಿಸಿದೆ. “ಜಿ.ಪಿ.ಎಫ್ ಸಾಲ ಮುಂಜೂರುವಾಗಿಲ್ಲವಾದರೆ ಈಗೇನು ಮಾಡ್ತಿರಾ ದುಡ್ಡಿಗೆ?” “ಸೊಸೈಟಿಯಿಂದ ಸಾಲ ತೆಗೊಂಡಿದ್ದಿನಿ,” “ಎಲ್ಲಿದೆ ಸಾಲ ಮಂಜೂರಿ ಪತ್ರ?” “ತಂದ್ಕೊಡ್ತಿನಿ” ಎಂದು ಸೊಸೈಟಿಗೆ ಓಡಿದೆ. ಅದನ್ನೂ ಕೊಟ್ಟಾಯಿತು. “ಸಾಲ ಯಾವುದರ ಭದ್ರತೆ ಮೇಲೆ ಕೊಟ್ಟಿದ್ದಾರೆ?” “ವೇತನ ಭದ್ರತೆ ಮೇಲೆ ಕೊಟ್ಟಿದ್ದಾರೆ” “ಎಲ್ಲಿದೆ ವೇತನ ಸರ್ಟಿಫಿಕೆಟ್?” ಅದರ ನಕಲು ಪ್ರತಿ ನನ್ನ ಹತ್ತಿರ ಇತ್ತು. ಓಡಿಹೋಗಿ ಅದನ್ನು ತಂದುಕೊಟ್ಟೆ. “ರಜೆ ಮಂಜೂರಿ ಆಗಿದೆಯೇ? ಎಲ್ಲಿದೆ ಮಂಜುರಿ ಪತ್ರ?” ನನ್ನದು `ಪತ್ರಾಂಕಿತ’ `ಬಿ’ ದರ್ಜಿಯಾದ್ದರಿಂದ ನನ್ನ ರಜೆ ಬೆಂಗಳೂರಿನ ಮಹಾಲೇಖಪಾಲರಿಂದ ಮಂಜೂರಿಯಾಗಿ ಬರಬೇಕಿತ್ತು. ಅದಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದೆ. “ಅದನ್ನಾದರೂ ಕೊಡಿ” ಎಂದರು. ನಮ್ಮ ಆಫೀಸಿಗೆ ಓಡಿದೆ. ಆಗ ಸಮಯ 5.30 ಸಂಬಂಧಿಸಿದ ಮಹಿಳಾ ಕ್ಲರ್ಕ್ ಹೆಗಲಿಗೆ ಬ್ಯಾಗ್ ಏರಿಸಿದ್ದಳು. ವಿನಂತಿಸಿಕೊಂಡೆ. “ಮೆಡಮ್ ಬಸ್ಸಿಗೆ ಲೇಟಾಗ್ತದೆ. ನಿಮ್ಮ ಅರ್ಜಿ ಮಹಾಲೇಖಪಾಲರಿಗೆ ರವಾನಿಸಲು ರೆಡಿ ಮಾಡಿದ್ದೀನಿ. ನಾಳೆ ಸಾಹೆಬ್ರ ಸಹಿ ಮಾಡಿ ಕಳುಹಿಸಬೇಕು” ಎಂದಳು. “ಸರಿ ಅದನ್ನೇ ಕೊಡಿ” ಎಂದು ಅದನ್ನೇ ತಂದು ತೋರಿಸಿದೆ. “ನೋಡಿ ನಿಮ್ಮ ಆಫೀಸಿನಲ್ಲೆ ಇನ್ನೂ ಈ ಪತ್ರ ವ್ಯವಹಾರವಾಗಿಲ್ಲ. ಇಲ್ಲಿ ಬಂದು ಗಡಿಬಿಡಿ ಮಾಡ್ತಿರಿ; ಟರ್ಕಿ ಇಜಿಪ್ತಗೆ ಹೋಗಿ ಏನ್ಮಾಡ್ತಿರಿ? ಅಲ್ಲಿ ಯಾರ ಕೇಳ್ತಾರೆ ನಿಮ್ಮ ಕವನ, ಅರಬ ಕಂಟ್ರಿ ಅದು. ಅಲ್ಲಿ ಎನೆನ್ ನಡೆಯುತ್ತದೆ ಗೊತ್ತಾ ನಿಮಗೆ? ಡ್ರಗ್ಸ್ ಸ್ಮಗ್ಲಿಂಗ್ ಬಹಳ ಇದೆ ಅಲ್ಲಿ. ನಿಮಗೆ ಗೊತ್ತಾಗದಂಗೆ ಬ್ಯಾಗ್ ನಲ್ಲಿ ಡ್ರಗ್ಸ್ ಸೇರಿಸಿದರೆ ಏನ್ ಮಾಡ್ತಿರಿ? ಅಲ್ಲಿಯ ಕಾನೂನಿನಲ್ಲಿ ಇಂಥ ಅಪರಾಧಕ್ಕೆ ಜೈಲು, ದಂಡ ಇರಲ್ಲ; ಸೀದಾ ಡೆತ್ ಸೆಂಟೆನ್ಸ್. ಯಾಕೆ ಬೇಕು ನಿಮಗೆ?
ನಾನು ಮೂರು ಸಲ ಇಜಿಪ್ತಗೆ ಹೋಗಿ ಬಂದಿದಿನಿ. ಒಂದ್ಸಲನಾದ್ರೂ ನನ್ನ ಅನುಭವ ಕೇಳಿದಿರಾ ನೀವು? ಗೊತ್ತಿಲ್ಲದಿದ್ದರೆ ಕೇಳಿ ತಿಳ್ಕೊಬೇಕು. ಅವರ ಭಾಷೆ ನಿಮಗೆ ಬರಲ್ಲ. ನಮ್ಮದು ಅವರಿಗೆ ತಿಳಿಯಲ್ಲ. ಒಮ್ಮೆ ಒಂದು ಹೋಟೆಲಲ್ಲಿ ತಿನ್ನಲು ಕುಡಿಯಲು ಸನ್ನೆ ಮಾಡಿ ಕೇಳಿದಾಗ ಒಂದು ಕಾಫಿ, ಒಂದು ಪಾತ್ರೆಯಷ್ಟು ಪುಲಾವ್ದಂಥದ್ದೆನೋ ತಂದಿಟ್ಟರು. ತಿಂದಾದ ಮೇಲೆ ಬಿಲ್ ಬಂತು. ನೋಡಿದರೆ ಒಂದೂವರೇ ಸಾವಿರ! ನಮ್ಗೆ ಇಂತಹ ಅನುಭವ ಆಗಿರಬೇಕಾದರೆ ನೀವು ಲೇಡಿಸ್ ಬೇರೆ, ಏನ್ಮಾಡ್ತಿರಾ ಅಲ್ಲಿ? ಫ್ಯಾಮಿಲಿ ಬೇರೆ ಜೊತೆಗಿಲ್ಲ. ಹೇಳಿ, ಏನ್ ಮಾಡ್ಬೇಕು ಹೇಳಿ?” ಎಂದರು ಒಂದೇ ಉಸಿರಲ್ಲಿ.
ನನ್ನ ಕಾಲ ಕೆಳಗಿನ ನೆಲಕುಸಿಯತೊಡಗಿತು. ಅಲ್ಲಿ ಟಿಕೆಟ್ ರೆಡಿಯಾಗಿದೆ. ಇಲ್ಲಿ ಬ್ಯಾಗ್ ರೆಡಿಯಾಗಿದೆ. ಹೋಗುವ ಬಯಕೆ ಬೆಟ್ಟದಷ್ಟಿದೆ! ಬಾಯಿಂದ ಒಂದು ಶಬ್ದವೂ ಹೊರಡದಾಗಿತ್ತು. ಗರಬಡಿದವರಂತೆ ನಿಂತುಬಿಟ್ಟಿದ್ದೆ. ಅಲ್ಲಿ ಜಂಟಿ ನಿರ್ದೇಶಕರು, ಒಬ್ಬರು `ಬಿ’ ದರ್ಜಿ ಅಧಿಕಾರಿಗಳು, ಸೂಪರಿಂಟೆಂಡೆಂಟ್, ಕೇಸ್ ವರ್ಕರ್ ಎಲ್ಲರೂ ಇದ್ದರು. ಅವರೆಲ್ಲರೂ ನಿರ್ದೇಶಕರ ಮನ ಒಲಿಸುತ್ತ `ಸರ್ ಟಿಕೇಟ್ ರೆಡಿಯಾಗಿದೆ. ಮಾಡಿಬಿಡಿ’ ಎಂದರು. “ಮತ್ತೆ ಜಿ.ಪಿ.ಎಫ್ ಗೆ ಹಾಕಿದ ಅರ್ಜಿ ವಿವರ ಎಲ್ಲಿದೆ ಕೊಡಿ’ ಎಂದರು. `ಮನೆಯಲ್ಲಿದೆ.’ `ಮನೆಯಲ್ಲಿಟ್ಟು ಇಲ್ಲಿ ಬರ್ತಾರೆ, ತಂದ್ಕೊಡಿ’ ಎಂದರು. ಸರಿ ನನ್ನ ಹತ್ತಿರ ದ್ವಿಚಕ್ರವಾಹನ ಇತ್ತು. ಗಾಲಿಯಾಗಿ ಉರುಳಿದೆ. ಹತ್ತು ನಿಮಿಷದಲ್ಲಿಯೇ ಆಯುಕ್ತರ ಕಛೇರಿ ಕಾಂಪೌಂಡಿನ ಹೊರಗಿದ್ದೆ. ಗಾಡಿಗಿಂತ ಮನಸ್ಸು, ಮನಸ್ಸಿಗಿಂತ ಗಾಡಿ ತೀವ್ರವಾಗಿ ಓಡುತ್ತಿದ್ದವು. ಅಷ್ಟರಲ್ಲಿ ಮುಂದಿನ ದ್ವಿಚಕ್ರ ವಾಹನಗಕ್ಕನೆ ನಿಂತು ಬಿಟ್ಟಿತ್ತು. ನಾನು ಬ್ರೆಕ್ ಹಾಕಿ ಗಾಡಿ ನಿಲ್ಲುವುದರೊಳಗೆ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದು ಬಿಟ್ಟಿದ್ದೆ. ಆದರೆ ಗಾಡಿ ಮತ್ತು ಬ್ರೇಕ್ ಬಿಟ್ಟಿರಲಿಲ್ಲ. ಹಾಗಾಗಿ ಪೂರ್ಣ ಕೆಳಗೆ ಬೀಳಲಿಲ್ಲ. ಗಾಡಿಯೊಂದಿಗೆ ಸರಿಯಾಗಿ ನಿಂತೆ. `ಏನ್ ಮೇಡಂ ಸಾವಕಾಶ ಬರುದಲ್ವಾ?’ ಎಂದರು ಆ ವಾಹನ ಸವಾರರು. ಸಾವರಿಸಿಕೊಳ್ಳುತ್ತಾ, `ಸಾರಿ ಸಾರ್, ಬ್ರೇಕ್ ಹಾಕುವುದರೊಳಗೆ ಡ್ಯಾಶ್ ಆಗಿಬಿಡ್ತು. ಪೆಟ್ಟಾಯ್ತಾ?’ ಎಂದೆ. `ನಂಗೆನಾಗಿಲ್ಲಾ ನಿಮ್ಗೆಂಥಾದ್ರೂ ಆಗಿದ್ರೆ ರಿಸ್ಕ್ ಅಲ್ವ?’ ಎಂದರು ಉತ್ತರ ಕನ್ನಡ ಸ್ಟೈಲಲ್ಲಿ. ನಾನೂ `ಎಂಥದ್ದೂ ಆಗಿಲ್ಲ ಬಿಡಿ’ ಎಂದರೂ ಎಡ ಮೊಳಕೈಗೆ, ಮಧ್ಯದ ಬೆರಳಿಗೆ ಮತ್ತು ಎಡಮೊಣಕಾಲಿಗೆ ಸರಿಪೆಟ್ಟು ಬಿದ್ದಿತ್ತು. ಒಮ್ಮೆಲೆ ಆದ ಆಘಾತಕ್ಕೆ ಗಾಬರಿಸಿ ಥರ-ಥರ ನಡಗುತ್ತಿದ್ದೆ. `ಏನು ಸಹಿ ಮಾಡೋದಾ ಹೇಗೆ?’ ಎಂದರು. ಅಷ್ಟೂ ಧೈರ್ಯ ಒಟ್ಟುಗೂಡಿಸಿ `ಮಾಡಿಬಿಡಿ’ ಎಂದೆ.
ಅಬ್ಬಾ! ಸಹಿ ಆಯಿತು. ಇನ್ನು ಅಂತಿಮ ಪ್ರತಿ ತೆಗೆಯಬೇಕು, ಕರೆಂಟ್ ಹೋಗಿ ಸರ್ವರ್ ನಿಂತು ಬಿಟ್ಟಿತ್ತು! ಕರಡು ಪ್ರತಿಯಲ್ಲಿ ತಿದ್ದು ಪಡಿ ಏನೂ ಇರಲಿಲ್ಲ. ಅದನ್ನೇ ಅಂತಿಮ ಪ್ರತಿ ಎಂದು ನಮೂದಿಸಿ ಸೂಪರಿಂಟೆಂಡೆಂಟರು ಅನುಮತಿ ಪತ್ರ ನೀಡಿದರು. ನಿರ್ದೇಶಕರ ನಿರ್ದೇಶನದಂತೆ `ಇದರಿಂದ ಆಗು ಹೋಗುವ ಎಲ್ಲವುಗಳಿಗೆ ನಾನೇ ಜವಾಬ್ದಾರಳು’ ಎಂದು ಬರೆದು ಎರೆಡೆರೆಡು ಕಡೆ ಸಹಿ ಮಾಡಿದೆ. ಈ ಗದ್ದಲದಲ್ಲಿ ಕಡೆಗಳಿಗೆಯಲ್ಲಿ ಯಾರಿಗೂ ಭೇಟಿಯಾಗದಾದೆ. ಅನುಮತಿ ಪತ್ರ ಪಡೆಯುವುದರೊಳಗೆ ನನ್ನ ಪಿರಾಮಿಡ್ ಸಿದ್ಧಗೊಂಡಂತಾಗಿತ್ತು. `ಘಟನೋತ್ತರ ಅನುಮತಿ ಪತ್ರ ಪಡೆಯಬಹುದು. ಹೇಗೋ ಅರ್ಜಿ ಕೊಟ್ಟಾಗಿದೆಯಲ್ಲ’ ಎಂಬ ಅಭಿಪ್ರಾಯಗಳೂ ಬಂದಿದ್ದವು. ಆದರೆ ಹೋದಲ್ಲಿ ಏನಾದ್ರೂ ಆಗಿ ಮರಳಿ ಬರದಿದ್ದರೆ…? ಯಾಕೆ ಎಲ್ಲರನ್ನು ಸಂಕಷ್ಟದಲ್ಲಿ ಸಿಕ್ಕಿಸೋದು. ಅಲ್ಲದೇ ಪ್ರಯಾಣದ ವೇಳೆಯಲ್ಲಿ ಸಮಾಧಾನ ಒಂದು ಬೇಕಲ್ಲ? ಎಂದು ಅನುಮತಿ ಪಡೆದೆ ಬಿಟ್ಟೆ. ಮನೆಗೆ ಬಂದವಳೆ ಮುಖ ಮುಚ್ಚಿಕೊಂಡು ಗಳಗಳನೇ ಅತ್ತುಬಿಟ್ಟೆ. ಪೆಟ್ಟುಬಿದ್ದ ಕೈ ಕಾಲು ನೋಯುತ್ತಿದ್ದವು. ಅದಕ್ಕಿಂತ ಹೆಚ್ಚಾಗಿ ನಮ್ಮಷ್ಟಕ್ಕೆ ನಾವು ಬದುಕುವಾಗಲೂ ಇಂಥ ತರಾತುರಿ ಸೃಷ್ಟಿಸಿದ ಪೆಟ್ಟು ಇನ್ನು ಗಾಳಿಗೊಳಿಸಿತ್ತು. ಒಳಗಿನ ಥರಥರಿಕೆ ಇನ್ನೂ ಇತ್ತು. ಮನೆಯವರು `ಯಾಕೋ, ಏನಾಯ್ತೋ? ಮೊದಲು ಒಮ್ಮೆ ಅತ್ತುಬಿಡು ಆಮೇಲೆ ಹೇಳು’ ಎಂದರು. ಕಣ್ಣೀರಿನೊಂದಿಗೆ ಎಲ್ಲವು ತೊಳೆದು ಹೋಯಿತು. ಇಂಥ ತುರಾತುರಿಯ ಸಂದರ್ಭ ಇನ್ನೆಂದೂ ಬಾರದಿರಲಿ.
(ಮುಂದುವರಿಯುವುದು…)

‍ಲೇಖಕರು avadhi

March 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: