ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ದೊಡ್ಡವರ ಜಗತ್ತಿನಲ್ಲಿ…

(ಇಲ್ಲಿಯವರೆಗೆ…)

ಭಾರತಿ ಅಳುತ್ತಲೇ ಇದ್ದಳು. ಅವಳ ಅಳುವಿಗೆ ಕಾರಣ ಸುರೇಶಣ್ಣನ ಬೆದರಿಕೆಯೋ ಅಥವಾ ತನ್ನ ಎದುರೇ ಇಷ್ಟೆಲ್ಲಾ ನಡೆದುದರಿಂದಾದ ಅವಮಾನವೋ ಎಂದು ಅರ್ಥವಾಗದೆ ನಿಂತಳು ಚಿಟ್ಟಿ. ಭಾರತಿಯನ್ನು ಹೇಗೆ ಸಮಾಧಾನ ಮಾಡುವುದು? ಗೊತ್ತಾಗಲಿಲ್ಲ. ‘ಅಲ್ಲ ಕಣೆ, ಹೀಗೆ ಅಳೋದ್ರ ಬದ್ಲು ಅಪ್ಪ ಅಮ್ಮನಿಗೆ ಹೇಳಿಬಿಡು ಆಗ ಎಲ್ಲಾ ಸರಿಹೋಗುತ್ತೆ’ ಎಂದಳು ಸಾಂತ್ವಾನವನ್ನು ತುಂಬಿ. ಆದರೆ ಭಾರತಿಗೆ ಅದು ಬೇಕಿರಲಿಲ್ಲ. ಇದೇನಾದರೂ ಹೊರಗೆ ಗೊತ್ತಾದರೆ ತನ್ನ ಮನೆಗೇ ಅವಮಾನ. ತಾನು ಹೊರಗೆ ಹೋದರೆ ಸಾಕು ‘ಏನೇ ನಿಮ್ಮತ್ತಿಗೆ ನಿಮ್ಮ ಇನ್ನೊಬ್ಬ ಅಣ್ಣನ ಜೊತೆ . . .’ಎಂದು ಕೇಳೇ ಕೇಳುತ್ತಾರೆ ಎನ್ನುವುದು ಅವಳಿಗೂ ಗೊತ್ತಿತ್ತು. ಇದನ್ನೆಲ್ಲಾ ಹೇಗೋ ಸಹಿಸಿಕೊಳ್ಳಬಹುದಿತ್ತು, ಕಂಡವರು ಯಾರು ಹೇಳಿ? ಎಂದು ಪ್ರಶ್ನಿಸಬಹುದಿತ್ತು. ಆದರೆ ಪ್ರಶ್ನೆ ಅದಲ್ಲ. ತಾನು ತುಂಬಾ ಪ್ರೀತಿಸುವ ಸುರೇಶಣ್ಣ ಹೀಗೆ ಬೆದರಿಸಬಹುದೇ? ತಾನು ಹುಟ್ಟಿದಾಗ ‘ನನಗೊಬ್ಬ ತಂಗಿ ಹುಟ್ಟಿದಳು’ ಎಂದು ಎಲ್ಲರಿಗಿಂತ ಸಂತೋಷಪಟ್ಟವನು ಅವನೇ ಅಂತೆ. ಈಗ ಯಾರದೋ ಹೆಂಡತಿಗಾಗಿ ತನ್ನನ್ನು ಹೀಗೆ ಬೆರಳು ತೋರಿಸುತ್ತಾ ಹೆದರಿಸಿದ್ದು ಮಾತ್ರ ಅವಳಿಗೆ ಸಹಿಸಲಸಾಧ್ಯವಾದ ನೋವಾಗಿತ್ತು. ‘ಇಲ್ಲ ಅಂದೋರು ಯಾರು? ಈಗಲೂ ಅವನಿಗೆ ನಿನ್ನ ಮೇಲೆ ಹೆಚ್ಚು ಪ್ರೀತಿ ಇರಬಹುದಲ್ಲವಾ? ಇಷ್ಟಕ್ಕೂ ಅಲ್ಲಿ ಅಗಿದ್ದಾದರೂ ಏನು? ಅಣ್ಣ ಬಚ್ಚಲಿನಿಂದ ಹೊರಗೆ ಬಂದ ಅಷ್ಟೇ ಅಲ್ಲವಾ? ನೋಡು ಇದನ್ನೆಲ್ಲಾ ನಾವು ಯಾರ ಹತ್ತಿರವೂ ಹೇಳದಿದ್ದರೆ ಸಾಕು. ಎಲ್ಲಾ ಸರಿಹೋಗುತ್ತೆ’ ಎಂದಳು ಚಿಟ್ಟಿ. ಬೇರೆ ದಾರಿ ತೋಚದೆ ಅದೇ ಸರಿ ಅನ್ನಿಸಿ ‘ಇಲ್ಲಿ ನೋಡಿದ್ದನ್ನ ನೀನು ಯಾರಿಗೂ ಹೇಳಬೇಡ ನಾನೂ ಯಾರ ಹತ್ತಿರವೂ ಹೇಳಲ್ಲ’ ಎಂದು ಚಿಟ್ಟಿಯಿಂದ ವಾಗ್ದಾನ ಪಡೆದಳು ಭಾರತಿ. ಇನ್ನು ಎಲ್ಲಾ ಸರಿಯಾಯಿತು ಇದು ಇಷ್ಟಕ್ಕೆ ನಿಂತು ಬಿಡುತ್ತದೆ ಎಂದು ಚಿಟ್ಟಿ ಕೂಡಾ ನಂಬಿದ್ದಳು. ಆದರೆ ಅವರ ಸಮಾಧಾನವನ್ನು ಆ ದೇವರಿಗೇ ಸಹಿಸಲಿಕ್ಕಾಗಲಿಲ್ಲ. ಮುಚ್ಚಿದ್ದ ಮೂರನೇ ಕಣ್ನನ್ನು ತೆರೆಯುವಂತೆ ಪಾಪಿ ಪದ್ದಕ್ಕನನ್ನು ಇಬ್ಬರೂ ಮಾತಾಡುತ್ತಿದ್ದಲ್ಲಿಗೆ ಕಳಿಸಿಬಿಟ್ಟಿದ್ದ. ಸಮಾಧಾನ ಸಾಂತ್ವಾನಗಳ ಮಧ್ಯೆ ಮುಳುಗಿ ಹೋಗಿದ್ದಚಿಟ್ಟಿ ಮತ್ತು ಭಾರತಿಗೆ ಇದ್ದಕ್ಕಿದ್ದಹಾಗೇ ‘ಏನ್ರೇ ಇದು’ ಎನ್ನುವ ಧ್ವನಿ ಕೇಳಿ ಗಾಬರಿಯಾಯಿತು, ಭಾರತಿಗೆ ಗಲಿಬಿಲಿ. ತಮ್ಮ ಇಷ್ಟು ಹೊತ್ತಿನ ಮಾತುಗಳನ್ನು ಈಕೆಯೇನಾದರೂ ಕೇಳಿಸಿಕೊಂಡುಬಿಟ್ಟಿದ್ದರೆ ಎಂದು ಒಂದು ಕ್ಷಣ ಭಯವಾಯಿತು,. ಚಿಟ್ಟಿಗೆ ಮೊದಲೇ ಪದ್ದಕ್ಕನನ್ನು ಕಂಡರೆ ಆಗದಿದ್ದುದ್ದರಿಂದ ‘ನಿಮ್ಮ ಕೆಲಸ ನೀವು ನೋಡಿ’ ಎಂದುಬಿಟ್ಟಳು ಒರಟಾಗಿ. ‘ಆಹಾ ನನ್ನನ್ನೇ ಅನ್ನುವ ಹಾಗೇ ಆಗಿಬಿಟ್ಟೆಯಾ? ನನಗೇನೂ ಗೊತ್ತಿಲ್ಲ ಅಂದುಕೊಂಡಿದ್ದೀರಾ? ನೀವು ಮಾತಾಡಿದ್ದನ್ನೆಲ್ಲಾ ನಾನೂ ಕೇಳಿಸಿಕೊಂಡಿದ್ದೀನಿ’ ಎಂದಳು. ‘ಕೇಳಿಸ್ಕೊಂಡು ಏನ್ ಮಾಡೋಕ್ಕಾಗುತ್ತೆ ಬಿಡ್ರೀ’ ಎಂದು ಚಿಟ್ಟಿ ಮಾರುತ್ತರ ಕೊಟ್ಟಿದ್ದಳು. ಪದ್ದಕ್ಕ ಅವಳನ್ನೆ ಉರು ಉರು ಎಂದು ನೋಡಿ ‘ರತ್ನಮ್ಮಾ’ ಎನ್ನುತ್ತಾ ಒಳಗೆ ಸಾಗಿದಳು. ‘ಅಮ್ಮನ ಹತ್ತಿರ ಏನಾದ್ರೂ ಹೇಳಿಬಿಟ್ರೆ ಏನ್ ಮಾಡೋದೇ?’ ಎಂದಳು ಭಾರತಿ ಆತಂಕದಿಂದ. ‘ನೀನ್ ಸುಮ್ನೆ ಇರು ನಾವು ಮಾತಾಡಿದ್ದನ್ನ ಅವಳು ಕೇಳಿಸಿಕೊಂಡಿಲ್ಲ. ಸುಮ್ಮನೆ ನಮ್ಮನ್ನ ಹೆದರಿಸಲಿಕ್ಕೆ ನೋಡ್ತಾಳೆ. ಇವಳ ಸ್ವಭಾವ ಗೊತ್ತಿಲ್ಲವಾ? ಯಾವಾಗಲೂ ಹೀಗೆ ನಮ್ಮ ಕಡೆಯಿಂದಲೇ ಎಲ್ಲವನ್ನೂ ಬಾಯಿಬಿಡಿಸುವ ಪ್ರಯತ್ನ’ ಎಂದು ಚಿಟ್ಟಿ ಭಾರತಿಯನ್ನು ಸಮಾಧಾನಪಡಿಸಿದಳು. ಪದ್ದಕ್ಕ ರತ್ನಮ್ಮನ ಹತ್ತಿರ ಏನೂ ಹೇಳಲಿಲ್ಲ. ಆದರೆ ಸುಮನ ಹತ್ತಿರ ‘ನಿನ್ನ ನಾದಿನಿಗೆ ಇಲ್ಲಸಲ್ಲದ್ದನ್ನೆಲ್ಲ ಆ ಚಿಟ್ಟಿ ಹೇಳಿಕೊಡುತ್ತಿದ್ದಳು. ಇಂಥಾ ಹುಡುಗೀರು ಊರಿಗೆ ಒಬ್ಬರಿದ್ದರೆ ಸಾಕು ಊರೇ ಹಾಳಾಗುತ್ತೆ. ಇಂಥಾ ಹುಡುಗಿಯ ಸ್ನೇಹ ನಿನ್ನ ನಾದಿನಿಗ್ ಬೇಕಾ? ನೋಡು ಇದು ನಿನ್ನ ಸಂಸಾರದ ಮಾನ ಮರ್ಯಾದೆಯ ಪ್ರಶ್ನೆ’ ಸಣ್ಣ ಕಿಡಿಯನ್ನು ಹಚ್ಚಿದಳು. ಇಬ್ಬರ ಮಾತಿಂದ ಸೂರ್ಯನಿಗೆ ಮೈ ಉರಿದುಹೋಯಿತು. ಅವನ ಮೈ ಇನ್ನಷ್ಟು ಶಾಖದಿಂದ ಕುದ್ದುಹೋಯಿತು. ಈ ಹೊತ್ತಿನಲ್ಲಿ ಇದ್ಯಾವುದೂ ತಿಳಿಯದ ಚಿಟ್ಟಿ ಗೊರಟೆ ಹೂವನ್ನು ಲಂಗಕ್ಕೆ ತುಂಬಿಸಿಕೊಳ್ಳುತ್ತಾ ಅದರ ತಿಳಿ ನೀಲಿ ಬಣ್ಣಕ್ಕೆ ಆನಂದ ಪಡುತ್ತಾ ಹಿತ್ತಲಲ್ಲಿ ಒಬ್ಬಳೇ ನಡೆಯುತ್ತಿದ್ದಳು.
ಅಣ್ಣನ ಹೆದರಿಕೆಯಲ್ಲಿದ್ದ ಭಾರತಿಗೆ ಮನೆಯಲ್ಲಿ ರಂಪ ಶುರುವಾದಾಗ ಇದ್ಯಾವ ಹೊಸ ಸುದ್ದಿ ಎಂದು ಅರ್ಥವಾಗಲಿಲ್ಲ. ಭಾರತಿಯನ್ನು ನಿಲೆಹಾಕಿಕೊಂಡು ‘ಏನೇ ನೋಡಿದ್ದು ನೀನು?’ ಎಂದು ಸುರೇಶಣ್ಣ ಭಾರತಿಯನ್ನು ಹೊಡೆದಿದ್ದ, ‘ಇನ್ನೊಂದು ಸಲ ಆ ಚಿಟ್ಟಿ ಮನೇಗ್ ಬರ್ಲಿ ಕೈಕಾಲ್ ಮುರಿದು ಹಾಕ್ತೀನಿ’ ಎಂದು ಗದರಿದ್ದ. ‘ಅವಳು ಮನೆಗೆ ಬರೋವರ್ಗೂ ನೀವ್ ಕಾಯ್ಬಹ್ದು ಆದ್ರೆ ನಾನ್ ಮಾತ್ರ ಕಾಯಲ್ಲ. ಇವತ್ತು ಆ ಚಿಟ್ಟೀಗೆ ಒಂದು ಗತಿ ಕಾಣ್ಸಿಲ್ಲ ಅಂದ್ರೆ ನಾನು ಸುಮಾನೇ ಅಲ್ಲ’ ಅಂತ ಪ್ರತಿಜ್ಞೆ ಮಾಡಿದ್ದಳು ಅತ್ತಿಗೆ. ಮಧ್ಯದಲ್ಲಿ ಬಾಯಿ ಹಾಕಿ ಎಲ್ಲವನ್ನೂ ಶಾಂತ ಮಾಡುವ ಉದ್ದೇಶದಿಂದ ರತ್ನಮ್ಮ ‘ಏನೋ ಹುಡುಗ್ರು. . . ಗೊತ್ತಿಲ್ದೆ ನಡ್ದು ಹೋಗಿದೆ ಇದನ್ನೆಲ್ಲ ಹಾದಿರಂಪ ಮಾಡಿ ನಿನ್ನ ಮರ್ಯಾದೆನಾ ನೀನೇ ಯಾಕೆ ಹಾಳ್ ಮಾಡ್ಕೋತೀಯ’ ಎಂದಿದ್ದರು. ಕೆರಳಿದ ಸುಮಾ ‘ಅಂದ್ರೆ ನಿಮ್ಮ ಮಾತಿನ ಅರ್ಥ ಏನು?’ ಎಂದು ಅತ್ತೆಗೆ ಎದುರು ನಿಂತು ತನ್ನ ತಪ್ಪೇ ಇಲ್ಲ ಎನ್ನುವ ಹಾಗೇ ಎದುರಿಸಿದ್ದಳು. ಈ ಹಟಮಾರಿತನಕ್ಕೆ ಏನು ಹೇಳುವುದು ಗೊತ್ತಾಗದೇ ನಿಂತ ರತ್ನಮ್ಮನನ್ನು ದಾಟಿಕೊಂಡು ಚಿಟ್ಟಿಯ ಮನೆಯ ಕಡೆಗೆ ಸುಮಾ ಸಾಗಿದ್ದಳು. ಗೀತುವನ್ನು ಸಮಾಧಾನ ಮಾಡುತ್ತಿದ್ದ ಸೋಮಣ್ಣ ಮಾತ್ರ ಇದ್ಯಾವುದೂ ತನಗೆ ಸಂಬಂಧ ಪಟ್ಟೇ ಇಲ್ಲ ಎನ್ನುವ ಹಾಗೇ ಸುಮ್ಮನಿದ್ದುಬಿಟ್ಟಿದ್ದರು. ಇದರಲ್ಲಿ ಚಿಟ್ಟಿಯ ತಪ್ಪೇನಿದೆ? ತಪ್ಪೆಲ್ಲ ಸುರೇಶಣ್ಣ ಮತ್ತು ಅತ್ತಿಗೆಯದ್ದೇತಾನೆ? ಹೀಗಿದ್ದೂ ಇಬ್ಬರೂ ಆ ಚಿಟ್ಟಿಯ ಮೇಲೆ ಹರಿಹಾಯುವುದಾದರೂ ಏಕೆ? ಮತ್ತೆ ಮತ್ತೆ ಪ್ರಶ್ನಿಸಿಕೊಂಡಳು ಭಾರತಿ. ಆದರೆ ಯಾರನ್ನೂ ಕೇಳುವ ಧೈರ್ಯವಾಗಲಿಲ್ಲ. ಕೊನೆಗೆ ಸೋಮಣ್ಣನಿಗೆ ‘ಅಣ್ಣ ಅತ್ತಿಗೆಗೆ ಹೇಳು ಚಿಟ್ಟಿಯನ್ನು ಏನೂ ಮಾಡುವುದು ಬೇಡ’ ಎಂದಳು. ಸೋಮಣ್ಣ ‘ನನ್ನ ಮಾತನ್ನ ಅವಳು ಕೇಳುವುದಾದರೆ ಹೇಳುತ್ತಿದ್ದೆ. ಆದರೆ ಏನು ಮಾಡಲಿ? ಅಸಹಾಯಕತೆ ಅವನ ಮಾತಿನಲ್ಲಿತ್ತು. ಪರಿಸ್ಥಿತಿ ತನ್ನ ಕೈ ಮೀರಿದೆ ಎಂದು ತಿಳಿದ ಭಾರತಿ ಬೇರೆ ಏನೂ ಯೋಚನೆಮಾಡದೆ ಚಿಟ್ಟಿಯನ್ನು ಹುಡುಕುತ್ತಾ ಹಿತ್ತಲಿಗೆ ಹೊದಳು. ಹೊತ್ತು ಕ್ಷಣ ಕಾಲ ಕಂಗಾಲಾಗಿಕೂತಿತ್ತು. ಹೀಗೆ ಚಿಟ್ಟಿಯನ್ನು ಹುಡುಕುತ್ತಾ ಬಂದ ಭಾರತಿಗೆ ಮಡಿಲಲ್ಲಿ ನೀಲಿ ಗೊರಟೆಯನ್ನು ತುಂಬಿಸಿಕೊಂಡು ನೋಡೇ ಎಂದು ಸಂಭ್ರಮದಿಂದ ತೋರಿಸಿದ ಚಿಟ್ಟಿ ಕಂಡಿದ್ದೇ ತಡ ಗೊಳೋ ಎಂದು ಅತ್ತುಬಿಟ್ಟಳು.

‘ನನ್ನ ಮನೆಗೆ ಬಂದಿದ್ದರಿಂದಲೇ ನಿನಗೀಸ್ಥಿತಿ ಒದಗಿಬಂತು. ನೀನಿನ್ನು ನಮ್ಮನೆಗೆ ಬರಲೇಬೇಡ, ನನ್ನ ಸ್ನೇಹ ಮಾಡಬೇಡ’ ಎಂದು ಅಳುತ್ತಿದ್ದ ಭಾರತಿಯ ಕಡೆಗೆ ನೋಡಿದ ಚಿಟ್ಟಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆದರೆ ಅಳುವಿನ ಮಧ್ಯೆ ಭಾರತಿಯ ಮಾತುಗಳನ್ನು ಅರ್ಥಮಾಡಿಕೊಂಡ ಚಿಟ್ಟಿಗೆ ದಿಗ್ಭ್ರಮೆ. ನಾನು ಹೀಗೆ ಮಾತಾಡಿದ್ದೀನಿ ಅಂತ ಗೊತ್ತಾದರೆ ಅಮ್ಮ ನಂಬುತ್ತಾಳಾ? ನಂಬದೇ ಇದ್ದರೆ ನನಗೆ ಅವಳು ಏನು ಮಾಡಬಹುದು? ಯಾವಾಗಲಾದರೂ ಹಟ ಮಾಡಿದಾಗ, ತಪ್ಪು ಮಾಡಿದಾಗ ಉರಿಯುತ್ತಿದ್ದ ಒಲೆಯ ಕೊಳ್ಳಿಯನ್ನು ತೆಗೆದು ‘ಸುಟ್ಟ್‌ಬಿಡ್ತೀನಿ’ ಅಂತ ಹೆದರಿಸುತ್ತಿದ್ದ ಅಮ್ಮ ನೆನಪಾದಳು. ಕುಸಿದುಕೂತು ‘ಇವತ್ತು ನನ್ನ ಕಥೆ ಮುಗ್ಯೋದು ಗ್ಯಾರೆಂಟಿ ಕಣೆ. ಭಾರತಿ ನನ್ನ ತಿಥಿ ದಿವ್ಸಾನಾದ್ರೂ ಚಿಟ್ಟಿ ಹೀಗಲ್ಲ ಅನ್ನೋದನ್ನ ಹೇಳು, ಅಷ್ಟ್ ಹೊತ್ಗೆ ಎಲ್ಲರ ಮನಸ್ಸೂ ತಿಳಿಯಾಗಿರುತ್ತೇ, ಆಗಲಾದ್ರೂ ನನ್ನ ನಂಬುತ್ತಾರೆ’ ಎಂದಳು ಚಿಟ್ಟಿ. ಅಷ್ಟುಹೊತ್ತಿಗೆ ನಕ್ಕತ್ತು ಅದೇ ಸುದ್ದಿಯನ್ನು ತೆಗೆದುಕೊಂಡು ಓಡಿಬಂದಿದ್ದಳು.
 
ಭಾರತಿಯ ಅತ್ತಿಗೆ ಚಿಟ್ಟಿಯ ಮನೆಗೆ ಬಿರುಗಾಳಿಯ ಹಾಗೇ ನುಗ್ಗಿದವಳೇ ‘ನಿಮ್ಮ ಮಗಳಿಗೆ ನೀವೇ ಬುದ್ಧಿ ಹೇಳ್ತೀರಾ; ಇಲ್ಲ ನಾನು ಹೇಳಲಾ? ಈ ವಯಸ್ಸಿಗೆ ಇಂಥಾ ಮಾತುಗಳನ್ನು ಅವಳು ಎಲ್ಲಿ ಕಲಿತಳು? ಈಗಲೇ ಹೀಗಾದರೆ ನಾಳೆ ಇವಳು ನಿಮ್ಮ ಕೈಗೆ ಸಿಗ್ತಾಳಾ? ನಾನಾಗುವ ಹೊತ್ತಿಗೆ ಹೀಗೆಲ್ಲಾ ಮಾತಾಡ್ತಿದೀನಿ ॒ಬೇರೆ ಯಾರೇ ಆಗಿದ್ದರೂ ರಸ್ತೇಲಿ ನಿಂತು ನಿಮ್ಮ ಮರ್ಯಾದೆಯನ್ನು ತೆಗೀತಿದ್ರು. ನಿಮ್ಮ ಮಗಳಿಗೆ ನೀವ್ ಬುದ್ಧಿ ಹೇಳ್ತೀರಾ ಇಲ್ಲ ನಾನು ಹೇಳಲಾ?. . .’ ಎಂದು ಜಬರ್ದಸ್ತ್ ಮಾಡಿದ್ದಳು. ವಿಷಯ ಏನೆಂದು ತಿಳಿಯದ ಅಮ್ಮ ಮೊದಲು ‘ಚಿಟ್ಟಿ ಹಾಗೆಲ್ಲಾ ಮಾತಾಡಕ್ಕೆ ಸಾಧ್ಯವೇ ಇಲ್ಲ’ ಅಂತ ವಾದ ಮಾಡಿದ್ದಳಾದರೂ, ಬರಬರುತ್ತಾ ಸುಮಾಳ ವಾದಕ್ಕೆ ಎದುರು ಮಾತಾಡಲಾಗದೆ ಕುಸಿದು ‘ಚಿಟ್ಟಿ ಬರಲಿ ವಿಚಾರಿಸ್ತೀನಿ’ ಎಂದು ಅವಳನ್ನು ಸಮಾಧಾನ ಪಡಿಸಿ ಕಳಿಸಿದ್ದಳು. ಆದರೆ ಆಮೇಲೆ ಅವಳ ಕೈಲಿ ತಡೆಯಲಾಗದೆ ‘ಹಾಳ್ ಲೌಡಿ ಬರ್ಲಿ ಇವತ್ತ್ ಸಿಗ್ದು ತೋರ್ಣ ಕಟ್ಟ್‌ಬಿಡ್ತೀನಿ’ ಎಂದು ಅಬ್ಬರಿಸಿದ್ದಳು. ‘ಇವೆಲ್ಲಾ ಆ ಹಾಳು ಪದ್ದಕ್ಕನಿಂದನೇ ಆಗಿದ್ದು, ನೀನು ಏನೇ ಹೇಳು ಚಿಟ್ಟಿ ಅವಳ ಹತ್ತಿರ ದ್ವೇಷ ಕಟ್ಟಿಕೊಳ್ಳಬಾರದಿತ್ತು. ನೀನು ಆಕೆಯ ಹತ್ತಿರ ಜಗಳ ಆಡದಿದ್ದರೆ ಇದೆಲ್ಲಾ ಆಗ್ತಿರ್ಲಿಲ್ಲ’ ಎಂದಳು ನಕ್ಕತ್ತು. ಈಗ ಚಿಟ್ಟಿಗೆ ನಿಜಕ್ಕೂ ಅಳು ಬಂತು. ಹಿಂದೆ ಆಗಿದ್ದರ ಬಗ್ಗೆ ಮಾತಾಡಿ ಈಗ ತನ್ನನ್ನು ಮತ್ತೆ ದುಃಖಕ್ಕೆ ದೂಡಬಹುದೇ ಈ ನಕ್ಕತ್ತು? ನಾಳೆ ಇವಳಿಗೆ ಏನಾದರೂ ಆದ್ರೆ ತಾನೂ ಹೀಗೆ ಮಾತಾಡಿದ್ರೆ. . . ಆಗ ನೋವು ಅನ್ನೋದು ಏನೂಂತ ಇವಳಿಗೆ ಗೊತ್ತಾಗುತ್ತೆ ಎಂದುಕೊಂಡಳಾದರೂ, ಅದನ್ನು ಹೇಳಿ, ವಾದ ಮಾಡುವ, ಗಟ್ಟಿಯಾಗಿ ಅವಳನ್ನು ಬಾಯಿ ಮುಚ್ಚಿಸುವ ಶಕ್ತಿ ಚಿಟ್ಟಿಗಿರಲಿಲ್ಲ. ಆದ್ದರಿಂದಲೇ ಅಮ್ಮ ಎಲ್ಲರ ಮಾತನ್ನೂ ಕೇಳಿ ಇವತ್ತು ತನ್ನನ್ನು ಸಾಯಿಸುವುದು ಗ್ಯಾರೆಂಟಿ, ಜೊತೆಗೆ ಅಪ್ಪ ಕೂಡಾ ಸೇರಿಕೊಂಡರೆ?ಭಯ ಅವಳನ್ನು ಆವರಿಸಿತು. ಅವಳ ಸುತ್ತಾ ಚೆಲ್ಲಾಡಿದ್ದ ನೀಲಿ ಗೊರಟೆ ಬಿಸಿಲಿಗೆ ಸ್ವಲ್ಪ ಸ್ವಲ್ಪವೇ ಬಾಡುತ್ತಾ ‘ನನ್ನ ಹೀಗೆ ಯಾಕೆ ಬಾಡಿಸಿದೆಯೇ ಚಿಟ್ಟಿ’ ಎಂದು ಅಳುವಂತೆ ಅವಳಿಗೆ ಭಾಸವಾಯ್ತು. ಇಷ್ಟೆಲ್ಲಾ ಆದಮೇಲೆ ತಾನು ಮನೆಗೆ ಹೋಗುವುದಾ? ದಿಕ್ಕೆಟ್ಟು ಕಂಗಾಲಾಗಿ ಕೂತ ಚಿಟ್ಟಿಯನ್ನು ನೋಡುತ್ತಾ ಭಾರತಿ ‘ಚಿಟ್ಟಿ ಇವತ್ತು ನೀನು ಮನೆಗ್ ಹೋಗ್ಬೇಡ ನಮ್ಮನೇ ದನದ ಕೊಟ್ಟಿಗೆಯಲ್ಲಿ ಇದ್ದುಬಿಡು ಯಾರಿಗೂ ಗೊತ್ತಾಗಲ್ಲ’ ಎಂದಳು. ಚಿಟ್ಟಿ ಅವಳ ಕಡೆಗೆ ನೋಡಿದಳು. ಅವಳ ಮುಖದಲ್ಲಿ ಒಂದು ನಿರ್ಧಾರ ಮನೆಮಾಡಿತ್ತು. ಅವಳಿಗೆ ಶತಾಯ ಗತಾಯ ತನ್ನ ಅತ್ತಿಗೆ ಮಾಡುತ್ತಿರುವ ಈ ಕೆಟ್ಟ ನಾಟಕದಿಂದ ಚಿಟ್ಟಿಯನ್ನು ಉಳಿಸುವುದು ಬೇಕಾಗಿತ್ತು. ಅದಕ್ಕಾಗಿ ಯಾರೂ ಬರದ ಜಾಗದಲ್ಲಿ ಅವಳನ್ನ ಇರಿಸುವುದು ಕ್ಷೇಮ; ಅಂಥಾ ಜಾಗ ತನ್ನ ಮನೆಯ ದನದ ಕೊಟ್ಟಿಗೆ ಎನ್ನಿಸಿಬಿಟ್ಟಿತ್ತು. ಇಸ್ಪೀಟು ಆಟಕ್ಕಾಗಿ ದನದ ಕೊಟ್ಟಿಗೆ ಕ್ಲಬಾಗಿ, ಕ್ಲಬ್ಬು ಮುಚ್ಚಿಹೋಗಿ ಇತಿಹಾಸವಾಗಿ ಅದು ಈಗ ಹಾಳುಬಿದ್ದಿತ್ತು. ಅದರಲ್ಲಿದ್ದ ದನಗಳೆಲ್ಲಾ ಬಿಕರಿಯಾಗಿಹೋಗಿದ್ದರೂ ಅದು ಮಾತ್ರ ದನದ ಕೊಟ್ಟಿಗೆ ಎಂದೇ ಕರೆಸಿಕೊಂಡು ಉಳಿದಿತ್ತು. ಛಾವಣಿಯಲ್ಲಿ ಗಳು ಹರಿದುಕೊಂಡು ಯಾವಾಗ ತಲೆ ಮೇಲೆ ಕುಸಿದು ಬೀಳುತ್ತೋ ಗೊತ್ತಿಲ್ಲ, ಅಂಥಾ ಕಡೆ ಇರೋದಾ? ಎನ್ನುವ ಗೊಂದಲಕ್ಕೆ ಬಿದ್ದಳು ಚಿಟ್ಟಿ. ತಕ್ಷಣ ತಾನೇ ಸಾವರಿಸಿಕೊಂಡು ಅಮ್ಮನ ಕೈಗೆ ಸಿಕ್ಕು ಒದೆ ತಿಂದು ಅವಮಾನದಿಂದ ಸಾಯೋದಕ್ಕಿಂತ, ಛಾವಣಿ ಕುಸಿದು ಸಾಯುವುದೇ ವಾಸಿ ಅನ್ನಿಸಿ ‘ಆಯ್ತು ಕಣೆ, ಏನೇ ಆದ್ರೂ, ಎಂಥದ್ದೇ ಪರಿಸ್ಥಿತಿ ಬಂದರೂ ನಾನಿಲ್ಲಿರೋದನ್ನ ಯಾರಿಗೂ ಹೇಳಬಾರದು’ ಎಂದಿದ್ದಳು. ‘ನೀನು ಇಲ್ಲಿರು ನಿನಗೆ ಊಟ ತರ್ತೀನಿ’ ಎಂದು ನಕ್ಕತ್ತುವನ್ನು ಅವಳ ಜೊತೆ ದನದ ಕೊಟ್ಟಿಗೆಯ ಬಳಿ ಬಿಟ್ಟು ಸಾಗಿದ್ದಳು.
ಚಿಟ್ಟಿ ಕ್ಷಣ ಕ್ಷಣ ಕುಸಿಯುತ್ತಾ ಹೋದಳು. ತಾನು ಭಾರತಿಯ ಜೊತೆ ಅವರ ಮನೆಗೆ ಹೋಗಬಾರದಿತ್ತು, ಹೋಗಿದ್ದರೂ ಸುಮಾ, ಸುರೇಶಣ್ಣನ ವಿಷಯಕ್ಕೆ ಹೋಗಬಾರದಿತ್ತು, ಹೋಗಿದ್ದರೂ ಆ ಪದ್ದಕ್ಕನಿಗೆ ಎದುರುತ್ತರ ಕೊಡಬಾರದಿತ್ತು. . . . ಹೀಗೆ ಬಾರದಿತ್ತುಗಳ ನಡುವೆ ಕೊರಗುತ್ತಾ ಕುಳಿತಳು. ನಕ್ಕತ್ತುವಿಗೆ ಅವಳನ್ನು ನೋಡಿ ಪಾಪ ಅನ್ನಿಸಿದ್ದು ಸ್ವಲ್ಪ ಹೆಚ್ಚೇ ಆಯಿತಾದರೂ, ಅವಳಿಗೆ ಅದನ್ನು ಬಿಟ್ಟು ಏನೂ ಮಾಡಲು ತೋಚಲಿಲ್ಲ. ‘ಚಿಟ್ಟಿ ನಿಂಗೊಂದು ವಿಷ್ಯ ಹೇಳಲಾ?’ ಎಂದಳು ಮೆಲ್ಲಗೆ. ಚಿಟ್ಟಿಗೆ ಈ ಹೊತ್ತಲ್ಲಿ ಮತ್ತೆ ಈ ಹಾಳು ನಕ್ಕತ್ತು ಮತ್ತೆ ತನ್ನ ಹೊಟ್ಟೆ ಉರಿಸಲಿಕ್ಕೆ ಏನು ಹೇಳಬಹುದು ಅನ್ನಿಸಿತಾದರೂ, ಕಾಲ ಕಳಿಯದೆ ಬೇರೆ ದಾರಿಯಿಲ್ಲ. ಇಲ್ಲದಿದ್ದೆ ಅವಳೂ ಹೊರಟು ತಾನು ಒಬ್ಬಳೇ ಉಳಿಯಬೇಕಾಗಬಹುದು ಅನ್ನಿಸಿ ಸುಮ್ಮನೆ ನಕ್ಕತ್ತುವಿನ ಕಡೆಗೆ ನೋಡುತ್ತಾ ಕೂತಳು. ಮೂಲೆಯಲ್ಲಿ ದನಕ್ಕೆ ಅಂತ ತಂದು ದನ ತಿನ್ನದೆ ಉಳಿದ ಹುಲ್ಲ ರಾಶಿ ಮಿಂಚುವ ಹಳದಿ ಬಣ್ಣವನ್ನು ಕಳೆದುಕೊಂಡು ಬೂಜು ಬಂದು ಕಪ್ಪಾಗಿತ್ತು. ನಕ್ಕತ್ತು ಅದರಲ್ಲಿ ಏನಾದರೂ ಹುಳು ಹಾವು ಸೇರಿರಬಹುದು ಎನ್ನುವ ಕಾರಣಕ್ಕೆ ಅಲ್ಲೆ ಇದ್ದ ಕೋಲನ್ನು ತೆಗೆದುಕೊಂಡು ಹೊಡೆದು ಏನೂ ಇಲ್ಲ ಅಂತ ನಿಶ್ಚಯ ಮಾಡಿಕೊಂಡು ‘ಬಾ ಇಲ್ಲಿ ಕುಳಿತುಕೋ’ ಎಂದಳು. ಚಿಟ್ಟಿ ಕೀಲಿಕೊಟ್ಟ ಬೊಂಬೆಯ ಹಾಗೆ ಹೋಗಿ ಆ ಹುಲ್ಲಿನ ಮೇಲೆ ಕೂತಳು. ನಕ್ಕತ್ತು ಅವಳನ್ನೇ ದಿಟ್ಟಿಸುತ್ತಾ ‘ನೀನು ನೋಡಿದ್ದು ನಿಜಾನಾ ಚಿಟ್ಟಿ?’ ಎಂದಳು. ಮೊದಲೇ ಗೊಂದಲದಲ್ಲಿದ್ದ ಚಿಟ್ಟಿಗೆ ನಕ್ಕತ್ತು ಏನು ಕೇಳ್ತಿದಾಳೆ ಅಂತ ಗೊತ್ತಾಗದೆ ಕಂಗಾಲಾದಳು. ‘ಅದೇ ಕಣೆ ॒ಸುಮಾ ಸುರೇಶಣ್ಣ. . . .’ ಎಂದು ಮತ್ತೆ ವಿವರಣೆಗೆ ಇಳಿದಾಗ ‘ಹುಂ’ ಎನ್ನುವಂತೆ ತಲೆಯನ್ನು ಆಡಿಸಿ ಕುಳಿತಳು. ನಕ್ಕತ್ತುವಿಗೂ ಮಾತು ಕೆದಕುವುದು ಬೇಕಿರಲಿಲ್ಲ. ಕುತೂಹಲ ಇದ್ದರೂ ಅದನ್ನು ತಡೀತಾ ‘ನೋಡೇ ಮೊನ್ನೆ ನಮ್ಮನೇಲಿ ಕೋಳಿ ತಂದಿದ್ರು. ಕೋಳಿ ಎಷ್ಟು ಚೆನ್ನಾಗಿತ್ತು ಗೊತ್ತಾ?’ ಚಿಟ್ಟಿ ಅವಳನ್ನೆ ನೋಡ್ತಾ ಕೂತಳು. ‘ಅರೆ ಏನೇ ಹಾಗೆ ನೋಡ್ತೀಯ? ಹುಂ ಅಂತಾನಾರೂ ಅನ್ನು’ ಎಂದಳು ನಕ್ಕತ್ತು. ಚಿಟ್ಟಿ ಬಲವಂತಕ್ಕೆ ‘ಹುಂ’ ಎಂದಳು ‘ಕೋಳಿ ಚಂದ ನೋಡ್ತಾ ಇದ್ದ ಹಾಗೇ ಕೋಳಿ ನನ್ನ ಜೊತೆ ಆಡೋಕ್ಕೆ ಶುರು ಮಾಡ್ತು. ಇಂಥಾ ಕೋಳೀನ ಕೊಯ್ಬಾರ್ದು ಅಂತ ನಂಗೆ ಅನ್ನಿಸಿತು. ಅಮ್ಮಿಗೆ ‘ಅಮ್ಮಿ, ಅಮ್ಮಿ ಕೋಳೀನ ಕೊಯ್ಬೇಡ’ ಅಂದೆ. ಕೋಳಿ ಇರೋದೆ ಕೊಯ್ಯೋಕ್ಕೆ, ನಿಂಗೆ ಬೇಡ ಅಂದ್ರೆ ನೀನ್ ತಿನ್ಬೇಡ’ ಅಂದಳು ಅಮ್ಮಿ. ಇದ್ಯಾನ ಕೋಳೀಕತೇನ ತನಗೆ ಹೀಗ್ ಹೇಳ್ತಾ ಇದಾಳೆ ಅನ್ನಿಸಿ ಚಿಟ್ಟಿಗೆ ಸ್ವಲ್ಪ ಕೋಪ ಬಂತು. ಆದರೂ ಪ್ರತಿಕ್ರಿಯೆ ಕೊಡುವ ಸ್ಥಿತಿಯಲ್ಲಿ ಅವಳೂ ಇರಲಿಲ್ಲ. ಸುಮ್ಮನೆ ಕೂತರೆ ಹುಂ ಅನ್ನುವವರೆಗೂ ಇವಳು ಕತೆ ಹೇಳಲ್ಲ ಅದಕ್ಕೆ ‘ಹುಂ’ ಎಂದಳು ಮತ್ತೆ. ಹಾಗಂದ ಮೇಲೆ ನಕತ್ತು ಮತ್ತೆ ಮಾತನ್ನು ಮುಂದುವರೆಸಿದ್ದಳು ‘ಅಮ್ಮಿ ಅಬ್ಬೂಗೆ ‘ಜೀ ಬೇಗ ಕೋಳೀನ ಕೊಯ್ದುಬಿಡಿ ಇಲ್ಲಾಂದ್ರೆ ಈ ನಕ್ಕತ್ತು ಕೋಳೀ ಚೆನ್ನಾಗಿದೆ ಅಂತ ಬಚ್ಚಿಟ್ಟುಬಿಡ್ತಾಳೆ ಎಂದಳು. ಅಬ್ಬು ಹಿತ್ತಲಲ್ಲಿ ಒಂದೇ ಏಟಿಗೆ ಕೋಳೀಯನ್ನು ಕೊಂದೇಬಿಟ್ಟರು. ನನಗೆ ಅಳು ಬಂತು, ಆ ಚಂದದ ಕೋಳಿ ಸಾಯಬಾರದಿತ್ತು’. ಚಿಟ್ಟಿ ‘ಹುಂ’ ಎಂದಳು. ಅಷ್ಟರ ಹೊತ್ತಿಗೆ ಹುಂ ಅನ್ನುವುದು ಅವಳಿಗೆ ಅಭ್ಯಾಸವಾಗಿಬಿಟ್ಟಿತ್ತು. ‘ಹುಂ ಅಂದ್ರೆ ಮತ್ತೆ ಕೋಳಿ ಎದ್ದು ಬರುತ್ತಾ?’ ನಕ್ಕತ್ತು ಚಿಟ್ಟಿ ನಿರೀಕ್ಷಿಸದ ರೀತಿಯಲ್ಲಿ ಪ್ರಶ್ನೆಯೊಂದನ್ನು ಎಸೆದಳು. ಚಿಟ್ಟಿಗೆ ತಬ್ಬಿಬ್ಬು ‘ಇಲ್ಲ’ ಎಂದಳು. ‘ಇಲ್ಲ ಅಂದ್ರೆ ಎದ್ದು ಬರುತ್ತಾ?’ ಮತ್ತೆ ಮರುಪ್ರಶ್ನೆ ಹಾಕಿದಳು ನಕ್ಕತ್ತು. ಮತ್ತಷ್ಟು ಗಾಬರಿಯಲ್ಲಿ ‘ಇಲ್ಲ ಇಲ್ಲ’ ಎಂದಳು ಚಿಟ್ಟಿ. ‘ಇಲ್ಲ ಇಲ್ಲ ಅಂದ್ರೆ ಬರುತ್ತಾ?’ ಈಗ ನಕ್ಕತ್ತು ಮಾತಿಗೆ ಚಿಟ್ಟಿಗೆ ಕೋಪ ಬಂತು. ‘ಏಯ್ ಹೋಗೇ’ ಎಂದು ಮುಖ ತಿರುಗಿಸಿ ಕೂತಳು ಚಿಟ್ಟಿ. ‘ಹೀಗೆ ಏಯ್ ಹೋಗೆ ಅಂತ ಮುಖ ತಿರುಗಿಸಿ. . . .’ ಎನ್ನುತ್ತಾ ಮಾತು ಮುಗಿಸುವ ಮೊದಲೇ ‘ನಕ್ಕತ್ತೂ . . .’ ಎಂದು ಕೂಗಿದ್ದಳು ಚಿಟ್ಟಿ. ನಕ್ಕತ್ತು ಈಗ ತಮಾಷಿಯನ್ನು ಬಿಟ್ಟು ಗಂಭೀರಳಾದಳು. ‘ನೋಡೇ ಒಂದ್ ಸಲ ಕೋಳಿ ಹೇಗೆ ಮತ್ತೆ ಬದುಕಿ ಬರಲ್ವೋ ಹಾಗೇ ನೀನು ಸುರೇಶಣ್ಣ, ಸುಮಾನ್ನ ನೋಡಿದ್ದು, ಪದ್ದಕ್ಕನ ಜೊತೆ ಮಾತಾಡಿದ್ದು, ಯಾವುದೂ ವಾಪಾಸು ಬರಲ್ಲ ನೆಮ್ಮದಿಯಾಗಿ ಈ ರಾತ್ರಿ ಇಲ್ಲಿ ಕಳಿ. ನಾಳೆ ಬೆಳಗ್ಗೆ ಎಲ್ಲ ಸರಿಯಾಗುತ್ತೆ’ ಎಂದು ಸಮಾಧಾನ ಮಾಡಿದ್ದಳು.
ನಕ್ಕತ್ತು ಚೇಷ್ಟೆ ಅಂತ ಮಾಡಿದ್ದೂ ಚಿಟ್ಟಿಯ ಮನಸ್ಸನ್ನು ಹಗುರ ಮಾಡಿತ್ತು. ನಿಜ ಈಗ ಯಾವುದೂ ವಾಪಾಸು ಬರಲ್ಲ . ಹಾಗೆಂದು ಸಮಾಧಾನ ಮಾಡಿಕೊಳ್ಳದೆ ತನಗೆ ಬೇರೆ ದಾರಿ ಇಲ್ಲ ಎನ್ನುವುದನ್ನು ಮನಗಂಡಳು. ಆ ಕ್ಷಣಕ್ಕೆ ನಕ್ಕತ್ತು ದೊಡ್ಡ ಸಂತಳ ಹಾಗೆ ಕಂಡು ಮನಸ್ಸಿನಲ್ಲೇ ಕೃತಜ್ಞತೆ ಅರ್ಪಿಸಿದಳು. ‘ನಕ್ಕತ್ತು ನೀನು ನನ್ನ ಜೊತೆಯಲ್ಲಿದ್ದುಬಿಡೇ. ಒಬ್ಬಳೇ ರಾತ್ರಿ ಕಳಿಯೋಕ್ಕೆ ಕಷ್ಟ ಆಗುತ್ತೆ’ ಎಂದು ಅಂಗಲಾಚಿದಳು. ‘ಇರೋಕ್ಕೆ ನಂಗೇನೂ ಇಲ್ಲ, ಆದರೆ ನಾವೆಲ್ಲಾ ಸೇರಿ ಏನೋ ಮಾಡ್ತಾ ಇದೀವಿ ಅಂತ ಆ ಸುಮಾಗೆ ಗೊತ್ತಾದರೆ ಕಷ್ಟ, ನಮ್ಮ ಮನೆ ಹತ್ರಾನೂ ಬಂದು ಜಗಳ ಮಾಡ್ತಾಳೆ. ಇದೆಲ್ಲ ಯಾಕೆ? ಒಂದು ರಾತ್ರಿ ನೀನು ಮನೇಗ್ ಬರಲಿಲ್ಲ ಅಂದ್ರೆ ನಿಮ್ಮಮ್ಮನ ಮನಸ್ಸು ಕರಗಿಹೋಗುತ್ತೆ. ಆಮೇಲೆ ಎಲ್ಲ ಸಲೀಸು’ ಎಂದು ಚಿಟ್ಟಿಗೆ ಇದ್ದ ಒಂದು ಆಸರೆಯನ್ನೂ ಕಳೆದುಬಿಟ್ಟಿದ್ದಳು. ಭಾರತಿ ಊಟ ತಂದಳು. ಸಂಜೆಯ ಮಬ್ಬುಬೆಳಕು ನೆರಳುಗಳನ್ನು ಬೆಳೆಸುತ್ತಿದ್ದವು. ಮರಗಳು, ಗುಡ್ಡ, ಮನೆ, ಕಂಬ . . . ಹೀಗೆ ಎಲ್ಲಾ ಅಕರಳ, ವಿಕರಾಳ ಬೆಳೆಯುತ್ತಾ ಭಯ ಹುಟ್ಟಿಸಲಿಕ್ಕೆ ಶುರುಮಾಡಿದ್ದವು. ಮಧ್ಯಾಹ್ನದಿಂದ ಊಟ ಮಾಡಿರದಿದ್ದಕ್ಕೆ ಹಸಿವೆ ಅನ್ನಿಸಿದರೂ ಅವಳಿಗೆ ಅನ್ನ ತಿನ್ನಬೇಕು ಅನ್ನಿಸಲಿಲ್ಲ. ಭಾರತಿ ‘ರಾತ್ರಿ ಒಂದು ಸಲ ಸುಮ್ಮನೆ ಬಂದು ಹೋಗುತ್ತೇನೆ, ಯಾರಾದರೂ ನೋಡಿದ್ರೆ ಕಷ್ಟ, ನೀನಿಲ್ಲಿರೋದು ಗೊತ್ತಾಗಬಾರದಲ್ಲ’ ಎಂದು ನಕ್ಕತ್ತುವನ್ನು ‘ಬಾರೆ’ ಎಂದು ಕರೆದುಕೊಂಡು ಹೋಗಿಬಿಟ್ಟಳು. ಈಗ ಜಗತ್ತಿನಲ್ಲಿ ತಾನು ಒಂಟಿ ಅನ್ನಿಸಿಬಿಟ್ಟಿತ್ತು ಚಿಟ್ಟಿಗೆ. ಸೂರ್ಯ ಪಶ್ಚಿಮದಲ್ಲಿ ಪೂರ್ತಿಯಾಗಿ ಕಾಣೆಯಾಗಿ ಇದ್ದ ನೆರಳುಗಳೆಲ್ಲಾ ಕತ್ತಲಿನ ಮಡಿಲನ್ನು ಸೇರಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಕೂತಾಗ ಮನೆಯಲ್ಲಿ ಏನೆಲ್ಲಾ ಆಗ್ತಾ ಇರಬಹುದು ಎನ್ನುವ ಯೋಚನೆಗೆ ಬಿದ್ದಳು ಚಿಟ್ಟಿ. ಅಮ್ಮ ತಾನಿಲ್ಲ ಅಂತ ಅಳುತ್ತಿರಬಹುದೇ? ಚಿಟ್ಟಿ ಎಲ್ಲಿ ಹೋಗಿರಬಹುದು ಎಂದು ಅಪ್ಪ ಜನರನ್ನು ಬಿಟ್ಟು ಹುಡುಕಿಸುತ್ತಿರಬಹುದೇ ? ಅಜ್ಜಿ ಮಾಮೂಲಿನ ಹಾಗೆ ಮಂಚದ ಮೇಲೆ ಕೂತು ತನ್ನನ್ನು ನಖಶಿಖಾಂತ ಬೈತಾ ಇರಬಹುದೇ? ಪುಟ್ಟಿ, ಸೀನು ಊಟ ಬೇಡ ಚಿಟ್ಟಿ ಬೇಕು ಅಂತ ಹಟ ಹಿಡಿದಿರಬಹುದೇ?. . . ಹೀಗೆ ಯೋಚನೆಗಳು ಅವಳ ತಲೆಯಲ್ಲಿ ಸುಳಿಯಲಿಲ್ಲ, ಬ್ರಹ್ಮಾಂಡವೇ ಅವಳ ಕಣ್ಣ ಮುಂದೆ ಹಾದುಹೋಯಿತು. ‘ರಾತ್ರಿ ಆದರೂ ಬರ್ತೀನಿ’ ಅಂದ ಭಾರತಿ ಬರಲಿಲ್ಲ. ಕತ್ತಲೆ ತನ್ನ ಒಡಲಿಗೆ ಮತ್ತಷ್ಟು ಕಪ್ಪನ್ನು ಹಚ್ಚಿಕೊಂಡು ಬೆಳೆಯತೊಡಗಿತ್ತು. ಜೀರುಂಡೆಗಳ ಶಬ್ದ, ಯಾವುದೋ ಕಾಡುಪ್ರಾಣಿಗಳ ಅರಚಾಟ, ಏನೋ ಹರಿದು ಹೋದ ಶಬ್ದ ಎಲ್ಲವೂ ಕ್ಷಣ ಕ್ಷಣಕ್ಕೂ ಸ್ಪಷ್ಟವಾಗಿ ಕೇಳತೊಡಗಿತ್ತು. ಆ ಕತ್ತಲಿನ ಒಡಲಲ್ಲಿ ಕಾದು ಕೂತ ಯಾವ ಆಪತ್ತು ತನ್ನ ಮೇಲೆ ಯಾವಾಗ ಒರಗಿ ಬೀಳಬಹುದು ಎಂದು ಕಾಯುತ್ತಾ ಕೂತಳು ಚಿಟ್ಟಿ.
(ಮುಂದುವರಿಯುವುದು…)

‍ಲೇಖಕರು G

February 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಮುಂದೆ ಈಗ ನಾಳಿನ ಪ್ರಶ್ನೆ « ಅವಧಿ / Avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಮುಂದೆ ಈಗ ನಾಳಿನ ಪ್ರಶ್ನೆ March 4, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: