ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಅಂತೂ ಒಂದು ಪರೀಕ್ಷೆ ಮುಗಿಯಿತು…

ತಪ್ಪು-ಸರಿ ಯಾವುದು ತಿಳಿಯದ ಗೊಂದಲಕ್ಕೆ ಬಿದ್ದಿದ್ದಳು ಚಿಟ್ಟಿ. ಅವಳ ಕಣ್ಣ ಆಳದಲ್ಲಿ ಸಣ್ಣದಾಗಿ ಮಿಲುಗುತ್ತಿದ್ದ  ಚಿತ್ರಗಳು ಒಮ್ಮೊಮ್ಮೆ ದೊಡ್ಡದಾಗಿ ಬೆಳೆದು ಅವಳನ್ನು ಬಿಡದೆ ಕಾಡುತ್ತಿದ್ದವು. ಒಮ್ಮೊಮ್ಮೆ ಪಾಪ ಅನ್ನಿಸಿದರೆ ಇನ್ನೊಮ್ಮೆ ಇಲ್ಲ ಅದು ಹಾಗಾಗಿದ್ದೆ ಸರಿ ಅನ್ನಿಸಲಿಕ್ಕೆ ಆರಂಭಿಸುತ್ತಿತ್ತು. ಅಷ್ಟೆಲ್ಲಾ ಹೊಡೆತ ತಿಂದ ಮೇಲೂ ಭಾರತಿಯ ಅತ್ತಿಗೆ ಸುಮಾ ಮನೆ ಬಿಟ್ಟು ಹೋಗಲಿಲ್ಲ. ಹಾಗೆಂದು ಅಣಗಿ ಮಣಗಿ ಕೂಡ ಇರಲಿಲ್ಲ. ಟ್ರಾನ್ಸ್ಫರ್ ಮಾಡಿಸಿಕೊಂಡು ಅತ್ತೆಯ ಮನೆಯಲ್ಲೇ ಉಳಿದುಬಿಟ್ಟಳು. ಈ ಮಧ್ಯೆಯೆ ಬಿಟ್ಟು ಬಿಟ್ಟು ಮಾತಾಡುವ ಗೀತು ಉಗ್ಗುತ್ತಲೇ ‘ಅಜ್ಜಿ ತಾತ’ ಎನ್ನುತ್ತಾ ಪ್ರೀತಿಯನ್ನು ಗಳಿಸಿಕೊಂಡಳು.
ತಲ್ಲಣಗಳ ನಡುವೆ ಪರೀಕ್ಷೆ ಮುಗಿಯಿತು. ತಾನು ಏನು ಬರೆದೆ? ಹಾಗೆ ಬರೆದದ್ದು ಸರಿಯಾಗಿದೆಯಾ? ಇಲ್ಲವಾ? ಎನ್ನುವುದನ್ನು ನಿಖರವಾಗಿ ಗುರಿತಿಸಿಕೊಳ್ಳಲಾಗದ ಚಿಟ್ಟಿ ಅಡಿಷನಲ್ ಶೀಟ್ ತೆಗೆದುಕೊಳ್ಳುವವರನ್ನೇ ಗಮನಿಸುತ್ತಾ ತನಗೇಕೆ ತೆಗೆದುಕೊಳ್ಳಲಾಗುತ್ತಿಲ್ಲ, ಅವರು ತನಗಿಂತ ಚೆನ್ನಾಗಿ ಬರೆದುಬಿಟ್ಟಿದ್ದರೆ, ತಾನು ಫೇಲಾಗಿ ಅವರು ಪಾಸಾಗಿಬಿಟ್ಟಿದ್ದರೆ ಎಂದೆಲ್ಲಾ ಉತ್ತರಗಳಿಲ್ಲದ ಪ್ರಶ್ನೆಯಲ್ಲಿ ತನ್ನನ್ನು ತಾನು ಕಳೆದುಕೊಂಡಿದ್ದಳು.
ಅಮ್ಮ ಮಾತ್ರ ದೇವರಲ್ಲಿ ‘ನನ್ನ ಮಗಳು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಪಾಸಾಗಲಿ’ ಎಂದು ಬೇಡಿಕೊಳ್ಳುತ್ತಿದ್ದಳು. ‘ದೇವ್ರೆ ನಾನು ಪರೀಕ್ಷೇಲಿ ಪಾಸಾದರೆ ಉರುಳು ಸೇವೆಯನ್ನು ಮಾಡ್ತೀನಿ’ ಅಂತ ಅಂತರಗಟ್ಟಮ್ಮನಿಗೆ ಭಯ ಭಕ್ತಿಯಿಂದ ಮನಸ್ಸಿನಲ್ಲೇ ಹರಕೆ ಹೊತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅವಳಿಗೆ ಬಿದ್ದ ಕನಸಿನ ಹದ್ದು ಹುಡುಗ, ಆಟವನ್ನು ಕೆಡಿಸಿ ಹೋದ ಅಲೆ ಎಲ್ಲವೂ ನೆನಪಾಗಿ ಚಿಟ್ಟಿ ಖಿನ್ನಳಾಗುತ್ತಿದ್ದಳು. ‘ನೀನೇನು ಬರೆದೆ ಅಂತ ನಿನಗೇ ಗೊತ್ತಿದ್ದರೆ ಪಾಸಾಗ್ತೀಯಾ ಅಥವಾ ಇಲ್ಲವಾ ಎನ್ನುವುದು ನಿನಗೆ ಗೊತ್ತಾಗಿಬಿಡುತ್ತೆ’ ಎಂದು ಪುಟ್ಟ್ಟಿ ಹೇಳಿದಾಗ ಚಿಟ್ಟಿಗೆ ‘ಅರೆ ಹೌದಲ್ವಾ’ ಅನ್ನಿಸ್ತಾದರೂ ಅದು ಅಷ್ಟು ಸರಳವಾದ ಸಂಗತಿಯಾಗಿರಲಿಲ್ಲ. ಬರುವ ಫಲಿತಾಂಶ ತನ್ನ ಮಾನ ಮರ್ಯಾದೆಯನ್ನು ಉಳಿಸುವಂತಾದರೆ ಅಷ್ಟು ಸಾಕು ಎನ್ನುತ್ತಿತ್ತು ಅವಳ ಮನಸ್ಸು.
ಭಾರತಿ, ನಕ್ಕತ್ತು, ಸರೋಜ ಎಲ್ಲರ ಸ್ಥಿತಿ ಕೂಡಾ ಹೀಗೆ ಇದ್ದಿದ್ದರಿಂದಲೋ ಏನೋ ಯಾರೂ ಅದರ ಬಗ್ಗೆ ಮಾತಾಡದೆ ಉಳಿದುಬಿಟ್ಟಿದ್ದರು. ರಿಸಲ್ಟ್ ಬರೋವರೆಗಾದರೂ ನೆಮ್ಮದಿಯಾಗಿ ಇದ್ದುಬಿಡೋಣ ಎನ್ನುವಂತಿತ್ತು ಧೋರಣೆ. ಪರೀಕ್ಷೆ ಮುಗಿದ ದಿನ ಚಿಟ್ಟಿ ರಟ್ಟು, ಪೆನ್ನು, ಪೇಪರ್ರು ಎಲ್ಲಾವನ್ನೂ ತೆಗೆದು ಎಸೆದುಬಿಟ್ಟಿದ್ದಳು. ಟಾಮಿ ಅವಳ ಖುಷಿಯನ್ನು ಗಮನಿಸಿ ತಾನೂ ಸಂತೋಷದಿಂದ ಬಾಲ ಅಲ್ಲಾಡಿಸಿತ್ತು. ಇನ್ನು ಮೂರು ತಿಂಗಳು ತನಗೂ ಪುಸ್ತಕಕ್ಕೂ ಸಂಬಂಧ ಇಲ್ಲ ಎನ್ನುವುದು ಅವಳ ಒಳಗೆ ನಿರಾಳತೆಯನ್ನು ಹುಟ್ಟುಹಾಕಿತ್ತು. ಅಮ್ಮನಿಗೆ ‘ಏನಾದ್ರೂ ಸಿಹಿ ಮಾಡ್ತೀಯಾ?’  ಎಂದಿದ್ದಳು. ಈಚೆಗೆ ಚಿಟ್ಟಿಗೆ ಸಿಹಿ ತುಂಬಾ ಇಷ್ಟವಾಗುತ್ತಿತ್ತು. ಏನೂ ಸಿಗದಿದ್ದರೆ ಸ್ವಲ್ಪ ಬೆಲ್ಲವನ್ನೋ ಸಕ್ಕರೆಯನ್ನೋ ಬಾಯಿಗೆ ಹಾಕಿಕೊಳ್ಳುತ್ತಿದ್ದಳು.
ಅಮ್ಮ ಚಿಟ್ಟಿಯ ಆ ನಿರಾಳತೆಯನ್ನು ಗಮನಿಸಿ ನಕ್ಕಿದ್ದಳು. ಹಾಗೆ ಮೆಲ್ಲಗೆ ಮೈ ತುಂಬಿಕೊಳ್ಳುತ್ತಿದ್ದ ಅವಳ ಮೈ ಕೂಡಾ ಅವಳ ಕಣ್ಣುಗಳನ್ನು ತುಂಬಿದ್ದವು. ತೆಂಗಿನ ಸೋಗೆಯೇ ಬ್ಯಾಟು, ಮನೆಯಲ್ಲಿ ಇದ್ದಬದ್ದ ಪ್ಲಾಸ್ಟಿಕ್ ಕವರ್‌ಗಳ ಮಧ್ಯೆ ಕಲ್ಲನ್ನು ಇಟ್ಟು ಮಾಡಿದ್ದ ಬಾಲು, ಗಾಜು ಒಡೆದ ದೊಡ್ಡ ಫೋಟೋಫ್ರೇಮ್ ಮತ್ತು ಅಟ್ಟೆಯನ್ನು ನಾಕೂ ಕಡೆ ಕೊರೆದು ಮಾಡಿದ ಕೇರಂಬೋರ್ಡ್, ನೆಲದ ಮೇಲೆ ಚೌಕಾಭಾರದ ಗೆರೆಗಳನ್ನು ಗೀಚಿ, ಹುಣಸೆ ಪಿಕ್ಕವನ್ನು ಒಂದು ಕಡೆ ನೀರಿನ ಜೊತೆ ನೆಲಕ್ಕೆ ಉಜ್ಜಿ ಬೆಳ್ಳಗಾಗಿಸಿ ದಾಳವನ್ನಾಗಿಸಿ, ಹಾಗೆ ಇನ್ನೂ ಗೀಚಿ ಆಡುವ ಹುಲಿ ಕುರಿ ಆಟ, ಹೀಗೆ ಒಂದೇ ಎರಡೇ. .
ಅನಂತ ಅವಕಾಶವನ್ನು ತಮ್ಮ ಕೈ ಅಳತೆಗೆ ತಂದುಕೊಳ್ಳುವ ಚಾಕಚಕ್ಯತೆ ಎಂಥವರಲ್ಲೂ ಅಚ್ಚರಿಯನ್ನು ಮೂಡಿಸುತ್ತಿತ್ತು. ಸುಡುವ ಸೂರ್ಯನನ್ನು ಲೆಕ್ಕಿಸದೆ ಚಿಗುರುತ್ತಿದ್ದ ಮಾವಿಗೆ ಸಡ್ಡು ಹೊಡೆಯುವಂತೆ ಆಡುವ ಮಕ್ಕಳನ್ನು ನೋಡಿ ಹಿರಿಯರು ರಜ ಅನ್ನೋದು ಯಾಕೆ ಬಂತೋ ಎಂದು ಗೊಣಗುತ್ತಿದ್ದರು. ಟಾಮಿಯಿಂದ ಹಿಡಿದು ಯಾರೂ ಮನೆ ಸೇರುತ್ತಿರಲಿಲ್ಲ. ಮಾಡಿದ್ದ ಅಡುಗೆ ಹಾಗೇ ಉಳಿದು ಬೇಸಿಗೆಯ ಬಿಸಿಲಿಗೆ ಬೇಗ ದಾರಿ ಹಿಡಿಯುತ್ತಿದ್ದರಿಂದ ಮುಖ ನೋಡಿದರೆ ಅಮ್ಮ ‘ಅನ್ನದ ಬೆಲೆ ನಿಮಗೇನೇ ಗೊತ್ತು’ ಎಂದು ರೇಗಿ ಬೀಳುತ್ತಿದ್ದಳು ದೊಡ್ಡವರ ಸಮಾಧಾನಕ್ಕೆ ‘ಡಬ್ಬಿಗೆ ಊಟ ಹಾಕಿಕೊಟ್ಟುಬಿಡು’ ಎಂದು ಅನ್ನ ತೆಗೆದುಕೊಂಡು ಹೋದರೂ ತಿನ್ನುವ ಮನಸ್ಸು ಇರುತ್ತಿರಲಿಲ್ಲ. ಹಾಗೆಂದು ವಾಪಾಸು ತೆಗೆದುಕೊಂಡು ಹೋದರೆ ಮತ್ತೆ ಸಹಸ್ರ ನಾಮಾರ್ಚನೆಯ ಭಯ ಇದ್ದಿದ್ದರಿಂದ ತಂದಿದ್ದನ್ನ ಹಂಚಿಕೊಂಡು ತಿನ್ನುವ ನಿರ್ಧಾರಕ್ಕೆ ಎಲ್ಲರೂ ಬಂದಿದ್ದರು. ಹಾಗೆ ನಿರ್ಧಾರ ಮಾಡುವ ಹೊತ್ತಿಗೆ ‘ನಾನೂ ಬರ್ತೀನೇ’ ಎಂದಳು ನಾಗೂ. ಯಾರಿಗೂ ಬೇಡ ಅನ್ನಿಸಿದರೂ ಅದನ್ನು ಬಾಯಿಬಿಟ್ಟು ಹೇಳಲಿಕ್ಕಾಗದೆ ಬಾ ಎಂದು ಸೇರಿಸಿಕೊಂಡಿದ್ದರು. ಪರಿಣಾಮ ತವು ಮನೆಯಿಂದ ತಂದ ಅನ್ನದ ಜೊತೆ  ರಾಮಣ್ಣ ಮೇಷ್ಟ್ರ ಸೊಸೆ ನಾಗೂ ತಂದು ಹಾಕಿದ ಅನ್ನದಲ್ಲಿ ಇದ್ದ ಬಿಳಿಯ ಹುಳುಗಳನ್ನು ನೋಡಿ ವಾಕರಿಸಿಕೊಂಡಿದ್ದರು.
ಮಂಗಳಿ ‘ನೀನು ತಂದಿರುವ ಅನ್ನದಲ್ಲಿ ಹುಳ ಇದೆ ಕಣೆ’ ಅಂದಿದ್ದಕ್ಕೆ ‘ಹುಂ ಕಣೆ ನೀವು ಅನ್ನ ತಿನ್ನೋರು ನಾವು ಹುಳ ತಿನ್ನೋರು’ ಎಂದು ಕೋಪ ಮಾಡಿಕೊಂಡು ಹೊರಟುಹೋಗಿದ್ದಳು. ಹೇಳದಿದ್ದರೆ ತಿನ್ನುವ ಅನಿವಾರ್ಯತೆ; ಹೇಳಿದ್ದರಿಂದ ಕೋಪದ ತಾಪ. ಮಂಗಳಿ-ನಾಗೂ ದಾಯಾದಿಗಳಾದ್ದರಿಂದ ಇದರ ಇನ್ನೊಂದು ಮಗ್ಗುಲು ಏನಾಗಬಹುದು ಎನ್ನುವ ಭಯವಿತ್ತಾದರೂ ಸುಮ್ಮನೆ ಕಾಲಹರಣ ಮಾಡಲಿಕ್ಕಾಗದೆ ದಿನ ಕಳೆದು ಹೋಗುವ ಭಯದಲ್ಲಿ ಮತ್ತೆ ಆಟವನ್ನು ಮುಂದುವರೆಸಿದ್ದರು. ಮಾರನೆಯ ದಿನ ಏನೂ ಆಗಿಲ್ಲವೆನ್ನುವಂತೆ ನಾಗೂ ಮತ್ತೆ ಆಟಕ್ಕೆ ಬಂದಾಗಲೇ ನಿರಾಳ. ಆದರೆ ಅವಳು ‘ಇನ್ನು ಮುಂದೆ ನಾನು ನಮ್ಮನೆಯಿಂದ ಏನೂ ತರಲ್ಲ’ ಎಂದ ಘೋಷಣೆ ಮಾಡಿದ್ದು ಕೂಡಾ ಒಂದು ಥರದಲ್ಲಿ ಸಮಾಧಾನವನ್ನೇ ತಂದಿತ್ತು. ರಾಮಣ್ಣ ಮೇಷ್ಟ್ರು ತನ್ನ ಅಕ್ಕ ಮತ್ತು ಅವಳ ಮಗಳಿಗಾಗಿ ಮನೆಯ ಹಿಂದೆ ಮತ್ತೊಂದು ಮನೆಯನ್ನು ಕಟ್ಟಿಸಿದ್ದರು. ವೆಂಕಣ್ಣಾಚಾರರಿಗೂ ರಾಮಣ್ಣ ಮೇಷ್ಟ್ರ ಮನೆಗೂ ಹಿತ್ತಲಿನ ನೆಲಬಾವಿ ಒಂದೇ. ಬಟ್ಟೆ ಒಗೆಯಲಿಕ್ಕೆ, ಪಾತ್ರೆ ತೊಳೆಯಲಿಕ್ಕೆ ಇದ್ದ ನೀರಿನ ಆಸರೆಯನ್ನು ಮೈದುನ ರಾಮಣ್ಣ ಮೇಷ್ಟ್ರು ಹೀಗೆ ಮನೆ ಕಟ್ಟಲಿಕ್ಕೆ ಅದೂ ಈ ಬೇಸಿಗೆ ಕಾಲದಲ್ಲಿ ಬಳಸಿಕೊಳ್ಳುತ್ತಿದ್ದುದು ಕಮಲಮ್ಮನಿಗೆ ಅಸಾಧ್ಯ ಕೋಪ ತರಿಸಿತ್ತು. ತಳ ಕಂಡಿದ್ದ ಭಾವಿಯಿಂದ ನೀರು ಸೇದುವಾಗಲೆಲ್ಲಾ ಆಕೆಯ ಬೈಗುಳ ಮೇಷ್ಟ್ರ ಮನೆ ಮುಟ್ಟಿ ಹೊರಬಂದ ಮೇಷ್ಟ್ರು ಕೂಡಾ ಬಾಯಿಗೆ ಬಂದ ಹಾಗೇ ಮಾತಾಡುತ್ತಿದ್ದುದು ಸಾಮಾನ್ಯವಾಗಿತ್ತು .
ಕಮಲಮ್ಮ ಕೂಡಾ ಅದಕ್ಕೆ ಉತ್ತರ ಕೊಡುತ್ತಿದ್ದುದರಿಂದ ಇದ್ದಕ್ಕಿದ್ದ ಹಾಗೇ ಮಾತು ರಸ್ತೆಗೆ ತಾಕಿ ಹೋಗಿ ಬರುವವರನ್ನು ನಿಲ್ಲಿಸುತ್ತಿತ್ತು. ಈ ಅವಮಾನವನ್ನು ತಡೆಯಲಾರದೆ ಮನೆಗೆ ಬಂದು ಗಂಡನ ಎದುರು ಆಕೆ ಅಳುತ್ತಾ , ಶಾಪಗಳನ್ನು ಹಾಕುತ್ತಿದ್ದರು ಅದನ್ನು ಕಿವಿಗೆ ಹಾಕಿಕೊಳ್ಳದೆ ವೆಂಕಣ್ಣನವರು ಕುಮಾರವ್ಯಾಸ ಭಾರತವನ್ನು ಓದುತ್ತಾ ಕೂತುಬಿಡುತ್ತಿದ್ದರು. ಹೀಗೇ ಒಂದು ದಿನ ಹಿತ್ತಲಲ್ಲಿ ಬೆಳೆದಿದ್ದ ಕಾಡುಮಾವಿನ ಮರದ ಹೂವಿನ ಘಮಲನ್ನು ಆಸ್ವಾದಿಸುತ್ತಾ ಮಾವಿನ ಸವಿಯನ್ನು ಮನಸ್ಸಿಗೆ ತಂದುಕೊಳ್ಳುತ್ತಿದ್ದ ಮಂಗಳಿ, ಚಿಟ್ಟಿ, ನಾಗೂ, ಭಾರತಿಗೆ ಇದ್ದಕ್ಕಿದ್ದ ಹಾಗೇ ಜಗಳ ಶುರುವಾಗಿದ್ದು ಕೇಳಿ ಮನಸ್ಸು ಆ ಕಡೆಗೆ ವಾಲಿತು. ಏನು ಮಾತು ಕಥೆ ಆಯಿತು ಅಂತ ಇವರ್ಯಾರಿಗೂ ಗೊತ್ತೇ ಆಗಲಿಲ್ಲ. ಆದರೆ ಅವರ ಮಾತಿನ ಮುಂದುವರಿಕೆಯಾಗಿ ಕೂಗಾಟ ಶುರುವಾಗಿದ್ದು ಮಾತ್ರ ಗೊತ್ತಾಯಿತು.
‘ಹಾಳಾದವನು ಅತ್ತಿಗೆ ಅನ್ನೋ ಮರ್ಯಾದೆ ಕೂಡಾ ಕೊಡದೆ ಮಾತಾಡಿದ’ ಎಂದು ಕಂಡ ಕಂಡವರ ಎದುರು ಅಲವತ್ತುಕೊಳ್ಳುತ್ತಿದ್ದ ಕಮಲಮ್ಮನಿಗೆ ಮನೆಯ ಒಳಗಿನಿಂದ ರಭಸವಾಗಿ ಹೊರಬಂದ  ಮೇಷ್ಟ್ರ ತಾಯಿ ‘ನೀನು ಮೈದುನ ಅಂತ ಯಾವಾಗ ಬೆಲೆ ಕೊಟ್ಟಿದ್ದೀಯ?’ ಅಂತ ಕೇಳಿದ್ದರು. ಆ ಮಾತನ್ನ ಕೇಳಿ ಕೆರಳಿದ ಕಮಲಮ್ಮ ‘ಅವನ್ಯಾವ ಸೀಮೆ ಮೈದುನ ನಂಗೆ? ಸಂಬಂಧಾನಾ? ನೆಂಟಸ್ತನಾನಾ? ದಾಯಾದಿಗಳು ಯಾವತ್ತು ಸಂಬಂಧ ಆಗಲ್ಲ’   ಎಂದು ಹರಿಹಾಯ್ದಿದ್ದರು. ಈ ಮಾತನ್ನು ಕೇಳಿದ ತಕ್ಷಣವೇ ಎಗ್ಗು ಸಿಗ್ಗಿಲ್ಲದ ಮೇಷ್ಟ್ರು ತಮ್ಮ ಹಳದಿಗಟ್ಟಿದ್ದ ಬಾಯ ವಾಸನೆಯನ್ನು ನಾಕೂ ದಿಕ್ಕಿಗೂ ಚೆಲ್ಲುತ್ತಾ ‘ಮತ್ಯಾಕೆ ನಾನು ನಿಂಗೆ ಮರ್ಯಾದೆ ಕೊಡ್ಬೇಕು’ ಎನ್ನುತ್ತಾ ಬೈಯ್ಯ ತೊಡಗಿದ್ದರು.
ಮಂಗಳಿ ನಾಗೂ ಕಡೆಗೆ ಅಸಮಾಧಾನದಿಂದ ನೋಡಿದಳು. ನಾಗೂಗೆ ಏನು ಹೇಳಬೇಕೆಂದು ತಿಳಿಯದೇ ಹೋಯಿತು. ‘ಇದರಲ್ಲಿ ನಾಗೂ ತಪ್ಪೇನಿದೆ?’ ಎನ್ನಿಸಿತು  ಚಿಟ್ಟಿಗೆ. ಆದರೆ ಅದನ್ನು ಹೇಳುವ ಸಮಯ ಇದಲ್ಲವೆನ್ನಿಸಿ ಸುಮ್ಮನೆ ಉಳಿದಳು. ಹೀಗೆ ಮಾತಿಗೆ ಮಾತು ಬೆಳೆದು ನೆಲ ಬಾವಿಯ ಮೇಲೆ ನಿಂತ ಕಮಲಮ್ಮ ಆವೇಶದಲ್ಲಿದ್ದಾಗಲೇ ಮೇಷ್ಟ್ರು ಆಕೆಯನ್ನು ತಳ್ಳಿಬಿಟ್ಟರು. ಆಯ ತಪ್ಪಿದ ಕಮಲಮ್ಮ ಬಾವಿಯ ಒಳಗೆ ಬಿದ್ದುಬಿಟ್ಟಿದ್ದರು. ಅವರು ಬಿದ್ದ ರಭಸಕ್ಕೆ ಬಾವಿಯ ಒಳಗೆ ‘ದುಡುಂ’ ಎನ್ನುವ ಶಬ್ದ ಕೇಳಿಸಿತು. ಎಲ್ಲರಿಗೂ ಗಾಬರಿ. ಮಂಗಳಿಯಂತೂ ‘ಅಮ್ಮಾ’ ಎನ್ನುತ್ತಾ ಬಾವಿಯ ಹತ್ತಿರಕ್ಕೆ ಓಡಿಬಿಟ್ಟಿದ್ದಳು. ಎಲ್ಲರಿಗೂ ದಿಕ್ಕುತೋಚದ ಸ್ಥಿತಿ. ಮೇಷ್ಟ್ರಿಗೆ ಕೂಡಾ ಇದ್ಯಾವುದನ್ನೂ ಮಾಡಬೇಕು ಎನ್ನುವ ಉದ್ದೇಶವಿರಲಿಲ್ಲವಾದ್ದರಿಂದ ಕಂಗಾಲಾಗಿ ನಿಂತುಬಿಟ್ಟಿದ್ದರು. ಮನೆಕಟ್ಟಲಿಕ್ಕೆಂದು ನೀರೆಲ್ಲವನ್ನೂ ಸೇದಿದ್ದರಿಂದ ಪಾದ ಮುಳುಗುವಷ್ಟು ಮಾತ್ರ ನೀರಿತ್ತು. ಹಾಗಾಗಿ ಬಾವಿಗೆ ಬಿದ್ದ ಕಮಲಮ್ಮ ಬಿದ್ದ ರಭಸಕ್ಕೆ ಕಕ್ಕಾವಿಕ್ಕಿಯಾದರೂ ಎದ್ದು ನಿಂತು ‘ಹೋ’ ಎಂದು ಕೂಗಲಿಕ್ಕೆ ಶುರುಮಾಡಿದರು. ಬಾವಿಯಾಳದಿಂದ ಕಮಲಮ್ಮನ ಕೀರಲು ಧ್ವನಿ ಕೇಳುತ್ತಿತ್ತಾದರೂ ಸ್ಪಷ್ಟವಾಗಿ ಯಾವುದೂ ಕಿವಿಯನ್ನು ಮುಟ್ಟುತ್ತಿರಲಿಲ್ಲ. ಆದರೆ ಆಕೆಯ ಬೈಗುಳದ ತಾತ್ಪರ್ಯ ಮಾತ್ರ ಅರ್ಥ ಆಗಿತ್ತು. ರಾಮಣ್ಣ ಮೇಷ್ಟ್ರ ವಂಶ ಯಾವತ್ತೂ ಬೆಳೆಯದ ಹಾಗೆ ಶಾಪ ಹಾಕುತ್ತಿದ್ದರು.
ಹಾಗೆ ಬಾವಿಯಲ್ಲಿ ನಿಂತ ಕಮಲಮ್ಮನ ಆ ಸ್ಥಿತಿಯನ್ನು ನೋಡಿ ಚಿಟ್ಟಿಗೆ ಪಕ್ಕೆಂದು ನಗು ಬಂದುಬಿಟ್ಟಿತ್ತು. ಆ ನಗುವನ್ನು ತಡೆಯುವುದಾದರೂ ಹೇಗೆ? ಅಷ್ಟು ಕಂಗಾಲಿನ ನಡುವೆಯೂ ಮಂಗಳಿ ಚಿಟ್ಟಿಯ ಕಡೆಗೆ ಉರ್ರೆಂದು ನೋಡಿದ್ದಳು. ಚಿಟ್ಟಿಗೆ ತನ್ನ ಬಗ್ಗೆ ತನಗೇ ಕೆಟ್ಟದೆನ್ನಿಸಿತ್ತಾದರೂ ಅವಳ ಮುಖದ ನಗು ಮಾತ್ರ ಮರೆಯಾಗಲೇ ಇಲ್ಲ. ಮಂಗಳಿಗೆ ಅಮ್ಮನನ್ನು ಮೇಲೆ ಹೇಗೆ ಎತ್ತಬೇಕೆನ್ನುವ ಚಿಂತೆಯಾದರೆ ಈ ಘಟನೆಯಿಂದ ಊರವರು ತನ್ನನ್ನು ಏನನ್ನಬಹುದು ಎನ್ನುವ ಭಯ ಮೇಷ್ಟ್ರದಾಗಿತ್ತು. ‘ಇದಕ್ಕಾಗಿ ನೀನು ಕಾಯ್ತಾ ಇದ್ದೆ ಅಲ್ಲವಾ? ಇರು ಅಪ್ಪನಿಗೆ ಹೇಳ್ತೀನಿ’ ಎಂದು ತಮ್ಮ ಚಿಕ್ಕಪ್ಪ ರಾಮಣ್ಣ ಮೇಷ್ಟ್ರಿಗೆ ಬೈದು ಮಂಗಳಿ ತನ್ನ ತಂದೆಯನ್ನು ಕರೆಯಲು ಓಡಿದಳು. ಇದರಿಂದ ಅವಮಾನಿತರಾದರೂ ಏನೂ ಹೇಳಲಿಕ್ಕಾಗದೆ ಮೇಷ್ಟ್ರು ನೀರು ಸೇದಿ ಸೇದಿ ಸವಕಲಾದ ಹಗ್ಗವನ್ನು ಬಿಟ್ಟು ಕಮಲಮ್ಮನನ್ನು ಮೇಲೆತ್ತಲಿಕ್ಕಾಗುತ್ತಾ ಎಂದು ನೋಡತೊಡಗಿದರು. ಚಿಟ್ಟಿಗೆ ತಾನು ನಕ್ಕಿದ್ದರ ಬಗ್ಗೆ ತನಗೇ ಕೆಟ್ಟದನ್ನಿಸಿದ್ದರಿಂದಲೋ ಅಥವಾ ಅವರ ಅಸಹಾಯಕತೆಯನ್ನು ನೋಡಿಯೋ ಓಡಿ ಹೋಗಿ ಯಾರ ಬಳಿಯೋ ಕೇಳಿ ಹಗ್ಗವನ್ನು ತಂದಳು. ಅಷ್ಟು ಹೊತ್ತಿಗೆ ವೆಂಕಣ್ಣನವರು ಜಾಗಕ್ಕೆ ಬಂದಿದ್ದರು. ಒಳಗೆ ಕಮಲಮ್ಮನ ಬೈಗುಳ ನಡೆದೇ ಇತ್ತು. ರಾಮಣ್ಣ ಮೇಷ್ಟ್ರು ಅಸಹಾಯಕತೆಯಿಂದ ‘ನಾನು ಬೇಕಾಗಿ ಮಾಡಲಿಲ್ಲ…’ ಎಂದು ಏನೋ ಹೇಳಲಿಕ್ಕೆ ಪ್ರಯತ್ನ ಪಡುತ್ತಿದ್ದರಾದರೂ ಅದನ್ನ ಹೇಳಲಿಕ್ಕಾಗಲಿಲ್ಲ. ವೆಂಕಣ್ಣನವರ ಘನತೆ ದೊಡ್ಡದಿತ್ತು. ಅವರು ಏನೂ ಮಾತಾಡದೆ ಕಮಲಮ್ಮನವರನ್ನು ಮೇಲೆತ್ತುವ ಎಲ್ಲಾ ಪ್ರಯತ್ನ ಮಾಡಿದರು.
ಆಕೆ ಬಾವಿಯ ಒಳಗಿಂದ ಮೇಲೆ ಬಂದ ನಂತರ ‘ಇದು ಪಂಚಾಯ್ತಿನಲ್ಲಿ ತೀರ್ಮಾನವಾಗಲಿ’ ಎಂದು ಹಟ ಹಿಡಿದರಾದರೂ ವೆಂಕಣ್ಣ ಮಾತ್ರ ‘ಕಮಲ ಇದು ಎಲ್ಲೂ ತೀರ್ಮಾನ ಆಗುವ ವಿಷಯ ಅಲ್ಲ. ಮೊದಲು ನಮ್ಮ ಮನಸ್ಸುಗಳು ಸರಿಹೋಗಬೇಕು, ಅರ್ಥ ಮಾಡಿಕೋ. ಆಗಿದ್ದು ಆಗಿ ಹೋಯಿತು. ಮನೆಗೆ ನಡಿ’ ಎಂದಿದ್ದರು. ಕಮಲಮ್ಮನಿಗೆ ಅವಮಾನವಾದರೂ ಊರವರ ಎದುರು ಗಂಡನಿಗೆ ಎದುರಾಡಲಾಗದೆ ದುಡುದುಡು ಎಂದು ಮನೆಯ ಒಳಗೆ ಓಡಿದ್ದರು. ಮತ್ತೆ ಈ ವಿಷಯವನ್ನು ಎರಡೂ ಮನೆಯವರು ಮಾತಾಡಲಿಲ್ಲವಾದರೂ ಒಳಗೆ ಹೊಗೆ ಇದ್ದೇ ಇತ್ತು. ವಿಷಯ ತಿಳಿದ ಮಂಗಳಿಯ ಅಣ್ಣ ಸದಾಶಿವ ‘ಮೇಷ್ಟ್ರನ್ನ ಕಡಿದುಬಿಡ್ತೀನಿ’ ಅಂತ ಹೊರಟಾಗ ವೆಂಕಣ್ಣ ‘ದ್ವೇಷವನ್ನು ಬೆಳೆಸಬೇಡ ಅದರಿಂದ ಏನೂ ಸಿಗಲ್ಲ’ ಅಂತ ಸಮಾಧಾನ ಹೇಳಿದ್ದರು. ಇದರೆಲ್ಲದರ ಪರಿಣಾಮ ಮಂಗಳ-ನಾಗೂ ಇಬ್ಬರೂ ಪರಸ್ಪರ ಮಾತು ಬಿಟ್ಟಿದ್ದರು. ಮೇಷ್ಟ್ರ ಮನೆ ಗೃಹಪ್ರವೇಶಕ್ಕೆ- ಹರಿಸಿನ ಕುಂಕುಮಕ್ಕೆ ಎಲ್ಲರ ಮನೆಗೂ ಆಹ್ವಾನ ಬಂದಿತ್ತು. ಅಮ್ಮನ ಜೊತೆ ಚಿಟ್ಟಿಯೂ ಹೋದಳು. ನಾಗೂ ನಿಮಷಕ್ಕೊಂದು ಬಾರಿ ಒಳಗೆ ಹೋಗುವುದು ಪಾತ್ರೆಯಲ್ಲಿರುವ ಏನಕ್ಕೋ ಕೈ ಹಾಕಿ ತಿನ್ನುವುದು, ಕೈ ನೆಕ್ಕಿಕೊಳ್ಳುವುದು ಮಾಡುತ್ತಲೇ ಇದ್ದಳು. ಚಿಟ್ಟಿಗೆ ಮೇಷ್ಟ್ರು ಗೃಹಪ್ರವೇಶಕ್ಕೆ ಏನೋ ವಿಶೇಷ ಮಾಡಿಸಿದ್ದಾರೆ ಅನ್ನಿಸಿತ್ತಾದರೂ ನಾಗೂ ಹಾಗೆ ಅದನ್ನು ಎಂಜಲು ಮಾಡುತ್ತಿರುವುದು ಅಸಹ್ಯ ಮೂಡಿಸಿತ್ತು.
ಅಮ್ಮನಿಗೆ ಹೇಳೋಣವೆಂದರೆ ನಾಗುವಿನ ಅಮ್ಮನ ಹತ್ತಿರ ಏನೋ ಮಾತನಾಡುತ್ತಿದ್ದಳು. ಹರಿಸಿನ ಕುಂಕುಮದ ಜೊತೆ ದೊನ್ನೆಯಲ್ಲಿ ಗೋಧಿ ಪಾಯಸದಂಥ ಪದಾರ್ಥವನ್ನು ಹಾಕಿ ಎಲಡಿಕೆ ಕೊಟ್ಟರು. ‘ಏನದು?’ ಎಂದು ಕುತೂಹಲದಿಂದ ನೋಡಿದ ಚಿಟ್ಟಿಗೆ ಗಾಬರಿಯಾಯಿತು. ಮಧ್ಯಹ್ನ ಸ್ಕೂಲಲ್ಲಿ ಹಾಲಿನಪುಡಿ, ಸಕ್ಕರೆ ಬೆರೆತಿರುವ ಮೆಕ್ಕೆಜೋಳದ ಹಿಟ್ಟನ್ನು ಕೊಡುತ್ತಿದ್ದರು. ಅದು ರಷ್ಯಾದ ಸರಕಾರ ಸ್ಕೂಲ್ ಮಕ್ಕಳಿಗೆ ಕೊಡ್ತಾ ಇದ್ದಾರೆ ಎನ್ನುವ ಸುದ್ದಿ ಇತ್ತು. ಆ ಹಿಟ್ಟನ್ನು ತಂದು ಮೇಷ್ಟ್ರು ನೀರಲ್ಲಿ ಕಲಿಸಿಟ್ಟಿದ್ದರು. ಅದನ್ನೆ ನಾಗೂ ನಿಮಿಷಕ್ಕೊಂದು ಬಾರಿ ಒಳಗೆ ಹೋಗಿ ತಿಂದು ಬರುತ್ತಿದ್ದುದು! ಹೊರಗೆ ಬಂದವಳೆ ‘ಅಮ್ಮ ಈ ಚರ್ಪನ್ನು ತಿನ್ನಬೇಡ’ ಎಂದು ಅಮ್ಮನ ಕೈಯ್ಯಲ್ಲಿದ್ದ ತಿಂಡಿಯನ್ನು ತೆಗೆದು ತಿಪ್ಪೆಗೆ ಹಾಕಿದ್ದಳು. ‘ಯಾಕೆ?’ ಎಂದು ಅಮ್ಮ ಕೇಳಿದಳಾದರೂ ಚಿಟ್ಟಿಗೆ ‘ನಾಗೂ ತನ್ನ ಕೈಯ್ಯನ್ನು ನೆಕ್ಕಿಕೊಳ್ಳುತ್ತಿದ್ದ ಚಿತ್ರ ನೆನಪಾಗಿ ಅದನ್ನು ಹೇಳಲಿಕ್ಕೂ ಅಸಹ್ಯವೆನ್ನಿಸಿಬಿಟ್ಟಿತ್ತು. ಮನೆಗೆ ಬಂದ ಅಮ್ಮ ‘ಅಲ್ಲ ಈ ಮೇಷ್ಟ್ರಿಗೆ ಏನು ದರಿದ್ರ ಬಡೆದುಕೊಂಡಿದೆ? ಸ್ಕೂಲಲ್ಲಿ ಮಕ್ಕಳಿಗೆ ಕೊಡುವ ಪುಡಿಯನ್ನು ಕಲಿಸಿಟ್ಟಿದ್ದಾರಲ್ಲಾ? ಚಿಟ್ಟಿ ಅದನ್ನ ಎಸೆದೇಬಿಟ್ಟಳು’ ಎಂದು ಅಪ್ಪನ ಎದುರು ಹೇಳಿದಳು. ಹಾಗಾದ್ರೆ ಅಮ್ಮನಿಗೆ ಅವರು ಏನನ್ನು ಕೊಟ್ಟರು ಎನ್ನುವುದರ ಬಗ್ಗೆ ಅಂದಾಜಿದೆ ಎಂದ ಹಾಗಾಯಿತು ಎಂದುಕೊಂಡಳು ಚಿಟ್ಟಿ.
ಮಂಗಳಿಯಾಗಲಿ, ಅವಳ ಮನೆಯವರಾಗಲೀ ಗೃಹಪ್ರೆವೇಶಕ್ಕೆ ಬಂದಿರಲಿಲ್ಲ. ಅದು ಯಾರಿಗೂ ಕೊರತೆಯಾಗಿ ಕಾಡಿರಲಿಲ್ಲ. ತಾನು ನಕ್ಕಿದ್ದರ ಬಗ್ಗೆ ಮಂಗಳಿಗೆ ಅಸಮಾಧಾನವಿದ್ದುದರಿಂದ ಚಿಟ್ಟಿಯನ್ನು ಮಂಗಳಿ ಮಾತನಾದಿಸುತ್ತಿರಲಿಲ್ಲ. ತನಗೆ ನಗು ಬಂತು ಅಷ್ಟೇ. ಅದಕ್ಕೆ ಕಾರಣ ಹಾಗಾಗಲಿ ಎಂದು ಅಂದುಕೊಂಡಿದ್ದೇನೂ ಅಲ್ಲವಲ್ಲ! ಈ ಸತ್ಯ ಮಂಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಚಿಟ್ಟಿ ಕೊರಗಿದಳು. ಮಂಗಳಿ ಕೂಡಾ ನೇರವಾಗಿ ಇವಳನ್ನ ಕೇಳಲಿಲ್ಲ. ‘ಒಂದೊಂದ್ ಸಲ ಹೀಗೆ ಕಣೇ.. . ಆಗಿಬಿಡುತ್ತೇ ಹೋಗಲಿ ಬಿಡು, ಯಾರಾದರೂ ಜಾರಿಬಿದ್ದರೆ ಪಾಪ ಅನ್ನಿಸಿದರೂ ನಗುಬರುತ್ತಲ್ಲ ಹಾಗೇ. . .’ ಎಂದಳು ಭಾರತಿ. ಅದರೂ ತಾನು ಅಪರಾಧ ಮಾಡಿದೆ ಎನ್ನುವ ಹಾಗೇ ಮಾತಾಡಿಸುವುದನ್ನು ಬಿಟ್ಟಳಲ್ಲ ಮಂಗಳಾ ಎನ್ನುವ ನೋವು ಮಾತ್ರ ಅವಳನ್ನು ಕಾಡುತ್ತಲೇ ಇತ್ತು. ವಾರ ಕಳೆಯುವ ಹೊತ್ತಿಗೆ ನಾಗೂ ತನ್ನನ್ನು ನೋಡಲಿಕ್ಕೆ ಯಾವುದೋ ಗಂಡು ಬರ್ತಿದೆ ಎನ್ನುವ ಸುದ್ಧಿಯನ್ನು ತಂದಳು. ನಾಗೂ ಮದುವೆಯಾಗ್ತಾಳೆ ಎನ್ನುವುದು ಎಲ್ಲರಿಗೂ ತಮಾಷೆಯ ವಿಷಯವಾಗಿತ್ತು. ಮಂದ ಮಂದವಾಗಿ ಕಾಣುತ್ತಿದ್ದ ನಾಗೂ ಮಾತಾಡಿದರೆ ಸರಿಯಾಗಿ ಕೇಳುತ್ತಿರಲಿಲ್ಲ. ಅವಳ ದಪ್ಪ ಧ್ವನಿ ಕೇಳುಗರಲ್ಲಿ ತಮಾಷೆಯನ್ನು ಹುಟ್ಟುಹಾಕುತ್ತಿತ್ತು. ಸಿನಿಮಾ ನೋಡಿ ಕಣ್ಣಲ್ಲಿ ತುಂಬಿಕೊಂಡಿದ್ದ ಚಿತ್ರವನ್ನು ನೆನಪಿಸಿಕೊಂಡು ‘ಅಲ್ವೆ ಬಂದವರು ಹಾಡು ಹೇಳು ಅಂತಾರೆ ಯಾವ ಹಾಡು ಹೇಳ್ತೀಯಾ?’ ಎಂದಳು ಚಿಟ್ಟಿ.
ಭಾರತಿ ‘ವಾರ ಬಂತಮ್ಮ ಹಾಡನ್ನ ಚೆನ್ನಾಗಿ ಹೇಳ್ತೀಯ ಅದನ್ನೇ ಹೇಳೆ’ ಎಂದಳು. ಗೊಗ್ಗುರು ಧ್ವನಿಯಿಂದ ‘ವಾರ ಬಂತಮ್ಮಾ. . . ’ ಅಂತ ಹಾಡುತ್ತಿದ್ದರೆ ಮಂಗಳಿಗೆ ಏನೋ ಸಂತೋಷ. ಇದಕ್ಕೆ ಕಾರಣವಾದ ಚಿಟ್ಟಿಯ ಬಗ್ಗೆ ವಿಶೇಷ ಪ್ರೀತಿ ಕೂಡಾ ಮೂಡಿತು. ನಗುತ್ತಿದ್ದ ಎಲ್ಲರನ್ನೂ ನೋಡಿ ಇದ್ದಕ್ಕಿದ್ದ ಹಾಗೇ ಏನನ್ನಿಸಿತೋ ಏನೋ ನಾಗೂ ‘ನಾನ್ ಹೇಳಲ್ಲ. ಎಲ್ಲ ಸೇರಿ ನನ್ನನ್ನು ತಮಾಷಿ ಮಾಡ್ತಿದೀರಾ’ ಎಂದುಬಿಟ್ಟಳು. ಅವಳನ್ನ ಸಮಾಧಾನ ಮಾಡುವ ಹೊತ್ತಿಗೆ ಎಲ್ಲರಿಗೂ ಸಾಕು ಸಾಕಾಗಿ ಹೋಯಿತು. ಆ ಗಲಾಟೆಯಲ್ಲಿ ಮಂಗಳಿ ಚಿಟ್ಟಿಯ ಪರವಾಗಿ ನಿಂತು ವಾದ ಮಾಡಿಬಿಟ್ಟಳು. ಚಿಟ್ಟಿಗೆ ಒಳಗೆ ನಿರಾಳತೆ ತುಂಬಿಕೊಂಡಿತು. ಅದೇ ಗುಂಗಲ್ಲಿ ಭಾರತಿಯ ಮನೆಗೆ ಭಾರತಿ, ಚಿಟ್ಟಿ ಬಂದಳು. ಭಾರತಿಗೆ ಸ್ನಾನದ ಮನೆಯಿಂದ ಸುರೇಶಣ್ಣ ಬರುವುದು ಕಾಣಿಸಿತು. ಅವರ ಮನೆಯ ಬಚ್ಚಲಿಗೆ ಬಾಗಿಲಿರಲಿಲ್ಲ ಒಂದು ಬಟ್ಟೆಯ ತೆರೆ ಮಾತ್ರ ಹಾಕಿದ್ದರು. ಯಾರಾದರೂ ಸ್ನಾನಕ್ಕೆ ಹೋಗುವುದಾದರೆ ಬಾಗಿಲಿಗೆ ಅವರ ಬಟ್ಟೆಯನ್ನು ಹಾಕಿ ತಮ್ಮ ಇರುವನ್ನು ಸಾರುತ್ತಿದ್ದರು. ಸುರೇಶಣ್ಣ ಹೊರಗೆ ಬಂದ ಮೇಲೂ ಒಳಗೆ ಸ್ನಾನ ಮಾಡುವ ಸದ್ದು ಕೇಳುತ್ತಿತ್ತು. ಬಾಗಿಲಿಗೆ ಸೋಮಣ್ಣನ ಹೆಂಡತಿ ಸುಮಾಳ ಸೀರೆ ನೇತಾಡುತ್ತಿತ್ತು. ಭಾರತಿ ದಿಗ್ಭ್ರಾಂತಿಯಿಂದ ಅಣ್ಣನ ಕಡೆಗೆ ನೋಡಿದಳು. ಸುರೇಶಣ್ಣನಿಗೂ ಗಾಬರಿಯಾಗಿರಬೇಕು. ಅದನ್ನ ಸಾವರಿಸಿಕೊಂಡು ಹತ್ತಿರ ಬಂದವನೇ ‘ಏಯ್ ಯಾರಿಗಾದ್ರೂ ಹೇಳಿದ್ರೆ ಅಷ್ಟೇ’ ಎಂದು ಎಚ್ಚರಿಸಿ ಏನೂ ನಡೆದೇ ಇಲ್ಲ ಎನ್ನುವ ಹಾಗೇ ಹೊರಟುಹೋದ. ಚಿಟ್ಟಿ ಭಾರತಿಯತ್ತ ಕುತೂಹಲದಿಂದ ನೋಡಿದಳು, ಅವಳ ಕಣ್ಣಲ್ಲಿ ನೀರಾಡುತ್ತಿತ್ತು.
(ಮುಂದುವರಿಯುವುದು…)

‍ಲೇಖಕರು avadhi

February 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ದೊಡ್ಡವರ ಜಗತ್ತಿನಲ್ಲಿ… « ಅವಧಿ / Avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ದೊಡ್ಡವರ ಜಗತ್ತಿನಲ್ಲಿ… February 25, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: