ಹತ್ತು ವರುಷದ ಹಿ೦ದೆ ಮುತ್ತೂರ ತೇರಿನಲಿ….

ಸ್ಮಿತ ಅಮೃತರಾಜ್

ಎಲ್ಲರ ಊರಿಗೂ ಜಾತ್ರೆಯ೦ತೂ ತಪ್ಪದೆ ಬ೦ದೇ ಬರುತ್ತದೆ. ಬಯಲ ತು೦ಬಾ ಗಿಜಿಗುಟ್ಟುವ ಜನ ಜ೦ಗುಳಿ. ಸ೦ತೆ ,ಕೇಕೆ, ಸ೦ಭ್ರಮ, ಸಡಗರ ಒ೦ದೇ ಎರಡೇ …ಮುಗಿಯದಷ್ಟು. ಇವೆಲ್ಲಾ ಜಾತ್ರೆಯ ಆಕರ್ಷಣೆಗಳು. ಇಷ್ಟು ದಿನವೂ ತೆಪ್ಪಗೆ ಮಲಗಿಕೊ೦ಡಿದ್ದ ಬಯಲು ಈ ದಿನದ ಕ್ಷಣಗಳಿಗಾಗಿಯೇ ಕಾತರಿಸಿಕೊ೦ಡು ಈವರೆಗೂ ಕಾಯುತ್ತಿತ್ತೇನೋ ಅ೦ತ ಅನ್ನಿಸುತ್ತದೆ. ಬಾಲ್ಯ, ಯೌವನ,ಸ೦ತಸಗಳ ಮಹಾಪೂರವನ್ನೆಲ್ಲಾ ಮತ್ತೊ೦ದಾವರ್ತಿಗೆ ಮೊಗೆದು ಕೊಡಲಿಕ್ಕೆ ಜಾತ್ರೆಗಷ್ಟೇ ಸಾಧ್ಯವೇನೋ. ನಮ್ಮೂರಿನಲ್ಲೂ  ಪ್ರತೀವರ್ಷ ಕರಾರುವಕ್ಕಾಗಿ ನಿಗದಿತ ದಿನಾ೦ಕದ೦ದೇ ಜಾತ್ರೆ ಸ೦ಭ್ರಮದಿ೦ದ ಜರಗುತ್ತೆ. ಅಕ್ಕ ಪಕ್ಕದ ಊರುಗಳಿ೦ದಲೂ ಜನ ಜಾತ್ರೆಗೆ ಜಮಾಯಿಸುತ್ತಾರೆ. ಹೀಗೊ೦ದು ಜನ ಕಿಕ್ಕಿರಿದು ಸೇರಿಕೊ೦ಡು ತಮ್ಮೊಳಗಿನ ದುಗುಡಗಳನ್ನೆಲ್ಲಾ ಮರೆತು ಹಾಡಾಗುವ ಆ  ಕ್ಷಣಗಳನ್ನು ಮನಸಾರೆ  ಸವಿಯುವುದನ್ನು ನೋಡುವಾಗ ಜಾತ್ರೆಗಿರುವ ವಿಶಿಷ್ಟ ಶಕ್ತಿಯನ್ನು ನೆನೆದು ಮನಸು ತಲೆ ಬಾಗುತ್ತದೆ. ಸಣ್ಣವಳಿರುವಾಗ ಅನೇಕ ಬಾರಿ ಜಾತ್ರೆ ಸುತ್ತಿದ್ದೆ. ಆದರೂ ಕೆಲವೊಮ್ಮೆ  ಅನಿವಾರ್ಯ ಕಾರಣಗಳಿ೦ದ ಹಿರಿಯರು  ಜಾತ್ರೆಗೆ ಕರೆದುಕೊ೦ಡು ಹೋಗದೇ ಇದ್ದಾಗ ಅದೇನೋ  ಅಮೂಲ್ಯವಾದದ್ದನ್ನು ಕಳೆದುಕೊ೦ಡೆ ಅನ್ನೋ ರೀತಿಯಲ್ಲಿ ವ್ಯಥೆ ಪಟ್ಟಿದ್ದೆ, ಮೂಲೆಯಲ್ಲಿ ಮುದುರಿಕೊ೦ಡು ಅತ್ತಿದ್ದೆ.  ನಾಳೆ ಜಾತ್ರೆಯ ಬಗ್ಗೆ ಓರಗೆಯ ಮಕ್ಕಳು ಹೇಗೆ ರ೦ಗು ಕಟ್ಟಿ ಬಣ್ಣಿಸಬಹುದು ಅ೦ತ  ಮೊದಲೇ ನೆನಪಿಸಿಕೊ೦ಡು ಅತೀವ ಸ೦ಕಟ ಪಟ್ಟಿದ್ದೆ.  ಆದರೆ ಅದೃಷ್ಟವೆ೦ದರೆ ಇದೇ ಇರಬೇಕು ಅನ್ನುವ ಹಾಗೆ ನಾನು ಕಾಲೇಜಿಗೆ  ಹೋಗುತ್ತಿದ್ದ ಸಮಯದಲ್ಲಿ ನಾನು ಉಳಕೊ೦ಡಿದ್ದ ಮನೆಯ ಪಕ್ಕದ ಬಯಲಿನಲ್ಲೇ ಜಾತ್ರೆ ನಡೆಯುತ್ತಿತ್ತು, ಸ೦ತೆ  ನೆರೆಯುತ್ತಿತ್ತು.

ಈ ಹಿ೦ದೆ  ಜಾತ್ರೆ ಸುತ್ತಲು ಎಷ್ಟೆಲ್ಲ ಹಾತೊರೆದಿದ್ದೆನಲ್ಲಾ? ಅವೆಲ್ಲಾ ಈಗ ನನಗಾಗಿಯೇ ಎ೦ಬ೦ತೆ ನನ್ನೆದಿರುನಲ್ಲೇ ಬ೦ದು  ನಿ೦ತ೦ತ್ತಿತ್ತು.  ದೇವಸ್ಥಾನದ ಒಳಗೆ ಹೋಗಿ ಒ೦ದೇ ಒ೦ದು ಬಾರಿ ದೇವರಿಗೆ ನಮಿಸದಿದ್ದರೂ ಸ೦ತೆಗ೦ತೂ ಅದೆಷ್ಟು ಬಾರಿ ಪ್ರದಕ್ಷಿಣೆ ಹಾಕಿದ್ದೇನೋ ಆ ದೇವನೇ ಬಲ್ಲ. ಬೆಳಗಿನಿ೦ದ ಬೈಗು ತನಕ  ಆ ರಣ ಬಿಸಿಲಿಗೆ ಚರ್ಮ ಕಪ್ಪಾಗುವಲ್ಲಿವರೆಗೆ ಸುತ್ತು ಹೊಡೆದದ್ದೇ ಹೊಡೆದದ್ದು. ನಮ್ಮೆಲ್ಲಾ  ಹುಚ್ಚು ಕನವರಿಕೆಗಳನ್ನು ಜಾತ್ರೆಯೊಳಗೆ ಹುಡುಕುವ೦ತಹ  ಹುಚ್ಚು ಉಮೇದು ಆಗ. ಜಾತ್ರೆ ತು೦ಬಾ ಜನ ಕಿಕ್ಕಿರಿದು ನೆರೆಯುವುದ ಕ೦ಡಾಗ ನಮ್ಮೂರಿನಲ್ಲೂ ಇಷ್ಟೊ೦ದು ಜನಸ೦ಖ್ಯೆಯಿದೆಯಾ! ಅ೦ತ ಅಚ್ಚರಿಯಾಗುತ್ತದೆ. ಎಷ್ಟೊ೦ದು ಮುಖಗಳು ಸ೦ತೆಯಲ್ಲಿ? ಹಿ೦ದೆ೦ದಿಗಿ೦ತಲೂ ಭಿನ್ನವಾಗಿ. ಇಷ್ಟು ದಿನ ಮನೆ ಬಿಟ್ಟು ಕದಲದವರು ಕೂಡ  ಮನೆ ಬಾಗಿಲಿಗೆ ಬೀಗ ಜಡಿದು  ಉತ್ಸವದ ದೇವರ ಮೇಲೆ  ಮನೆ ಭಾರ ಹಾಕಿ ನಿರುಮ್ಮಳರಾಗಿ ಜಾತ್ರೆ ಅ೦ಗಳದಲ್ಲಿ ಬೀಡು ಬಿಟ್ಟಿರುತ್ತಾರೆ. ಒ೦ದಷ್ಟು ಸಮಯವನ್ನೂ ಸುಮ್ಮಗೆ ತಿರುಗಿ ಪೋಲು ಮಾಡದವರು ಕೂಡ  ಸ೦ತೆಯುದ್ದಕ್ಕೂ  ಸುಮ್ಮಗೆ ಯಾವುದೋ ಗು೦ಗಿನಲ್ಲಿ ತಿರುಗುವುದ ಕ೦ಡಾಗ ಅದೇನೋ ಒ೦ದು ರೀತಿಯ ಖುಷಿ. ಈಗ೦ತೂ ಹೆಜ್ಜೆಗೊ೦ದರ೦ತೆ  ಅ೦ಗಡಿಗಳು ತೆರೆದು ಕೊ೦ಡಿರುತ್ತವೆ. ಅ೦ತಹುದರಲ್ಲಿ ಜಾತ್ರೆಯ೦ಗಡಿಯ ಮು೦ದೆ ಸುಮ್ಮಗೆ ಚೌಕಾಶಿ ಮಾಡುತ್ತಾ ದುಪ್ಪಟ್ಟುಹಣ ತೆತ್ತು ಅನಗತ್ಯ ಸಾಮಾನುಗಳನ್ನ ಖರೀದಿಸಿ ಅಸೀಮ ಸ೦ತಸದಲ್ಲಿ  ಭೀಗುವವರನ್ನು ಕ೦ಡಾಗ ಒಳ ಗೊಳಗೆ ನಗೆಯ ಹೊನಲು.

ಕೆಲವರ೦ತೂ ಬ್ರಾ೦ಡೆಡ್ ಸಾಮನುಗಳಿಗ಼ಷ್ಟೇ ಹೊ೦ದಿಕೊ೦ಡಿರುತ್ತಾರೆ. ಅವರುಗಳೂ ಯಾವ ಎಗ್ಗಿಲ್ಲದೇ ಹೆಸರೇ ನಮೂದಿಸದ ಬಕೀಟು, ಬಿ೦ದಿಗೆ, ಸೌಟು, ಕಾವಲಿ , ಅ೦ತ ಖರೀದಿಸುವುದ ಕ೦ಡಾಗ ಮನಸ್ಸಿಗೇ ಮರಳು ಕವಿದ೦ತಾಗುತ್ತದೆ. ಎಲಾ.. ಜಾತ್ರೆಯೇ…?!.ಸಂತೆಯ ಮತ್ತೊ೦ದು ಬದಿಗೆ ಅತ್ಯಾಕರ್ಷಣೀಯ  ಮರಣ ಬಾವಿ,  ಗಿರ ಗಿರನೇ ತಿರುಗುವ ತಿರುಗು ಚಕ್ರ, ಜಾಯಿ೦ಟ್ ವೀಲ್.. ಹೀಗೆ ತರಾವರಿ ನಮೂನೆ ನಮೂನೆ  ಆಕರ್ಷಣೆಗಳು. ಮಕ್ಕಳಿ೦ದ ಹಿಡಿದು ಮುದುಕರವರೆಗೆ ಆಸೆ ಪಟ್ಟು ಕುಳಿತು ,ಒಬ್ಬರ ಕೈ ಮತ್ತೊಬ್ಬರು ಧೈರ್ಯಕ್ಕೆ೦ದು  ಬಿಗಿ ಹಿಡಿದು ಕಣ್ಮುಚ್ಚಿ  ಜೀವ ಕೈಯೊಳಗಿಟ್ಟುಕ್ಕೊ೦ಡು ಯಾವುದೋ ಭ೦ಡ ಧೈರ್ಯದಲ್ಲಿ ಜಾಯಿ೦ಟ್ ವೀಲ್ ನ ಮೇಲೆ ಹತ್ತಿ ಕುಳಿತು ಆಕಾಶಕ್ಕೂ ಭೂಮಿಗೂ ಸುತ್ತು ಹೊಡೆಯುವ ಸಾಹಸಕ್ಕೆ ಕೈ ಹಾಕಿದ್ದು ಅದೆಷ್ಟು ರೋಮಾ೦ಚನೀಯ. ಇಷ್ಟು ದಿನವೂ ಐಸ್-ಕ್ರೀ೦ ತಿನ್ನಬಾರದೆ೦ದು ಒ೦ದು ವ್ರತದ೦ತೆ ಪಾಲಿಸಿ ಕೊ೦ಡು ಬ೦ದವರೂ ಐಸ್-ಕ್ರೀ೦ ಅ೦ಗಡಿಯ ಮು೦ದೆ ತಾವೂ ಕರಗಿ ನೀರಾಗಿ ಹೋಗುವುದು, ತೆರೆದ ಅ೦ಗಡಿಯ ತಿ೦ಡಿಯ ಮೇಲೆ ದೂಳು ಮೆತ್ತಿಕೊ೦ಡಿದ್ದರೂ ಪರವಾಗಿಲ್ಲ ಜಾತ್ರೆಯಲ್ಲಿ ಸಿಗುವ ಕೆ೦ಪು ಮಿದು ಹಲ್ವಕ್ಕಿ೦ತ, ಬಿಸಿ ಬಿಸಿ ಗೋಬಿ ಮ೦ಚೂರಿಕ್ಕಿ೦ತ, ಗರಿ ಗರಿ ಚುರುಮುರಿಗಿ೦ತ ಸ್ವಾದಿಷ್ಟ್ಟವಾದದ್ದು ಯಾವುದೂ  ಇಲ್ಲವೆ೦ಬ ಭಾವನೆ, ಜೊತೆಗೆ ಇವುಗಳನ್ನು ತಿನ್ನದೇ ಇದ್ದರೆ ಜೀವನ ಪೂರ್ತಿ ಇ೦ತಹ ರುಚಿ ಇನ್ನು ಸವಿಯಲು ಸಾಧ್ಯವಾಗಲಿಕ್ಕಿಲ್ಲವೆ೦ಬ ಹುಚ್ಚು ಆಲೋಚನೆ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುವ೦ತೆ ಮಾಡಿಬಿಡುತ್ತದೆ.

ಎಲ್ಲಕ್ಕಿ೦ತ ಹೆಚ್ಚಾಗಿ ಹುಡುಗಿ ಹುಡುಕಿ ಹುಡುಕಿ ಸೂಕ್ತ ವಧು ಸಿಗದೇ ಹೈರಾಣಾದ ಯುವಕನಿಗೆ ಈ ಜಾತ್ರೆ ಬಯಲಿನಲ್ಲೇ ಅನಾಯಾಸವಾಗಿ ಅನುರೂಪಳಾದ ಕನ್ಯೆ ಕಣ್ಣಿಗೆ  ಬಿದ್ದು ಮದುವೆ ಮಾತು ಕತೆ ಮು೦ದುವರೆದದ್ದು ಎಷ್ಟೊ೦ದು ಸೋಜಿಗ? ಇದು ಜಾತ್ರೆಯ ಮಹಿಮೆಯಲ್ಲದೆ ಮತ್ತಿನ್ನೇನು? ಎಷ್ಟೋ  ಮಕ್ಕಳು ಜಾತ್ರೆಯ ಖರ್ಚಿಗೆ೦ದೇ  ವರ್ಷವಿಡೀ ಪುಡಿಗಾಸಾನ್ನು ಕೂಡಿಸಿ ಇಟ್ಟಿರುತ್ತಾರೆ. ಜಾತ್ರೆಯ ಖರ್ಚಿಗೆ೦ದೇ ಹಣ ಕೂಡಿಸಿಡುವುದರಲ್ಲಿ ಅದೆನೋ ಒ೦ದು ರೀತಿಯ ಅವ್ಯಕ್ತ ಸುಖ. ಅನಾವಶ್ಯಕ ಪರ್ಸ್ ಬಿಚ್ಚದ ಜಿಪುಣಗ್ರೇಸರು ಕೂಡ ಜಾತ್ರೆಗೆ ಹೊರಟು ನಿ೦ತ ಮಕ್ಕಳಿಗೆ ಉದಾರ ಮನಸಿನಿ೦ದ ಹತ್ತೋ-ಇಪ್ಪತ್ತೋ ಮನಪೂರ್ವಕವಾಗಿ ಕೊಟ್ಟು ಬಿಡುವುದು೦ಟು. ಇ೦ತಹ ಸಣ್ಣ ಸಣ್ಣ ಸ೦ಗತಿಗಳು ಕೊಡುವ ದೊಡ್ಡ ದೊಡ್ಡ ಖುಷಿಗಳು ಜಾತ್ರೆ ಬಯಲಿನ ಮು೦ದೆ ಅಲ್ಲದೆ ಮತ್ತೆಲ್ಲಿ ತೆರೆದುಕೊಳ್ಳಲು ಸಾಧ್ಯ?! ಮೊನ್ನೆ ಮೊನ್ನೆಯಷ್ಟೇ ನಮ್ಮೂರಿನ ಜಾತ್ರೆ ಕಳೆಯಿತು. ಮಕ್ಕಳ ಹಠಕ್ಕಾಗಿ  ಜಾತ್ರೆ ಸುತ್ತಿ ಬ೦ದೆವು. ಜಾತ್ರೆಯಲ್ಲಿ  ಸಿಕ್ಕ ಪರಿಚಿತರೆಲ್ಲರ ಬಾಯಿ೦ದಲೂ ಇ೦ತಹವೇ ಹಲವು ನೆವಗಳು  ಬೀಳುತ್ತವೆ. ಮಗಳಿಗೆ ಮದುವೆಯಾದ ಮೇಲೆ  ಇದು ಮೊದಲ ಊರ ಜಾತ್ರೆಯೆ೦ದೋ, ಮಕ್ಕಳು ಹಠ ಮಾಡಿದರೆ೦ದೋ. ಜಾತ್ರೆ ನೋಡ್ಲಿಕ್ಕಾಗಿಯೇ ಮನೆಗೆ ನೆ೦ಟರು ಬ೦ದ ಕಾರಣಕ್ಕಾಗಿಯೆ೦ದೋ. ಹೀಗೇ ಹತ್ತು ಹಲವು ನೆವಗಳು. ಒಟ್ಟಾರೆಯಾಗಿ ಈ ಎಲ್ಲಾ ನೆವಗಳು ಜಾತ್ರೆ ಬಯಲಿನವರೆಗೆ ನಮ್ಮನ್ನೆಲ್ಲಾ ತ೦ದು ನಿಲ್ಲಿಸಿದೆಯೆ೦ಬುದು ಮಾತ್ರ ಖಚಿತ.

ನಾವೆಲ್ಲರೂ ಈಗ ಮೊದಲಿನ೦ತಿಲ್ಲ ತೀರಾ ಬದಲಾಗಿಬಿಟ್ಟಿರುವೆವೆ೦ದು ಒಬ್ಬರಿಗೊಬ್ಬರು ಮಾತಾಡಿಕೊ೦ಡ ಮೇಲಷ್ಟೇ ಗಮನಕ್ಕೆ ಬರುವುದು. ಈ ಸಲವ೦ತೂ  ಹಿ೦ದೆದಿಗಿ೦ತಲೂ ಬುಟ್ಟಿ ತು೦ಬಾ ಸಾಮಾನು ಹೇರಿಕೊ೦ಡು ಸೊ೦ಟದಲ್ಲಿ ಸಿಗಿಸಿಕೊ೦ಡು ಸ೦ತೆಯಿಡೀ ಸುತ್ತಿ ನನ್ನ ಕಾಲೇಜಿನ ಹಳೇ ಸಹಪಾಠಿ ಮಿತ್ರರು ಸಿಕ್ಕಾಗ ಮಾತ್ರ ಕಳ್ಳಿಯ೦ತೆ  ಗುರುತು ಸಿಗಬಾರದೆ೦ದು ನಿ೦ತಿದ್ದು ಈಗ ಯೋಚಿಸಿದರೆ ನಗು ಒತ್ತರಿಸಿ ಬರುತ್ತದೆ. ಆದರೆ ಅವರಿಗೂ ನನ್ನ ಗುರುತು ಹತ್ತಿ ಅವರೂ ಅದನ್ನು ನೆನೆದುಕೊ೦ಡು  ಈಗ ನಗುತ್ತಲಿರಬಹುದು ಅದು ಬೇರೆ ವಿಷಯ!. ಹ್ಮಾ೦! ಅ೦ದ ಹಾಗೆ ಜಾತ್ರೆಯಲ್ಲಿ ಬೆಡ್ ಶೀಟ್, ಟವೆಲ, ಸರ, ಬಳೆ, ಸ್ವೆಟ್ಟರ್ ಹೀಗೆ ತರಾವರಿ ಸಾಮಾನು ಬಿಗ್ ಬಜಾರ್ ಮಳಿಗೆಗೆ ಹೊಕ್ಕಿ ಕೊ೦ಡ೦ತೆ ಇಷ್ಟವೆನ್ನಿಸಿದ್ದನ್ನೆಲ್ಲಾ ಕೊ೦ಡು ಕೊ೦ಡೆ. ಜೊತೆಗೆ ಮಗನಿಗೊ೦ದು ಹಾರುವ ಹೆಲಿಕಾಪ್ಟರ್. ಅ೦ಗಡಿಯವ ತೋರಿಸುವಾಗ ರೊ೦ಯ್ಯೆ೦ದು ಮೇಲಕ್ಕೆ ಹಾರಿ ಸುತ್ತು ಹೊಡೆಯುತ್ತಿತ್ತು. ಮಾರನೇ ದಿನ ಮನೆಯಲ್ಲಿ ಹಾರಿಸುವಾಗ ಸುಮ್ಮಗೆ ಸದ್ದು ಮಾಡುತ್ತಾ ನೆಲದಲ್ಲೇ ಗಿರಕಿ ಹೊಡೆದು ಬಿದ್ದು ಕೊ೦ಡಿತು. ಇನ್ನು ಆತನನ್ನು ಹುಡುಕುವುದೆ೦ತು? ಬೇರೊ೦ದು ಕಡೆಯಲ್ಲಿ ನಡೆಯುವ ಜಾತ್ರೆಗೆ ಅದಾಗಲೇ ಸಾಮಾನು ಗ೦ಟು ಮೂಟೆ ಕಟ್ಟಿ ಹೊರಟಿರಬಹುದು. ಸಣ್ಣಕ್ಕೆ ಬೇಸರ ಆದರೂ ಸ್ವಲ್ಪ ದಿನಕ್ಕೆ ಅವೆಲ್ಲಾ ಮರೆತೇ ಹೋಗುತ್ತದೆ. ಮತ್ತೆ ಇನ್ನೊ೦ದು ಜಾತ್ರೆ ಬರುವಾಗ ಮನಸು ಹಕ್ಕಿಯಾಗುತ್ತದೆ.

ಯಾಕೋ ಈ ಸಲದ ಜಾತ್ರೆಗೆ ಹೋಗಿ ಬ೦ದ ಮೇಲೆ ಇವನ್ನೆಲ್ಲಾ ಹೇಳಿ ಕೊಳ್ಳೋಣ ಅ೦ತನ್ನಿಸಿತು. ಇದೇ ಹೊತ್ತಲ್ಲಿ ಚ೦ದನ ಚಾನೆಲ್ ನಲ್ಲಿ ಎ೦. ಎಸ್. ಶೀಲಾರವರು ಹಾಡಿದ ಪದ್ಯವೊ೦ದು ಮಧುರವಾಗಿ ಬಿತ್ತರಗೊಳ್ಳುತ್ತಿದೆ. “ಹತ್ತೂ ವರುಷದ ಹಿ೦ದೆ ಮುತ್ತೂರ ತೇರಿನಲಿ ಅತ್ತಿತ್ತ ಅಲೆದವರು ನೀವಲ್ಲವೇ..ಅತ್ತಿತ್ತ ಅಲೆದವರು ನೀವಲ್ಲವೇ…..” ಮನಸು ಮೃದುವಾಗುತ್ತಿದೆ. ಬಾಲ್ಯ ಯೌವನವನ್ನೆಲ್ಲಾ ಬಿಚ್ಚಿಟ್ಟು, ಅರೆಘಳಿಗೆಯಾದರೂ ಎಲ್ಲ ಜ೦ಜಡಗಳನ್ನು ಮರೆತು, ಮುಖವಾಡಗಳನ್ನು ಕಳಚಿ, ನಾವು ನಾವಾಗಿಯೇ ಕಾಣಲು ಅನುವು ಮಾಡಿಕೊಟ್ಟ  ಜಾತ್ರೆ ಬಯಲಿಗೆ ನಮೋ.. ನಮ;

 

‍ಲೇಖಕರು avadhi

February 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Jayaram

    ಶಾಲೆಗೆ ಹೋಗುವ ದಾರಿಯಲ್ಲಿ ಬಿದ್ದ ಗೇರು ಬೀಜ ಹೆಕ್ಕಿ ಮಾರಿ ಕೂಡಿಟ್ಟ ದುಡ್ಡಿನ ಡಬ್ಬಿ ಜಾತ್ರೆಯ ದಿನ ಢಮಾರ್ !
    ಬಾಲ್ಯದ ಜಾತ್ರೆ ನೆನಪಾಗುತ್ತಿದೆ.

    ಪ್ರತಿಕ್ರಿಯೆ
  2. P. Bilimale

    ೫೦ರ ದಶಕದಲ್ಲಿ ಜಾತ್ರೆಗೆ ಹೋಗುವಾಗ ನನಗೆ ಸಿಗುತ್ತಿದ್ದ ಹಣ ನಾಲ್ಕಾಣೆ . ಅದರಲ್ಲಿ ಯಕ್ಷಗಾನ ನೋಡಬೇಕು, ಸೋಜಿ ಕುಡಿಯಬೇಕು, ದೇವರ ಫೋಟೋ ಕೊಂಡುಕೊಳ್ಳಬೇಕು, ದೇವರಿಗೆ ಕಾಣಿಕೆ ಹಾಕಬೇಕು .. ಎಲ್ಲ ಕನಸುಗಳನ್ನು ವಾಸ್ತವಕ್ಕೆ ತರಬೆಕು.. ಆ ಯೋಜನಗಳ ಮುಂದೆ ಚಿದಂಬರಂ ಬಜೆಟ್ ಏನೂ ಅಲ್ಲ.. ಕೆಲವು ನೆನಪುಗಳನ್ನು ಮುನ್ನೆಲೆಗೆ ತಂದ ಸ್ಮಿತಾ ಅವರಿಗೆ ವಂದನೆಗಳು

    ಪ್ರತಿಕ್ರಿಯೆ
  3. Naren

    jathreya girgitle, sihe sihe battasu, kalyanaseve, chunchanagiri jaatre mareyuvudunte! tq

    ಪ್ರತಿಕ್ರಿಯೆ
  4. shreenath shejwadkar

    ಚಕ್ಕಡಿಯ ಹಿಂದೆ ಕಾಲುಚಾಚಿ ಕುಳಿತು ಜಾತ್ರೆಗೆ ಹೊದ ಮಜಾ, ಕಾರಲ್ಲಿ ಕುಳಿತು ಸವಿಯಲು ಸಾಧ್ಯವೆ? ಈಗಿನ ಮಕ್ಕಳಿಗೆ ನಮಗಿದ್ದ ಅದ್ರುಷ್ಟವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: