ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಊಫಿಟ್!

(ಇಲ್ಲಿಯವರೆಗೆ…)

ಅದ್ದುವಿನ ಶೆಡ್ ಮನೆಯ ಬಾಗಿಲಲ್ಲಿ ಸಿಕ್ಕ ರೆಹಮಾನ ಓಡಿಬಂದ ಚಿಟ್ಟಿಯನ್ನು ಒಂದು ಥರಾ ನೋಡಿದ. ಚಿಟ್ಟಿಗೆ ಕಸಿವಿಸಿಯಾದರೂ ಅದ್ದು ಮನೆಯಲ್ಲಿಲ್ಲದ ಕಾರಣ ಚಿಟ್ಟಿ ಜೀನತ್‌ಗೆ ಹೀಗಾಗಿದೆ ಎನ್ನುವುದನ್ನು ಅವನಿಗೆ ವಿವರಿಸಿ ಹೇಳಿದಳು. ಕಾಲೇಜು ಓದುತ್ತಿದ್ದ ರೆಹಮಾನ ಬಸ್‌ಗೆ ಅಂತ ಕಾಯುತ್ತಾ ನಿಂತಿದ್ದಾಗ ಚಿಟ್ಟಿ ಅವನನ್ನು ಗಮನಿಸಿದ್ದಳು. ಮಹಾನ್ ಶೋಕೀವಾಲಾ. ಬೆಳ್ಳಗೆ ತೆಳ್ಳಗೆ ಇದ್ದ ಅವನ ಕಣ್ಣುಗಳಲ್ಲಿ ಒಂದು ಬಗೆಯ ಚಂಚಲತೆ ಇತ್ತು, ಸಿಡುಕಿತ್ತು. ಚಿಟ್ಟಿಯ ಮಾತೆಲ್ಲವನ್ನೂ ಕೇಳಿಸಿಕೊಂಡ ಅವನು ‘ಯಾರಿಗೆ ಏನಾದರೆ ನಮಗೇನು?’ ಎಂದು ಗೊಣಗುತ್ತಿರುವಾಗಲೇ ಅಷ್ಟರಲ್ಲಿ ಒಳಗಿನಿಂದ ಬಂದ ನಬೀಲಾ ‘ಯಾ ಅಲ್ಲಾ ಹೆಣ್ಣು ಅಂದ್ರೆ ಹೆಣ್ಣೆ. ಈ ಹೊತ್ತಲ್ಲಿ ಯಾರಾದ್ರೂ ದ್ವೇಷ ಮಾಡ್ತಾರಾ ರೆಹಮಾನ್? ಅವಳಿಗೀಗ ನಮ್ಮ ಅಗತ್ಯ ಇದೆ’ ಎಂದಳು. ಕೊಸರಾಡುತ್ತಿದ್ದ ಅವನನ್ನು ತನ್ನ ಜೊತೆ ಕರೆದುಕೊಂಡು ಹೊರಟಳು. ಸದ್ಯ ನಬೀಲಳಿಂದಲಾದ್ರೂ ಒಳ್ಳೆಯದಾಯಿತಲ್ಲ!  ಇಲ್ಲ ಅಂದಿದ್ರೆ ಅದ್ದುವನ್ನು ಹುಡುಕಿಕೊಂಡು ತಾನೆಲ್ಲಿಗೆ ಹೋಗಬೇಕಿತ್ತು? ಹಾಗೇ ಅವನನ್ನು ಕರೆದುಕೊಂಡು ಬರುವ ಹೊತ್ತಿಗೆ ಜೀನತ್‌ಗೆ ಏನಾದ್ರೂ ಆಗಿಬಿಟ್ಟಿದ್ದಿದ್ದರೆ… ಎಂದು ನಿಟ್ಟುಸಿರು ಬಿಟ್ಟು ಅವರ ಹಿಂದೆ ಹೆಜ್ಜೆ ಹಾಕಿದಳು ಚಿಟ್ಟಿ.
ಜೀನತ್ ಬಳಿಗೆ ಓಡಿಬಂದ ನಬೀಲಾ ಅವಳಿಗೆ ತಾನೇ ನಿಂತು ಆರೈಕೆ ಮಾಡಿದಳು. ಅವಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಹಣೆ ಸವರಿ ‘ನೀರು ಕುಡೀತೀಯಾ?’ ಎಂದು ಕೇಳಿದಳು. ಜೀನತ್‌ಳ ಕಣ್ಣು ತುಂಬಿ ಬಂತು ‘ಅಕ್ಕ’ ಎಂದಳು. ನಬೀಲಾಳ ಮುಖದಲ್ಲೂ ದುಃಖ ಮಡುಗಟ್ಟಿತು. ಮಾತು ಮರೆಸುವವಳಂತೆ ಚಿಟ್ಟಿಗೆ ‘ನೀನು ಹೊರಗಿರೆ ಇದನ್ನೆಲ್ಲಾ ನೋಡಬಾರದು’ ಎಂದು ಕಳಿಸಿ ನರ್ಸ್ ಸಿಸಿಲಿಯಾಗೆ ರೆಹಮಾನ್ ಕೈಲೇ ಹೇಳಿಕಳಿಸಿ, ಜೀನತ್‌ಗೆ ನೋವು ತಡೆಯುವಂತೆ ಹೇಳುತ್ತಾ ಅವಳ ಹೊಟ್ಟೆಯನ್ನು ನೇವರಿಸತೊಡಗಿದಳು. ತಾನು ನೋಡಬಾರದ್ದು ಅಲ್ಲೇನು ನಡೆಯುತ್ತೇ? ಚಿಟ್ಟಿಗೆ ಕುತೂಹಲ.
ನೀಟಾಗಿ ಒಗೆದ ತನ್ನ ಸೀರೆಯನ್ನು ಮತ್ತೆ ಮತ್ತೆ ತೀಡುತ್ತಾ ಸಿಸಿಲಿ ತನ್ನ ಪೆಟ್ಟಿಗೆಯ ಜೊತೆ ಒಳಗೆ ಬಂದವಳೇ ಮನೆಯ ಬಾಗಿಲನ್ನು ಧಡಾರೆಂದು ಹಾಕಿಕೊಂಡಳು. ಚಿಟ್ಟಿಗೆ ಎಲ್ಲಾ ಸಿನಿಮಾ ಥರವೇ ಅನ್ನಿಸಿಬಿಟ್ಟಿತ್ತು. ಬಾಗಿಲ ಹಿಂದಿನಿಂದ ಬರುವ ಮಗುವಿನ ಅಳುವಿಗಾಗಿ ಕಾಯುತ್ತಾ ಕುಳಿತಳು. ಅಷ್ಟರಲ್ಲಿ ಅಲ್ಲಿಗೆ ಅದ್ದು ಕೂಡಾ ಬಂದ. ರೆಹಮಾನ್‌ನನ್ನು ಅಲ್ಲಿ ನೋಡಿ ಅಸಮಾಧಾನಗೊಂಡರೂ ನಬೀಲಾಳೇ ಜೀನತ್‌ಗೆ ಆರೈಕೆ ಮಾಡುತ್ತಿದ್ದಾಳೆ ಎನ್ನುವ ವಿಷಯ ಕೇಳಿ ಸ್ವಲ್ಪ ನೆಮ್ಮದಿಯೆನ್ನಿಸಿತು. ಒಳಗೆ ನೋವು, ಚೀರಾಟ ಕೇಳುತ್ತಲೇ ಇತ್ತು.
ಎರಡು ಮೂರು ಸಲ ನಬೀಲಾ ಒಳಗೆ ಹೊರಗೆ ಓಡಾಡಿದಳು. ಅದ್ದು ಅವಳನ್ನು ಮಾತಾಡಿಸಲು ಯತ್ನಿಸಿದನಾದರೂ ಅವಳು ಮಾತಾಡಲಿಲ್ಲ. ಯಾಕೋ ಅದ್ದುವಿನ ಮುಖ ಇನ್ನಷ್ಟು ಕಳೆಗುಂದಿ ಆಕಾಶವನ್ನು ನೋಡಿತು. ಇದೆಲ್ಲಾ ಸ್ವಲ್ಪಹೊತ್ತು ಅಷ್ಟೇ. ಬಾಗಿಲ ಹಿಂದಿನಿಂದ ಮಗು ಅತ್ತುಬಿಟ್ಟಿತು. ಹೊರಬಂದ ನರ್ಸ್ ಸಿಸಿಲಿಯಾ ಮುಖದಲ್ಲಿ ನಗುವನ್ನು ಅರಳಿಸುತ್ತಾ ‘ಗಂಡು ಮಗು’ ಎಂದಳು. ಅದ್ದು ಹಿಗ್ಗಿ ಹೀರೇಕಾಯಿಯಾಗಿ ಹಿಂದು ಮುಂದೆ ನೋಡದೆ ತನ್ನ ಜೇಬಿನಿಂದ ನೂರು ರೂಪಾಯಿಯನ್ನು ತೆಗೆದು ಕೊಟ್ಟುಬಿಟ್ಟಿದ್ದ. ಹಿಂದೆ ಬಂದ ನಬೀಲಾ ಮುಖದಲ್ಲಿ ಎಂಥದ್ದೊ ಪ್ರಸನ್ನತೆ. ಒಳಗೆ ಮಗುವನ್ನು ನೋಡಲು ಹೋಗುವ ಮೊದಲು ಅದ್ದು ನಬೀಲಾಳ ಕೈಗಳನ್ನ ಹಿಡಿದು ಅತ್ತುಬಿಟ್ಟಿದ್ದ. ನಬೀಲಾ ‘ಮಗು ಹುಟ್ಟಿದೆ ಈಗ್ಯಾಕೆ ಅಳು?’ ಎಂದು ಸಮಾಧಾನ ಮಾಡಿದಳು. ಚಿಟ್ಟಿಗೆ ಈ ಆತ್ಮೀಯತೆಯನ್ನು ಪರಿಯನ್ನು ನೋಡಿ ಅಚ್ಚರಿ. ‘ನಿನ್ನ ಹಾಗೆ ಮಗುವೊಂದು ಹುಟ್ಟಲಿ, ಅವಳ ಹೊಟ್ಟೆ ಉರಿಸುತ್ತೇನೆ’ ಎಂದು ನಬೀಲಾಳ ಮೇಲೆ ತನ್ನ ಎದುರೇ ಎಗರಾಡಿದವನಲ್ಲವೇ ಈ ಅದ್ದು? ಈಗ್ಯಾಕೆ ನಬೀಲಾಳ ಕೈಗಳನ್ನ ಹಿಡಿದುಕೊಂಡು ಅಳುತ್ತಿದ್ದಾನೆ? ಎನ್ನುವ ಪ್ರಶ್ನೆ ಕಾಡಿತು. ಈಗ ತಾನೇನಾದರೂ ಅದನ್ನ ಹೇಳಿಬಿಟ್ಟರೆ ನಬೀಲಾ ಏನು ಮಾಡಬಹುದು? ಎಂದು ಯೋಚನೆ ಬಂದಿದ್ದೆ ಚಿಟ್ಟಿಯ ಮುಖದಲ್ಲಿ ನಗು ಅರಳಿತು.
ಎಲ್ಲರೂ ಮಗುವನ್ನು ನೋಡಲು ಒಳಹೋದರು. ಮಗು ಕೆಂಪಗೆ ಮುದ್ದಾಗಿತ್ತು ಚಿಟ್ಟಿಗೆ ತನ್ನ ಮನೆಯ ಗಿಡದಲ್ಲಿ ಅರಳುವ ಪನ್ನೀರು ಗುಲಾಬಿಯ ನೆನಪಾಯಿತು. ಮಗು ಒಮ್ಮೆ ಮೈಯ್ಯನ್ನು ಮುರಿದು ಆಕಳಿಸಿತು. ಚಿಟ್ಟಿ ಎಂದೂ ಆಗತಾನೆ ಹುಟ್ಟಿದ ಮಗುವನ್ನು ನೋಡಿರಲಿಲ್ಲ. ಅದು ಮೈ ಮುರಿದ ಚಂದಕ್ಕೆ ಮುಗ್ಧಳಾದಳು. ಜೀನತ್‌ಳ ಹೊಟ್ಟೆ ಈಗ ಉಬ್ಬಿಕೊಂಡಿರಲಿಲ್ಲ. ಒಂದಿದ್ದ ಜೀವ ಎರಡಾಗಿದ್ದರ ಬಗ್ಗೆ ಚಿಟ್ಟಿಗೆ ಅಚ್ಚರಿಯಿತ್ತು. ತನ್ನನ್ನು ಹೊರಗೆ ಕಳಿಸಿ ತಿಳಿದುಕೊಳ್ಳುವ ಅವಕಾಶವನ್ನು ಇಲ್ಲವಾಗಿಸಿದ ನಬೀಲಾಳ ಮೇಲೆ ಕೋಪವೂ ಬಂದಿತ್ತು. ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿಟ್ಟಿದ್ದ ಮಗುವನ್ನು ಜೀನತ್ ಹೆಮ್ಮೆಯಿಂದ ಗಂಡನ ಕೈಗೆ ಕೊಟ್ಟಳು. ‘ನನ್ನ ಕನಸನ್ನು ನನಸು ಮಾಡಿದೆ ಜೀನತ್, ಮಗು ಎಲ್ಲಾ ನಿನ್ನ ಹಾಗೇ ಇದೆ’ ಎಂದು ಅದ್ದು ಭಾವುಕನಾದ. ಮಗುವನ್ನು ಕೆನ್ನೆಗೆ ಒತ್ತಿಕೊಂಡು ಏನೋ ನೆನಪಾದವನಂತೆ ‘ನೋಡು ನಿನ್ನ ದೊಡ್ದಮ್ಮನನ್ನು ನಿನ್ನ ಚಿಕ್ಕಪ್ಪನನ್ನು’ ಎನ್ನುತ್ತಾ ಸಂಭ್ರಮದಿಂದ ನಬೀಲಾ, ರೆಹಮಾನ್‌ರ ಕೈಗೆ ಕೂಡಾ ಮಗುವನ್ನು ವರ್ಗಾಯಿಸಿದ. ‘ಅಕ್ಕ ಇಲ್ಲ ಅಂದಿದ್ರೆ ಇವತ್ತು ನನ್ನ ಕಥೆ ಮುಗಿದೇ ಹೋಗುತ್ತಿತ್ತು’ ಎಂದು ಜೀನತ್ ನೋವಲ್ಲೂ ಸುಖವಾಗಿ ನಕ್ಕಳು. ‘ನಾನು ಅಂತ ಯಾಕೆ ಅಂತೀಯಾ ಅಲ್ಲಾ ನಿನ್ನ ಕಡೆಗಿದಾನೆ’ ಎಂದು ಮಗುವನ್ನು ಕೈಲಿ ಹಿಡಿದೇ ನಬೀಲಾ ಹೇಳಿದಳು. ಹಾಗೆ ಹೇಳಿದವಳೇ ‘ಆಯ್ತಲ್ಲ ಇನ್ನು ನಡೀ ರೆಹಮಾನ್ ಮನೆಗೆ ಹೊರಡೋಣ’ ಎಂದುಬಿಟ್ಟಳು.
ಅದ್ದು ಅಚ್ಚರಿಯಿಂದ ‘ಇವತ್ತು ಜೀನತ್ ಜೊತೆಯಲ್ಲೇ ಇರು. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಎಷ್ಟಿದ್ದರೂ ನಿನ್ನ ತಂಗಿಯಲ್ಲವೇ? ಮಗು ಕೂಡ ನಿನ್ನದೇ ಅಲ್ಲವೇ ನಬೀಲಾ’ ಎಂದ ಅಳುಕುತ್ತಾ. ‘ಹೌದು ಇದು ನನ್ನದೇ ಮಗು ಈ ಮಗುವಿನ ಮೇಲೆ ಯಾರಿಗೂ ಹಕ್ಕಿಲ್ಲ’ ಎಂದಳು ನಬೀಲಾ ದೃಢವಾಗಿ. ಅದ್ದು ಅವಳ ಕಡೆಗೆ ಅಚ್ಚರಿಯಿಂದ ನೋಡಿದ. ಅವಳ ಮುಖದಲ್ಲಿ ಅಷ್ಟರವರೆಗೆ ಇದ್ದ ಮೃದುತ್ವ ಹೋಗಿ ಕಾಠಿಣ್ಯತೆ ತುಂಬಿಕೊಂಡಿತು. ‘ನಬೀಲಾ ನಿನ್ನ ಉದ್ಡೇಶ ಏನೂಂತ ನನಗೆ ಗೊತ್ತಾಗುತ್ತಿಲ್ಲ’ ಎಂದ ಅದ್ದುವಿನ ಜೊತೆಗೂ ಮಾತನಾಡದೆ ಮಗುವನ್ನು ಎತ್ತಿಕೊಂಡು ‘ನಡೀ ರೆಹಮಾನ್, ಇವತ್ತಿಗೆ ನಾನು ಅಂದುಕೊಂಡಿದ್ದು ಆಗುತ್ತಿದೆ’ ಎಂದಿದ್ದಳು. ಅವಳನ್ನು ಇನ್ನಿಲ್ಲದಂತೆ ತಡೆಯಲು ನೋಡಿದ ಅದ್ದುವನ್ನು ರೆಹಮಾನ್ ತಳ್ಳಿದ್ದರಿಂದ ನಬೀಲಾಳ ದಾರಿ ಸುಗಮವಾಗಿತ್ತು. ಅದ್ದು ಕುಸಿದು ಕೂತಿದ್ದ. ಜೀನತ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಚಿಟ್ಟಿ ಅಸಹಾಯಕಳಾಗಿ ಟೇಬಲ್ ಮೇಲೆ ಹೊಲಿಗೆ ಬೀಳದೆ ಸುಮ್ಮನೆ ಬಿದ್ದಿದ್ದ ಭಾರತಿಯ ಅಂಗಿಯನ್ನು ಕೈಗೆ ಎತ್ತಿಕೊಂಡಳು.
‘ಪಾಪ ಹಸುಕಂದನನ್ನು ತಾಯಿಯಿಂದ ದೂರ ಮಾಡೋದಾ?’ ಅಮ್ಮ ಪೇಚಾಡಿಕೊಂಡಳು. ‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತಂತೆ ಹಾಗಾಯ್ತು ಈ ನಬೀಲಾ ಕಥೆ, ಅಲ್ಲ ಮಗೂನ ಹಾಗ್ ಎತ್ಕೊಂಡ್ ಹೋದ್ರೆ ಹಾಲು ಯಾರ್ ಕೊಡ್ತಾರೆ? ಮಗೂನ್ ಹೇಗ್ ಬೆಳೆಯುತ್ತೆ? ತಾಯಿ ಇದ್ದೂ ಮಗೂಗೆ ಈ ಗತಿ ಬರಬಾರದು’ ಎಂದಳು ಅಜ್ಜಿ. ಆಗ ತಾನೆ ಕುಡಿಯೊಡೆಯುತ್ತಿದ್ದ ತನ್ನ ಎಳೆಯ ಎದೆಗಳ ಬೆಳವಣಿಗೆ ಅವಮಾನ ಅಲ್ಲ ಅಸಹಜ ಅಲ್ಲ ಹಾಗಾದರೆ ಎನ್ನಿಸಿ ಚಿಟ್ಟಿಗೆ ಸ್ವಲ್ಪ ಸಮಾಧಾನವೂ ಆಯಿತು. ಆದರೂ ಅಜ್ಜಿ ಇನ್ನುಮುಂದೆ ಚಿಟ್ಟಿಗೆ ಲಂಗದಾವಣಿ ಕೊಡಿಸು ಅಂತ ಯಾಕೆ ಹೇಳುತ್ತಾಳೆ? ಎಲ್ಲ ಕೆಟ್ಟ ಗಂಡಸರೂ ಯಾಕೆ ಮುಖವನ್ನು ನೋಡುತ್ತಾ ಹಾಗೇ ತನ್ನ ಪುಟ್ಟ ಎದೆಯ ಕಡೆಗೆ ಕಣ್ಣು ಹಾಯಿಸುತ್ತಾರೆ? ಮುಜುಗರ ಹುಟ್ಟಿಸುತ್ತಾರೆ? ಮುಂತಾದ ಪ್ರಶ್ನೆಗಳನ್ನು ಯಾರಲ್ಲಿ ಕೇಳಬೇಕು?
ಮತ್ತೆ ಜೀನತ್ ಮನೆಯ ಕಡೆಗೆ ಚಿಟ್ಟಿ ಹೋಗಲಿಲ್ಲ. ಹೋದರೂ ಪ್ರಯೋಜನ ಇಲ್ಲ ಎಂದು ಅವಳಿಗೆ ಗೊತ್ತಿತ್ತು. ಅವಳ ಗೋಳಾಟವನ್ನು ನೋಡಲಾಗದೆ ಅಪ್ಪ ತನ್ನ ಬಟ್ಟೆಯನ್ನು ಹೊಲಿಯುವ ಗಂಡಸರ ಟೈಲರ್ ಅಶ್ವಥನ ಹತ್ತಿರ ಅಂಗಿಯ ತೋಳನ್ನು ಹೊಲಿಸಿಕೊಂಡು ಬಂದಿದ್ದ. ಭಾರತಿಗೆ ಖುಶಿಯಾಗದಿದ್ದರೂ ಹೇಗೋ ಹಾಕಿಕೊಳ್ಳುವ ಥರ ಆಯ್ತಲ್ಲಾ ಎನ್ನುವ ಸಮಾಧಾನ. ಜೀನತ್, ಅದ್ದು, ನಬೀಲಾ, ರೆಹಮಾನರ ನಡುವೆ ನಡೆಯುತ್ತಿದ್ದ ಜಗಳ ಮಾತ್ರ ಅಷ್ಟಕ್ಕೆ ಮುಗಿಯಲಿಲ್ಲ. ಆಘಾತದಿಂದ ಚೇತರಿಸಿಕೊಂಡ ಅದ್ದು ಮಗುವನ್ನು ಕರೆದುಕೊಂಡೇ ಬರುತ್ತೇನೆ ಎಂದು ಜೀನತ್‌ಳನ್ನು ಸಮಾಧಾನ ಮಾಡಿ ತನ್ನ ಶೆಡ್ ಮನೆಗೆ ಹೋದ. ಹಾಕಿದ್ದ ಮನೆಯ ಬಾಗಿಲು ತೆರೆಯಲಿಲ್ಲ. ನಬೀಲಾಳನ್ನು ಪರಿ ಪರಿಯಾಗಿ ಅಂಗಲಾಚಿದರೂ ಅವಳು ಕರಗಲಿಲ್ಲ. ರೆಹಮಾನ ಭಿಕ್ಷದವರಿಗೆ ಹೇಳುವಂತೆ ಬೈದು ಕಳಿಸಿದ್ದ. ಅದ್ದುವಿನ ಮಾತನ್ನು ಕೇಳಿಸಿಕೊಳ್ಳಲು ಯಾರೂ ಇರಲಿಲ್ಲ.
ಮಗುವಿಲ್ಲದೆ ಮನೆಗೆ ಬರಿಕೈಲಿ ಬಂದ ಗಂಡನ್ನು ನೋಡಿ ಅಳುವುದನ್ನ ಬಿಟ್ಟು ಜೀನತ್‌ಗೆ ಬೇರೆ ದಾರಿಯಿರಲಿಲ್ಲ. ಊರೆಲ್ಲಾ ಅಯ್ಯೋ ಅಂದಿತು. ನಬೀಲಾ ಮಾತ್ರ ತನ್ನ ಹಟ ಬಿಡಲಿಲ್ಲ. ಆಳನ್ನ ಇಟ್ಟು ಮಗುವಿಗೆ ಎಣ್ಣೆ ಒತ್ತಿಸಿ ನೀರು ಹಾಕಿಸಿದಳು, ಕಣ್ಣಿಗೆ ಕಾಡಿಗೆಯನ್ನು; ಕಣ್ಣ ಪಕ್ಕಕ್ಕೆ ದೃಷ್ಟಿಬೊಟ್ಟನಿಟ್ಟು ಸಂಭ್ರಮಿಸಿದಳು. ತನ್ನ ಜೊತೆ ಮಲಗಿಸಿಕೊಳ್ಳಲು ಹೆದರಿ ತವರು ಮನೆಯಿಂದ ಮಜಬೂತಾದ ತೊಟ್ಟಿಲನ್ನು ತರಿಸಿಕೊಂಡಳು. ಹಳೆಯ ಸೀರೆಗಳನ್ನೆಲ್ಲಾ ತೆಗೆದು ಒಂದರ ಮೇಲೊಂದಂತೆ ಹಾಸಿ ಮೃದು ಹಾಸಿಗೆ ಮಾಡಿದಳು. ಜೀನತ್ ದುಃಖ ನೋಡಲಾಗದ ಅದ್ದು ಊರ ಪ್ರಮುಖರನ್ನು ಪಂಚಾಯಿತಿಗೆ ಕರೆದ. ಅಲ್ಲೂ ನಬೀಲಾ ಹೇಳಿದ ಮಾತು ಎಲ್ಲರನ್ನೂ ತಲೆದೂಗಿಸಿತ್ತು. ‘ನನ್ನ ಜೀವನಕ್ಕೆ ಏನೂ ಇಲ್ಲದಂತೆ ನನ್ನ ಗಂಡನನ್ನು ಕಸಿದುಕೊಂಡವಳು ಇವಳು. ಅದಕ್ಕಾಗಿ ನಾನೆಂದೂ ಇವಳನ್ನು ಬೈದಿಲ್ಲ, ಶಾಪ ಹಾಕಲಿಲ್ಲ. ನನ್ನ ಬದುಕಿಗೂ ಆಸರೆ ಬೇಕಲ್ಲವೇ? ಇವಳಿಗೆ ಇನ್ನೊಂದು ಮಗು ಆಗುತ್ತೆ, ಗಂಡ ಜೊತೆಯಲ್ಲಿದ್ದಾನೆ, ಆದರೆ ನನಗೆ? ಗಂಡನೇ ಇಲ್ಲ ಅಂದಮೇಲೆ ಮಗು ಆಗುವುದಾದರೂ ಹೇಗೆ? ಆ ಅಲ್ಲಾ ನನ್ನ ಹೊಟ್ಟೆಯಲ್ಲಿನ ಹೂವನ್ನು ಕೊಯ್ದಿದ್ದಾನೆ. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೀನೋ ಗೊತ್ತಿಲ್ಲ ನನಗೆ ಮಗುವನ್ನು ಅವನು ಕೊಡಲಿಲ್ಲ. ಆದರೆ ನನ್ನ ಒಳ್ಳೆಯತನ ಕಂಡು ಅದಕ್ಕೆ ಪರಿಹಾರವಾಗಿ ಈ ಮಗುವನ್ನು ಕೊಟ್ಟಿದ್ದಾನೆ. ಅನ್ಯಾಯ ಆಗಿರೋ ನನಗೆ ಸಿಕ್ಕ ನ್ಯಾಯವನ್ನು ಯಾಕೆ ಕಸಿದುಕೊಳ್ಳುತ್ತೀರಿ?’ ನಬೀಲಾಳ ಮಾತಿನಲ್ಲಿರುವ ನ್ಯಾಯವನ್ನು ಅಲ್ಲಗಳೆಯಲಾಗಲಿಲ್ಲ. ಹಸೀಬಾಣಂತಿ ಜೀನತ್ ಅತ್ತೂ ಅತ್ತೂ ತನ್ನ ಕಣ್ಣುಗಳನ್ನು ಊದಿಸಿಕೊಂಡಿದ್ದಳು. ಅಳ ಬೇಡ ನಂಜಾಗುತ್ತೆ ಅಂತ ಹೇಳುವುದನ್ನು ಬಿಟ್ಟು ಊರ ಜನಕ್ಕೆ ಬೇರೆ ದಾರಿಯೂ ಇರಲಿಲ್ಲ.
ಚಿಟ್ಟಿ ಬಯಲಿನ ತುಂಬಾ ಕಣ್ಣಾಗಿ ನಿಂತು ನೋಡುತ್ತಿದ್ದಳು. ನಾಯಿಯೊಂದು ತನ್ನ ಮರಿಯನ್ನು ಮುಟ್ಟಲಿಕ್ಕೆ ಬಂದ ಇನ್ನೊಂದು ನಾಯಿಯ ಮೇಲೆ ಗುರ್ರೆಂದು ಹೋಗುತ್ತಿತ್ತು. ಅದು ಮರಿಗಳನ್ನು ಮುಟ್ಟಲಾಗದೆ ಹೋಗುತ್ತಿತ್ತು. ತನ್ನ ಮರಿಗಳನ್ನು ಕಾಪಾಡಿಕೊಳ್ಳುವುದು ಈ ನಾಯಿಗೆ ಗೊತ್ತಿರುವಾಗ ಜೀನತ್‌ಗೆ ಯಾಕೆ ಗೊತ್ತಾಗಲಿಲ್ಲ?! ಈಗ ಅತ್ತರೆ ಮಗು ಸಿಗುತ್ತದಾ? ಎಂದು ಚಿಟ್ಟಿಗೆ ಅನ್ನಿಸಿತಾದರೂ ದೊಡ್ಡವರ ಜಗತ್ತು ಅವಳ ಕಣ್ಣ ಮುಂದೆ ಏನೆಲ್ಲವನ್ನೂ ತೆರೆದಿಡುತ್ತಿತ್ತು. ಪ್ರಾಣಿಗಳಿಗೆ ಇರದ ನ್ಯಾಯ ಮನುಷ್ಯನನ್ನು ಮಾತ್ರ ಹೀಗೆ ಸುತ್ತುವರೆದಿರುವುದಕ್ಕೆ ಅವಳಿಗೆ ದೊಡ್ದ ಆಘಾತವಾಗಿತ್ತು. ಊಹಿಸಲು ಸಾಧ್ಯವಾಗದ ನಬೀಲಾಳ ಮಾತುಗಳು ಅವಳ ಮನಸ್ಸಿನಲ್ಲಿ ಮತ್ತೆ ಮತ್ತೆ ಅನುರಣಿಸುತ್ತಿತ್ತು.
ಜೀನತ್ ಆಗೀಗ ಚಿಟ್ಟಿಯನ್ನು ಕರೆದು ‘ನನ್ನ ಕಂದ ಹೇಗಿದೆ ನೋಡಿ ಬಾ’ ಎಂದು ಹೇಳುತ್ತಿದ್ದಳು. ಚಿಟ್ಟಿಗೆ ರೆಹಮಾನನ ನೋಟವನ್ನಾಗಲೀ, ನಬೀಲಾಳ ಬೈಗುಳವನ್ನಾಗಲಿ ಎದುರಿಸಲು ಸಾಧ್ಯವಾಗದೆ ತನಗೆ ತಾನೇ ಕಥೆಗಳನ್ನು ಹುಟ್ಟಿಸಿಕೊಂಡು ಹೇಳುತ್ತಿದ್ದಳು. ಜೀನಿತ್‌ಗೆ ಚಿಟ್ಟಿಯ ಮಾತುಗಳಲ್ಲಿ ವಿಶ್ವಾಸವಿದ್ದುದರಿಂದ ಬೇರೆ ಯಾರನ್ನೂ ಕೇಳಲಿಕ್ಕೆ ಹೋಗುತ್ತಿರಲಿಲ್ಲ. ‘ಎಲ್ಲೋ ಬಿಡು ನನ್ನ ಮಗು ಚೆನ್ನಾಗಿದ್ಯಲ್ಲಾ? ಯಾವತ್ತಾದರೂ ನನ್ನ ಹತ್ತಿರಕ್ಕೆ ಅದು ಬರಲೇಬೇಕು. ನನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದೆಯಲ್ಲವೇ’ ಎನ್ನುತ್ತಿದ್ದಳು.
ಜಗಳವಾಡುವಾಗ ಅತಿ ಉತ್ಸಾಹಕ್ಕೆ ಬಿದ್ದಿದ್ದ ಶಿವಮ್ಮ ಗಂಡನ ಕೈಗಳನ್ನು ಸ್ವಲ್ಪ ಹೆಚ್ಚೇ ತಿರುವಿದ್ದರಿಂದ ಶಿವಣ್ಣ ಎನ್ನುವ ಎಣ್ಣೆ ಪಾರ್ಟಿಯ ಕೈ ಮೂಳೆ ಮುರಿದಿತ್ತು. ಅವನು ಪುತ್ತೂರು ಪಟ್ಟು ಹಾಕಿಸಿಕೊಂಡು ಬಂದಿದ್ದ. ಆದರೆ ನೋವು ತಡೆಯಲಾಗದೆ ಅದನ್ನು ಕಿತ್ತೆಸೆದು ರಾತ್ರಿಯೆಲ್ಲಾ ಕೂಗುತ್ತಿದ್ದ. ಮನೆಯಲ್ಲಿರಲಿ, ಊರಲ್ಲಿ ಜನ ಕೂಡಾ ಅವನ ಕೂಗಿಗೆ ನಿದ್ದೆ ಮಾಡದೆ ರಾತ್ರಿಯೆಲ್ಲಾ ಶಿವಮ್ಮ ಮತ್ತು ಕೈಮುರಿದು ಗಲಾಟೆ ಮಾಡುತ್ತಿದ್ದ ಅವಳ ಗಂಡನಿಗೆ ಹಿಡಿಶಾಪ ಹಾಕುತ್ತಿದ್ದರು. ರಾತ್ರಿಯೆಲ್ಲಾ ಹೀಗೆ ಕೂಗುತ್ತಿದ್ದ ಶಿವಣ್ಣನನ್ನು ಬೆಳಗ್ಗೆ ಅಂಗಳದಲ್ಲಿ ಕೂಡಿಸಿ ಎಣ್ಣೆ ಬಿಸಿಮಾಡಿ ಹಚ್ಚಿ ನೀವುತ್ತಾ ಬಾಯಿ ತುಂಬಾ ಬೈಯ್ಯುತ್ತಾ ಕೂತಿರುತ್ತಿದ್ದಳು ಶಿವಮ್ಮ. ಕೈ ತಿರುವುವುದು ಯಾಕೆ? ಹೀಗೆ ಎಣ್ಣೆ ಹಚ್ಚೋದ್ ಯಾಕೆ? ಎಂದು ಊರ ಜನ ಆಡಿಕೊಂಡು ನಕ್ಕರು.
ವಯಸ್ಸಾಗುತ್ತಿದ್ದ ಕಾರಣಕ್ಕೋ, ಕುಡಿದು ಕುಡಿದು ದೇಹ ಹಾಳಾಗಿದ್ದಕ್ಕೋ ಗೊತ್ತಿಲ್ಲ ಅವನು ಬದುಕಿರುವವರೆಗೂ ಕೈಮೂಳೆ ಕೂಡಿಕೊಳ್ಳಲೇ ಇಲ್ಲ. ಆ ಕೈಯಿಂದ ಅವನು ಕೆಲಸ ಮಾಡುವುದಿರಲಿ, ಇಸ್ಪೀಟನ್ನೂ ಕೂಡಾ ಹಿಡಿಯಲಾಗಲಿಲ್ಲ. ಅವನು ಸಾಯುವವರೆಗೂ ತನ್ನ ದುಡುಕಿಗೆ ಬೈದುಕೊಳ್ಳುತ್ತಾ ಶಿವಮ್ಮನೇ ಕೂಲಿ ನಾಲಿ ಮಾಡಿ ಮಕ್ಕಳ ಜೊತೆ ಗಂಡನೂ ಇನ್ನೊಬ್ಬ ಮಗ ಎಂದುಕೊಂಡು ಸಾಕಿದ್ದಳು. ಹೀಗೆ ತಿರುಚಿದ ಗಂಡನ ಕೈಗೆ ತಾನೇ ಎಣ್ಣೆ ನೀವುತ್ತಾ ಅಂಗಳದಲ್ಲಿ ಕೂತಿದ್ದ ಶಿವಮ್ಮ, ಮಗುವನ್ನು ಕಳೆದುಕೊಂಡು ಚೆನ್ನಾಗಿರಲಿ ಎನ್ನುತ್ತಿದ್ದ ಜೀನತ್, ಐವತ್ತು ವರ್ಷ ಮುದಿಗಂಡನನ್ನು ಮದುವೆಯಾಗಿದ್ದ ಅಜ್ಜಿ, ಇನ್ನೊಬ್ಬಳ ಜೊತೆ ಸಂಸಾರ ಮಾಡುತ್ತಿದ್ದ ಅಪ್ಪನನ್ನು ಸಹಿಸುತ್ತಿದ್ದ ಅಮ್ಮ, ಮಗಳ ಜೊತೆ ತನ್ನ ಗಂಡ ಸಂಸಾರ ಮಾಡುತ್ತಿದ್ದ ಎನ್ನುವುದು ಗೊತ್ತಾಗಿ ಸತ್ತ ನಂಜಕ್ಕ, ಪೊದೆಯ ಸಂದಿಯಲ್ಲಿ ಮುಲುಗುತ್ತಾ ಮಲಗಿದ್ದ ಪದ್ದಕ್ಕ, ಊರನ್ನು ಬಿಟ್ಟುಹೋದ ಫಾತುಮ್ಮಿ ಹೀಗೆ ಯಾಕೋ ಊರ ಹೆಂಗಸರೆಲ್ಲ ಒಂದು ಕ್ಷಣ ಚಿಟ್ಟಿಯ ಕಣ್ಣ ಮುಂದೆ ತೇಲಿ ಹೋದರು. ಗೊತ್ತಿಲ್ಲದೆ ಅವಳ ಕಣ್ಣುಗಳಲ್ಲಿ ಎಷ್ಟೊಂದು ಬಣ್ಣಗಳು ತುಂಬಿಕೊಳ್ಳತೊಡಗಿದ್ದವು.
‘ಹೆಣ್ಣು ಅಂದ್ರೆ ದೇವಿ ಇದ್ದ ಹಾಗೆ ಅವಳಿಗೆ ಹತ್ತಾವತಾರ. ಅವಳಿಗೆ ಬೇಕು ಬೇಡ ಎನ್ನುವ ಆಯ್ಕೆಗಳಿಲ್ಲ ಅಷ್ಟೂ ಅವತಾರಗಳನ್ನು ಎತ್ತುವುದು ಮಾತ್ರ ಅವಳ ಕರ್ಮ’ ಅಮ್ಮ ಹೇಳಿದಾಗ ಚಿಟ್ಟೀಗೆ ಗಾಬರಿ. ತಾನು ದೊಡ್ಡವಳಾದ ಮೇಲೆ ತನ್ನ ಜೀವನದಲ್ಲೂ ಏನೆಲ್ಲಾ ನಡೆಯಬಹುದು ತಾನು ನಂಜಕ್ಕ ಆಗುತ್ತೇನೋ? ಶಿವಮ್ಮ ಆಗುತ್ತೇನೋ? ಜೀನತ್, ಫಾತುಮ್ಮಿ, ಅಜ್ಜಿ, ಅಮ್ಮ ಹೀಗೆ ಏನು ಆಗುತ್ತೇನೋ? ಆಗ ತನ್ನ ಗಂಡನ ಜೊತೆ ಹೇಗೆ ನಡೆದುಕೊಳ್ಳುತ್ತೇನೋ ಎಂದೆಲ್ಲಾ ಯೋಚನೆಗೆ ಬೀಳುತ್ತಿದ್ದಳು. ‘ದೊಡ್ಡವರಾದ ಮೇಲೆ ಬೇಡ ಅಂದ್ರೂ ಬರೋದೆಲ್ಲಾ ಬರುತ್ತೆ ಚಿಟ್ಟಿ, ಈಗಿಂದಾನೇ ಯೋಚ್ನೆ ಮಾಡ್ತಾ ಮಾಡ್ತಾ ಆಡೋದನ್ನೂ ಬಿಡ್ತಿದೀಯಲ್ಲೇ?’ ಎಂದಳು ಆರೋಗ್ಯ. ಅವಳಿಗೆ ಚಿಟ್ಟಿಯ ಯೋಚನೆಗಳು ವಿಚಿತ್ರ ಎನಿಸುತ್ತಿತ್ತು. ‘ಇದೇನು ನಾವು ಕಾಣದ್ದೇ? ಹುಟ್ಟಿದಾಗಿನಿಂದ ಹೀಗೆ ಒಂದಲ್ಲಾ ಒಂದು ನಡೆಯುತ್ತಾ ಬಂದಿವೆ. ಎಲ್ಲವನ್ನೂ ನಿನ್ನ ಹಾಗೇ ಮನಸ್ಸಿಗೆ ಹಾಕಿಕೊಂಡರೆ ಬದುಕುವುದಾದರೂ ಹೇಗೆ?’ ಎಂದಳು ನಕ್ಕತ್ತು. ಚಿಟ್ಟಿಗೆ ಸಮಾಧಾನವಾಗಲಿಲ್ಲ. ‘ಆ ದೇವ್ರು ನಮ್ಮನ್ನ ಯಾಕೆ ಹೀಗೆ ಹುಟ್ಟಿಸಿದ? ಕಷ್ಟವನ್ನೆಲ್ಲಾ ಹೆಣ್ಣಿಗೇ ಯಾಕೆ ತಂದಿಟ್ಟ?’ ಯೋಚಿಸಿದಷ್ಟೂ ಯೋಚನೆಗಳೇ ಹೊರತಾಗಿ ಬೇರೆ ಏನೂ ತೋಚಲಿಲ್ಲ. ಎಲ್ಲರೂ ಸೇರಿ ಅವಳ ಕಣ್ಣು ಕಟ್ಟಿ ಬಯಲಲ್ಲಿ ತಿರುಗಿಸಿಬಿಟ್ಟರು. ಯಾರನ್ನು ಹುಡುಕಬೇಕು? ಹೇಗೆ ಹುಡುಕಬೇಕು? ಎಂದುಕೊಳ್ಳುವಾಗಲೇ ಕೈಯ್ಯ ಚಪ್ಪಳೆ ಬಂದ ದಿಕ್ಕಿನ ಕಡೆಗೆ ತಿರುತ್ತಿದ್ದಳು.
ಆಟ ಮುಗಿಸಿ ಮನೆಗೆ ಬಂದ ಚಿಟ್ಟಿಗೆ ಬಾಗಿಲಲ್ಲಿ ಪದ್ದಕ್ಕ ಕಾಣಿಸಿಕೊಂಡಳು. ಜಗಳ ಆದಮೇಲೂ ಅವಳು ಹೀಗೆ ಮನೆಗೆ ಬರುತ್ತಿರುವುದೂ ಅಮ್ಮ ಅವಳನ್ನ ಮಾತಾಡಿಸುತ್ತಿರುವುದೂ ಅವಳಿಗೆ ಸರಿ ಬರಲಿಲ್ಲ. ‘ಒಂದೇ ಊರು ಅಂದ್ಮೇಲೆ ಮಾತಾಡಿಸಲು ಆಗದಿದ್ದೀತೇ?’ ಎಂದು ಅಮ್ಮ ರೇಗಿದ್ದಳು. ಆಗಿಂದ ಪದ್ದಕ್ಕನನ್ನು ನೋಡಿದರೆ ಮುಖ ತಿರುಗಿಸ್ಕೊಳ್ಳುತ್ತಿದ್ದಳೇ ವಿನಾ ಮಾತಾಡುತ್ತಿರಲಿಲ್ಲ. ಪದ್ದಕ್ಕ ಮಾತಾಡುತ್ತಲೇ ಇದ್ದಳು ‘ದೊಡ್ದ ಮನೆಯವರು. ನಮ್ಮ ವೇಣಿಯನ್ನು ನೋಡಿ ಅವಳ ಚಂದಕ್ಕೆ ಮರುಳಾಗಿ ‘ನಮಗೆ ಹುಡುಗಿ ಬಿಟ್ಟರೆ ಬೇರೆ ಏನೂ ಬೇಡ’ ಅಂತ ಮದುವೆಯಾದರು. ನಮ್ಮ ವೇಣಿ ಪುಣ್ಯ ಗಂಡ ಹೂವಲ್ಲಿಟ್ಟುಕೊಂಡು ನೋಡಿಕೊಳ್ಳುತ್ತಾನೆ. ಅಂಥಾ ಅಳಿಯ ಈಗ ಮನೆಗೆ ಬಂದರೆ ಅತ್ತೆಯ ಮನೆಯವರು ಉಪಚಾರ ಮಾಡದೆ ಹೋದರೆ ಹೇಗೆ ಹೇಳಿ?’ ಕಣ್ಣೀರಿನ ಜೊತೆ ಕರುಣೆಯನ್ನೂ ಸೇರಿಸಿ ಹೇಳುತ್ತಿದ್ದಳು. ಅಮ್ಮ ವಾರ ಪೂರ್ತಿ ಇಟ್ಟಿದ್ದ ಕೆನೆಯನ್ನು ಹೆಪ್ಪು ಹಾಕಿ ಬೆಣ್ಣೆ ಮಾಡಿ ಕಾಸಿದ್ದ ತುಪ್ಪ ಘಮ್ಮೆಂದು ವಾಸನೆ ಅರಳಿಸುತ್ತಾ ಅವಳ ಸೆರಗಿನ ಮರೆಯಲ್ಲಿ ಬಟ್ಟಲಲ್ಲಿ ಕೂತಿತ್ತು. ಚಿಟ್ಟಿಗೆ ಅಮ್ಮನ ಮೇಲೂ ಕೋಪ ಬಂತು. ತುಪ್ಪ ಹಾಕು ಎಂದರೆ ಸ್ಪೂನಿನ ತುದಿಗೆ ಮುಟ್ಟಿಸಿ ಚುಮುಕಿಸುತ್ತಿದ್ದ ಅಮ್ಮ ಬಟ್ಟಲಿನ ತುಂಬಾ ಇವಳಿಗೆ ಯಾಕೆ ಕೊಟ್ಟಳು? ಕೋಪ ಮೂಗಿನ ಮೇಲೆ ಕೂತು ತುದಿಯನ್ನು ಕೆಂಪಾಗಿಸಿತು.
ತಲೆಗೆ ನೀರನ್ನು ಹಾಕಿಕೊಂಡ ವೇಣಿ ತನ್ನ ಮೋಟು ಕೂದಲನ್ನು ಗಾಳಿಗೆ ಹರಡಿ ಬಿಸಿಲಿಗೆ ನಿಂತಿದ್ದಳು. ದಾರಿಯಲ್ಲಿ ಹೋಗಿ ಬರುವವರೆಲ್ಲಾ ‘ಯಾವಾಗ್ ಬಂದ್ಯಮ್ಮಾ? ಇಷ್ಟ್ ಅಪರೂಪಾನಾ’ ಎಂದು ಕೇಳುತ್ತಿದ್ದರು. ‘ನಮ್ಮನೇವ್ರು ಕರ್ಕೊಂಡ್ ಬರ್ಬೇಕಲ್ಲಾ? ಒಬ್ಬಳನ್ನೇ ಎಲ್ಲೂ ಕಳಿಸಲ’ ಎಂದು ಹೆಮ್ಮೆಯಿದ ಹೇಳಿಕೊಳ್ಳುತ್ತಿದ್ದಳು ವೇಣಿ. ಅದೇ ಹೊತ್ತಿಗೆ ಒಳಗಿನಿಂದ ‘ವೇಣೀ…’ ಎಂದು ಗಂಡ ಕರೆದಿದ್ದ. ಇವ್ರು ಕರೀತಿದಾರೆ ಬರ್ತೀನಿ’ ಎಂದು ಒಂದೇ ಉಸಿರಿಗೆ ಒಳಸಾಗಿದ್ದಳು. ನಿಜ. ಪದ್ದಕ್ಕ ಹೇಳಿದಹಾಗೇ ವೇಣಿಯದ್ದು ಸುಂದರ ಸಂಸಾರ ಎಂದುಕೊಂಡು ಊರ ಜನ ಸಂತೋಷಪಟ್ಟಿದ್ದರು. ಈ ಅಭಿಪ್ರಾಯ ಬದಲಾಗಲು ತುಂಬಾ ಹೊತ್ತು ಹಿಡಿಯಲಿಲ್ಲ ಎನ್ನುವುದು ವಿಧಿಯ ವಿಪರ್ಯಾಸ. ಸಂಜೆಯ ಹೊತ್ತಿಗೆ ತಲೆಗೆ ಪೆಟ್ಟಾಗಿ ರೇಗುತ್ತಾ, ಕೂಗುತ್ತಿದ್ದ ಗಂಡನನ್ನು ಹಿಡಿಯಲಿಕ್ಕಾಗದೆ ಅಳುತ್ತಿದ್ದ ವೇಣಿಯ ಚಿತ್ರ ಮಾತ್ರ ಚಿಟ್ಟಿಯ ಜೀವನದ ಕೊನೆಯ ಘಳಿಗೆಯತನಕ ಮರೆಯಾಗಲೇ ಇಲ್ಲ. ಊಫಿಟ್ ಎಂದು ಒಂದು ಸಲ ಹೇಳುವ ಅವಕಾಶ ಹೆಣ್ಣಿಗೆ ಇರಬೇಕಿತ್ತು ಎಂದು ಅನಿಸಿದ್ದೇ ಆಗ.
(ಮುಂದುವರೆಯುವುದು…)

‍ಲೇಖಕರು G

November 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: