ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – '…ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ'

(ಇಲ್ಲಿಯವರೆಗೆ…)

`ಈ ಹುಳುಗ್ಳು ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ. ಒಂದ್ ಸಲ ರೆಕ್ಕೆ ಕಳ್ಕೊಂಡ್ ಮೇಲೆ ಈ ಹುಳಕ್ಕೆ ಸಾವೇ ಗತಿ. . . ಚಿಟ್ಟೀ ನೆನಪಿಟ್ಕೋ’ ಹಿಂದಿನ ದಿನ ಹಿಂಡೂ ಹಿಂಡು ಎದ್ದ ಮಳೆ ಹುಳ ದೀಪವನ್ನು ಮುತ್ತಿದಾಗ ಅವನ್ನು ಓಡಿಸಲಿಕ್ಕೆ ಪ್ರಯತ್ನಾ ಪಡ್ತಾ ಅಮ್ಮಾ ಹೇಳಿದ್ದಳು. ಅಮ್ಮನ ಮಾತಿಗೆ ಅರ್ಥವನ್ನು ಚಿಟ್ಟಿ ಹುಡುಕಲಿಕ್ಕೆ ಹೋಗಲಿಲ್ಲ. ಕೆಲವೊಮ್ಮೆ ಅಮ್ಮನ ಮಾತಿಗೆ ಅರ್ಥ ಇರಲ್ಲ. ಆ ಹುಳುಗಳು ತನ್ನ ಮುತ್ತಿ ಬಿಟ್ಟರೆ ಅನ್ನಿಸಿ ಮುಸುಗೆಳೆದು `ಹುಂ’ ಗುಟ್ಟಿದ್ದಳು. ಮಳೆ ಹುಳಗಳು ಎದ್ದರೆ ಮಳೆ ಬರುತ್ತೆ ಅಂತಾರೆ ಆದರೆ ಆ ರಾತ್ರಿ ಮಾತ್ರ ಮಳೆ ಹನಿಸಲಿಲ್ಲ. ಗುಪ್ಪೆ ಗುಪ್ಪೆಯಾಗಿ ಎದ್ದ ಮಳೆ ಹುಳ ಎಲ್ಲಿತ್ತೋ ಹೇಗಿತ್ತೋ ಯಾಕೆ ಹೀಗೆ ಒಟ್ಟಾಗಿ ಎದ್ದವೋ, ದೀಪಕ್ಕೆ ಮುತ್ತಿ ಅದರ ಬಿಸಿಗೆ ರೆಕ್ಕೆ ಕಳೆದುಕೊಂಡು ನೆಲಕ್ಕೆ ಬೀಳುತ್ತವೋ ಗೊತ್ತಿಲ್ಲ. ಅವಳಿಗೆ ಈಗ ತಾನೊಂದು ಮಳೆಹುಳ ಆಗಿಬಿಟ್ಟರೆ ಅನ್ನಿಸಿತು. ಈಚೆಗೆ ಅವಳಿಗೆ ಹಾಗೇ ನೋಡಿದ್ದೆಲ್ಲಾ ತಾನಾದರೆ ಅನ್ನಿಸುತ್ತಿತ್ತು. ರೆಕ್ಕೆ ಕಳೆದುಕೊಂಡು ಬೋಳುಮೈಯ್ಯಿಂದ ಮನೆಯಲ್ಲೆಲ್ಲಾ ಓಡಾಡುವ ಆ ಹುಳುಗಳನ್ನು ನೆನೆದು ಮಳೆ ಹುಳ ಆಗುವುದು ಬೇಡ ಅನ್ನಿಸಿ ನಿದ್ದೆಗೆ ಜಾರಿದ್ದಳು.
ಬೆಳಗ್ಗೆ ಹಾಯೆಂದು ಮೈ ಮುರಿಯುತ್ತಾ ಹೊರಗೆ ಬಂದ ಚಿಟ್ಟಿಗೆ ಲೈಟು ಕಂಬದ ಕೆಳಗೆ ರಾಶಿ ರಾಶಿ ಬಿದ್ದಿದ್ದ ದೀಪದ ಹುಳಗಳನ್ನು ಯಾರೋ ಮರಕ್ಕೆ ಹಾಕಿ ಕೇರಿ ಅದರ ರೆಕ್ಕೆಯನ್ನು ಬೇರೆ ಮಾಡುತ್ತಿದ್ದರು. ಅದನ್ನು ತಿನ್ನುತ್ತಾರೆ ಅನ್ನುವುದು ಅವಳಿಗೆ ಅರೋಗ್ಯಾಳಿಂದ ಗೊತ್ತಿತ್ತು. `ಸ್ವಲ್ಪ ಎಣ್ಣೆ ಬುಟ್ಟು ಈ ಹುಳುಗಳ್ನ ಹಾಕಿ ಹುರುದ್ರೆ ಸ್ವಲ್ಪ ಹೊತ್ತಲ್ಲೇ ಗರಿಗರಿ ಆಗ್ತಾವೆ. ಅದಕ್ಕೆ ಒಂದಿಷ್ಟು ಉಪ್ಪು ಕಾರ ಹಾಕಿದ್ರೆ ಆಯ್ತು ಎಂಥಾ ರುಚಿ ಅಲ್ವಾ’ ಎಂದಿದ್ದಳು. ಅವಳ ವರ್ಣನೆ ಕೇಳೆ ಚಿಟ್ಟಿಗೆ ವಾಕರಿಕೆ ಬಂದಿತ್ತು. ಅವಳ ಮುಖದಲ್ಲಿ ಹೇವರಿಕೆಯನ್ನು ಕಂಡು `ಅವಲಕ್ಕೀನ ಎಣ್ಣೇಲ್ ಹಾಕಿ ತಿನ್ನಲ್ವ ಕರುಂ ಕರುಂ ಅಂತ ನಮ್ಗೆ ಇದ್ ಹಾಗೇ’ ಎಂದಿದ್ದಳು ಆರೋಗ್ಯ. ಅದು ಅವಳ ಮನಸ್ಸಿನಲ್ಲಿ ಹೀಗೆ ಸುಳಿದಾಡಿತು. ಯಾಕೋ ಆ ನೆನಪು ಅವಳಿಗೆ ಹಿತ ತರಲಿಲ್ಲ ಆ ಹುಳ, ಹೆಂಗಸು ಎಲ್ಲವನ್ನೂ ಬಿಟ್ಟು ಆಕಾಶದ ಕಡೆಗೆ ಕಣ್ಣು ಹಾಯಿಸಿದಳು.
ಬೆಳಗಿನ ಹೂಬಿಸಿಲಲ್ಲಿ ವಿಶಾಲವಾದ ಆಕಾಶ, ಅದರಲ್ಲಿ ಅಲೆದಾಡುವ ಮೋಡ, ಅದರ ಕೆಳಗೆ ಅಲೆದಾಡುವ ಮರ ಗಿಡ ಬಳ್ಳಿ, ಕಾಲಿಗೆ ತಾಕುವ ಹುಲ್ಲ ಗರಿ, ಅದರ ಮೇಲಿನ ಮಂಜಿನ ಹನಿ ಎಲ್ಲವೂ ಏಕಕಾಲಕ್ಕೆ ಚಿಟ್ಟಿಗೆ ಗೋಚರಿಸತೊಡಗಿತು. ಇಡೀ ಭೂಮಿಗೆ ಏನೋ ಕಳೆ ಬಂದಿದೆ ಅನ್ನಿಸಿತು. ಅದನ್ನು ನೋಡುತ್ತಾ ಅವಳಿಗೆ ಅಚ್ಚರಿಯೆನ್ನಿಸಿ `ಅರೆ ಇಷ್ಟು ವರ್ಷಗಳಲ್ಲಿ ನಾನು ಕಾಣದ ಯಾವುದೋ ಸೌಂದರ್ಯ ಇಲ್ಲಡಗಿದೆಯಲ್ಲಾ’ ಎನ್ನಿಸಿ ಮನಸ್ಸಿಗೆ ಸಂತೋಷವಾಯಿತು. ಹಾಗೆ ಚಿಟ್ಟಿ ಆಕಾಶವನ್ನು, ಬೆಳಗಿನ ಬೆರಗನ್ನೂ ನೋಡುತ್ತಾ ಪರಿವೆಯೇ ಇಲ್ಲದೆ, ಕೆಂಜಗನ ಗೂಡಿನ ಮೇಲೆ ಕಾಲಿಟ್ಟು ಬಿಟ್ಟಿದ್ದಳು. ಗೂಡಿಂದ ಹೊರಬಂದ ಇರುವೆಗಳು ಅವಳ ಕಾಲನ್ನು ಕಚ್ಚಿ ಬಿಳುಪಾದ ಕಾಲುಗಳನ್ನು ಕೆಂಪಗಾಗಿಸಿದ್ದವು.
ಕಾಲುಗಳನ್ನು ನೋಡುತ್ತಾ, ಹತ್ತಿದ್ದ ಇರುವೆಗಳನ್ನು ಕೊಡವುತ್ತಾ ಕಚ್ಚಿದ ಉರಿಗೆ ಕಣ್ಣಲ್ಲಿ ನೀರನ್ನು ತಂದುಕೊಂಡು ನಿಂತ ಚಿಟ್ಟಿಯನ್ನು ಹುಡುಕುತ್ತಾ ಭಾರತಿ ಬಂದಳು. ಅವಳಿಗೆ ಕಾಡಿನ ಅಂಚಿನ ಸೀಗೆ ಮೆಳೆಯ ಆಚೆಗೆ ಜಗ್ಗಿ ಮೊಗ್ಗು ಬಿಟ್ಟಿದ್ದ ಕಾಡುಮಲ್ಲಿಗೆ ಕಂಡಿತ್ತು. ಆ ಸಂಭ್ರಮವನ್ನು ಹೇಳಲು ಬಂದವಳು ಚಿಟ್ಟಿಯ ಅವಸ್ಥೆಯನ್ನು ನೋಡುತ್ತಾ `ನೆಲನೋಡ್ತಾ ನಡೀಬಾರ್ದಾ ನೋಡು ಎಲ್ಲೆಲ್ಲಿ ಹೇಗ್ ಹೇಗೆ ಸೇರ್ಕೊಂಡಿದೆಯೋ ಕಚ್ಚಿದಾಗಲೇ ಗೊತ್ತಾಗೋದು’ ಎಂದಳು. ಚಿಟ್ಟಿ ಯಾಕೋ ಮಂಕಾದಳು. ಎಲ್ಲರೂ ತನಗೆ ಹೀಗೆ ಹೇಳೋರೇ ನಾನ್ಯಾಕೆ ನೆಲನೋಡ್ಕೊಂಡ್ ನಡೀಬೇಕು? ಮನೇಲೂ ಹೀಗೆ ಅಜ್ಜಿ `ನೆಲನೋಡ್ಕೊಂಡ್ ಓಡಾಡೆ’ ಎನ್ನುತ್ತಾಳೆ. ನನ್ನ ಕಾಲಿಗೆ ಅಭ್ಯಾಸ ಇರೋದಿಲ್ಲವೇ? `ನನ್ನ ಕಾಲ್ಗೂ ಕಣ್ಣಿದೆ ಅಜ್ಜಿ’ ಎನ್ನುತ್ತಾ ಅಜ್ಜಿಯನ್ನು ಎಷ್ಟೋ ಸಲ ಉಚಾಯಿಸಿದ್ದಾಳೆ. ಆದರೂ ಆ ಮಾತನ್ನು ಕೇಳಿದ ತಕ್ಷಣ ಅವಳ ಮನಸ್ಸು ಮುದುಡುತ್ತದೆ. ನಿಜವಾಗಿ ಅವಳಿಗೆ ಆಕಾಶ ನೋಡೋದು ಎಷ್ಟ್ ಇಷ್ಟ! `ಹಾಳು ಭಾರತಿ ಇವ್ಳನ್ನ ನನ್ನ ಫ್ರೆಂಡ್ ಅಂದ್ಕೊಂಡಿದ್ದೆ ಇವಳೂ ಹೀಗೇ ಅನ್ನಬೇಕೆ? ಇವಳಿಗೆ ಆಕಾಶ ನೋಡೋಕ್ಕೆ ಬರಲ್ಲ ಅದಕ್ಕೆ ನಂಗೆ ನೆಲ ನೋಡ್ಲಿಕ್ಕೆ ಹೇಳ್ತಾಳೆ’ ಎಂದು ಬೈದುಕೊಂಡಳು.
ಚಿಟ್ಟಿಯ ಯೋಚನೆ ಭಾರತಿಯ ಹತ್ತಿರಕ್ಕೂ ಸುಳಿಯಲಿಲ್ಲ. ಹಾಗಾಗಿ ಅವಳು ಆ ಮಾತನ್ನೇ ಮುಂದುವರೆಸಿದ್ದಳು `ಸೀಗೆಮೆಳೆ ಆಚೆಗೆ ಕಾಡು.. ಮಲ್ಲಿಗೆ ತುಂಬಾ ಮೊಗ್ಗು ಹಿಡಿದಿದೆ. ನೋಡಿ ಬಂದಿದ್ದೀನಿ ಇವತ್ತು ಸಂಜೆ ಹೋಗಿ ಮೊಗ್ಗುಗಳನ್ನು ಕಿತ್ತು ತರೋಣ’ ಎನ್ನುತ್ತಾ ಅವಳ ಲಂಗವನ್ನು ಕೊಡವತೊಡಗಿದಳು. ತಲೆ ಆಡಿಸಿದ ಚಿಟ್ಟಿ `ಮನೆಯ ಮುಂದೆ ಹಾಕಿರುವ ಮಲ್ಲಿಗೆಗೆ ದಿನಾ ನೀರೆರೆದರೂ ಬಿಡದಷ್ಟು ಹೂವುಗಳನ್ನ ಈ ಕಾಡುಮಲ್ಲಿಗೆ ಹೇಗೆ ಬಿಡುತ್ತೆ?’ ಎಂದಳು. ಲಂಗಕ್ಕೆ ಹತ್ತಿದ್ದ ಇರುವೆಯನ್ನು ಕೊಡವುತ್ತಿದ್ದ ಭಾರತಿಯ ಕೈ ಕ್ಷಣ ಕಾಲ ಸುಮ್ಮನೆ ನಿಂತಿತು. `ಹೇಗೆ ಅಂದ್ರೆ? ಗಿಡಕ್ಕೆ ಖುಷಿಯಾಗುತ್ತಲ್ಲ, ಅದೇ ಖುಷಿ ಹೂವಾಗುತ್ತೆ ಅಷ್ಟೇ’ ಎಂದಳು ಸಹಜವಾಗಿ. `ಹೂವು ಅರಳುವುದು ಇಷ್ಟೊಂದು ಸರಳವಾ? ಗಿಡಕ್ಕೇನೋ ಖುಷಿಯಾದ್ರೆ ಹೂವರಳಿಸುತ್ತೆ ಮನುಷ್ಯನಿಗೆ . .? ನಾವ್ಯಾಕ್ ಗಿಡದ್ ಹಾಗೇ ಆಗ್ಲಿಲ್ಲ?’ ಚಿಟ್ಟಿಯ ಪ್ರಶ್ನೆಗೆ ಏನು ಹೇಳುವುದು ಎಂದು ಅರ್ಥವಾಗದೆ ನಿಂತ ಭಾರತಿ `ನಿಂಗೆಲ್ಲೋ ತಲೆ ಕೆಟ್ಟಿದೆ ಸಂಜೆ ಮೊಗ್ಗು ಕೀಳೋಕ್ಕೆ ಹೋಗೋದನ್ನ ಮರೀಬೇಡ. ನಿಮ್ಮಮ್ಮ ಬೇಡ ಅಂದ್ರೆ ಕದ್ದಾದ್ರೂ ಸರಿ ಬಾ. ಇನ್ನೂ ಎಷ್ಟು ದಿನ ಮನೇಲಿ ಇರ್ತೀಯ ನೀನು ದೊಡ್ಡೋಳಾಗಿ ಆಗ್ಲೆ ನಾಕು ತಿಂಗಳಾಯ್ತು’ ಎಂದಳು.
ಹೌದು ಚಿಟ್ಟಿಗೆ ಈಗ ಮೊದಲಿನ ಹಾಗೆ ತೀರಾ ನಿರ್ಬಂಧ ಇರಲಿಲ್ಲ. ಆದ್ರೆ ಮಾತೆತ್ತಿದ್ರೆ `ನೀನು ದೊಡ್ದವಳಾಗಿದ್ದೀಯ ನೆನಪಿಟ್ಕೋ’ ಅನ್ನೋಮಾತು ಮಾತ್ರ ಪದೇ ಪದೆ ಅವಳ ಕಿವಿಗೆ ಬೀಳುತ್ತಿತ್ತು. ಅಮ್ಮ ಮುಂಚಿನ ಹಾಗೆ ಚಿಕ್ಕ ಹುಡುಗಿ ಅನ್ನೋ ಹಾಗೆ ನೋಡದೇ ಇದ್ದರೂ ಅವಳಿಗೆ ಮಗಳ ಬೆಳವಣಿಗೆಯ ಬಗ್ಗೆ ಹೆಮ್ಮೆ ಇತ್ತು. ಪುಟ್ಟಿ ಸೀನು ಅವಳನ್ನ ಗೋಳುಹೊಯ್ದುಕೊಳ್ಳುತ್ತಿದ್ದರೆ ಅವರನ್ನು ಅಮ್ಮ ಗದರುತ್ತಿದ್ದಳು. ಆಗೆಲ್ಲಾ ಚಿಟ್ಟಿಗೆ ದೊಡ್ಡವಳಾಗುವುದರಿಂದ ಹೀಗೆ ಪ್ರಾಮುಖ್ಯತೆ ಸಿಗುತ್ತಲ್ಲ ಅಂತ ಖುಷಿಯಾಗುತ್ತಿತ್ತು. ತಾನು ತುಂಬಾ ದೊಡ್ಡವಳೇನೋ ಎನ್ನುವ ಹೆಮ್ಮೆಯಿಂದ ಪುಟ್ಟಿ ಮತ್ತು ಸೀನರನ್ನು ನೋಡುತ್ತಿದ್ದಳು. ಆದರೆ ಯಾಕೋ ಅಪ್ಪ ಮಾತ್ರ ಅವಳ ಜಗತ್ತಿನಿಂದ ದೂರ ದೂರಕ್ಕೆ ಉಳಿಯತೊಡಗಿದ್ದ. ಈಗ ಎರಡು ಮೂರು ವರ್ಷಗಳ ಕೆಳಗೆ ಕೂಡಾ ತಾನು ನಡೆಯಲ್ಲ ಅಂತ ಹಟ ಹಿಡಿದಾಗ ತನ್ನಭುಜದ ಮೇಲೆ ಕೂಡಿಸಿಕೊಂಡು ಮೈಲಿಗಟ್ಟಲೆ ನಡೆದಿದ್ದ, ತನ್ನ ವಿಷಯಕ್ಕೆ ಯಾವ ತಪ್ಪೂ ಮಾಡದ, ತನ್ನ ಕೈಲಾದಷ್ಟು ಒಳ್ಳೆಯದನ್ನೇ ಮಾಡುತ್ತ ಬಂದಿರುವ, ನನ್ನ ಮಗಳು ರಾಜಕುಮಾರಿ ಅಂತ ಹೆಮ್ಮೆ ಪಡುತ್ತಿದ್ದ ಅಪ್ಪನನ್ನು ನಾನು ಯಾಕೆ ದೂರ ಮಾಡಿಕೊಂಡೆ? ಚಿಟ್ಟಿಗೆ ಅರ್ಥವಾಗಲಿಲ್ಲ.
ಅಮ್ಮನ ಕುತ್ತಿಗೆಗೆ ಮಾಲೆಯ ಹಾಗೆ ತನ್ನ ತೋಳುಗಳನ್ನು ಹಾಕಿ, `ಅಮ್ಮ ಗಿಡಕ್ಕೆ ಖುಷಿಯಾದ್ರೆ ಹೂವು ಬಿಡುತ್ತೆ. ಆಕಾಶಕ್ಕೆ?’ ಅಮ್ಮ ನಕ್ಕಳು `ಮಳೆ ಸುರಿಯುತ್ತೆ’. ಚಿಟ್ಟಿಗೆ ತೀರದ ಉತ್ಸಾಹ `ಹಾಗಾದ್ರೆ ಗಾಳಿಗೆ?’ ಚಿಟ್ಟಿಯ ಪ್ರಶ್ನೆಗಳಿಗೆ ಅಮ್ಮನಿಗೆ ಯಾಕೋ ತಿಳಿಯದ ಸಂತೋಷ. ಅದನ್ನು ಮುಖದಲ್ಲಿ ತುಂಬಿಕೊಂಡು `ಹಾಂ ಗಂಧ ಹರಡುತ್ತೆ. ನವಿಲಿಗೆ ಖುಷಿಯಾದ್ರೆ ಡ್ಯಾನ್ಸ್ ಮಾಡುತ್ತೆ, ಚಿಟ್ಟೆಗೆ ಖುಷಿಯಾದ್ರೆ ಹಾರಾಡುತ್ತೆ. ಕೋಗಿಲೆ ಹಾಡುತ್ತೆ. . . ‘ ಅಮ್ಮ ತನ್ನಷ್ಟೇ ಪುಟ್ಟ ಹುಡುಗಿಯೇನೋ ಅನ್ನಿಸಿ ಸಂಭ್ರಮದಿಂದ `ಅಲ್ವಾ ಮತ್ತೆ? ಅಮ್ಮಾ ಅಮ್ಮಾ ಮನುಷ್ಯನಿಗೆ ಖುಷಿಯಾದ್ರೆ ಏನಾಗುತ್ತೆ?’ ಅಂದಳು ಚಿಟ್ಟೀ. ಅಮ್ಮನಿಗೆ ಚಿಟ್ಟಿ ಈ ಪ್ರಶ್ನೆ ಕೇಳಬಹುದು ಎನ್ನುವ ಕಲ್ಪನೆ ಕೂಡಾ ಇರಲಿಲ್ಲ. ಏನಾಗುತ್ತೆ ಅವಳಿಗೂ ಹೇಳಲಿಕ್ಕೆ ಗೊತ್ತಾಗಲಿಲ್ಲ. ಕಂಗಾಲಾದ ಅಮ್ಮ ತೋರಿಸಿಕೊಳ್ಳದೆ ಅವಳ ಹಣೆಗೆ ಮುತ್ತಿಟ್ಟು ನಕ್ಕಳು. ಚಿಟ್ಟಿ ಬಿಡಲಿಲ್ಲ `ಏನಾಗುತ್ತೆ ಹೇಳು?’ ಎಂದು ಹಟಕ್ಕೆ ಬಿದ್ದಳು. `ಚಿಟ್ಟಿ ನಿನ್ನ್ ಪ್ರಶ್ನೆಗೆ ನೀನೇ ಉತ್ತರ ಹುಡುಕ್ಕೋಬೇಕು. ನನಗ್ ಗೊತ್ತಿರೋದನ್ನ ನಿಂಗೆ ಹೇಳ್ತೀನಿ, ಗೊತ್ತಿಲ್ದೆ ಇರೋದನ್ನ ಹೇಗೆ ಹೇಳ್ಲಿ?’ ಎಂದಳು. `ಅಮ್ಮಾ ಕಾಡು ಮಲ್ಲಿಗೆ ತರಲು ಹೋಗ್ಲಾ? ಎಲ್ಲಾ ಹೋಗ್ತಾ ಇದಾರೆ’ ಎಂದಳು ಮೆಲ್ಲಗೆ. ಅಮ್ಮ ನಕ್ಕು `ಹುಷಾರು’ ಎಂದು ಅವಳ ತಲೆಯನ್ನು ಸವರಿದಳು. ತನ್ನ ಲಂಗದ ನಿರಿಯನ್ನು ಚಿಮ್ಮುತ್ತಾ ಹೊರಗೆ ಹೋದ ಮಗಳನ್ನ `ಚೆನ್ನಾಗಿಟ್ಟಿರು ದೇವ್ರೆ’ ಎನ್ನುತ್ತಾ ಮೇಲೆ ನೋಡಿ ಕೈ ಮುಗಿದಳು.
ಕಾಡುಮಲ್ಲಿಗೆಯ ಗಿಡದ ಬಳಿ ಸೇರಿದ್ದ ನಕ್ಕತ್ತು, ಸರೋಜ, ಆರೋಗ್ಯ ಎಲ್ಲರೂ ತಮ್ಮ ತಮ್ಮ ಕೈಲಿದ್ದ ಚೀಲಕ್ಕೆ ಮೊಗ್ಗನ್ನು ಕುಯ್ದು ಹಾಕುತ್ತಿದ್ದರು. ನಕ್ಕತ್ತು `ನೋಡೇ ನಾನು ಎಷ್ಟ್ ಹೂವನ್ನು ಕಿತ್ತಿದ್ದೀನಿ’ ಎಂದಳು. ಅವಳ ಆ ಮಾತನ್ನ ಕೇಳಿದ ತಕ್ಷಣ ಎಲ್ಲರೂ ಪೈಪೋಟಿಗೆ ಬಿದ್ದವರಂತೆ ಹೂವನ್ನು ಕೀಳತೊಡಗಿದ್ದರು. ಚಿಟ್ಟಿ ಮಾತ್ರ ಮೊಗ್ಗಿನ ತೊಟ್ಟನ್ನು ಹಿಡಿದು ಅದನ್ನು ತಿರುಗಿಸುತ್ತಾ, ಅದರ ಚಂದವನ್ನು ನೋಡುತ್ತಾ ಕೂತಳು. `ಚಿಟ್ಟಿ ನಿಂಗ್ ಹೂವ ಬೇಡ್ವೇನೇ? ನಾಳೆ ಎಲ್ಲಾ ಸ್ಕೂಲಿಗೆ ಮುಡ್ಕೊಂಡ್ ಹೋಗೋಣ ಅಂತ ತಾನೆ ಅಂದ್ಕೊಂಡಿದ್ದು’. ಚಿಟ್ಟಿಯ ಕಣ್ಣಲ್ಲಿ ಹೂವಿನ ಬಿಳುಪು ಇಳಿದು ಪರಿಮಳ ಎದೆಯ ಆಳವನ್ನು ಮುಟ್ಟಿತ್ತು. `ಈ ಹೂವಿನ ಹಾಗೆ ನಾನೂ ಅರಳಬೇಕು ಎಷ್ಟ್ ಚೆಂದ ಅಲ್ವಾ?’ ಎಂದಳು ಚಿಟ್ಟಿ. `ಲೇ ಇದ್ರದ್ದು ಒಂದು ದಿನದ ಬಾಳು ಕಣೆ, ನಾವು ನೂರು ವರ್ಷ ಬದುಕ್ತೀವಿ ನಿಂಗ್ಯಾಕ್ ಅರ್ಥ ಆಗ್ತಾ ಇಲ್ಲ? ಯಾಕೋ ನೀನು ಎಲ್ಲಾರ್ ಹಾಗಿಲ್ಲ’ ನಕ್ಕತ್ತು ಗೊಣಗಿದಳು. `ಮೈನೆರೆದ ಮೇಲೆ ಹುಷಾರಾಗಿರ್ಬೇಕು ಅಂತಾರೆ ಏನಾದ್ರೂ ಮೇಟ್ಕೊಂಡ್ ಬಿಟ್ಟಿರ್ಬೇಕು ಇವ್ಳಿಗೆ. ನಮ್ಮವ್ವಂಗೆ ಹೇಳಿದ್ರೆ ಸರೀಗ್ ನೀವಳಿಸಿ ಹಾಕ್ತಾಳೆ ಆಗ ಎಲ್ಲಾ ಸರಿಯಾಗುತ್ತೆ’ ಎಂದಳು ಆರೋಗ್ಯ. ಎಲ್ಲರ ಪ್ರತಿಕ್ರಿಯೆಯ ನಡುವೆಯೇ ಚಿಟ್ಟಿ ಕುತೂಹಲದಿಂದ ಹೂವನ್ನೇ ನೋಡುತ್ತಾ ಕೂತಳು. ಈ ಹೂವು ಹೇಗೆ ಅರಳಿತು, ಹೂವಿನ ಸಮವಾದ ಪಕಳೆ ಎಲ್ಲಿಂದ ಬಂತು? ಇದನ್ನ ಯಾರು ಕತ್ತರಿಸಿಟ್ಟರು?, ಪಕಳೆಗಳ ಮಧ್ಯದ ಕುಸುಮೆಯನ್ನು ಯಾರು ತಂದಿಟ್ಟರು? ಅದರ ಒಳಗಿನ ಮಕರಂದವನ್ನು ತುಂಬಿದವರ್ಯಾರು? ಇವಕ್ಕೆಲ್ಲಾ ಮಿಗಿಲಾಗಿ ಹೀಗೆ ಅರಳು ಎಂದು ಇವಕ್ಕೆ ಹೇಳಿಕೊಟ್ಟವರ್ಯಾರು? ಇದರ ಮಧ್ಯೆ ಗಂಧವನ್ನು ಹಚ್ಚಿದವರ್ಯಾರು?. . . ಯಾರು ಯಾರುಗಳ ನಡುವೆ ಚಿಟ್ಟಿ ಕಳೆದುಹೋಗಿದ್ದಳು. ಅವಳ ಕೈ ಬಿಸಿಯಲ್ಲಿ ಇದ್ದ ಒಂದೇ ಒಂದು ಮೊಗ್ಗು ಸೂರ್ಯ ಮುಳುಗುವ ಹೊತ್ತಿಗೆ ಅರೆಬಿರಿಯುತ್ತಿತ್ತು.
ಹೂವಿನ ಅಂದವನ್ನು ಅನುಭವಿಸುತ್ತಿದ್ದ ಚಿಟ್ಟಿಗೆ ಮೊದಲ ಬಾರಿಗೆ ತಾನು ಎಲ್ಲರಿಗಿಂತ ಬೇರೆ ಅನ್ನಿಸಿಬಿಟ್ಟಿತ್ತು. ಹೂವಿನ ಮೃದುತ್ವ ತಲೆಯಲ್ಲಿ ಮುಡಿದರೆ ಗೊತ್ತಾದೀತೇ? `ಹೌದು ಮನುಷ್ಯರು ಮಾತ್ರ ತಮ್ಮನ್ನು ಚಂದ ಮಾಡಿಕೊಳ್ಳಲಿಕ್ಕೆ ಏನೆಲ್ಲಾ ಸರ್ಕಸ್ಸು ಮಾಡ್ತಾರೆ. ಬಟ್ಟೆ ಹಾಕ್ಕೋತಾರೆ, ಚಪ್ಪಲಿ ತೊಡ್ತಾರೆ. ಮೈಗೆ ಗಂಧ ಹಚ್ಕೋತಾರೆ ತಲೆ ಬಾಚ್ಕೋತಾರೆ. . . ಆದ್ರೆ ಇಡೀ ಪ್ರಕೃತಿ ಏನೂ ಇಲ್ಲದೆ ಸಿಂಗಾರ ಮಾಡಿಕೊಳ್ಳುತ್ತೆ ತನ್ನ ಎದೆಯ ಸಂತಸವನ್ನು ಅರಳಿಸಿ ಗಿಡ ಹೂವನ್ನು ಮುಡಿದು ತಾನೇ ಸುಂದರಿ ಅಂತ ಸಂಭ್ರಮಿಸುತ್ತೆ. ಒಂದಕ್ಕೊಂದು ಎಲ್ಲಿ ಹೋಲಿಕೆ? ಅದನ್ನೆಲ್ಲಾ ನೋಡ್ತಾ ತನ್ನ ಕಣ್ಣಿನ ಒಳಗೆ ತುಂಬಿಕೊಳ್ಳುವುದಷ್ಟೇ ನಮಗೆ ದಕ್ಕುವ ಧನ್ಯತೆ’ ಬಸವರಾಜಪ್ಪ ಮೇಷ್ಟ್ರು ಹೇಳಿದಾಗ ಚಿಟ್ಟಿಗೆ ಏನು ಹೇಳಬೇಕೆಂದು ತೋಚಲಿಲ್ಲ. ತನ್ನಮಗಳ ವಯಸ್ಸಿನ ಹುಡುಗಿಯೊಬ್ಬಳು ಹೀಗೆಲ್ಲಾ ಯೋಚನೆ ಮಾಡ್ತಾಳೆ ಅನ್ನೋದು ಅವರ ಮನಸ್ಸಿಗೆ ಸಂತೋಷವನ್ನು ಕೊಟ್ಟಿತ್ತು. ಮನೆಗೆ ಹೊರಟ ಅವಳನ್ನು ತಡೆದು ಮೇಷ್ಟ್ರು `ನಿನ್ನ ಕಣ್ಣಿನಲ್ಲಿ ಚಂದ್ರಮ ಆಡಬೇಕು, ಕನಸುಗಳು ಅರಳ ಬೇಕು, ಅರಳಿದ ಭಾವನೆಗಳಿಗೆ ಮಾತುಕೊಡಬೇಕು. ನನಗೂ ಗೊತ್ತಿಲ್ಲ ಆದರೆ ಮನುಷ್ಯ ಅನ್ನುವ ಮನುಷ್ಯನ ಒಳಗೆ ಏನೋ ಆಗುತ್ತೆ, ಅವನ ಮಾತಿಗೆ ಮಾಂತ್ರಿಕ ಶಕ್ತಿ ಬರುತ್ತೆ. ಅದು ಎದುರಿಗಿರುವವರ ಮನಸ್ಸಿಗೂ ಮುಟ್ಟುತ್ತೆ. ಅಂಗೈಗೆ ಆಕಾಶ ಸಿಗುತ್ತೆ. ಮುಂಗೈಲಿ ಗಿಣಿ ಕೂಡುತ್ತೆ. ನನಗನ್ನಿಸ್ತಾ ಇದೆ ನಿಂಗೆ ಏನೋ ಶಕ್ತಿ ಇದೆ ಅಂತ’.
ಒಂದು ಕ್ಷಣ ಚಿಟ್ಟಿಗೆ ಏನು ಹೇಳಬೇಕು ತೋಚಲಿಲ್ಲ. ಮೇಷ್ಟ್ರ ಮಾತಲ್ಲಿ ಇರೋದನ್ನ ಹಿಡಿಯೋದು ಹೇಗೆ? ತನ್ನ ಪುಟ್ಟ ಕೈಗಳನ್ನ ಬೊಗಸೆ ಮಾಡಿದಳು. ಅದನ್ನು ನೋಡ್ತಾ ಈ ಬೊಗಸೆಯಲ್ಲಿ ಆಕಾಶಾನ ತುಂಬೋದು ಹ್ಯಾಗೆ? ಇಲ್ಲಿ ಮೋಡ ಆಡೋದ್ ಹ್ಯಾಗೆ? ಹಕ್ಕಿ ಹಾರೋದು, ಮಳೆ ಬರೋದು ಚಂದ್ರ ಮೂಡೋದು ಸೂರ್ಯ ಉರ್ಯೋದು ಎಲ್ಲ… ಎಲ್ಲ ಹ್ಯಾಗೆ? ಹಾಗೆ ಹೋಗಿ ಕನ್ನಡಿಯ ಮುಂದೆ ನಿಂತಳು. ಅವಳ ಬಟ್ಟಲು ಕಣ್ಣುಗಳು ಹೊಳೆದು ಏನೋ ತುಂಬಿದ ಹಾಗಾಯಿತು. ಚಂದ್ರ ಆಡಬೇಕು ಎನ್ನುವ ಮೇಷ್ಟ್ರ ಮಾತು ಮತ್ತೆ ನೆನಪಾಗಿ ಹಾಗೇ ಅವಳು ಧ್ಯಾನ ಸ್ಥಿತಿಯಲ್ಲಿ ತನ್ನನ್ನು ನೋಡುತ್ತಾ ನಿಂತಳು. ಕೆಲಸದ ಮೇಲೆ ಒಳಗೆ ಬಂದ ಅಮ್ಮ ಅವಳನ್ನೇ ನೋಡುತ್ತಾ `ಏನು ಚಿಟ್ಟಿ ಹೀಗ್ ನಿಂತೆ?’ ಎಂದಳು. ಚಿಟ್ಟಿ ಮುಗ್ಧವಾಗಿ ಕೇಳಿದಳು `ಅಮ್ಮಾ ನನ್ನ ಕಣ್ಣೂಗಳಲ್ಲಿ ಚಂದ್ರಮ ಆಡುತ್ತಾನಾ?’ ಚಿಟ್ಟಿಯಲ್ಲಾಗುತ್ತಿರುವ ಬದಲಾವಣೆಯನ್ನು ಗಮನಿಸುತ್ತಾ ಹತ್ತಿರ ಬಂದ ಅಮ್ಮ ಅವಳ ಮೊಗವನ್ನು ಬೊಗಸೆಯಲ್ಲಿ ಹಿಡಿದು `ನಿನ್ನ ಕಣ್ಣು ಚಂದ್ರನ ಚೂರು ಕಂದಾ ಅವ್ನು ನಿನ್ನ ಕಣ್ಣಲ್ಲಲ್ದೆ ಎಲ್ಲಿ ಆಡಬೇಕು ಹೇಳು?’ ಎಂದಳು. `ಅಮ್ಮ ಹಾಗಾದ್ರ್ ನಾನ್ ತುಂಬಾ ತುಂಬಾ ವಿಶೇಷಾನಾ?’ ಚಿಟ್ಟಿಯ ಮಾತಿಗೆ `ನನ್ನ್ ಕಂದ ಅಲ್ವಾ ನೀನ್ ವಿಶೇಷಾನೇ’ ಅಮ್ಮನ ಕಣ್ಣುಗಳು ತುಂಬಿಬಂದಿದ್ದವು. ಅಮ್ಮನ ಆ ಮೊಗವನ್ನು ನೋಡ್ತಾ ಅನ್ನಿಸಿತು, ಅಮ್ಮನ ಖುಷಿ ಅರಳಿ ನಾನು ಹುಟ್ಟಿದೆನಾ! ಗಿಡಕ್ಕೆ ಹೂವಿನ ಹಾಗೇ ಅಮ್ಮನಿಗೆ ನಾನು ಅಲ್ವಾ? ಎಂದೆನ್ನಿಸಿದ ತಕ್ಷಣ ಅವಳಿಗೆ ತಾನೇ ಒಂದು ಕೋಮಲವಾದ ಹೂವು ಎನ್ನಿಸಿಬಿಟ್ಟಿತು.
ಇದನ್ನೆಲ್ಲಾ ಅಂದುಕೊಳ್ಳುವಾಗಲೇ ಅತ್ತೆಯ ಅನಾರೋಗ್ಯದ ವಿಷಯವನ್ನು ತೆಗೆದುಕೊಂಡು ಊರಿಂದ ಮಾವ ಬಂದಿದ್ದ. `ನೀನು ತಕ್ಷಣ ನನ್ನ ಜೊತೆ ಹೊರಡು ನಿಮ್ಮಕ್ಕ ಒಂದೇ ಸಮನೆ ನಿನ್ನ ಕನವರಿಸುತ್ತಿದ್ದಾಳೆ. ತವರಿನ ಸಂಬಂಧ ಉಳೀಬೇಕು ಅಂತ ಅವಳ ಆಸೆ. ಚಿಟ್ಟೀನೂ ಜೊತೆಗೆ ಕರೆದುಕೋ’ ಎಂದ. ಅಜ್ಜಿ ಅಳುತ್ತಾ ಅವಾಂತರ ಮಾಡುತ್ತ ಹೊರಟಿದ್ದಳು.
ರಂಗುಮಹಾಪಟ್ಟಣದ ಕಥೆಯಿಂದ ತನ್ನ ಕಣ್ಣಲ್ಲಿ ಕಥೆಯ ಕಾರಣವನ್ನು ಬಿತ್ತಿದ ಅತ್ತೆ ಸತ್ತು ಹೋಗುತ್ತಾಳೆಯೇ? ಚಿಟ್ಟಿಯ ಎದೆಯಲ್ಲಿ ಸಂಕಟವಾಯಿತು. ತನ್ನ ಬಗ್ಗೆ ಅಂಥಾ ಅಕ್ಕರಾಸ್ತೆ ಇಲ್ಲದ ಅತ್ತೆ ತನ್ನನ್ನು ನೋಡಬೇಕು ಅಂತ ಯಾಕೆ ಅಂದುಕೊಂಡಳು? ಅತ್ತೆಯ ಜೊತೆಗಿದ್ದ ಭಾವನಾತ್ಮಕ ಸಂಬಂಧ ಎಂದರೆ ಕಥೆ, ಕಥೆಯ ಜೊತೆ ತಾನು ಸಣ್ಣ ಹುಡುಗಿ ಇದ್ದಾಗ ಯಾರೋ ಮಕ್ಕಳಿಲ್ಲದವರು ಹುಣ್ಣೀಮೆಗೆ ಅಮಾವಾಸ್ಯೆಗೆ ಸಣ್ಣ ಮಗುವನ್ನು ಹೊಸಿಲ ಮೇಲೆ ಕೂಡಿಸಿ ಅದರ ಬೆನ್ನ ಮೂಳೆಯ ಮಣಿಗಳ ಮೇಲೆ ಬಳೆಯನ್ನು ಕಾಯಿಸಿ ಒಂದೊಂದೆ ಬೊಟ್ಟು ಇಟ್ಟಿದ್ದರಂತೆ. ಹಾಗಿಟ್ಟರೆ ಬೊಟ್ಟು ಇಡಿಸಿಕೊಂಡ ಮಗು ಖಾಯಿಲೆ ಬಿದ್ದು ಸತ್ತು ಹೋಗಿ, ಬೊಟ್ಟು ಇಟ್ಟವರ ಹೊಟ್ಟೆಯಲ್ಲಿ ಹುಟ್ಟುತ್ತದೆ ಎನ್ನುವ ನಂಬಿಕೆ. ಸ್ನಾನ ಮಾಡಿಸಲು ಬಂದ ಅತ್ತೆ ಬೆನ್ನ ಮೇಲಿನ ನಾಕು ಬೊಟ್ಟನ್ನು ನೋಡಿದ್ದೇ ತಡ ಅಮ್ಮನಿಗೆ `ಏಯ್ ಏನ್ ಮಾಡ್ತಿದ್ದೆ ಮಗೂನ ಹೀಗೇಬಿಟ್ಟೀದ್ರೆ ಕಳ್ಕೊಂಡ್ ಬಿಡ್ತಾ ಇದ್ಯಲ್ಲೇ’ ಎಂದು ಬೈದು ಚಿಟ್ಟಿಯನ್ನು ಹೊಸಿಲ ಮೇಲೆ ಕೂಡಿಸಿ, ಅವಳ ಬೆನ್ನಿಗೆ ಚಪ್ಪಲಿ ಪೊರಕೆಗಳನ್ನ ನೀವಳಿಸಿ ಕೆಟ್ಟದ್ದನ್ನ ತೆಗೆಯುವ ಯತ್ನ ಮಾಡಿದ್ದಳಂತೆ. ಅಮ್ಮ ಎಷ್ಟೋ ಸಲ `ಅತ್ತೆ ನಿನ್ನ ಸಾವಿನಿಂದ ಉಳಿಸಿದ್ದಾಳೆ’ ಅಂತ ಹೇಳಿದ್ದನ್ನು ಚಿಟ್ಟಿ ಕೇಳಿದ್ದಳು.
ಅತ್ತೆ ಹಾಸಿಗೆಯಲ್ಲಿ ಏದುಸುರುಬಿಡುತ್ತಾ ಮಲಗಿದ್ದನ್ನ ನೋಡಿದ ಚಿಟ್ಟಿಗೆ ಗಾಬರಿಯಾಗಿತ್ತು. ಎತ್ತರ, ಗಾತ್ರ ಇದ್ದ ಅವಳು ಹಾಸಿಗೆಗೆ ಅಂಟಿಕೊಂಡು ಮಲಗಿದ್ದಳು. ಇದೇ ಅತ್ತೆಯನ್ನೇ ಅಲ್ಲವೇ ನಾನು ನೋಡುತ್ತಿದುದು? ಇದೇ ಅತ್ತೆಯೆ ತನಗೆ ಕಥೆಯನ್ನು ಹೇಳುತ್ತಿದ್ದುದು? ಇಲ್ಲ ಈ ಅತ್ತೆ ಅಲ್ಲ ಅನ್ನಿಸಿ ಅವಳನ್ನೆ ದಿಟ್ಟಿಸಿದಳು. ಅಪ್ಪ ಅತ್ತೆಯ ಪಕ್ಕ ಕುಳಿತ. `ಗುಂಡೂ ತವರಿನ ಸಂಬಂಧ ಕಡಿದುಕೊಳ್ಳಬಾರದು’ ಎಂದು ಅತ್ತೆ ಪೀಠಿಕೆ ಹಾಕಿದಳು. ಅಪ್ಪ ಅಸಹನೆಯಿಂದ `ಇದೇನೇ ಸುಬ್ಬ ಚಿಟ್ಟಿ ವಯಸ್ಸೇನು? ರಾಜನ ವಯಸ್ಸೇನು? ಸುಮ್ಮನಿರು, ಈಗ ಅವಳಿಗೆ ನಾನು ಮದುವೆ ಮಾಡೋಕ್ಕಾಗುತ್ತಾ’ ಎಂದ. `ಅಲ್ವೋ ನಾನು ಆಸೆ ಪಡೋದ್ರಲ್ಲಿ ತಪ್ಪೇನು ಇಲ್ಲ ಅಲ್ವಾ? ಸಾಯ್ತಾ ಮಲಗಿರೋ ನನ್ನ ಮಾತನ್ನ ಕೇಳಲ್ವಾ’ ಎಂದಳು. ಅವಳ ಮಾತನ್ನ ಕೇಳಿದ್ದೇ ತಡ ಅಜ್ಜಿ `ಮಾತುಕೊಡೋ, ಚಿಟ್ಟಿ ಈ ಮನೆಗೆ ಸೊಸೆ ಆಗ್ತಾಳೆ ಅಂದ್ರೆ ಇವಳ ಮನಸ್ಸಿಗೆ ನೆಮ್ಮದಿಯಾಗಿ ಉಳ್ಕೋತಾಳೊ ಏನೋ’ ಎನ್ನುತ್ತಾ ಗೋಳಾಡತೊಡಗಿದಳು. `ಬೇಡಮ್ಮಾ ಅವಳಿಗೆ ತಿಳಿಯದ ವಯಸ್ಸು, ಈಗ ಅವಳ ಮನಸ್ಸನ್ನು ಕೆಡಿಸಬೇಡ. ನಾನ್ ಮಾತ್ರ ಮಾತು ಕೊಡಲ್ಲ’ ಎಂದ ಅಪ್ಪ ಖಡಾಖಂಡಿತವಾಗಿ. ಅತ್ತೆ ಮಾತುಕೊಡುವಂತೆ ಹಟ ಹಿಡಿದಳು. ಅಪ್ಪ ಮಾತುಕೊಡಲಿಲ್ಲ. ಅಜ್ಜಿ ಹಿಡಿಶಾಪ ಹಾಕಿದಳು. ಅಪ್ಪ ಕೇಳಿಸದವನಂತೆ ಇದ್ದ.
ಇದೆಲ್ಲಾ ನಡೆವ ಹೊತ್ತಿಗೆ ಅತ್ತೆ ಏದುಸಿರು ಬಿಡತೊಡಗಿದಳು. ಅಜ್ಜಿ ಕಾಫಿ ಮಾಡಿಕೊಂಡು ಬಂದು `ಬಿಸಿಯಾಗ್ ಕುಡ್ಯೇ’ ಎನ್ನುತ್ತಾ ಕಣ್ಣ ನೀರನ್ನು ಬೆರೆಸಿ ಕುಡಿಸಲು ಬಂದಳು. ಅತ್ತೆ ಅದನ್ನು ನಿರಾಕರಿಸುತ್ತಾ `ಅಮ್ಮ ಎಲಡಿಕೆ ಕೊಡೆ’ ಎಂದಳು. `ಬೇಡ ಕಣೆ ಸುಬ್ಬ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡರೆ ಕಷ್ಟ ಎಂದು ತಡೆದ ಅಜ್ಜಿಯನ್ನು ತಳ್ಳಿ ಅತ್ತೆ ಕುಟ್ಟಣಿಯ ಕಡೆಗೆ ಕಷ್ಟದಿಂದ ಸಾಗಿದ್ದಳು. `ಕುಟ್ಟಿಕೊಡುತ್ತೇವೆ’ ಎಂದು ಯಾರು ಹೇಳಿದರೂ ಕೇಳದೇ ತಾನೇ ಕುಟ್ಟಿ ಬಾಯಿಗೆ ಹಾಕಿಕೊಂಡಳು. ಹಾಗೆ ಹಾಕಿಕೊಂಡ ತಕ್ಷಣ ಅವಳ ಕಣ್ಣೀಗೆ ಏನೋ ಕಾಣತೊಡಗಿ `ಅಯ್ಯೋ ರಾಮ ಲಕ್ಷ್ಮಣ ಬಂದು ನನ್ನ ಎಲಡಿಕೆ ಚೀಲ ತೆಗೆದುಕೊಂಡು ಓಡ್ತಾ ಇದಾರೆ ಅವ್ರನ್ನ ಹಿಡೀಬೇಕು’ ಎನ್ನುತ್ತಾ ಎದ್ದು ನಿಂತಳು. ಅಪ್ಪ ಓಡಿ ಹೋಗಿ ಅವಳನ್ನ ಹಿಡಿದು ಮಂಚದ ಹತ್ತಿರಕ್ಕೆ ಕರೆತಂದ. `ನನ್ನ ಮುಟ್ಟ ಬೇಡ’ ಅಂತ ಅತ್ತೆ ಬೈಯ್ಯುತ್ತಿದ್ದರೂ ಅಪ್ಪ ಲೆಕ್ಕಿಸಲಿಲ್ಲ. ಎಲ್ಲವನ್ನೂ ನೋಡುತ್ತಾ ಗಾಬರಿಯಲ್ಲಿ ನಿಂತ ಚಿಟ್ಟಿಗೆ `ಹೊರಗ್ ಹೋಗು’ ಎಂದು ಚಿಟ್ಟಿಯನ್ನು ಕಳಿಸಿದ ಅಪ್ಪ.
ಹೊರಗೆ ಬಂದ ಚಿಟ್ಟಿ ಏನಾಗ್ತಾ ಇದೆ ಎಂದು ಯೋಚಿಸುತ್ತಾ ನಿಂತಳು. ಆಗಲೇ ಅವಳಿಗೆ ರಾಜ ಎದುರಾಗಿದ್ದು. ಅಮ್ಮನಿಗೆ ಹುಷಾರಿಲ್ಲ ಅಂದರೂ ತಿರುಗಾಟವನ್ನು ಬಿಡದ ಅವನು ಹೊರಗಿನಿಂದ ಬರುತ್ತಾ ಅವಳನ್ನು ನೋಡಿ `ಚೆನ್ನಾಗಿದ್ದೀಯಾ ಚಿಟ್ಟಿ?’ ಎನ್ನುತ್ತಾ ಅವಳ ಹತ್ತಿರಕ್ಕೆ ಬಂದ. ಅವನ ಮಾಸಲು ಬಣ್ಣದ ಹಲ್ಲುಗಳು, ಸಣ್ಣ ಕಣ್ಣುಗಳಲ್ಲಿ ಅನಾವಶ್ಯಕವಾಗಿ ಮಿಂಚುವ ಕಪ್ಪುಪಾಪೆ. ಅದ್ಯಾಕೋ ಚಿಟ್ಟಿಗೆ ಕಿರಿಕಿರಿಯನ್ನುಂಟು ಮಾಡಿತು. `ಚಿಟ್ಟಿ ಅಮ್ಮ ಏನ್ ಹೇಳ್ತಾ ಇದಾಳೆ ಗೊತ್ತಾ?’ ಎಂದ. ಅವನ ಮಾತು ನೋಟ ಹಾವಭಾವ ಎಲ್ಲಾ ಅವಳಿಗೆ ಅಸಹ್ಯ ಅನ್ನಿಸತೊಡಗಿತು. ಅನಾವಶ್ಯಕವಾಗಿ ಚಿಟ್ಟಿಯ ಹೆಗಲಮೇಲೆ ಕೈಹಾಕಿ ತುಂಬು ಸಲಿಗೆಯಿಂದ `ನಿನ್ನ ನಾನು ಮದ್ವೆ ಆಗ್ಬೇಕಂತೆ’ ಎಂದ. ಸ್ಕೂಲಲ್ಲಿ ಕೋಲಾಟ ಆಡುವಾಗ, ಡ್ಯಾನ್ಸ್ ಮಾಡುವಾಗ ಆಕಸ್ಮಿಕವಾಗಿ ಬೇರೆ ಹುಡುಗರ ಕೈ ಸ್ಪರ್ಷ ಆಗಿದ್ದು ನಿಜವೇ ಆದರೂ ಗಂಡಸಿನ ಸ್ಪರ್ಷ ಅಂತ ಅವಳಿಗೆ ಆಗಿದ್ದು ಇದೇ ಮೊದಲ ಬಾರಿಗೆ. ಇದೇನೂ ಅವಳಿಗೆ ಹಿತವಾಗಿರಲಿಲ್ಲ. ಕಲ್ಪನೆಯ ರಾಜಕುಮಾರ ಅವಳ ಕೈ ಹಿಡಿದಾಗ ಆಗುತ್ತಿದ್ದ ರೋಮಾಂಚನಕ್ಕೂ ರಾಜ ಸ್ಪರ್ಷಕ್ಕೂ ತುಂಬಾ ವ್ಯತ್ಯಾಸ ಇತ್ತು. ಮೈಮೇಲೆ ಕಂಬಳಿ ಹುಳು ಹರಿದ ಹಾಗನ್ನಿಸಿ ರಾಜನ ಕೈಗಳನ್ನು ಕೊಸರಿಕೊಳ್ಳಲು ನೋಡಿದಳು. ಅವನು ಅವಳ ಕೈಗಳನ್ನು ಹಿಡಿದು ಪಟ್ಟನ್ನು ಬಿಗಿಗೊಳಿಸುತ್ತಾ ಹತ್ತಿರಕ್ಕೆ ಬರತೊಡಗಿದ. ಚಿಟ್ಟಿಗೆ ಎಲ್ಲಿತ್ತೋ ಆವೇಶ ಗೊತ್ತಾಗಲಿಲ್ಲ. ಅವನ ಕೈಯ್ಯನ್ನು ಕಿತ್ತು ಹಾಕಿ `ನನ್ನ ಮುಟ್ಟಬೇಡ ಭಾವ’ ಎಂದು ಕೂಗಿದಳು. ಅವಳ ಕೂಗನ್ನ ಕೇಳಿ ಅಪ್ಪ ಅಮ್ಮ ಇಬ್ಬರೂ ಹೊರಬಂದರು. ಅಮ್ಮನನ್ನು ನೋಡಿದ ತಕ್ಷಣ ಚಿಟ್ಟಿ ತಬ್ಬಿ ಹಿಡಿದು ಜೋರಾಗಿ ಅಳತೊಡಗಿದಳು. ರಾಜ ದಿಗ್ಭ್ರಾಂತನಾಗಿ ನಿಂತ. ಚಿಟ್ಟಿಯ ತಲೆಯನ್ನು ನೇವರಿಸಿ ಅಪ್ಪ ರಾಜನ ಕಡೆ ದುರುದುರು ನೋಡುತ್ತಾ `ಹೊರಡು..’ ಎನ್ನುವಂತೆ ಅಮ್ಮನಿಗೆ ಸನ್ನೆಮಾಡಿದ. ರಾಜ ಅಪ್ಪನಿಗೆ `ಮಾವ ನಾನೇನೂ ಮಾಡಿಲ್ಲ’ ಎಂದು ಅಲವತ್ತುಕೊಂಡ. ಅವನ ಮಾತನ್ನು ಕೇಳಿಸಿಕೊಳ್ಳದೆ ಅಪ್ಪ ಹೊರಟ, ಅಮ್ಮ ಚಿಟ್ಟಿ ಇಬ್ಬರೂ ಅವನನ್ನೇ ಹಿಂಬಾಲಿಸಿದರು. ಅಜ್ಜಿ ಮಾತ್ರ ಅಲ್ಲೇ ಉಳಿದಳು.
ಬಸ್ಸಿನಲ್ಲಿ ಕೂತ ಚಿಟ್ಟಿಗೆ ಅಳುಬಂತು. ಒಂದು ಗಂಡಸಿನ ಸ್ಪರ್ಷದಲ್ಲಿ ಎಷ್ಟು ಕಠೋರತೆ ತುಂಬಿರುತ್ತದಾ? ಅಸಹ್ಯವಾಗಿರುತ್ತಾ? ಮುಜುಗರ ಮೂಡುತ್ತಾ? ಇಂಥಾ ಸ್ಪರ್ಷಕ್ಕೆ ಯಾರಾದರೂ ಹಾತೊರೀತಾರಾ? ಅಕಸ್ಮಾತ್ ಅಪ್ಪ ಏನಾದ್ರೂ ಬರದೇ ಇದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತು? `ನಿಮ್ಮ ನಿರ್ಧಾರ ಸರಿಯಿತ್ತು ಸಾಯುತ್ತಾ ಮಲಗಿದ್ದಾರೆ ಅಂತ ಎಲ್ಲಿ ಮಾತು ಕೊಡ್ತೀರೋ ಅಂದುಕೊಂಡಿದ್ದೆ. ಆ ಹೊತ್ತಲ್ಲಿ ನಾನೂ ಏನೂ ಮಾತಾಡಲಿಕ್ಕೆ ಆಗುತ್ತಿರಲಿಲ್ಲ’. ಅಮ್ಮನ ಮಾತಿಗೆ ಅಪ್ಪ `ನನ್ನ ಮಗಳನ್ನ ಹಾಳುಬಾವಿಗೆ ತಳ್ಳಲಿಕ್ಕೆ ಬರುತ್ತಾ ನೀನೇ ಹೇಳು?’ ಎಂದ. ಅಮ್ಮನ ಮುಖದಲ್ಲಿ ಸಮಾಧಾನದ ಮಿಂಚು ಕಂಡಿತು. ಅಪ್ಪನ ಭುಜಕ್ಕೆ ಒರಗಿದಳು. ಅವಳ ಮುಖದಲ್ಲಿ ಎಂಥಾದ್ದೋ ತೃಪ್ತಿ ಕಾಣುತ್ತಿತ್ತು. ಅಮ್ಮ ಯಾವತ್ತೂ ಅಪ್ಪನ ಜೊತೆ ಅಷ್ಟು ಸಮಾಧಾನವಾಗಿದ್ದಿದ್ದನ್ನ ನೋಡಿರಲಿಲ್ಲ. ಅಪ್ಪ ಅಮ್ಮ ಯಾವಾಗಲೂ ಹೀಗೆ ಇದ್ದರೆ ಅನ್ನಿಸಿತು. ಹಾಗೆ ಅಮ್ಮ ಅಪ್ಪನಿಗೆ ಒರಗಿದ್ದನ್ನ ನೋಡುತ್ತಿದ್ದಂತೆ ಅವಳಿಗೆ ಮನೆಯ ಮುಂದಿನ ಆಲವಾಣ ಮರಕ್ಕೆ ಆತುಕೊಂಡು ನಿಂತ ಮಲ್ಲಿಗೆ ಬಳ್ಳಿ ನೆನಪಾಯಿತು.
ಮನೆಗೆ ಬಂದ ಚಿಟ್ಟಿ ಎರಡೆರಡು ಸಲ ಸೋಪನ್ನು ಹಾಕಿ ಸ್ನಾನ ಮಾಡಿದಳು. ಅವನು ಮುಟ್ಟಿದ ಗುರುತು ತನ್ನ ಮೈಮೇಲೆ ಇರಬಾರದು ಎಂದುಕೊಂಡಳು. `ಇಷ್ಟು ಹೊತ್ತಲ್ಲಿ ಯಾಕೇ ಸ್ನಾನ? ಎಂದು ಅಮ್ಮ ಅವಳನ್ನು ಕೇಳಲಿಲ್ಲ. ಮೈ ಹಗುರವಾಯಿತು. `ಅಮ್ಮಾ ಭಾರತಿಯನ್ನು ಮಾತಾಡ್ಸಿ ಬರ್ತೀನಿ’ ಎಂದು ಚಿಟ್ಟಿ ಹೊರಗೆ ಹೊರಟಳು. ಅವಳ ಮೈ ಹಗುರವಾಗಿತ್ತು. ಸದ್ಯ ಅಪ್ಪ ಮಾತು ಕೊಡದೆ ತನ್ನನ್ನು ಆ ರಾಜನಿಂದ ಬಚಾವು ಮಾಡಿದ್ದಕ್ಕೆ ಅವಳಿಗೆ ಕೃತಜ್ಞತೆ ಇತ್ತು. ಇನ್ನು ತಾನು ಭದ್ರ ಎನ್ನುವ ಭಾವನೆ ಅವಳ ಮನಸ್ಸಿನಲ್ಲಿ ಮೂಡಿದ್ದರಿಂದಲೋ ಏನೋ ಬಯಲಲ್ಲಿ ಹಾಗೇ ನಿಂತಳು. ಮೇಲೆ ನೀಲಿ ಆಕಾಶ, ಕೆಳಗೆ ಹಸಿರು ಭೂಮಿ, ಅಕ್ಕಪಕ್ಕ ತಂಗಾಳಿಗೆ ತೂಗುವ ಗಿಡಮರ ಬಳ್ಳಿಗಳು ಕಣ್ಣನ್ನ ಮುಚ್ಚಿ ಆ ಗಾಳಿ ಎಲ್ಲೆಲ್ಲಿದಲೋ ತರುವ ಗಾಳಿಯನ್ನು ದೀರ್ಘವಾಗಿ ಒಳಗೆ ಎಳೆದುಕೊಂಡು ಅನುಭವಿಸಿದಳು. ಮುಚ್ಚಿದ ಕಣ್ಣಿನ ಒಳಗೆ ನೂರಾರು ಬಣ್ಣಗಳು. ಬಯಲಲ್ಲಿ ಹೀಗೆ ನಿಂತ ತಾನು ಗಿಡವೋ, ಬಳ್ಳಿಯೋ ಮರವೋ ಅದರಲ್ಲರಳಿದ ಹೂವೋ, ತೂಗುವ ಕಾಯೋ ಯಾವುದೂ ಎಂದು ಗೊತ್ತಾಗಲಿಲ್ಲ. ಅದು ಅವಳಿಗ್ ಬೇಕಾಗೂ ಇರಲಿಲ್ಲ. ಅಂಗಾಲಿನಿಂದ ನೆತ್ತಿಯವರೆಗೂ ಒಂದು ಪುಳಕ ಹುಟ್ಟಿ ತಾನು ಚಿಟ್ಟಿ ಎಂದೂ ಮರೆತು ಹೋದಳು.
(ಮುಂದುವರಿಯುವುದು…)
 

‍ಲೇಖಕರು avadhi

October 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: