‘ಜಟ್ಟ’ – ರೂಪಲಕ್ಷ್ಮಿ ವಿಮರ್ಶೆ

ರೂಪ ಲಕ್ಷ್ಮಿ

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳೇ ನಡೆಯುತ್ತಿಲ್ಲ, ಡಬ್ಬಿಂಗ್ ಬೇಕೇ? ಬೇಡವೇ? ರಿಮೇಕ್, ಸ್ವಮೇಕ್ ಇತ್ಯಾದಿ ಗಲಾಟೆಗಳ ನಡುವೆ ಅಲ್ಲೊಂದು, ಇಲ್ಲೊಂದು ಚಿತ್ರ ಸಿಕ್ಕಾಪಟ್ಟೆ ಶಬ್ಧ ಮಾಡುತ್ತಿವೆ. ತನ್ನ ಚಿತ್ರದ ನಾಯಕಿಯ ಬಳಿ ಡಬಲ್ ಮೀನಿಂಗ್ ಮಾತುಗಳನ್ನು ಹೇಳಿಸಿ, ‘ಕಿರು ಚಿತ್ರ’ ದಂತೆ ಫೇಸ್ ಬುಕ್ ನಲ್ಲಿ, ಯೂ ಟ್ಯೂಬ್ ನಲ್ಲಿ ಒಂದಷ್ಟು ಕಾಲ ವಿಜೃಂಭಿಸಿ, ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿಂಪಲಾಗೊಂದು ಲವ್ ಸ್ಟೋರಿ ಇರಬಹುದು ಅಥವಾ ಪ್ಲಾನಿಂಗ್ ಸಮಯದಿಂದ ಹಿಡಿದು ಡಿಸ್ಟ್ರಿಬ್ಯೂಷನ್, ವಿಮರ್ಷೆ, ಸಂವಾದ ಎಂದೆಲ್ಲಾ ಪ್ರತಿಯೊಂದು ಹಂತವನ್ನು ವೀಕ್ಷಕರನ್ನು ‘ಇದು ನಿಮ್ಮದೇ ಚಿತ್ರ!’ ಎಂದು ಮೋಡಿಗೊಳಿಸಿದ ‘ಲೂಸಿಯಾ’ ಇರಬಹುದು, ಎಲ್ಲವೂ ಕೂಡ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯನ್ನು ತರಬಹುದೇನೋ? ಎನ್ನುವ ಆಸೆಯನ್ನು ಹುಟ್ಟು ಹಾಕಿದ ಚಿತ್ರಗಳು. ಈ ಸಾಲಿಗೆ ಸೇರುವ ಮತ್ತೊಂದು ಚಿತ್ರ ‘ಜಟ್ಟ’.
ಪ್ರಕೃತಿಯ ವಿನಾಶ, ಕಾಡು ಜನರ ತೊಳಲಾಟ, ನಗರದ ಜನರ ತಳಮಳ, ಶ್ರೀಮಂತ ಜನರ ದುರಾಸೆ, ದುರ್ಬಲ ವರ್ಗದವರ ಅಸಹಾಯಕತೆ, ಧರ್ಮದ ಹೆಸರಿನಲ್ಲಿ ಮುಗ್ಧರನ್ನು ಬಲಿಗೊಡುವ ಸ್ವಾರ್ಥ, ಅಧಿಕಾರದ ಮೋಹ, ಪ್ರಸ್ತುತ ಪರಿಸ್ಥಿತಿಯಲ್ಲಿ ನರಳುತ್ತಿರುವ ಗಂಡು ಹೆಣ್ಣಿನ ಸಂಬಂಧಗಳು, ಸ್ತ್ರೀವಾದ, ಇವೆಲ್ಲವೂ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಲೇ ಆಗುತ್ತಿರಬಹುದೆಂಬ ಅನುಮಾನ, ಹೀಗೆ…. ಹತ್ತು, ಹಲವಾರು ಸಮಸ್ಯೆಗಳನ್ನು ‘ಜಟ್ಟ’ ಮಾತಾಡುತ್ತದೆ. ಆದರೆ ‘ಜಟ್ಟ’ ಚಿತ್ರದ ಸಮಸ್ಯೆ ಏನೆಂದರೆ ಅದು ತೆಗೆದುಕೊಂಡಿರುವ ವಿಷಯಗಳೂ, ದೃಶ್ಯ ಮಾಧ್ಯಮದಲ್ಲಿ ಚಿತ್ರೀಕರಿಸಲು ಬಹಳ ಕಷ್ಟ. ಕೆಲವು ಮಾತುಗಳನ್ನು ದೀರ್ಘವಾಗಿ ಭಾಷಣದಂತೆಯೇ ಹೇಳಿಸಬೇಕಾಗುವುದು ಚಿತ್ರದ ಬಹುಮುಖ್ಯ ತೊಡಕು! ನಾಟಕಗಳಲ್ಲಿ ಇಂತಹವುದನ್ನು ಹೇಳಿ ಗೆದ್ದವರು ಬಹು ಮಂದಿ. ಆದರೆ ‘ಸಿನೆಮಾ’ ಗಳಲ್ಲಿ ದೃಶ್ಯಗಳಲ್ಲಿ ಕಥೆಯನ್ನು ಹೇಳಬೇಕಾಗುವುದು ಅತ್ಯಂತ ಪ್ರಮುಖ ಅಂಶ. ಇದನ್ನು ನಿರ್ದೇಶಕರು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದರೇ? ಅಥವಾ ನಾಟಕಗಳನ್ನು ನಿರ್ದೇಶನ ಮಾಡುವುದರಲ್ಲಿಯೇ ಪಳಗಿದುದರಿಂದಾಗಿ ‘ಸಿನೆಮಾ’ ಚಿತ್ರೀಕರಣದಲ್ಲಿ ಅಥವಾ ಸಿನೆಮಾ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವಲ್ಲಿ ನಿರ್ದೇಶಕರು ಸೋತರೇ? ತಿಳಿಯದು.

 

ಹಾಗಾದರೆ ‘ಜಟ್ಟ’ ಚಿತ್ರ ಚೆನ್ನಾಗಿದೆಯೇ? ಇಲ್ಲವೇ? ಇದನ್ನು ಹೇಳುವುದು ಭಯಂಕರ ಕಷ್ಟ. ‘ಲೂಸಿಯಾ’ ಸಂವಾದದಲ್ಲಿ ಅರ್ಬನ್ ಎಲೈಟ್ ಪ್ರೇಕ್ಷಕನ ಇಗೋ ತಣಿಸಿದ ಚಿತ್ರ ‘ಲೂಸಿಯಾ’ ! ಎಂದು ಸರಳವಾಗಿ ಗೆಳೆಯನೊಬ್ಬ ಹೇಳಿದಂತೆ, ‘ಜಟ್ಟ’ ಚಿತ್ರವನ್ನು ಅಷ್ಟು ಸುಲಭವಾಗಿ ವರ್ಗೀಕರಿಸಲಾಗುವುದಿಲ್ಲ. ಮೈಸೂರು, ಮಂಡ್ಯ, ಬೆಂಗಳೂರು, ಮಂಗಳೂರು, ಕುಂದಾಪುರ, ಮಲೆನಾಡು, ಉತ್ತರ ಕನ್ನಡ ಹೀಗೆ ಎಲ್ಲಾ ಜನರಿಗೂ ತಲುಪುವಂತಹ ಬೇರೆ, ಬೇರೆ ಕನ್ನಡ ಭಾಷೆಯ ಪ್ರಯೋಗವಿದೆ. ನಾಯಕನ ಬಾಯಲ್ಲಿ ಕೃತಕವಾಗಿ ಕೇಳಿಸುವ ಭಾಷೆ, ಆತನ ಹೆಂಡತಿಯ ಪಾತ್ರಧಾರಿಯ ಮಾತುಗಳಲ್ಲಿ ಚಂದವಾಗಿ ನೈಜತೆಯಿಂದ ಕೇಳಿಬರುತ್ತದೆ. ಇನ್ನೂ ನಾಯಕಿಯ ಪಾತ್ರಧಾರಿಯ ವರ್ತನೆ ಫೆಮಿನಿಸ್ಟ್ ಎಂದು ತೋರಿಸಿದರೂ ಕೂಡ, ಆಕೆ ಡ್ರಗ್ ಅಡಿಕ್ಟ್ ಎಂದು ತೋರಿಸಲೋ ಅಥವಾ ಮಾತುಗಳನ್ನು ಒತ್ತಿ ಒತ್ತಿ ಹೇಳುವ ನಾಟಕದ ಶೈಲಿಯೋ?! ತಿಳಿಯದು, ಅತ್ಯಂತ ಕೃತಕವಾಗಿ ಆಕೆ ಎಳೆದೆಳೆದು ಮಾತಾಡುವ ಪರಿ ಬೇಸರ ಹುಟ್ಟಿಸಿಬಿಡುತ್ತದೆ. ಮಾತಾಡದೇ ಇರುವ ದೃಶ್ಯಗಳಲ್ಲಿ ಆಕೆಯ ನಟನೆ ಮಾಡುವ ಮೋಡಿ, ಅವಳು ಮಾತಾಡಲು ತೊಡಗಿದೊಡನೆ ಕಿರಿಕಿರಿ ಆಗಿಬಿಡುತ್ತದೆ. ಹಾಗಾಗಿ ಆಕೆ ಪ್ರತಿಪಾದಿಸುವ ‘ಸ್ತ್ರೀ ವಾದ’ದಲ್ಲಿ ಹುರುಳಿದ್ದರೂ ಕೂಡ, ಮನಸ್ಸಿಗೆ ನಾಟುವುದೇ ಇಲ್ಲ. ಇದು ಚಿತ್ರದ ಅತ್ಯಂತ ನೆಗೆಟಿವ್ ಪಾಯಿಂಟ್.
ನಾಯಕನಿಗೆ ಆತನ ಸಮಸ್ಯೆ (ಪ್ರಸ್ತುತ ಚಿತ್ರರಂಗದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ನಿರ್ದೇಶಕನ ಸಮಸ್ಯೆ ಕೂಡ!) ಏನೆಂಬುದೇ ತಿಳಿಯದು. ತನ್ನನ್ನು ಭೇಟಿ ಮಾಡಿದ ಪ್ರತಿಯೊಬ್ಬರಿಂದಲೂ ಆತ, ತನ್ನ ಸಮಸ್ಯೆಗೆ ಪರಿಹಾರ ಹುಡುಕುತ್ತಾನೆ, ಅವರು ನೀಡಿದ ಪರಿಹಾರವನ್ನು ಬಲವಾಗಿಯೇ ನಂಬುತ್ತಾನೆ. ಹೀಗೆಯೇ ತನ್ನ ಹೆಂಡತಿ ಓಡಿಹೋಗಿದ್ದು ಕೂಡ ಪಾಶ್ಚಾತ್ಯ ಸಂಸ್ಕೃತಿ ಆಕರ್ಷಣೆಯಿಂದಲೇ (ಬೇರೆಯವರು ಹೇಳಿದ್ದನ್ನು) ಎಂದು ಬಲವಾಗಿ ನಂಬುವ ಈತ, ಪುರುಷ ದ್ವೇಷಿ ಸ್ತ್ರೀವಾದಿಯೊಬ್ಬಳನ್ನು ಬುದ್ಧಿ ಕಲಿಸಲೆಂದೇ ಕೂಡಿಹಾಕುತ್ತಾನೆ. ಆದರೆ ಇವರಿಬ್ಬರ ವಾದಗಳು, ತರ್ಕಗಳು ಮತ್ತೊಬ್ಬರನ್ನು ಸೋಲಿಸುತ್ತಲೇ ಹೋಗುತ್ತವೆ! ನಾಯಕ ಇವಳ ಮಾತುಗಳಿಂದಲೇ ಬದಲಾಗುತ್ತಾನೆ ಎಂಬುದನ್ನು ಒಂದು ಕಡೆ ಬಿಂಬಿಸುತ್ತಲೇ, ಮತ್ತೊಂದು ಕಡೆ ಈತನನ್ನು, ಈತನ ಪ್ರಾಮಾಣಿಕತೆಗೆ ಮೆಚ್ಚುವ ಈತನ ಅಧಿಕಾರಿಯ ಪ್ರೀತಿ ಬದಲಾಯಿಸುತ್ತದೆ ಎಂಬುದನ್ನು ಕೂಡ ತೋರಿಸಲಾಗುತ್ತದೆ. ಹಾಗಾಗಿ ನಾಯಕಿ ಮತ್ತು ಜಟ್ಟನ ಅಧಿಕಾರಿ ಈ ಎರಡೂ ಪಾತ್ರಗಳೂ ನಾಯಕನನ್ನು ಜೊತೆಜೊತೆಗೆ ವೀಕ್ಷಕರನ್ನು ಗೊಂದಲಗೊಳಿಸುತ್ತವೆ! ಇಡೀ ಜಗತ್ತೇ ನೆಗೆಟಿವ್ ಗುಣಗಳಿಂದ ತುಂಬಿವೆ ಎಂದು ಹೇಳುತ್ತಾ ಅರಣ್ಯಾಧಿಕಾರಿಯೊಬ್ಬನೇ ಅತ್ಯಂತ ಪ್ರಾಮಾಣಿಕ, ಆತನನ್ನೊಬ್ಬ ಫಕೀರ ಎಂಬಂತೆ ಚಿತ್ರೀಕರಿಸಿರುವುದು ಕೂಡ ಅಭಾಸ ಎನಿಸುತ್ತದೆ. ‘ಜಟ್ಟ’ ಚಿತ್ರದ ನಾಯಕನಾದರೂ, ನಾಯಕನಂತೆ ಮೋಡಿ ಮಾಡುವುದು ಆತನ ಅಧಿಕಾರಿ ಎಂಬುದು ಕಥೆಗಾರ / ನಿರ್ದೇಶಕನನ್ನು ಮೀರಿ ಪಾತ್ರಗಳು ಹೇಗೆ ಬೆಳೆದುಬಿಡುತ್ತವೆ?! ಎಂಬುದಕ್ಕೊಂದು ಉದಾಹರಣೆ.
ಅರಣ್ಯಾಧಿಕಾರಿಯ ಪಾತ್ರಧಾರಿಯ ಧ್ವನಿ ಬಹಳ ಚೆನ್ನಾಗಿದೆ (ಬಹುಶಃ ಗಿರಿರಾಜ್ ಅವರದೇ ಇರಬಹುದು!) ಕೆಲವೊಮ್ಮೆ ಸುಂದರಕೃಷ್ಣ ಅರಸ್ ಅವರ ಧ್ವನಿಯನ್ನು ನೆನಪಿಗೆ ತಂದಿತು. ಚಿತ್ರದಲ್ಲಿ ಪಾತ್ರದ ಮಹತ್ವ ಅರಿತು ನೈಜತೆಯಿಂದ ನಟಿಸಿದವರು ಮೂವರೇ ೧. ಅರಣ್ಯಾಧಿಕಾರಿ ೨. ಕಿಶೋರ್, ೩. ಪಾವನ ಳ ಪ್ರೇಮಿ. ಹಾಡುಗಳು ಸಿ.ಅಶ್ವಥ್ ಅವರನ್ನು ನೆನಪಿಗೆ ತಂದಿತಾದರೂ, ಸಾಹಿತ್ಯ ನೆನಪಿಗೆ ತಂದುಕೊಳ್ಳುವುದು ಬಹಳ ಕಷ್ಟ. (ಕವನವಾಗಿ ಓದಿಕೊಂಡಾಗ ಹಲವು ಹೊಳಹುಗಳು ಸಿಗುತ್ತವೆ). ದೃಶ್ಯ ಮಾಧ್ಯಮವನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು. ಸಿನೆಮಾಗಿಂತ ನಾಟಕವಾಗಿಯೇ ಕಂಡಿದ್ದು ನನ್ನ ತಿಳುವಳಿಕೆಯ ಮಿತಿಯೋ? ಅರಿಯದು. ಆದರೆ ಅದದೇ ಪೇಲವ ಕನ್ನಡ ಚಿತ್ರಗಳಿಗಿಂತ ಹೊಸತನದಿಂದ ಕಂಗೊಳಿಸುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್. ‘ಜಟ್ಟ’ ಚಿತ್ರಕಥೆಯಲ್ಲಿ ಹೊಸತನವಿದೆ. ಆದರೂ ಚಿತ್ರವು ವೀಕ್ಷಕರನ್ನು ತಲುಪದಿದ್ದರೆ ಪ್ರಯೋಜನವಾದರೂ ಏನು?
‘ಲೂಸಿಯಾ’ ಅರ್ಥವಾಯಿತೋ, ಇಲ್ಲವೋ! ಒಟ್ಟಿನಲ್ಲಿ ‘ಲೂಸಿಯಾ’ ತಂಡದ ಶ್ರಮ (ಇದೇ ಅವರ ಕೊನೆಯ ಚಿತ್ರವೇನೋ ಎಂಬಂಥ ಉತ್ಸಾಹ) ಚಿತ್ರದ ಪ್ರಾರಂಭದಿಂದ ಹಿಡಿದು, ಬಿಡುಗಡೆಯಾದ ಮೇಲೂ, ಅವರೆಲ್ಲರೂ ನಡೆಸಿದ ಮಾರ್ಕೆಟಿಂಗ್ ತಂತ್ರ, ಜೊತೆಗೆ ಲಂಡನ್ ನಲ್ಲಿ ಗೆದ್ದ ಮೊದಲ ಚಿತ್ರ, ಇಂಗ್ಲೀಷ್ ಸಬ್ ಟೈಟಲ್ ಎಂದೆಲ್ಲಾ ಅನೇಕ ತಂತ್ರಗಳಿಂದ ವೀಕ್ಷಕರನ್ನು ಬೇಸ್ತು ಬೀಳಿಸಿ, ಒಟ್ಟಿನಲ್ಲಿ ಇಡೀ ಚಿತ್ರದುದ್ದಕ್ಕೂ, ನಂತರವೂ ಭಯಂಕರ ಹೈಪ್ ಜೊತೆಗೆ ಹಣವನ್ನೂ ಕೂಡ ಗಳಿಸಿಕೊಂಡಿತು. ಚಿತ್ರರಂಗ ಕಲಾಮಾಧ್ಯಮವಷ್ಟೇ ಅಲ್ಲಾ, ಉದ್ಯಮವೂ ಕೂಡ ಎಂಬುದನ್ನು ಸಾಬೀತು ಮಾಡಿಬಿಟ್ಟಿತು. ಯಾರೂ ಏನಾದರೂ ಮಾತಾಡಿಕೊಳ್ಳಲಿ, ನನಗೇ ಅದರ ಹಂಗಿಲ್ಲ, ವೀಕ್ಷಕರನ್ನು ಆಕರ್ಷಿಸುವುದಷ್ಟೇ ನನ್ನ ಕೆಲಸ ಎಂಬ ನಿರ್ದೇಶಕರ ಉತ್ಸಾಹ, ನಿರ್ಮಾಪಕರ ಭಾಗವಹಿಸುವಿಕೆ, ತಂಡದ ಇನ್ನಿತರರ ಸಹಕಾರವಿದ್ದರೆ, ಇನ್ನೊಂದಿಷ್ಟು ಇಂತಹ ಒಳ್ಳೆಯ ಚಿತ್ರಗಳು ಮೂಡಿಬಂದು, ಕನ್ನಡ ಚಿತ್ರರಂಗವನ್ನು ಉಳಿಸುವುದೇನೋ ಎನ್ನುವ ಆಸೆ ‘ಲೂಸಿಯಾ’ ನೋಡುವಾಗ ಅನ್ನಿಸಿತ್ತು.
‘ಜಟ್ಟ’ ಚಿತ್ರವು ಬಹುಶಃ ಸಾಹಿತ್ಯ ಇಷ್ಟ ಪಡುವಂತಹ, ಅದರಲ್ಲೂ ದೇವನೂರು, ಸಿದ್ದಲಿಂಗಯ್ಯ ನವರ ಅಭಿಮಾನಿಗಳಿಗೆ ಇಷ್ಟವಾಗಬಹುದೇನೋ? ಆದರೆ ‘ಜಟ್ಟ’ ಆರಂಭದಿಂದಲೂ ಯಾವುದೇ ರೀತಿಯ ಮಾರ್ಕೆಟಿಂಗ್ ತಂತ್ರವಿಲ್ಲದೆ, ಕೊನೆಕೊನೆಗೆ ನಿರ್ದೇಶಕರೊಬ್ಬರದೇ ಉತ್ಸಾಹದಿಂದ (ಒಂದೇ ಥಿಯೇಟರ್ ನಲ್ಲಿ ಪ್ರದರ್ಶಿತವಾಗಬೇಕಾಗಿದ್ದದ್ದು), ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದಲ್ಲದೆ, ಎರಡನೇ ದಿವಸಕ್ಕೆ ಮಲ್ಟಿಪ್ಲೆಕ್ಸ್ ಗಳಿಂದ ಹೊರಬಂದುಬಿಟ್ಟಿತು! ಮಂತ್ರಿ ಮಾಲ್ ನಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ‘ಜಟ್ಟ’ ವನ್ನು ನೋಡುತ್ತಿರುವುದನ್ನು ಕಂಡು ಸಂಕಟವಾಯಿತು. ಆಗ ಅನ್ನಿಸಿದ್ದು ಇಷ್ಟೇ – ‘ಸಿನೆಮಾ’ ಎಂಬುದು ಉದ್ಯಮವೂ ಹೌದು, ಕಲಾಮಾಧ್ಯಮವೂ ಹೌದು ಎಂಬುದನ್ನು ಒಪ್ಪಿಕೊಂಡು, ಇದೊಂದು ದುಬಾರಿ ಕಲಾಮಾಧ್ಯಮವಾದ್ದರಿಂದ, ಹಣ ಹಾಕುವ ನಿರ್ಮಾಪಕನನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇಂತಹ ಕಲಾಕೃತಿಗಳು ವೀಕ್ಷಕರನ್ನು ಮುಟ್ಟಲು ಅವಶ್ಯ ಎಂದೆನಿಸಿಬಿಟ್ಟಿತು!

‍ಲೇಖಕರು avadhi

October 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅರುಣ್ ಜೋಳದಕೂಡ್ಲಿಗಿ

    ಜಟ್ಟ ಸಿನೆಮಾ ನೋಡಿದ ನಂತರ ನಿಮ್ಮ ವಿಮರ್ಶೆಯನ್ನು ಓದಿದೆ. ನಿಮ್ಮ ಮಾತುಗಳು ನನ್ನವೂ ಕೂಡ. ಒಂದೊಳ್ಳೆ ಕನ್ನಡತನದ ಸಿನೆಮಾ ಅನ್ನಿಸಿತು. ಮುಖ್ಯವಾಗಿ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡಿದ್ದರೆ ನಿಜಕ್ಕೂ ಇನ್ನಷ್ಟು ಪರಿಣಾಮಕಾರಿ ಸಿನೆಮಾ ಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದವು. ಒಟ್ಟಾರೆ ಸಿನೆಮಾ ತಂಡದ ಪ್ರಯತ್ನಕ್ಕೆ ನಿಜಕ್ಕೂ ಅಭಿನಂದನೆ ಸಲ್ಲಿಸಲೇ ಬೇಕು.

    ಪ್ರತಿಕ್ರಿಯೆ
  2. Pramod

    ನಿರ್ದೇಶಕರು ಸೋತಿದ್ದು ಮಾರ್ಕೆಟಿ೦ಗ್ ಎ೦ಬ ಮೋಸದ ಮಾಯ ಜಗತ್ತಲ್ಲಿ ಮಾತ್ರ. ಟ್ರೈಲರ್ ನೋಡಿ ವೃಥಾ ತಪ್ಪು ಯೋಚನೆ ಬರಬಹುದು. ಆದರೆ ಅದು ಹಾಗಲ್ಲ.
    ಟಾಪ್ ಕ್ಲಾಸ್ ಸಿನೆಮಾ. ಕಡಲ ತಡಿಯ ಸದ್ಯದ ಪರಿಸ್ಥಿತಿಯ ತಲ್ಲಣಗಳನ್ನು ಚೆನ್ನಾಗಿ ಬಿಡಿಸಿದ್ದಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: