ಪಿ ಚಂದ್ರಿಕಾ ಓದಿದ ‘ವನಜಾಕ್ಷಿ ಎಂಬ ನಾನು’

ರಾಜಶೇಖರ ರಾವ್ ಕನ್ನಡ ರಂಗಭೂಮಿ ಹಾಗೂ ಕಿರುತೆರೆಯ ಅವಿಭಾಜ್ಯ ಅಂಗ. ಇವರ ತಾಯಿ ವನಜಾಕ್ಷಿ ಯಡಪಾಡಿತ್ತಾಯ ಒಂದು ಕುತೂಹಲಭರಿತ ಆತ್ಮ ಕಥೆಯನ್ನು ತಮ್ಮ ಇಳಿ ವಯಸ್ಸಿನಲ್ಲಿ ಬರೆದಿದ್ದಾರೆ. ಏಳು ಮಕ್ಕಳ ತಾಯಿಯ ಅಂತರಂಗ ಬಣ್ಣಿಸುವ ಕೃತಿ ಇದು.

ಈ ಕೃತಿಗೆ ಖ್ಯಾತ ಲೇಖಕಿ ಪಿ ಚಂದ್ರಿಕಾ ಬರೆದ ಮುನ್ನುಡಿ ಇಲ್ಲಿದೆ-

ಪಿ ಚಂದ್ರಿಕಾ

ನನ್ನನ್ನು ಕಾಡುವುದು ಜಗತ್ತು ಬರೆಯದ ಹೆಣ್ಣಿನ ಚರಿತ್ರೆನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದು. ಯಾಕೆಂದರೆ ಚರಿತ್ರೆ ದಾಖಲೆಗಳನ್ನು ನಂಬುತ್ತದೆ. ಆಧಾರಗಳಿಲ್ಲದೇ ಹೋದರೆ ಅದು ಕಥೆ ಯಾರೂ ಕಲ್ಪಿಸಬಹುದು ಎನ್ನುತ್ತದೆ. ಎಲ್ಲಾ ಕಾಲದಲ್ಲೂ ಇತಿಹಾಸಕ್ಕೆ ದೊಡ್ದ ಸಾಧನೆಗಳು, ಗೆಲುವುಗಳು ರೋಚಕತೆಯ ಬಹುದೊಡ್ಡ ಮಜಲುಗಳು ಹೀಗೆ ಎಲ್ಲಾ ಇದ್ದರೆ ಮಾತ್ರ ಅದು ಚರಿತ್ರೆ ಬರೆಯುವವರಿಗೆ ಹುಮ್ಮಸ್ಸು ದಾಖಲಿಸಲಿಕ್ಕೆ ಎಷ್ಟೊಂದು ಸಂಗತಿಗಳು ದೊರಕುತ್ತವೆ. ಅದಕ್ಕೆ ನೋವು ಯಾತನೆಗಳು ಬೇಡ, ಕತ್ತಿಗಂಟಿದ ರಕ್ತದ ಕಲೆಗಳು ಮತ್ತಷ್ಟು ರಕ್ತವನ್ನು ರುಚಿನೋಡುವ ತವಕವನ್ನು ವ್ಯಕ್ತ ಪಡಿಸುತ್ತಲೇ ಇರುತ್ತದೆ.

ಸಣ್ಣ ಅಸಂಗತಿಗಳು ಸಣ್ಣ ಆವಿಷ್ಕಾರಗಳು ಮಹತ್ವದ ಬದಲಾವಣೆಗೆ ಕಾರಣ ಎನ್ನುವುದನ್ನು ಅದು ನಂಬುವುದೇ ಇಲ್ಲ. ಹಾಗಾಗಿ ಪ್ರೀತಿಯೊಂದನ್ನೆ ಹಂಚುವ, ವಾತ್ಸಲ್ಯವನ್ನೇ ಜೀವವಾಗಿಸಿಕೊಂಡ, ಭಾವುಕತೆಯಲ್ಲೇ ಬದುಕಿನ ಸಾರ್ಥಕತೆನ್ನು ಕಾಣುವ ಸಾಮಾನ್ಯ ಹೆಣ್ಣೊಬ್ಬಳ ಚರಿತ್ರೆ ಇರುವುದು ಹೇಗೆ ಸಾಧ್ಯ?

ಹೆಣ್ಣಿನ ಚರಿತ್ರೆ ಎಂದರೆ ಅದು ದಾಖಲೆಗಳಲ್ಲಿ ಇಲ್ಲದೇ ಇರುವ ಕಾಡಜಾಡು. ಮಾಡಿಕೊಂಡರೆ ದಾರಿ ಇಲ್ಲದಿದ್ದರೆ ಕಾಡೇ! ಮತ್ತೆ ಅದನ್ನು ಕಟ್ಟುವುದಾದರೂ ಹೇಗೆ? ಚರಿತ್ರೆ ಎಂದರೆ ಆಗಿ ಹೋಗಿರುವುದು ಮಾತ್ರವಲ್ಲ, ಆಗುತ್ತಿರುವುದು ಮತ್ತು ಮುಂದಿನದನ್ನು ಆಗುಮಾಡುವುದೂ ಕೂಡಾ ಆಗಿರುವುದರಿಂದ ಮಹಿಳಾ ಚರಿತ್ರೆಯನ್ನು ಸಾರ್ಥಕ ಮಾಡುವುದು ನಮ್ಮಂಥ ಹೆಣ್ಣುಮಕ್ಕಳ ಬರಹಗಳೇ ಎನ್ನುವುದು ನನ್ನ ನಂಬಿಕೆ. ವನಜಾಕ್ಷಿ ಎಂಬ ನಾನು.. ಎಂಬ ಈ ಪುಸ್ತಕದ ಬರಹಕ್ಕೂ ಆಧಾರಗಳಲಿಲ್ಲ ನಿಜ, ಆದರೆ ಹೇಳುವವರಾದರೂ ಒಬ್ಬರಿದ್ದಾರಲ್ಲಾ..! ಅದು ರೋಚಕತೆಯದ್ದೂ, ನೋವಿನದ್ದೋ, ನರಳಿಕೆಯದ್ದೋ, ಅಲ್ಲೊಂದು ಚರಿತ್ರೆಯ ಸಂಗತಿ ದಾಖಲಾಗಿದೆ ಎಂದೇ ನನ್ನ ನಂಬಿಕೆ. ಚರಿತ್ರೆಯೇ ಇಲ್ಲದ ನನ್ನಂಥ ಸಾಮಾನ್ಯ ಹೆಣ್ಣುಗಳಿಗೆ ಇತಿಹಾಸದಲ್ಲಿ ಸ್ಥಾನವೇನಿದೆ ಎಂದರೆ ಶೂನ್ಯ. ಅಕಸ್ಮಾತ್ ಆಗಿ ಗಂಡಿನ ವಿರುದ್ಧ ಮಾತನಾಡಿದರೆ ಚಾರಿತ್ರ್ಯ ಹರಣದ ಮಾರ್ಗ ನಮ್ಮನ್ನು ಕುಗ್ಗಿಸುವ ದಾರಿ. ಹೀಗೆ ಬಗ್ಗು ಬಡೆಯುತ್ತಾ ಪುರುಷಾಧಿಕ್ಯದ ಕಥನಗಳು ರೂಪುಗೊಳ್ಳುತ್ತವೇ ಇವೆ.

ನಮ್ಮ ಚರಿತ್ರೆಯಲ್ಲಿ ಯಾವ ರಾಜನೂ ಇಲ್ಲ. ದ್ವೇಷ-ವೈರತ್ವ, ಆಸ್ತಿಗಾಗಿ ಹೊಡೆದಾಟ, ಒಡೆತನಕ್ಕಾಗಿ ಸತತ ಯುದ್ಧ, ರಾಜಕೀಯ ಮೇಲಾಟಗಳು ಯಾವುವೂ ಇಲ್ಲ. ಇಲ್ಲವೆಂದ ಮೇಲೆ ಚರಿತ್ರೆಯಲ್ಲಿ ನಾವು ಯಾಕೆ ಇರಬೇಕು ಎನ್ನುವ ಪ್ರಶ್ನೆಗೆ ನನ್ನ ಮೊದಲ ಸಂಕಲನದ ನಿಮ್ಮ ಚರಿತ್ರೆಯಲ್ಲಿ ಜಾಗವಿಲ್ಲ’ ಎನ್ನುವ ಪದ್ಯದಲ್ಲಿ ನಿಮ್ಮ ಕೊಳಕುಗಳನ್ನು ಪಾಪಗಳನ್ನು ಮುಚ್ಚಿಹೋದ ಸತ್ಯಗಳನ್ನು ನೋಡಲಿಕ್ಕೆ ಎನ್ನುವ ಮಾತುಗಳನ್ನು ಹೇಳುತ್ತೇನೆ. ಸ್ವಾಮ್ಯತ್ವದ ಕನಸುಗಳೇ ಇಲ್ಲದ ವಾತ್ಸಲ್ಯಮುಖವಾದ ಚರಿತ್ರೆಯ ಪ್ರತಿಯೊಂದು ಪುಟದಲ್ಲೂ ನಾವಿದ್ದೇವೆ, ನಮ್ಮ ಅಮ್ಮ, ಅಜ್ಜಿ, ಮುತ್ತಜ್ಜಿಯರಿದ್ದಾರೆ.

ನಮ್ಮ ಆಧ್ಯಾತ್ಮ ಹೊಟ್ಟೆ ತುಂಬಿಸುವುದು, ನಮ್ಮ ಧರ್ಮ ಪ್ರೀತಿ. ಹಣವಿದ್ದರೆ ಏನೆಲ್ಲವನ್ನೂ ಕೊಳ್ಳಬಹುದು ಆರ್ದ್ರತೆಯನ್ನಲ್ಲ. ನಿಜ ನಾವು ಗುಲಾಮರು, ನಾವು ಎರಡನೇ ದರ್ಜೆಯ ಪ್ರಜೆಗಳು, ನಮಗೆ ಕರಾರುವಾಕ್ಕಾಗಿ ವ್ಯವಹರಿಸಲು ಬರುವುದಿಲ್ಲ ಹಾಗೆಂದೇ ಜಗತ್ತು ನಮ್ಮ ಬಗ್ಗೆ ಭಾವಿಸಲಿ ಪರವಾಗಿಲ್ಲ. ಆದರೆ ಜಗತ್ತು ಬಯಸುವ ಪ್ರೇಮವನ್ನು ಸಾಕಾರಗೊಳಿಸಲಿಕ್ಕೆ ನಮ್ಮಂಥ ಹೆಣ್ಣುಗಳಿಗೆ ಮಾತ್ರ ಸಾಧ್ಯ. ಸಾಮರಸ್ಯದ ಮಹತ್ವ ಹೇಳಿ, ಸಂಸಾರವನ್ನು ಆಧ್ಯಾತ್ಮಿಕ ಗೊಳಿಸಿ, ಮಕ್ಕಳಲ್ಲೆ ಪರಮಾತ್ಮನನ್ನು ಕಾಣುವ ಜೀವ ಪ್ರೇಮದ ಸಾಕಾರಕ್ಕೆ ಜಗತ್ತು ಕೊಟ್ಟ ಹೆಸರು ಬುದ್ಧಿ ಇಲ್ಲದವರು. ಇರಲಿ ನಮಗೆ ದೊಡ್ಡ ದೊಡ್ಡ ಜಿಜ್ಞಾಸೆಗಳಿಲ್ಲ, ದೊಡ್ಡ ಸಮಸ್ಯೆಗಳು ನಮ್ಮವಲ್ಲ. ನಾನು ಯಾರು ಎಂದು ಎಂದೂ ಹುಡುಕ ಹೊರಡುವುದಿಲ್ಲ. ಆದರೆ ನಾನು ಏನು ಎನ್ನುವ ಪುಟ್ಟ ಪ್ರಶ್ನೆಯ ಮೂಲಕ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತೇವೆ.

ಕಾರಂತರ ಕಾದಂಬರಿಯಲ್ಲಿ ಬರುವ ಅಜ್ಜಿ ಮಾವಿನ ಮಿಡಿಯನ್ನು ತನ್ನ ಮುಂದೆ ಇಟ್ಟುಕೊಂಡು, ಇದಕ್ಕೆ ಮನೆಯಲ್ಲಿರುವ ಉಪ್ಪನ್ನ ಹಾಕಲಾ? ಇಲ್ಲ ಸಮುದ್ರದ ನೀರನ್ನು ಕಾಯಿಸಿ ಹಾಕಲಾ? ಎಂದು ಕೇಳಿಕೊಳ್ಳುತ್ತಾಳಲ್ಲ-ಎಂಥಾ ಜೀವನ ಪ್ರೀತಿ! ಬೇಕೆಂದಾಗ ಸಂಸಾರ ಬೇಡವೆಂದಾಗ ಸಂನ್ಯಾಸ. ಇದು ಗಂಡಸಿಗೆ ಸಹಜ. ಯಾಕೆಂದರೆ ಅವನದ್ದು ಲೋಕೋತ್ತರವಾದ ಬದುಕು. ದೊಡ್ಡ ಸಮಸ್ಯೆಯ ಜೊತೆ ಬದುಕುವವ. ಕೆಂಡವನ್ನೇ ಕೈಲಿ ಹಿಡಿದು ಬದುಕಿದ ನನ್ನಜ್ಜಿಯರು, ಮಕ್ಕಳಿಗಾಗಿ ಜೀವವನ್ನು ಹಿಡಿದುಕೊಂಡು ಬೆಳೆಸುವ ಯಾವ ತಾಯಂದಿರು ಚರಿತ್ರೆಯಲ್ಲಿ ಅಲ್ಲ ಮನೆಯಲ್ಲೂ ಕೂಡಾ ಹೆಸರಾಗುವುದಿಲ್ಲ, ಬರಿಯ ಶ್ರೀಮತಿಯರಾಗಿರುತ್ತೇವೆ. ಅಗ್ಗಿತ್ತಲ ಎನ್ನುವ ಹಳ್ಳಿಯೂ ಹೀಗೆ.

ಭೂಪಟ ನಕ್ಷೆಯಲ್ಲಿ ಕಾಣಸಿಗದ ಆದರೆ ಹೆಸರನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿರುವ ಒಂದು ಹಳ್ಳಿ. ಇಲ್ಲಿ ಯಾರೂ ಜನಪ್ರಿಯ ವ್ಯಕ್ತಿಗಳು ಹುಟ್ಟದ, ಪುಣ್ಯ ಕ್ಷೇತ್ರಗಳಿಲ್ಲದ ಕಾರಣ ಅದಕ್ಕೆ ಹೊರಗಿನ ಗುರುತುಗಳು ಯಾವುವೂ ಇಲ್ಲ. ನಿರಮ್ಮಳವಾದ ಸಹಜವಾದ, ವಿಶ್ವದ ಅತ್ಯಂತ ಸುಂದರ ಸ್ಥಿತಿಯಲ್ಲಿ ಉಳಿದು ಬಿಟ್ಟಿದೆ. ಇಂಥಾ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವನಜಾಕ್ಷಮ್ಮ ತಮ್ಮ ಜೀವನದ ಪಾಲಿನ ಮಹತ್ವದ ಘಟ್ಟಗಳನ್ನು ದಾಖಲಿಸಲೆಳಸುತ್ತಾರೆ.

ನನ್ನ ಮಟ್ಟಿಗೆ ಇದು ಒಂದು ಅರಿವು. ತನ್ನ ಇವತ್ತಿನ ಸ್ಥಿತಿಗೆ ತನ್ನ ಜೀವನದ ಹೆಜ್ಜೆ ಗುರುತುಗಳನ್ನು ಹುಡುಕಿಕೊಳ್ಳುವ ತವಕ. ಮರಳಿ ಬಾರದ ಲೋಕಕ್ಕೆ ಹೊರಟ ತಾಯಿ ಬಿಟ್ಟು ಹೋದ ಪುಟ್ಟ ಮಗುವಿನ ನೆಪದಲ್ಲಿ, ಅರಿಯದ ಪುಟ್ಟ ಹುಡುಗಿ ದೊಡ್ಡವಳಾಗುವ ಘಟ್ಟ ಅತ್ಯಂತ ಯಾತಾನಾಮಯ. ಹೀಗೆ ಶುರುವಾಗುತ್ತದೆ ವನಜಾಕ್ಷಮ್ಮನವರ ಬದುಕು. ಆದರೆ ವಿಶ್ವಚೇತನದ ಬಹುದೊಡ್ಡ ಹರಕೆ- ಯಾತನೆಯನ್ನೂ ಆನಂದದ ಕಡೆಗೆ ತಿರುಗಿಸುವುದು. ಹಾಗಾಗೇ ಜೀವನ ಹೊರೆಯಲ್ಲ ಅದೊಂದು ಪ್ರೀತಿಯ ಊಟೆಯಾಗಿ ಪರಿವರ್ತಿತವಾಗುತ್ತದೆ. ಭಾರಗಳು ಅಲ್ಲಿ ಹಗುರಾಗುತ್ತವೆ. ವನಜಾಕ್ಷಿಯವರು ಏಳು ಮಕ್ಕಳ ತಾಯಿ. ಅಬ್ಬಬ್ಬಾ ಎಂದರೆ ಏನಿರುತ್ತದೆ ಈ ಕಥೆಯಲ್ಲಿ? ಗಂಡ, ಸಂಸಾರ, ಮಕ್ಕಳು, ಸಾಕಲಿಕ್ಕೆ ಆಗುವ ಶ್ರಮ, ಇವತ್ತಿಗೆ ಮಕ್ಕಳನ್ನು ದಡ ತಲುಪಿಸಿದ ತೃಪ್ತಿ ಇಷ್ಟೇ ಅಲ್ಲವೇ? ಎಲ್ಲರೂ ಮಾಡುವುದೂ ಇದನ್ನೆ. ಇದರಲ್ಲಿ ಹೆಚ್ಚುಗಾರಿಕೆ ಏನಿದೆ? ಎಂದು ಅನ್ನಬಹುದು.

ಸಮುದ್ರದ ಅಲೆಗಳು ದಡಕ್ಕೆ ಹಾಯುತ್ತಲೇ ಇರುತ್ತದೆ. ಅದನ್ನು ನಿಲ್ಲಿಸಲಿಕ್ಕೆ ಸಾಧ್ಯವಿಲ್ಲ. ಆದರೆ ಹೀಗೆ ದಡಕ್ಕೆ ಬಡಿಯುವ ಅಲೆಗಳ ಪರಿಣಾಮ ಸಮುದ್ರದ ಆಳದಲ್ಲಿರುತ್ತದೆ ಅನ್ನುವುದನ್ನೂ ಗಮನಿಸಬೇಕು. ವನಜಾಕ್ಷಿಯವರು ಬಿಚ್ಚಿಡುವುದು ಅವರ ಬದುಕನ್ನು ಮಾತ್ರವಲ್ಲ, ಒಂದು ಕಾಲಘಟ್ಟದ ತಾನು ನಿರಂತರ ಪರಿವರ್ತನೆಗೆ ಪಕ್ಕಾಗಿ ಸಮಾಜದ ಹದುಳ ಕೆಡದ ಹಾಗೆ ಬದುಕಿದ್ದರ ಪರಿಣಾಮ ಏನು ಎನ್ನುವುದನ್ನು ಕೂಡಾ. ಹೀಗಾಗೇ ಅವರ ಈ ಕಥೆ ಅಗ್ಗಿತ್ತಲದಿಂದ ಆರಂಭವಾಗಿ ತಾಯಿಯ ಹೂವಿನ ಪ್ರೀತಿ, ದೊಡ್ಡಪ್ಪನ ಖಿನ್ನತೆ, ಶ್ರಮಜೀವಿಗಳ ಕಥನ, ಸಾಂಪ್ರದಾಯಿಕ ಹೆಣ್ಣುಮಕ್ಕಳ ಸ್ಥಿತಿಗತಿ, ಮದುವೆ, ನಂಬಿಕೆಗಳು, ವಿಧವೆಯರ ಜೀವನ, ತನ್ನ ಜೊತೆ ಕರಳು ಬಳ್ಳಿಯನ್ನು ಹಂಚಿಕೊಂಡ ಆಣ್ಣತಮ್ಮಂದಿರು, ಅಮ್ಮನ ಸವತಿಯರ ಮಕ್ಕಳು, ಸ್ನೇಹಿತರು, ಮಕ್ಕಳು ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆ.

ಓದುತ್ತಾ ಹೋದಂತೆ ಇದನ್ನು ವಿಸ್ತರಿಸಿದ್ದರೆ ಇಲ್ಲೊಂದು ಒಳ್ಳೆಯ ಕಥೆ ಹುಟ್ಟುತ್ತಿತ್ತಲ್ಲಾ? ಅನ್ನಿಸಿ ಆ ಕಥೆಗಳ ಮೇಲೆ ಮನನೆಡುವಂತೆ ಮಾಡುತ್ತದೆ. ನೆಟ್ಟ ಮನದ ಓಟಕ್ಕೆ ಮತ್ತೆ ಹತ್ತೆಂಟು ದಾರಿಗಳನ್ನು ತೋರುತ್ತಾ ಹೋಗುತ್ತದೆ. ಇದು ಬರಿಯ ವನಜಾಕ್ಷಮ್ಮನವರ ಕಥೆಯಲ್ಲ, ಪುಸ್ತಕ ಉಪಶೀರ್ಷಿಕೆ ಸೂಚಿಸುವ ಏಳು ಮಕ್ಕಳ ತಾಯಿಯನ್ನು ಏನೆಂದು ವಿವರಿಸುವುದು. ತಾಯ್ತನವೇ ಅವರ ಅಸ್ತಿತ್ವವೆಂದೇ? ಅಥವಾ ಆ ಏಳು ಮಕ್ಕಳ ಕಥೆಯನ್ನು ಹೇಳಲು ನಿಂತಿರುವ ತಾಯೆಂದೇ? ಇದು ಒಟ್ಟು ಕಥಾನಕವನ್ನೂ ಸೂಚಿಸುವ ತಾತ್ವಿಕತೆಯನ್ನು ಹೇಳುವ ಸಂಗತಿಯಾ? ಏನೂ ಇರಬಹುದು. ಆದರೆ ಕಥೆ ಮಾತ್ರ ವನಜಾಕ್ಷಿ ಎನ್ನುವ ಹೆಣ್ಣಿನ ಕಥೆ ಮಾತ್ರವಲ್ಲ, ಇಡಿ ಸಮಾಜದಲ್ಲಿ ಆಕೆ ತಾನು ಏನೆಲ್ಲವನ್ನೂ ಕಂಡಿದ್ದೇನೆ ಅನುಭವಿಸಿದ್ದೇನೆ- ಅದಕ್ಕೆ ಕಾರಣವಾಗುವ ಎಲ್ಲ ಸಂಗತಿಗಳ ಒಟ್ಟು ಮೊತ್ತ. ಹೀಗಾಗೇ ಕಥೆಯ ಕೇಂದ್ರ ವನಜಾಕ್ಷಮ್ಮ ಅಲ್ಲ.

ಸಿಮನ್ ಡಿ ಬುವಾ ಒಂದು ಕಡೆ ಹೇಳುತ್ತಾಳೆ, ಹೆಣ್ಣಿನ ದೇಹ ಮತ್ತು ಮಾನಸಿಕ ಸಂರಚನೆಗೆ ಕೇಂದ್ರೀಕೃತವಲ್ಲದ್ದು ಎಂದು. ಅವಳು ಯಾವ ಕೇಂದ್ರದಲ್ಲಿ ಕೂಡಾ ಇರಬಲ್ಲಳು. ಯಾಕೆಂದರೆ ಅವಳಿಗೆ ಕೇಂದ್ರಗಳೇ ಇಲ್ಲ. ಹೀಗಾಗೇ ಅವಳ ಒಟ್ಟು ವ್ಯಕ್ತಿತ್ವದಲ್ಲಿ ಹೊಂದಾಣಿಕೆ ಎನ್ನುವುದು ಸಹಜವಾಗಿ ಬಂದಿರುತ್ತದೆ ಎಂದು. ಅವರ ಬಾಲ್ಯವೆಂದರೆ ಬರಿಯ ಬಾಲ್ಯವಲ್ಲ, ಆ ಕಾಲಕ್ಕೆ ತಕ್ಕದಾಗಿ ಆಗುತ್ತಿದ್ದ ಸಾಮಾಜಿಕ ರಾಜಕೀಯ ಬದಲಾವಣೆಗಳು, ಅದನ್ನು ಜನ ಸ್ವೀಕರಿಸುತ್ತಿದ್ದ ರೀತಿ, ಅದರ ಪರಿಣಾಮಗಳು ಅನುಭವಗಳು ಎಲ್ಲವನ್ನೂ ಅವರು ದಾಖಲಿಸುತ್ತಾ ಹೋಗುತ್ತಾರೆ.

ಮೊದಲ ಬಾರಿಗೆ ಸಿನೆಮಾ ನೋಡಿದಾಗಿನ ಅನುಭವ ಇರಬಹುದು, ಅವರ ಶಾಲಾ ಮಾಸ್ತರರಾದ ಫಕೀರ ಶೆಟ್ಟಿ ಎನ್ನುವ ಮಾಸ್ತರರ ಮೇಲಾಗಿದ್ದ ಗಾಂಧೀಜಿಯವ ಪ್ರಭಾವ, ಅವರು ಧರಿಸುತ್ತಿದ್ದ ಖಾದಿ, ಗಾಂಧಿ ಟೋಪಿಯಿಂದಷ್ಟೇ ಅಲ್ಲ, ಅವರ ಆದರ್ಶಗಳನ್ನೂ ಹೇಗೆ ಅನುಸರಿಸುತ್ತಿದ್ದರು ಎನ್ನುವುದರಿಂದ. ಪ್ರತಿ ದಿನ ರಾತ್ರಿಗಳಲ್ಲಿ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪಾಲಕರನ್ನು ಪ್ರೇರೇಪಿಸುತ್ತಿದ್ದ ರೀತಿ ಎಲ್ಲವನ್ನೂ ದಾಖಲಿಸುತ್ತಾ, ನಮ್ಮ ಸಮಾಜದ ನೈತಿಕತೆಯ ಎತ್ತರವನ್ನು ಹೇಳುವ ಅನೇಕ ಘಟನೆಗಳನ್ನೂ ಸೇರಿಸುತ್ತಾರೆ. ಇಂಥಾ ಘಟನೆಗಳ ಜೊತೆ ತಮ್ಮ ಇರುವನ್ನೂ ಸೂಚಿಸುತ್ತಾ ಹೋಗುವುದನ್ನು ನೋಡಬಹುದು.

ನನಗೆ ಬಹು ಕುತೂಹಲ ಅನ್ನಿಸಿದ ಸಂಗತಿ ಎಂದರೆ ವನಜಾಕ್ಷಮ್ಮನವರು ಚಪ್ಪಲಿ ಧರಿಸಿದ್ದ ಪ್ರಸಂಗ. ಅದನ್ನು ಅವರು ತುಸು ಬೇಸರದಲ್ಲಿ ತುಸು ಹೆಮ್ಮೆಯಲ್ಲಿ ಹೇಳುತ್ತಾರೆ. ಇದು ಒಟ್ಟು ಭಾರತೀಯ ಸಮಾಜದ ಸ್ಥಿತಿ ಕೂಡಾ ಹೌದಾಗಿತ್ತು. ಬದಲಾವಣೆಯ ಗಾಳಿ ಬೀಸಿ ಗಂಡಸರೆಲ್ಲಾ ಬಹು ಬೇಗ ಅದಕ್ಕೆ ಹೊಂದಿಕೊಂಡು ಬಿಟ್ಟರು. ಆದರೆ ಹೆಣ್ಣು ಮಕ್ಕಳು ಮಾತ್ರ ನಮ್ಮ ಸಂಸ್ಕೃತಿಯ ದ್ಯೋತಕವಾಗಿ ನಿಲ್ಲ ಬೇಕು ಎಂದು ಇಡೀ ಸಮಾಜ ಬಯಸಿತ್ತು. ಹಾಗಾಗಿ ಹೆಣ್ಣು ಬದಲಾಗಬಾರದಿತ್ತು.

ಸಮಾಜದ ಬಯಕೆ ಯಾವತ್ತಿಗೂ ಇಂಥದ್ದೇ. ತಮ್ಮ ಅಳತೆಯನ್ನು ಮೀರಬಾರದ ಹೆಣ್ಣುಗಳನ್ನು ಹುಟ್ಟುಹಾಕುತ್ತಲ್ಲೇ ಇರುತ್ತದೆ. ಅದು ಎಲ್ಲ ಸಮಾಜಗಳಲ್ಲೂ ಎಲ್ಲ ಧರ್ಮಗಳಲ್ಲೂ ಎಲ್ಲ ಜಾತಿಗಳಲ್ಲೂ ತೀರ ಸಾಮಾನ್ಯ. ಹೆಣ್ಣಿನ ಘನತೆಯನ್ನು ಎತ್ತಿ ಹಿಡಿಯುವ ಯಾವ ಸಂಗತಿಗೂ ಇಂಬು ಕೊಡುವುದಿಲ್ಲ. ಇಂಥಾ ಉಲ್ಲೇಖಗಳು ಈ ಕಥನದ ಉದ್ದಕ್ಕು ಅಲ್ಲಲ್ಲಿ ಬರುತ್ತಲೇ ಹೋಗುತ್ತದೆ. ಸಾಮಾನ್ಯ ಹೆಣ್ಣಿನ ಆಸೆ ಆಕಾಂಕ್ಷೆಗಳು, ಹಾಡಬೇಕೆಂಬ ಹಂಬಲ, ಪಟ್ಟ ಬವಣೆಗಳು, ಮದುವೆ, ಇಚ್ಚೆ, ಬಯಸದೇ ಬಂದ ಸಿರಿವಂತಿಕೆ, ಹೆಣ್ಣಿಗೆ ಸಹಜವಾದ ಗರ್ಭಸ್ಥಿತಿ, ಹೆರಿಗೆ, ಸೂತಕ ಇವುಗಳ ನಡುವೆ ಹೇಗೋ ಬಂದು ಸೇರುವ ಸಣ್ಣ ಸಣ್ಣ ಘಟನೆಗಳು ಭಿನ್ನವಾದ ಒಂದು ಕಥನ ಮಾದರಿಗೆ ಕಾರಣವಾಗುತ್ತದೆ.

ಹೀಗೆ ಹೇಳುತ್ತಾ ತನ್ನ ಗಂಡ ಮಂಗವೊಂದನ್ನು ಸಾಕಿದ್ದರಂತೆ ಎಂದು ಕಥೆ ಹೇಳುತ್ತಾರೆ. ಯಾಕೆ ಸಾಕಿದ್ದರು ಎನ್ನುವುದಕ್ಕೆ ಕೌಟುಂಬಿಕ ವಾತಾವರಣ ಕಲ್ಪಿಸಿಕೊಟ್ಟ ಒಂಟಿತನಕ್ಕೆ, ಮನುಷ್ಯ ಕಂಡುಕೊಳ್ಳುವ ಉತ್ತರ ಪ್ರಾಣಿಗಳ ಪ್ರೀತಿ. ಅವಕ್ಕೆ ಮಾತು ಬರಲ್ಲ, ಆಸ್ತಿಗಾಗಿ ಜಗಳ ಆಡಲ್ಲ, ಮುಖ್ಯ ಮನುಷ್ಯನಿಗಿರುವ ಅಹಂ ಇಲ್ಲ. ಮನುಷ್ಯರ ಜೊತೆ ಮನುಷ್ಯನಾಗುವ ಪ್ರಾಣಿಯ ಬಗ್ಗೆ ಬೆಳೆವ ಪ್ರೀತಿ ಕೂಡಾ ಇಲ್ಲಿ ಸಮಾನಾಂತರ ಕಥೆಯಾಗಬಲ್ಲ ಸೂಚನೆಯನ್ನು ಕೊಡುತ್ತದೆ. ತನ್ನ ಸರಿ ತಪ್ಪುಗಳೆಲ್ಲವನ್ನೂ ಹೇಳಿಕೊಳ್ಳುವುದಕ್ಕೆ ಧೈರ್ಯ ಬೇಕು. ಅಂಥಾ ಧೈರ್ಯವನ್ನು ವನಜಾಕ್ಷಮ್ಮನವರು ತೋರುತ್ತಾರೆ. ಹೊಟ್ಟೆ ಹೊರೆಯಲಿಕ್ಕೆ ಕಷ್ಟದ ದಿನಗಳಲ್ಲಿ ಹಾಲಿಗೆ ನೀರನ್ನು ಬೆರೆಸಿದ್ದನ್ನು, ಹಸುಗಳನ್ನು ಸಾಕಲು ಆಗದೇ ಇದ್ದಾಗ ಮೇಕೆಗಳನ್ನು ಕೊಂಡಿದ್ದನ್ನು, ಅಂಥಾ ನಿರ್ಧಾರದ ಹಿಂದಿನ ತಮ್ಮ ಸ್ಥಿತಿಯನ್ನು ವಿವರಿಸುತ್ತಾರೆ.

ಬ್ರಾಹ್ಮಣ ಕುಟುಂಬವೊಂದಕ್ಕೆ ನಿಷಿದ್ಧವೋ ಅದನ್ನೂ ಮಾಡುತ್ತಾರೆ. ಅವರಿಗೆ ಸಮಾಜ ಏನನ್ನುತ್ತದೆ? ಎನ್ನುವುದು ಮುಖ್ಯವೇ ಆಗುವುದಿಲ್ಲ. ಬದಲಿಗೆ ಹೊಟ್ಟೆಪಾಡು ಮುಖ್ಯ. ತಮ್ಮವೇ ಪುಟ್ಟ ಮಕಳನ್ನು ಪುರೆಯುವ ದೊಡ್ದ ಜವಾಬ್ದಾರಿ. ಅದಕ್ಕಾಗಿ ಮಾಡದೇ ಇರುವ ಕೆಲಸ ಯಾವುದಿದೆ? ಈ ಮಧ್ಯದಲ್ಲಿ ಅಗರಬತ್ತಿ ಹೊಸೆತ, ಬಾಡಿಗೆ ಮನೆ ಗಲಾಟೆ, ತಾವು ಬಾಡಿಗೆ ಕೊಡದೆ ಮಾಲೀಕರಿಗೆ ತೊಂದರೆ ಕೊಟ್ಟ ವಿಷಯ, ಅದಕ್ಕಾಗಿ ತಮಗೆ ಸರಿಯಾದ ಶಾಸ್ತಿಯೇ ಆಗಿತ್ತೆಂದುಕೊಳ್ಳುವಾಗ ಕೂಡಾ ಇರುವ ನಿರಾಳತೆ ಕೂಡಾ ಅಚ್ಚರಿಯದ್ದೆ.

ಹೀಗೆ ನಿರಾಳವಾಗಿ ಹೇಳುತ್ತಾ, ಹೇಳುತ್ತಾ, ಆತ್ಮ ಸಾಕ್ಷಿಗೆ ಎರವಾಗದ ಹಾಗೆ ತನ್ನ ಕಥೆಯನ್ನು ತನ್ನಿಂದ ಮಕ್ಕಳ, ಮೊಮ್ಮಕ್ಕಳ ವರೆಗೂ ವಿಸ್ತರಿಸುತ್ತಾರೆ. ಅಮೇರಿಕಾದಲ್ಲಿ ಕಳೆದುಕೊಂಡ ತನ್ನ ಮೊಮ್ಮಗುವಿನ ನೋವಿನ ನೆನಪಲ್ಲಿಯೂ ವಿಮಾನ ಹತ್ತಿ ಮಗನ ಮನೆಗೆ ಹೋದಾಗಲೂ ಕಾಡಿದ್ದು ಅಗ್ಗಿತ್ತಲವೇ. ಅಲ್ಲಿ ಈಗ ತಮ್ಮ ತಂದೆ ತಾಯಿಯರು ಬದುಕಿದ್ದಿದ್ದರೆ, ಇಲ್ಲಿಯ ಕಥೆಗಳನ್ನು ಹೇಳಬಹುದಿತ್ತು ಎನ್ನುವ ಕನಸೇ. ಬಿಟ್ಟು ಬಂದ ಮನೆಯ ಹೆಸರನ್ನು ಈಗಿರುವ ಮನೆಗೂ ಇಡುವ, ಕಳೆದುಕೊಂಡರೂ ಕಡೆದುಕೊಳ್ಳಲಾಗದ ಮೋಹದ ತುಡಿತವನ್ನು ಇಡೀ ಬರಹ ಬಿಟ್ಟುಕೊಡುತ್ತದೆ.

ಮಕ್ಕಳ ಬಗ್ಗೆ ಹೆಮ್ಮೆ, ಗಂಡನ ಬಗ್ಗೆ ಪ್ರೀತಿ, ಮೊಮ್ಮಕ್ಕಳ ಬಗ್ಗೆ ಕನಸು, ಹಾಡಿನ ನಿತ್ಯ ಯಾತ್ರೆ ಹೀಗೆ ಒಂದೆರಡಲ್ಲ ಅನೇಕ ಸಂಗತಿಗಳ ಗುಚ್ಚವೇ ಇಲ್ಲಿ ತೆರೆದುಕೊಳ್ಳುತ್ತದೆ. ಏನಿದೆ ಇದರಲ್ಲಿ?’ ಎಂದು ತೆಗೆದು ಪಕ್ಕಕ್ಕೆ ಇಡುವುದು ಅಹಂ ಆಗುತ್ತದೆ. ಬದುಕು ಅಪರೂಪ ಎಂದು ಭಾವಿಸಿ ತೀವ್ರವಾಗಿ ಸ್ಪಂದಿಸಿದ ಹೆಣ್ಣುಮಗಳೊಬ್ಬಳ ಆತ್ಮ ಕಥನ ಸಾಮಾನ್ಯದಲ್ಲಿ ಸಾಮಾನ್ಯ ನಿಜ. ತೀವ್ರವಾದ ಸಂಘರ್ಷವನ್ನೂ ತೀವ್ರವಲ್ಲದ, ಕಹಿಗಳೇ ಇಲ್ಲದ ಹಾಗೆ ಹೇಳುವ ಕ್ರಮ, `ಸಂಜೆಗೊಬ್ಬಳು ಮುದುಕಿ ಕೊನೆಯ ಕೆಂಡವ ಕೆದಕಿ ಎತ್ತಿ ಮುಡಿದಳು ಇದ್ದ ಗಂಟು ಜಡೆಗೆ’ ಎಂದು ಹೇಳುವ ನರಸಿಂಹಸ್ವಾಮಿಯವರ ಸಾಲುಗಳನ್ನು ನೆನಪಿಸುತ್ತದೆ. ಸರಿಗಳ ಜೊತೆ ತಪ್ಪುಗಳನ್ನೂ, ಸುಖದ ಜೊತೆ ಕಷ್ಟವನ್ನೂ, ನಿರಾಳತೆ, ನಿರುದ್ವಿಗ್ನತೆಗಳಲ್ಲಿ ಹೇಳುವ ಪ್ರಬುದ್ಧತೆ, ಎಲ್ಲಕ್ಕಿಂತ ಮಿಗಿಲಾಗಿ ಹೇಳುವ ಸಹಜ ಶೈಲಿ ಇಷ್ಟವಾಗುವ ಹಾಗಿದೆ.

ಎಂಬತ್ತೈದರ ವನಜಾಕ್ಷಮ್ಮ ಏಳು ಮಕ್ಕಳ ತಾಯಿ ಮಾತ್ರವಲ್ಲ ಎಲ್ಲ ತಾಯಂದಿದ ಬದುಕಿನ ಕನ್ನಡಿಯಾಗುತ್ತಾರೆ. ತನ್ನದೊಂದು ಕಥೆಯಿದೆ ಕೇಳಿ ಎನ್ನುವಾಗ ಅನುಭವದ ಸಾಂದ್ರತೆಯನ್ನು, ಅನನ್ಯವಾದ ತನ್ನದೇ ಬದುಕಿನ ಕ್ರಮವನ್ನು ಆತ್ಮವಿಶ್ವಾಸದಿಂದ ತುಳುಕುತ್ತಾರೆ. ಮಾನವೀಯತೆಯೇ ಮೊದಲಾದ ಹೆಣ್ಣಿನ ಚರಿತ್ರೆಯ ಜಾಡಿನಲ್ಲಿ ಇಂಥಾದ್ದೊಂದು ಕಥನ ಏನನ್ನಾದರೂ ಸರಿಯೇ ಕಾಣಿಸುತ್ತೇನೆ ಎನ್ನುವ ಹಂಬಲವನ್ನು ಒಳಗೊಂಡಿದೆ. ಇದು ಈ ಪುಸ್ತಕದ ಸಾಧ್ಯತೆ. ವನಜಾಕ್ಷಮ್ಮನರ ಇಳಿವಯಸ್ಸಿನ ಏರು ಉತ್ಸಾಹ ನನ್ನಂಥ ಎಲ್ಲ ಹೆಣ್ಣುಗಳಿಗೂ ಬರಲಿ ಎಂದು ಆಶಿಸುತ್ತೇನೆ.

‍ಲೇಖಕರು Admin

March 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: