ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

1

ಅಮ್ಮನೆಂಬ ಅರಿವು..

ಅರಿವು ಎಂಬುದೇ ಮಹಾನ್ ಬೆಡಗು. ಅರಿವನ್ನು ಅರಿವುದು ಕೂಡಾ ಬೆಡಗನೊಳಗೊಂಡ ಬೆಡಗು. ಮಾನವರ ಅರಿವಿನ ಪಯಣ ಲಕ್ಷಗಟ್ಟಲೆ ವರ್ಷದ ಹಿಂದೆಯೇ ಆರಂಭವಾಗಿದೆ. ಈ ದೀರ್ಘ ಕಾಲದಲ್ಲಿ ಹಲ, ಹಲ, ಹಲವು ಆಯಾಮಗಳನ್ನು ಪಡೆದು ಸಮೃದ್ಧವಾಗಿದೆ, ವೈವಿಧ್ಯಮಯವಾಗಿದೆ, ಸಂಕೀರ್ಣವಾಗಿದೆ. ಅದಕ್ಕೊಂದು ಐತಿಹಾಸಿಕ ಹರಹಿದೆ, ಭಾಷಿಕ, ಪ್ರಾದೇಶಿಕ ಸಾಮಾಜಿಕ ಮುಖಗಳಿವೆ. ತಾತ್ವಿಕ ಜಿಜ್ಞಾಸೆಯಿದೆ, ವೈಜ್ಞಾನಿಕ ಸ್ಫೋಟವಿದೆ. ಮನುಷ್ಯ ಸಮುದಾಯ ಅರಿವನ್ನು ಅರಿವ ಹಲವು ಬಗೆಯನ್ನು ಬಗೆಯೋಣ ಬನ್ನಿ, ಮಾನವರ ಅರಿವಿನ ಹಾದಿಯಲ್ಲಿ ನಡೆಯೋಣ ಬನ್ನಿ.

“ಅಮ್ಮಾ,ನನ್ನ ಮೊದಲ ಅರಿವಿನ ಸಿರಿ ನೀನು “
ಎನ್ನುತ್ತಾಳೆ ಒಬ್ಬ  ಕವಿ.
ಒಬ್ಬ ವ್ಯಕ್ತಿಯಾಗಿ ಮಾನವ ಜೀವಿಯ ಅರಿವಿನ ಪಯಣ ಆರಂಭವಾಗುವುದೇ ಅಮ್ಮನ ಮಡಿಲಲ್ಲಿ. ಅಮ್ಮನ ಮಡಿಲಿಗೆ ಬಿದ್ದ ಶಿಶುವಿಗೆ ಅಮ್ಮನೆಂಬ ಅರಿವು ಮೂಡುವುದು ಯಾವಾಗ, ಹೇಗೆ ?  ಇದೊಂದು ಪ್ರಶ್ನೆಯೇ ? ಹೆತ್ತ ಕೂಡಲೇ ಅಮ್ಮನ ಮಡಿಲಲ್ಲಿ ಮಲಗಿರುವಾಗ, ಅಮ್ಮನ ಮೊಲೆವಾಲು ಸವಿಯುತ್ತಿರುವಾಗ, ತನ್ನೆಲ್ಲ ಬೇಕು ಬೇಡಗಳನ್ನು ಗಮನಿಸಿ ಆರೈಕೆ ಮಾಡುತ್ತಿರುವಾಗ ತನ್ನಿಂದ ತಾನೇ ಬಹಳ ಸಹಜವಾಗಿ ಅಮ್ಮನ ಅರಿವು ಮೂಡುವುದಿಲ್ಲವೇ ಎಂದು ಬಹಳ ಜನರಿಗೆ ಅನ್ನಿಸಬಹುದು. ಆದರೆ ಅಮ್ಮನ ಮಡಿಲಿಗೆ ಶಿಶು ಬೀಳುವ ಮುನ್ನ ಹೆರಿಗೆ ಮಾಡಿಸುವ ವೈದ್ಯೆ , ದಾದಿ ಅಥವಾ ಹಳ್ಳಿಗಳ ಅನುಭವಿ ಸೂಲಗಿತ್ತಿಯರು ಎತ್ತಿಕೊಂಡಿರುತ್ತಾರೆ.

ಅಮ್ಮನ ಅಮ್ಮನ ಮನೆಯಲ್ಲಿ ಬಾಣಂತನ ಮಾಡುವ ವ್ಯಾಪಕ ರೂಢಿಯಿದೆಯಲ್ಲಾ. ಅಲ್ಲಿ ಬಹಳಷ್ಟು ಬಾರಿ ಶಿಶು ಅನನುಭವಿ ಅಮ್ಮನಿಗಿಂತ ಅನುಭವಿ ಅಜ್ಜಿಯ ಕೈಯಿಂದಲೇ ಹೆಚ್ಚು‌ ಆರೈಕೆ ಪಡೆಯುತ್ತದೆ. ಮುಂದೆ ಅಮ್ಮನ ತಂಗಿಯ, ತಂಗಿಯಂದಿರ ಕೈಯಲ್ಲಿ ಚಿನ್ನಾಟವಾಡುತ್ತಾ ಬೆಳೆಯುವ ಸಾಧ್ಯತೆಗಳು ಹೆಚ್ಚು. ಅಮ್ಮನಿಗಿಂತ ಬೇರೆಯವರ ತೋಳಲ್ಲಿ ಹೆಚ್ಚು ಸಮಯ ಕಳೆಯುವಾಗ  ಇವರಲ್ಲಿ ಯಾರನ್ನು ತನ್ನ ಅಮ್ಮ ಎಂದು ಹೇಗೆ ಗುರುತಿಸುತ್ತದೆ ?

ಸಾವಿರಾರು ಹೆರಿಗೆಗಳನ್ನು‌ ಮಾಡಿಸಿರುವ ಹೆರಿಗೆ ವೈದ್ಯೆಯೊಬ್ಬರು ಹೇಳಿದ್ದು ಅಮ್ಮ ತನ್ನ ಮಗುವನ್ನು ಎತ್ತಿಕೊಳ್ಳುವ,ಅಪ್ಪಿಕೊಳ್ಳುವ ರೀತಿಯಲ್ಲಿಯೇ ಅಮ್ಮನನ್ನು ಶಿಶು ಗುರುತಿಸಲು ಸಾಧ್ಯವಾಗುತ್ತದೆ ಎಂದು. ಅದು ವೈದ್ಯೆ, ದಾದಿ ಮೊದಲಾದವರ ಸ್ಪರ್ಶದ ರೀತಿಯಿಂದ ಭಿನ್ನವಾಗಿ ಅಮ್ಮನನ್ನು ಗುರುತಿಸಲು ಸಾಧ್ಯವಾಗಬಹುದು. ಆದರೆ ಅಜ್ಜಿಯರು ಮತ್ತಿತರ ಬಂಧುಗಳು ಅಪ್ಪಿ ಮುದ್ದಾಡುವುದರ ನಡುವೆ ಅಮ್ಮನ ಗುರುತು ಹೇಗೆ ?

ಅಮ್ಮ ಹಾಲೂಡಿಸುತ್ತಾಳೆ ಆದ್ದರಿಂದ ಶಿಶುವಿಗೆ ಅಮ್ಮನ ಗುರುತು ಹಿಡಿಯುವುದು ಸುಲಭ ಎಂದು ಆ ವೈದ್ಯರ ಅಭಿಪ್ರಾಯ. ಸಾರ್ವತ್ರಿಕವಾಗಿ ಕೂಡಾ ಅಮ್ಮನ ಹಾಲು ಅಮ್ಮನ ಪಾಲನೆಯ ಹೆಗ್ಗುರುತು. ಆದ್ದರಿಂದ ಅದೇ ಮುಖ್ಯ ಗುರುತು. ಬಹಳಷ್ಟು ಬಾರಿ ಇದು ನಿಜ. ಆದರೆ ಕೆಲವೊಮ್ಮೆ ಅಮ್ಮನಲ್ಲಿ ಹಾಲಿನ ಕೊರತೆ ಅಥವಾ ಇತರ ಆರೋಗ್ಯದ ಸಮಸ್ಯೆಗಳಿಂದಾಗಿ ಶಿಶುವಿಗೆ ತಾಯ ಹಾಲಿನ ಸವಿ ದೊರಕುವುದಿಲ್ಲ. ಅಪ್ಪಿ ಮುದ್ದಾಡಲೂ ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ?

ಗರ್ಭದೊಳಗಿನಿಂದಲೇ ಅಮ್ಮನ ಅರಿವು
ಶಿಶು ಈ ಭೂಮಿಗೆ ಬರುವ ಮೊದಲೇ, ಅಮ್ಮನ ಸ್ಪರ್ಶ ದಕ್ಕುವ ಮೊದಲೇ ಮಗು ಅಮ್ಮನನ್ನು ಗುರುತು ಹಿಡಿಯುತ್ತದಂತೆ. ಹಾಗೆಂದ ಕೂಡಲೇ ಪೂರ್ವ ಜನ್ಮದ ಬಾಂಧವ್ಯ, ದೇವರ ಸೃಷ್ಟಿಯ ಲೀಲೆ , ಕಣ್ಣರಿಯದಿದ್ದರೂ ಕರುಳರಿಯದೇ ? ಎಂದೆಲ್ಲ ಪರಂಪರೆಯ ಉದ್ಗಾರಗಳು ಹೊರಡುವುದು ಸಾಮಾನ್ಯ. ಆದರೆ ಗರ್ಭದೊಳಗೆ ಶಿಶುವಿನ ಬೆಳವಣಿಗೆಯ ಸಮಯದಲ್ಲಿ ಪಡೆದ ಅರಿವಿನ ಸಾಧನಗಳು ಗರ್ಭದೊಳಗಿದ್ದಾಗಿನಿಂದಲೇ‌ ಅಮ್ಮನ ಬಗೆಗೆ ಅರಿವನ್ನು ಮೂಡಿಸುತ್ತವೆ. ಈ ಸಾಧನಗಳು  ಹುಟ್ಟಿದ ಕೂಡಲೇ ಶಿಶುವಿಗೆ ಅಮ್ಮನ ಗುರುತನ್ನು ಹಿಡಿಯಲು ಸಹಾಯಕವಾಗುತ್ತವೆ ಎಂದು ಇತ್ತೀಚಿನ ವಿಜ್ಞಾನದ ಸಂಶೋಧನೆಗಳು ತಿಳಿಸುತ್ತವೆ.

ಪಂಚೇದ್ರಿಯಗಳು ಅಥವಾ ಜ್ಞಾನೇಂದ್ರಿಯಗಳು ಎಂದು ನಮ್ಮ ವಚನಕಾರರು ವರ್ಣಿಸುವ ದೇಹದ ಅಂಗಗಳ ಬೆಳವಣಿಗೆ ಗರ್ಭದೊಳಗೆ ನಿರಂತರವಾಗಿ ಸಾಗುತ್ತಿರುತ್ತದೆ. ಈ ಇಂದ್ರಿಯಗಳು ವಚನಕಾರರ ಭಾಷೆಯಲ್ಲಿ ತನ್ಮಾತ್ರೆಗಳೆಂದು ಕರೆಯಲ್ಪಡುವ ರೂಪ,ರಸ,ಗಂಧ, ಸ್ಪರ್ಶ,ಶಬ್ದಗಳ ಗುರುತನ್ನು ಹಿಡಿಯುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಿರುತ್ತವೆ.

ಸ್ಪರ್ಶ ಜ್ಞಾನ
ಗರ್ಭದೊಳಗೆ ಭ್ರೂಣದಲ್ಲಿ ಮೊದಲು ಬೆಳವಣಿಗೆಯಾಗುವ ಜ್ಞಾನೇಂದ್ರಿಯವೇ ಸ್ಪರ್ಶ. ಹುಟ್ಟಿದ ಕೂಡಲೇ ಬೇರೆಯವರ ಬಗ್ಗೆ ಅರಿವು ಉಂಟಾಗುವುದೇ ಸ್ಪರ್ಶದಿಂದಲ್ಲವೇ. ಅದರಲ್ಲೂ ಮೇಲೆ ಹೇಳಿದಂತೆ ಅಮ್ಮನ‌ ಮಮತೆಯ ಅಪ್ಪುಗೆ ಮತ್ತು ಮುದ್ದಾಟಗಳಿಂದ ಮಾನವ ಪ್ರೇಮದ ಪರಿಯ ಮೊದಲ ಪರಿಚಯ. ಕೆಲವೊಮ್ಮೆ ಮಾನವ ತಿರಸ್ಕಾರದ ಅನುಭವವೂ ಕೂಡಾ. ಆದರೆ ಈ ಭಾವನೆಗಳ ಅರಿವು ಮೂಡುವುದು ಹಲವು ತಿಂಗಳುಗಳ ನಂತರವಾದರೂ ಆ ದಿನಗಳಲ್ಲಿ ಅನುಭವವಾದ ಪ್ರೇಮ, ತಿರಸ್ಕಾರಗಳು ಶಿಶುವಿನ ಸುಪ್ತ ಪ್ರಜ್ಞೆಯಲ್ಲಿ ಉಳಿದು ಜೀವನ ಪರ್ಯಂತ ಕಾಡುತ್ತದೆ.

ತಾಯಿಗೆ ತನ್ನ ಗರ್ಭದಲ್ಲೊಂದು ಹೊಸ ಜೀವ ಮೂಡಿದೆ ಎಂದು ಅರಿವಾಗುವ ಮೊದಲೇ 8 ನೇ ವಾರದಿಂದಲೇ ನರ ತಂತುಗಳು ತುಟಿಯಲ್ಲಿ, ಮೂಗಿನ ತುದಿಯಲ್ಲಿ ಬೆಳೆಯಲಾರಂಭಿಸುತ್ತವೆ. ನಂತರ ಇಡೀ ಮುಖ, ಕೈ ಬೆರಳುಗಳು,ಅಂಗೈ, ಅಂಗಾಲುಗಳಲ್ಲಿ 11-12ನೆಯ ವಾರದ ವೇಳೆಗೆ.

ಇದು ಶಿಶು ಗರ್ಭದೊಳಗೇ ಬೆರಳುಗಳಿಂದ ತುಟಿಗಳನ್ನು ಸ್ಫರ್ಶಿಸುವುದು, ಹೆಬ್ಬೆರಳು‌ ಚೀಪುವುದು ಆರಂಭವಾಗುತ್ತದೆ. ಹುಟ್ಟಿನ‌ ನಂತರವೂ ಬಹುಕಾಲ ಮುಂದುವರಿಯುತ್ತದೆ. ಹುಟ್ಟಿದ ಮೇಲೆ ಯಾವುದೇ ವಸ್ತು ಕಂಡರೂ ಅದನ್ನು ಬಾಯಲ್ಲಿ ಹಾಕಿಕೊಳ್ಳುವ ಅಭ್ಯಾಸಕ್ಕೂ ತುಟಿ ಮತ್ತು ಬಾಯೊಳಗಿನ ನರತಂತುಗಳ ಸಾಂದ್ರತೆಯೇ ಕಾರಣ. ಈ ಕ್ರಿಯೆಯ ಮೂಲಕ ವಿವಿಧ ವಸ್ತುಗಳ ಗಟ್ಟಿ ಯಾ ಮೃದುತನ ಇತ್ಯಾದಿಗಳ ಪರಿಚಯ ಮಾಡಿಕೊಳ್ಳುತ್ತದೆ.

20 ನೆಯ ವಾರದ ವೇಳೆಗೆ ಇಡೀ ಚರ್ಮವನ್ನು ನರತಂತುಗಳು ಆವರಿಸುತ್ತವೆ. ಆದರೆ 30 ತಿಂಗಳ ನಂತರದ ವೇಳೆಗೆ ನರಮಂಡಲ ಮತ್ತು ಮೆದುಳಿನ ನಡುವೆ ಸಂಪರ್ಕಗಳ ಬೆಳವಣಿಗೆ ಪೂರ್ಣಗೊಂಡ ಮೇಲೆ  ಮಾತ್ರ ನೋವು, ಬಿಸಿ, ತಣ್ಪು, ಒತ್ತಡಗಳ ಅನುಭವವಾಗಲಾರಂಭಿಸುವುದು.

ವಯಸ್ಕರ ಶರೀರದ ಚರ್ಮದಲ್ಲಿ ಇರುವ ನರತಂತುಗಳಿಗಿಂತ ಹೆಚ್ಚು ನರತಂತುಗಳು ಶಿಶುವಿನ ಚರ್ಮದ ತುಂಬ ಆವರಿಸಿರುತ್ತದೆ. ಆದ್ದರಿಂದ ಶಿಶುವಿನ‌ ಚರ್ಮ ಹೆಚ್ಚು ಸೂಕ್ಷ್ಮವಾಗಿ ಸ್ಪರ್ಶವನ್ನು ಅನುಭವಿಸುತ್ತದೆ ಮತ್ತು ಹೆಚ್ಚು ಅಪ್ಪುಗೆಯನ್ನು ಬಯಸುತ್ತದೆ. ಅಮ್ಮನ‌ ಗರ್ಭದಲ್ಲಿ ಶಿಶು ಬೆಚ್ಚನೆಯ ವಾತಾವರಣದಲ್ಲಿ ಗರ್ಭಾಶಯದ ದ್ರವದಲ್ಲಿ ತೇಲಾಡುತ್ತಾ ಬೆಳೆಯುತ್ತದೆ. ನೀರಿನ ಮೇಲೆ ತೇಲಾಡುವಾಗ ಮೈ ಹಗುರಾಗುವಂತೆ ಹಗುರವಾಗಿ ತನ್ನ ತೂಕವನ್ನು ನಿಭಾಯಿಸಲು ಅನುಕೂಲಕರವಾಗುತ್ತಿರುತ್ತದೆ. ಗರ್ಭದೊಳಗೆ ಶಿಶು ದೊಡ್ಡದಾದಂತೆಲ್ಲ ಗರ್ಭಾಶಯದ ಗೋಡೆಗಳಿಗೆ ತಗುಲುತ್ತಾ ಸ್ಪರ್ಶ ಜ್ಞಾನವನ್ನು ಬೆಳೆಸಿಕೊಳ್ಳುತ್ತದೆ. ತಾಯಿ ಓಡಾಡಿದಂತೆಲ್ಲ ಒಳಗೆ ಕುಲುಕುತ್ತಾ ಈ ಸ್ಪರ್ಶ ಸುಖ ಶಿಶುವಿಗೆ ದಕ್ಕುತ್ತಿರುತ್ತದೆ.

ರುಚಿ, ವಾಸನೆಯ ಅರಿವು- ಅಮ್ಮನ ಅರಿವಿನ ತೋರುಬೆರಳು.
ಗರ್ಭಾಶಯದಲ್ಲಿ ಶಿಶುವಿನ‌ ವಾಸನೆಯ ಹಾಗೂ ರುಚಿಯ ಗ್ರಹಣ ಸಾಮರ್ಥ್ಯ ಸರಿ ಸುಮಾರು ಪೂರ್ಣವಾಗಿ ಬೆಳೆಯುತ್ತದೆ. ರುಚಿಯನ್ನು ಗ್ರಹಿಸುವ ಟೇಸ್ಟ್ ಬಡ್‌ಗಳು ಗರ್ಭಸ್ಥ ಶಿಶುವಿನ ಬಾಯೊಳಗೆ 12 ವಾರದೊಳಗೆ ಕಾಣಿಸಿಕೊಳ್ಳುತ್ತವೆ. ಮತ್ತೊಂದು ವಾರದೊಳಗೆ ಪೂರ್ಣ ಪ್ರಮಾಣದ ಬೆಳವಣಿಗೆಯನ್ನು ಕಾಣುತ್ತವೆ. ಮೊದ ಮೊದಲು ಬಾಯ್ತುಂಬಾ ಇದ್ದ ಈ ಟೇಸ್ಟ್ ಬಡ್‌ಗಳು ಮಗು ಜನಿಸುವ ವೇಳೆಗೆ ನಾಲಿಗೆ,ಬಾಯ ಅಂಗಳ ಮೊದಲಾದ ಕೆಲವು ಸ್ಥಳಗಳಿಗೆ ಸೀಮಿತವಾಗುತ್ತವೆ.

ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಮೂರು ಅಂಗಾಂಶಗಳನ್ನು,ಅದರೊಳಗೆ ಬೆಳೆಯುವ ನರ ತಂತುಗಳನ್ನು ಒಳಗೊಂಡಿರುತ್ತದೆ. ಇವು 4 ವಾರದಿಂದಲೇ ಬೆಳವಣಿಗೆ ಆರಂಭಿಸುತ್ತವೆ. 20 ವಾರದವರೆಗೂ ಈ ಗ್ರಹಣ ಸಾಮರ್ಥ್ಯ ಹೆಚ್ಚುತ್ತಾ ಹೋಗುತ್ತದೆ. ವಾಸನೆಯ ಗ್ರಹಣ ಸಾಮರ್ಥ್ಯ ಮತ್ತು ರುಚಿ ಗ್ರಹಣ ಸಾಮರ್ಥ್ಯ ಪರಸ್ಪರ ಸಂಬಂಧಿ. ಏಕೆಂದರೆ ಎರಡೂ ಕೂಡಾ ವಿವಿಧ ವಸ್ತುಗಳ ರಾಸಾಯನಿಕ ರಚನೆ,ಗುಣದ ಮೇಲೆ ಅವಲಂಬಿಸಿರುವಂತಹವು. ಅದರಲ್ಲೂ ವಾಸನೆಯ ಪಾತ್ರವೇ ಪ್ರಧಾನ. ಏಕೆಂದರೆ ವಾಸನೆಯೇ ಶೇ.90 ರಷ್ಟು ವಸ್ತುಗಳಿಗೆ ರುಚಿಯ ಭಾವನೆಯನ್ನು ಉಂಟುಮಾಡುತ್ತವೆಯಂತೆ.

ಗರ್ಭಸ್ಥ ಶಿಶುವಿನ ವಾಸನಾ ಸಾಮರ್ಥ್ಯ ಬೆಳೆದಂತೆ ಅದು ತಾಯ ಮೈನ ವಾಸನೆ, ತಾಯಿ ಸೇವಿಸುವ ಆಹಾರದ ವಾಸನೆ, ರುಚಿಗಳನ್ನು ಗ್ರಹಿಸುತ್ತಾ ಹೋಗುತ್ತದೆ.  ಗರ್ಭ ಚೀಲದ ಒಳಗಿನ ದ್ರವ ( ಅಮ್ನಿಯೋಟಿಕ್ ಫ್ಲುಯಿಡ್) ಹಲವು ವಾಸನೆಯುಕ್ತ ವಸ್ತುಗಳ ಆಗರ. ಅದರಲ್ಲಿ ತಾಯಿಯ ಶರೀರದಲ್ಲಿ ವಿವಿಧ ಗ್ರಂಥಿಗಳಿಂದ ಒಸರುವ ದ್ರವಗಳು, ಅದರ ಜೊತೆಗೆ ಪ್ರಧಾನವಾಗಿ ತಾಯಿ ಸೇವಿಸಿ ರಕ್ತಗತವಾದ ಆಹಾರದ ವಸ್ತುಗಳೂ ಇರುತ್ತವೆ. ಈ ದ್ರವವನ್ನು ಶಿಶು ತನ್ನ ಬಾಯಿ ಮತ್ತು ಮೂಗಿನ ಮೂಲಕ ಸೇವಿಸುತ್ತಾ ಇರುತ್ತದೆ. ಇದು ದಿನವೊಂದಕ್ಕೆ ಐವತ್ತರಿಂದ ನೂರು ಎಂಎಲ್ ( ಮಿ.ಲೀ) ಕ್ಕಿಂತ ಹೆಚ್ಚೇ ಇರುತ್ತದೆ. ದ್ರವದ ವಾಸನೆ ಮತ್ತು ರುಚಿಗೆ ತಕ್ಕಂತೆ ಹೆಚ್ಚು ಕಡಿಮೆಯಾಗುತ್ತಿರುತ್ತದೆ.ಈ ಗರ್ಭ ಚೀಲದ ದ್ರವದೊಳಗಿನ ರಾಸಾಯನಿಕ ವಸ್ತುಗಳ ಪ್ರಮಾಣ ಶಿಶುವಿನ ಬೆಳವಣಿಗೆಯುದ್ದಕ್ಕೂ ಬದಲಾಗುತ್ತಾ ಹೋಗುತ್ತದೆ. ಗರ್ಭದೊಳಗೆ ಶಿಶು ಬೆಳೆದಂತೆಲ್ಲಾ ಗರ್ಭ ಚೀಲ ದೊಡ್ಡದಾಗುತ್ತಾ ಹೋಗುತ್ತದೆ. ಅದರೊಂದಿಗೆ ಚೀಲದ ಹೊರಪದರ ತೆಳುವಾಗುತ್ತಾ ಹೋಗುತ್ತದೆ. ಚೀಲ ತೆಳುವಾದಂತೆಲ್ಲಾ ತಾಯಿ ಸೇವಿಸುವ ಆಹಾರದ ಅಂಶಗಳು,ಅದರೊಳಗೆ ಹೆಚ್ಚು ಪ್ರವೇಶಿಸಯತ್ತಾ ಹೋಗುತ್ತದೆ.

ಹೀಗೆ ವ್ಯತ್ಯಾಸವಾಗುವ ಗರ್ಭ ಚೀಲದ ದ್ರವದಿಂದಾಗಿ ಶಿಶುವಿನ ರುಚಿ ಗ್ರಹಣ,ವಾಸನಾ ಗ್ರಹಣ ಸಾಮರ್ಥ್ಯ ಹೆಚ್ಚುತ್ತಾ,ಸೂಕ್ಷ್ಮವಾಗುತ್ತಾ ಹೋಗುತ್ತದೆ. ಮಗು ಹುಟ್ಟಿದ ಮೊದಲ ದಿನಗಳಲ್ಲಿಯೇ ಅಮ್ಮನ ಅರಿವನ್ನು ಮೂಡಿಸಲು, ಅಮ್ಮ ಯಾರು, ಬೇರೆ ಮಹಿಳೆಯರು ಯಾರು ಎಂಬ ವ್ಯತ್ಯಾಸವನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಈ ಗುರುತಿಸುವಿಕೆ ಮಗುವಿನ ದೃಷ್ಟಿಯ ಬೆಳವಣಿಗೆ, ದನಿ ಗ್ರಹಣದ ಬೆಳವಣಿಗೆ, ಮಾನಸಿಕ ನೆಮ್ಮದಿ, ಭಾವನೆಗಳ ಅಭಿವ್ಯಕ್ತಿ, ಅಮ್ಮನ ಸಂಬಂಧಿಗಳು, ತಂದೆಯ ಗುರುತು ಹಿಡಿಯುವುದರಲ್ಲೂ ಸಹಾಯ ಮಾಡುತ್ತದೆಯಂತೆ !
ಇದು ಕೇವಲ ಮಾನವ ಶಿಶುಗಳಿಗೆ ಮಾತ್ರ ಸೀಮಿತವಾದುದಲ್ಲ. ಇಲಿ, ಮೊಲ, ಆನೆ, ಆಡು, ದನ, ಎಮ್ಮೆ ಮೊದಲಾದ ಸಸ್ತನಿ ಪ್ರಾಣಿಗಳಲ್ಲೂ ಇದ್ದು ಪ್ರಾಣಿಗಳ ವಿಕಾಸವಾದಂತೆ ಈ ಸಾಮರ್ಥ್ಯವೂ ವಿಕಾಸವಾಗುತ್ತಾ ಬಂದಿದೆ. ಗರ್ಭ ಚೀಲದ ದ್ರವದೊಳಗೆ ತಾಯಿ ಸೇವಿಸಿದ ಆಹಾರ ವಸ್ತುಗಳ ವಾಸನೆ ಸೇರಿಕೊಳ್ಳುವುದು ಹೆರಿಗೆ ವೈದ್ಯರ ಹಾಗೂ ದಾದಿಗಳ ನಿತ್ಯ ಅನುಭವವಂತೆ. ದ್ರವದೊಳಗೆ ಆಹಾರ ವಸ್ತುಗಳು ಸೇರುವುದು ಕೇವಲ ಹೆರಿಗೆಯ ಸಮಯದ ಅನುಭವವಲ್ಲ,  ಬಸಿರಿನ ಬೆಳವಣಿಗೆಯುದ್ದಕ್ಕೂ ಸಾಗುವ ಕ್ರಿಯೆ ಎಂದು ವಿಜ್ಞಾನಿಗಳು ಹಲವು ಪ್ರಯೋಗಗಳ ಮೂಲಕ ಕಂಡು ಹಿಡಿದಿದ್ದಾರೆ. ಬೆಳ್ಳುಳ್ಳಿ, ಪುದೀನ,ಇಂಗು,ಮೆಂತ್ಯೆ ಮುಂತಾದ ಕೆಲ ವಸ್ತುಗಳ ವಾಸನೆಯಂತೂ ಡಾಳಾಗಿ ಎದ್ದು ಕಾಣಿಸುತ್ತದೆಯಂತೆ. ತಾಯಿ ಸೇವಿಸಿದ ಆಹಾರ ಜೀರ್ಣವಾಗಿ ರಕ್ತ ಸೇರಿದ ಅರ್ಧ ಗಂಟೆಯೊಳಗೆ ಆ ವಾಸನೆ ಗರ್ಭ ದ್ರವದೊಳಗೆ ಕಾಣಿಸುತ್ತದೆಯೆಂದು ಬೆಳ್ಳುಳ್ಳಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ತಾಂಯಂದಿರಿಗೆ ತಿನ್ನಿಸಿ ಕಂಡುಕೊಂಡಿದ್ದಾರೆ.

ಈ ವಾಸನೆ ಮತ್ತು ರುಚಿಗಳು ಕೇವಲ ಕೆಲವೇ ವಸ್ತುಗಳಿಗೆ ಸಂಬಂಧಿಸಿದ್ದಲ್ಲ ಆಹಾರ ಮತ್ತು ತಾಯ ಶರೀರ ಕ್ರಿಯೆಗಳಲ್ಲಿ ಉದ್ಭವಿಸಿದ ಸಾವಿರಾರು ರಸಾಯನಿಕಗಳಿಗೆಲ್ಲ ಅನ್ವಯವಾಗುವಂತಹುದು. ಗರ್ಭಸ್ಥ ಶಿಶು ತನ್ನ ಬಾಯಿ,ಮೂಗಿನೊಳಗೆ ಹೊಗುವ, ಕುಡಿಯುವ ದ್ರವದಿಂದ  ರುಚಿ, ವಾಸನೆಯನ್ನು ಗ್ರಹಿಸುತ್ತದೆ.  ಶಿಶುವಿನ ಬೆಳವಣಿಗೆಯ ಕೊನೆಯ ತ್ರೈಮಾಸಿಕ- 6 ರಿಂದ 9 ತಿಂಗಳ ನಡುವೆ ಸಿಹಿ ಮತ್ತು ಕಹಿಯ ವ್ಯತ್ಯಾಸವನ್ನು ಕಂಡುಕೊಳ್ಳುತ್ತದೆ ಎಂಬುದೂ ಪ್ರಯೋಗಗಳಿಂದ ಸಿದ್ಧಪಟ್ಟಿದೆ. ಸಿಹಿ ಆಹಾರ ತಿಂದಾಗ ಶಿಶು ಗರ್ಭ ದ್ರವವನ್ನು ಹೆಚ್ಚಾಗಿ ಕುಡಿಯುವುದು,ಕಹಿ ಆಹಾರ ಸೇವಿಸಿದಾಗ ಕಡಿಮೆ ಕುಡಿಯುವುದೂ ಕಂಡುಬಂದಿದೆ.

ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತನ್ನ ತಾಯಿಯ ಮೊಲೆಯನ್ನು ಹುಡುಕುವುದಕ್ಕೆ ವಾಸನೆಯ ಗ್ರಹಣ ಸಹಾಯಕ. ಹಾಲು ಒಸರುವ ಮುನ್ನ ಮತ್ತು ಅದರ ಜೊತೆಯಲ್ಲಿ ತಾಯ ಮೊಲೆತೊಟ್ಟು ಮತ್ತು ಅದರ ಸುತ್ತಲಿನ ಕಪ್ಪಾದ ಪ್ರದೇಶದಿಂದ ಒಂದು ದ್ರವ ಒಸರುತ್ತದೆ. ಅದರ ವಾಸನೆಗೂ ತಾಯ ಗರ್ಭ ದ್ರವದ ವಾಸನೆಗೂ, ಅವೆರಡರ ರಾಸಾಯನಿಕಗಳಿಗೂ ಸಾಮ್ಯತೆ ಇದೆಯಂತೆ. ಈ ಮೊಲೆ ತೊಟ್ಟಿನ ದ್ರವದಿಂದ ಬಂದ ವಾಸನೆಯನ್ನು‌ ಗ್ರಹಿಸಿ ಶಿಶು ಆ ಕಡೆಗೆ ಮುಖ ತಿರುಗಿಸಿ ಮೊಲೆತೊಟ್ಟನ್ನು ಹುಡುಕುತ್ತದಂತೆ. ಎಲ್ಲ ಸಸ್ತನಿಗಳಲ್ಲೂ ಇದೇ ರೀತಿಯ ಕ್ರಿಯೆ ಪ್ರತಿಕ್ರಿಯೆ ಉಂಟಾಗುತ್ತದೆಯೆಂದೂ ಇಲಿ ಮೊದಲಾದ ವಿವಿಧ ಸಸ್ತನಿ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳು ತಿಳಿಸುತ್ತವೆ. ಶಿಶು ಜನನವಾದ ನಂತರ ಅದರ ತಾಯ ಗರ್ಭ ದ್ರವ ಮತ್ತು ಬೇರೆ ತಾಯ ಗರ್ಭ ದ್ರವವನ್ನು ಶಿಶುವಿನ ಮುಂದೆ ತಂದಾಗ ಎರಡರ ನಡುವಣ ವ್ಯತ್ಯಾಸವನ್ನು ಶಿಶು ಕಂಡುಹಿಡಿಯುತ್ತದೆ. ಹೀಗೆ ಶಿಶುವಿಗೆ ಅಮ್ಮನ ಮೊದಲ ಅರಿವು ಉಂಟಾಗುತ್ತದೆ.

ಗರ್ಭದೊಳಗಿನಿಂದಲೇ ಮಗುವಿಗೆ ತಾಯ ಗುರುತು ಹಿಡಿಯುವ ಕೆಲ ಸಾಧನಗಳ ಮೂಲಕ ಹುಟ್ಟಿದ ಮೇಲೆ ತಾಯಿ ಮಗುವಿನ ಆಪ್ತತೆಯ ಬಾಂಧವ್ಯಕ್ಕೆ ನಾಂದಿ ಹಾಡುತ್ತದೆ. ತಾಯ ಮೊಲೆ ಹಾಲನ್ನು ಕುಡಿಯುವ ಮಕ್ಕಳು ತನ್ನ ತಾಯ ನಿರ್ದಿಷ್ಟ ಮೈ ವಾಸನೆಯ ಗುರುತು ಹಿಡಿಯುತ್ತವೆ. ಪ್ರತಿಯೊಬ್ಬರ ಬೆರಳ ಗೆರೆಗಳು,ದನಿಯ ರಚನೆ ಹೇಗೆ ಆಯಾ ವ್ಯಕ್ತಿಯ ನಿರ್ದಿಷ್ಟ ಗುರುತಿನ ಸಹಿಯೋ ಅಂತೆಯೇ ಮಗುವಿಗೆ ತಾಯ ಮೈ ವಾಸನೆ ಸಹಿಯಂತೆಯೇ ಒಂದು ನಿರ್ದಿಷ್ಟ ಗುರುತು.

ವಾಸನೆಯ ಈ ಗುರುತು ಮುಂದೆ ವಿವರಿಸಲಾದ ದನಿಯ ಗುರುತಿನೊಂದಿಗೆ ಸೇರಿ ಮಗುವಿನ ದೃಷ್ಟಿಯ ಬೆಳವಣಿಗೆ, ದೃಷ್ಟಿಯನ್ನು ಮುಖದ ಮೇಲೆ ಕೇಂದ್ರೀಕರಿಸುವುದು, ಅದಕ್ಕೆ ತಕ್ಕಂತೆ ತಲೆ ತಿರುಗಿಸುವುದು, ಮುಖವನ್ನು ಹುಡುಕುವುದು, ಮುಖದ ಆಕಾರ, ಚಹರೆ,ಬಣ್ಣವನ್ನು ಗುರುತು ಹಿಡಿಯುವುದು ಮೊದಲಾದ ಕ್ರಿಯೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದೃಷ್ಟಿ ಸಾಮರ್ಥ್ಯದ ಬೆಳವಣಿಗೆ ಹಾಗೂ ಮೆದುಳಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಅಷ್ಟೇ ಅಲ್ಲದೆ ಮಗುವಿನಲ್ಲಿ ನೆಮ್ಮದಿಯ ಭಾವನೆ ಮೂಡಲು‌ ಕೂಡಾ ವಾಸನೆಯ ಗುರುತು ಸಹಾಯ ಮಾಡುತ್ತದೆ. ಶಿಶುವಿಗೆ ಭಯ ಉಂಟಾಗುವ ಸಂದರ್ಭಗಳಲ್ಲಿ ವಾಸನೆ ಮತ್ತು ದನಿಯ ಗುರುತು, ತನ್ನ ತಾಯಿ ಹತ್ತಿರದಲ್ಲಿಯೇ ಇದ್ದಾಳೆ ,ತನಗೇನೂ ಭಯವಿಲ್ಲ ಎಂಬ ಭಾವನೆ ಉಂಟುಮಾಡುತ್ತದೆ. ತಾಯಿ ಹತ್ತಿರದಲ್ಲಿದ್ದಾಳೆ ಎಂಬ ಭಾವನೆ ಅಪರಿಚಿತರು ಕಂಡಾಗ ದೈರ್ಯವಾಗಿ ಅವರನ್ನು ನೋಡುವ ,ಅವರ ಚಹರೆ,ವರ್ತನೆಯನ್ನು ಗಮನಿಸುವುದಕ್ಕೆ ಸಹಾಯಕವಾಗುತ್ತದೆ.

ತಾಯ ಮೈ ವಾಸನೆ ತಾಯಿಲ್ಲದಿರುವಾಗಲೂ ಶಿಶುವಿನ ಪಾಲನೆಗೆ ಸಹಾಯ ಮಾಡುತ್ತದೆ.ತಾಯ ಮೈ ವಾಸನೆಗೆ ಸಮೀಪವಿರುವ ಅಜ್ಜಿ , ಚಿಕ್ಕಮ್ಮಂದಿರ ಜೊತೆ ಒಡನಾಡಲು ಸಹಾಯ ಮಾಡುತ್ತದೆ. ಅವರು ಶಿಶುವಿನ ಪಾಲನೆಯಲ್ಲಿ ಸಹಾಯ ಮಾಡಲು ಅನುಕೂಲವುಂಟಾಗುತ್ತದೆ.
ಬೇರೆ ಸಸ್ತನಿ ಪ್ರಾಣಿಗಳಿಗಿಂತ ಭಿನ್ನವಾಗಿ ಮನುಷ್ಯ ಶಿಶುವಿಗೆ ತಾನೇ ಅಮ್ಮನ ಜೊತೆ ಇತರರೂ ಪಾಲನೆಯಲ್ಲಿ ಜೊತೆಗೂಡುವ ಅಗತ್ಯವಿರುವುದು. ತಾಯಿಗೆ ಹಲವಾರು ತಿಂಗಳ ಬಾಣಂತನದ ಪೋಷಣೆ, ಶಿಶುವಿನ ಪೋಷಣೆ ಇರುವುದು. ಈ ವಾಸನೆಯ ಗುರುತಿನ ಪ್ರಕ್ರಿಯೆ ತಾಯ ಮೈಯಿಂದ ತಂದೆಗೂ ವರ್ಗಾಯಿಸಲ್ಪಟ್ಟು ತಂದೆಯ ಗುರುತು ಹಿಡಿಯುವುದಕ್ಕೂ, ತಂದೆ ಪಾಲನೆಯಲ್ಲಿ ಭಾಗವಹಿಸುವುದಕ್ಕೂ ಸಹಾಯವಾಗುತ್ತದೆ.

ರುಚಿಯ ವಿಷಯದಲ್ಲೂ ಈ ಪ್ರಕ್ರಿಯೆ ಇದೆ. ಗರ್ಭ ದ್ರವದಲ್ಲಿ ತಾಯಿ ಸೇವಿಸುವ ಆಹಾರದ ವಾಸನೆ, ರುಚಿ ಇರುವಂತೆ ತಾಯ ಹಾಲಿನಲ್ಲೂ ಆಕೆ ಸೇವಿಸುವ ಆಹಾರದ ವಾಸನೆ, ರುಚಿ ಇರುತ್ತದೆ. ಅಷ್ಟೇ ಅಲ್ಲದೆ ಮಗು ಗರ್ಭದೊಳಗೆ ಬೆಳೆಯುವ ಕೊನೆಯ ಮೂರು ತಿಂಗಳುಗಳಲ್ಲಿ ತಾಯಿ ಸೇವಿಸಿದ ಆಹಾರದ ರುಚಿಯನ್ನು ಹುಟ್ಟಿದ ನಂತರ ಹಲವು ಕಾಲ ಮಗು ಗುರುತಿಸುತ್ತದೆ. ಅಂತಹ ಆಹಾರವನ್ನು ಹೆಚ್ಚು ಸೇವಿಸುತ್ತದೆ ಎಂಬುದೂ ಹಲವಾರು ಪ್ರಯೋಗಗಳಿಂದ ಸಿದ್ಧಪಟ್ಟಿದೆ.

ಅಮ್ಮನ ದನಿ, ಅಮ್ಮನ ಅರಿವಿನತ್ತ ಮತ್ತೊಂದು ದಾಪುಗಾಲು :
ಅರ್ಜುನ‌ ಸುಭದ್ರೆಯರ ಮಗ  ಅಭಿಮನ್ಯು ಇನ್ನೂ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಬೇಧಿಸುವ ವಿದ್ಯೆ ಕಲಿತಿದ್ದ ಎಂಬುದು ಮಹಾಭಾರತದ  ಒಂದು ಉಪಕತೆ. ಆದರೆ ಇದೇನೂ ವಿಶೇಷ ಪುರುಷರ ವಿಶೇಷ ಸಾಮರ್ಥ್ಯವಲ್ಲ, ಎಲ್ಲ ಗರ್ಭಸ್ಥ ಶಿಶುಗಳೂ ಪಡೆದಿರುವ ಶಕ್ತಿ ಎಂಬುದು ಇತ್ತೀಚಿನ ಸಂಶೋಧನೆ.

ಗರ್ಭಸ್ಥ ಸ್ಥಿತಿಯಲ್ಲಿಯೇ ಶಿಶುವಿಗೆ ಹೊರಗೆ ಆಡುವ ಮಾತುಗಳು ಕೇಳುತ್ತದೆ ಎಂಬ ವಿಷಯ ಶಿಶುವಿನ ಬೆಳವಣಿಗೆಯ ಸಂಶೋಧನೆಗಳಿಂದ ಇಪ್ಪತ್ತನೆಯ ಶತಮಾನದ ಕೊನೆಯ ಸಮಯದಲ್ಲಿ ತಿಳಿಯಿತು. ಅದು ಶಿಶು ಬೆಳವಣಿಗೆಯ ಕ್ಷೇತ್ರದ ಸಂಶೋಧಕರಿಗೆ ಬಹಳ ಉದ್ವೇಗದ ವಿಷಯವಾಯಿತು. ಬರಬರನೆ ಹಲವು ಸಂಶೋಧನೆಗಳು ನಡೆದವು ಮತ್ತು ಇಂದೂ ನಡೆಯುತ್ತಿವೆ.

ಗರ್ಭದಲ್ಲಿ ಶಿಶುವಿನ ಬೆಳವಣಿಗೆಯ 28 ನೆಯ ದಿನದಲ್ಲಿಯೇ ಧ್ವನಿ ತರಂಗಗಳನ್ನು ಗ್ರಹಿಸುವ ಕಿವಿಯ ಮಧ್ಯ ಭಾಗದ ಕಾಕ್ಲಿಯಾ ಎಂಬ ಅಂಗ ಬೆಳೆಯಲಾರಂಭವಾಗುತ್ತದೆ. ಸುಮಾರು 18-20 ವಾರದ ವೇಳೆಗೆ ತನ್ನ ಕೆಲಸ ಮಾಡಲು ಸಿದ್ಧವಾಗುತ್ತದೆ. ಆದರೆ ಧ್ವನಿ ತರಂಗಗಳನ್ನು ಮೆದುಳಿಗೆ ಸಾಗಿಸಿ ಗುರುತು ಹಿಡಿಯಲು ಸಹಾಯ ಮಾಡುವ ನರ ವ್ಯೂಹದ ಬೆಳವಣಿಗೆ ಎಂಟನೆಯ ತಿಂಗಳ ವೇಳೆಗೆ ಬೆಳವಣಿಗೆಯಾಗುತ್ತದೆ. ಧ್ವನಿಯನ್ನು ಕೇಳುವುದರ ಜೊತೆಗೆ ಅವುಗಳನ್ನು ಗುರುತು ಹಿಡಿಯುವ ಕ್ರಿಯೆ ಆರಂಭವಾಗುತ್ತದೆ.

ತಾಯ ಗರ್ಭದೊಳಗೆ ಮಗುವಿಗೆ ಹಲವು ಶಬ್ದಗಳು ಕೇಳುತ್ತಿರುತ್ತವೆ. ತಾಯ ಹೃದಯದ ಬಡಿತ, ಮಗುವಿನ ಹೃದಯದ ಬಡಿತ, ಗರ್ಭ ಚೀಲಕ್ಕೆ ರಕ್ತ ಸಾಗಿಸುವ ರಕ್ತನಾಳಗಳ ನಾಡಿಯಂತಹ ಬಡಿತ, ಗರ್ಭ ದ್ರವದ ಚಲನೆಯ ಶಬ್ದ ಇತ್ಯಾದಿ. ಕೆಲವೊಮ್ಮೆ ಈ ಶಬ್ದಗಳ ಗದ್ದಲ ಹೆಚ್ಚಿರುತ್ತದೆಂದು ಕೆಲ ಪ್ರಯೋಗಗಳು ತಿಳಿಸಿದ್ದರೂ ಸಾಮಾನ್ಯವಾಗಿ ಗರ್ಭಕೋಶ ಹೆಚ್ಚಾಗಿ ಶಾಂತವಾಗಿರುತ್ತದೆಂದು ಹಲವು ಪ್ರಯೋಗಗಳ ಶೋಧ. ತಾಯ ಹೃದಯದ ಒಂದೇ ಸಮನಾದ ಬಡಿತ ಶಿಶುವಿಗೆ ಹಿತವಾಗಿರುತ್ತದೆ. ಅದು ನಿದ್ದೆ ಹೋಗಲು ಸಹಾಯಕವಾಗಿರುತ್ತದೆ.

ಗರ್ಭಸ್ಥ ಶಿಶುವಿಗೆ ಯಾವುದೇ ಶಬ್ದ ಮುಟ್ಟಬೇಕಾದರೂ ಅದು ಹೊಟ್ಟೆ, ಗರ್ಭ ಕೋಶಗಳ ಮಾಂಸಖಂಡಗಳು, ಗರ್ಭ ಕೋಶದ ದ್ರವವನ್ನು ದಾಟಬೇಕಾಗುತ್ತದೆ. ಆದ್ದರಿಂದ ಆ ಶಬ್ದ ಬಹಳಷ್ಟು ಮೆಲ್ಲಗಾಗಿರುತ್ತದೆ. ಆದ್ದರಿಂದ ತಾಯ ಸುತ್ತ ನಡೆಯುವ ಶಬ್ದಗಳೆಲ್ಲಾ ಹಾಗೆಯೇ ಒಳಗೆ ಕೇಳಿಸುವುದಿಲ್ಲ. ಅದರಲ್ಲೂ ದೊಡ್ಡ ಶಬ್ದಗಳು ಬಹಳ ಮೆಲ್ಲಗಾಗಿರುತ್ತವೆ.

ಆದರೆ ಗರ್ಭಕೋಶದೊಳಗೆ ಧ್ವನಿ ಗ್ರಹಣ ಯಂತ್ರವನ್ನಿಟ್ಟು ಪ್ರಯೋಗ ಮಾಡಿದಾಗ ಬೇರೆ ಶಬ್ದಗಳಿಗಿಂತ ಮನುಷ್ಯರ ಮಾತುಗಳು ಸ್ವಲ್ಪ ಸ್ಪಷ್ಟವಾಗಿ ಕೇಳಿಬರುತ್ತದೆಯಂತೆ. ಬೇರೆಲ್ಲ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರ ಕಿವಿಗಳು ಮತ್ತು ಮೆದುಳು ಮಾತಿನ ಸೂಕ್ಷ್ಮಗಳನ್ನು, ಮಾತಿನ ವಿವಿಧ ಘಟಕಗಳನ್ನು ಪ್ರಾಸ,ಲಯ,ಶ್ರುತಿಗಳನ್ನು ಗ್ರಹಿಸಲು ವಿಕಾಸಗೊಂಡಂತಹವಲ್ಲವೇ ?

ತಾಯ ಮಾತುಗಳು ಬೇರೆಲ್ಲರ ಮಾತುಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಕೇಳುತ್ತವೆ. ಬೇರೆಲ್ಲ ವ್ಯಕ್ತಿಗಳ ದನಿತರಂಗಗಳು ಗಾಳಿಯ ಮೂಲಕ ಹೊಟ್ಟೆಯನ್ನು ಮುಟ್ಟಿ, ಅದರ ಮತ್ತು ಗರ್ಭಕೋಶದ ಮಾಂಸಖಂಡಗಳ ಮೂಲಕ ಹಾದು ಶಿಶುವಿನ‌ ಕಿವಿಯನ್ನು ಮುಟ್ಟಬೇಕು.ಇವು ಮೇಲೆ ವಿವರಿಸಿದ ಮೆಲ್ಲಗಾಗುವ ಪ್ರಕ್ರಿಯೆಗೆ ಒಳಗಾಗಿರುತ್ತವೆ. ಆದರೆ ತಾಯ ದನಿ ತರಂಗಗಳು ಬೇರೆಲ್ಲರ ದನಿಯಂತೆಯೇ  ಪಸರಿಸುವುದರ ಜೊತೆಗೆ  ತಾಯ ದೇಹದೊಳಗೇ ಮೂಳೆ, ಮಾಂಸಖಂಡಗಳ ಮೂಲಕ ವೈಬ್ರೇಷನ್‌ಗಳ ರೂಪದಲ್ಲಿ  ಶಿಶುವನ್ನು ತಲುಪುತ್ತದೆ. ಹೀಗಾಗಿ ಹುಟ್ಟಿದ ನಂತರ ತಾಯ ದನಿಯನ್ನು ಪಟ್ಟನೆ ಗುರುತು ಹಿಡಿಯುತ್ತವೆ.

ತಾಯಿಯ ಜೊತೆಯಲ್ಲಿಯೇ ಹೆಚ್ಚು ಕೇಳುವ ದನಿಯನ್ನೂ ಶಿಶುಗಳು ಗುರುತು ಹಿಡಿಯುತ್ತವೆ. ಹೆರಿಗೆಯಾಗುವ ಹಲವು ತಿಂಗಳ ಮೊದಲೇ ತವರಿಗೆ ಹೋಗುವ ನಮ್ಮ ಪದ್ಧತಿಯಲ್ಲಿ ಅಜ್ಜಿಯ ದನಿ, ತಾಯ ತಂಗಿಯ ದನಿಯಾಗಬಹುದು. ಹೆರಿಗೆಯಾಗುವವರೆಗೂ ಗಂಡನ ಮನೆಯಲ್ಲಿಯೇ ಉಳಿದರೆ ಆಗ ಶಿಶುವಿನ ತಂದೆಯ ದನಿ, ಈ ಕಡೆಯ ಅಜ್ಜಿಯ ದನಿಯ ಗುರುತು ಸಿಗುತ್ತದೆ. ಆದ್ದರಿಂದ ಬಸರಿ ಹೆಣ್ಣನ್ನು ಗಂಡ ತವರಿಗೆ ಕಳಿಸುವುದಕ್ಕೆ ಬದಲಾಗಿ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಆರೈಕೆ ಮಾಡಿದರೆ ಮಗುವಿಗೆ ತಂದೆಯ ದನಿಯ ಗುರುತು ಸಿಗಲು ಹೆಚ್ಚು ಅನುಕೂಲ.

ಗರ್ಭದೊಳಗಿನ ಶಿಶುವಿಗೆ ಎಂತಹಾ ಮಾತುಗಳು ಕೇಳಬಹುದು ಎಂಬ ಬಗ್ಗೆ ಕೂಡಾ ಹಲವು ಪ್ರಯೋಗಗಳು ನಡೆದಿವೆ. ಮಾತಿನ ಘಟಕಗಳು ಸ್ವರ- ವ್ಯಂಜನ- ಸ್ವರ ಎಂಬ ಕ್ರಮದಲ್ಲಿದ್ದರೆ ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತದೆ. ಪ್ರಾಸ, ಲಯಬದ್ಧವಾದ ಮಾತುಗಳು ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತವೆ.

38-39 ವಾರಗಳ ಗರ್ಭಸ್ಥ ಶಿಶುವಿಗೆ ತಾಯಿ ಒಂದು ಸರಳ ಶಿಶು ಪ್ರಾಸವನ್ನು ಹಲವು ಬಾರಿ ಉಚ್ಛರಿಸಿದಾಗ ಶಿಶುವಿನ ಮೆದುಳಿನ ಧ್ವನಿ ಗ್ರಹಣದ ಭಾಗ ಕ್ರಿಯಾಶೀಲವಾಗಿರುವುದು ಕಂಡು ಬಂದಿದೆ. ಶಿಶು ತಾಯ ದನಿ, ಬೇರೆಯವರ ದನಿಯ ವ್ಯತ್ಯಾಸಗಳನ್ನು ಗುರುತುಹಿಡಿಯುತ್ತದೆ. ಅಷ್ಟೇ ಅಲ್ಲ 36-40 ವಾರದ ಗರ್ಭಸ್ಥ ಶಿಶು ಉಚ್ಛಾರಣೆಯಲ್ಲಿ ಅಕ್ಷರಗಳ ಅದಲು ಬದಲನ್ನೂ – ಉದಾಹರಣೆಗೆ ಬಾ- ಬೀ ಎನ್ನುವುದಕ್ಕೆ ಬದಲಾಗಿ ಬೀ-ಬಾ ಎಂದು ಬದಲಿಸಿದರೆ ಆ ವ್ಯತ್ಯಾಸವನ್ನು ಗುರುತು ಹಿಡಿಯುತ್ತದಂತೆ.

ಹೀಗೆ ಹುಟ್ಟುವ ಕೊನೆಯ ತಿಂಗಳುಗಳಲ್ಲಿ ಶಿಶುವಿಗೆ ಕೇಳುವ ಸಾಮರ್ಥ್ಯ ಬೆಳೆದಿರುತ್ತದೆಯೆಂದು ತಿಳಿದ ವೈದ್ಯರು ತಾಯಂದಿರಿಗೆ ಈ ವಿಷಯ ತಿಳಿಸುತ್ತಿದ್ದಾರೆ. ಆಗ ಶಿಶು ಯಾವ ಮಾತುಗಳನ್ನು ಕೇಳುತ್ತಾ ಬೆಳೆಯಬೇಕೆಂದು ತಾಯಂದಿರಿಗೆ ಅನಿಸುತ್ತದೆಯೋ ಅಂತಹ ಮಾತುಗಳನ್ನು, ಹಾಡುಗಳನ್ನು ಉಚ್ಛರಿಸಲು ಹೇಳುತ್ತಿದ್ದಾರೆ ಎಂದು ಕೆಲ ವೈದ್ಯರು ತಿಳಿಸಿದರು. ಆದರೆ ಹೀಗೆ ಗರ್ಭಸ್ಥ ಶಿಶುವಿಗೆ ಕೇಳಿಸಬೇಕೆಂಬ ಮಾತುಗಳು ಸರಳ ಶಿಶುಪ್ರಾಸಗಳಾಗಿರುವುದು ಒಳ್ಳೆಯದು. ಮತ್ತು ಶಿಶುವನ್ನೇ ಉದ್ದೇಶಿಸಿ ತಾಯಿ ಆಡುವ ಮುದ್ದಿನ ಮಾತುಗಳು ಹೆಚ್ಚು ಉಪಯುಕ್ತ ಎಂಬುದು ವಿಜ್ಞಾನಿಗಳ ಪ್ರಯೋಗಗಳು ತಿಳಿಸಿವೆ.

ದೃಷ್ಟಿಯ ಬೆಳವಣಿಗೆ
ಎಲ್ಲರಿಗೂ ಗೊತ್ತಿರುವಂತೆ ಮಗು ಹುಟ್ಟಿದ ಮೇಲೆ ಕೆಲ ತಿಂಗಳ ನಂತರವಷ್ಟೇ ದೃಷ್ಟಿಯ ಬೆಳವಣಿಗೆಯಾಗುವುದು. ಹೀಗೆ ಆಗ ತಾನೇ ಹುಟ್ಟಿದ ಶಿಶುವಿನಲ್ಲಿ  ಅತ್ಯಂತ ಕಡಿಮೆ ಬೆಳವಣಿಗೆ ಇರುವುದೇ ಕಣ್ಣಿನದು. ಆದರೂ ಕೂಡಾ ತಾಯ ಗರ್ಭದ ಮೇಲೆ ಟಾರ್ಚ್ ಬೆಳಕು ಬಿಟ್ಟರೆ ಅದಕ್ಕೆ ಶಿಶು ಸ್ಪಂದಿಸುತ್ತದೆ. ಬೆಳಕಿನ ಚುಕ್ಕಿಗಳ ರೂಪದಲ್ಲಿ ಹೊಟ್ಟೆಯ ಮೇಲೆ ಬಿಟ್ಟಾಗ ವಿವಿಧ ಪ್ಯಾಟರ್ನ್‌ಗಳನ್ನು ಶಿಶು ಗುರುತಿಸುತ್ತದೆಯಂತೆ.

ನಾಲಗೆ, ಮೂಗು, ಕಿವಿ ಮೊದಲಾದ  ಜ್ಞಾನೇಂದ್ರಿಯಗಳ ಬೆಳವಣಿಗೆಯ ಜೊತೆಗೇ ಮೆದುಳಿನಲ್ಲಿ ವಾಸನೆ, ರುಚಿ, ಶಬ್ದ, ಬೆಳಕುಗಳನ್ನು ಗ್ರಹಿಸುವ ಭಾಗಗಳು ಬೆಳವಣಿಗೆಯಾಗುವುದು ಅವುಗಳನ್ನು ಗ್ರಹಿಸಲು ಅತ್ಯಗತ್ಯ. ಈ ಇಂದ್ರಿಯಗಳಿಂದ ಮೆದುಳಿನ ವಿವಿಧ ಭಾಗಗಳಿಗೆ ವಿವಿಧ ಸಂಜ್ಞೆಗಳನ್ನು ಕೊಂಡೊಯ್ಯುವ ನರಜಾಲ ಬೆಳೆದಾಗ ಮಾತ್ರ ವಾಸನೆ,ರುಚಿ,ಶಬ್ದ ಇತ್ಯಾದಿಗಳ ಅರಿವು ಉಂಟಾಗುವುದು. ಮೆದುಳಿನ ಈ ಬೆಳವಣಿಗೆಯೂ ಇಂದ್ರಿಯಗಳ ಬೆಳವಣಿಗೆ ಜೊತೆಯಲ್ಲೇ ಕೆಲ ಮಟ್ಟಿಗೆ ಆಗುತ್ತದೆ. ಮಗು ಹುಟ್ಟಿದ ನಂತರ ಈ ನರತಂತುಗಳು ಮತ್ತು ಮೆದುಳಿನ ಭಾಗಗಳು ವೇಗವಾಗಿ ಬೆಳೆಯುತ್ತವೆ.

ಒಟ್ಟಿನಲ್ಲಿ ಅಮ್ಮನೆಂಬ ಅರಿವೇ  ಮನುಷ್ಯರ ಅರಿವಿನ ಬೆಳವಣಿಗೆಯ ಆರಂಭ ಬಿಂದು. ತಾಯ ಗರ್ಭದೊಳಗೇ ಈ ಅರಿವು ಹುಟ್ಟು ಶುರುವಾಗುತ್ತದೆ. ಹುಟ್ಟಿದ ಕೂಡಲೇ ಅಮ್ಮನ ಅರುವನ್ನು ಮೂಡಿಸುವುದು ಜ್ಞಾನೆಂದ್ರಿಯಗಳು. ಮುಖ್ಯವಾಗಿ ವಾಸನೆ ಮತ್ತು ದನಿ ಗ್ರಹಣ.
ಹುಟ್ಟಿದ ಮೇಲೆ ಜ್ಞಾನೇಂದ್ರಿಯಗಳ ಬೆಳವಣಿಗೆ, ಮೆದುಳಿನ ಬೆಳವಣಿಗೆಯೊಂದಿಗೆ ನಾಗಾಲೋಟದಿಂದ ಸಾಗುತ್ತದೆ. ಅಮ್ಮನೆಂಬ ಅರಿವು ಅಪ್ಪ, ಅಜ್ಜಿ ಮೊದಲಾದವರ ಅರಿವಿಗೆ ದಾರಿಯಾಗುತ್ತದೆ. ಅಮ್ಮನೆಂಬ ಅರಿವು ಅಮ್ಮ ಎಂಬ ಮೊದಲ ಗುರುವಿನಿಂದ ಪಡೆವ ಜಗತ್ತಿನ ಅರಿವಿಗೆ ಆಧಾರ.

‍ಲೇಖಕರು Admin

March 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: