ಪಿ ಚಂದ್ರಿಕಾ ಅಂಕಣ – ಹಸೀನಮ್ಮ ಮತ್ತು ಮೀನಿನ ಊಟ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

29

ಪಾತುಮ್ಮಳ ಮಗಳಿಗೆ ಅಳಿಯ ಮೊಹಮದ್ ತಲ್ಲಾಖ್ ಕಳಿಸಿರುವ ದೃಶ್ಯ ಶೂಟ್ ಮಾಡಬೇಕಿತ್ತು. ಆ ವಿಷಯವನ್ನು ತಲುಪಿಸುವ ಆರ್ಟಿಸ್ಟ್ ಯಾರು ಎನ್ನುವುದು ಫೈನಲ್ ಆಗಿರಲಿಲ್ಲ. ಯಾಕೆ ಹಾಗಾಯಿತು ಎನ್ನುವುದು ಈಗಲೂ ನನಗೆ ಗೊತ್ತಾಗುತ್ತಿಲ್ಲ. ಸಣ್ಣಪುಟ್ಟ ಸುಮ್ಮನೆ ಹಾದು ಹೋಗುವ ಪಾತ್ರಗಳಿಗೂ ಜನರನ್ನ ಹುಡುಕುತ್ತಿದ್ದ ನಮಗೆ ಮಾತುಗಳಿರೋ ಈ ಪಾತ್ರದ ಬಗ್ಗೆ ಯಾಕೆ ಗಮನವಿರಲಿಲ್ಲವೋ? ಅಂತೂ ಸತ್ಯ ಏನೆಂದರೆ ನಮಗೆ ಆ ಕ್ಷಣಕ್ಕೆ ಗಂಡು ಪಾತ್ರಧಾರಿಯೊಬ್ಬನ ಅಗತ್ಯ ಇತ್ತು. ಬೆಳಗ್ಗೇನೆ ಪಂಚಾಕ್ಷರಿ ನಮ್ಮಲ್ಲೇ ಯಾರೋ ಒಬ್ಬನ ಹತ್ತಿರ ಮಾಡಿಸಿಬಿಡೋಣ ಎಂದಿದ್ದರಾದರೂ ಅದು ಯಾರು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ನಾನು ನಮ್ಮಲ್ಲಿ ಯಾರಾಗಬಹುದು ಎನ್ನುವ ಹುಡುಕಾಟದಲ್ಲಿದ್ದೆ.

ಪುನೀತ ನಾನು ಮಾಡಲ್ಲ ನಮ್ಮ ಮನೆಯಲ್ಲಿ ಮುಸ್ಲೀಂ ಪಾಅತ್ರ ಮಾಡಿದ್ರೆ ಬೇಜಾರಾಗ್ತಾರೆ ಶಾಸ್ತ್ರಿಗಳ ಮನೆತನ ನಮ್ಮದು ಎಂದಿದ್ದ. ಪುಟ್ಟಣ್ಣನಿಗೆ ಕಾಶಿಯಲ್ಲಿ ಚಂದ್ರಣ್ಣನ ಜೊತೆ ಕರಸೇವೆಗೆ ಹೋಗುವ ಪಾತ್ರವೊಂದು ನಿಗಧಿಯಾಗಿತ್ತು. ಇನ್ನು ಯಾರು? ಎನ್ನುವುದು ಲಕ್ಷಗಳ ಪ್ರಶ್ನೆ ಆಗಿತ್ತು.

ಪ್ರೊಡಕ್ಷನ್‌ಗೆ ಸಹಾಯ ಮಾಡಲಿಕ್ಕೆ ಅಂತ ಒಬ್ಬ ಹುಡುಗ ಬಂದಿದ್ದ. ಅವನ ಹೆಸರು ಮರೆತಿದ್ದೇನೆ. ಅವನದ್ದು ಬೆಕ್ಕಿನ ಕಣ್ಣು. ಅವನನ್ನು ನೋಡಿದಾಗಲೆಲ್ಲಾ ನಿನ್ನ ಹತ್ತಿರ ಒಂದು ಪಾತ್ರ ಮಾಡಿಸಲೇ ಬೇಕು ಅಂತ ಹೇಳ್ತಾನೇ ಇದ್ದೆ. ಮೇಡಂ ಸುಮ್ಮನಿರಿ ನಾನು ಆಕ್ಟಿಂಗೂ ತುಂಬ ದೂರ ದೂರ’ ಅಂತ ನಗುತ್ತಿದ್ದ. ಇಲ್ಲ ಮಾರಾಯ ಹುಡುಕಿದರೂ ನಿನ್ನ ಹಾಗೆ ಲುಕ್ ಇರೋರು ಸಿಗಲ್ಲ. ನೀನು ಸುಮ್ಮನೆ ಟೋಪಿ ಹಾಕ್ಕೊಂಡ್ ನಿಂತ್ಕೋ ಆ ಫೀಲೇ ಬೇರೆ’ ಎನ್ನುತ್ತಿದ್ದೆ. ಅವನು ಎದುರಿಗೆ ಬಂದ ತಕ್ಷಣ ನನಗೆ ಅರೆ ಈ ಪಾತ್ರವನ್ನು ಯಾಕೆ ಇವನ ಹತ್ತಿರ ಮಾಡಿಸಬಾರದು ಎನ್ನಿಸಿಬಿಟ್ಟಿತ್ತು. ಅದನ್ನ ಪಂಚಾಕ್ಷರಿಗೂ ಹೇಳಿದ್ದೆ. ಡೈಲಾಗ್ ಹೇಳಿಸುವುದು ಮಾತ್ರ ನಿಮ್ಮದೇ ಜವಾಬ್ದಾರಿ ಎಂದಿದ್ದರು.

ಅವನು ನನ್ನ ಮಾತಿಗೆ ಏನಂದರೂ ಒಪ್ಪುತ್ತಿಲ್ಲ. ನಾನು ಬಿಡುತ್ತಿಲ್ಲ. ಕಡೆಗೆ ಕೋಪ ಬಂದು ಅಲ್ಲಾ ಮಾರಾಯಾ ಹೀಗೆ ನಿನ್ನ ಕೈಕಾಲು ಹಿಡಿದು ಪಾತ್ರ ಮಾಡು ಅಂತ ಯಾರು ಕೇಳ್ತಾರೆ. ಪಾತ್ರ ಕೊಡಿ ಅಂತ ಕ್ಯೂ ನಿಲ್ತಾರೆ. ಅಂಥಾದ್ರಲ್ಲಿ ನಾನು ಇಷ್ಟೆಲ್ಲಾ ರಿಕ್ವೆಸ್ಟ್ ಮಾಡ್ತಾ ಇದೀನಿ ನಿಂದು ಜಾಸ್ತಿ ಆಯ್ತು’ ಎಂದು ಬೈದು ಬಿಟ್ಟೆ. ಪಾಪ ದಿಕ್ಕು ತೋಚದೆ ಒಪ್ಪಿಕೊಂಡುಬಿಟ್ಟ. ಸ್ಪಾಟ್‌ನಲ್ಲೇ ಪಾತ್ರಧಾರಿಯನ್ನು ಹುಡುಕಿಕೊಟ್ಟ ಖ್ಯಾತಿಗೂ ಪಾತ್ರಳಾಗಿದ್ದೆ. ಆಯ್ತು ಬಿಡಿ ಈ ಕ್ರೆಡಿಟ್‌ನೂ ಟೈಟಲ್ ಕಾರ್ಡ್ನಲ್ಲಿ ಕೊಡೋಣ ಎಂದಿದ್ದರು ಪಂಚಾಕ್ಷರಿ, ನಾನು ಬೆಳಗಿನಿಂದ ಅವನ ಹಿಂದೆ ಮುಂದೆ ಓಡಾಡುತ್ತಾ, ಅವನಿಗೆ ಡೈಲಾಗ್ ಹೇಳಿಕೊಡುತ್ತಾ ಹೇಳಲಿಕ್ಕಾಗದ ಅವನನ್ನು ಗದರುತ್ತಾ ಮನಸ್ಸಿಡು ಮಾರಾಯಾ. ನೀನು ಹೇಳಬೇಕಿರೋ ವಿಷ್ಯಾ ಇಷ್ಟೇ ಎಂದು ತಿದ್ದಿ ತಿದ್ದಿ ಹೇಳಿಕೊಟ್ಟಿದ್ದೆ.

ಕೊನೆಗೆ ಹೇಳಲಾಗದ ಅವನನ್ನು ಕೂಡಿಸಿಕೊಂಡು ಎರಡೆರಡೇ ಸಾಲುಗಳನ್ನು ಉರು ಹೊಡೆಸಿದೆ. ಹೇಳಿದಂತೆ ಹೇಳಿ ಮತ್ತೆ ತಪ್ಪಿ ಬಿಡುತ್ತಿದ್ದ. ನನಗೋ ಕೋಪ ರ‍್ರನೆ ನೆತ್ತಿಗೆ ಏರಿಬಿಡುತ್ತಿತ್ತು. ಹಿಂದೆಯೇ ಅವನು ಮಾಡಲ್ಲ ಹೋಗಿ ಮೇಡಂ ಅಂದುಬಿಟ್ಟರೆ ಎನ್ನುವಭಯ ಹುಟ್ಟಿ, ಮೊದಲ ಸಲ ಅಲ್ವಾ ನನಗೆ ಕೊಟ್ಟರೂ ನಾನೂ ಹೀಗೆ ತೊದಲುತ್ತೇನೆ’ ಎಂದು ಸಮಾಧಾನ ಮಾಡಿದೆ. ಕೊನೆಗೆ ಇವನ ಕೈಲಿ ಇಷ್ಟು ದೊಡ್ಡ ಡೈಲಾಗ್ ಹೇಳಲಿಕ್ಕೆ ಸಾಧ್ಯವೇ ಇಲ್ಲಾನ್ನಿಸಿ ಅಲ್ಲೇ ಬಿಳಿಯ ಹಾಳೆಯ ಮೇಲೆ ಅವನ ಡೈಲಾಗ್ ಅನ್ನು ತುಂಡ ಮಾಡಿ ಬರೆದೆ. ಫ್ಲೋ ಹೋಗಿಬಿಡುತ್ತೆ ಮೇಡಂ ಎನ್ನುವ ನಿರ್ದೇಶಕರನ್ನೂ ಒಪ್ಪಿಸಿ ಇಲ್ಲಾ ಸಾರ್ ಇದು ಓಕೆ ಸುಮ್ಮನೆ ಟೈಂ ವೇಸ್ಟ್ ಆಗುತ್ತೆ.

ಪಾತುಮ್ಮ‌ ಮತ್ತು ಅವಳ ಮಗಳ ರಿಯಾಕ್ಷನ್ ಮೇಲ್ ಹೆಚ್ಚು ವರ್ಕೌಟ್ ಮಾಡಿ ಎಂದಿದ್ದೆ. ನೀವೇ ನಿರ್ದೇಶಕರಾಗಿಬಿಡಿ ಎಂದು ಬೇಸರಿಸಿಕೊಂಡಿದ್ದರೂ ಕೂಡಾ. ಬೇಜಾರು ಆಗುತ್ತೆ ನಿಜ ಯಾಕಂದ್ರೆ ಒಂದೊಂದು ಸಾಲು ಬರೆದುಕೊಳ್ಳುವಾಗಲೂ ಏನೇನೋ ಅಂದುಕೊಂಡಿರುತ್ತೇವೆ. ಐವತ್ತು ಸಲ ಬದಲಿಸಿರುತ್ತೇವೆ. ಜಗಳ ಆಡಿರುತ್ತೇವೆ. ಈಗ ಇದ್ದಕ್ಕಿದ್ದ ಹಾಗೆ ಬದಲಿಸಿಬಿಟ್ಟರೆ ಹೇಗೆ? ಎಲ್ಲವೂ ನನಗೂ ಗೊತ್ತಿದೆ. ಆದರೆ ಇದು ನನ್ನ ಜೀವನ್ಮರಣ ಪ್ರಶ್ನೆಯಾಗಿ ಕಡತೊಡಗಿದ್ದು ಮಾತ್ರ ಯಾಕೆ ಎನ್ನುವುದು ಅರ್ಥವಾಗಲಿಲ್ಲ.

ಆ ಹುಡುಗನನ್ನು ನೋಡ್ದಿದ ದಿನದಿಂದ ನನ್ನೊಳಗೆ ಅವನೊಂದು ಪಾತ್ರವಾಗಿ ಕಾಡಿದನಾ? ಅಥವಾ ನಾನು ಆಯ್ಕೆ ಮಾಡಿದವ ನನ್ನ ಆಯ್ಕೆಯನ್ನು ಸಮರ್ಥಿಸಲಿಲ್ಲ ಅಂದ್ರೆ ಅವಮಾನವಾಗುತ್ತೆ ಅಂತಲಾ? ಅಥವಾ ಅವನು ನಟಿಸಲೇಬೇಕು ಎನ್ನುವ ಹಠಮಾರಿತನವಾ? ಗೊತ್ತಿಲ್ಲ, ಮನುಷ್ಯನಮನಸ್ಸು ಎಷ್ಟೆಲ್ಲಾ ಸಂಕೀರ್ಣವಾಗಿರುತ್ತೆ ಅಂತ. ಮನಸ್ಸಿಗೆ ಬಂತು ಅದನ್ನ ಸಾಧ್ಯ ಮಾಡಲಿಕ್ಕೆ ದುಡಿಯಲೇಬೇಕು. ಅಂತೂ ಇಂತೂ ಅವನನ್ನು ಓಕೆ ಎನ್ನುವ ರೆಡಿ ಮಾಡಿಬಿಟ್ಟೆ. ಪುಟ್ಟಣ್ಣ ಕೈಲೊಂದು ಕೋಲಿದ್ದಿದ್ರೆ ಥೇಟ್ ಮೇಷ್ಟ್ರೇ ಎಂದು ರೇಗಿಸಿದ್ದ.

ಒಟ್ಟಿನಲ್ಲಿ ಅವತ್ತು ಫುಲ್ ಟೆನ್ಷನ್. ಇಷ್ಟೆಲ್ಲಾ ಹೇಳಿಕೊಟ್ಟ ಮೇಲೂ ಇವನು ಸರಿ ಹೇಳದಿದ್ದರೆ ಏನು ಗತಿ? ಏನ್ ಮೇಡಂ ಈವು ಇಂಥಾ ಆರ್ಟಿಸ್ಟ್ನಾ ಹುಡುಕಿ ತರೋದು ಎಂದೆಲ್ಲಾ ಹೇಳಿಬಿಟ್ಟರೆ? ಎಂದು. ಎಲ್ಲರೆದುರು ನನ್ನ ಮರ್ಯಾದೆ ಹೋಗುವ ಮಾತುಗಳು ಬಂದರೆ, ರಿಟೇಕುಗಳಾಗಿ ಎಲ್ಲರಿಗೂ ಬೇಸರ ಬಂದುಬಿಟ್ಟರೆ? ಹೀಗೆ ಏನೇನೋ ನನ್ನ ತಲೆಯಲ್ಲಿ ಓಡುತ್ತಿತ್ತು. ಹಸೀನಮ್ಮ ಅಲೀಮಮ್ಮ ಎಲ್ಲರೂ ನನ್ನ ಏನಿವತ್ತು ತುಂಬಾ ಟೆನ್ಷನ್‌ನಲ್ಲಿದ್ದೀರಲ್ಲಾ ಎಂದು ಮಾತಾಡಿಸಿದರೂ ಆಮೇಲೆ ಮಾತಾಡಿಸ್ತೀನಿ ಎಂದಿದ್ದೆ.

ಮುಕ್ಕಚೇರಿಯ ಶೂಟಿಂಗ್ ಅಂದ್ರೆ ನಾನು ಹಕ್ಕಿಯ ಹಾಗಾಗುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರು ಅವರ ಮಾತು, ನಗು, ಆಪ್ತತೆ ಎಲ್ಲವೂ ನನ್ನ ಭಾವಲೋಕವನ್ನು ಮತ್ತಷ್ಟು ಬಲಗೊಳಿಸುತ್ತಿತ್ತು. ಆದರೆ ಅವತ್ತು ಮಾತ್ರ ಜಗತ್ತಿನ ಭಾರವೆಲ್ಲಾ ನನ್ನ ನೆತ್ತಿಯ ಮೇಲೆ ಇತ್ತು. ಎಲ್ಲರಿಗೂ ಯಾಕಿಷ್ಟು ಟೆನ್ಷನ್ನು ಎನ್ನುವ ಅಚ್ಚರಿ. ಪುಟ್ಟಣ್ಣ, ಪುನೀತ ಇಬ್ಬರೂ ಅವನು ಮಾಡಿಲ್ಲ ಅಂದ್ರೆ ಅದು ಅವರ ತಲೆನೋವು. ಸ್ಪಾಟ್‌ನಲ್ಲಿ ಆರ್ಟಿಸ್ಟ್ನ ಹುಡುಕಿದಾಗ ಇದೆಲ್ಲಾ ಕಾಮನ್ ಅಡ್ಜಸ್ಟ್ ಮಾಡಿಕೊಳ್ಳಬೇಕು ಬಿಡಿ ಎಂದಿದ್ದರು.

ಬೆಳಗ್ಗೆ ಇದ್ದ ಸೀನು ಮಧ್ಯಾಹ್ನಕ್ಕೆ ಹೋಯಿತು. ಬೆಳಗ್ಗಿನ ಸೀನಿನ ಆರ್ಟಿಸ್ಟ್ ಸೈಕಲ್ ಹತ್ತಿದವರು ಇಳಿದಿರಲೇ ಇಲ್ಲ. ಇನ್ನು ಇವತ್ತೆಲ್ಲಾ ಇದೆ ಎಂದು ಸೆಟ್‌ನಲ್ಲಿರೋರು ಮಧ್ಯಾಹ್ನದಸೀನನ್ನೂ ಗಮನದಲ್ಲಿರಿಸಿಕೊಂಡು ಮಾತಾಡಿದ್ದು ನನ್ನ ಕಿವಿಗೂ ಬಿದ್ದಿತ್ತು.

ಮಧ್ಯಾಹ್ನ ಊಟಕ್ಕೂ ಹೋಗದೆ ನನಗೆ ತೆಗೆದಿಡಲು ಹೇಳಿ ಎಂದು ತೆಂಗಿನ ಮರದ ನೆರಳಿನಲ್ಲಿ ಪಾಠವನ್ನು ಮುಂದುವರೆಸಿದ್ದೆ. ಡೈಲಾಗ್ ಹೇಳ್ತಾ ಮಾಡ್ಯುಲೇಷನ್ ಹೀಗೆ ತಗೋ… ಟೋನ್ ಇದಿರಲಿ ಹೀಗೆ…’ ನಾನೇ ಆರ್ಟಿಸ್ಟ್ ಆಗಿದ್ದರೂ ಅಷ್ಟು ಟೆನ್ಷನ್ ಮಾಡಿಕೊಳ್ಳುತ್ತಿರಲಿಲ್ಲ. ಊಟ ಮುಗಿಸಿದಮೇಲೆ ಲೈಟು ಮಾಡಿಕೊಳ್ಳುವುದೇ ತಡವಾಗಿದ್ದು. ನಮ್ಮ ಕಲಾವಿದ ಪಟ್ ಅಂತ ಡೈಲಾಗ್ ಹೇಳಿಯೇ ಬಿಟ್ಟ, ಒಂದೇ ಸಲಕ್ಕೆ ಓಕೆ! ನನಗೋ ಕುಣಿದು ಕುಪ್ಪಳಿಸುವ ಹಾಗಾಗಿತ್ತು. ಏನ್ರೀ ನಿಮ್ಮ ಆರ್ಟಿಸ್ಟ್ ಸಕ್ಕತ್ತಾಗಿ ಸೀನ್‌ನ ತಿಂದುಬಿಟ್ಟನಲ್ಲಾ!’ ಎಂದಿದ್ದರು ಎಲ್ಲರೂ.

ಇನ್ನು ಮುಂದೆ ಮೇಡಂ ಹತ್ರ ಪಾಠ ಹೇಳಿಸಿಕೊಳ್ರಪ್ಪಾ, ಸೀನ್ ಸಿಂಗಲ್ ಟೇಕಲ್ಲೇ ಓಕೆ ಆಗುತ್ತೆ’ ಎಂದು ನನ್ನನ್ನು ರೇಗಿಸಿದ್ದರು ಕೂಡಾ. ನಿಟ್ಟುಸಿರಿಟ್ಟಿದ್ದೆ. ನಾನ್ಯಾಕೆ ಅಷ್ಟು ಟೆನ್ಷನ್ ತಗೊಂಡಿದ್ದೆ ಜೀವನ್ಮರಣದಪ್ರಶ್ನೆ ಎನ್ನುವ ಹಾಗೆ ಗೊತ್ತಿಲ್ಲ. ಆ ಹುಡುಗನೂ ಕೃತಜ್ಞತೆಯನ್ನು ಹೇಳಿದ್ದ. ನಾನು ಹೆದ್ರುಬಿಟ್ಟಿದ್ದೆ ಮೇಡಂ. ಅಷ್ಟು ಸಲೀಸಾಗಿ ಆಗುತ್ತೆ ಅಂತಾನೇ ಅಂದುಕೊಂಡಿರಲಿಲ್ಲ’ ಎಂದಿದ್ದ. ಮುಂದೆ ಯಾವತ್ತಾದ್ರೂ ದೊಡ್ಡ ಆರ್ಟಿಸ್ಟ್ ಆದ್ರೆ ನನ್ನ ಮರೀಬೇಡಪ್ಪಾ’ ಎಂದಿದ್ದೆ.

ಒಟ್ಟಿನಲ್ಲಿ ಆ ಗಳಿಗೆ ಖುಷಿ ಖುಷಿಯಾಗಿತ್ತು. ಆಗಲೇ ಹೊಟ್ಟೆ ನೆನಪು ಮಾಡಿದ್ದು ಇನ್ನೂ ನೀನು ಊಟ ಮಾಡಿಲ್ಲ ಅಂತ. ಏನು ಊಟ?’ ಎಂದು ತಟ್ಟೆ ತೆಗೆದುಕೊಂಡೆ. ಅವತ್ತು ಮೀನೂಟ, ಮೀನು ಸಾರಿಂದ ಸೌಟನ್ನು ತೆಗೆದು ಮಾಮೂಲಿ ಸಾರಿಗೆ ಹಾಕಿದ ಹುಡುಗ. ಕೈಗೆ ತೆಗೆದುಕೊಂಡ ತಟ್ಟೆಯನ್ನು ಕೆಳಗಿರಿಸಿದೆ. ಮೇಡಂ ಗೊತ್ತಾಗಲಿಲ್ಲ, ಮೊಸರನ್ನನಾದ್ರೂ ತಿನ್ನಿ’ ಎಂದು ತಟ್ಟೆಗೆ ಹಾಕಲು ಬಂದ. ಯಾಕೋ ಬೇಡ ಅನ್ನಿಸಿತು. ಹೀಗೆಲ್ಲಾ ಆಯಿತು ಎಂದು ಹಸೀನಮ್ಮನಿಗೆ ವಿಷಯ ತಲುಪಿದೆ. ಪಾಪ ಅ ಹುಡುಗಿ ಹೊರಗೆ ಎಲ್ಲಾದರೂ ತಿಂದು ಬನ್ನಿ’, ಇಲ್ಲಾ ನಾನೇ ತರಿಸಿಕೊಡ್ಲಾ’ ಎಂದೆಲ್ಲಾ ಎರಡು ಮೂರು ಸಲ ಕೇಳಿದ್ಲು. ನಾನು ಇರಲಿ ಬಿಡು ಹಸೀನಮ್ಮಾ, ಇನ್ನೇನು ಸಂಜೆ ಸ್ನಾಕ್ಸ್ ಬರುತ್ತಲ್ಲಾ’ ಅಂದೆ.

ಅಷ್ಟು ಹೇಳಿದ್ದೇ ತಡ ನನ್ನ ಕೈ ಹಿಡಿದು ಅವರ ಅಡುಗೆ ಮನೆಗೆ ಕರೆದೊಯ್ದಳು. ಕರೆದೊಯ್ದಾಳು ಎಂದರೆ ತಪ್ಪಾದೀತು. ಎಳೆದೊಯ್ದಳು. ಯಾಕೆ ನನ್ನನ್ನು ಕರೆದೊಯ್ಯುತ್ತಿದ್ದಾಳೆ ಎಂದು ಆಶ್ಚರ್ಯ ಆಯಿತು. ಶೂಟಿಂಗ್ ನಡಿತಾ ಇದ್ದಿದ್ದರಿಂದ ಜೋರಾಗಿ ಮಾತಾಡುವ ಹಾಗಿರಲಿಲ್ಲ. ಏನಾಯ್ತು? ಯಾಕೆ ಹಸೀನಮ್ಮಾ?’ ಎಂದೆ ಮೆಲ್ಲಗೆ. ನನ್ನನ್ನು ಸುಮ್ಮನಿರುವಂತೆ ಸನ್ನೆ ಮಾಡಿದಳು. ನಾನು ನೋಡುತ್ತಿದ್ದಂತೆ ಅಡುಗೆ ಮನೆಯ ಅಟ್ಟದ ಮೇಲಿರಿಸಿದ್ದ ಸ್ಟೀಲ್ ಪಾತ್ರೆಯೊಂದನ್ನು ಕೆಳಕ್ಕೆ ಇಳಿಸಿದಳು. ನೋಡು ಇದು ಹೊಸಾದು’ ಎಂದು ನನ್ನೆದುರೇ ಅದನ್ನ ತೊಳೆದು ಮುಂದಿರಿಸಿ, ಅವಲಕ್ಕಿ ಕೊಡ್ತೇನೆ, ನೀನೇ ಪದಾರ್ಥ ಮಾಡಿಕೋ’ ಎಂದಳು. ನನ್ನ ಕಣ್ಣುಗಳಲ್ಲಿ ನೀರಾಡಿತು. ಏನೂ ಬೇಡ’ ಎನ್ನಲಿಕ್ಕೂ ಗಂಟಲು ಕಟ್ಟಿ ಬಂದಿತ್ತು. ನಮ್ಮ ಮನೆಯವರೇ ಆದರೆ ಹೀಗೆ ಹಸಿದು ಇರಲಿಕ್ಕೆ ಬಿಡುತ್ತೇವಾ? ಮೊದಲು ಮಾಡಿಕೋ.

ಇವತ್ತು ನಮ್ಮ ಮನೇಲೂ ಮೀನಿನ ಪದಾರ್ಥವೇ, ಮಾಡಿದ ಮೇಲೆ ಸ್ನಾನ ಮಾಡಿಲ್ಲ. ನೀವು ಮೊದಲೇ ಬೊಮ್ಮನ್‌ಗಳು ನಿನಗೆ ಬೇಸರ ಆಗಬಾರದಲ್ಲ, ಅದಕ್ಕೆ ಹೇಳಿದ್ದು’ ಎಂದು ಎಲ್ಲಾ ಸಾಮಾನುಗಳನ್ನು ನನ್ನ ಮುಂದೆ ಇಟ್ಟಳು. ನನಗೆ ನಿಜಕ್ಕು ಕಣ್ಣೀರನ್ನು ತಡೆದುಕೊಳ್ಳಲಾಗಲಿಲ್ಲ. ಏನೆಂದು ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗಲಿಲ್ಲ. ಕಂಠ ಬಿಗಿದು ಮಾತು ಮರೆತು ಹೋಗಿತ್ತು. ಹಸೀನಮ್ಮಾ ನನ್ನ ಆರೋಗ್ಯದ ಬಗ್ಗೆ ಮನೆ ಗಂದ ಮಗ ಎಲ್ಲರಬಗ್ಗೆಯೂ ಮಾತಾಡುತ್ತಾ ನೀನು ಚಂದೈದ್ದರೀಲ್ಲಾ ಸರಿಯಿರುತ್ತಲ್ಲವೋ ಎನ್ನುತ್ತಿದ್ದಳು. ಅವಳ ಕಕ್ಕುಲಾತಿಯ ಎದುರು ಮೀನು ಮಾಂಸ ಯಾವುದೂ ಮುಖ್ಯಾಲ್ಲ ಅನ್ನಿಸಿಬಿಟ್ಟಿತ್ತು. ಅದು ತಿನ್ನುವುದು ನನಗೆ ಅಭ್ಯಾಸವಿಲ್ಲ.

ಹಾಗಂತ ಅದು ಮಡಿವಂತಿಕೆಯೂ ಅಲ್ಲ. ಅದೊಂದು ತಿನ್ನಲಾಗದ ಸ್ಥಿತಿ ಅಷ್ಟೆ. ಮಾತು ಸೋತುಬಿಡುತ್ತೆ ಭಾವ ಬಲವಾದಾಗ. ನನ್ನ ಸ್ಥಿತಿಯೂ ಅದಕ್ಕಿಂತ ಬೇರೆ ಇರಲಿಲ್ಲ. ಅವಲ ಪ್ರೀತಿಗೆ ಸೋತು ನಿನಗೆ ತೊಂದರೆ ಇಲ್ಲಾಂದ್ರೆ ನೀನೆ ಮಾಡಿ ಕೊಟ್ಟ್ಟುಬಿಡು ಹಸೀನಮ್ಮಾ’ ಎಂದೆ. ಖುಷಿಯಿಂದ ಅವಲಕ್ಕಿ ನೆನೆಸಿ ಒಗ್ಗರಣೆ ಹಾಕಿ ಸಿದ್ಧ ಮಾಡಿದಳು. ಇದೆಲ್ಲಾ ನಡೆಯುವಾಗ ಎದ್ದ ಅವಳ ಮಗನನ್ನು ಜೋಲಿಯಿಂದ ಎತ್ತಿಕೊಂಡು ಆಟ ಆಡಿಸತೊಡಗಿದೆ.

ನನಗೆ ಚೆನ್ನಾಗಿ ನೆನಪಿದೆ ಹಸೀನಮ್ಮಾ ಮಾಡಿಕೊಟ್ಟ ಅವಲಕ್ಕಿಯ ರುಚಿಯನ್ನು ಯಾವುದೂ ಸರಿಕಟ್ಟಲಾರದು. ಅವಳ ಆ ಪ್ರೀತಿ, ಕಕ್ಕುಲಾತಿಗೂ ಕೂಡಾ. ನೆನೆಸಿಕೊಂಡಾಗಲೆಲ್ಲಾ ಆಕೆಯನ್ನು ನೋಡಬೇಕು ಅನ್ನಿಸುತ್ತೆ. ಎಲ್ಲಿ ಮೀನಿನ ಅಡುಗೆಯ ವಾಸನೆ ಬಂದರೂ ಪಟ್ಟೆಂದು ಈ ಘಟನೆ ನೆನಪಾಗಿ ನನಗೇ ಗೊತ್ತಿಲ್ಲದಂತೆ ಕಣ್ಣಾಲಿಗಳು ತುಂಬಿಬರುತ್ತದೆ. ಆಪ್ತ ಬಂಧು ನೆನಪಾದ ಹಾಗೆ ಮನಸ್ಸಿನ ತುಂಬಾ ಆನಂದ ತುಂಬುತ್ತದೆ.

ಎಲ್ಲಾ ವಿಷಯ ಗೊತ್ತಿರುವ ನನ್ನ ಗಂಡ ಎಲ್ಲೋ ಸಾಬರ ಕೇರಿಯಲ್ಲಿರಬೇಕಾದವಳು ಇಲ್ಲಿದ್ದೀಯಾ ಪೂರ್ವ ಜನ್ಮದ ವಾಅಸನೆ ತುಂಬಾ ಸ್ಟ್ರಾಂಗು’ ಎಂದರೆ, ಮಗ ಒಳ್ಳೆ ಚಾನ್ಸ್ ಬಿಟ್ಟೆಯಲ್ಲಾಮ್ಮಾ, ಒಳ್ಳೆ ಮೀನಿನ ರುಚಿ ನೋಡಬಹುದಿತ್ತಲ್ಲಾ’ ಎಂದು ರೇಗಿಸುತ್ತಾನೆ. ಭಾವದೊಳಗಿನ ಈ ಭಾಷ್ಯ ಮಾತ್ರ ನನ್ನೊಳಗನ್ನು ಬೆಳಕಾಗಿಸುತ್ತಲೇ ಇದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

January 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: