ಪಿ ಚಂದ್ರಿಕಾ ಅಂಕಣ – ಮಧ್ಯಾಹ್ನಕ್ಕೆ ಶೂಟಿಂಗ್ ಮುಗಿಸಬೇಕಾಯಿತು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

26

ಶೂಟಿಂಗ್ ಯಾವತ್ತು ಸ್ಕ್ರಿಪ್ಟ್ ನಲ್ಲಿದ್ದ ಆರ್ಡರ್‌ನಲ್ಲಿ ಮಾಡಲಿಕ್ಕೆ ಸಾಧ್ಯವಿರುವುದಿಲ್ಲ. ಒಂದು ಮನೆಯಲ್ಲಿ ಬರುವ ಎಲ್ಲ ದೃಶ್ಯಗಳನ್ನು ವಿಂಗಡಿಸಿ, ಆ ಮನೆ ಎಷ್ಟು ದಿನ ಬೇಕಾಗಬಹುದು ಎನ್ನುವ ಲೆಕ್ಕಾಚಾರದ ಮೇಲೆ ಕಲಾವಿದರನ್ನು ಕರೆಸಿಕೊಳ್ಳಬೇಕಾಗುತ್ತದೆ. ಹೆಚ್ಚು ಜನ ಕಲಾವಿದರು ಒಟ್ಟಿಗೆ ಇರುವುದು ಕೂಡ ಹೊರೆಯೇ. ಅವರು ಉಳಕೊಳ್ಳಲಿಕ್ಕೆ ಜಾಗ ಊಟ ತಿಂಡಿ ಎಲ್ಲಾ ಲೆಕ್ಕ ಹಾಕಿದರೆ ವೆಚ್ಚ ಜಾಸ್ತಿಯೇ. ಆದರೂ ಪಂಚಾಕ್ಷರಿ ಶ್ರೀನಿವಾಸಾಚಾರಿ ಪಾತ್ರಧಾರಿ ಶೃಂಗೇರಿ ರಾಮಣ್ಣ ಮತ್ತು ಚಂದ್ರಣ್ಣನ ಪಾತ್ರಧಾರಿ ಪ್ರಸನ್ನ ಶೆಟ್ಟಿಯನ್ನು ತಮ್ಮೊಟ್ಟಿಗೆ ಇರಿಸಿಕೊಂಡಿದ್ದರು.

ಶೃಂಗೇರಿ ರಾಮಣ್ಣ ಕಲಾತ್ಮಕ ಚಿತ್ರಗಳಲ್ಲಿ ಪ್ರಧಾನವಾದ ಹೆಸರು. ಹಾಗಾಗಿ ಅವರು ಫ್ರೀಯಾಗೇ ಇದ್ದರು ಆದ್ರೆ ಪ್ರಸನ್ನ ಶೆಟ್ಟಿ ಸೀರಿಯಲ್‌ಗಳಲ್ಲಿ ಮಾಡುತ್ತಿದ್ದು ಆತನಿಗೆ ಸಮಯ ಹೊಂದಿಸಿಕೊಳ್ಳುವುದು ಬೇಕಿತ್ತು. ಹಾಗೆ ಸೀರಿಯಲ್‌ನಲ್ಲಿ ಹೇಳಿಕೊಂಡು, ಹದಿನೈದು ದಿನಗಳ ಮಟ್ಟಿಗೆ ನಮ್ಮ ಜೊತೆಗೇ ಉಳಿದುಕೊಂಡಿದ್ದರು. ಆತನ ಎತ್ತರ ನಗು ಎಲ್ಲಾ ನನ್ನ ಮಗನನ್ನು ನೆನಪಿಗೆ ತರುತ್ತಿದ್ದರಿಂದ ಹೆಚ್ಚು ಮಾತಾಡದೆ ಹೋದರೂ ಆತನ ಜೊತೆ ಬೆಚ್ಚಗಿನ ಆಪ್ತಭಾವವೊಂದಿತ್ತು.

ದಿನಾ ಬೆಳಗ್ಗೆ ಅಂದುಕೊಂಡ ಸಮಯಕ್ಕೆ ಶೂಟಿಂಗ್ ಶುರು ಮಾಡುವುದು ಕಷ್ಟವಾಗುತ್ತಿತ್ತು. ಕಾರಣ ನಾವು ಮುಲ್ಕಿಯ ಹೋಟೆಲಿನಿಂದ ಹೊರಟು ಸೇರಬೇಕಿದ್ದ ಜಾಗಕ್ಕೆ ಸೇರಿ ಸೀನ್‌ಗೆ ತಕ್ಕಹಾಗೆ ಒಳಗೋ ಹೊರಗೋ ಶೂಟಿಂಗ್‌ಗೆ ತಯಾರು ಮಾಡಿ, ಕ್ಯಾಮೆರಾ ಫ್ರೇಮ್ ಇಟ್ಟು, ಆರ್ಟ್ ಡೈರೆಕ್ಷನ್ ಡಿಪಾರ್ಟ್ಮೆಂಟಿನವರಾದ ನಾವುಗಳು ಆ ಫ್ರೇಮ್‌ಗೆ ಬೇಕಾಗುವ ಪ್ರಾಪರ್ಟಿಯನ್ನು ತುಂಬಿಸಿದ ನಂತರ ಕಲಾವಿದರು ಬಂದು ನಿಲ್ಲುವುದು ಆಕ್ಷನ್ ಕಟ್‌ಗಳು ಶುರುವಾಗುತ್ತಿದ್ದವು. ಆರಂಭವಾಗುವುದು ತಡವಾದ ತಕ್ಷಣ ಮುಗಿಯುವುದೂ ತಡವೇ ಆಗುತ್ತಿತ್ತು.

ಒಂದು ದಿನ ಕಲಾವಿದರ ಕಾರಣದಿಂದ ಮಧ್ಯಾಹ್ನಕ್ಕೆ ಶೂಟಿಂಗ್ ಮುಗಿಸಬೇಕಾಯಿತು. ಅರ್ಧ ದಿನ ವೇಸ್ಟ್ ಆಗುತ್ತೆ ಎನ್ನುವ ಕಾರಣಕ್ಕೆ ಪಂಚಾಕ್ಷರಿ ಊಟದ ಹೊತ್ತಿಗೆ ಮುಲ್ಕಿಯ ಬೋಳಾರಂಗನಾಥ್ ರಾವ್ ಅವರ ಮನೆಗೆ ಶಿಫ್ಟ್ ಮಾಡಿಬಿಟ್ಟರು ಅದೂ ಚಂದ್ರಣ್ಣ ಪಾತ್ರಧಾರಿ ಪ್ರಸನ್ನ ಶೆಟ್ಟಿ ಮತ್ತು ಶೃಂಗೇರಿ ರಾಮಣ್ಣ ಜೊತೆಯಲ್ಲೇ ಇದ್ದಿದ್ದರಿಂದ ಶೂಟಿಂಗ್ ಮಾಡುವುದಕ್ಕೆ ಪರದಾಡಬೇಕಿರಲಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಆಗುವುದು ಎಂದರೆ ಸುಮ್ಮನೆ ಮಾತಲ್ಲವಲ್ಲ! ಯಾರನ್ನಾದರೂ ಅಭಿಪ್ರಾಯ ಕೇಳಿದರೆ ಇವತ್ತು ಇಲ್ಲಿಗೇ ಪ್ಯಾಕಪ್ ಮಾಡೋಣ ಎಂದು ಹೇಳುತ್ತಿದ್ದರು ಎನ್ನುವುದು ಅವರಿಗೆ ಗೊತ್ತಿತ್ತು.

ಶೂಟಿಂಗ್‌ನ ಎಲ್ಲಾ ಚುಕ್ಕಾಣಿಯನ್ನೂ ಅವರೇ ಹಿಡಿದಿದ್ದರಿಂದ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಬೇಕಿತ್ತು. ಆದರೆ ಆ ನಿರ್ಧಾರ ಕ್ಯಾಮೆರಾಮನ್ ಅಶೋಕ್ ವಿ ರಾಮನ್‌ರನ್ನು ವಿಚಲಿತಗೊಳಿಸಿದ ಹಾಗಿತ್ತು. ಯಾರೂ ಸುಮ್ಮನೆ ಕೆಲಸ ಮಾಡುವುದಿಲ್ಲ ಅದರಲ್ಲೂ ಕಲಾಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಏನಾದರೂ ಹೊಸತನ್ನು ಹುಡುಕಬೇಕು ಎನ್ನುವುದು ಇದ್ದೇ ಇರುತ್ತದೆ.

ಸಮುದ್ರ, ನಿರ್ಜನವಾಗುತ್ತಿದ್ದ ತಡಿಯ ಪ್ರದೇಶಗಳು, ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಏಳುತ್ತಿದ್ದ ಸೌದೆ ಒಲೆಯ ಹೊಗೆ, ಅಪರೂಪಕ್ಕೆ ಅಳುವ ಮಗುವಿನ ಶಬ್ದ ಇವೆನ್ನೆಲ್ಲಾ ಹಿಡಿಯಲಿಕ್ಕೆ ಅವರಿಗೂ ಸಮಯವಾಗಿರಲಿಲ್ಲ. ಅದನ್ನ ಮಾಡಿಕೊಳ್ಳಬಹುದು ಎನ್ನುವ ಉದ್ದೇಶ ಅವರದಿದ್ದಿರಬಹುದು. ಅಥವಾ ದಿನಾ ತಡವಾಗುತ್ತಿದ್ದರಿಂದ ನಿದ್ದೆ ಸರಿಯಾಗದೆ, ಇವತ್ತಾದರೂ ಸರಿಯಾದ ಸಮಯಕ್ಕೆ ಮಲಗಬಹುದು ಎನ್ನುವ ಲೆಕ್ಕಾಚಾರವಿತ್ತೋ ಗೊತ್ತಿಲ್ಲ. ಊಟ ಮುಗಿದ ತಕ್ಷಣ ಶೂಟಿಂಗ್ ಶುರುವಾಗೇ ಬಿಟ್ಟಿತು. ಎಲ್ಲರಿಗೂ ಗೊತ್ತಾಗಿಬಿಟ್ಟಿತ್ತು ಇವತ್ತು ನಾವು ತಡವಾಗೇ ರೂಂ ಸೇರುವುದು ಎಂದು. ಪುಟ್ಟಣ್ಣನಿಗೆ ನಾನು ಫ್ರೇಂನಲ್ಲಿ ಇಡುವ ವಸ್ತು ಸರಿ ಇದೆಯಾ ನೋಡುವಂತೆ ಹೇಳಿದ್ದೆ.

ಒಮ್ಮೆ ಫ್ರೇಂ ಇಟ್ಟ ಮೇಲೆ ಸಾಮಾನ್ಯಕ್ಕೆ ಬದಲಿಸುತ್ತಿರಲಿಲ್ಲ. ಬದಲಿಸಬಾರದು ಎನ್ನುವ ನಿಯಮವೇನೂ ಇರಲಿಲ್ಲ. ನಾನೂ ಪುಟ್ಟಣ್ಣ ಇಬ್ಬರೂ ನಮ್ಮ ಕೆಲಸ ಮುಗಿಸಿ ಫ್ರೇಂನಿಂದ ಹೊರಗೆ ಬಂದೆವು. ನಂತರ ಫ್ರೇಮ್ ಚೇಂಜ್ ಮಾಡಿಬಿಟ್ಟಿದ್ದಾರೆ ಅದು ನಮ್ಮ ಅರಿವಿಗೆ ಬರಲೇ ಇಲ್ಲ, ನಾನೂ ಪುಟ್ಟಣ್ಣ ಇಬ್ಬರೂ ಪಾತ್ರಧಾರಿಗಳನ್ನು ನೋಡುತ್ತಾ ನಿಂತು ಬಿಟ್ಟೆವು. ಪುಟ್ಟಣ್ಣ ಫ್ರೇಂ ಒಳಗೆ ಬರುತ್ತಿದ್ದಾನೆ ಎಂದು ಕ್ಯಾಮೆರಾಮನ್ ಸನ್ನೆ ಮಾಡುತ್ತಿದ್ದರೂ ಅವನಿಗೆ ಗೊತ್ತೇ ಆಗಲಿಲ್ಲ. ಅವನ ಕೈ ಫ್ರೇಂ ಒಳಗೆ ಇತ್ತು. ಪಾತ್ರಧಾರಿಗಳೆಲ್ಲರೂ ಚೆನ್ನಾಗೇ ಆಕ್ಟ್ ಮಾಡುತ್ತಿದ್ದರೂ ಕ್ಯಾಮೆರಾ ಮನ್ ಮಾತ್ರ ಕಟ್ ಎಂದಿದ್ದರು. ನಮಗೋ ಯಾಕೆ ಎನ್ನುವ ಕುತೂಹಲ. ಏನಾಯ್ತು ಎಂದ ತಕ್ಷಣ ಕ್ಯಾಮೆರಾಮನ್ ಅಶೋಕ್ ಜೋರಾಗಿ ಪುಟ್ಟಣ್ಣನ ಮೇಲೆ ಕೂಗಾಡಿಬಿಟ್ಟರು. ನನಗೂ ಏನಾಯಿತು ಎನ್ನುವ ಆತಂಕ.

ಪುಟ್ಟಣ್ಣ ಫ್ರೇಂ ಇಲ್ಲಿಯವರೆಗೂ ಮಾತ್ರ ಇಟ್ಟಿದ್ದರಲ್ಲಾ ಎಂದ. ಅಷ್ಟು ಅಂದಿದ್ದೇ ತಡ ಅಶೋಕ್‌ಗೆ ಇನ್ನಷ್ಟು ಕೋಪ ಬಂತು. ಪುಟ್ಟಣ್ಣನಿಗೆ ಬಾಯಿಗೆ ಬಂದಂತೆ ಬೈದು ನಿನ್ನ ಕೆಲಸ ಮೊದಲು ಮಾಡು, ನೆಟ್ಟಗೆ ಫ್ರೇಮ್ ಹೆಂಗೆ ತುಂಬಿಸಬೇಕು ಎನ್ನುವುದೇ ಗೊತ್ತಿಲ್ಲ ನನಗೆ ಹೇಳಿಕೊಡಲಿಕ್ಕೆ ಬರ್ತಾನೆ ಎಂದುಬಿಟ್ಟರು. ಇದರಿಂದ ಪುಟ್ಟಣ್ಣನಿಗೆ ತುಂಬಾ ಹರ್ಟ್ ಆಯ್ತು. ನನಗೂ ನೇರವಾಗಿ ಪುಟ್ಟಣ್ಣನನ್ನು ಗುರಿ ಮಾಡಿದ್ದು ನನಗೂ ಸರಿ ಬರಲಿಲ್ಲ. ನಾವು ನೋಡಿದಾಗ ಇಟ್ಟ ಫ್ರೇಂ ಬದಲಿಸಿದಾಗ ನಮಗೆ ಹೇಳದಿದ್ದರೆ ಹೇಗೆ? ಮಾತಿಗೆ ಮಾತು ಸೇರಿ ಗೊಂದಲವಾಯಿತು. ನಾನು ಇಲ್ಲಿ ಯಾರೂ ದೊಡ್ಡವರಲ್ಲ, ಎಲ್ಲರೂ ಒಂದು ಉದ್ದೇಶಕ್ಕಾಗಿ ಬಂದಿದ್ದೇವೆ. ಇದನ್ನು ಬೆಳೆಸುವುದು ಬೇಡ ಎಂದು ರಿಕ್ವೆಸ್ಟ್ ಮಾಡಿದೆ. ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುವ ಹಾಗಿರಲಿಲ್ಲ.

ಪುಟ್ಟಣ್ಣ ಸ್ಪಾಟ್‌ನಿಂದ ಯಾವಾಗ ಹೊರಟನೋ ಗೊತ್ತೇ ಇಲ್ಲ. ಎಲ್ಲಾ ಕಡೆ ಹುಡುಕಿ ರೂಂಗೆ ಹೋಗಿರಬೇಕು ಬೇಸರ ಆಗಿತ್ತಲ್ಲ ಎಂದುಕೊಂಡು ರೂಂಗೆ ಬಂದರೆ ರೂಂ ಬೀಗ. ನಿಮ್ಮ ಹುಡುಗ ರೂಂ ಖಾಲಿ ಮಾಡಿ ಹೋಗಿಯಾಯ್ತು ತಗೊಳ್ಳಿ ಎಂದು ಮ್ಯಾನೇಜರ್ ಕೀ ಕೊಟ್ಟರು. ನಾನು ತಕ್ಷಣ ಪುಟ್ಟಣ್ಣನಿಗೆ ಫೋನ್ ಮಾಡಿದೆ ಅವನು ಪಿಕ್ ಮಾಡಲಿಲ್ಲ. ಮೆಸೇಜ್ ಹಾಕಿದೆ. ಅವನು ಅದಕ್ಕೂ ಉತ್ತರಿಸಲಿಲ್ಲ.

ನಾನು ಪುನೀತ ಎಲ್ಲ ಕಡೆಯೂ ಹುಡುಕಿದೆವು. ಅಶೋಕ್ ಎದುರು ಸಿಕ್ಕವರು ಎಲ್ಲಿಗೂ ಹೋಗಲ್ಲ ಬಿಡಿ ಎಂದರು. ನನಗೂ ನೋವಿತ್ತುಕೆಲಸಕ್ಕೇ ಬಂದಿರಬಹುದು ಆದರೆ ಇನ್ನೊಬ್ಬರ ಮಕ್ಕಳ ಬಗ್ಗೆ ಮಾತಾಡಲಿಕ್ಕೆ ಯಾರಿಗೂ ಅಧಿಕಾರ ಇರೊಲ್ಲ ಸರ್’ ಎಂದೆ. ಅಶೋಕ್ ಅವರಿಗೂ ಈ ಘಟನೆ ಅನಿರೀಕ್ಷಿತ ಎಂದು ಅವರ ವರ್ತನೆಯೇ ತೋರುತ್ತಿತ್ತು. ಇಷ್ಟೆಲ್ಲಾ ನಡೆಯುವಾಗ ಪಂಚಾಕ್ಷರಿಯೂ ನಮ್ಮನ್ನು ಬಂದು ಸೇರಿದರು. ಅವನ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ. ಕಡೆಗೆ ಮತ್ತೊಂದು ಸಾರಿ ನೋಡಿಬಿಡೋಣ ಎಂದು ಪುಟ್ರಾಜುವಿಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಿಬಿಟ್ಟ! ಎಲ್ಲಿದ್ದೀಯಾ? ಎಂದು ಒಂದೇ ಉಸಿರಿಗೆ ಮಾತಾಡಿದ ನಾನು, ನಿನಗೆ ಈಗ ಬಿಟ್ಟು ಹೋಗಲಿಕ್ಕೆ ಯಾವ ರೈಟ್ಸೂ ಇಲ್ಲ. ನನ್ನ ಜೊತೆ ಇದ್ದು ಕೆಲಸ ಮುಗಿಸಿಕೊಡುವುದಾಗಿ ಮಾತುಕೊಟ್ಟಿದ್ದೀಯ’ ಎಂದೆ. ಅವನೂ ಅಷ್ಟು ಹೊತ್ತಿಗೆ ಸ್ವಲ್ಪ ಸಮಾಧಾನವಾಗಿದ್ದ ಅನ್ನಿಸುತ್ತೆ. ತನ್ನ ಲಗೇಜ್ ಜೊತೆ ಬೆಂಗಳೂರಿಗೆ ಹೋಗುವ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ಕಡೆಗೆ ಓಡಿ ಹೋದೆವು.

ಪುಟ್ಟಣ್ಣನಿಗೆ ತುಂಬಾ ಬೇಸರ ಆಗಿತ್ತು. ಆ ಹುಡುಗನನ್ನು ನೋಡಿದಾಗಲೆಲ್ಲಾ ಇವನು ಏನನ್ನಾದರೂ ಮಾಡಿಯೇ ಮಾಡುತ್ತಾನೆ ಎನ್ನಿಸುತ್ತಿತ್ತು. ಅಷ್ಟು ಉತ್ಸಾಹ ಜೀವಂತಿಕೆ ಅವನ ಪ್ರತಿವರ್ತನೆಯಲ್ಲೂ ಕಾಣುತ್ತಿತ್ತು. ಹೆಂಡತಿಗೆ ಏಳು ತಿಂಗಳು. ಮಗುವಿನ ನಿರೀಕ್ಷೆಯಲ್ಲಿದ್ದ ಅವನಿಗೆ ಆ ಕ್ಷಣದಲ್ಲೂ ಸಿನೆಮಾದೇ ಧ್ಯಾನ. ನಿನಗೆ ಸಿನಿಮಾನೆ ಹುಟ್ಟುತ್ತೆ ಬಿಡು ಎಂದು ಹಾಸ್ಯ ಮಾಡುತ್ತಿದ್ದೆವು. ಅಂಥಾ ಹುಡುಗ ಇದ್ದಕ್ಕಿದ್ದ ಹಾಗೆ ಎದ್ದು ಹೊರಟ ಎಂದರೆ ನನಗೆ ಮನಸ್ಸಿಗೆ ಕಷ್ಟ ಅನ್ನಿಸಿತ್ತು. ಅವನನ್ನು ಒಪ್ಪಿಸಿ ಮತ್ತೆ ವಾಪಾಸು ಕರೆತರುವಷ್ಟರಲ್ಲಿ ಸಾಕುಸಾಕಾಯಿತು.

ಅಶೋಕ್ ಕೂಗಾಡಿದ್ದಕ್ಕೆ ಕಾರಣ ಬೇರೆಯೂ ಒಂದಿತ್ತು. ಅದು ನಮಗೆ ಗೊತ್ತಾಗಿದ್ದು ತಡವಾಗಿ. ಸಂಜೆ ಮಗುವಿನ ಬರ್ತಡೆ ಇತ್ತಂತೆ. ಹಾಗಾಗಿ ಹಿಂದಿನ ದಿನವೇ ನಿರ್ದೇಶಕರನ್ನು ಕೇಳಿದ್ದರಂತೆ. ಪಂಚಾಕ್ಷರಿ ಒಪ್ಪಿಯೂ ನಂತರ ಮಧ್ಯಾಹ್ನದ ಮೇಲೆ ಮುಲ್ಕಿಗೆ ಶೂಟಿಂಗ್‌ಗೆ ಅಂತ ಬಂದಿದ್ದರಿಂದ ವಿಡಿಯೋಕಾಲ್‌ನಲ್ಲಾದರೂ ಸಂಜೆ ಆರಕ್ಕೆ ಮಗು ಕೇಕ್ ಕಟ್ ಮಾಡುವುದನ್ನು ನೋಡಲಾಗುವುದಿಲ್ಲವಲ್ಲ ಎನ್ನುವ ಕೊರಗು ಅವರನ್ನು ಕಾಡಿತ್ತಂತೆ. ಆದರೆ ಈ ಎಲ್ಲಾ ಸಮಸ್ಯೆಯ ಮಧ್ಯ ಸುಮ್ಮನೆ ಸಿಕ್ಕಿಕೊಂಡವನು ನಮ್ಮ ಪುಟ್ಟಣ್ಣ. ಇಷ್ಟೆಲ್ಲಾ ಆಗಿಯೂ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿವನೂ ಅವನೇ.

ತುಂಬಾ ಖುಷಿಯ ಸಂಗತಿ ಎಂದರೆ, ಇಂದು ತನ್ನೆಲ್ಲಾ ಕಷ್ಟದ ನಡುವೆಯೂ ಪುಟ್ಟದಾದ ಸ್ಟುಡಿಯೋ ಒಂದನ್ನು ಮಾಡಿಕೊಂಡಿದ್ದೇ ಅಲ್ಲದೆ, ಕ್ಯಾಮೆರಾಮನ್ ಆಗಿ ಕೆಲಸವನ್ನೂ ಮಾಡುತ್ತಿದ್ದಾನೆ. ಅಷ್ಟರಮಟ್ಟಿಗೆ `ಪಾತುಮ್ಮ’ ಸಿನೆಮಾ ಅವನ ಪಾಲಿಗೆ ದೊಡ್ಡ ಚಿಮ್ಮು ಹಲಗೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: