ಪಿ ಚಂದ್ರಿಕಾ ಅಂಕಣ – ಬಟವಾಡೆಯಾಗದ ನೋಟುಗಳು…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

24

ರಾತ್ರಿಯ ಊಟವನ್ನು ಮುಲ್ಕಿಯ ಹೊಟೇಲಿನಲ್ಲೇ ಮಾಡಿಸಿದ್ದರೂ ಬೆಂಗಳೂರಿನ ವೆರೈಟಿ ಆಹಾರದ ಎದುರು ಸಪ್ಪೆ ಅನ್ನಿಸತೊಡಗಿತ್ತು. ಹುಡುಗರು ಪಂಚಾಕ್ಷರಿಯ ಹತ್ತಿರ ಸರ್ ನಾವಿಲ್ಲಿ ಊಟ ಮಾಡಲ್ಲ ಎಂದು ಹೇಳಿದರೂ ಪಂಚಾಕ್ಷರಿ ಊಟದ ವ್ಯವಸ್ಥೆ ಮಾತ್ರ ಮುಂದುವರೆಸಿದ್ದರು. ನಮ್ಮ ಪುಟ್ರಾಜು ಮತ್ತು ಪುನೀತ ಇಬ್ಬರೂ ನಾವೂ ಹೊರಗೇ ಊಟ ಮಾಡೋಣ, ಇಲ್ಲಿ ಸಪ್ಪೆ ಊಟ ತಿಂದು ತಿಂದು ಬಾಯೆಲ್ಲಾ ಕೆಟ್ಟು ಹೋಗಿದೆ ಎಂದು ದುಂಬಾಲು ಬಿದ್ದರು.

ಕೆಲವರಿಗೆ ಕುಡಿತದ ಅಭ್ಯಾಸ ಇದ್ದಿದ್ದರಿಂದ ಅವರು ಹೊರಗೆ ಊಟದ ಜೊತೆ ಕುಡಿಯುವುದಕ್ಕೂ ಸ್ವಾತಂತ್ರ್ಯವನ್ನು ಬಯಸಿದ್ದರು. ಆದರೆ ಪುಟ್ರಾಜು ಮತ್ತು ಪುನೀತ ಇಬ್ಬರಿಗೂ ಕುಡಿತದ ಅಭ್ಯಾಸ ಇರಲಿಲ್ಲ. ನಾನು ಅವರಿಗೆ ಮೊದಲೇ ಹೇಳಿದ್ದೆ ನಾವು ಮೂರೂಜನ ಏನು ಮಾಡಿದರೂ ಒಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು. ಚಂದ್ರಹಾಸ್ ದಿನ ಉಲ್ಲಾಳದ ಅವರ ಮನೆಗೆ ಹೋಗುತ್ತಿದ್ದರು. ಹಾಗಾಗಿ ರಾತ್ರಿಯ ಊಟದ ಬಗ್ಗೆ ಅವರೊಬ್ಬರನ್ನು ಬಿಟ್ಟು ಮಿಕ್ಕೆಲ್ಲರೂ ತಲೆ ಕೆಡಿಸಿಕೊಂಡಿದ್ದೆವು. ಎರಡು ಮೂರು ದಿನಗಳಲ್ಲಿ ಹೋಟೆಲಿನವರು ಊಟ ವೇಸ್ಟ್ ಆಗ್ತಾ ಇದೆ. ಹಣ ಮಾತ್ರ ಮುಖ್ಯವಲ್ಲ ಯೋಚನೆ ಮಾಡಿ’ ಎಂದಿದ್ದರು.

ದಿನಾ ರಾತ್ರಿಯ ಊಟಕ್ಕೆ ನೂರು ರೂಪಾಯಿಗಳನು ಕೊಡುವುದು ಪಂಚಾಕ್ಷರಿಯ ಮನಸ್ಸಿಗೂ ಕಷ್ಟದ, ಜೊತೆಗೆ ಹೊರೆಯಾಗಿತ್ತು ಕೂಡ. ಆ ನೂರು ರೂಪಾಯಿಗೆ ನಾರ್ತ್ ಇಂಡಿಯನ್ ಊಟ ಏನು ಸಿಗುತ್ತೆ? ಕಡಲೂರಿಗೆ ಬಂದಮೇಲೆ ಮೀನಿಲ್ಲದಿದ್ದರೆ ಹೇಗೆ? ಜೊತೆಗೆ ಸಣ್ಣದಾಗಿ ಎಣ್ಣೆ ಇಲ್ಲದಿದ್ದರೆ ಜೀವನಕ್ಕೆ ಸಾರವಾದರೂ ಎಲ್ಲಿಂದ ಬಂದೀತು ಎನ್ನುವ ಬಹುಜನರ ನಿಲುವಿನ ಎದುರು ಅವರ ಅಭಿಪ್ರಾಯಕ್ಕೆ ಮನ್ನಣೆ ಸಿಗದಾಯಿತು. ರಾತ್ರಿ ಎಂಟಕ್ಕೆ ಹೊಟೇಲ್ ಮುಚ್ಚುತ್ತಿದ್ದರಿಂದ ಕಡೆಗೆ ಪಂಚಾಕ್ಷರಿಯೂ ಬೇರೆ ಹೊಟೇಲ್ ಹುಡುಕಿಕೊಂಡು ಹೋಗಬೇಕಾಗುತ್ತಿತ್ತು. ಅವರು ಎಲ್ಲ ಅನುಕೂಲ ಮಾಡಿಕೊಟ್ಟರೂ ಜನ ಹೀಗೆ’ ಎಂದು ಗೊಣಗಿಕೊಳ್ಳುತ್ತಿದ್ದರು. ಸಣ್ಣ ಬಜೆಟ್‌ನಲ್ಲಿ ಸಿನೆಮಾ ಮಾಡುವ ಕಷ್ಟದ ಬಗ್ಗೆ ಅವರು ಆಗಾಗ ಹೇಳುತ್ತಿದ್ದರು.

ಅಂದು ೨೦೧೬ ನವೆಂಬರ್ ಎಂಟರ ರಾತ್ರಿ ಊಟ ಮುಗಿಸಿ ಬರುವಾಗ ನಮ್ಮ ಕಿವಿಗೆ ಆಘಾತಕಾರಿ ಸುದ್ದಿಯೊಂದು ಮುಟ್ಟಿತ್ತು. ಟಿವಿಯಲ್ಲಿ ದೇಶವನ್ನು ಉದ್ದೇಶಿಸಿ ೫೦೦ ಹಾಗೂ ೧೦೦೦ ನೋಟ್ ನಿಷೇಧಿಸಿ ದೇಶದ ಪ್ರಧಾನಿ ಮಾತಾಡಿದ್ದರು. ನಮ್ಮದಲ್ಲದ ಊರಲ್ಲಿ, ದೊಡ್ಡ ಖರ್ಚು ವೆಚ್ಚದ ವ್ಯವಹಾರದಲ್ಲಿ ಇರುವಾಗ, ಇಂಥಾದ್ದೊಂದು ಸುದ್ದಿ? ನಿಜಕ್ಕೂ ಆ ದಿನ ನಮ್ಮನ್ನು ಅಲ್ಲಾಡಿಸಿ ಬಿಟ್ಟಿತ್ತು. ಮೊದಲು ಸ್ವಲ್ಪವಾದರೂ ಹಣ ತೆಗೆದುಕೊಳ್ಳಬೇಕು ಎಂದು ನಿರ್ದೇಶಕರು ಎಟಿಎಂ ಕಡೆಗೆ ಓಡಿದರು. ಸಿಕ್ಕಷ್ಟು ಹಣವನ್ನು ತೆಗೆದುಕೊಂಡರು.

ನಮಗೆ ವೈಯಕ್ತಿಕವಾಗಿ ಹಣದ ಅಗತ್ಯ ಇಲ್ಲದ್ದರಿಂದ ಅಂಥಾ ಆಘಾತವಾಗಲಿಲ್ಲ. ಮತ್ತು ಮುಂದೆ ಅದು ತೆಗೆದುಕೊಂಡ ಗಾಂಭೀರ್ಯ ಸ್ವರೂಪದ ಬಗ್ಗೆ ಯಾವ ಕಲ್ಪನೆಯೂ ಇರಲಿಲ್ಲ. ೫೦೦, ೧೦೦೦ ರೂಪಾಯಿಗಳು ನಮ್ಮನ್ನು ಮುಂದೆ ಹೇಗೆ ಆಡಿಸಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಮುಂದೆ ಏನಾಗಬಹುದು ಎನ್ನುವ ಆತಂಕ ಮಾತ್ರ ನಮ್ಮೊಳಗೆ ಇತ್ತು.

ಮಾರನೇ ದಿನದಿಂದಲೇ ಶುರುವಾಯಿತು ಸಮಸ್ಯೆಗಳ ಸರಮಾಲೆ. ಪುನೀತ ದಿನಾ ಫೋಟೋಗೆ ಪೂಜೆ ಮಾಡುತ್ತಿದ್ದ. ವೈಯಕ್ತಿಕವಾಗಿ ಯಾರಿಗೆ ನಂಬಿಕೆ ಇತ್ತೋ ಇಲ್ಲವೋ ಅವನಂತೂ ಮಹಾನ್ ದೈವ ಭಕ್ತನಾಗಿದ್ದ. ಮುಕಚ್ಚೇರಿಯ ಮುಸ್ಲೀಂ ಕೇರಿಯಲ್ಲಿ, ನಿರಾಕಾರನಾದ ಭಗವಂತನನ್ನು ಆರಾಧಿಸುವವರ ನಡುವೆ ನಿಂತು, ಅವರದ್ದೇ ಕಥೆಯನ್ನು ಹೇಳುತ್ತಿರುವ ಹೊತ್ತಿನಲ್ಲೇ, ಅವನ ಈ ಕ್ರಿಯೆ ಎಲ್ಲರಿಗೂ ವಿಚಿತ್ರವಾಗಿ ಕಂಡರೂ ಅವನು ಮಾತ್ರ ಯಾವುದೂ ಗಮನಕ್ಕೆ ಇಲ್ಲದ ನಿಷ್ಠೆ. ವಿಚಿತ್ರ ಎಂದರೆ ಆ ಕೇರಿಯಲ್ಲಿನ ಜನ ಕೂಡಾ ಇದನ್ನು ವಿರೋಧಿಸಲಿಲ್ಲ.

ಹಸೀನಮ್ಮಾ ಬಿಟ್ಟುಕೊಟ್ಟಿದ್ದೀವಿ, ಅದು ನಿಮ್ಮ ನಂಬಿಕೆ ಎಂದಿದ್ದಳು. ಶೂಟಿಂಗ್‌ನ ಎಲ್ಲಾ ದಿನಗಳಲ್ಲೂ ಇದು ನಡೆಯುತ್ತಲೇ ಇತ್ತು. ಹಾಗೆ ಪೂಜೆಗಾಗಿ ಪಂಚಾಕ್ಷರಿ ಒಂದಿಷ್ಟು ಹಣವನ್ನು ಪುನೀತನಿಗೆ ಕೊಟ್ಟುಬಿಟ್ಟಿದ್ದರು. ಅದೆಲ್ಲಾ ೫೦೦ರ ನೋಟುಗಳೇ ಆಗಿದ್ದರಿಂದ ಅದನ್ನ ತೆಗೆದುಕೊಳ್ಳಲು ಜನ ಹಿಂದೆ ಮುಂದೆ ನೋಡತೊಡಗಿದರು. ಇಂತಿಷ್ಟು ದಿನಗಳ ಕಾಲ ಸಮಯಾವಕಾಶವನ್ನು ಸಾರ್ವಜನಿಕರಿಗೆ ಕೊಟ್ಟಿದ್ದರೂ ನಮಗ್ಯಾಕೆ ಈ ರಿಸ್ಕ್ ಎಲ್ಲಾ ಎಂದು ಆ ನೋಟುಗಳನ್ನು ಬೇಡ ಎನ್ನತೊಡಗಿದ್ದರು. ಪುನೀತ ತನಗೆ ನೂರರ ನೋಟುಗಳನ್ನು ಕೊಡುವಂತೆ ಪಂಚಾಕ್ಷರಿಗೆ ದುಂಬಾಲು ಬಿದ್ದ.

ಮೊದಲೇ ನಾಸ್ತಿಕರಾಗಿದ್ದ ಅವರು (ಅದನ್ನ ಅವರೇನೂ ಹೇಳಲಿಲ್ಲ, ಆದರೆ ಅವರವರ್ತನೆಯಿಂದ ನಾನು ಹಾಗೆ ಭಾವಿಸಿಕೊಂಡೆ) ಅದೇ ಹಣ ಇದ್ದರೆ ನನಗೆ ಬೇರೆ ಯಾವುದಕ್ಕಾದರೂ ಆಗುತ್ತೆ ಎಂದುಬಿಟ್ಟರು. ದೇವರಿಗೆ ಇಲ್ಲ ಅಂದಮೇಲೆ ಬೇರೆ ಯಾವುದಕ್ಕೆ ಇದ್ದರೆಷ್ಟು? ಬಿಟ್ಟರೆಷ್ಟು? ಎನ್ನುವ ಭಾವ ಪುನೀತನದ್ದು. ದಿನವಿಡೀ ಗೊಣಗುತ್ತ ನಮ್ಮ ಹತ್ತಿರವೂ ಕಂಪ್ಲೇಟ್ ಹೇಳುತ್ತಲೇ ಇದ್ದ. ನಾವು ಬಿಡು ಪುನೀತ ಎಂದರೂ ಕೇಳಲಿಲ್ಲ. ಅವನ ಕಾಟ ತಡೆಯಲಾಗದೆ ಅವತ್ತೆಲ್ಲಾ ನಾವೇ ಅವನಿಂದ ದೂರ ಉಳಿದುಬಿಟ್ಟೆವು.

ಮೊದಲೆರಡು ದಿನಗಳು ನೋಟು ಬ್ಯಾನ್‌ನ ಬಿಸಿ ತಟ್ಟಲಿಲ್ಲ. ಇರುವ ಹಣದಲ್ಲೇ ಎಲ್ಲವನ್ನೂ ನಿಭಾಯಿಸಲಾಯಿತು. ಮೂರನೆ ದಿನದಿಂದ ನಿಧಾನವಾಗಿ ಕಿರಿಕ್ ಶುರುವಾಯಿತು. ಮುಲ್ಕಿಯಿಂದ ಹೊರಡುವಾಗ ಬೆಳಗ್ಗೆ ಎಂಟೂವರೆ ಗಂಟೆಯಾಗಿರುತ್ತಿತ್ತು. ನಮ್ಮ ಜೊತೆ ಊಟ ತೆಗೆದುಕೊಂಡು ಹೋಗಲಾಗುತ್ತಿರಲಿಲ್ಲ. ಹೊಟೇಲ್‌ನವರೂ ಮಧ್ಯಾಹ್ನದ ವೇಳೆಗೆ ತಂದುಕೊಂಡುವುದು ದೂರದ ಕಾರಣಕ್ಕೆ ಅಸಾಧ್ಯದ ಮಾತಾಗಿತ್ತು. ಹೀಗಾಗಿ ಸುಭಾಷ್ ನಗರದಲ್ಲೇ ಇದ್ದ ಹೋಟೇಲ್ ಅನ್ನು ಆಶ್ರಯಿಸಬೇಕಾಗಿತ್ತು. ಅವರು ಈ ನೋಟುಗಳನ್ನು ತೆಗೆದುಕೊಳ್ಳಲಿಲ್ಲ. ಎಟಿಎಂಗಳೋ ಜನಸಂದಣಿಯಿಂದ ತುಂಬಿತುಳುಕುತ್ತಿದ್ದವು.

ಹಸೀನಮ್ಮನ ಐಡಿಯಾದಂತೆ ಮುಕ್ಕಚ್ಚೇರಿಯ ವ್ಯಾಪಾರಿಯೊಬ್ಬರ ಮನೆಯಲ್ಲಿ ಸಾವಿರ ರೂಪಾಯಿಗೆ ಐವತ್ತು ರೂಪಾಯಿಯ ಕಮೀಷನ್‌ನಂತೆ ಒಂದಿಷ್ಟು ಹಣ ಸಿಕ್ಕರೂ ಯಾವುದೂ ನಮಗೆ ಸಾಲುತ್ತಿರಲಿಲ್ಲ. ಯಾರನ್ನಾದರೂ ಕೇಳೋಣವೆಂದರೆ ನಮಗೆ ಯಾರ ಪರಿಚಯವೂ ಇಲ್ಲ. ಇದೇ ವಿಷಯಕ್ಕೆ ತಲೆ ಕೆಡಿಸಿಕೊಂಡು ಕೂತರೆ ಶೂಟಿಂಗ್ ಮಾಡುವುದಾದರೂ ಹೇಗೆ? ಆದರೆ ದಿನದ ಖರ್ಚುಗಳು, ರಾತ್ರಿಯ ಊಟ, ಗಾಡಿಯ ಡೀಸಲ್ ಖರ್ಚು, ಟೋಲ್‌ನ ಶುಲ್ಕ… ಹೀಗೆ ಎಲ್ಲಕ್ಕು ದೊಡ್ಡ ತೊಂದರೆಯೇ ಆಗಿಬಿಟ್ಟಿತು. ಹುಡುಗರು ರಾತ್ರಿಯ ಊಟಕ್ಕೆ ಐನೂರರ ನೋಟನ್ನು ಕೊಡಲು ತೆಗೆದರೆ ಬೇಸರಿಸಿಕೊಳ್ಳತೊಡಗಿದರು. ಒಟ್ಟಿಗೆ ಬೇಡ ಇಂಡಿವಿಷ್ಯುಯಲ್ ಆಗೇ ಕೊಟ್ಟು ಬಿಡಿ ಎನ್ನತೊಡಗಿದರು. ಹಣ ಇಲ್ಲ ಮುಲ್ಕಿಯ ಹೋಟಲಿನಲ್ಲೇ ತಿನ್ನಿ ಎಂದರೆ ಉಪ್ಪು ಖಾರದ ಮಸಾಲೆಯ ನಾನ್ವೆಜ್ ಊಟದ ರುಚಿಯ ಎದುರು ಸಪ್ಪೆಯ ಊಟವಾ? ಪರಿಸ್ಥಿತಿ ಅರ್ಥವಾದರೂ ನಾಲಗೆ ಮಾತ್ರ ಒಪ್ಪುತ್ತಿರಲಿಲ್ಲ. ಹಾಗಾಗಿ ಉಪದೇಶಗಳು, ರಿಕ್ವೆಸ್ಟ್ ಅವರನ್ನು ತಲುಪಲೇ ಇಲ್ಲ.

ಈ ಮಧ್ಯೆಯೇ ನಾವಿದ್ದ ಕಾರಿನ ಚಾಲಕ ನಿಯಮ ಉಲ್ಲಂಘನೆ ಮಾಡಿದ ಎನ್ನುವ ಕಾರಣಕ್ಕೆ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿದ್ದರು. ಆಗೆಲ್ಲಾ ಪೇಟಿಯಂ, ಗೂಗಲ್ ಪೇ ಎಲ್ಲಾ ಇರದಿದ್ದ ಕಾರಣ ಹಣವನ್ನೆ ಸಂದಾಯ ಮಾಡಬೇಕಿತ್ತು. ನಮ್ಮ ಬಳಿ ಇರುವ ಐನೂರರ ನೋಟನ್ನು ತೆಗೆದುಕೊಳ್ಳುತ್ತಿಲ್ಲ, ನಮ್ಮನ್ನು ಬಿಡುತ್ತಲೂ ಇಲ್ಲ. ನಿಜಕ್ಕೂ ಅವತ್ತು ಹೈರಾಣಾಗಿ ಹೋದೆವು. ನಮ್ಮ ಬಳಿ ಇದ್ದ ಐದು, ಹತ್ತು, ಐವತ್ತರ ನೋಟುಗಳನ್ನು ಸೇರಿಸಿ ಕೊಟ್ಟಿದ್ದಾಯಿತು.

ಪರಿಸ್ಥಿತಿ ಕೈಮೀರಿ ಹೋಗುತ್ತಿದೆ, ಇನ್ನು ನಿಭಾಯಿಸಲು ಸಾಧ್ಯವಿಲ್ಲ ಅನ್ನಿಸಿದಾಗ ಪಂಚಾಕ್ಷರಿ ತಮ್ಮ ಮನೆಯವರ ಕಡೆಯಿಂದ ಹೇಗೋ ಹಣವನ್ನು ತರಿಸಿಕೊಂಡರು. ಸದ್ಯಕ್ಕೆ ಸಮಸ್ಯೆ ತೀರಿದರೂ ನಮ್ಮ ಶೂಟಿಂಗ್‌ನ ಉದ್ದಕ್ಕೂ ಭೂತದ ಹಾಗೆ ಕಾಡುತ್ತಲೇ ಇತ್ತು. ದೇಶದ ಐತಿಹಾಸಿಕವಾದ ತೀರ್ಮಾನದ ಅತ್ಯಂತ ಕೆಟ್ಟಗಳಿಗೆಯ ಜೊತೆ ಯಾರಾನುಭವ ಏನೋ? ನಮ್ಮದು ಮಾತ್ರ ದೊಡ್ಡ ತಂಡವನ್ನು ನಿಭಾಯಿಸಲು ನಡೆದ ಪರದಾಟ ಅ ಹೇಳತೀರದು. ಎಲ್ಲಾ ಘಟನೆಗೆ ನಾವು ಹೀಗೇ ಸಾಕ್ಷೀಭೂತರಾಗಿದ್ದು ಮಾತ್ರ ಯಾವತ್ತು ಮರೆಯಲು ಸಾಧ್ಯವೇ ಆಗುವುದಿಲ್ಲ. ಅದರಲ್ಲೂ ಫೈರ್ ಸ್ಟೇಷನ್ ನಡೆದ ಆ ಒಂದು ಘಟನೆ ಮಾತ್ರ ಹಣದ ಎದುರು ಪರಿಸ್ಥಿತಿಯ ಎದುರು ಅಸಹಾಯಕತನವನ್ನು ಮೆರೆಸಿಬಿಟ್ಟಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: