ಪಿ ಚಂದ್ರಿಕಾ ಅಂಕಣ- ಜಕ್ಕು ಭೇಟಿಗಾಗಿ ಹೊರಟೆವು..

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

8

‘ಹೆಣ್ಣುಮಕ್ಕಳು ಕಲಿಯಲಿಕ್ಕೆ ಬರ್ತಾರೆ’ ಎನುವುದನ್ನು ಅಲ್ಲಿದ್ದ ಮುತುವಲಿ ಹೇಳುತ್ತಿದ್ದರು.  ಅದನ್ನು ನೋಡಿಕೊಂಡು ಅವರ ಮನೆಗೆ ಅಲ್ಲಿಂದ ಎರಡು ಕಿಲೋಮೀಟರ್ ಒಳಗೆ ನಮ್ಮನ್ನು ಕರೆದುಕೊಂಡು ಹೋದರು. ಅದು ನೆಲ್ಯಾಡಿಗೆ ಹೋಗುವ ದಾರಿ ಎಂದು ಹೇಳಿದರು. ದಾರಿಯಲ್ಲಿ ಅವರ ತಂದೆಯವರೇ ಕಟ್ಟಿಸಿದ ಮಸೀದಿಯೊಂದಕ್ಕೆ ನಮ್ಮನ್ನು ಕರೆದೊಯ್ದರು. ಅದು ತುಂಬಾ ಪುಟ್ಟದಾಗಿತ್ತು. ಅವರ ಕುಟುಂಬದ್ದೇ ಮಸೀದಿ ಎನ್ನುವ ಹಾಗಿತ್ತು. ಪ್ರಾರ್ಥಿಸುವ ಜಾಗಕ್ಕೆ ಮಹಿಳೆಯರು ಹೋಗುವಾಗಿಲ್ಲವಾದ್ದರಿಂದ ನಾನು ಹೊರಗೇ ನಿಂತೆ. ಆದರೆ ಆಜಾನ್ ಕೂಗುವ ಜಾಗ ಮತ್ತೆಲ್ಲವನ್ನೂ ನೋಡಿ ಬಂದೆ. ಸುತ್ತಾ ಗುಡಿಸಲು.

ಬಡತನವನ್ನು ಹಾಸು ಹೊದ್ದಂತಿದ್ದ ಕುಟುಂಬಗಳು ಅಲ್ಲೇ ಮದುವೆ ಪ್ರಸ್ತ, ಬಸಿರು ಬಾಣಂತನಗಳು ಯಥೇಚ್ಚವಾಗಿ ನಡೆಯುತ್ತಿದ್ದವು. ತಡಿಕೆ ಮನೆಗಳ ಒಳಗೆ ತೂಗುವ ಜೋಲಿಗಳು ಜೀವಂತಿಕೆಯನ್ನು ಸೂಚಿಸುತ್ತಾ ಅಲುಗಾಟ, ಅಳು-ನಗುಗಳಲ್ಲಿ ಮುಳುಗಿದ್ದವು, ನಾಸಿರ್ ಅವರನ್ನು ಜನ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ನಮಗೋ ಕಣ್ಣುಗಳಲ್ಲಿ ಚಿತ್ರಗಳನ್ನು ತುಂಬಿಕೊಳ್ಳುವುದು ಮಾತ್ರ ಕೆಲಸ.

ಅಲ್ಲಿಂದ ಮುಂದೆ ಹೋಗಿದ್ದು ನಾಸಿರ್ ಅವರ ಮನೆಗೆ. ಕಂಬದ ಮನೆ ಹೊರಗಿನಿಂದ ಅದ್ಭುತವಾಗಿ ಕಾಣುತ್ತಿತ್ತು. ಜಗುಲಿ ಹಚ್ಚಿದ್ದ ಹಸಿರು ಬಣ್ಣದ ಜೊತೆ ವಿಚಿತ್ರವಾದ ಕಾಂಬಿನೇಷನ್ ಅನ್ನಿಸುತ್ತಿತ್ತು. ನಮಗಾಗಿ ಬೋಳುವಾರರು ಕೂಡಾ ವೆಜ್ ಊಟವನ್ನೇ ಮಾಡಿದರು. ಕಲ್ತಪ್ಪ ಎನ್ನುವ ಆ ಭಾಗದ ವಿಶೇಷ ಖಾದ್ಯವನ್ನು ಮಾಡಿದ್ದರು. ಜೊತೆಗೆ ಎಳೆನೀರು ಮತ್ತು ತಿರುಳಿಂದ ಮಾಡಿದ ಸಿಹಿಯ ಪದಾರ್ಥ ಹಾಗೂ ಶ್ಯಾಮಿಗೆಯ ಪಾಯಸಗಳನ್ನು ಪ್ರೀತಿಯಿಂದ ಬಡಿಸಿದರು. ನಮಗೋ ಸಿಕ್ಕ ಕಡೆಯೆಲ್ಲಾ ಪಾತ್ರಗಳೇ ಓಡಾಡುತ್ತಿದ್ದಾವೆ ಅನ್ನಿಸಿ ಅಲ್ಲಿಯೂ ಜಮಾತಿನ ಮೀಟಿಂಗು ಮತ್ತು ಪಾತ್ರವಾಗಿ ನಾಸಿರ್ ಅವರೂ ಕಾಣತೊಡಗಿದ್ದರು.            

ಬೋಳುವಾರರು ಸ್ವಭಾವತಃ ಭಾವುಕ ಜೀವಿ. ಅವರ ಗೋಣಿತಟ್ಟಿಂದ ಬರುತ್ತಾ, ಮಾತಾಡುತ್ತಾ ಕಣ್ತುಂಬಿಕೊಂಡಿದ್ದರು. ಅವರಿಗೆ ತಮ್ಮ ಕಥೆಗೆ ತಾವೇ ಜಾಗಗಳನ್ನು ಹುಡುಕುವ ಉತ್ಸಾಹ. ಪುತ್ತೂರಿನಲ್ಲಿ ಒನ್ವೇನಲ್ಲಿ ಗಾಡಿ ತಿರುಗಿಸಿಬಿಟ್ಟಿದ್ದರು. ಪೊಲೀಸಿನವರು ನಮ್ಮನ್ನು ಹಿಡಿದು ಪಕ್ಕಕ್ಕೆ ನಿಲ್ಲಿಸಿಬಿಟ್ಟರು. ಅವರನ್ನು ಪರಿಪರಿಯಾಗಿ ಕೇಳಿದರೂ ನಮ್ಮನ್ನು ಬಿಡಲು ಸಿದ್ಧವಿರಲಿಲ್ಲ. ಕಡೆಗೆ ಫೈನ್ ಕಟ್ಟಿದ ಮೇಲೆ ನಮ್ಮನ್ನು ಬಿಟ್ಟಿದ್ದು. ಬೋಳುವಾರರು ಮಾತ್ರ ಇದರಿಂದ ಕಂಗೆಟ್ಟ ಹಾಗೆ ಕಾಣುತ್ತಿದ್ದರು. ಅವರಿಗೆ ಜೀವನದ ಯಾವುದೂ ತಂತನ್ನು ಕೆದಕಿದ ಹಾಗಿತ್ತು ಈ ಘಟನೆ.

ನಂತರ ತಾವೇ ಸಮಾಧಾನ ಮಾಡಿಕೊಂಡಿದ್ದರು. ಹಾಗಿದ್ದೂ ನಮ್ಮನ್ನು ಪುತ್ತೂರಿನ ಮಹಲಿಂಗೇಶ್ವರ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ಅದರ ಎದುರಿನ ದೊಡ್ದ ಕಲ್ಯಾಣಿಯನ್ನು ತೋರಿಸಿ ‘ಇಲ್ಲಿ ಮುತ್ತುಗಳು ಸಿಗುತ್ತಿದ್ದರಿಂದ ಇದನ್ನು ಮುತ್ತೂರು ಎಂದು ಕರೆಯುತ್ತಿದ್ದು ಕ್ರಮೇಣ ಇದು ಪುತ್ತೂರು ಆಯಿತು’ ಎಂದು ಹೇಳಿದ್ದರು. ದೊಡ್ಡದೇವಸ್ಥಾನ. ಅಲ್ಲಿನ ಅರ್ಚಕರಿಂದ ಹಿಡಿದು ಎಲ್ಲರೂ ಬೋಳುವಾರರಿಗೆ ಪರಿಚಯಸ್ಥರೇ. ಎಲ್ಲರೊಂದಿಗೂ ಕುಶಲೋಪರಿಯ ಮಾತುಗಳನ್ನಾಡುತ್ತಾ ಎಲ್ಲರಲ್ಲು ಬೋಳುವಾರರು ಪ್ರೀತಿಯನ್ನು ತೋರುತ್ತಿದ್ದರು. ಅಲ್ಲಿನ ಅರ್ಚಕರು ನಮ್ಮ ಕೈಗೆ ಬಾಳೆಯಹಣ್ಣಿನ ಪ್ರಸಾದವನ್ನು ಕೊಟ್ಟರು.

ಅಲ್ಲಿಂದ ರಾಮಾ ಹೊಟೇಲಿನ ರೂಂನಲ್ಲಿ ನಮ್ಮನ್ನೂ ಕೂಡಿಸಿಕೊಂಡು ಯಾರಿಗೂ ಹೇಳದ ತಮ್ಮ ಜೀವನದ ಕೆಲವು ಕಥೆಗಳನ್ನು ಹೇಳಿದ್ದರು. ಅವರು ಹೇಳಿದ ಘಟನೆಗಳು ಮನ ಕಲಕುವ ಹಾಗಿತ್ತು. ಯಾವುದೋ ಸಣ್ಣ ಪುಟ್ಟ ಘಟನೆಗಳನ್ನೂ ಅವರು ನಮಗೆ ಹೇಳಿದರು. ಒಬ್ಬ ಬರಹಗಾರನಿಗೆ ಸಂಗತಿಗಳು ಕಾಡದಿದ್ದರೆ ಅವನು ಬರೆಯಲಾರ. ತುಂಬಾ ಸೂಕ್ಷ್ಮವಾಗಿ ಸ್ಪಂದಿಸಲಾರ ಎನಿಸಿತ್ತು. ‘ಇದನ್ನೆಲ್ಲಾ ಬರೀರಿ ಸಾರ್’ ಎಂದು ಅವರಿಗೆ ಹೇಳಿದೆ. ‘ಬರೆಯಲಿಕ್ಕೆ ತುಂಬಾ ಇದೆ ಚಂದ್ರಿಕಾ ಆದರೆ ನಮ್ಮೊಳಗೆ ಅದು ರೂಪುಪಡೀಬೇಕಲ್ಲಾ. ಬರೆಯುವೆ ಯಾವತ್ತಾದರೂ ಒಂದು ದಿನ’ ಎಂದರು.

ಚಂಚಲಾ ಮತ್ತು ಚಂದ್ರಹಾಸ್ ನಮಗೆ ಇನ್ನೊಂದಿಷ್ಟು ಜಾಗಗಳನ್ನು ತೋರಿಸುವುದಾಗಿ ಹೇಳಿದ್ದರಿಂದ ಮಂಗಳೂರಿನ ಕಡೆಗೆ ಹೊರಡುವ ಯೋಚನೆಯಲ್ಲಿದ್ದೆವು. ಅವರಿಗೆ ತಾವು ತೋರಿಸಿದ ಜಾಗ ನಮಗೆ ಇಷ್ಟವಾಗಲಿಲ್ಲ ಅನ್ನಿಸಿತೋ ಏನೋ, ಅಲ್ಲಿಂದ ಮುಂದೆ ನಮ್ಮ ಜೊತೆ ಮಂಗಳೂರಿಗೆ ಬರುವುದಕ್ಕೆ ಒಪ್ಪಲಿಲ್ಲ. ಅಲ್ಲಿಂದಲೇ ಬೋಳುವಾರ್ ಸರ್ ಬೆಂಗಳೂರಿಗೆ ವಾಪಾಸಾದರು.

ಹಿಂದೆ ಮಂಗಳೂರಿಗೆ ಜಾಗಗಳನ್ನು ನೋಡಿ ಬರಲು ಹೋಗಿದ್ದ ಪಂಚಾಕ್ಷರಿ ಅಲ್ಲಿನ ನೈಸರ್ಗಿಕ ವಿಕೋಪಗಳ ಬಗ್ಗೆ ತಿಳಿದುಕೊಂಡು ಬಂದಿದ್ದರು. ಒಟ್ಟಿನಲ್ಲಿ ಪಾತುಮ್ಮಾ ಜಾಗ ಕಳೆದುಕೊಳ್ಳುವ ಸ್ಥಿತಿಯನ್ನು ನಿರ್ಮಿಸಬೇಕಿತ್ತು. ಆ ಕಾರಣ ನಮ್ಮ ಕಥಾ ನಾಯಕಿಯು ಕಾರವಾರದ ನೌಕಾ ಸೇನಾಪಡೆಯ ನಿರ್ಬಂಧಿತ ಪ್ರದೇಶವನ್ನಾಗಿಸಿದ್ದರಿಂದ ತನ್ನ ಮನೆಯ ಜಾಗ ಕಳೆದುಕೊಂಡಳು ಎಂದು ಕಥೆಯಲ್ಲಿ ಮಾಡಿಕೊಂಡಿದ್ದೆವು. ಆದರೆ ಅಲ್ಲಿ ಪರ್ಮೀಷನ್ ಸಿಗುವುದು ಬಹುತೇಕ ಅಸಾಧ್ಯ ಎನ್ನುವುದು ಗೊತ್ತಿದ್ದರಿಂದ ಬದಲಿಸಿಕೊಂಡು ಮಂಗಳೂರಿನ ಕಡಲ ತಡಿಯನ್ನಾಗಿ ಬದಲಿಸಿಕೊಂಡಿದ್ದೆವು.

ಕ್ಯಾಮೆರಾ ಮನ್, ಅಸಿಸ್ಟೆಂಟ್, ಆರ್ಟ್ ಡೈರೆಕ್ಟರ್ ಹೀಗೆ ಒಂದು ಗುಂಪು ಮುಲ್ಕಿಯಲ್ಲಿ ಬೀಡು ಬಿಟ್ಟು ಜಾಗಗಳನ್ನು ಹುಡುಕಿತ್ತು. ಮುಲ್ಕಿಯ ಪುನರೂರು ಹೊಟೇಲ್ ನಮ್ಮ ಲೆಕ್ಕಾಚಾರಕ್ಕೆ ಒದಗಿ ಬರುತ್ತಿದ್ದುದರಿಂದ ಅಲ್ಲೇ ಉಳಿದುಕೊಂಡು ಮಂಗಳೂರಿಗೆ ಓಡಾಡುವ ಯೋಜನೆ ರೂಪುಗೊಂಡಿತ್ತು. ಜಾಗಗಳನ್ನೇನೋ ಗುರುತು ಮಾಡಿಕೊಂಡು ಆಗಿತ್ತು. ಆದರೆ ಅದನ್ನು ಪಕ್ಕ ಮಾಡಿಕೊಂಡು, ಜಾಗದ ಓನರ್‌ಗಳ ಜೊತೆ ಮಾತಾಡಿ ಒಪ್ಪಿಗೆಯನ್ನು ಪಡೆಯುವ ಕೆಲಸ ಬಾಕಿ ಇತ್ತು. ಅತ್ಯಂತ ಸೂಕ್ಷ್ಮ ಪ್ರದೇಶವಾದ ಉಲ್ಲಾಳ ಮತ್ತು ಸೋಮೇಶ್ವರದ ಸುತ್ತ ಮುತ್ತಲ ಪ್ರದೇಶದಲ್ಲಿ ಶೂಟಿಂಗ್ ನಡೆಸುವುದು ನಮ್ಮ ಎದುರಿನ ಸವಾಲಾಗಿತ್ತು.

ರಾತ್ರಿ ನಾವು ನೋಡಿ ಬಂದ ಜಾಗಗಳಿಗೆ ಅನುಗುಣವಾಗಿ ಸ್ಕ್ರೀಪ್ಟ್ ತಿದ್ದುವುದು, ಹಗಲಲ್ಲಿ ಪರ್ಮೀಷನ್ನು ಮತ್ತು ಖಚಿತ ವಿವರಗಳಿಗಾಗಿ ಹುಡುಕಾಟ ನಡೆಸುವುದು ಆಗುತ್ತಿತ್ತು. ಚಂದ್ರಹಾಸ ಉಲ್ಲಾಳರು ತಮ್ಮ ಸಾಮಾಜಿಕ ಸೇವೆ ಹಾಗೂ ರಂಗಚಟುವಟಿಕೆಯ ಕಾರಣದಿಂದ ನಮಗೆ ದೊಡ್ದ ಸಹಾಯವನ್ನು ಒದಗಿಸಿಕೊಟ್ಟಿದ್ದರು. ಹಾಗಾಗಿ ಉಲ್ಲಾಳ ದರ್ಗಾಗೆ ಹೋಗಿ ‘ಹೀಗೆ…’ ಎಂದು ವಿವರಿಸಿ ಭದ್ರತೆಯನ್ನು ಪಡಕೊಳ್ಳುವುದು ಮುಖ್ಯವಾಗಿತ್ತು.

ಎಲ್ಲಕ್ಕಿಂತ ಮುಖ್ಯ ನಮ್ಮ ಜಕ್ಕು ಮಹಮದ್‌ರನ್ನು ಹಿಡಿಯುವುದು. ಅವರ ಮನೆಯೇ ಇಲ್ಲ ಎಂದರೆ ನಾವಾದರೂ ಎಲ್ಲಿ ಶೂಟಿಂಗ್ ಮಾಡುವುದು? ಮಾರನೆಯ ದಿನ ಅವರ ಮನೆಗೇ ಹೋದರೂ ಸಿಗಲಿಲ್ಲ. ಅವರ ಬಳಿ ಫೋನ್ ಕೂಡಾ ಇರಲಿಲ್ಲ. ಸುಮ್ಮನೆ ಕಾಲಹರಣ ಮಾಡಲಿಕ್ಕಾಗುವುದಿಲ್ಲವಲ್ಲ! ಅದಕ್ಕಾಗಿ ಮಂಗಳೂರಿನ ಬಂದರ್ ಪೋರ್ಟ್ ಬಳಿ ಇರುವ ಕಡಲ್ಕೊರೆತ ನಿಯಂತ್ರಣ ವಿಭಾಗ ಹಾಗೂ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಹೋಗಿ ಅಲ್ಲಿ ಕೆಲ ವಾಸ್ತವಾಂಶಗಳ ವಿವರಗಳನ್ನು ಪಡೆದುಕೊಂಡೆವು.

ಬಿಎಸ್‌ಎನ್‌ಎಲ್‌ನಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ಚಂದ್ರಹಾಸರ ತಾಕತ್ತು ದೊಡ್ಡದಿತ್ತು ಯಾರನ್ನಾದರೂ ಅವರು ಮಾತಾಡಿಸಲು ಶಕ್ತರಿದ್ದರು. ಅವರ ಸಹಾಯದಿಂದ ಯಾರಿಗೂ ಸಿಗದಿರುವ ಕೆಲ ಅಪರೂಪದ ಫೋಟೋಗಳು ಮಳೆಗಾಲದಲ್ಲಿನ ಸಮುದ್ರದ ಕೊರೆತದ ದೃಶ್ಯಗಳು ಸಿಕ್ಕವು. ಅವುಗಳೆಲ್ಲವೂ ಸಿನಿಮಾಗೆ ಬಳಸುವ ಕ್ವಾಲಿಟಿ ಇಲ್ಲದ್ದರಿಂದ ಏನು ಮಾಡಬೇಕು ಎನ್ನುವ ದೊಡ್ಡ ಪ್ರಶ್ನೆಯೂ ನಮ್ಮ ಎದುರಿತ್ತು. ಇರಲಿ, ಎಲ್ಲದಕ್ಕು ಒಂದು ದಾರಿ ಇದ್ಡೇ ಇರುತ್ತದೆ ಬಳಸಿಕೊಳ್ಳುವುದನ್ನು ಆಮೇಲೆ ನೋಡೋಣ ಎಂದುಕೊಂಡೆವು. ಆಗಲೇ ಬಂದದ್ದು ಜಕ್ಕು ಮಹಮದರ ಫೋನು. ನಮ್ಮ ಬಳಗಕ್ಕಾದ ಸಂತೋಷ ಅಷ್ಟಿಷ್ಟಲ್ಲ.

ಮತ್ತೆ ಉಲ್ಲಾಳದ ಮುಕ್ಕಚ್ಚೆರಿಗೆ ಹೋದೆವು. ಇನ್ನೂ ಜಕ್ಕು ಮಹಮದ್ ಬಂದಿರಲಿಲ್ಲ. ಚಂದ್ರಹಾಸರು ʻಆಜಾದ್ ನಗರದ ಜಮಾತಿನ ಮುಖ್ಯಸ್ಥರನ್ನು ಮಾತಾಡಿಸಿ ಬರೋಣ, ನಾವಿಲ್ಲಿ ಶೂಟಿಂಗ್ ಮಾಡುವುದು ಅವರಿಗೆ ತಿಳಿದಿರಲೇ ಬೇಕು’ ಎಂದರು.  ಸರಿ ಎಂದು ಹಸೀನಮ್ಮನಿಗೆ ಜಕ್ಕು ಮಹಮದ್ ಬಂದರೆ ಇಲ್ಲೇ ಇರುವಂತೆ ಹೇಳಿ ಹೊರಟೆವು. ಒಂದಕ್ಕೊಂದು ಹೊಂದಿಕೊಂಡಿದ್ದ ಆಜಾದ್ ನಗರ, ಸುಬಾಷ್ ನಗರ, ಮುಕ್ಕಚೆರಿಯಲ್ಲೆ ಮೂರು ಮಸೀದಿಗಳಿದ್ದವು. ಎಲ್ಲಕ್ಕೂ ಜಮಾತ್ ಇತ್ತು, ಮುತುವಲಿ ಇದ್ದರು. ಜಮಾತಿನ ಮುಖ್ಯಸ್ಥರನ್ನು ಭೇಟಿಯಾದೆವು.

ಕಡಲು ಕೊರೆತಕ್ಕೆ ಸಿಕ್ಕ ಗೋಡೆಯಂತೆ ಕಟ್ಟಿದ್ದ ಬೃಹತ್ ಕಲ್ಲುಗಳು ಜರಿದು ಹರಡಿದಂತೆ ಬಿದ್ದಿದ್ದವು. ಮುಕ್ಕಚ್ಚೇರಿಯಂತೆ ಆಜಾದ್ ನಗರ ಇಕ್ಕಟ್ಟಾದ ಜಾಗವಲ್ಲ. ಹೋಗುತ್ತಾ ಹೋಗುತ್ತಾ ಸಮುದ್ರ ದಂಡೆ ವಿಶಾಲವಾಗುತ್ತಾ ಮನೆಗಳನ್ನು ದೂರ ಕಟ್ಟಿಕೊಂಡಿದ್ದರು. ಜಮಾತಿನ ಮುಖ್ಯಸ್ಥರು ನಮ್ಮನ್ನು ಪ್ರೀತಿಯಿಂದ ಕಂಡರು. (ಅವರ ಹೆಸರನ್ನು ಮರೆತಿದ್ದೇನೆ)

ನಮ್ಮ ಎಲ್ಲ ಮಾತುಗಳನ್ನು ಕೇಳಿ ʻತಲ್ಲಾಖಿನ ತೂಗುಗತ್ತಿಯಲ್ಲಿ ಹೆಣ್ಣು ಮಕ್ಕಳು ನರಳುತ್ತಿದ್ದಾರೆ, ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೀರ ನಮ್ಮ ಬೆಂಬಲ ನಿಮಗಿರುತ್ತೆ’ ಎಂದರು. ಅಷ್ಟೇ ಅಲ್ಲದೆ ಅವರ ಮನೆಗೆ ಕರೆದೊಯ್ದು ಒಂದಿಷ್ಟು ತಿಂಡಿಯನ್ನು ಟೀಯನ್ನೂ ಕೊಟ್ಟರು. ಸ್ವಲ್ಪ ಕಾಲದವರೆಗೂ ಮಾತುಗಳನ್ನು ಆಡುತ್ತಾ ಕುಳಿತೆವು. ನಂತರ ನಮ್ಮ ಬಹುದೊಡ್ಡ ಕುತೂಹಲದ ಮತ್ತು ಇಡೀ ಘಟನಾವಳಿಯ ಕೇಂದ್ರ ವ್ಯಕ್ತಿ ಜಕ್ಕು ಅವರ ಭೇಟಿಗಾಗಿ ಹೊರಟುನಿಂತೆವು.

। ಇನ್ನು ಮುಂದಿನ ವಾರಕ್ಕೆ । 

‍ಲೇಖಕರು Admin

July 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: