ಪಿ ಚಂದ್ರಿಕಾರ ಕಾದಂಬರಿ 'ಚಿಟ್ಟಿ' : ’ಆರೋಗ್ಯ ’ಮದರ್’ ಆಗಲು ಹೋದಳು’

ತನ್ನ ಒಳಗಿನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದನ್ನು ಚಿಟ್ಟಿ ಚೆನ್ನಾಗೇ ಅಭ್ಯಾಸ ಮಾಡಿಕೊಂಡಿದ್ದಳು. ಯಾಕೆ ಹೀಗಿದ್ದೀಯ ಅಂತ ಅಮ್ಮ ಕೇಳಿದರೆ ‘ಏನೂ ಇಲ್ಲಮ್ಮ ಯಾಕೋ ತುಂಬಾ ತಲೆ ನೋವು’ ಎಂದು ಉತ್ತರ ಕೊಡುತ್ತಿದ್ದಳು. ಆದರೆ ಅವಳ ಕಣ್ಣು ಮಾತ್ರ ಸಂಧ್ಯಾಳ ಮೇಲೆ ಇತ್ತು. ಅವಳ ನಡೆ-ನುಡಿ ಹಾವ-ಭಾವ ಎಲ್ಲವನ್ನೂ ಮತ್ತೆ ಮತ್ತೆ ಗಮನಿಸುತ್ತಿದ್ದಳು. ಅವಳ ಹಾಗೆ ನಡೆದುಕೊಳ್ಳಲು ಯತ್ನಿಸುತ್ತಿದ್ದಳು. ಒಂದು ವಾರದಲ್ಲಿ ಸಂಧ್ಯಾ ಚಿಟ್ಟಿಗೆ ತೀರಾ ಹತ್ತಿರದಳಾಗಿಬಿಟ್ಟಿದ್ದಳು. ‘ಅಕ್ಕ ಜಡೆಹಾಕು, ಅಕ್ಕ ಕುಂಕುಮ ಇಡು, ಅಕ್ಕಾ ಹೂ ಬೇಕಾ’ ಎಂದೆಲ್ಲಾ ಚಿಟ್ಟಿ ಅವಳ ಹಿಂದೆ ಸುತ್ತಿದರೂ ಅವಳನ್ನು ರಾಜನ ಮಾತು ಬೆಂಬಿಡದೆ ಕಾಡುತ್ತಿತ್ತು. ಹಾಗೇ ಸುತ್ತುತ್ತಾ ಗಂಡನನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದರ  ಬಗ್ಗೆ ಚಿಟ್ಟಿ ಒಳಗೆ ಲೆಕ್ಕಾಚಾರ ಹಾಕುತ್ತಿದ್ದಳು.
ಇಷ್ಟೆಲ್ಲದರ ನಡುವೆ ರಾಜ ಒಂದು ಸಲ ಸಂಧ್ಯಾಳ ಮೇಲೆ ಕೈ ಮಾಡುವ ಪ್ರಸಂಗ ಬಂದೇ ಬಿಟ್ಟಿತು. ರಾಜನಿಗೆ ನೀರುಪ್ಪಿಟ್ಟು ಅಂದ್ರೆ ಜೀವ. ಅಮ್ಮನ ಎದುರು ತನ್ನ ಹೆಂದತಿ ನೀರುಪ್ಪಿಟ್ಟು ತುಂಬಾ ಚೆನ್ನಾಗಿ ಮಾಡುತ್ತಾಳೆ ಎಂದು ಜಂಭ ಕೊಚ್ಚಿಕೊಂಡಿದ್ದ. ‘ಹಾಗಾದ್ರೆ ಅವಳೇ ಮಾಡಲಿ ಬಿಡು’ ಎಂದು ಸಂಧ್ಯಾಗೆ ಅಡುಗೆ ಮನೆ ಬಿಟ್ಟುಕೊಟ್ಟಿದ್ದಳು. ಆದರೆ ಅವತ್ತು ಉಪ್ಪಿಟ್ಟು ಚೆನ್ನಾಗಿ ಆಗಿರಲಿಲ್ಲ. ರಾಜ ರೊಯ್ಯನೆ ತೆಗೆದು ಗೋಡೆಗೆ ಅಪ್ಪಳಿಸಿದ್ದ. ಗಂಡನ ಹೊಗಳಿಕೆಗಾಗಿ ಕಾದಿದ್ದ ಸಂಧ್ಯಾಗೆ ಏನಾಗುತ್ತಿದೆ ಎನ್ನುವ ಸಂಗತಿ ತಿಳಿಯದೆ ದಂಗಾಗಿ ಹೋದಳು. ರಾಜನ ಕೋಪಕ್ಕೆ ಉತ್ತರ ಹೇಳದೆ ಗೋಡೆಗೆ ಅಂಟಿಕೊಂಡಿದ್ದ ಉಪ್ಪಿಟ್ಟನ್ನು ಕ್ಲೀನ್ ಮಾಡತೊಡಗಿದ್ದಳು. ಅಮ್ಮನಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೋಪ ಬಂದಿದೆಯೆಂದು ಗೊತ್ತು. ಆದ್ರೆ ಇಂಥಾ ದೂರ್ವಾಸನೆಂದು ಗೊತ್ತಾಗಲಿಲ್ಲ ಎಂದು ಏನೋ ಹೇಳಲಿಕ್ಕೆ ಹೊರಟಾಗ ಸಂಧ್ಯಾ ಅಳುವಿನ ನಡುವೆ ಕೂಡಾ ನಗುತ್ತಾ ‘ಅವ್ರನ್ನ ಏನೂ ಅನ್ನಬೇಡಿ ಅವ್ರು ನನ್ನನ್ನು ತುಂಬಾ ಪ್ರೀತಿಸ್ತಾರೆ’ ಎಂದಳು. ಅವಳ ಆ ನಗುವನ್ನು ನೋಡಿದ ಅಮ್ಮನ ಮನಸ್ಸು ಕರಗಿತು ‘ಅಲ್ಲ ಕಣೇ ॒ ಅಂದ್ರೂ ನಗ್ತಾನೆ ಇದೀಯಲ್ಲಾ’ ಎಂದು ಅವಳಿಗೆ ಸಮಾಧಾನದ ಜೊತೆ ಸಂತೈಸಲಿಕ್ಕೆ ನೋಡಿದಳು. ಸಂಧ್ಯಾ ಅಮ್ಮನ ಮಾತಿಗೆ ‘ಅವ್ರಿಗೆ ನಾನು ನಗೋದು ಇಷ್ಟ. ಅದಕ್ಕೆ ನಗ್ತಾ ಇದೀನಿ’ ಎಂದಳು. ಅದನ್ನು ಕೇಳಿಸಿಕೊಂಡ ರಾಜ ಸುಮ್ಮನೆ ಒಳಗೆ ಎದ್ದು ಹೋಗಿದ್ದ. ಆಮೇಲೆ ಏನು ನಡೀತೋ ಗೊತ್ತಿಲ್ಲ.
ಸಂಜೆಯ ಹೊತ್ತಿಗೆ ಎಲ್ಲಾ ಮಾಮೂಲಿಯಾಗಿತ್ತು. ರಾಜ ಸಂಧ್ಯಾರ ನಡುವೆ ಜಗಳ ಮುಂದುವರಿಯಬಹುದು ಎಂದುಕೊಂಡ್ದಿದ್ದ ಚಿಟ್ಟಿಗೆ ಆಶ್ಚರ್ಯವಾಗಿತ್ತು. ಕಣ್ಣುಗಳು ಊದಿಕೊಂಡಿದ್ದರೂ ಮುಖದಲ್ಲಿ ಗೆಲುವಿತ್ತು. ರಾಜ ಅವಳನ್ನು ಅವತ್ತು ವಾಕಿಂಗ್ ಕರೆದುಕೊಂಡು ಹೋದ. ಅಮ್ಮ ಸಮಾಧಾನದ ನಿಟ್ಟುಸಿರಿಟ್ಟಿದ್ದಳು. ಸಂಧ್ಯಾ ಏನೂ ನಡೆದೆ ಇಲ್ಲ ಎನ್ನುವ ಹಾಗೇ ನಗುತ್ತಲೇ ಇದ್ದಳು. ಅವಳ ನಗುವಿನ ನಡುವೆ ಬೆಳಗಿನ ಘಟನೆಯ ನೆನಕೆಗಳು ಏನಾದರೂ ಇದಾವಾ? ಎಂದು ಚಿಟ್ಟಿ ಅವಳ ಕಣ್ಣುಗಳನ್ನು ನೋಡಿದಳು. ಸಂಧ್ಯಾಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಅವಳಿಗೆ ಸಾಧ್ಯವಾಗಲೇ ಇಲ್ಲ.
ಸಂಧ್ಯಾ, ರಾಜ ಹೊರಟ ಮೇಲೆ ಇಬ್ಬರೂ ಚಿಟ್ಟಿಯ ಮನಸ್ಸಿನಲ್ಲಿ ಅದೊಂದು ಗುಂಗಾಗಿ ಕಾಡುತ್ತಿದ್ದರು. ಹೀಗೆ ಕಾಡುತ್ತಾ ಕಾಡುತ್ತಾ ಅವಳ ಮನಸ್ಸಿನ ಒಳಗೆ ಒಂದು ಚಿತ್ರವಾಗಿ ಉಳಿದುಬಿಟ್ಟರು.
ಚಿಟ್ಟಿಗೀಗ ಪರೀಕ್ಷೆಯ ಯೋಚನೆ ಶುರುವಾಗಿತ್ತು. ಎಲ್ಲರೂ ಅನುಮಾನ ಪಟ್ಟ ಹಾಗೇ ತಾನು ಫೇಲಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡುತ್ತಿತ್ತು. ಹಾಗಾಗಿ ಹೆಚ್ಚು ಹೊತ್ತು ಓದುತ್ತಿದ್ದಳು. ಆದರೆ ಅವಳಿಗೆ ಅಷ್ಟನ್ನೂ ತಲೆಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಇಸವಿಗಳು ಹೆಸರುಗಳು ಒಂದರೊಳಗೊಂದು ಸೇರಿಕೊಂಡು ಇದಾ ಅದಾ ಎನ್ನುವ ಅನುಮಾನ ಹುಟ್ಟಿಸುತ್ತಾ ಪರೀಕ್ಷೆಯ ಭಯವನ್ನು ಜಾಸ್ತಿ ಮಾಡುತ್ತಿತ್ತು.
‘ಚೆನ್ನಾಗಿ ಓದಿ ಸ್ಕೂಲಿಗೆ ಒಳ್ಳೆಯ ಹೆಸರನ್ನು ತನ್ನಿ’ ಎಂದೆಲ್ಲಾ ಹೇಳುತ್ತಿದ್ದ ಮೇಷ್ಟ್ರುಗಳ ಮಾತುಗಳನ್ನು ಕೇಳುವಾಗ, ‘ನಮ್ಮ ಚಿಟ್ಟಿ ಓದ್ತಾ ಇದಾಳೆ. ಪರೀಕ್ಷೆ ನೋಡಿ’ ಎಂದು ಅಮ್ಮ ಪಕ್ಕದ ಮನೆಯವರ ಹತ್ತಿರ ಹೇಳುವಾಗ ಚಿಟ್ಟಿಯ ಎದೆಯಲ್ಲಿ ಭಯ ಹೆಚ್ಚಾಗುತ್ತಾ ಹೋಗುತ್ತಿತ್ತು.
ಈ ನಡುವೆಯೇ ಆರೋಗ್ಯಾಳ ಅಪ್ಪ ಭೈರ ಊರಿಗೆ ಒಬ್ಬನೇ ವಾಪಾಸು ಬಂದಿದ್ದ. ‘ಮಗಳನ್ನ ಏನು ಮಾಡಿದೆ? ಎಂದ ಕಲ್ಲವ್ವನಿಗೂ ಅವನಿಗೂ ದೊಡ್ದ ಗಲಾಟೆಯೇ ನಡೆದು ಹೋಗಿತ್ತು. ಆರೋಗ್ಯ ಎಲ್ಲಿದ್ದಾಳೆ ಅನ್ನೋ ವಿಷಯ ಬಿಟ್ಟು ಭೈರ ಎಲ್ಲವನ್ನೂ ಮಾತಾಡುತ್ತಿದ್ದ. ಕಲ್ಲವ್ವ ತನ್ನ ತಮ್ಮ ಮಾರನನ್ನು ಕರೆಸಿದ್ದಳು. ಪೊಗದಸ್ತಾದ ಮೀಸೆ ಬಿಟ್ಟುಕೊಂಡು ರಾಕ್ಷಸನ ಹಾಗಿರುವ ಮಾರನ ಮುಂದೆ ಕೂಡಾ ಭೈರ ಮಾತಾಡಲಿಲ್ಲ. ಹಾಗೆಂದು ಆ ವಿಷಯ ಅಲ್ಲಿಗೇ ನಿಲ್ಲಲಿಲ್ಲ. ಕಲ್ಲವ್ವ ಊರ ಪಂಚಾಯ್ತಿಯ ಮೊರೆ ಹೊಕ್ಕಿದ್ದಳು.
ಮಗಳನ್ನು ಎಲ್ಲೋ ಮಾರಿ ಬಂದಿರಬೇಕು ಎನ್ನುವ ಹೊಸ ವಾದವನ್ನು ಕಲ್ಲವ್ವ ಪಂಚಾಯ್ತಿಯ ಮುಂದಿಟ್ಟಿದ್ದಳು. ಭೈರ ಅವಳಿಗೆ ಮಾರನನ್ನು ಮದುವೆಯಾಗುವುದು ಬೇಕಿರಲಿಲ್ಲ. ಅದನ್ನು ಅವಳು ಕಲ್ಲವ್ವನ ಎದುರು ಸಾರಿ ಸಾರಿ ಹೇಳಿದರೂ ಕೇಳಲಿಲ್ಲ. ಅದಕ್ಕೆ ಅವಳು ತನ್ನನ್ನು ‘ಎಲ್ಲಾದರೂ ಸರಿಯಿರುವವರ ಕೈಗೆ ಸಿಗದೇ ಇರುವ ಹಾಗೇ ನೋಡಿಕೋ’ ಅಂತ ಬೇಡಿಕೊಂಡಳು ಅದಕ್ಕೆ ಅವಳನ್ನು ಅಂಥಾ ಒಂದು ಜಾಗಕ್ಕೆ ಸೇರಿಸಿದ್ದೇನೆ ತಂದೆಯಾಗಿ ನನ್ನ ಜವಾಬ್ದಾರಿ ಅಷ್ಟಿದೆಯಲ್ಲವೇ ಎಂದು ಹೇಳಿದ್ದನಾದರೂ ಎಷ್ಟೇ ಕೇಳಿದರೂ ಅವಳು ಇರುವ ಜಾಗದ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಮಗಳ ಒಳಿತನ್ನು ಕೋರುವ ಯಾವ ತಂದೆಯಾದರೂ ಮಾಡುವ ಕೆಲಸ ಇದೇ. ಅದಕ್ಕೆ ಪಂಚಾಯ್ತಿ ಭೈರನ ಪರವಾಗೇ ತೀರ್ಪನ್ನು ಕೊಡುತ್ತದೆ ಎಂದು ಹೇಳಿತ್ತು.
ಈ ತೀರ್ಮಾನದಿಂದ ಮಾರ ಕಲ್ಲವ್ವನಿಗಿಂತ ಹೆಚ್ಚು ಕೆರಳಿದ್ದ. ಇದೆಲ್ಲಾ ಕಟ್ಟುಕಥೆ ತನ್ನ ಅಗತ್ಯಗಳಿಗೆಂದು ಮಗಳನ್ನು ಮಾರಿದ್ದಾನೆ ಎಂದು ವಾದ ಮಾಡತೊಡಗಿದ. ಪಂಚಾಯ್ತಿಯವರು ‘ಹೋಗಲಿ ಎಲ್ಲಿಟ್ಟಿದ್ದೀಯಾ ಹೇಳು ತಾಯಿಯಲ್ಲವಾ ಅವಳನ್ನು ನೋಡದೆ ಬದುಕುವುದಾದರೂ ಹೇಗೆ’ಎಂದು ಅಂತಃಕರಣದ ಮಾತುಗಳನ್ನು ಆಡಿದ್ದರು. ಅವರ ಮಾತಿಗೆ ‘ಹೇಳಲ್ಲ ಅವಳನ್ನು ತನಗೆ ಗೊತ್ತಿರುವ ಕಡೆ ಬಿಟ್ಟಿದ್ದೇನೆ, ಆ ಜಾಗ ನಿಮಗೆ ಹೇಳಿದರೆ ಇವರು ಅವಳನ್ನು ಎಳೆದು ತಂದು ಮದುವೆ ಮಾಡಿಬಿಡುವುದು ಖಚಿತವಾದ್ದರಿಂದ ನಾನು ಹೇಳಲಾರೆ ‘ ಎಂದುಬಿಟ್ಟಿದ್ದ. ಈ ಮಾತಿಗೆ ಕಲ್ಲವ್ವ ‘ನನ್ನ ಮಗಳನ್ನು ಸೂಳೆ ಮಾಡಿಬಿಟ್ಟ’ ಎಂದು ಕೂಗಾ ತೊಡಗಿದಳು. ಅಷ್ಟರವರೆಗೂ ಸಮಾಧಾನವಾಗಿ ಉತ್ತರಿಸುತ್ತಿದ್ದ ಭೈರ ಈ ಮಾತನ್ನು ಕೇಳಿ ಕೆರಳಿ ಕಲ್ಲವ್ವನ ಕಡೆಗೆ ನುಗ್ಗಿದ. ತಡೆಯಲು ಬಂದ ಮಾರನನ್ನು ಹೊಡೀಲಿಕ್ಕೆ ಹೋದ. ಈ ಬೆಳವಣಿಗೆಯನ್ನು ನಿರೀಕ್ಷಿಸಿರದ ಪಂಚಾಯ್ತಿ ಭೈರನನ್ನು ತಡೆವ ಮುಂಚೆ ಮಾರ ಅವನ ಮೇಲೆ ಹಲ್ಲೆ ಮಾಡಿಯೇ ಬಿಟ್ಟಿದ್ದ. ನಖಶಿಖಾಂತ ಉರಿಯುತ್ತಾ ಕಲ್ಲವ್ವ ‘ನನ್ನ ಹೊಟ್ಟೆ ಉರಿ ನಿನ್ನ ಬಿಡಲ್ಲ ಕಣೋ, ನನ್ನ ಮಗಳನ್ನ ನನ್ನಿಂದ ದೂರ ಮಾಡಿಬಿಟ್ಟೆಯಲ್ಲಾ॒’ ಎನ್ನುತ್ತಾ ಕೆಟ್ಟ ಕೆಟ್ಟ ಮಾತುಗಳಿಂದ ಗಂಡನನ್ನು ಬೈಯ್ಯತೊಡಗಿದ್ದಳು. ಕಟ್ಟುಮಸ್ತಾದ ಆಳು ಮಾರನಿಂದ ಸರಿಯಾಗಿ ಏಟುಗಳನ್ನು ತಿಂದ ಭೈರನ ಮೈ ಉಜ್ಜಿ ಗಾಯಗಳಿಂದ ತುಂಬಿಹೋಗಿತ್ತು.
ಇಷ್ಟೆಲ್ಲಾ ಆದಮೇಲೆ ಕಲ್ಲವ್ವ ‘ಮಗಳನ್ನು ಕರೆದುಕೊಂಡು ಬರುವವರೆಗೂ ನಿನಗೆ ಮನೆಯಲ್ಲಿ ಜಾಗವಿಲ್ಲ’ ಎಂದು ಹೊರಗೆ ಹಾಕಿದಳು. ಊರ ಹೊರಗಿನ ಕಲ್ಲು ಮಂಟಪದಲ್ಲಿ ಭೈರ ಒಬ್ಬನೇ ರಾತ್ರಿಯೆಲ್ಲಾ ಕಳೆದ. ಮಾರ ‘ಅವಳು ಎಲ್ಲೇ ಇರಲಿ ಹುಡುಕಿ ತಂದೇ ತರುತ್ತೇನೆ’ ಎನ್ನುವಂತೆ ಪ್ರತಿಜ್ಞೆ ಮಾಡಿದ್ದ.
ಆರೋಗ್ಯಾಳ ವಿಷಯಕ್ಕೆ ಭೈರ ಮಾಡಿದ್ದು ಸರೀನೇ ಎನ್ನುವ ತೀರ್ಮಾನಕ್ಕೆ ಚಿಟ್ಟಿ ಬಂದುಬಿಟ್ಟಿದ್ದಳು. ಮದುವೆಯ ನಿರ್ಧಾರ ಮಾಡಬೇಕಾದ್ದು ಅವಳೇ ಅಲ್ಲವಾ? ಎಂದುಕೊಳ್ಳುವಾಗಲೇ ‘ಮದುವೆಯಾಗುವ ಹುಡುಗಿ ಇವತ್ತಲ್ಲ ನಾಳೆ ಯಾರನ್ನಾದರೂ ಸರಿ ಆಗಲೇ ಬೇಕಿತ್ತಲ್ಲ?ಮಾವನ್ನೇ ಮದುವೆ ಆಗಿದ್ದರೆ ಏನಾಗುತ್ತಿತ್ತು?’ ಎಂದು ಅಜ್ಜಿ ಹೇಳುತ್ತಿದ್ದಳು. ಅಮ್ಮ ತನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲವೇನೋ ಎನ್ನುವಂತೆ ಅಡುಗೆ ತಯಾರಿ ನಡೆಸಿದ್ದಳು. ಇದೆಲ್ಲಾ ಸರಿ ಆದರೆ ಆರೋಗ್ಯ ಎಲ್ಲಿದ್ದಾಳೆ? ಅವಳನ್ನು ತಾನು ನೋಡಬೇಕಲ್ಲವಾ? ತನ್ನ ಜೊತೆ ಆಡಿ ಕುಣಿಯುತ್ತಿದ್ದ ಅವಳು ಈಗ ಎಲ್ಲಿರಬಹುದು? ಆರೋಗ್ಯಳ ಒರಟು ಮುಖ ಅವಳ ಕಣ್ಣೆದುರಿಗೆ ಬಂದು ತುದಿಯಲ್ಲಿ ಹನಿಯೊಂದು ಮೂಡಿತ್ತು.
ರಾತ್ರಿಯೆಲ್ಲಾ ಅವಳಿಗೆ ಅದೇ ಯೋಚನೆ, ಏನೇನೋ ಕನಸುಗಳು. ತಾನೂ ಆರೋಗ್ಯ ಒಟ್ಟಿಗೆ ಎಲ್ಲೋ ಹೋದ ಹಾಗೇ, ನಲಿಯುತ್ತಾ ನಕ್ಕ ಹಾಗೇ ತಮ್ಮನ್ನು ಇದ್ದಕ್ಕಿದ್ದಹಾಗೇ ಬೆಂಕಿಯ ಅಲೆಯೊಂದು ಅಟ್ಟಿಸಿಕೊಂಡು ಬಂದು ಅವರಿಬ್ಬರೂ ಅಲ್ಲಿಂದ ಓಡಿದರು. ಅಲ್ಲಿ ಇದ್ದಕ್ಕಿದ್ದಹಾಗೇ ನಿಂಗರಾಜು ಬಂದು ಆರೋಗ್ಯಾಳ ಕೈಯ್ಯನ್ನು ತನ್ನ ಕೈಲಿ ತೆಗೆದುಕೊಂಡ. ಅವನ ಕಡೆಗೆ ತನ್ನ ಕೈಯ್ಯನ್ನು ಚಾಚಿದರೂ ಅವನು ಚಿಟ್ಟಿಯ ಕಡೆಗೆ ನೋಡದೆ ಹೊರಟುಬಿಟ್ಟಿದ್ದ. ಓಹ್ ರಾತ್ರಿ ಚಿಟ್ಟಿಯ ಮೈ ಬೆವರಿ ತೊಪ್ಪಯಾಗಿಬಿಟ್ಟಿತ್ತು.  ಈ ಕನಸಲ್ಲಿ ನಿಂಗರಾಜು ಯಾಕೆ ಬಂದಿದ್ದ ಎನ್ನುವುದು ಅರ್ಥವಾಗದೇ ಚಿಟ್ಟಿ ಗಾಬರಿಯಾಗಿದ್ದಳು.
ಬೆಳಗ್ಗೆ ಅಮ್ಮ ರೊಟ್ಟಿಯನ್ನು ಯಾರಿಗೂ ಕಾಣದಂತೆ ಒಂದು ಪೇಪರ್‌ನಲ್ಲಿ ಸುತ್ತಿಕೊಟ್ಟಿದ್ದಳು. ಸ್ಕೂಲಿಗೆ ಹೊರಟ ಚಿಟ್ಟಿ ಸೀದಾ ಹೋಗಿದ್ದು ಕಲ್ಲು ಮಂಟಪದ ಬಳಿ. ಮೇಲೆ ನಾಕು ಚಪ್ಪಡಿ ಕಲ್ಲುಗಳನ್ನು ಎಳೆದಿದ್ದ ಆ ಮಂಟಪ ತುಂಬಾ ಶಿಥಿಲವಾಗಿತ್ತು. ಭೈರ ನೋವಿನಿಂದ ನಡುಗುತ್ತಾಮಲಗಿದ್ದ. ಊರವರೆಲ್ಲರ ಬಗ್ಗೆ ಚಿಟ್ಟಿಗೆ ಕೋಪ ಬಂತು. ಯಾರಾದರೂ ಕರೆದು ಮಲಗಲಿಕ್ಕೆ ಜಾಗ ಕೊಡಬಾರದಿತ್ತಾ? ಎಂದು. ಸುಕ್ಕಾದ ಅವನ ಕೆನ್ನೆಯ ಮೇಲೆ ಇಬ್ಬನಿಯ ಹನಿಗಳು ಬಿದ್ದು ತೇವಗೊಳಿಸಿದ್ದವು. ಛಳಿಗೆ ನಡುಗುತ್ತಿರಬೇಕು ಎನ್ನಿಸಿ ಅವನನ್ನು ಅಲುಗಿಸಲು ನೋಡಿದರೆ ಅವನ ಮೈ ಕೆಂಡದ ಹಾಗೇ ಸುಡುತ್ತಿತ್ತು. ಚಿಟ್ಟಿಗೆ ಗಾಬರಿಯಾಗಿ ಅವನನ್ನು  ಎಬ್ಬಿಸಿದಳು. ಎಚ್ಚರಗೊಂಡ ಭೈರನಿಗೆ ಕಣ್ಣು ಬಿಡಲೂ ಆಗದ ಸ್ಥಿತಿ. ಹಾಗೆ ಕಷ್ಟಪಟ್ಟು ಎದ್ದುಕೂತ. ಅವನಿಗೆ ಬಲವಂತ ಮಾಡಿ ತಾನು ತಂದಿದ್ದ ರೊಟ್ಟಿಯನ್ನು ತಿನ್ನಿಸಿದಳು. ಅವಳ ಮುಖದಲ್ಲಿನ ಕರುಣೆಯನ್ನು ಕಂಡೋ ಏನೋ ಭೈರ ಅತ್ತುಬಿಟ್ಟಿದ್ದ. ಚಿಟ್ಟಿಗೆ ದಿಕ್ಕು ತೋಚದ ಹಾಗಾಗಿತ್ತು. ಅವನನ್ನು ಸಮಾಧಾನಪಡಿಸುವುದಾದರೂ ಹೇಗೆ? ಗೊತ್ತಾಗದೇ ಒದ್ದಾಡಿದಳು ಕೊನೆಗೆ ಬಿಕ್ಕುತ್ತಾ ‘ಈ ಜನ ನನ್ನ ಬಿಡ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಮಗಳನ್ನು ಮಾತ್ರ ಮುಟ್ಟೋಕ್ಕೆ ಕೂಡಾ ಆಗಲ್ಲ’ ಎಂದಿದ್ದ. ಚಿಟ್ಟಿಗೆ ಭೈರ ತನಗೆ ಹೀಗೆ ಹೇಳಬಹುದು ಎನ್ನುವ ಸಣ್ಣ ಕಲ್ಪನೆ ಕೂಡಾ ಇರಲಿಲ್ಲ.
ಅವನು ಅವಳ ಹತ್ತಿರಕ್ಕೆ ಕಷ್ಟಪಟ್ಟು ಸರಿಯುತ್ತಾ ‘ಚಿಟ್ಟಿ ಯಾರಿಗೂ ಹೇಳಬೇಡ. ಆರೋಗ್ಯಾನ ನಾನು ದೂರದ ಪೇಟೆಯಲ್ಲಿರುವ ಚರ್ಚ್‌ನಲ್ಲಿ ಬಿಟ್ಟಿದ್ದೀನಿ ಅವರೇ ಓದಿಸ್ತಾರೆ. ಅವಳು ಎಷ್ಟು ಓದಿದರೆ ಅಷ್ಟು. ಆಮೇಲೆ ನನ್ ಮಾಡ್ತಾರಂತೆ. ಆರೋಗ್ಯಾ ಮದರ್ ಅಂತ ಅನ್ನಿಸಿಕೊಂಡು ಓಡಾಡುತ್ತಿದ್ದರೆ ನನಗೂ ಎಷ್ಟು ಗೌರವ ಅಲ್ಲವಾ?’ ಎಂದಿದ್ದ. ಚಿಟ್ಟಿಗೆ ತಲೆ ಬುಡ ಗೊತ್ತಾಗಲಿಲ್ಲ. ತನ್ನ ಜೊತೆ ಇದ್ದ ಹುಡುಗಿ ಹೇಗೆ ಮದರ್ ಆಗುತ್ತಾಳೆ ಮದರ್ ಎಂದರೆ ತಾಯಿಯಲ್ಲವಾ?
ಹೀಗೆ ಚಿಟ್ಟಿ ಯೋಚಿಸುವಾಗ ಭೈರ ಅವಳೆಡೆಗೆ ಬಾಗಿ ಮತ್ತೆ ಪಿಸುಧ್ವನಿಯಲ್ಲಿ ‘ಈ ವಿಷಾಯನ ಯಾರ ಹತ್ತಿರವೂ ಹೇಳಬೇಡ ಹಾಗಂತ ಮಾತು ಕೊಡು. ಇದರ ಸೂಚನೆ ಸಿಕ್ಕರೂ ಆ ಮಾರ ತನ್ನ ಜನರನ್ನು ಕಳಿಸಿ ಅವಳನ್ನು ಹುಡುಕಿಸುವುದು ಗ್ಯಾರೆಂಟಿ’ ಎಂದು ಅವಳಿಂದ ಮಾತು ತೆಗೆದುಕೊಂಡಿದ್ದ. ಕೊಟ್ಟ ಮಾತನ್ನು ತಪ್ಪಿದರೆ ದೇವರು ನನ್ನನ್ನು ಮೆಚ್ಚಲಾರ ಎಂದು ಕೊಂಡಳು.
ಅವಳಿಗೆ ಚರ್ಚ್‌ನ ಬಗ್ಗೆ ಗೊತ್ತಿತ್ತಾದರೂ ಒಳಗಿನ ಸಂಗತಿಗಳು ತಿಳಿದಿರಲಿಲ್ಲ. ನನ್‌ಗಳು ಮದುವೆಯಾಗುವುದಿಲ್ಲ ಎನ್ನುವುದು ಗೊತ್ತಿತ್ತಾದರೂ ಅವರನ್ನು ಮದರ್ ಎಂದು ಕರೆಯುವುದು ಗೊತ್ತಿರಲಿಲ್ಲ.
ಆರೋಗ್ಯಾಳ ವಿಷಯವಾಗಿ ಭಾರತಿ ನಕ್ಕತ್ತು, ಮಂಗಳಿ ಎಲ್ಲಾ ಮಾತಾಡಿಕೊಂಡರೂ ಚಿಟ್ಟಿ ಮಾತ್ರ ಒಂದೂ ಮಾತನ್ನೂ ಆಡಲಿಲ್ಲ. ತನಗೆ ಗೊತ್ತಿದ್ದ ಸತ್ಯವನ್ನು ಬೆಂಕಿಯ ಹಾಗೇ ಒಡಲಲ್ಲೆ ಇಟ್ಟ್ಟುಕೊಂಡಳು. ಎರಡು ದಿನ ಕಲ್ಲು ಮಂಟಪದ ಬಳಿ ನರಳುತ್ತಾ ಮಲಗಿದ್ದ ಭೈರ ಯಾರಿಗೂ ತಿಳಿಸದೆ ಊರನ್ನು ಬಿಟ್ಟು ಹೊರಟುಬಿಟ್ಟಿದ್ದ. ಈಗ ಆರೋಗ್ಯ ಬಗ್ಗೆ ಊರಲ್ಲಿ ಗೊತ್ತಿರುವವಳು ಎಂದರೆ ಚಿಟ್ಟಿ ಮಾತ್ರ. ಆದರೆ ಅವಳಿಗೆ ಗೊತ್ತಿದೆ ಎನ್ನುವುದು ಇನ್ಯಾರಿಗೂ ಗೊತ್ತೇ ಆಗಲಿಲ್ಲ.
ಹೀಗೇ ಏನೇನೋ ಸಂಗತಿಗಳ ನಡುವೆ ಚಿಟ್ಟಿ ತೊಯ್ದಾಡುತ್ತಾ ಇರುವಾಗಲೇ ಅವಳಿಗೆ ಒಂದು ಕೆಟ್ಟ ಆಲೋಚನೆ ಬಂತು. ಪರೀಕ್ಷೆ ಬರೆದು ಫೇಲಾಗಿ ತಾನು ಅವಮಾನ ಅನುಭವಿಸುವುದಕ್ಕಿಂತ ಸತ್ತು ಹೋದರೆ ಎಷ್ಟು ಚೆನ್ನ ಅನ್ನಿಸಿಬಿಟ್ಟಿತು. ಮೊದಲ ಬಾರಿಗೆ ಅವಳ ಒಳಗೆ ಇಂಥಾ ಆಲೋಚನೆ ಬಂದಾಗ ಒಳಗೇ ಕಂಪನ ಶುರುವಾಯಿತು. ನಾನು ಪರೀಕ್ಷೆ ಬರೆದು ಫೇಲಾದ ನಂತರ ಸತ್ತರೆ ಫೇಲಾಗಿದ್ದಕ್ಕೆ ಸತ್ತಳು ಅಂತ ಆಗುತ್ತೇ ಅದಕ್ಕೆ ಮೊದಲೇ ಸಾಯಬೇಕು ಎನ್ನುವ ನಿರ್ಧಾರಕ್ಕೆ ಹೇಗೋ ಬಂದುಬಿಟ್ಟಳು. ‘ಫೇಲಾಗಿ ನಮ್ಮ ಮಾನ ಕಳೆಯಬೇಡವೇ’ ಎಂದೆಲ್ಲಾ ಅಮ್ಮಾ ಅನ್ನುವಾಗ ಅವಳ ಮನಸ್ಸಿನಲ್ಲಿ ಮುಳ್ಳಾಡಿದ ಹಾಗಾಗುತ್ತಿತ್ತು.
ಅವಳ ಮನಸ್ಸು ಸಾಯುವುದರ ಕಡೆಗೆ ಮತ್ತೆ ಮತ್ತೆ ವಾಲುತ್ತಿತ್ತು. ಸಾಯುವುದು ಹೇಗೆ ಎನ್ನುವ ದಾರಿಯನ್ನು ಹುಡುಕತೊಡಗಿತು. ದತ್ತೂರಿ ಬೀಜವನ್ನು ತಿಂದರೆ ಸಾಯುತ್ತಾರೆ ಎಂದು ಯಾವಾಗಲೋ ಯಾರೋ ಹೇಳಿದ ಮಾತನ್ನು ನೆನಪಿಸಿಕೊಂಡು ದತ್ತೂರಿ ಬೀಜವನ್ನು ಯಾರಿಗೂ ಗೊತ್ತಾಗದ ಹಾಗೆ ಸಂಗ್ರಹಿಸಿಟ್ಟುಕೊಂಡಳು.
ಅದನ್ನು ಅರೆದು ಪುಡಿಮಾಡಿ ನುಂಗುವುದೋ ಇಲ್ಲಾ ಹಾಗೇ ನುಂಗುವುದೋ ಎಂದು ಅರ್ಥವಾಗದೆ ನೋಡೋಣ ಎಂದು ಹಲ್ಲಿಂದ ಕಚ್ಚಿದಳು. ಅವಳ ಬಾಯೆಲ್ಲಾ ವಿಷ ಆವರಿಸಿ ಕಹಿ ಎನ್ನುವ ಕಹಿ ಎಷ್ಟೋ ಹೊತ್ತಿನತನಕವೂ ಅವಳ ನಾಲಿಗೆಯ ಮೇಲೆ ಉಳಿದುಬಿಟ್ಟಿತ್ತು. ಇಲ್ಲ ಇದನ್ನು ಹೀಗೆ ಅರೆದು ಪುಡಿ ಮಾಡಿ  ತಿನ್ನುವುದು ಆಗದ ಮಾತು ಎಂದು ಅದನ್ನು ಹಾಗೇ ನುಂಗಿಬಿಟ್ಟಿದ್ದಳು. ಹಾಗೆ ನುಂಗಿದ್ದರಿಂದಲೋ ಏನೋ ಅವಳಿಗೆ ಅವತ್ತೆಲ್ಲಾ ಹಿತ್ತಲಿಗೆ ಹೋಗಿ ಬರುವ ಕೆಲಸವಾಯಿತು. ‘ಅದೂ ಇದೂ ತಿನ್ನಬೇಡ ಪರೀಕ್ಷೆ ಹೊತ್ತು ಅಂತ ಹೇಳ್ತೀನಿ ಆದ್ರೆ ಕೇಳೋದೇ ಇಲ್ವಲ್ಲಾ’ ಎಂದು ಅಮ್ಮ ಬೈದಳು. ಕಾರಣ ಏನಾದರೂ ಗೊತ್ತಾಗಿಬಿಟ್ಟರೆ ಅವಳು ತನ್ನನ್ನು ಬಿಡಲ್ಲ ಎಂದು ಏನೂ ಹೇಳದೆ ಸುಮ್ಮನೆ ಕುಳಿತಳು. ಅಪ್ಪ ಕೊಟ್ಟ ದುಡ್ಡಿಂದ ಪುಟ್ಟಿ ಬೋಟಿಯನ್ನು ತಂದುಕೊಂಡು ಅವಳ ಎದುರೇ ತಿನ್ನತೊಡಗಿದಳು. ಇದೆಲ್ಲಾ ಅವಳು ಬೇಕಂತಲೇ ಮಾಡುತ್ತಿದ್ದಾಳೆ ಎಂದು ಚಿಟ್ಟಿಗೆ ಅನ್ನಿಸತೊಡಗಿತ್ತು. ಈಗ ಅವಳಿಗೆ ಹಾಗೆಲ್ಲಾ ಅಂಗಡಿಗೆ ಹೋಗಿ ಬೇಕಾದ್ದನ್ನು ತೆಗೆದುಕೊಂಡು ತಿನ್ನಲು ಸಂಕೋಚ ಅನ್ನಿಸುತ್ತಿತ್ತು. ಅಂಗಡಿಯ ಧರ್ಮಣ್ಣ ಒಂದು ಸಲವಂತೂ ತನ್ನೆಲ್ಲಾ ಗಂಟು ಮೋರೆಯನ್ನು ಸಡಿಲಿಸಿ ‘ಇದೇನ್ ಚಿಟ್ಟಿ ಇನ್ನೂ ಚಿಕ್ಕ ಹುಡುಗಿಯ ಹಾಗೆ ಇದೆಲ್ಲಾ ತಿಂತೀಯಾ’ ಎಂದುಬಿಟ್ಟಿದ್ದ. ವಯಸ್ಸಿಗೂ ತಿನ್ನುವುದಕ್ಕೂ ಏನು ಸಂಬಂಧ ಅಂತ ತಿಳಿಯದೇ ಹೋದರೂ ಹಾಗೆ ತಿನ್ನುವುದನ್ನು ಜಗತ್ತು ಒಪ್ಪುವುದಿಲ್ಲ ಅಂತ ಅರ್ಥ ಮಾಡಿಕೊಂಡಿದ್ದಳು. ಹಾಗಾಗಿ ಆಗೀಗ ಸೀನುವನ್ನು ತಗೊಂಡು ಬಾರೋ ಎಂದು ಪೀಡಿಸುತ್ತಿದ್ದಳು. ಅವನಿಗೆ ಇಷ್ಟವಾದರೆ ತರುತ್ತಿದ್ದ ಇಲ್ಲದಿದ್ದರೆ ಇಲ್ಲ. ಇನ್ನೊಬ್ಬರ ಕೈ ಕಾಯುವ ಕಷ್ಟ ಮಾತ್ರ ಅವಳಿಗೆ ತಪ್ಪಲಿಲ್ಲ ಈ ನಡುವೆ ಪರೀಕ್ಷೆ ಎನ್ನುವುದು ದಾಂಗುಡಿಯಿಡುತ್ತಾ ಯಾವ ದಾಕ್ಷಿಣ್ಯವೂ ಇಲ್ಲದೆ ಹತ್ತಿರ ಬರತೊಡಗಿತ್ತು.
(ಮುಂದುವರಿಯುವುದು…)

‍ಲೇಖಕರು avadhi

February 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಭಾರತಿಯ ಮನೆಯದು ಮತ್ತೊಂದು ಕಥೆ « ಅವಧಿ / Avadhi - [...] (ಇಲ್ಲಿಯವರೆಗೆ) [...]
  2. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಅಂತೂ ಒಂದು ಪರೀಕ್ಷೆ ಮುಗಿಯಿತು… « ಅವಧಿ / Avadhi - [...] ಪರೀಕ್ಷೆ ಮುಗಿಯಿತು… February 18, 2014 by user2 (ಇಲ್ಲಿಯವರೆಗೆ) ತಪ್ಪು-ಸರಿ ಯಾವುದು ತಿಳಿಯದ ಗೊಂದಲಕ್ಕೆ [...]
  3. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿ ಮೊದಲಬಾರಿಗೆ ಹಾರುವುದ ಕಲಿತಿತ್ತು « ಅವಧಿ / Avadhi - [...] (ಇಲ್ಲಿಯವರೆಗೆ) [...]
  4. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಸೈಕಲ್ ಸವಾರಿ « ಅವಧಿ / Avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಸೈಕಲ್ ಸವಾರಿ March 18, 2014 by user2 (ಇಲ್ಲಿಯವರೆಗೆ) [...]
  5. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಸೈಕಲ್ ಜೊತೆಯಲ್ಲೇ ಬಿಡುಗಡೆಯನ್ನೂ ತಂದಿತ್ತು « ಅವಧಿ / Avadhi - [...] ಬಿಡುಗಡೆಯನ್ನೂ ತಂದಿತ್ತು March 25, 2014 by user2 (ಇಲ್ಲಿಯವರೆಗೆ) ಕೊಟ್ಟ ಮಾತಿಗೆ ಅಪ್ಪ ತಪ್ಪಲಿಲ್ಲ, ಅವಳ [...]
  6. ’ರಣ್ ಉತ್ಸವ ಮತ್ತು ನಾವಿಬ್ಬರು’ : ಭುಜ್ ಬಾನಿನಲ್ಲಿ ಗಾಳಿಪಟ ಹುಡುಕುತ್ತಾ.. « ಅವಧಿ / Avadhi - [...] (ಇಲ್ಲಿಯವರೆಗೆ) [...]
  7. ’ರಣ್ ಉತ್ಸವ ಮತ್ತು ನಾವಿಬ್ಬರು’ – ಚಂದಿರನಿದ್ದನು ಜೊತೆಯಲ್ಲೆ… « ಅವಧಿ / Avadhi - [...] (ಇಲ್ಲಿಯವರೆಗೆ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: