’ಅಮೆರಿಕೆಯಲ್ಲಿ ಕನ್ನಡ ಓದುಗನ ಸಂಕಟ’ – ವೈಶಾಲಿ ಹೆಗಡೆ ಬರೀತಾರೆ

– ವೈಶಾಲಿ ಹೆಗಡೆ

ಬರೆಯುವ ಖುಷಿ ಹೆಚ್ಚೋ, ಓದುವ ಖುಷಿ ಹೆಚ್ಚೋ ಎಂದು ಮೊನ್ನೆ ಒಬ್ಬರು ಕೇಳಿದ್ದರು.  ಉತ್ತರ ಬಹು ಸುಲಭ. ಓದುವ ಖುಷಿಯ ಮುಂದೆ ಬರೆವ ಖುಷಿ ಏನೂ ಅಲ್ಲ.  ಅಂದು ಶಾಲೆಯ ಬೆಂಚಿನಲ್ಲಿ ಕುಳಿತು ಪಟ್ಟಿ ಹಾಳೆಯ ಹಿಂಬದಿಗೆ ಗೀಚಿದ ಕವನದ ದಿನಗಳಾದಿಯಾಗಿ ಬರೆದು ಒಗೆದದ್ದೆಷ್ಟೋ, ಇಟ್ಟುಕೊಂಡದ್ದೆಷ್ಟೋ, ಪ್ರಕಟಿಸಿದ್ದೆಷ್ಟೋ. ಅದರ ಹತ್ತು ಪಟ್ಟು ಓದಿ ತೆಗೆದರೂ ಓದುವುದು ಇನ್ನೂ ಎಷ್ಟೆಲ್ಲಾ ಇದೆ!  ಓದನ್ನು ನನಗೆ ಒಂದು ಹವ್ಯಾಸವಾಗಿಸಿದ್ದು ಕನ್ನಡ ಪುಸ್ತಕಗಳು. ನಾನೂ ಏನಾದರೂ ಬರೆಯಬಹುದೇನೋ ಎಂಬ ಆಸೆ ಹುಟ್ಟಿಸಿದ್ದು ಕನ್ನಡ ಪುಸ್ತಕಗಳು. ಓದಿನ ಹುಚ್ಚು ಎಂಬಂತೆ ಆರಂಭವಾಗಿದ್ದು ಚಿಕ್ಕಂದಿನಲ್ಲಿ ಮನೆತುಂಬಾ ಬಿದ್ದಿರುತ್ತಿದ್ದ ತರಂಗ, ಸುಧಾ, ಕರ್ಮವೀರ, ಚಂದಮಾಮ, ಬಾಲಮಿತ್ರದ ಮಕ್ಕಳ ಕತೆಗಳು. ಅಲ್ಲಿಂದ ಮೊಳಕೆಯೊಡೆದು ಹಬ್ಬಿದ ಓದಿನ ಬಳ್ಳಿ ಗ್ರಂಥಾಲಯಗಳ ಎರವಲು ಪಡೆದ ಹಸಿಬಿಸಿ ಸಾಮಾಜಿಕ ಕಾದಂಬರಿ, ಪತ್ತೇದಾರಿ ಕಾದಂಬರಿಗಳಿಗೆ ಹೊರಳಿಕೊಂಡಿತು. ಯಂಡಮೂರಿಯ ರೋಚಕ ಕತೆಗಳು ಊಟ ನಿದ್ದೆ ಕಸಿಯಲಾರಂಭಿಸಿದವು. ಊರಲ್ಲಿದ್ದ ಗ್ರಂಥಾಲಯಗಳ ಭಂಡಾರ ಖಾಲಿ ಎನ್ನುವಾಗ ಅಪ್ಪನ ಕೈಲಿ ಸಿಕ್ಕಿಹಾಕಿಕೊಂಡು, ಬೈಸಿಕೊಂಡು,ಇನ್ನೇನು ನನ್ನ ಹಾಳು ಮೂಳು ಓದು ಪರಿಸಮಾಪ್ತಿ ಎಂದುಕೊಂಡಾಗಲೇ, ಅಪ್ಪನೇ ನನ್ನ ಓದಿನ ಮುಂದಿನ ಬೆಳವಣಿಗೆಗೆ ನಾಂದಿ ಹಾಡಿದ್ದರು. “ಕೂಸೇ,ಇನ್ನೆಷ್ಟು ದಿನ ಇಂತ ಕತೆ ಕಾದಂಬರಿ ಓದುವುದು? ಚೋಲೋದೆಂತಾದರೂ ಓದು,ಎನ್ನುತ್ತಾ ಬೈರಪ್ಪನವರ ನಾಯಿ ನೆರಳು, ಕೆದಂಬಾಡಿ ಜತ್ತಪ್ಪ ರೈರವರ ಬೇಟೆಯ ಕತೆಗಳು,ಬೇಂದ್ರ ಕಾವ್ಯ ಸಂಗ್ರಹ “ ಕೊಟ್ಟಿದ್ದರು. ಅಲ್ಲಿಂದ ಮುಂದೆ ನನ್ನ ಓದಿನ ದಿಕ್ಕೇ ಬದಲಾಯಿತು. ನನ್ನ ಹಪಾಹಪಿಗೆ ಹೊಸದೊಂದು ಜ್ಞಾನ ಲೋಕ ತೆರೆದುಕೊಂಡಿತ್ತು.  ಈಗ ಓದಿನ ಓಘಕ್ಕೆ ದೂರತೀರದ ಅನಿವಾಸಿ ಜೀವನ ಅಡ್ಡಿಯಾಗದಿದ್ದರೂ ಬಹು ಸಂಕಟ ತಂದಿರುವುದಂತೂ ನಿಜ.

ಇಂದು ಡಾಯಪರ್ ನಿಂದ ಹಿಡಿದು ಮಾರಕಾಸ್ತ್ರದವರೆಗೆ  ಅಂತರ್ಜಾಲದಲ್ಲಿ ಏನು ಸಿಗುವುದಿಲ್ಲ! ಹೌದು ಅಮೇರಿಕಾದವರಿಗೆ ಕನ್ನಡ ಪುಸ್ತಕ ಸಿಗುವುದಿಲ್ಲ. ರಿಲ್ಕೆ, ಎಜರಾ ಎಲ್ಲ ಕವಿತೆಗಳ ಹಿಡಿದು ಎಡತಾಕುತ್ತಾರೆ, ಕಾಫ್ಕಾ,ನೆರೂಡ ಸಿಕ್ಕು ಹಾಯ್ ಹಲೋ ಎನ್ನುತ್ತಾರೆ. ಆದ್ರೆ ಅಂತರ್ಜಾಲದ ಬೀದಿಗಳಲ್ಲೆಲ್ಲೂ ನನಗೆ ಪಂಪನ ಕಂಪು ಸಿಗುವುದಿಲ್ಲ. ಚಿತ್ತಾಲರು ಚಿತ್ತೈಸುವುದಿಲ್ಲ. “ಗಂಗಾವತರಣ”ಗೊಳ್ಳುವುದಿಲ್ಲ. ಕನ್ನಡದ ನೆಲದಲ್ಲೇ ಬೆಳೆಯುವಾಗ, ಸುತ್ತಲೂ ಹೇರಳ ದೊರೆಯುತ್ತಿದ್ದ ಪುಸ್ತಕಗಳೇ ಯಾಕೆ, ಕೊನೆಗೆ ಅಂಗಡಿಯಿಂದ ತಂದ ಪೊಟ್ಟಣ ಕಟ್ಟಿದ್ದ ರದ್ದಿ ಪೇಪರೂ ಓದಿಸಿಕೊಳ್ಳದ ಹೊರತು ಕಸವಾಗುತ್ತಿರಲಿಲಿಲ್ಲ. ಆಗೆಲ್ಲ ಸಿಕ್ಕಸಿಕ್ಕದ್ದನ್ನು ಓದುವ ತಹತಹಿಕೆಯಿತ್ತು. ಈಗಲೂ ಇದ್ದರೂ ಅದರ ಗತಿ, ಗುರಿ ಬದಲಾಗಿದೆ. ಅದು ಓದುಗನ ಸಹಜ ಬೆಳವಣಿಗೆ. ಓದುತ್ತ ಓದುತ್ತ, ಮೌಲಿಕವಾದದ್ದನ್ನು ಆರಿಸಿಕೊಳ್ಳುತ್ತ ಸಾಗುವಾಗ, ಜಗತ್ತಿನ ಯಾವ ಭಾಗದಲ್ಲಿದ್ದರೂ ಯಾವ ಭಾಷಿಕರಾದರೂ ಒಮ್ಮೊಮ್ಮೆ ಖಾಲಿತನ ಕಾಡುವುದು ಕೂಡ ಸಹಜ. ಹಾಗೆ ನೋಡಿದರೆ ಕನ್ನಡ ಪುಸ್ತಕಗಳು ಇತೀಚೆಗೆ ಬಿಡುಗಡೆಯಾಗುವ ಸಂಖ್ಯೆ ಗಣನೀಯವಾಗಿ ಏರಿದೆ. ಆದರೆ ಇಲ್ಲಿರುವ ನಮಗೆ ಪದೇ ಪದೇ ಕಾಡುವ ಓದಿನ ಖಾಲಿತನ ಅನಿವಾರ್ಯ ಅಸಹಾಯಕತೆ.

ಇಲ್ಲಿ ಕೊರಗೆಂದರೆ ಸೀಮಿತ ಮಾರುಕಟ್ಟೆಯ ಅಧ್ವಾನದ ಗ್ರಾಹಕರು ನಾವು. ಕನ್ನಡ ಸಾಹಿತ್ಯದ ಓದುಗರ ವಲಯ ತೀರ ಪರಿಮಿತವಾದದ್ದು. ಹಾಗಾಗಿ ನಿಯಮಿತ ಸಂವಹನ ಕೂಡ ನಮಗೆ ಕಷ್ಟಸಾಧ್ಯವೇ ಆಗಿದೆ ಇಂದಿನ ಅಂತರ್ಜಾಲದ ಯುಗದಲ್ಲಿ ಕೂಡ.  ಅದರಲ್ಲೂ ಇಲ್ಲಿನ ಬಹಳಷ್ಟು ಕನ್ನಡಪ್ರೇಮಿಗಳು, ಒಂದು ಕಾಲಘಟ್ಟದ ಕನ್ನಡವನ್ನು ಹಿಡಿದಿಟ್ಟು ಹೊತ್ತು ತಂದು ಹಾಗೆಯೆ ಘನೀಕರಿಸಿಕೊಂಡು ಬಿಟ್ಟಿದ್ದಾರೆ. ಅವರ ಮನದಲ್ಲಿನ ಕನ್ನಡ ಸಾರಸ್ವತ ಲೋಕದ ದಿಗ್ಗಜರುಗಳಿಂದೀಚೆಗಿನ  ಕನ್ನಡದ ಹರಿವು ಇಲ್ಲಿನ ಅರಿವಿಗೆ ಸುಲಭಕ್ಕೆ ದಕ್ಕುವಂತದ್ದಲ್ಲ. ಅದಕ್ಕೆ ಮುಖ್ಯ ಕಾರಣ ಕನ್ನಡ ಪುಸ್ತಕಗಳು ಬೇಕು ಎಂದುಕೊಂಡರೂ ಇಲ್ಲಿ ಸುಲಭದಲ್ಲಿ ದೊರಕುವಂತದ್ದಲ್ಲ. ಅವರೆಲ್ಲ ಅವೇ ಪುಸ್ತಕಗಳಲ್ಲಿ ತಮ್ಮ ಅಸ್ತಿತ್ವವನ್ನು ಜೋಡಿಸಿಟ್ಟಿದ್ದಾರೆ. ತೀರ ಇತ್ತೀಚಿನವರೆಗೆ, ಹೊಸ ಪುಸ್ತಕಗಳನ್ನು ಕೊಳ್ಳಬೇಕೆಂದರೂರೂ ಅವರಿಗೆ ಉತ್ತಮ ಕೃತಿ ಯಾವುದು, ಕೃತಿಕಾರರು ಯಾರು, ತಮ್ಮದೇ ಮೆಚ್ಚಿನ ಕೃತಿಕಾರರ ಹೊಸ ಪುಸ್ತಕ ಕೂಡ ಬಂದಿದೆಯೇ ಇಲ್ಲವೇ ಎಂಬ ಸ್ಪಷ್ಟ ಅರಿವಿರುತ್ತಿರಲಿಲ್ಲ. ಆದರೆ ಸಾಮಾಜಿಕ ತಾಣಗಳ ಆಸ್ಫೋಟ, ಅಂತರ್ಜಾಲದಲ್ಲಿ ಕನ್ನಡದ ತಾಣಗಳ ನೆರವಿನಿಂದಾಗಿ, ಹೊಸ ಪುಸ್ತಕಗಳ ಬಿಡುಗಡೆ ಎಂದು ಕೇಳಿ ಬರುತ್ತದೆ, ಮುಖಪುಟ ಕಂಡು ಬರುತ್ತದೆ. ಕನ್ನಡ ಅಕ್ಷರ ಲೋಕ ಖಂಡಿತ ಅಂತಾರಾಷ್ಟ್ರೀಯವಾಗಿ ಹರಡಿಕೊಂಡಿದೆ. ಆದರೆ ಪುಸ್ತಕ ಕೈಗೆ ಎಟುಕುವುದು ಮಾತ್ರ ಭಾರತ ಪ್ರವಾಸದಲ್ಲೇ.

ಅಂತದ್ದರಲ್ಲಿ ಸಂಪೂರ್ಣ ವಿದ್ಯುನ್ಮಾನ ಪುಸ್ತಕಗಳಾಗಿ ಕನ್ನಡ ಪುಸ್ತಕಗಳು ದೊರೆಯುವುದಂತೂ ದೂರವೇ ಉಳಿಯಿತು. ಪ್ರಕಾಶಕರು ಆ ಬಗ್ಗೆ ಹೆಚ್ಚಿನ ಆಸ್ಥೆ ತೋರಿಸುತ್ತಿಲ್ಲ. ಬಂಡವಾಳ ಕೂಡ ಗಿಟ್ಟೋದಿಲ್ಲ ಬಿಡ್ರೀ ಇದೆಲ್ಲ ಕನ್ನಡಕ್ಕೆ ಆಗಿ ಬರೋದಿಲ್ಲ ಎಂದು ಉಡಾಫೆ ಮಾಡಿಬಿಡುತ್ತಾರೆ. ನೂರು ರೂಪಾಯಿಯ ಪುಸ್ತಕವನ್ನೇ ಕೊಂಡು ಓದದೆ ಪಿ. ಡಿ. ಎಫ್. ಕಾಪಿ ಮಾಡಿಸಿ ಬಳಗಕ್ಕೆಲ್ಲ ಹಂಚುವ ಜನ ಇರುವಾಗ ಪ್ರಕಾಶಕರ ಮಾತನ್ನು ಕೂಡ ನಾವು ಅಲ್ಲಗಳೆಯುವಂತಿಲ್ಲ. ಇವರ್ಯಾಕೆ ಒಂದು ಪುಸ್ತಕದಹಕ್ಕು, ಪ್ರಕಾಶಕರ ಹಕ್ಕು, ಬರಹಗಾರರ ಗೌರವಧನ, ಚಂದಾ  ಎಂದೆಲ್ಲ ತಲೆಕೆಡಿಸಿಕೊಂಡು ಚಂದಗಾಣಿಸಿಯಾರು?! ಇನ್ನು ಕೆಲವು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳನ್ನು ಅಂತರ್ಜಾಲಕ್ಕೇರಿಸಲಾಗಿದೆ. “ಕಣಜ”ದಂತ ಕೆಲವೆಡೆ “ಕ್ಲಾಸಿಕ್” ಕೃತಿಗಳು ದೊರೆತರೂ ಬಹಳಷ್ಟು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಸಂಶೋಧನಾತ್ಮಕ ಕೃತಿಗಳೇ ತುಂಬಿರುತ್ತವೆ. ಸಮಕಾಲೀನ ಸಾಹಿತ್ಯದ ಹೋಗಲಿ, ಒಂದು ಹತ್ತಿಪ್ಪತ್ತು ವರ್ಷದ ಹಿಂದಿನ  ಪುಸ್ತಕಗಳೂ ಕೂಡ ದೊರೆಯುವುದಿಲ್ಲ.  ಬ್ಲಾಗ್, ಅಂತರ್ಜಾಲ ಪತ್ರಿಕೆಗಳು ಕನ್ನಡದ ಹೊಸ ಓದಿನ ಬಯಕೆಯನ್ನು ಅಷ್ಟಿಷ್ಟು ತಣಿಸಿದರೂ ಒಂದಿಡೀ ಪುಸ್ತಕದ ಓದಿನ ಅನುಭವಕ್ಕೆ ಸಾಟಿಯಲ್ಲ. ನನ್ನ ಪುಸ್ತಕ ಭಂಡಾರ ಖಾಲಿಯಾದಾಗೊಮ್ಮೆ ಇಲ್ಲಿ ಸ್ನೇಹಿತರ ಮನೆ ಗ್ರಂಥಾಲಯಗಳಿಗೆ ಲಗ್ಗೆ ಇಡುತ್ತೇನೆ.

ನಮ್ಮ ಪುಸ್ತಕಗಳ ತರಹೇವಾರಿ ತಾತ್ಕಾಲಿಕ ವಿಲೇವಾರಿ ನಡೆಯುತ್ತದೆ. ಆದರೆ ಕೊರೆವ ಚಳಿಯಲ್ಲಿ ಬೆಚ್ಚಗಿನ ಓದಿಗೆ ಪುಸ್ತಕ ಬೇಕೆಂದಾಗ ನಿನ್ನೆ ಬಿಡುಗಡೆಯಾದ ಚಂದದ ಪುಸ್ತಕವೊಂದು ಇಲ್ಲಿ  ಕುಳಿತ  ನನ್ನ ಕೈ ಸೇರುವಂತಿದ್ದರೆ!, ನನ್ನ ಬಳಿಯೊಂದು ಅಲ್ಲದೀನನ ಬಳಿಯಿದ್ದಂತ ಮಾಯದ ದೀಪವಿದ್ದು ಅದನ್ನು ಉಜ್ಜಿದಾಗೊಮ್ಮೆ ಹೊಸದೊಂದು ಪುಸ್ತಕ ಬಂದು ಬೀಳುವಂತಿದ್ದರೆ ಎಂದೆಲ್ಲ ದೇವರಲ್ಲಿ ಬೇಡಿಕೊಂಡ ಪುಸ್ತಕ ಬರಗಾಲದ ದಿನಗಳೂ ಇವೆ.  ಪ್ರತಿ ಬಾರಿ ಭಾರತ ಪ್ರವಾಸಕ್ಕೆ ಹೋದಾಗ ಹೊಸ ಹೊತ್ತಗೆಗಳನ್ನು ಹೊತ್ತು ತರುವುದೊಂದು ಬಿಟ್ಟರೆ ಸದ್ಯಕ್ಕಂತೂ ಬೇರೆ ಉಪಾಯವಿಲ್ಲ. ಕನ್ನಡ ಭಾಷೆಯ ಬಗೆಗಿನ ಇನ್ಯಾವ ಸವಾಲುಗಳು ಬಗೆಹರಿಯದಿದ್ದರೂ ಚಿಂತಿಲ್ಲ, ನನ್ನ ಮನೆಯ ಗ್ರಂಥಾಲಯದ ಹಿಂದೊಂದು ಮಾಯಾದ್ವಾರವಿರಲಿ, ನನಗೆ ಬೇಕಾದ ಹೊಸ ಹೊಸ ಕನ್ನಡ ಪುಸ್ತಕಗಳು ನಿರಂತರ ಬಂದು ಬೀಳುತ್ತಿರಲಿ ದೇವರೇ.

‍ಲೇಖಕರು avadhi

February 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Mahendra vi. sheela

    Ms. V. Hegade,
    I csn understand your situation very well. How about visiting the National Library?
    It was 100 times more difficult to get Kannada books in Germany. For 30 and more years I could read even a single line in Kannada. Then I was advised to visit Berlin NL, Where hundreds of Kannada Books old and new were available. Good luck to you.
    Vijayasheela

    ಪ್ರತಿಕ್ರಿಯೆ
  2. Anil Talikoti

    ಅತ್ಯಂತ ಸರಿಯಾಗಿ ಹೇಳಿದ್ದಿರಿ ವೈಶಾಲಿ. ಹೊಸಬರದಂತೂ ಬಿಡಿ ಕೊನೆಗೆ ಮಾಸ್ತಿ,ಕಾರಂತ,ಭೈರಪ್ಪರಂತವರ ಕ್ಲಾಸಿಕ ಕಾದಂಬರಿಗಳು ಓದಬೇಕೆಂದಾಗ ಎಲ್ಲಿಯೂ ಸಿಗುವದಿಲ್ಲ. ಮತ್ತೆನೋ ಓದಿ ತಣಿಸಿಕೊಳ್ಳುವದಾಗುತ್ತದೆ. ಸಮಯೋಚಿತ ಲೇಖನ.

    ಪ್ರತಿಕ್ರಿಯೆ
  3. ಅಶೋಕವರ್ಧನ ಜಿ.ಎನ್

    ಅಂತರ್ಜಾಲದಲ್ಲಿನ ಕನ್ನಡ ಜಾಲತಾಣಗಳಂತೇ ಈಗ ಕನ್ನಡ ಪುಸ್ತಕಗಳೂ ಬರುತ್ತಿವೆ. ಕರ್ನಾಟಕ ಸರಕಾರವೇ ಪ್ರಾಯೋಜಿಸಿದ ಕನ್ನಡ ಪುಸ್ತಕಗಳನ್ನು ಅಂತರ್ಜಾಲಕ್ಕೇರಿಸುವ ಕಾರ್ಯಕ್ರಮ ನಡೆದೇ ಇದೆ (ವಿವರಗಳು ನನ್ನಲ್ಲಿಲ್ಲ)ನನ್ನ ಜಾಲತಾಣದಲ್ಲಿ ಪ್ರತ್ಯೇಕ ಪುಸ್ತಕ ವಿಭಾಗವನ್ನು ತೆರೆದು ನಾನು ಈಗಾಗಲೇ ಎಂಟಕ್ಕೂ ಮಿಕ್ಕು ಕನ್ನಡ ವಿ-ಪುಸ್ತಕಗಳನ್ನು ಉಚಿತವಾಗಿ ಲೋಕಾರ್ಪಣೆ ಮಾಡಿದ್ದೇನೆ – http://www.athreebook.com ಗಮನಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: