ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಆರ್ ವೆಂಕಟೇಶ್ ಹೊಸ ಕವಿತೆ- ಹೀಗಾದೆ ಏಕೆ?

ಪಿ ಆರ್ ವೆಂಕಟೇಶ್

ಕಾದನೆಲ ಮೈ ಸವರಿ
ನನ್ನವರ ಹೆಜ್ಜೆಗಳ
ಸಿಡಿಲ ಕೋಲನು ಹಿಡಿದು
ಹಲಿಗೆ ಬಾರಿಸಿದೆ
ವಿಕೃತಿಯ ಸುಡಲು
ಬೆಂಕಿ ಆಕೃತಿ ಕೆತ್ತಿ
ಸುಟ್ಟ ಬೂದಿಯ ರುಚಿಗೆ
ರಂಗಾದೆ ಏಕೆ?

ಬದುಕ ಬಾನಿನ ತುಂಬ
ಚುಕ್ಕೆಗಳ ನೆಟ್ಪೆ
ಅಬ್ಬರಿಸುವ ಮೊಡಕೆ
ಸಿಡಿಲನಿಟ್ಪೆ
ಧರೆಯ ಬತ್ತಳಿಕೆಗೆ
ಆಕ್ರೊಶಗಳ ಎರೆದು
ಸಾವಿರದ ನದಿ ತೊರೆಗೆ
ಹಾದಿ ಕೊರೆದೆ.
ಕುಣಿದೆ ನೀ ನವಿಲಂತೆ
ಬಣ್ಣಗಳ ಚಾವಡಿಗೆ
ಕಣ್ಣ ಮೂಡಿಸಿದೆ
ಹೋರಾಟ ಕೊರಳುಗಳು
ಹಾಡು ಹೊಮ್ಮಿಸುವಾಗ
ಎಡತಾಕಿದ ಕಲ್ಲಿಗೆ
ಜಾರಿದೇಕೆ?
ನೆನ್ನೆ ದಿನ ಕಾವಿನಲಿ
ದೀಪ ಬೆಳಗಿಸಲೆಂದೆ
ಬತ್ತಿ ಹೊಸೆಯುವ ಕೈಯ
ಬಿಟ್ಟೆ ಏಕೆ?

ಕಾಲದೊಡೆಯರ ವಿಷದ
ಕಾರ್ಕೋಟ ಕೋಟೆಗೆ
ಇಕ್ಕಿ ಒದವರ ಕೂಟ
ಕಟ್ಟಿ ನಿಲ್ಲಿಸಿದೆ
ಕಾಲೆತ್ತಿ ಒದೆವಾಗ
ಕುಸಿವ ಕೋಟೆಯ ತಳಕೆ
ಇಟ್ಟಿಗೆ ಹೇಗಾದೆ?

ಸಿಡಿಮಿಡಿ ಹಾದಿಗೆ
ಮೆರವಣಿಗೆ ಸಡಗರಕೆ
ಕರುಳಿನ ಸಂಕಟದ
ಸಾರವನೆ ಹದಗೊಳಿಸಿದೆ
ಬರವಸೆ ದಾರದಲಿ
ಬೆಂಕಿ ಅಕ್ಷರ ಹೊಸೆದು
ಕ್ರಾಂತಿ ಕನ್ಯೆಯ ಕೊರಳ ಸಿಂಗರಿಸಿದೆ.
ಕುಲುಮೆ ಹದದಲಿ ಪ್ರತಿಮೆ
ಆಕಾರ ಪಡೆವಾಗ
ಕನಸ ಕಾಣುವುದನೆ
ನಿಲ್ಲಿಸಿದೆ ಏಕೆ?

ನನ್ನ ಕರುಳಿನ ಕವಿಯೆ
ಸಿದ್ಧಲಿಂಗಯ್ಯ
ಸಿದ್ಧ ಲಿಂಗನೆ ನೀನು
ಶುದ್ಧ ಅಂತ: ಕರುಣಿ
ಮಸಣದಲಿ ನೀ ಕೂತು
ಗೋರಿ ಮೌನವ ಬಗೆದು
ಸತ್ತ ಮಾತಿಗೆ ಜೀವ ಕೊಟ್ಟೆ
ಮಸಣ ಬಿತ್ತುವ ಮದದ
ಮಹಡಿ ಮೆಟ್ಟಲನೇರಿ
ನೋವ ನಗುವನು ಹೊತ್ತು
ಏಕೆ ನಿಂತೆ?

‍ಲೇಖಕರು Admin

15 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading