ಶ್ರೀನಿವಾಸ ಪ್ರಭು ಅಂಕಣ- ಕೆಂಪು ಬಸ್ ಹತ್ತಿಯೇ ಬಿಟ್ಟೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

8

ನೋಡನೋಡುತ್ತಿದ್ದಂತೆಯೇ ಏಳನೇ ತರಗತಿಯ ಪರೀಕ್ಷೆಗಳು ಬಂದೇ ಬಿಟ್ಟವು. ನನ್ನ ಚಿಕ್ಕಜ್ಜ , ಪಾಪ, ನಾನು ಪರೀಕ್ಷೆಗೆ ಕಷ್ಟಪಟ್ಟು ಓದುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದರೆ ನಾನು ಪುಸ್ತಕಗಳ ಒಳಗೆ ಮರೆಸಿಟ್ಟುಕೊಂಡಿದ್ದ ಮ್ಯಾಚಸ್ ಚಿತ್ರಗಳನ್ನು ಎಣಿಸುತ್ತಾ ‘ನನ್ನ ಬಳಿ ಇರುವಷ್ಟು ಮ್ಯಾಚಸ್ ಗಳು ಯಾರ ಬಳಿಯೂ ಇಲ್ಲ’ ಎಂದು ಸಂಭ್ರಮ ಪಟ್ಟುಕೊಳ್ಳುತ್ತಿದ್ದೆ.

ಪರೀಕ್ಷೆಗಳು ಶುರುವಾದವು. ಗಣಿತದ ಪರೀಕ್ಷೆಯ ದಿನವಂತೂ ನನ್ನ ಬದುಕಿನ ಅತ್ಯಂತ ಕರಾಳ ದಿನ. ಪ್ರಶ್ನೆಪತ್ರಿಕೆಯ ತಲೆ ಬುಡ ಒಂದೂ ತಿಳಿಯದೆ ತೋಚಿದ ಒಂದಷ್ಟು ಗೀಚಿ ಪೇಪರ್ ಕೊಟ್ಟು ಯುದ್ಧ ಗೆದ್ದವನಂತೆ ಹೊರನಡೆದೆ. ಇನ್ನೇನು ಕೊಠಡಿ ದಾಟಬೇಕು, ಅಷ್ಟರಲ್ಲಿ ಮೇಲ್ವಿಚಾರಕರಾಗಿದ್ದ ಕರಿಟೋಪಿ ವೆಂಕಟೇಶಯ್ಯನವರು, ‘ಪ್ರಭೂ, ಬಾರೋ ಇಲ್ಲಿ ‘ಎಂದು ಪಿಸುದನಿಯಲ್ಲಿ ಕರೆದರು.

ಅಕ್ಕಪಕ್ಕ ನೋಡುತ್ತಾ ನನ್ನ ಉತ್ತರ ಪತ್ರಿಕೆ ತೋರಿಸಿ,’ ದಡ್ಡ ಮುಂಡೇದೇ, ಎಲ್ಲಾ ತಪ್ಪು ಬರ್ದಿದೀಯಲ್ಲೋ.. ಇದು ನೋಡು, ಇಲ್ಲಿ ತಪ್ಪಾಗಿದೆ.. ಹೀಗೆ ಬರಿ’ ಎಂದು ಅದೇನೋ ಹೇಳಿದರು. ಸುಮ್ಮನೆ ಪೆಚ್ಚುಪೆಚ್ಚಾಗಿ ಅವರ ಮುಖವನ್ನೇ ನೋಡುತ್ತಾ ನಿಂತೆ. ಅವರು ಸರಿ ಉತ್ತರ ಹೇಳಿಕೊಟ್ಟರೂ ನನಗೆ ಅದನ್ನು ಬರೆಯಲು ಬರಬೇಕಲ್ಲಾ! ‘ಅಯ್ಯೋ.. ದೇವರೇ ಕಾಪಾಡಬೇಕು ನಿನ್ನ’ ಎಂದು ಹತಾಶೆಯಿಂದ ನುಡಿದು ನನ್ನ ಕೈಯಿಂದ ಪೇಪರ್ ತೆಗೆದುಕೊಂಡು ಸುತ್ತಮುತ್ತ ಗಮನಿಸುತ್ತಾ ತಾವೇ ಒಂದಷ್ಟು ತಿದ್ದಿದರು. ಅಬ್ಬಾ! ಎಷ್ಟು ಒಳ್ಳೇ ಮೇಷ್ಟ್ರು ಎಂದು ನಾನು ಮನಸ್ಸಿನಲ್ಲೇ ಅವರನ್ನು ಕೊಂಡಾಡುತ್ತಿದ್ದೆ. ತಿದ್ದಿದ ಮೇಲೆ ನನ್ನ ಪೇಪರ್ ಅನ್ನು ಬಂಡಲ್ ಗೆ ಸೇರಿಸಿ, ‘ಏನು ನೋಡ್ತಾ ನಿಂತೆ? ಕಡಿದು ಕಟ್ಟೆ ಹಾಕಿದ್ದಾಯ್ತಲ್ಲಾ.. ದಯಮಾಡಿಸು’ ಎಂದರು. ಪಾಸ್ ಆಗಿಯೇ ಬಿಡುತ್ತೇನೋ ಏನೋ ಎಂದು ಒಳಗೊಳಗೇ ಖುಷಿ ಪಟ್ಟುಕೊಳ್ಳುತ್ತಾ ಸಂತೆಮಾಳಕ್ಕೆ ಓಡಿದೆ.

ಪರೀಕ್ಷೆ ಮುಗಿದ ತಿಂಗಳಿಗೋ ಏನೋ ಫಲಿತಾಂಶಗಳು ಬಂದವು. ನಾನು ಎಲ್ಲಾ ವಿಷಯಗಳಲ್ಲೂ ಜಸ್ಟ್ ಪಾಸ್! ಕನ್ನಡದಲ್ಲಿ ಮಾತ್ರ 60ಕ್ಕೂ ಹೆಚ್ಚು ಅಂಕಗಳು ಬಂದಿದ್ದವು. ತಾಯಿ ಶಾರದೆಯ ಆಣೆಯಾಗಿ ಒಂದು ದಿನವೂ ಪುಸ್ತಕ ತೆರೆದು ಓದದಿದ್ದ ನಾನು ಪಾಸ್ ಆಗಿದ್ದು ಬಲು ದೊಡ್ಡ ಪವಾಡ!

ಕೊಣನೂರಿನಲ್ಲೇ ಬಿಟ್ಟರೆ ವಿದ್ಯೆ ನೈವೇದ್ಯವಾಗಿ ಶುದ್ಧಶುಂಠನಾಗಿ ಪೋಲಿ ಬಿದ್ದು ಹೋಗುತ್ತಾನೆ ಇವನು ಅನ್ನುವುದು ಅಣ್ಣನಿಗೆ ಮನವರಿಕೆಯಾಗಿ ಹೋಯಿತೆಂದು ತೋರುತ್ತದೆ; ಹೈಸ್ಕೂಲ್ ಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದೆಂದು ತೀರ್ಮಾನ ಮಾಡಿಬಿಟ್ಟರು. ನನಗೋ ಸಂಭ್ರಮವೋ ಸಂಭ್ರಮ! ಚಿಕ್ಕಜ್ಜ-ಅಜ್ಜಿಯರ ಪ್ರೀತಿ ಹಾಗೂ ನಾಗೇಶನ ಸ್ನೇಹದ ಹೊರತಾಗಿ ಬೇರೆ ಯಾವ ಆಕರ್ಷಕ ಸಂಗತಿಗಳೂ ಕೊಣನೂರಿನಲ್ಲಿ ನನ್ನ ಪಾಲಿಗಿರಲಿಲ್ಲ.

ಒಂದು ಶುಭ ದಿನದ ಶುಭ ಮುಹೂರ್ತದಲ್ಲಿ ನಾನು ಬೆಂಗಳೂರೆಂಬ ಮಾಯಾನಗರಿಗೆ ಹೋಗಲು ಕೆಂಪು ಬಸ್ ಹತ್ತಿಯೇ ಬಿಟ್ಟೆ. ತಲೆಯ ತುಂಬಾ ಒಂದೇ ನಿರಂತರ ಯೋಚನೆ: ದೊಡ್ಡ ಪಟ್ಟಣವಾದ ಬೆಂಗಳೂರಿನಲ್ಲಿ ಎಷ್ಟು ತರಹೇವಾರಿ ಮ್ಯಾಚಸ್ ಗಳು ಸಿಗಬಹುದು! ಆ ಆಲೋಚನೆಯೇ ಇನ್ನಿಲ್ಲದ ರೋಮಾಂಚನವನ್ನುಂಟು ಮಾಡುತ್ತಿತ್ತು!

ಬೆಂಗಳೂರಿನಲ್ಲಿ ಆಗ ನಮ್ಮ ಮನೆ ಇದ್ದದ್ದು ಚಾಮರಾಜಪೇಟೆಯ ಮೊದಲನೇ ಮುಖ್ಯರಸ್ತೆಯಲ್ಲಿ. ಅಯ್ಯರ್ ಅವರ (ಪೂರ್ಣ ಹೆಸರು ಮರೆತಿದ್ದೇನೆ) ದೊಡ್ಡಮನೆಯ ಔಟ್ ಹೌಸ್ ನಲ್ಲಿ ನಾವಿದ್ದದ್ದು. ನಮ್ಮ ಮನೆಗೆ ಬರಲು ಬಳಸಿಕೊಂಡು ಹಿಂಭಾಗದ ರಸ್ತೆಯಿಂದ ಬರಬೇಕಿತ್ತು. ರಸ್ತೆಯ ಈ ಬದಿಗೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಪುಟ್ಟಮನೆ; ಆ ಬದಿಗೆ ರಫೀಕ್.. ಅಬ್ದುಲ್ಲಾ.. ಖಾನ್ ಸಾಹೇಬರುಗಳ ಕೇರಿ. ಬಂದ ಕೆಲದಿನಗಳಂತೂ ಹೊಸ ವಾತಾವರಣಕ್ಕೆ, ಹೊಸ ರೀತಿಯ ಬದುಕಿಗೆ ಹೊಂದಿಕೊಳ್ಳಲು ಕಷ್ಟವೇ ಆಯಿತು. ನಮ್ಮ ಮನೆಯಲ್ಲಿದ್ದವರು ನಾವು ಐವರು: ಅಣ್ಣ, ಅಮ್ಮ, ನಳಿನಿ ಅಕ್ಕ, ಕುಮಾರಣ್ಣಯ್ಯ ಮತ್ತು ನಾನು.

ನಾನು ಬೆಂಗಳೂರಿಗೆ ಬಂದಮೇಲೆ ನನ್ನ ತಂಗಿ ಪದ್ಮಿನಿಯನ್ನು ತಮ್ಮ ಜತೆಗಿರಲು ಚಿಕ್ಕಜ್ಜ ಕೊಣನೂರಿಗೆ ಕರೆದುಕೊಂಡು ಹೋಗಿದ್ದರು. ಇಷ್ಟು ವರ್ಷ ನಮ್ಮ ಜತೆಗಿರದೆ ಹೊರಗಿದ್ದವನು ಎಂದು ಮನೆಯವರೆಲ್ಲರೂ ನನ್ನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದರು. ಹಾಗೆ ನೋಡಿದರೆ ನಮ್ಮ ಕುಟುಂಬದ ಮೂಲದ್ರವ್ಯವೇ ಈ ಪ್ರೀತಿ, ಅಕ್ಕರೆ, ಕಾಳಜಿ. ಐದು ಬೆರಳುಗಳು ಮುಷ್ಠಿಯೊಳಗೆ ಭದ್ರವಾಗಿ ಸುರಕ್ಷಿತವಾಗಿ ಇರುವಂತೆ ತಮ್ಮ ಐದು ಮಕ್ಕಳನ್ನೂ ಪ್ರೀತಿ-ವಾತ್ಸಲ್ಯಗಳ ಭದ್ರಕೋಟೆಯಲ್ಲಿ ಜತನದಿಂದ ಬೆಳೆಸಿದವರು ಅಣ್ಣ-ಅಮ್ಮ.

ಸೂರೆಹೋಗುವ ಯಾವ ಸಿರಿವಂತಿಕೆಯೂ ಇಲ್ಲದೆ ಬಡತನದಲ್ಲೇ ಬದುಕಿನ ಬಂಡಿಯನ್ನು ಎಳೆಯಬೇಕಿದ್ದರೂ ಎಂದೂ ಯಾರಿಗೂ ಯಾವ ಕೊರತೆಯನ್ನೂ ಮಾಡಿದವರಲ್ಲ ಅಣ್ಣ. ಕೊಣನೂರಿನ ಸ್ವಚ್ಛಂದ ಬಯಲಿನಿಂದ ಶಿಸ್ತಿನ ಬದುಕಿಗೆ ಏಕಾಏಕಿ ಬಂದು ಸೇರಿದ್ದು ಪ್ರಾರಂಭದ ತಲ್ಲಣಗಳಿಗೆ ಕಾರಣವಾದರೂ ಎಲ್ಲರ ಪ್ರೀತಿ-ಕಾಳಜಿಗಳ ಸೆಲೆಯಲ್ಲಿ ಮಿಂದವನಿಗೆ, ‘ಅರೆ! ನನ್ನ ಗೂಡಿಗೆ ನಾನು ಬಂದು ಸೇರಿದ್ದೇನೆ’ ಎನ್ನಿಸಿ ಮನಸ್ಸು ನಿರಾಳವಾಗತೊಡಗಿತು.

ನಾಲ್ಕಾರು ದಿನ ಕಳೆದ ಮೇಲೆ ಅಣ್ಣ ನನ್ನನ್ನು ಚಾಮರಾಜಪೇಟೆಯಲ್ಲೇ ಇದ್ದ ಮಾಡೆಲ್ ಹೈಸ್ಕೂಲ್ ಗೆ ಕರೆದುಕೊಂಡು ಹೋದರು-ಎಂಟನೇ ತರಗತಿಗೆ ಸೇರಿಸಲು. ಆ ಸ್ಕೂಲ್ ನಲ್ಲಿಯೇ ಕುಮಾರಣ್ಣಯ್ಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ತುಂಬಾ ಒಳ್ಳೆಯ ವಿದ್ಯಾರ್ಥಿ, ಜಾಣ ಹುಡುಗ ಎಂದೆಲ್ಲಾ ಹೆಸರು ತೆಗೆದುಕೊಂಡಿದ್ದ. ಅಣ್ಣ ನನ್ನನ್ನು ಹೆಡ್ ಮಾಸ್ತರರ ಬಳಿ ಕರೆದುಕೊಂಡು ಹೋಗಿ ಎಂಟನೇ ತರಗತಿಗೆ ಭರ್ತಿ ಮಾಡಿಸಿಕೊಳ್ಳುವಂತೆ ಕೇಳಿಕೊಂಡರು. ಆಗ ನನಗೆ ವಾಸ್ತವವಾಗಿ 11ವರ್ಷ 5 ತಿಂಗಳು.

ದಾಖಲೆಗಳ ಪ್ರಕಾರ 13 ದಾಟಿತ್ತು! ‘ಓ, ಕುಮಾರನ ತಮ್ಮನೇ.. ಒಳ್ಳೇದು ಒಳ್ಳೇದು’ ಎಂದು ಸಾಕಷ್ಟು ಉತ್ಸಾಹದಿಂದಲೇ ಮಾತಾಡಿಸಿದರು ಹೆಡ್ ಮಾಸ್ತರರು. ‘ಕುಮಾರನಂಥ ವಿದ್ಯಾರ್ಥಿಗಳಿದ್ದುಬಿಟ್ಟರೆ ನಮಗೆ ಚಿಂತೇನೇ ಇಲ್ಲ ಬಿಡಿ.. ಅಂಥ ಮಕ್ಕಳಿಗೆ ಪಾಠ ಹೇಳಿಕೊಡೋದೇ ಒಂದು ಸುಖ’ ಎಂದೆಲ್ಲಾ ಸಂಭ್ರಮದಿಂದ ಮಾತಾಡುತ್ತಾ ನನ್ನ 7ನೇ ತರಗತಿಯ ಅಂಕಪಟ್ಟಿಯನ್ನು ಕೈಗೆತ್ತಿಕೊಂಡರು. ಅದನ್ನು ನೋಡುತ್ತಲೇ ಅವರಿಗೆ ಶಾಕ್ ಹೊಡೆದಂತಾಗಿ ಮುಖ ಕಪ್ಪಿಟ್ಟುಹೋಯಿತು. ‘ಅಯ್ಯಯ್ಯೋ!! ಇದೇನು ಶಾಸ್ತ್ರಿಗಳೇ ಇಷ್ಟು ಕಮ್ಮಿ ಮಾರ್ಕ್ಸ್ ತೊಗೊಂಡಿದಾನೆ! ಯಾವ ಧೈರ್ಯದ ಮೇಲೆ ಇವನಿಗೆ ಸೀಟ್ ಕೊಡಲಿ? ಮ್ಯಾನೇಜ್ ಮೆಂಟ್ ನವರಾದ್ರೂ ಒಪ್ತಾರೆಯೇ? ಅಯ್ಯೋ! ಕುಮಾರನ ತಮ್ಮನೂ ಅವನ ಹಾಗೇ ಜಾಣ ಅಂದುಕೊಂಡಿದ್ದೆ… ಇದು ನೋಡಿದರೆ ತೀರಾ ಎಡವಟ್ಟೇ!!’ ಎಂದು ಒಂದೇ ಸಮ ಹಲುಬತೊಡಗಿದರು.

ನನಗೆ ಒಳಗೊಳಗೇ ಸಿಟ್ಟು.. ‘ನೀವು ಸೀಟ್ ಕೊಡದಿದ್ರೆ ಕತ್ತೆಬಾಲ! ಆರಾಮಾಗಿ ಊರೆಲ್ಲಾ ಸರ್ಕೀಟ್ ಹೊಡಕೊಂಡು ಮ್ಯಾಚಸ್ ಆರಿಸಿಕೊಂಡು ಜಾಲಿಯಾಗಿರ್ತೀನಿ ಬಿಡ್ರಿ ರೀ’ ಎಂದು ಮನಸಲ್ಲೇ ಲೆಕ್ಕಾಚಾರ ಹಾಕಿಕೊಂಡದ್ದು ಸುಳ್ಳಲ್ಲ. ‘ಇಲ್ಲ ಸ್ವಾಮೀ.. ನಮ್ಮ ಪ್ರಭೂನೂ ತುಂಬಾ ಜಾಣಾನೇ..ˌಹಳ್ಳಿಯಲ್ಲಿ ಓದಿದ್ದಲ್ಲವಾ… ಹಳ್ಳಿಯ ವಿದ್ಯಾಭ್ಯಾಸದ ಮಟ್ಟ ನಿಮಗೆ ಗೊತ್ತಿಲ್ಲದ್ದೇ? ನೀವು ಚಿಂತೆ ಮಾಡಬೇಡಿ. ಅವನು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಒಳ್ಳೇ ವಿದ್ಯಾರ್ಥಿ ಅನ್ನಿಸಿಕೋತಾನೆ.. ದೊಡ್ಡಮನಸ್ಸು ಮಾಡಿ ಸೇರಿಸಿಕೊಳ್ಳಿ’ ಎಂದು ಅಣ್ಣ ಪರಿಪರಿಯಾಗಿ ಕೇಳಿಕೊಂಡರು.

ಪಾಪ, ಅಣ್ಣನಿಗೆ ಅಂದು ನಿಜಕ್ಕೂ ತುಂಬಾ ಕಷ್ಟವಾಗಿದ್ದಿರಬೇಕು… ತಾವೇ ಸ್ವತಃ ಅಷ್ಟು ದೊಡ್ಡ ವಿದ್ವಾಂಸರಾಗಿದ್ದುಕೊಂಡು ‘ಮಗನಿಗೆ ಓದಲು ಸೀಟ್ ಕೊಡಿ’ ಎಂದು ಜೀವವನ್ನು ಹಿಡಿಮಾಡಿಕೊಂಡು ಕೇಳಿಕೊಳ್ಳಬೇಕೆಂದರೆ ಅದೆಂಥಾ ಯಾತನೆ ಅನುಭವಿಸಿದ್ದಿರಬೇಕು ಅವರು… ಅಂತೂ ಹೆಡ್ ಮಾಸ್ತರರು ಒಲ್ಲದ ಮನಸ್ಸಿನಿಂದಲೇ ನನಗೆ ಕನ್ನಡ ಮೀಡಿಯಂನಲ್ಲಿ ಓದಲು ಅವಕಾಶ ಕೊಟ್ಟು ಶಾಲೆಗೆ ಸೇರಿಸಿಕೊಂಡರು. ಅಣ್ಣನಿಗೆ ಒಂದು ದೊಡ್ಡ ಹೊರೆ ಇಳಿದ ಭಾವ.

ಒಂದೆರಡು ದಿನಗಳಲ್ಲೇ ತರಗತಿಗಳು ಪ್ರಾರಂಭವಾದವು. ರಾಮೇಶ್ವರನ ಗುಡಿಯ ಆವರಣದಲ್ಲಿದ್ದ ಕೊಠಡಿಗಳಲ್ಲಿ ನಮ್ಮ ತರಗತಿಗಳು ನಡೆಯುತ್ತಿದ್ದವು. ಮನೆಯಿಂದ ನಡೆದೇ ಹೋಗುವಷ್ಟು ದೂರದಲ್ಲಿದ್ದ ಶಾಲೆಗೆ ನಾನು ಕುಮಾರಣ್ಣಯ್ಯನ ಜತೆ ಹೋಗುತ್ತಿದ್ದೆ. ಹಣೆಯ ಮೇಲೆ ಢಾಳಾಗಿ ಮೂರು ಪಟ್ಟೆ ವಿಭೂತಿ ಎಳೆದು ಭ್ರೂ ಮಧ್ಯೆ ಕುಂಕುಮ ಧರಿಸಿ ಚೀಲ ಹೆಗಲಿಗೇರಿಸಿ ಹೊರಟೆವೆಂದರೆ ದಾರಿಯಲ್ಲಿ ಎಲ್ಲರೂ ತಿರುಗಿ ನೋಡುವವರೇ! ನಿಧಾನವಾಗಿ ಬೆಂಗಳೂರಿಗೆ, ಸ್ಕೂಲ್ ವಾತಾವರಣಕ್ಕೆ ಹೊಂದಿಕೊಂಡೆ. ಆದರೂ ಗಣಿತ ಮತ್ತು ಇಂಗ್ಲೀಷ್ ಅಂದರೆ ಸಾಕು, ತಲೆ ಸುತ್ತಿ ಬರುತ್ತಿತ್ತು. ಥೂ! ಯಾರಾದರೂ ಯಾಕಾದರೂ ಈ ವಿಷಯಗಳನ್ನು ಕಂಡುಹಿಡಿದರೋ! ಶಾಲೆಯಲ್ಲಿ ಮೇಷ್ಟ್ರು, ಮನೆಯಲ್ಲಿ ಅಕ್ಕ-ಅಣ್ಣಯ್ಯ ಎಷ್ಟು ಹೇಳಿಕೊಟ್ಟರೂ ಸುಡುಗಾಡು ಗಣಿತ ಮಾತ್ರ ತಲೆಗೆ ಹತ್ತುತ್ತಲೇ ಇರಲಿಲ್ಲ. ಉಳಿದ ವಿಷಯಗಳ ಬಗ್ಗೆ ಹೇಳುವುದಾದರೆ ಅವು ಅಷ್ಟೇನೂ ತೊಂದರೆ ಕೊಡುತ್ತಿರಲಿಲ್ಲ.

ವಿಷಯಗಳು ಅರ್ಥವಾಗಿ ತಲೆಗೆ ಇಳಿಯದಿದ್ದರೂ ಚೆನ್ನಾಗಿ ಉರು ಹೊಡೆದು ಬರೆದುಬಿಡುತ್ತಿದ್ದೆ. ಗಣಿತ ಮಾತ್ರ ಪರಮಶತ್ರುವಾಗಿ ಕಾಡುತ್ತಿತ್ತು. ಹಳ್ಳಿಯಿಂದ ಬಂದವನಾದ್ದರಿಂದ ಇಂಗ್ಲೀಷ್ ಜ್ಞಾನ ಇರಲೇ ಇಲ್ಲ ಎಂದರೂ ತಪ್ಪಾಗದು. ಬಹುಶಃ ವರ್ಣಮಾಲೆಯೊಂದು ಬರುತ್ತಿತ್ತೇನೋ… ಏನೇ ಆಗಲಿ, ಇಂಗ್ಲೀಷ್ ಬಾರದ ಕಾರಣಕ್ಕೆ ಅನುಭವಿಸಿದ ಕೀಳರಿಮೆ ಮಾತ್ರ ತುಂಬಾ ಯಾತನಾಮಯವಾದ್ದು. ಆ ಕಾಲದ ನನ್ನಂಥಾ ಹಳ್ಳಿಮುಕ್ಕಗಳೆಲ್ಲರ ಹಣೇಬರಹವೂ ಅದೇ ಆಗಿತ್ತು ಅಂದರೆ ಅತಿಶಯೋಕ್ತಿಯಲ್ಲ.

ಕ್ಲಾಸ್ ನಲ್ಲಿ ಇಂಗ್ಲೀಷ್ ನಲ್ಲಿ ಏನಾದರೂ ಪ್ರಶ್ನೆ ಕೇಳಿಬಿಟ್ಟರೆ ಉತ್ತರಿಸಲು ವಿಪರೀತ ಸಂಕೋಚವಾಗುತ್ತಿತ್ತು. ಅಕಸ್ಮಾತ್ ಉತ್ತರ ತಪ್ಪಾಗಿಬಿಟ್ಟರೆ? ಎಲ್ಲರೂ-ಅದರಲ್ಲೂ ವಿಶೇಷವಾಗಿ ಹುಡುಗಿಯರು—ನಕ್ಕುಬಿಟ್ಟರೆ? ಆ ಅವಮಾನವನ್ನು ಅನುಭವಿಸುವುದಕ್ಕಿಂತ ತೆಪ್ಪಗಿದ್ದುಬಿಡುವುದೇ ಕ್ಷೇಮ! ಅದಕ್ಕೇ ಇಂಗ್ಲೀಷ್ ಮೇಡಂ ಏನು ಕೇಳಿದರೂ ‘I don’t know miss’ ಎಂದು ಹೇಳಿ ಕೂತು ಬಿಡುತ್ತಿದ್ದೆ. ಒಮ್ಮೆಯಂತೂ ಆ ಮೇಡಂ ‘What do you know?’ಎಂದು ಸಿಡುಕಿದ್ದರು. ನಾನು ಮತ್ತೆ ನಿರುತ್ತರ. ಏನು ಹೇಳಬೇಕೆಂದು ಗೊತ್ತಿದ್ದರೆ ತಾನೇ?

ಶಾಲೆಯಲ್ಲಿ ಅಣ್ಣಯ್ಯ ಸಾಕಷ್ಟು ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಎಲ್ಲರೆದುರಿಗೆ- ಅದರಲ್ಲೂ ಅಷ್ಟೊಂದು ಹೆಣ್ಣುಮಕ್ಕಳ ಎದುರು ನಿಂತು ವಾದ ಮಂಡಿಸುವುದು ನನಗಂತೂ ಪರಮ ಸೋಜಿಗದ ಸಂಗತಿಯಾಗಿತ್ತು. ಅಣ್ಣಯ್ಯನ ಬಲವಂತಕ್ಕೆ ನಾನೂ ಒಂದಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗುತ್ತಿತ್ತು. ಸ್ಟೇಜ್ ಮೇಲೆ ಹೋದರೆ ಸಾಕು, ಗಂಟಲ ದ್ರವ ಒಣಗಿ ಕೈಕಾಲು ನಡುಗಿ ಭೂಮಿಯಾದರೂ ಬಾಯಿ ಬಿಡಬಾರದೇ ಅನ್ನಿಸಿಬಿಡುತ್ತಿತ್ತು. ಮನೆಯಲ್ಲಿ ಅಣ್ಣಯ್ಯ-ಅಕ್ಕ ನನಗೆ ಅಭ್ಯಾಸ ಮಾಡಿಸುತ್ತಿದ್ದರು. ಪದೇ ಪದೇ ಹೀಗೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರೆ ಸಭಾಕಂಪನ ದೂರವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ತಿಳಿಹೇಳುತ್ತಿದ್ದರು.

ಒಮ್ಮೆ ಕನ್ನಡ ಪದ್ಯ ವಾಚನ ಸ್ಪರ್ಧೆಯಲ್ಲಿ ‘ಯೆಂಡ್ಕುಡ್ಕ ರತ್ನ’ನ ಪದವನ್ನು ಚೆನ್ನಾಗಿಯೇ ವಾಚಿಸಿದ್ದರೂ ಬಹುಮಾನ ಬರಲಿಲ್ಲ. ಬಹುಮಾನ ಬಂದೇ ಬರುತ್ತದೆ ಎಂದು ನಿರೀಕ್ಷಿಸಿದ್ದ ಕುಮಾರಣ್ಣಯ್ಯನಿಗೆ ವಿಪರೀತ ನಿರಾಸೆಯಾಗಿ, ‘ಯಾಕೆ ಸಾರ್ ನನ್ನ ತಮ್ಮನಿಗೆ ಪ್ರೈಜ಼್ ಕೊಡಲಿಲ್ಲ? ಎಷ್ಟು ಚೆನ್ನಾಗಿ ಹೇಳಿದ್ದ!’ ಎಂದು ತೀರ್ಪುಗಾರರನ್ನು ಕೇಳಿಯೇ ಬಿಟ್ಟಿದ್ದ. ‘ಅವನು ಕುಡುಕನ ಥರಾ ಹೇಳಬೇಕಾಗಿತ್ತು ಕಣಯ್ಯಾ.. ಹೇಳಲಿಲ್ಲ…. ಅದಕ್ಕೇ ಪ್ರೈಜ಼್ ಕೊಡಲಿಲ್ಲ’ ಅಂದಿದ್ದರು ಶರ್ಮಾ ಸರ್. ಅವರ ಆ ಮಾತು ಅರ್ಥವಾಗಿ ಮನದಟ್ಟಾಗಲು ಹಲವು ವರ್ಷಗಳೇ ಬೇಕಾದವು!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: