ಟೆಲಿವಿಶನ್ ಎಂಬ ದೇವರು

ತಿಜಾನ್ ಸಲ್ಲಾ

ಅಮೆರಿಕಾದಲ್ಲಿ
ಟೆಲಿವಿಶನ್ ಬಹು ದೊಡ್ಡ ದೇವತೆ.
ಅದಕ್ಕೆ ಅದರದೇ ಅರ್ಚಕರು, ಅರ್ಚಕಿಯರು.
ಯಾರಿಗೂ ಯಾರೊಂದಿಗೂ ಸಂಭಾಷಣೆಗೆ ಸಮಯವಿಲ್ಲ, ಬೇಕಿಲ್ಲ.
ಮೇಲುವರ್ಗದ ಸುಖದ ಎಲ್ಲ ಕಲ್ಪನೆಯನ್ನೂ
ಟೆಲಿವಿಶನ್ ರಿಮೋಟ್ ಕಟ್ಟುತ್ತದೆ, ಕಂಟ್ರೋಲ್ ಮಾಡುತ್ತದೆ.
‘ನನ್ನ ಮನೆಯಂಗಳದ ಕಿಟಕಿಯಿಂದ ಕಾಣುವ ಡೈಸಿ ಹೂಗಳು,
ಸೂರ್ಯನ ಬೆರಳುಗಳಂತೆ ನೀಳವಾದ ಹಳದಿ ಮುದ್ದುಗಳು
ಅವು ಯಾಕೆ ಯಾರೂ ನೋಡದೆ, ಯಾರೂ ಮೂಸದೆ ನೋವಿನಲ್ಲಿ ಅದ್ದಿವೆ?
ಅಕ್ಕರೆಗಳಿಸುವ ಸ್ಪರ್ಧೆಯಲಿ ಅವು ಹೀನಾಯವಾಗಿ ಸೋತವೆ?’

ಟೆಲಿವಿಶನ್ ತನ್ನ ಗರ್ಭಗುಡಿಯಲ್ಲಿ
ಎಲ್ಲರನ್ನೂ ಸೆರೆಹಿಡಿದಿದೆ.
ತರುಣ ತರುಣಿಯರು ಹೊಗಳಿಕೆಯ ಮಳೆ ಸುರಿಸುತ್ತಾರೆ
ಹಾಲಿವುಡ್ಡಿನ ಪವಿತ್ರ ಪೂರ್ವಜರ ನೆನಪುಗಳಿಗೆ.
ಹಸುಳೆಗಳು ಅಂಬೆಗಾಲಿಡುವ ಮೊದಲೇ
ಅದರ ಮಾತುಗಳನ್ನು ಕಲಿಯುತ್ತವೆ.
ಟೆಲಿವಿಶನ್ನಿಗೆ ತನ್ನದೇ ಬಾಗು, ತನ್ನದೇ ಬಳುಕು
ತನ್ನದೇ ಆಕರ್ಷಣೆ.

ಹಿರಿಯರು ಅದರ ಸುತ್ತಾ ನಿಶ್ಚಿಂತರಾಗಿ ಕೂಡುತ್ತಾರೆ ಚಿಪ್ಸು ತಿನ್ನುತ್ತಾ
ಈ ನಿಶ್ಚಲ ದೇವರು ಕೊಬ್ಬು ಬೆಳೆಸುತ್ತಾನೆ
ಅವರ ಸೊಂಟದ ಸುತ್ತಾಮುತ್ತಾ.

ಮತ್ತು ಮಕ್ಕಳು ಹೇಳುತ್ತಾರೆ:
‘ಎಡ್ಡಿ ಮರ್ಫಿ ಬೇಡವೇ
ಎಂಥ ಚೆಂದದ ಹುಡುಗ!
ಅಹ ಅಹಾ ಮೆಡೋನಾ
ಎದೆ ಸೊಂಟ ನೋಡೋಣ!’

ತಾಯಂದಿರಿಗೋ ಅಚ್ಚರಿ:
‘ಮಕ್ಕಳೇಕೆ ಹಿಂದುಳಿದರು ಶಾಲೆಯ ಲೆಕ್ಕದಲಿ
ಕೋತಿಗಿಂತ ಕಡೆ ಅವರು ಕಲಿಸಿದ ಪಾಠದಲಿ’
ಮತ್ತೆ ಅನುಮಾನವೇಕೆ?
ಟೆಲಿವಿಷನ್, ಅದು ದೇವತೆಗಳ ದೇವತೆ
ಅಂಥ ದೇವತೆಗಳಿಗೆ, ಅವರ ತಲೆಬಾಗಿದ ಭಕ್ತರ ಹೃದಯಮಂದಿರಗಳಲ್ಲಿ ವಿಶೇಷ ಸ್ಥಾನ ಮೀಸಲಾಗಿದೆ.
ಮೇಲಾಗಿ ಅದು ಮಾತನಾಡುವ ದೇವತೆ.
ಅದು ಹೊರಸೂಸುವ ಭಾವನೆಗಳಿಗೆ, ಆಲೋಚನೆಗಳಿಗೆ
ಕ್ರಿಯೆಗಳಿಗೆ ಸಿಹಿನೊರೆಯ ಅಂಟಿದೆ. ಒಗೆದ ಬಟ್ಟೆಗಳನ್ನು ಟ್ರಿಮ್ ಮಾಡುವ
ಸ್ಟಾರ್ಚಿನ ಹಾಗೆ. ಅದು ಗರಿಗರಿಯಾಗಿದೆ, ಮಿರುಮಿರುಗುತ್ತಿದೆ.
‘ಇಡಿಇಡೀ ಲೋಕವನ್ನು ಕುರಿತ ಪರಮ ಸತ್ಯ, ಚರಮಸತ್ಯ ಬೇಕೆ ಬೇಕೆ ನಿಮಗೆ?
ಕೇಳಿರಿ, ಕೇಳಿರಿ ನಮ್ಮ ವಿಶೇಷ ತಜ್ಞರ ಬಗೆಬಗೆ ಬಣ್ಣದ ಕಾಮೆಂಟರಿ.

ಬೇರೆ ಸತ್ಯಗಳು ಯಾಕೆ ಬೇಕರಿ? ಯಾರಿಗೆ ಬೇಕರಿ?’
ಈ ಮಾಟಗಾತಿಯ ಪೂಜಾರಿಗಳು:
ನಂಬಲು ಬಯಸುವ ಹುಂಬರ ಮುಂದುಗಡೆ
ರುಚಿರುಚಿ ಸುದ್ದಿಯ ತಿಂಡಿ ತಂದಿಡುವ ಸೂಟುಬೂಟುಗಳ ಸೇವಕರು,
ತಿನ್ನುವ ನಾವೂ ಭಾವುಕರು.
ಇನ್ನೂ ಬೇಕೇ ಥ್ರಿಲ್ಲು, ತಿನ್ನಿರಿ ಹಾಲೀವುಡ್ಡಿನ ಹುಲ್ಲು.
ಅದಕೂ ಅದರದೆ ವಕೀಲರು, ಹೊಗಳುವ ಉಗುಳುವ ಅರ್ಚಕರು:
‘ಪೋಪ್ ಜಾನಿ ಕಾರ್ಸನ್ ಅವರೇ,
ತಮ್ಮ ಪವಿತ್ರ ನಾಮವು ಸದಾ ಗುಂಯ್ಗುಡುತ್ತಿರಲಿ.’
‘ಕಿಂಗ್ ಕಾಂಗ್ ಅವರು ಆಗಮಿಸಿದರೇ?
ಜಗತ್ತಿನಲ್ಲಿ ಅವರ ಇಚ್ಛೆಯೇ ನೆರವೇರಲಿ.’
ಇದು ಮೇಲುವರ್ಗದವರ ನೋಟ. ಆದ್ದರಿಂದಲೇ
ಅದರ ಪೂಜಾರಿಗಳು ಮತ್ತು ಪೂಜಾರಿಣಿಯರು
ಹೊಳೆಹೊಳೆಯುವ ಚಿನ್ನ ವಜ್ರಗಳಲ್ಲಿ, ನುಣುಪು ರೇ಼ಷಿಮೆಯ ಪೋಷಾಕುಗಳಲ್ಲಿ
ಅಲಂಕೃತರಾಗಿರುತ್ತಾರೆ. ಸರಿ, ಅವರ ಉಪದೇಶಗಳು ಮೊದಲಾಗುತ್ತವೆ..
ಇದು ಎಪಿಕ್ಯೂರಸ್ ಗೆ ಅರ್ಪಿಸಿದ ಪ್ರಾರ್ಥನೆ:
ಸುಖವೇ ಸಂತೋಷವೇ ಇಲ್ಲಿ ಗುರಿ ಮತ್ತು ದಾರಿ.
ಅಮೆರಿಕಾದಲ್ಲಿ ಟೆಲಿವಿಷನ್ನೇ ದೇವರು.
ನರಳುವ ಹೃದಯಗಳಿಗೆ ಇವರೇ ವೈದ್ಯರು.
ಮತ್ತೆಮತ್ತೆ ಬರುವ, ಕಣ್ಣಿಗೆ ಸಾಂತ್ವನಕೊಡುವ
ಪ್ರಳಯದ ಹಾಗೆಯೆ ಬದಲಿಸುವ
ಟೆಲಿವಿಷನ್ ಸಾಹೇಬರು.

‍ಲೇಖಕರು Admin

July 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: