ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪಿಕೆ' ನೆಪದಲ್ಲಿ ಒಂದು ಅಭಿಪ್ರಾಯ

– ಸೂರ್ಯಕಾಂತ ಬಳ್ಳಾರಿ


ಕೀಳು ಅಭಿರುಚಿಯ ಸಿನಿಮಾ, ಸಾಹಿತ್ಯಗಳ ಪ್ರಭಾವ ದಟ್ಟವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸದಭಿರುಚಿ ವೇಗವಾಗಿ ಅಧಃಪತನ ಹೊಂದುತ್ತಿದೆ. ಕಲಾಪ್ರಕಾರಗಳಲ್ಲೇ ಅತ್ಯಂತ ಪ್ರಭಾವಶಾಲಿಯಾದ ಸಿನಮಾ ಮಾಧ್ಯಮ ಕೇವಲ ಮನರಂಜನೆ ನೀಡದೇ ಪ್ರೇಕ್ಷಕರಲ್ಲಿ ಹೊಸ ದೃಷ್ಟಿಕೋನ ಮತ್ತು ಚಿಂತನೆಯ ಹುಟ್ಟಿಗೆ ಕಾರಣವಾಗಬಲ್ಲುದು. ನೋಡುಗನ ಮನಸ್ಸನ್ನು ಕಲಕಿ ಭಾವನಾತ್ಮಕ ಸಂವೇದನೆಯನ್ನು ಬಡಿದೆಬ್ಬಿಸುವ ಶಕ್ತಿ ಈ ಮಾಧ್ಯಮಕ್ಕಿದೆ.
ನಿರ್ಮಾಪಕ, ನಿರ್ದೇಶಕರಲ್ಲಿ ಸಮಾಜದ ಪ್ರಗತಿಯ ಬದ್ಧತೆ ಇಲ್ಲದೇ ಇದ್ದರೆ ಅದು ವ್ಯತಿರಿಕ್ತವಾದ ಪರಿಣಾಮಗಳನ್ನು, ಗೊಂದಲಗಳನ್ನೂ ಸೃಷ್ಟಿಸಬಲ್ಲುದು. ಪ್ರತಿಯೊಂದು ಕಲೆಯನ್ನು ಮಾರುಕಟ್ಟೆಯ ಲಾಭದ ದೃಷ್ಟಿಯಿಂದ ನೋಡುತ್ತಿರುವುದೇ ಕೀಳು ಅಭಿರುಚಿಯ ಸಿನಿಮಾಗಳ ನಿರ್ಮಾಣಕ್ಕೆ ಕಾರಣವಾಗಿದೆ. ಅಲ್ಲಲ್ಲಿ ಕೆಲವು ಆಶಾದಾಯಕ ಪ್ರಯತ್ನಗಳು ನಡೆದಿವೆ. ಹಿಂದೂ, ಮುಸ್ಲಿಂ ಧರ್ಮಗಳ ಕಂದಾಚಾರಗಳ ಆಚೆಯೂ ಮನುಷ್ಯ ಸಂಬಂಧ ದೊಡ್ಡದು ಎಂದು ಸಾರುವ ಭಾವನಾ ತಳವಾರ ನಿರ್ದೇಶಿಸಿರುವ ‘ಧರ್ಮ್’ , ಅಸ್ಪೃಶ್ಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಪ್ರದಾಯವಾದಿ ಮನಸ್ಸುಗಳೂ ಸೋಲೊಪ್ಪುವ ಪ್ರಕ್ರಿಯೆಯನ್ನು ಮನಮುಟ್ಟುವಂತೆ ಕಟ್ಟಿಕೊಡುವ ಸುಬೋದ್ ಘೋಷ್ ಕತೆಯಾಧಾರಿತ ಬಿಮಲ್ ರಾಯ್ ನಿರ್ದೇಶಿಸುವ ‘ಸುಜಾತಾ’, ‘ಸಂಸ್ಕಾರ’ಗಳಂತಹ ಸಿನಿಮಾಗಳು ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುವಂತಹವು. ರೂಢಿಗತ ಧಾರ್ಮಿಕ ಅಂಧಾಚರಣೆಗಳನ್ನು ಪ್ರಶ್ನಿಸುವ ಮತ್ತು ಮೂರ್ತಿಭಂಜನೆಯನ್ನು ಮಾಡುವ ಉಮೇಶ್ ಶುಕ್ಲಾ ನಿರ್ದೇಶನದ ‘ಓ ಮೈ ಗಾಡ್’’ಚಿತ್ರ ನೋಡುಗನ ಮೆಚ್ಚಿಗೆಗಳಿಸಿದ್ದು ಇತ್ತೀಚಿನ ಮತ್ತೊಂದು ಹೊಸ ಪ್ರಯತ್ನ.
ದೇವರು, ಧರ್ಮಗಳ ಹೆಸರಿನಲ್ಲಿ ಸಾಮಾನ್ಯ ಜನತೆಯ ಅಭದ್ರತೆಯ ಶ್ರದ್ಧೆಯನ್ನು ಸುಲಿಗೆ ಮಾಡಿ ನಗದೀಕರಣಮಾಡಿಕೊಳ್ಳುತ್ತಿರುವ ವ್ಯವಸ್ಥಿತ ಜಾಲವಿದೆ. ಈ ಸಮಸ್ಯೆಯನ್ನು ಎಲ್ಲ ಜಿಡ್ಡನ್ನು ಕಳಚಿಟ್ಟು ಪಕ್ಷಿನೋಟದಿಂದ ನೋಡಿದಾಗ ಮಾತ್ರ ಆಳವಾದ ಬೇರುಗಳನ್ನು ಬಿಟ್ಟಿರುವ ವಂಚಕ ಜಾಲದ ಅರಿವು ಮೂಡಲು ಸಾಧ್ಯ ಎಂಬುದನ್ನು ತೋರಿಸುವ ರಾಜಕುಮಾರ ಹಿರಾನಿ ನಿರ್ದೇಶನದ ‘ಪಿಕೆ’ ಒಂದು ಉತ್ತಮ ಚಿತ್ರ. ಅನ್ಯಗ್ರಹ ಜೀವಿಯ ದೃಷ್ಟಿಯಲ್ಲಿ ನಮ್ಮ ಆಚರಣೆಗಳು, ಧರ್ಮ ಕಾಣುವಂತಹ ರೀತಿ ಆಶ್ಚರ್ಯವನ್ನುಂಟುಮಾಡುತ್ತದೆ. ಪಿಕೆ ಎಂದರೆ ‘ಮೂರ್ಖ’ ಅಥವಾ ‘ಹುಚ್ಚ’ ಎಂಬಂತಹ ಅರ್ಥದಲ್ಲಿ ಕರೆಯಿಸಿಕೊಳ್ಳುವ ವ್ಯಕ್ತಿ ಜ್ಯೋತಿಷ್ಯ,ಧರ್ಮಾಧಾರಿತ ವೇಷಭೂಷಣಗಳು,ದೇಶಗಳ ಬಗ್ಗೆ ಇರುವ ಪೂರ್ವಾಗ್ರಹಗಳು, ಎಲ್ಲದಕ್ಕಿಂತ ಮೂಲಭೂತವಾಗಿ ಎಲ್ಲಾ ಧರ್ಮಗಳ ಪರ್ಸ್ತುತತೆಯನ್ನೇ ಪ್ರಶ್ನಿಸಿ ‘ಹೌದಲ್ವಾ’ ಎನ್ನುವ ಪ್ರಶ್ನೆಯನ್ನು ನಮ್ಮಲ್ಲೂ ಹುಟ್ಟು ಹಾಕುವ ಪ್ರಜ್ಞಾವಂತ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಮಡೆಸ್ನಾನದಂತಹ ಗೊಡ್ಡು ಆಚರಣೆಗಳನ್ನು ಸಮರ್ಥಿಸಿಕೊಳ್ಳುವ ಅಮಾನವೀಯ ಮನಸ್ಸುಗಳಿರುವ ಸ್ಥಿತಿಯಲ್ಲಿ ಇದು ಪ್ರಸ್ತುತ.
ಜನತೆಯನ್ನು ಕಾಡುತ್ತಿರುವ ಪ್ರಚಲಿತ ಸಮಸ್ಯೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಸಿನಿಮಾ ಪ್ರಯತ್ನಗಳು ಕನ್ನಡದಲ್ಲೂ ನಡೆದಿರುವುದು ಶ್ಲಾಘನೀಯ ಆದರೆ ಬಹುಸಂಖ್ಯಾತ ನೋಡುಗರನ್ನು ಆಕರ್ಷಿಸದೇ ಇರುವುದು ಒಂದು ವಿಪರ್ಯಾಸ.

‍ಲೇಖಕರು G

28 December, 2014

2 Comments

  1. v.n.laxminarayana

    ಇಂದು ಸಿನಿಮಾದ ಜನ್ಮ ದಿನ. ಇಂದಿಗೆ ಸರಿಯಾಗಿ 119 ವರ್ಷಗಳಹಿಂದೆ ಅಂದರೆ ಡಿಸೆಂಬರ್ 28, 1895 ರಂದು ಜನರು ಹಣಕೊಟ್ಟು ಒಟ್ಟಾಗಿ ನೋಡಿದ ಸಿನಿಮಾ ಹುಟ್ಟಿತು. ಲೂಮಿಯೇರ್ ಸಹೋದರರು ಮಾರ್ಚ್ 1894 ರಲ್ಲಿ ತಯಾರಿಸಿ 1895 ರ ಡಿಸೆಂಬರ್ 28 ರಂದು ಪ್ಯಾರಿಸ್ಸಿನ Salon Indien du Grand Café ಎಂಬ ನೆಲಮಾಳಿಗೆಯ ಕೋಣೆಯಲ್ಲಿ 46 ಸೆಕೆಂಡುಗಳ ಅವಧಿಯ ಈ ಸಿನಿಮಾವನ್ನು ‘ಸಿನಿಮಟೋಗ್ರಫಿ’ ಎಂಬ ಕೈಯಲ್ಲಿ ತಿರುಗಿಸುವ ಯಂತ್ರದ ಮೂಲಕ ಪ್ರದರ್ಶಿಸಿದರು.
    ಲೂಮಿಯೇರ್ ಕಾರ್ಖಾನೆಯಿಂದ ಹೊರಬರುತ್ತಿರುವ ಕಾರ್ಮಿಕರು ಈ ಚಿತ್ರದ ಹೀರೋಗಳು.
    ಅಂದಿನಿಂದ ಇಂದಿನವರೆಗೂ ಸಿನಿಮಾದ ವಸ್ತು ಜನರು. ಅಭಿನಯಿಸುವವರು ಜನರು. ಅದನ್ನು ತಯಾರಿಸಲು ಒಟ್ಟಾಗಿ ಸೇರುವವರು ಜನರೇ. ಹಣ ಕೊಟ್ಟು ನೋಡುವವರು ಜನರು. ಆದರೆ ತಯಾರಿಕೆ ಮತ್ತು ಪ್ರದರ್ಶನದ ನಿಯಂತ್ರಣ ಮಾತ್ರ ಬಹುತೇಕವಾಗಿ ಹಣವಂತರ ಕೈಲೇ ಇದೆ.
    ರೂಕ್ಷ ಮನಸ್ಸಿನ ಚಾಣಾಕ್ಷ ಬಂಡವಳಿಗರ ಬಹುದೊಡ್ಡ ಉದ್ಯಮ ಸಿನೆಮಾ.
    ಒರಟು ಸಂವೇದನೆಯ ಜನರ ಮನರಂಜನಾ ಮಾಧ್ಯಮವಾಗಿ ಯಾವ ಪೂರ್ವತಯಾರಿಯೂ ಇಲ್ಲದೆ ಎಂಥ ಮೌಢ್ಯವನ್ನು ಬೇಕಾದರೂ ಆರಾಧಿಸುವ ಹುಂಬರಿಗೆ, ಮಾತೇ ಸಿನಿಮಾ ಎಂದು ನಂಬಿದ ಹರಿಕತೆದಾಸರಿಗೆ ಬೇಕಾದರೂ ಸಿಗಬಲ್ಲ ಅಗ್ಗದ ದೃಶ್ಯಮಾಧ್ಯಮವೂ ಸಿನಿಮಾ.
    ಸೂಕ್ಷ್ಮಗ್ರಾಹಿ, ಸಂವೇದನಾಶೀಲ ಮನುಷ್ಯರು ತಮ್ಮ ಚಿಂತನೆ, ಕಲಾಸೃಷ್ಟಿ ಮತ್ತು ತಾತ್ವಿಕತೆಯನ್ನು ಸಮಗ್ರ ಭಾಷೆಯಲ್ಲಿ, ಸಮಗ್ರ ಅಭಿವ್ಯಕ್ತಿಯಾಗಿಸಬಯಸುವ ಅಚ್ಚುಮೆಚ್ಚಿನ ಕಲಾ ಮಾಧ್ಯಮವೂ ಸಿನಮಾವೇ ಆಗಿದೆ.
    ಮೊತ್ತ ಮೊದಲು ಸಿನಿಮಾ ಶುರುವಾದ ದೇಶವಾದ ಫ್ರಾನ್ಸ್ ಇಂದಿಗೂ ಸಿನಿಮಾ ತಯಾರಿಕೆಯಲ್ಲಿ ಅಗ್ರಗಣ್ಯ. ಜಾಗತೀಕರಣದ ಇಂದಿನ ಸಾಮ್ರಾಜ್ಯವಾದೀ ಮಾರುಕಟ್ಟೆಯಲ್ಲಿ ನಾಲ್ಕಾರು ದೇಶಗಳು, ಹತ್ತಾರು ವ್ಯಾಪಾರೀ ಸಂಸ್ಥೆಗಳು ಒಟ್ಟಾಗಿ ಹಣತೊಡಗಿಸಲು ಬಯಸುವ ಸಿನಿಮಾ ಒಂದು ಬಲಿಷ್ಠ ಕಾರ್ಪೊರೇಟ್ ಉದ್ಯಮ.
    ಭೌತಿಕವಾದ ಸೆಲ್ಯುಲಾಯಿಡ್ ನಿಂದ ಪ್ಲಾಸ್ಟಿಕ್ ಪಟ್ಟಿಗೆ, ಅಭೌತಿಕವಾದ ಡಿಜಿಟಲ್ ರೂಪಗಳಿಗೆ ಸತತವಾಗಿ ಮಾರ್ಪಾಡಾಗುತ್ತಾ, ಐದೂ ಇಂದ್ರಿಯಗಳನ್ನು ತೊಡಗಿಸಿ ಸೃಷ್ಟಿಸಬಲ್ಲ, ಆಸ್ವಾದಿಸಬಲ್ಲ ಏಕೈಕ ಅಭಿವ್ಯಕ್ತಿ ಮಾಧ್ಯಮವೆಂಬ ಹೆಗ್ಗಳಿಕೆಯ, 119 ವರ್ಷ ತುಂಬಿದರೂ ನಿತ್ಯ ಜವ್ವನೆಯಾದ ಸಿನಿಮಾ ಎಂಬ ಈ ಮಾಯಾಂಗನೆಗೆ ಹುಟ್ಟಿದ ಹಬ್ಬದ ಶುಭಾಶಯಗಳು.
    -ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು.

  2. ಕಿರಣ್

    ಕಂದಾಚಾರ, ಮೂಢ ನಂಬಿಕೆಗಳು ಎಲ್ಲಾ ಧರ್ಮಗಳಲ್ಲೂ ಇದ್ದದ್ದೇ! ಧರ್ಮ ಹಳೆಯದಾದಷ್ಟೂ ಇವು ಹೆಚ್ಚು. ಧರ್ಮ ನಿಷ್ಟುರವಾದಷ್ಟೂ ಇವು ಕ್ರೂರ.
    ಹಾಗಿದ್ದಾಗ, ಧರ್ಮನಿರಪೇಕ್ಷತೆ ಬಯಸುವವರು ಇಂತಹ ಟೀಕೆಗಳನ್ನೂ ಧರ್ಮದ ಭೇಧವಿಲ್ಲದೆ ನಿರಪೇಕ್ಷವಾಗಿಯೇ ಮಾಡಬೇಕು.
    ಒಗ್ಗಟ್ಟಿಲ್ಲದ ಜನ ಸಮುದಾಯವೊಂದು ತಾವು ನಂಬಿರುವ ಧರ್ಮವನ್ನು “ಹೊಗಳಿದರೆ ನಮಗೆ; ತೆಗಳಿದರೆ ನಮಗಲ್ಲ” ಎನ್ನುವಂತೆ ಇದ್ದಾರೆ.
    ಅದನ್ನೇ ಬಂಡವಾಳವಾಗಿಟ್ಟುಕೊಂಡು ಅವರನ್ನು ಏನು ಬೇಕಾದರೂ ಅನ್ನುವ ಬುದ್ಧಿಜೀವಿಗಳಿಗೆ ಬರವಿಲ್ಲ.
    ಚಿತ್ರ ನಿರ್ಮಾಪಕರಿಗೂ ಬರವಿಲ್ಲ.
    ಒಟ್ಟಿನಲ್ಲಿ, ಸೂಕ್ಷ್ಮ ಮನಸ್ಸಿನವರಿಗೆ, ಸತ್ಯವನ್ನು ಧರ್ಮನಿರಪೇಕ್ಷವಾಗಿ ಬಯಸುವವರಿಗೆ ಆಗುವ ನೋವು ಯಾರಿಗೂ ಕಾಣುವುದೇ ಇಲ್ಲ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading