ಪಾಲಹಳ್ಳಿ ವಿಶ್ವನಾಥ ಕಥೆ- ಅಮ್ಮ ಹಾಡಿದ ವಿಶ್ವದ ಕಥೆ…

ಪಾಲಹಳ್ಳಿ ವಿಶ್ವನಾಥ್

ಅದೊಂದು ಭಾನುವಾರ, ಸೂರ್ಯ ದೇವರಿಗೆ ತುಂಬಾ ಪ್ರಿಯವಾದ ದಿನ. ಮಧ್ಯಾಹ್ನ ನಿದ್ರೆ ಮಾಡುತ್ತಿದ್ದ ಅಮ್ಮ ಇದ್ದಕ್ಕಿದ್ದಂತೆ ಎದ್ದಳು. ಸೂರ್ಯದೇವನು ಅವಳ ಕನಸಿನಲ್ಲಿ ಬಂದು ವಿಶ್ವದ ಕಥೆಯನ್ನು ಹೇಳಿದ್ದನು. ಅವನು ಅವಳಿಗೆ ಬ್ರಹ್ಮಾಂಡದ ವಿವಿಧ ದೃಶ್ಯಗಳನ್ನು ತೋರಿಸಿದ್ದನು. ಕೊನೆಯಲ್ಲಿ, ಮುಂದಿನ ಭಾನುವಾರದ ಮೊದಲು ಕನಿಷ್ಠ ಒಬ್ಬ ವ್ಯಕ್ತಿಗೆ ಕಥೆಯನ್ನು ಹೇಳಲೇಬೇಕೆಂದು ಅವನು ಅವಳಿಗೆ ಆದೇಶಿಸಿದನು. ಹೇಳದಿದ್ದರೆ ಏನಾಗುತ್ತದೆ ಎಂದು ಕೇಳುವ ಧೈರ್ಯವನ್ನು ಅಮ್ಮ ಮಾಡಲಿಲ್ಲ.

ಅಮ್ಮ ನಿದ್ದೆಯಲ್ಲಿದ್ದ ಕನಸಿಗೆ ಬೆಚ್ಚಿಬಿದ್ದಳು. ಇದು ಅವಳಿಗೆ ಸಾಮಾನ್ಯ ರೀತಿಯ ಕನಸಾಗಿರಲಿಲ್ಲ. ಅವಳ ಕನಸಿನಲ್ಲಿ ದೇವರುಗಳು ಬರುತ್ತಿದ್ದರೂ ದೇವಾಲಯದ ಮುಂದೆ ತೆಂಗಿನಕಾಯಿ ಒಡೆಯಲು ಅವಳಿಗೆ ಹೇಳಿ ಮಾಯವಾಗುತ್ತಿದ್ದರು. ಕೆಲವೊಮ್ಮೆ ಅವಳ ಸಮಸ್ಯೆಗಳ ತೀವ್ರತೆಯನ್ನು ಅವಲಂಬಿಸಿ ಅದು ಎರಡು ತೆಂಗಿನಕಾಯಿಗಳಾಗುತ್ತಿತ್ತು. ಆದರೆ ಒಬ್ಬ ದೇವರು ಮಾತ್ರ ಮುದುಕಿಯನ್ನು ಹಿಂಸಿಸಲೋ ಏನೋ; ಕೋಳಿ ಬಲಿ ಕೊಡಬೇಕು ಎಂದು ಒತ್ತಾಯಿಸುತ್ತಿತ್ತು. ಈ ಮಹಿಳೆಯೋ ಪಕ್ಕಾ ಸಸ್ಯಾಹಾರಿ ಮತ್ತು ಅಂತಹ ಕನಸುಗಳು ಅವಳಿಗೆ ಬೇಸರವನ್ನು ಉಂಟುಮಾಡುತ್ತಿದ್ದವು. ಹಾಗೂ ಅಂತಹ ಅನೇಕ ಕನಸುಗಳ ನಂತರ ಒಮ್ಮೆ ಮತ್ತು ಒಮ್ಮೆ ಮಾತ್ರ ಆ ಆದೇಶಕ್ಕೆ ಶರಣಾಗಿದ್ದಳು.

ಆದರೆ ಈ ಮಧ್ಯಾಹ್ನದ ಕನಸು ಅಸಾಧಾರಣವಾಗಿತ್ತು. ಅಮ್ಮನಿಗೆ ಕನಸಿನ ವಿಷಯ ಮರೆತೇ ಹೋಗಬಹುದೆಂಬ ಆತಂಕವಿದ್ದುದರಿಂದ ಸೂರ್ಯದೇವನು ಹೇಳಿದ ಕಥೆಯನ್ನು ಕೂಡಲೆ ಬರೆದಿಟ್ಟಳು. ತಾನು ಬರೆದದ್ದನ್ನು ಸ್ವತಃ ಓದಿದಾಗ ಅವಳು ತುಂಬಾ ತೃಪ್ತಿಪಟ್ಟಳು. ಅವಳು ಬರೆದದ್ದರಲ್ಲಿ ಒಂದು ಪದವೂ ಅರ್ಥವಾಗದಿದ್ದರೂ ಅದು ಸಾಕಷ್ಟು ನಿಖರವಾಗಿದೆ ಎಂದು ಅವಳಿಗೆ ಅನಿಸಿತು. ಅವಳು ಪ್ರತಿದಿನ ಬೆಳಿಗ್ಗೆ ಹಾಡುವ ನೂರಾ ಎಂಟು ಸ್ತೋತ್ರಗಳನ್ನು ಸಹ ಅರ್ಥಮಾಡಿಕೊಳ್ಳಲು ಎಂದೂ ಪ್ರಯತ್ನಿಸಿರಲಿಲಲ್ಲ. ಏನನ್ನೂ ಅರ್ಥಮಾಡಿಕೊಳ್ಳುವುದು ಅವಳ ಜೀವನದ ದೊಡ್ಡ ಭಾಗವಾಗಿರಲಿಲ್ಲ.

ಅವಳಿಗೆ ಮತ್ತೊಂದು ಯೋಚನೆಯಾಯಿತು. ಸೂರ್ಯದೇವನು ಅವಳಿಗೆ ಕೇವಲ ಒಂದು ಕಥೆಯನ್ನು ಮಾತ್ರ ಹೇಳಲಿಲ್ಲ . ಅವನು ಕಥೆಯನ್ನು ಹೇಳುತ್ತಾ ಹೋದಂತೆ ಬ್ರಹ್ಮಾಂಡದ ಅನೇಕ ಅದ್ಭುತ ದೃಶ್ಯಗಳನ್ನು ಅವಳಿಗೆ ತೋರಿಸಿದ್ದನು. ಅವಳಿಗೆ ಬ್ರಹ್ಮಾಂಡದ ಅನೇಕ ಕಣಗಳನ್ನು ತೋರಿಸಿದ್ದನು. ಅವನು ಅವಳ ಎಡ ಅಂಗೈಯ ಮೇಲೆ ಒಂದು ಕಣವನ್ನು ಇಟ್ಟು ಅದರ ಹೆಸರನ್ನು ಉಚ್ಚರಿಸಿದನು.

ಎಲೆಕ್ಟ್ರಾನ್! ಅದು ಭಾರವಾಗಿದೆಯೇ ಎಂದು ಅವಳನ್ನು ಕೇಳಿದನು. ಅವಳು ಇಲ್ಲ ಎಂದು ಹೇಳಿದ ಮೇಲೆ ಅವನು ಅವಳ ಬಲ ಅಂಗೈಯಲ್ಲಿ ಮತ್ತೊಂದು ಕಣವನ್ನು ಇರಿಸಿ ಪ್ರೋಟಾನ್ ಎಂದು ಉಚ್ಚರಿಸಿದನು. ಅವನು ಅವಳನ್ನು ಕೇಳುವ ಮೊದಲೇ ಅವಳು ಭಾರ ಎಂದು ಹೇಳಿದಳು. “ಹೌದು, ಇದು ಎಲೆಕ್ಟ್ರಾನ್‌ಗಿಂತ 2000 ಪಟ್ಟು ಭಾರವಾಗಿರುತ್ತದೆ!” ಎಂದನು ಮತ್ತು ಕನಸು ಹಾಗೆಯೇ ಸಾಗಿತ್ತು. ಅವಳು ರೂಪುಗೊಂಡ ಮೊದಲ ನ್ಯೂಕ್ಲಿಯಸ್ ಮತ್ತು ನಂತರ ಮೊದಲ ಪರಮಾಣು, ಮೊದಲ ನಕ್ಷತ್ರ, ಮೊದಲ ನಕ್ಷತ್ರಪುಂಜ, ಮೊದಲ ಕೋಶ, ಮೊದಲ ಮಾನವ ಎಲ್ಲವನ್ನೂ ನೋಡಿದ್ದಳು.

ಈ ಕಥೆಯನ್ನು ಹಾಗೇ ಗದ್ಯರೂಪದಲ್ಲಿ ಹೇಳಿದರೆ ಅಂತಹ ಕಥೆಗೆ ಅಪಚಾರವಾಗುತ್ತದೆ ಎಂದು ಅವಳಿಗೆ ಅನಿಸಿತು. ಅವಳಿಗೆ ಅರ್ಥವಾಗದಿದ್ದರೂ, ಇದು ಒಂದು ಮಹಾನ್ ಕಥೆ ಎಂದು ಅವಳು ತಿಳಿದಿದ್ದಳು. ಇಡೀ ಕಥೆಯನ್ನು ಹಾಡಿನ ರೂಪದಲ್ಲಿ ಹೇಳುತ್ತಾ ನಟಿಸಲು ನಿರ್ಧರಿಸಿದಳು. ಎಲ್ಲೋ ಚಿಕ್ಕಂದಿನಲ್ಲಿ ಹಾಡಲು ಕಲಿತಿದ್ದಳು, ಸ್ವಲ್ಪ ನೃತ್ಯವೂ ಬರುತ್ತಿತ್ತು. ಅಮ್ಮ ತನ್ನ ಬಾಲ್ಯದಲ್ಲಿ ಕಲಿತ ಆ ವಿದ್ಯೆಗಳನ್ನು ತನ್ನ ಕಥೆ ಹೇಳುವಿಕೆಯನ್ನು ಅಲಂಕರಿಸಲು ಬಳಸಲು ನಿರ್ಧರಿಸಿದಳು! ಅಮ್ಮ ಮಾಡಬೇಕಾಗಿದ್ದ ಮುಂದಿನ ಕೆಲಸವೆಂದರೆ ಯಾರಿಗೆ ಕಥೆ ಹೇಳಬಹುದೋ ಅವರನ್ನು ಹುಡುಕುವುದು. ಅದು ಮುಗಿದ ನಂತರ, ಅವಳು ಎಲ್ಲವನ್ನೂ ಮರೆತುಬಿಡಬಹುದು.

ಮೊದಲಿಗೆ ಅವಳು ತನ್ನ ಮೊಮ್ಮಕ್ಕಳನ್ನು ಹಿಡಿದು ಕಥೆಯನ್ನು ಹೇಳಲು ಪ್ರಯತ್ನಿಸಿದಳು. ಆದರೆ ಅವರು ಯಾವುದೇ ಕಥೆಗಳನ್ನು ಕೇಳಲು ಮುಂದಿನ ರಜೆಯವರೆಗೂ ಕಾಯಬೇಕು ಎಂದರು. ನಂತರ ಅವಳು ತನ್ನ ಸೊಸೆಗೆ ಕಥೆಯನ್ನು ಹೇಳಲು ಪ್ರಯತ್ನಿಸಿದಳು, ಅವಳು ಮನೆಯಲ್ಲಿ ಮಾಡಲು ತುಂಬಾ ಕೆಲಸವಿದೆ ಎಂದು ಉತ್ತರಿಸಿದಳು. ಮನೆಯಲ್ಲಿ ಎಲ್ಲರೂ ಅವರವರ ಕೆಲಸವನ್ನು ಸರಿಯಾಗಿ ಮಾಡಿದರೆ ತಾನು ನಿತ್ಯವೂ ಕಷ್ಟಪಡಬೇಕಾಗಿಲ್ಲ ಎಂದು ಸೊಸೆ ಕೊಂಕೂ ಮಾತನಾಡಿದಳು. ಮುಂದೆ ಅವನು ಮಗನ ಹತ್ತಿರ ಹೋದಳು. ಅವನು ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿದ್ದರು, ಜನರು ದೇವ-ಮನುಷ್ಯರಿಂದ ಮೋಸ ಹೋಗುವುದನ್ನು ತಡೆಯುವ ಪ್ರಯತ್ನಗಳಿಗೆ ಹೆಸರುವಾಸಿಯಾದ ಸಂಘಟನೆ. ತಾಯಿಯ ಈ ಕನಸಿನ ಪ್ರಸ್ತಾಪಕ್ಕೆ ಮಗ ನಕ್ಕನು. ಸೂರ್ಯ ದೇವರಂತೆ ಯಾವುದೂ ಇಲ್ಲ ಎಂದು ಅವನು ಅವಳಿಗೆ ಹೇಳಿದನು. ವಿಜ್ನಾನಿಗಳ ಪ್ರಕಾರ, ಸೂರ್ಯ ಕೇವಲ ಮತ್ತೊಂದು ನಕ್ಷತ್ರ. ನಕ್ಷತ್ರಗಳು ಕನಸಿನಲ್ಲಿ ಬಂದು ಕಥೆ ಹೇಳಬಾರದೇಕೆ ಎಂದು ತಾಯಿ ಮರುಪ್ರಶ್ನಿಸಿದರು. ಮಗ ʼನೀನು ಆ ಅಫೀಮು ಬೀಜಗಳನ್ನು ಬಳಸಿ ಮಾಡಿದ ಸಿಹಿ ಮಿಶ್ರಣವನ್ನು ಕುಡಿಯುವುದನ್ನು ನಿಲ್ಲಿಸು! ಸೂರ್ಯ ಹೇಳಿದನಂತೆ! ಸೂರ್ಯನ ಕಥೆಯಂತೆ !ʼ ಎಂದು ಹೇಳಿ ನಗುತ್ತಾ ಹೊರಟುಹೋದನು.

ಸರಿ, ಮುಂದೆ ಹೋಗುವ ಮೊದಲು ನಾವು ನಿರ್ವಹಿಸಬೇಕಾದ ದುರದೃಷ್ಟಕರ ಕಾರ್ಯವೊಂದಿದೆ. ಇಲ್ಲಿಯವರೆಗೆ ನಮ್ಮ ಕಥೆಯು ಸ್ವಲ್ಪಮಟ್ಟಿಗೆ ಹರ್ಷಚಿತ್ತದಿಂದ ಇದ್ದಿತಲ್ಲವೇ! . ದುರಂತದ ಅಂಶವನ್ನು ನಮ್ಮ ಕಥೆಗೆ ಬರಮಾಡಿಕೊಳ್ಳುವುದನ್ನು ಬಿಟ್ಟು ಈಗ ನಮಗೆ ಬೇರೆ ದಾರಿಯಿಲ್ಲ. ದುರಂತವು ಜನರನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಮಹಾನ್ ಅರಿಸ್ಟಾಟಲ್ ಹೇಳಿದ್ದರು. ಗ್ರೀಕರಿಂದ ಮತ್ತೊಂದು ಪಾಠವೂ ಬಂದಿತ್ತು : ದೇವರುಗಳನ್ನು ತಿರಸ್ಕರಿಸಬಾರದು! ಸೂರ್ಯನ ಕಥೆಯನ್ನು ಕೇಳದೆ ಅವರುಗಳು ಸೂರ್ಯ ದೇವರನ್ನು ನೋಯಿಸಿದ್ದರು. ಸೂರ್ಯನಿಗಿಂತ ದೊಡ್ಡ ದೇವರಾದ ಕಥೆಗಳ ದೇವತೆಯ ಮನಸ್ಸನ್ನೂ ನೋಯಿಸಿದ್ದರು. ನೋಯಿಸಿದ ದೇವತೆಗಳು ಸುಮ್ಮನಿರುವವರೇ?

ಅಮ್ಮನ ಕುಟುಂಬಕ್ಕೆ ಬರಬೇಕಾದ ಅನಾಹುತಗಳು ತಕ್ಷಣ ಸಂಭವಿಸಲಿಲ್ಲ. ನೋವು ಬೇಗನೇ ಹೋಗಬಾರದೆಂದು ಅವೆಲ್ಲವೂ ನಿಧಾನವಾಗಿ ಸಂಭವಿಸಿದವು. ವಿಚಾರವಾದಿ ಮಗ ಜ್ಯೋತಿಷಿಯಾದನು. ಆದರೆ ಆ ಊರಿನಲ್ಲಿ ಅವನಂತೆ ಅನೇಕರು ಇದ್ದುದರಿಂದ ಅವನು ಮತ್ತು ಅವನ ಕುಟುಂಬವು ಹಸಿವಿನಿಂದ ಬಳಲಿದರು. ಅವನ ಪತ್ನಿ, ಅಮ್ಮನ ಸೊಸೆ , ಸ್ನಾನ ಮಾಡುತ್ತಿದ್ದಾಗ ಕೆಳಗೆ ಬಿದ್ದು ಕಾಲು ಮುರಿದುಕೊಂಡಳು. ಅವರ ಮಕ್ಕಳಿಬ್ಬರೂ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು ಮತ್ತು ಮಗ ಶಾಲೆಯನ್ನು ಬಿಟ್ಟನು. ಇದರ ನೀತಿಯೆಂದರೆ ಯಾರಾದರೂ ಬಂದು ನಾನು ಕಥೆ ಹೇಳುತ್ತೇನೆ ಎಂದರೆ ನೀವು ಇರುವ ಎಲ್ಲ ಕೆಲಸಗಳನ್ನೂ ಬಿಟ್ಟು ಆ ಕಥೆಯನ್ನು ಕೇಳಬೇಕು !

ಇದರ ನಂತರ ಅಮ್ಮ ಪಟ್ಟಣದ ಚೌಕಕ್ಕೆ ಹೋಗಿ ಅಲ್ಲಿ ನೆರೆದಿದ್ದ ಜನರನ್ನು ಕಥೆಯನ್ನು ಕೇಳುವಂತೆ ವಿನಂತಿಸಿದಳು. ಯಾರೂ ಅವಳ ಮಾತನ್ನು ಕೇಳಲಿಲ್ಲ ಮತ್ತು ಕೆಲವರು ಅಪಹಾಸ್ಯ ಮಾಡಿದರು ಕೂಡ . ಅವಳ ಮಾತನ್ನು ಕೇಳಲು ನಿರಾಕರಿಸಿದವರಿಗೆ ದೊಡ್ಡ ದುರಂತವು ಸಂಭವಿಸಿತು ಅವರು ಕುಳಿತಿದ್ದ ಒಂದು ದೊಡ್ಡ ನೀರಿನ ಕಾರಂಜಿ ತಕ್ಷಣವೇ ಬೆಂಕಿಯನ್ನು ಉಗುಳಲು ಪ್ರಾರಂಭಿಸಿತು. ಅವರೆಲ್ಲ ಸ್ಥಳದಿಂದ ಓಡಿಹೋದರೂ ಅವರಲ್ಲಿ ಕೆಲವರು, ಅದೂ ಅಪಹಾಸ್ಯ ಮಾಡಿದವರು, ಪ್ರಾಣ ಕಳೆದುಕೊಂಡರು. ಕೆಲವರಿಗೆ ಪ್ರಾಣ ಉಳಿಯಿತು, ಆದರೆ ಅವರ ಆತ್ಮ ಹೋಗಿತ್ತು.

ಅಮ್ಮ ತನ್ನಿಂದಾದ ಅನಾಹುತಕ್ಕೆ ಮರುಗುತ್ತಾ ಮುಂದೆ ಸಾಗಿದಳು. ಕೊನೆಗೆ ಊರಿನ ಹೊರಗಿನ ಬಸ್ತಿಯೊಂದಕ್ಕೆ ಹೋದಳು ಅಲ್ಲಿ ಒಬ್ಬ ಯುವತಿ ತಾನು ಕಥೆ ಕೇಳಲು ಇಚ್ಛಿಸುತ್ತೇನೆ ಎಂದು ಹೇಳಿದಳು. ಆರು ತಿಂಗಳ ಗರ್ಭಿಣಿಯಾಗಿದ್ದ ಯುವತಿಯನ್ನು ಅಮ್ಮ ತುಂಬಾ ಸಂತೋಷದಿಂದ ಆಶೀರ್ವದಿಸಿದರು. ಆದರೆ ಅಮ್ಮ ಕಥೆ ಹೇಳಲು ಆರಂಭಿಸುವ ಮುನ್ನವೇ ಇನ್ನಿಲ್ಲದ ಬಿಸಿಲಿನಿಂದ ದಣಿದ ಯುವತಿ ನಿದ್ದೆಮಾಡಿಬಿಟ್ಟಳು. ಅಮ್ಮ ಗಾಬರಿಯಾಗಿ ಏನು ಮಾಡಬೇಕೆಂದು ತೋಚಲಿಲ್ಲ. ಯುವತಿಗೆ ತೊಂದರೆಯಾಗಲು ಅವಳು ಬಯಸಲಿಲ್ಲ. ಸರಿ, ಹೊರಡೋಣ ಎಂದು ಅವಳು ಕೋಣೆಯಿಂದ ಹೊರಬಂದಾಗ, ಅವಳಿಗೆ ಒಂದು ಮೆಲ್ಲನೆಯ ಧ್ವನಿ ಕೇಳಿಸಿತು, ‘ದಯವಿಟ್ಟು ಹೋಗಬೇಡಿ’ ಎಂದು ಹೇಳಿತು ಅಮ್ಮ ಆಶ್ಚರ್ಯಚಕಿತರಾಗಿ ಸುತ್ತಲೂ ನೋಡಿದರು. ಮಲಗಿದ್ದ ಯುವತಿಯ ಕಡೆಯಿಂದ ಸದ್ದು ಬಂದಿತ್ತು. ಮತ್ತೆ ಹೋಗಬೇಡಿ ಎಂದು ಬೇಡುವ ಧ್ವನಿ ಕೇಳಿಸಿತು. ಈಗ ಅದು ಮಲಗಿರುವ ಯುವತಿಯ ಒಳಗಿನಿಂದಲೇ ಎಂದು ಖಚಿತವಾಯಿತು. ಅದು ಆರು ತಿಂಗಳ ಭ್ರೂಣವಾಗಿತ್ತು. ಮತ್ತೆ ಹೋಗಬೇಡಿ ಎಂದು ಅವಳನ್ನು ಬೇಡಿಕೊಂಡಿತು! ನಾನು ಕಥೆಯನ್ನು ಕೇಳುತ್ತೇನೆ ಎಂದು ಭ್ರೂಣವು ಅಮ್ಮನಿಗೆ ಹೇಳಿತು:

ಕೊನೆಗೆ ಯಾರೋ ಕಥೆ ಕೇಳಲು ಮುಂದೆ ಬಂದಕ್ಕೆ ಅಮ್ಮ ತುಂಬಾ ಖುಷಿಯಾದರು. ಹಾಡಿನಮೂಲಕ, ನೃತ್ಯದ ಮೂಲಕ ವಿಶ್ವದ ಕಥೆಯನ್ನುಹೇಳಲು ಮಾಡಿದರು. ಆದರೆ ಭ್ರೂಣ ತನ್ನ ಅಭಿನಯವನ್ನು ನೋಡಲು ಆಗುವುದಿಲ್ಲ ಎಂದು ಬೇಸರವಾಯಿತು. ಆದು ಭ್ರೂಣಕ್ಕೆ ತಿಳಿಯಿತೋ ಏನೋ ! ‘ಸ್ವಲ್ಪ ಮಸುಕಾಗಿದೆ, ಆದರೆ ಕಾಣಿಸುತ್ತೆ ‘ ಎಂದು ಹೇಳಿತು. ಅಮ್ಮ ತುಂಬಾ ಸಂತೋಷಪಟ್ಟಳು ಮತ್ತು ಮಹಾನ್ ಸೂರ್ಯ ದೇವರು ಹೇಳಿದ ಬ್ರಹ್ಮಾಂಡದ ಜನ್ಮ ಕಥೆಯನ್ನು ನಟಿಸಿದಳು. ಅವಳು ಮಹಾ ಸ್ಫೋಟದಿಂದ ಪ್ರಾರಂಭಿಸಿದಳು. ದೊಡ್ಡ ಸ್ಫೋಟದ ಮೊದಲು ಏನಿತ್ತು ಎಂದು ಮಗು ಪ್ರಶ್ನಿಸಿತು. ಅಮ್ಮಾ ತನಗೆ ಗೊತ್ತಿಲ್ಲ ಎಂದು ಹೇಳಿದಳು ಮತ್ತು ತನಗೆ ಕಥೆ ಹೇಳಿದ ಸೂರ್ಯ ದೇವರಿಗೂ ಉತ್ತರ ತಿಳಿದಿತ್ತೋ ಇಲ್ಲವೋ ಎಂದು ಹೇಳಿದಳು. ಆ ಮಾದರಿಯಲ್ಲಿಯೇ ಕಥೆ ಸಾಗಿತು. ಅದಲ್ಲದೆ ಅಮ್ಮ ತಾನು ಮಗುವಿಗೆ ಹೇಳುತ್ತಿದ್ದನ್ನೆಲ್ಲಾ ಗ್ರಹಿಸಲೂ ಶುರುಮಾಡಿದಳು. ಮೊದಲ ನಕ್ಷತ್ರ ಹುಟ್ಟಿದಾಗ ತಾನೂ ಅದರ ಭಾಗವಾಗಿದ್ದೆ ಎಂದು ಅಮ್ಮನಿಗೆ ಅನಿಸಿತು. ಹಾಗೇ ವಿಶ್ವದ ವಿಕಾಸದ ಪ್ರತಿಘಟ್ಟದಲ್ಲೂ ತಾನಿದ್ದೆ ಎನಿಸಿತು. ಕಡೆಯಲ್ಲಿ ಭ್ರೂಣವು ಅಮ್ಮನಿಗೆ ಅದ್ಭುತವಾದ ಕಥೆಗೆ ಧನ್ಯವಾದ ಹೇಳಿ ಮತ್ತೆ ಮಲಗಿತು.

ಅಮ್ಮ ವಾಪಸ್ಸು ಮನೆಗೆ ಹೋಗಲಿಲ್ಲ. ಅವಳು ವಿಶ್ವದ ಮಹಾನ್ ಕಥೆಯನ್ನು ಹಾಡುತ್ತಾ ಪಟ್ಟಣ ಮತ್ತು ಹಳ್ಳಿಗಳನ್ನು ಸುತ್ತಲು ಶುರುಮಾಡಿದಳು. ಬೇರೆಯವರು ಹರಿಕಥೆ ಮಾಡುತ್ತಿದ್ದರೆ, ಅಮ್ಮ ಕುಣಿಯುತ್ತಾ ವಿಶ್ವದ ಜನ್ಮ, ಮೊದಲ ಕಣ, ಮೊದಲ ಪರಮಾಣು, ಮೊದಲ ನಕ್ಷತ್ರ, ಮೊದಲ ನಕ್ಷತ್ರಪುಂಜ ಮತ್ತು ಮೊದಲ ಮಾನವನ ಬಗ್ಗೆ ಹಾಡುತ್ತಾ ಜೀವನ ಕಳೆದಳು. ( ಹಿಂದೆ ಯಾವಾಗಲೋ ಓದಿದ ಎ.ಕೆ.ರಾಮಾನುಜನ್ ರವರ ಜಾನಪದ ಕಥಾಸಂಗ್ರಹದ ಕಥೆಯೊಂದುಈ ಕತೆಗೆ ಸ್ಫೂರ್ತಿ)

‍ಲೇಖಕರು avadhi

January 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. p.r.vishwanath

    ಸೂಕ್ತ ಮತ್ತು ಸುಂದರ ರೇಖಾಚಿತ್ರಗಳಿಗೆ ಅವಧಿಗೆ ಧನ್ಯವಾದಗಳು .. ವಿಶ್ವನಾಥ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: