ಪಾಲಹಳ್ಳಿ ವಿಶ್ವನಾಥ್ ಕಣ್ಣಲ್ಲಿ ಅರಳಿದ ಬಸವನಗುಡಿ

1950-60 ರಲ್ಲಿ ಬಸವನಗುಡಿ ಹೇಗಿತ್ತು?. ಈ ಕುತೂಹಲವನ್ನು ಪಾಲಹಳ್ಳಿ ವಿಶ್ವನಾಥ್ ಅವರು ಈ ಲೇಖನದಲ್ಲಿ ತಣಿಸಿದ್ದಾರೆ.

ಶೀಘ್ರದಲ್ಲೆ ಹೊರಬರಲಿರುವ ಅವರ ‘ಹೀಗೊಂದು ಕುಟುಂಬದ ಕಥೆ’ಯ ಭಾಗ ಇದು

ಪಾಲಹಳ್ಳಿ ವಿಶ್ವನಾಥ್

ನಮ್ಮ ರಸ್ತೆ (ಕಾಳಪ್ಪ ಬ್ಲಾಕ್) ಗೆ ಲಂಬವಾಗಿದ್ದ ಪೋಲೀಸ್ ಸ್ಟೇಷನ್ ರಸ್ತೆ ಸುಂದರವಾದ ರಸ್ತೆಯಾಗಿತ್ತು; ಎರಡೂ ಕಡೆ ಎತ್ತರದ ಸೊಂಪಾಗಿ ಬೆಳೆದ ಮರಗಳು ಇದ್ದವು. ಆ ರಸ್ತೆಯಲ್ಲಿ ಕೆಲವು ಗಣ್ಯ ಕುಟುಂಬಗಳು ನೆಲಸಿದ್ದವು. ತೋಟಗಾರಿಕೆಯಲ್ಲಿ ಹೆಸರು ಮಾಡಿದ್ದ ಶ್ರೀ ಸಿ.ಜವರಾಯರ ಮಕ್ಕಳ ಮನೆಗಳು ಇದ್ದವು: ಸಿ.ಜೆ. ಪದ್ಮನಾಭ (ಮುಂದೆ ಕಮಿಷನರಾದರು; ಇವರ ಹೆಸರನ್ನೇ ಪದ್ಮನಾಭ ನಗರಕ್ಕೆ ಇಟ್ಟಿದೆ) ಡಾ, ಭಕ್ತಾರಾಮ. ಕಾಂಗ್ರೆಸ ಮುಖಂಡ ಮಾಧವರಾವ್ (ಶಿವಮೊಗ್ಗ ಮೂಲದ) ಮತ್ತು ಅವರ ಪತ್ನಿ ರತ್ನಮ್ಮ (ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ). ಆ ರಸ್ತೆಯಲ್ಲೇ ಪಶ್ಚಿಮಕ್ಕೆ ಹೋದರೆ ಬಲಗಡೆ ಪ್ರಭಾತ ಕಲಾವಿದರ ಮನೆ ಇತ್ತು ಮತ್ತು ಅಲ್ಲಿಂದ ಆಗಾಗ್ಗೆ ಸಂಜೆ/ರಾತ್ರಿ ಹರಿಕಥೆ ಕೇಳಿಸುತ್ತಿತ್ತು (ಗೋಪೀನಾಥದಾಸರು ಇತ್ಯಾದಿ ಹೆಸರು ನೆನಪಿಗೆ ಬರುತ್ತವೆ).

ನಮ್ಮ ಪಕ್ಕದ ರಸ್ತೆ ಪುಟ್ಟಣ್ಣ ರಸ್ತೆ; ಕನ್ನಡದ ಮೊದಲ ಕಾದಂಬರಿಕಾರರಲ್ಲಿ ಒಬ್ಬರಾದ ಎಮ್.ಎಸ್. ಪುಟ್ಟಣ್ಣನವರ ಹೆಸರು ಇಡಲಾಗಿತ್ತು.  ಪೋಲೀಸ ಸ್ಟೇಷನ್ ರಸ್ತೆ ಮತ್ತು ಪುಟ್ಟಣ್ಣ ರಸ್ತೆ ಸೇರುವ ಕಡೆ ವರ್ಷಕ್ಕೊಮ್ಮೆ ಕಾಮನ ಹಬ್ಬ ಮಾಡುತ್ತಿದ್ದರು. ‘ಕಾಮಣ್ಣನ ಮಕ್ಕಳು, ಕಳ್ಳ..’ ಇತ್ಯಾದಿ ಹಾಡುಗಳನ್ನು ನಾವು ಹೇಳುವುದು ನಮ್ಮ ಮನೆಯವರಿಗೆ ಇಷ್ಟವಾಗುತ್ತಿರಲಿಲ್ಲ. ಆದರೂ ರಾತ್ರಿ ಕದ್ದ ಮರದ ಸಾಮಾನುಗಳು, ಬಟ್ಟೆಗಳು ಎಲ್ಲ ಹತ್ತಿ ಉರಿಯುವುದನ್ನ ನೋಡಲು ಹೋಗುತ್ತಿದ್ದೆವು. ನಮಗೆ ಪೂರ್ವದಲ್ಲಿನ ರಸ್ತೆ ಮಾರ್ಕೆಟ್ ರೋಡು; ಬಹಳ ಹಿಂದ ಅಲ್ಲಿ ಮಾರ್ಕೆಟ್ಟು ಇತ್ತಂತೆ. ಬೆಳಿಗ್ಗೆ ಎಚ್.ಎ.ಎಲ್, ಐ.ಟಿ.ಐ ಇತ್ಯಾದಿ ಬಸ್ಸುಗಳು ಓಡಾಡುತ್ತಿದ್ದವು.

ನಮ್ಮ ಶಾಲಾ ದಿನಗಳಲ್ಲಿ ಬ್ಯೂಗಲ್ ರಾಕ್ ಮೈದಾನ ನಮಗೆ ಕ್ರಿಕೆಟ್ಟಿಗೆ ನೆಚ್ಚಿನ ತಾಣವಾಗಿತ್ತು. ಬಹಳ ಬಂಡೆಗಳು ಇದ್ದರೂ ನಾವು ಹೇಗಾದರೂ ಸಾಕಷ್ಟು ಸಮತಟ್ಟಾದ ಪ್ರದೇಶಗಳನ್ನು ಕಂಡುಕೊಳ್ಳುತ್ತಿದ್ದೆವು. ಹಾಗೂ ಅಲ್ಲಿ ಜಾಗ ಸಿಗದಿದ್ದಾಗ, ಸಾಹಸದಿಂದ ಬಸವನಗುಡಿಯ ಹೊರಪ್ರದೇಶಗಳಿಗೂ ಹೋಗುತ್ತಿದ್ದೆವು. ಚನ್ನಮ್ಮನ ಕೆರೆಯ ತನಕವೂ ಹೋಗಿದ್ದ ನೆನಪು. ಆಟದ ನಂತರ, ನಾವೆಲ್ಲರೂ ಬಂಡೆಗಳ ಸುತ್ತಲೂ ಕುಳಿತು ಏನೇನೋ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಇಂದಿನ ಬ್ಯೂಗಲ್ ರಾಕ್ಮೈದಾನ ಬಹಳ ಬದಲಾದ ಸ್ಥಳವಾಗಿದೆ. ಇನ್ನೂ ಬಂಡೆಗಳಿದ್ದವೇನೋ ಎನ್ನಿಸುತ್ತೆ. ಈಗ ಅದು ಉದ್ಯಾನವನವಾಗಿವಿಟ್ಟಿದೆ. ನಡೆದಾಡಲು ಒಳ್ಲೆಯ ರಸ್ತೆಗಳಿವೆ. ಸಂಗೀತ ಕಾರಂಜಿ ಇದೆ. ಆದರೆ  ಕ್ರಿಕೆಟ್ ಆಡುವ ಮಕ್ಕಳಿಲ್ಲ.

(ಚಿತ್ರ: ಬ್ಯೂಗಲ್ ರಾಕಿನ ಒಂದು  ದೃಶ್ಯ ಮತ್ತು -1955ರ ಗಾಂಧಿಬಜಾರು ( ಕೃಪೆ: ಪ್ರಜಾವಾಣಿ)

ಬ್ಯೂಗಲ್ ರಾಕ್ ಪ್ರದೇಶ ಬಡಾವಣೆಯ ಕೆಲವು ಪ್ರಮುಖ ವ್ಯಕ್ತಿಗಳು ಸಭೆ ಸೇರುವ ಸ್ಥಳವೂ ಆಗಿತ್ತು. ಡಿ.ವಿ.ಗುಂಡಪ್ಪನವರು ಅವರೆಲ್ಲೆಲ್ಲ ಅತ್ಯಂತ ಪ್ರಸಿದ್ಧರಾಗಿದ್ದರು. ಅವರ ಜೊತೆ ಆಗಾಗ್ಗೆ ಮತ್ತೊಬ್ಬ ಶ್ರೇಷ್ಠ ಬರಹಗಾರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನಮ್ಮ ತಂದೆ  ಪಿ.ಆರ್.ರಾಮಯ್ಯ, ಕಲಾವಿದ ಎ.ಎನ್.ಸುಬ್ಬರಾವ್ (ಕಲಾಮಂದಿರ ಸಂಸ್ಥಾಪಕ ಗಾಂಧಿ ಬಜಾರ್‌ನಲ್ಲಿದ್ದರು), ವಕೀಲರಾದ ಎಮ್.ಪಿ.ಸೋಮಶೇಖರ ರಾವ್ ಮತ್ತು ನಿಟ್ಟೂರು ಶ್ರೀನಿವಾಸ ರಾವ್ (ಇವರು ನಂತರ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು) ಮತ್ತು ಇತರರು. ಅವರು ಬಂಡೆಗಳ ಮೇಲೆ ಕುಳಿತು ಏನೇನೋ ಚರ್ಚಿಸುತ್ತಿದ್ದರು; ಕೆಲವು ಬಾರಿ ಚರ್ಚೆ ಬಿಸಿಯಾಗಿಯೂ ಇರುತಿತ್ತು. ಅವರ ಕೈಗಳಲ್ಲಿದ್ದ ಕೋಲೂ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಂತಿತ್ತು! ಕೆಲವು ಸತಿ ನಾವು ಅವರ ಮಾತುಗಳನ್ನು ಕೇಳಲು ಹತ್ತಿರ ಹೋಗುತ್ತಿದ್ದೆವು. ಆದರೆ, ಅದೆಲ್ಲವೂ ದೊಡ್ಡವರ ಮಾತುಕತೆಯಾಗಿದ್ದು ನಮಗೆ ಅರ್ಥವಾಗುತ್ತಿರಲಿಲ್ಲ.

ರಾತ್ರಿಯ ಹೊತ್ತಿಗೆ ಈ ಸ್ಥಳಗಳು ತುಂಬಾ ಕತ್ತಲೆಯಾಗಿರುತ್ತಿದ್ದವು ಮತ್ತು ನಿರ್ಜನವಾಗುತ್ತಿತ್ತು. ನಾವು ಸಂಜೆ ತಡವಾಗಿ ಮನೆಗೆ ಮರಳಿದರೆ ಮನೆಯ ಜನರು ಚಿಂತೆ ಮಾಡುತ್ತಿದ್ದರು; ಏಕೆಂದರೆ ಬ್ಯೂಗಲ್ ರಾಕ್ ಅದರ ಹಾವುಗಳಿಗೆ ಬಹಳ ಖ್ಯಾತಿಯನ್ನು ಪಡೆದಿತ್ತು. ಸ್ವಲ್ಪ ಆಚೆ  ಬಿಎಂಎಸ್ ಕಾಲೇಜು ಆಗಷ್ಟೇ ತೆರೆದಿತ್ತು, ಬುಲ್ ಟೆಂಪಲ್ ರಸ್ತೆಯು (ಅಂದೆಲ್ಲ ಬರೇ ಮನೆಗಳು ಆ ರಸ್ತೆಯಲ್ಲಿ) ಕೂಡ ಸಂಜೆ ಮತ್ತು ರಾತ್ರಿಗಳಲ್ಲಿ ನಿರ್ಜನವಾಗಿರುತ್ತಿ ತ್ತು. ಬುಲ್ ಟೆಂಪಲ್ ರಸ್ತೆಯ ಇನ್ನೊಂದು ಬದಿಯಲ್ಲಿ ಗವಿಪುರಂ ವಿಸ್ತರಣೆ ಇತ್ತು; ಅಲ್ಲಿ ಮಾಸ್ತಿ ಮತ್ತು ವೈ.ಎನ್.ಕೃಷ್ಣಮೂರ್ತಿ (ಪತ್ರಕರ್ತ ವೈ.ಎನ್.ಕೆ) ವಾಸಿಸುತ್ತಿದ್ದರು ಮತ್ತು ಅದರಾಚೆ ಎಲ್ಲೋ ಕೆಂಪಾಂಬುಧಿ ಕೆರೆ ಇದ್ದಿತುನಾವು ಈ ಕಹಳೆ ಬಂಡೆ ಉದ್ಯಾನ (ಇಂದಿನ ಪದ) ದಿಂದ ಸ್ವಲ್ಪ ಉತ್ತರಕ್ಕೆ ಹೋದರೆ, ಬಸವನಗುಡಿ ಪ್ರದೇಶದ ವಾಣಿಜ್ಯ ಚಟುವಟಿಕೆಯ ಕೇಂದ್ರವಾದ ಗಾಂಧಿ ಬಜಾರ್ ಅನ್ನುಸೇರುತ್ತೇವೆ.

ಪಕ್ಕದ ಜಯನಗರ ದೊಡ್ಡದಾಗಿ ಖ್ಯಾತಿ ಗಳಿಸುವ ಮೊದಲು ಗಾಂಧಿಬಜಾರ್ ನಗರದ ದಕ್ಷಿಣ ಭಾಗದಮುಖ್ಯ ಅಂಗಡಿ ಬೀದಿಯಾಗಿತ್ತು. ಆ ಸಮಯದಲ್ಲಿ ಸೌತ್ ಎಂಡ್ ಪ್ರದೇಶ ನಿಜವಾಗಿಯೂ ಬೆಂಗಳೂರಿನ ದಕ್ಷಿಣದ ಕೊನೆಯಾಗಿತ್ತು. ಬಸ್ಸುಗಳು ಅಲ್ಲಿಂದ ಗುಂಡಪ್ಪನವರ ಮನೆಯ ಮುಂದಿನ ನಾಗಸಂದ್ರ ರಸ್ತೆ (ಇಂದು ಡಿವಿಜಿ ರಸ್ತೆ) ಯ ಮೂಲಕ ಗಾಂಧಿಬಜಾರಿಗೆ ಬಂದು ಮಾರ್ಕೆಟ್ಟು ಮತ್ತು ಮೆಜೆಸ್ಟಿಕ್ ಕಡೆಗೆ ಹೋಗುತ್ತಿದ್ದವು  ಮಧ್ಯ ವೃತ್ತದ ಹತ್ತಿರವೇ ಹಲವಾರು ಹೋಟಲುಗಳು-ವಿದ್ಯಾರ್ಥಿ ಭವನ, ಸರ್ಕಲ್ ಲಂಚ್ ಹೋಮ್, ಗೀತಾ ರೆಸ್ಟೋರೆಂಟ್, ಭಟ್ಟರ-ಇದ್ದು ಗಾಂಧಿ ಬಜಾರಿನ ಖ್ಯಾತಿಗೂ ಕಾರಣವಾಗಿದ್ದವು. (ಇಂದಂತೂ ವಿದ್ಯಾರ್ಥಿ ಭವನ ಎಲ್ಲೆಲ್ಲೂ ಪ್ರಸಿದ್ಧಿಯಾಗಿದೆ).

1955ರಲ್ಲಿ ಮಸಾಲೆ ದೋಸೆಯ ಬೆಲೆ ವಿದ್ಯಾರ್ಥಿ ಭವನದಲ್ಲಿ 25 ಪೈಸೆ ಇರುತ್ತಿತ್ತು. ಕೆಲವು ಬಾರಿ ಈ ಹೋಟೆಲುಗಳಲ್ಲಿ ಖ್ಯಾತ ಕನ್ನಡ ಸಾಹಿತಿಗಳನ್ನು ನೋಡಬಹುದಿತ್ತು: ಗೋಪಾಲಕೃಷ್ಣ ಆಡಿಗ, ಲಂಕೇಶ್, ಸುಮತೀಂದ್ರ ನಾಡಿಗ್, ರಾಮಚಂದ್ರ ಶರ್ಮಾ, ಲಂಕೇಶ್, ವೈಎನ್‌ಕೆ ಮತ್ತು ಇತರರು ಅಲ್ಲಿ ಸೇರುತ್ತಿದ್ದರು. ಸಿಗರೇಟುಗಳನ್ನು ಬೌದ್ಧಿಕ ಜೀವನದ ಮೊದಲ ಅವಶ್ಯಕತೆಗಳಲ್ಲಿ ಒಂದೆಂದು ಅನೇಕ ಯುವಕರು ತಿಳಿದಿದ್ದರಿಂದ ಈ ಕೆಲವು ಹೋಟೆಲುಗಳು ಈ ಪವಿತ್ರ ವಿಧಿವಿಧಾನದಲ್ಲಿ ಅನೇಕ ಯುವಕರ ದೀಕ್ಷೆಗೆ ಸಾಕ್ಷಿಯಾಗಿರುತ್ತಿದ್ದವು (ಆ ದಿನಗಳಲ್ಲಿ ಧೂಮಪಾನವು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಅನೈತಿಕ ಎಂದು ಪರಿಗಣಿಸಲಾಗಿತ್ತು).

ಕೆಲವು ಯುವಕರು ಮನೆಗೆ ಹೋಗುವ ಮೊದಲು ಹತ್ತಿರದ ಹರ್ಷ ಸ್ಟೋರ್ಸಿನಲ್ಲಿ ಬಾದಾಮಿ ಹಾಲನ್ನು ಕುಡಿದು ಸಿಗರೇಟು ವಾಸನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ತಿನ್ನುವ ನಿಷಯದಲ್ಲಿ ಈ ‘ಹರ್ಷ ಸ್ಟೋರ್ಸ್’ ಇಡೀ ನಗರದಲ್ಲಿ ಹೊಸಹೊಳವುಗಳನ್ನು ತಂದಿತು. ಬರೇ ಚಕ್ಲಿ ‘ಡ್ರೈ ಅಲ್ಲವೆ, ಜೂಸ ಕುಡಿದು ಹೋಗಿ’ ‘ಬರೇ ಬನ್ ಏಕೆ? ಮಧ್ಯೆ ಬೆಣ್ನೆ ಹಾಕಿಕೊಡ್ತೀವಿ, ಆಮೇಲೆ ಬಾದಾಮಿ ಹಾಲು ಕುಡಿದು ಹೋಗಿ’ ಅಂತೂ ಹೋಟಲೂ ಅಲ್ಲದ, ಅಂಗಡಿಯೂ ಅಲ್ಲದ ಈ ಸ್ಥಳದ ಮುಂದೆ ವಿದ್ಯಾರ್ಥಿಗಳಾದ ನಾವು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೆವು. ನಿಧಾನವಾಗಿ ಇತರ ಬಡಾವಣೆಗಳಲ್ಲೂ ಇದೇ ರೀತಿಯ ಅಂಗಡಿಗಳು ಹುಟ್ಟಿಕೊಂಡವು.

ಗಾಂಧಿ ಬಜಾರ್ ತಿಂಡಿಕ್ಷೇತ್ರದಲ್ಲಿ ಪ್ರವರ್ತಕ ಪ್ರದೇಶವಾಗಿಯೇ ಉಳಿದುಕೊಂಡಿದೆ. ಏಕೆಂದರೆ ನಗರದ ಮೊಟ್ಟಮೊದಲ ದರ್ಶಿನಿ – ಉಪಹಾರ ದರ್ಶಿನಿ – ಕೂಡ ಇಲ್ಲಿಯೇ ಡಿವಿಜಿ ರಸ್ತೆಯಲ್ಲಿ ಶುರುವಾಯಿತು. ಬಸವನಗುಡಿ (ಬಹುಶಃ ಎಲ್ಲಾ ಬೆಂಗಳೂರು?) ಪ್ರದೇಶದ ಜನರ ಅಸಾಧಾರಣ ಆಹಾರ ಪದ್ಧತಿಯ ಬಗ್ಗೆ ಒಂದು ಮಾತು ಹೇಳಲೇ ಬೇಕಾಗಿದೆ. ಮುಂಬೈ ಮತ್ತು ಇತರ ಸ್ಥಳಗಳಲ್ಲಿ, ಜನರು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಏಕೈಕ ಉದ್ದೇಶದಿಂದಹೋಟೆಲುಗಳಿಗೆ ಹೋಗುವುದನ್ನು ನೋಡಿದ್ದೇನೆ.. ಆದರೆ ಬೆಂಗಳೂರಿನಲ್ಲಿ ಹಾಗಲ್ಲ! ಮನೆಯಲ್ಲಿ ಉಪಾಹಾರ ಸೇವಿಸಿದ ನಂತರವೂ (ಪಾಪ ಹೇಗಿತ್ತೋ ಏನೋ!) ಹೋಟೆಲಿಗೆ ಬೆಳಗಿನ ತಿಂಡಿಗೆ ಹೋಗುವುದು ಅಪರೂಪದ ಸಂಗತಿಯೇನಿರಲಿಲ್ಲ! ಸಂಜೆ ಒಂದು ದೋಸೆ ತಿಂದುಕೊಂಡು ಮನೆಗೆ ಹೋಗುವ ಹೊತ್ತಿಗ ಹೊಟ್ಟೆ ಖಾಲಿಯಾಗಿರುತ್ತಾದ್ದರಿಂದ ರಾತ್ರಿ ಉಪವಾಸ ಮಾಡಲು ಆಗುತ್ತದೆಯೇ?. ಬೆಂಗಳೂರಿನಲ್ಲಿ ಅಸಾಧಾರಣವಾಗಿ ಹೆಚ್ಚಿನ ಹೃದಯಾಘಾತ ಸಂಭವಿಸುತ್ತದೆಂದು ಓದಿರಬಹುದು. ಅದಕ್ಕೂ ಮೇಲಿನ ಎಲ್ಲ ಮಾಹಿತಿಗೂ ತಳಕು ಹಾಕುವುದು ಬೇಡ!

ಆ ಕಾಲದ ಬಸವನಗುಡಿಯ ದೊಡ್ಡ ‘ಅಂಗಡಿ’ ಎಂದರೆ ಬಸವನಗುಡಿ ಸಹಕಾರ ಸಂಘ ಅಥವಾ ಸೊಸೈಟಿ. (ನಮ್ಮ ತಂದೆಯೂ ಕೆಲವು ವರ್ಷ ಆ ಸಂಸ್ಥೆಯ ಅಧ್ಯಕ್ಷರಾಗಿದ್ದರು). ಅದು ಒಂದು ತರಹ ಡಿಪಾರ್ಟಮೆಂಟ್ ಸ್ಟೋರ್ಸ್ ಅಗಿತ್ತು. ದಿನಸಿ, ಬಟ್ಟೆ, ಔಷದಿ, ತರಕಾರಿ ಎಲ್ಲ ಒಂದ ಸೂರಿನ ಕೆಳಗೆ, ಆದರೆ ಬೇರೆ ಬೇರೆ ಜಾಗಗಳಲ್ಲಿ ಸಿಗುತ್ತಿದ್ದವು. ಗಾಂದಿಬಜಾರಿನ ಚಿತ್ರದಲ್ಲಿ ಕಾಣುವ ದೊಡ್ಡ ಕಟ್ಟಡವೆ ಆ ಸೊಸೈಟಿ! ಹಿಂದು ಪತ್ರಿಕೆಯ (ದೀಪಾ ಗಣೇಶ, ಫೆ25, 2014) ಲೇಖನದ ಪ್ರಕಾರ ಈ ಸಂಸ್ಥೆ 1908ರಲ್ಲಿ ಸ್ಥಾಪಿತವಾಯಿತಂತೆ. ಮೊದಲಲ್ಲಿ 17 ಜನರು ಒಟ್ಟಿಗೆ ಸೇರಿದ್ದು ಅವರು ಪ್ರತಿ ದಿನ ಮಾರ್ಕೆಟ್ಟಿಗೆ ಹೋಗಿ ಸಾಮಾನು ತಂದು ಕಡಿಮೆ ಬೆಲೆಗೆ ಮಾರುತ್ತಿದ್ದರಂತೆ. ನಿಧಾನವಾಗಿ ಈ ಸಂಸ್ಥೆಗೆ ಬಹಳ ಪೈಪೋಟಿ ಬಂದು ಪ್ರಾಧಾನ್ಯ ಕಡಿಮೆಯಾಯಿತು; ಇಂದು ಹೆಚ್ಚು ಜನಕ್ಕೆ ಅದರ ವಿಷಯ ಗೊತ್ತಿಲ್ಲ.

ಕೆಲವು ಪುಸ್ತಕದ ಅಂಗಡಿಗಳು- ಎಲ.ಎಸ.ಸನ್ಸ, ಎಮ್.ಎಸ್.ಸನ್ನಸ, ವಿ.ಎಸ್ ಅಂಡ ಸನ್ಸ್, ಜಿಕೆ ಅಂಡ ಸನ್ಸ (ಆಗಿನ ಕಾಲದಲ್ಲಿ ಎಲ್ಲಾ ‘ಸನ್ಸ್’!) ಇತ್ಯಾದಿ. ಎಲ್ಲವೂ ಪುಟ್ಟ ಅಂಗಡಿಗಳು. ಮುಖ್ಯವಾಗಿ ಪೆನ್, ಬರೆಯಲು ಪುಸ್ತಕಗಳು, ಪಠ್ಯ ಪುಸ್ತಕಗಳು ಸಿಗುತ್ತಿದ್ದವು; ಕೇಳಿ ಪಡೆಯಬೇಕಿತ್ತು. ಕೆಲಕಾಲ ಬಸವನಗುಡಿ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಒಂದು ಇಂಗ್ಲಿಷ್ ಪುಸ್ತಕಗಳ ಅಂಗಡಿ ಇದ್ದಿತು (ಲಿಟಲ್ ಪ್ರೊಫೆಸರ್?). ಒಟ್ಟಿನಲ್ಲಿ ಈಗಿನ ಪುಸ್ತಕಗಳ ಅಂಗಡಿಯ ಪರಿಕಲ್ಪನೆಯೇ ಬೇರೆ; ಅಂತಹ ಮಳಿಗೆಗಳು ಗಾಂಧಿಬಜಾರಿಗೆ ಬರಲು ಇನ್ನೂ ದಶಕಗಳಿದ್ದವು.

ಸೊಸೈಟಿ ವಿರುದ್ದ ಉತ್ತರ ಪೂರ್ವ ದಿಕ್ಕಿನಲ್ಲಿ ಅಣ್ಣಯ್ಯನವರ ಯುವಕ ಸಂಘ ಇದ್ದಿತು. ಅಣ್ಣಯ್ಯ ಗಾಂಧಿವಾದಿಯಾಗಿ ಆ ಸಮಯದಲ್ಲಿ ಯುವಕರೂ ಆಗಿದ್ದರು. ಆಗಾಗ್ಗೆ ಅವರು ಅಲ್ಲಿ ಭಾಷಣಗಳನ್ನು ಏರ್ಪಡಿಸುತ್ತಿದ್ದರು. ಸರ್ಕಲಿನಲ್ಲಿ ಅಲ್ಲಿ ಇಲ್ಲಿ ನಿಂತು ನಾವು ಭಾಷಣಗಳನ್ನು ಕೇಳಿಸಿಕೊಳ್ಲುತಿದೆವು. ನನಗೆ ನೆನಪಿದ್ದಂತೆ ಟ್ರಿನಿಡಾಡಿನ ಚೆಡ್ಡಿ ಜಗನ್ ಬಂದು ಅಲ್ಲಿ ಮಾತಾಡಿದ್ದರು. ಅದಲ್ಲದೆ ಕೆ.ಹನುಮಂತಯ್ಯ ಇತ್ಯಾದಿ ನಾಯಕರೂ ಅಲ್ಲಿ ಭಾಷಣ ಕೊಡುತ್ತಿದ್ದರು.

(ಚಿತ್ರ: ಅಂದಿನ ಕೆ.ಆರ್.ರಸ್ತೆಯ ಭವ್ಯ ನೋಟ. ಒಂದು ಕಿ ಮೀದೂರ ಎರಡೂ ಕಡೆ ಎತ್ತರದ, ಸೊಂಪಾಗಿ ಬೆಳದ ಮರಗಳು (ಕೃಪೆ – ಬೆಂಗಳೂರು ಬೈ ಗಾನ್ )

ನಾನು ಹಲವಾರು ಬಾರಿ ಅಲ್ಲಿ ಮೇಲೆ ಹೋಗಿದ್ದೆ. ಅಣ್ಣಯ್ಯ ಪರೀಕ್ಷೆಗೆ ಮುಂಚೆ ಸ್ಥಳೀಯ ಅದ್ಯಾಪಕರಿಂದ ದೊಡ್ಡ ದೊಡ್ಡ ‘ಕೋಚಿಂಗ’ ಕ್ಲಾಸುಗಳನ್ನು ನಡೆಸುತ್ತಿದ್ದರು. ಬಹಳ ಕಡಿಮೆ ಹಣ ಶುಲ್ಕವಾದ್ದರಿಂದ ನೂರಾರು ವಿದ್ಯಾರ್ಥಿಗಳು ಈ ಕ್ಲಾಸುಗಳಿಗೆ ಹೋಗುತ್ತಿದ್ದರು. ಗಾಂಧಿಬಜಾರ್ ವೃತ್ತದಲ್ಲಿ ಇದ್ದ ಯುವಕ ಸಂಘ ಯಾವಾಗ ಅಲ್ಲಿಂದ ಅಯ್ಯರ ಕ್ಲಬ್ ಬಳಿ ಹೋಯಿತೊ ನನಗೆ ಗೊತ್ತಿಲ್ಲ.

ಬಡಾವಣೆಯ ಮಕ್ಕಳಲ್ಲಿ ಸುಮಾರು ಮಂದಿ ಗುರುಕುಲ ಎಂಬ ಹೆಸರಿನ, ಆದರೆ ಅಧಿಕೃತವಾಗಿ ಬೇರೆ ಏನೋ ಹೆಸರು ಇದ್ದ, ಶಾಲೆಯಲ್ಲಿ ಓದುತ್ತಿದ್ದರು. ಇದು ನಾಗಸಂದ್ರ ರಸ್ತೆಯಲ್ಲಿ ಇಂದಿನ ಮಂಜುನಾಥ ಕಾಂಡಿಮೆಂಟ್ಸ ಅಂಗಡಿಯ ಎದಿರು ಇದ್ದಿತು. ನಾವು (ಗಂಡು ಮತ್ತು ಹೆಣ್ಣು ಮಕ್ಕಳು) ನೆಲದ ಮೇಲೆ ಅಥವಾ ಹಲಗೆಗಳ ಮೇಲೆ ಕೂರುತಿದ್ದೆವು. ಪ್ರತಿ ಬೆಳಿಗ್ಗೆ ಕಾಯೌ ಶ್ರೀ ಗೌರಿ ಮತ್ತು ಸ್ವಾಮಿದೇವನೆ ಲೋಕ ಪಾಲನೆ ಹಾಡುತ್ತಿದ್ದೆವು.

ಪಾಠಗಳೆಲ್ಲಾ ಕನ್ನಡದಲ್ಲಿ ಮತ್ತು ಇಂಗ್ಲಿಷನ್ನು ಒಂದು ಬೇರೆ ಭಾಷೆಯಾಗಿ ಕಲಿಸುತ್ತಿದ್ದರು. ಶಾಲೆಯ ಮುಖ್ಯೋಪಾದ್ಯಾಯರು ಬಹಳ ಶಿಸ್ತಿನ ಮನುಷ್ಯರಾಗಿದ್ದು, ಬೆತ್ತವನ್ನು ಬಳಸಲು ಹಿಂಜರಿಯುತ್ತಿರಲಿಲ್ಲ. ಎಲ್.ಎಸ್.(ಲೋಅರ್ ಸೆಕೆಂಡರಿ) ಪರೀಕ್ಷೆಯ ಸಮಯದಲ್ಲಿ ಕೆಲವು ಹುಡುಗರನ್ನು ಅಲ್ಲಿಯೇ ಮಲಗಿಸಿಕೊಂಡು ಬೆಳಿಗ್ಗೆ ಬೇಗ ಎಬ್ಬಿಸಿ ‘ಉರು’ ಹೊಡೆಸುತ್ತಿದ್ದರು. ಅಲ್ಲಿ ತೇರ್ಗಡೆಯಾದ ನಂತರ ನಾನು 1952ರಲ್ಲಿ ನ್ಯಾಶನಲ ಹೈ ಸ್ಕೂಲಿಗೆ ಸೇರಿದ..

ಬಸವನಗುಡಿಯಲ್ಲ ಹಲವಾರು ಶಾಲಾ ಕಾಲೇಜುಗಳಿದ್ದವು. ನ್ಯಾಶನಲ್ ಹೈ ಸ್ಕೂಲು, ಬೆಂಗಳೂರು ಹೈಸ್ಕೂಲು, ಆಚಾರ್ಯ ಪಾಠಶಾಲೆ, ಗಿರಿಜಮ್ಮ ಮುಕುಂದ, ವಾಣಿ ವಿಲಾಸ್, ಟಿನ್ ಸ್ಕೂಲ್, ಇತ್ಯಾದಿ; ನ್ಯಾಶನಲ್ ಕಾಲೇಜ್, ವಿಜಯ ಕಾಲೇಜು, ಬಿಎಂಎಸ್ ಕಾಲೇಜು, ಎಪಿಎಸ್ ಕಾಲೇಜು ಇತ್ಯಾದಿ. ನಾನು 1952ರಲ್ಲಿ ನ್ಯಾಶನಲ್ ಹೈಸ್ಕೂಲು ಸೇರಿದಾಗ ಎಲ್ಲ ಮಕ್ಕಳೂ ಹತ್ತಿರದಿಂದ ಬರುತ್ತಿದ್ದರು. ಕನ್ನಡ ಬರದವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಹೆಸರುಗಳೆಲ್ಲಾ ಸಾಮಾನ್ಯ ಕನ್ನಡ ಹೆಸರುಗಳು. ನಿರ್ಮಲ ಕುಮಾರ ಕಾಮತ ಎಂಬ ಹುಡುಗ ಸೇರಿದಾಗ (ಆತ ನೋಡಲೂ ಸ್ವಲ್ಪ ಬೇರೆ ಇದ್ದ) ಅದೇ ದೊಡ್ಡ ವಿಷಯವಾಗಿತ್ತು (ಅವನು ಮುಂದೆ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದ ನೆನಪು).

1955ರಲ್ಲಿ ನಾನು ನ್ಯಾಶನಲ್ ಕಾಲೇಜು ಸೇರಿದಾಗ ಬೇರೆ ಬೇರೆ ದೂರದ ಜಾಗಳಿಂದ (ಮಲ್ಲೇಶ್ವರ, ಶಿವಾಜಿನಗರ ಇತ್ಯಾದಿ) ಬರುತ್ತಿದ್ದ ಹುಡುಗರು ಸಹಪಾಠಿಗಳಾದರು. ತರಗತಿಯಲ್ಲೂ ವೈವಿಧ್ಯತೆಯೂ ಹೆಚ್ಚಾಯಿತು. ಆಗ ಬಹಳ ಜನಪ್ರಿಯರಾಗಿದ್ದವರು ಹೆಚ್.ನರಸಿಂಹಯ್ಯನವರು. ಮುಂದೆ ಅವರು ದಂತಕಥೆಯಾಗಿದ್ದು ಇತಿಹಾಸ! ಈ ಕಾಲೇಜು ಸಮುದಾಯಕ್ಕಾಗಿ ಭವಿಷ್ಯದ ನಾಯಕರನ್ನು ಸಿದ್ಧಪಡಿಸುತ್ತಲೂ ಇದ್ದಿತು. ಕನ್ನಡ ರಂಗಭೂಮಿಗೆ ಮತ್ತು ಕ್ರಿಕೆಟ್ ಗೆ ಕಾಲೇಜಿನ, ಅಂದರೆ ಬಸವನಗುಡಿಯ, ಕೊಡುಗೆ ದೊಡ್ಡದೇ!.

ನಾರಾಯಣ್ (ಅವರು ನಾಣಿ ಎಂದೇ ಪ್ರಸಿದ್ಧ), ಎ.ಟಿ.ಪದ್ಮನಾಭ್, ಜಿಕೆ ಗೋವಿಂದ ರಾವ್, ಸಿ.ಆರ್. ಸಿಂಹ, ಮತ್ತು ಇತರರು ನಾಟಕಕ್ಷೇತ್ರದಲ್ಲಿ  ಮತ್ತು ಪ್ರಸನ್ನ, ಚಂದ್ರಶೇಖರ ಅಂತಹ ಮೇರು ಆಟಗಾರರು ಈ ಬಸವನಗುಡಿಯಲ್ಲಿ ತಮ್ಮ ಕ್ರಿಕೆಟ ಜೀವನವನ್ನು ಆರಂಭಿಸಿದ್ದರು.

ಗಾಂಧಿಬಜಾರನಿಂದ ಹೊರಡುವ ಎರಡು ಬಸ್ಸುಗಳನ್ನು ನಾನು ಹೆಚ್ಚು ಬಳಸುತ್ತಿದ್ದೆ. ವಿದ್ಯಾರ್ಥಿ ಭವನ ಎದಿರು ಜಾಗದಿಂಧ ಕಂಟೋನ್ಮೆಂಟಿಗೆ ಹೋಗುತ್ತಿದ್ದ #16 ಮತ್ತು ಇಂದಿನ ಕೋಆಪ್ಟೆಕ್ಸ ಹತ್ತಿರದಿಂದ ಮಲ್ಲೇಶ್ವರಕ್ಕೆ ಹೋಗುತ್ತಿದ್ದ #11. #16 ವೈಎನಕೆ ಬಳಸುತ್ತಿದ್ದ ಬಸ್ಸು! ನಾನೂ ಕಂಟೋನ್ಮೆಂಟಿನ ಬ್ರಿಟಿಷ್ ಕೌನ್ಸಿಲಗೆ ಹೋಗಲು ಅಥವಾ ಅಲ್ಲಿ ಸಿನೆಮಾ ನೋಡಲು ಇದೇ ಬಸ್ಸನ್ನು ತೆಗೆದುಕೊಳ್ಳುತ್ತಿದ್ದೆ. ನಾನು 1960ರಲ್ಲಿ ಸೆಂಟ್ರಲ್ ಕಾಲೇಜಿಗೆ ಹೋಗಲು ಶುರುಮಾಡಿದಾಗ #11 ಅನ್ನು ಬಳಸಿಕೊಳ್ಲಲು ಶುರಮಾಡಿದೆ (ಆಗ ಆ ಪ್ರಯಾಣಕ್ಕೆ 13 ಪೈಸೆ ಟಿಕೆಟ್).  ಗಾಂಧಿಬಜಾರಿಲ್ಲಿ ಆ ಬಸ್ಸಿಗೋಸ್ಕರ ದೊಡ್ಡ ಕ್ಯೂ ಇರುತ್ತಿತ್ತು.

(ಚಿತ್ರ: ನ್ಯಾಶನಲ್ ಹೈ ಸ್ಕೂಲು (ರಾಷ್ಟ್ರೀಯ ಪ್ರೌಢಶಾಲೆ ( ಹಿಂದು, ಡಿ30,2017) :  1955 ಎಸ್‌ಎಸ್‌ಎಲ್‌ಸಿ ತರಗತಿಯ ಚಿತ್ರ. ಕೆಳಗಿನಿಂದ ಎರಡನೇ ಸಾಲು ಹಲವಾರು ತಲೆಮಾರಿನ ವಿದ್ಯಾರ್ಥಿಗಳಿಗೆ ಕಲಿಸಿದ ಅನೇಕ ಶಿಕ್ಷಕರನ್ನು ತೋರಿಸುತ್ತದೆ ( ಕೃಪೆ: ಎ.ಜೆ.ಅಶೋಕಕುಮಾರ ಮತ್ತು ಜಿ.ಎಸ್.ರಾಧಾಕೃಷ್ಣ)

ಸರ್ಕಾರೀ ಕಛೇರಿಗಳಿಗೆ ಹೋಗುವವರು ಮತ್ತು ಮಹಾರಾಣೀ ಕಾಲೇಜಿಗೆ ಹೋಗುತ್ತಿದ್ದ ಯುವತಿಯರು ಕೂಡ ಇದೇ ಬಸ್ಸನ್ನು ಉಪಯೋಗಿಸುತ್ತಿದ್ದರು. ಆದ್ದರಿಂದ ಕ್ಯೂನಲ್ಲಿ ಬಹಳ ಹುಡುಗಿಯರು ಇರುತ್ತಿದ್ದರು. ಆದರೆ ಎಷ್ಟೋ ಜನ ಕೆಲಸಕ್ಕೆ ಹೋಗುವವರು ಮತ್ತು ಹೋಗದಿರುವರು, ಯುವಕರು ಮತ್ತು ಯುವಕರಲ್ಲದವರು ಕೂಡ ಈ ಕ್ಯೂ ಸೇರುತ್ತಿದ್ದರು. ಇಂತಹವರು ಬಸ್ಸಿನ ಬಾಗಿಲ ತನಕ ಹೋಗಿ ಮತ್ತೆ ಹಿಂದೆ ಹೋಗಿ ಕ್ಯೂ ಅನ್ನು ಸೇರುತಿದ್ದರು. ಅಂತೂ 11 ನಂಬರಿನ ಬಸ್ಸು ಅನೇಕ ಭಗ್ನ ಪ್ರೇಮಗಳಿಗೂ ಕಾರಣವಾಗಿದ್ದಿರಬಹುದು ಮತ್ತು  ಆಶು ಕವಿಗಳನ್ನೂ ಹುಟ್ಟಿಸಿದ್ದಿರಬಹುದು.

ಈ ಸಂದರ್ಭದಲ್ಲಿ ನಮ್ಮ ಬಾಲ್ಯದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿದ ಈ ಪ್ರದೇಶದ ವೈದ್ಯರಿಗೆ (ಡಾ. ಬಿ.ವಿ.ರಾಮಸ್ವಾಮಿ, ಎ.ಎಸ್.ರಾಮಸ್ವಾಮಿ ಧ್ರುವನಾರಾಯಣ, ಅಂಬುಪಿಳ್ಳೈ, ಸುಸೈ ರಾಯನ್, ಆಚಾರ್ಯ ಮತ್ತು ಇತರರು) ಧನ್ಯವಾದಗಳು ಸಲ್ಲಬೇಕು. ಇದಲ್ಲದೆ ಎಂ.ಆರ್.ಲಕ್ಷಮ್ಮ, ಪಿ.ಆರ್.ಜಯಲಕ್ಷಮ್ಮ, ಟಿ.ಆರ್.ಶಾಮಣ್ಣ, ವಿ.ಎಸ್.ಕೃಷ್ಣ ಅಯ್ಯರ್, ಅಣ್ಣಯ್ಯ, ದಯಾನಂದ ಸಾಗರ್ ಮತ್ತು ಇತರರು ಈ ಪ್ರದೇಶದ ಜನ ಮುಂದೆ ಬರಲು ಸಾಮಾಜಿಕ ಕ್ಷೇತ್ರದಲ್ಲಿ ಕೊಡುಗೆಗಳನ್ನು ನೀಡಿದರು.

ನಾನು 1962ರಲ್ಲಿ ಬೆಂಗಳೂರನ್ನು ಬಿಟ್ಟು ಹೋದರೂ ಆಗಾಗ್ಗೆ ಮದ್ಯೆ ಬರುತ್ತಲೇ ಇದ್ದು. 2002ರಲ್ಲಿ ಮತ್ತ ನಿಜಕ್ಕೂ ವಾಪಸ್ಸು ಬಂದೆ. ಬಸವನಗುಡಿಯಲ್ಲಿ ಈಗಲೂ ಕನ್ನಡ ಸಂಸ್ಕೃತಿ ಸುರಕ್ಷಿತವಾಗಿದೆ ಮತ್ತು ಜೀವಂತವಾಗಿದೆ ಎಂದು ಹೇಳಬಹುದು. ಜಾಗತೀಕರಣದ ಸಮಯದಲ್ಲಿ ಹೀಗೆಯೇ ಉಳಿದಿರುವದು ಒಂದು ಸ್ವಾರಸ್ಯದ ವಿಷಯ ಕನ್ನಡ ಮಾತ್ರ ಬರುವವರು ಕೂಡ ಈ ಜಾಗದಲ್ಲಿ ಇನ್ನೂ ನಿಭಾಯಿಸಬಹುದು. ಮೊದಲಿಂದಲೂ ಇದು ಹೆಚ್ಚು ಸಾಕ್ಷರತೆಯ ಕ್ಷೇತ್ರವಾಗಿತ್ತು ಮತ್ತು ಈಗಲೂ ಇದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆಗಳನ್ನು ಅದ್ದೂರಿಯಾಗಿಯೂ ಆಚರಿಸುತ್ತದೆ. ಆದರೆ ಈ ಪ್ರದೇಶದ ಜನತೆ ಪ್ರಾಯಶಃ ಸಂಪ್ರದಾಯವಾದಿಯಾಗಿಯೇ ಉಳಿದಿದೆ.

‍ಲೇಖಕರು Avadhi

May 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: