ಕಟ್ಟಿದ ರೆಕ್ಕೆಗಳ ಬಿಚ್ಚಲೇಬೇಕು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ನವ ದೆಹಲಿಯಲ್ಲಿರುವ ನೀಪಾ ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ (‘ನೀಪಾ’ದಲ್ಲಿ) ‘ವಯಸ್ಕರ ಶಿಕ್ಷಣ ಆಂದೋಲನಗಳ ಯೋಜನೆ ಮತ್ತು ನಿರ್ವಹಣೆ ತರಬೇತಿʼಗೆ ಕರ್ನಾಟಕದಿಂದ ನಿಯುಕ್ತರಾದವರಲ್ಲಿ ಒಬ್ಬನಾಗಿ ನಾನೂ ಹೋಗಿದ್ದೆ (೧೯೯೧ರ ಆರಂಭ). ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ದ ಸುಮಾರು ಐವತ್ತು ಪ್ರತಿನಿಧಿಗಳು.

ವಯಸ್ಕರ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸರ್ಕಾರದ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು. ಅಷ್ಟೂ ಜನರಲ್ಲಿ ನಾನೇ ಆಗಿನ್ನೂ ಕಾಲೇಜು ಮುಗಿಸಿ ಈ ಕ್ಷೇತ್ರದಲ್ಲಿ ಕಣ್ಬಿಡುತ್ತಿದ್ದ ಹುಡುಗ. ಉಳಿದವರೆಲ್ಲರೂ ಸಾಕಷ್ಟು ದೊಡ್ಡವರು. (ನಾನು ಆಗ ತಾನೆ ಅರಸೀಕೆರೆಯಲ್ಲಿರುವ ಕಸ್ತೂರ್ ಬಾ ಗಾಂಧಿ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್‌ನಲ್ಲಿದ್ದ ವಯಸ್ಕರ ಶಿಕ್ಷಣ ಆಂದೋಲನಕ್ಕಾಗಿ ಮೀಸಲಾಗಿದ್ದ ಜಿಲ್ಲಾ ಸಂಪನ್ಮೂಲ ಕೇಂದ್ರವನ್ನು ಸೇರಿದ್ದೆ. ದೆಹಲಿಯಲ್ಲಿನ ಕಾರ್ಯಕ್ರಮಕ್ಕೆ ನನ್ನ ಸಹೋದ್ಯೋಗಿ ಸೀಮಾ ಬ್ರಗಾಂಝಾ ಹೋಗಬೇಕಿತ್ತು. ಕಾರಣಾಂತರಗಳಿಂದ ಆಕೆಗೆ ಪ್ರಯಾಣ ಅಸಾಧ್ಯವಾಗಿತ್ತು. ಆಗ ಕರ್ನಾಟಕದಲ್ಲಿ ವಯಸ್ಕರ ಶಿಕ್ಷಣ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದ ಶ್ರೀ ಮದನಗೋಪಾಲ್‌ ಅವರು ನನ್ನನ್ನು ಕರೆಯಿಸಿ ʼಡೆಲ್ಲಿಗೆ ಹೋಗ್ತಿಯೇನೋ?ʼ ಎಂಬ ಸಲಹೆ ಬೆರೆತ ಪ್ರಶ್ನೆ ಹೇಳಿದಾಗ ಹ್ಞೂ ಅಂದದ್ದಷ್ಟೇ ಗೊತ್ತು. ಕೈಗೆ ಪತ್ರ ಕೊಟ್ಟು ಕಳಿಸಿಯೇ ಬಿಟ್ಟಿದ್ದರು).

ವಯಸ್ಕರ ಶಿಕ್ಷಣವನ್ನು ದೇಶದೆಲ್ಲೆಡೆ ವಿಸ್ತರಿಸಬೇಕು ಎನ್ನುವ ಯೋಜನೆ ಆಗಷ್ಟೇ ಹೊರಬಿದ್ದಿತ್ತು. ದೇಶದ ವಿವಿಧ ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ ‘ಸಂಪೂರ್ಣ ಸಾಕ್ಷರತಾ ಆಂದೋಲನ’ ಕಾರ್ಯಕ್ರಮಗಳನ್ನು ನಡೆಸಿ ಸಾಧ್ಯಾಸಾಧ್ಯತೆಗಳನ್ನು ವಿಮರ್ಶಿಸಿದ ಕೇಂದ್ರ ಸರ್ಕಾರದ ಹೊಸ ಯೋಜನೆಯನ್ನು ಮುಂದಿಟ್ಟಿತ್ತು. ದೇಶದೆಲ್ಲೆಡೆ ತರಬೇತಿದಾರರ ತರಬೇತಿಗಳನ್ನು ನಡೆಸಬೇಕು.

ಹೀಗೆ ತರಬೇತಿ ಪಡೆದವರು ಸಮುದಾಯಗಳ ತಳಮಟ್ಟದಲ್ಲಿ ಶಿಕ್ಷಣ ನಾಯಕತ್ವ ಬೆಳೆಸುವಂತಹ ದೊಡ್ಡ ಪಡೆಗಳನ್ನು ಸಿದ್ಧ ಮಾಡಬೇಕು. ಅಂತಹ ತರಬೇತಿದಾರರ ತರಬೇತಿಗಳನ್ನು ನಡೆಸುವುದು ವಿಧಾನ, ರಾಜ್ಯ ಮಟ್ಟದಲ್ಲಿ ವಯಸ್ಕರಿಗಾಗಿ ಸಂಪನ್ಮೂಲಗಳನ್ನು ಬೆಳೆಸುವುದು, ಆಂದೋಲನದ ಕಾಲಾವಧಿ ಕೇವಲ ಕೆಲವು ವರ್ಷಗಳಿಗಷ್ಟೇ ಸೀಮಿತವಾಗದೆ ಅದು ಎಲ್ಲೆಡೆ ಪಸರಿಸಬೇಕು, ವಯಸ್ಕರ ಶಿಕ್ಷಣದ ಫಲ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ಖಾತರಿಗೊಳಿಸಲು ಸಾಧನವಾಗಬೇಕು, ಬಾಲಕಾರ್ಮಿಕ ಪದ್ಧತಿ ಕೊನೆಗಾಣಬೇಕು, ವಯಸ್ಕರಿಗೆ ತಕ್ಕ ಕೂಲಿ ಸಿಗುವಂತೆ ಆಗಬೇಕೆಂದರೆ ಎಲ್ಲ ವಯಸ್ಕರು ತಮ್ಮ ಶ್ರಮ ಮತ್ತು ಕೂಲಿ ಕುರಿತು ಚೌಕಾಸಿ ಮಾಡುವುದನ್ನು ಕಲಿತಿರಬೇಕು ಎಂದೆಲ್ಲಾ ಚರ್ಚೆಗಳು ತರಬೇತಿಯಲ್ಲಿ ನಡೆದಿತ್ತು.

ಆರು ವಾರಗಳ ಸುದೀರ್ಘ ತರಬೇತಿ ಬಹಳ ಪೊಗದೊಸ್ತಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ದಿಗ್ಗಜರೆಲ್ಲಾ ತರಬೇತಿ ನೀಡಲು, ಭಾಷಣ ಮಾಡಲು, ತಮ್ಮ ಪ್ರಯೋಗ ಅನುಭವಗಳ ಪ್ರಾತ್ಯಕ್ಷಿಕೆ ತೋರಲು ಬರುತ್ತಿದ್ದರು. ಆಗ ವಯಸ್ಕರ ಶಿಕ್ಷಣ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ಶ್ರೀಮತಿ ಅನಿತಾ ಕೌಲ್‌ ಅವರೂ ಸಹ ಕೆಲವು ಅಧಿವೇಶನಗಳನ್ನು ನಡೆಸಿದ್ದರು. ತರಬೇತಿಯ ಮುಖ್ಯಸ್ಥರು ಚೆನ್ನೈನ ಫಾದರ್‌ ಡಾ. ಗೋಮೇಝ್.‌ ವಯಸ್ಕರ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣ ಕುರಿತು ಅವರೊಂದು ದೊಡ್ಡ ಹೆಸರು. ನೀಪಾದ ಪರವಾಗಿ ಕಾರ್ಯಕ್ರಮ ನಿರ್ದೇಶಕರು ‍ಶ್ರೀಮತಿ ಸುಸ್ಮಿತ (ಹೆಸರು ಬದಲಿಸಲಾಗಿದೆ).

ಕಾರ್ಯಕ್ರಮ ಶುರುವಾಗಿ ಎರಡನೇ ವಾರಕ್ಕೆ ಕಾಲಿಡುವ ಹೊತ್ತಿಗೆ, ನಾನು  ಎಲ್ಲರಿಗಿಂತಲೂ ಚಿಕ್ಕವನು ಎಂಬ ಕಾರಣವೂ ಸೇರಿ, ಎಲ್ಲ ಚರ್ಚೆಗಳಿಗೆ, ಪ್ರಯೋಗಗಳಿಗೆ, ಮಂಡನೆಗಳಿಗೆ ಮುಂದಾಳಾಗಿ ಹೋಗುತ್ತಿದ್ದೆ ಎನ್ನುವ ಕಾರಣದಿಂದಲೋ, ಶನಿವಾರ ಭಾನುವಾರಗಳಂದು ನನ್ನ ಹಿರಿಯ ಜೊತೆಗಾರರೆಲ್ಲ ದೆಹಲಿಯ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿಗೆ ಹೊರಟರೆ, ಖರ್ಚಿಗೆ ಕಾಸಿಲ್ಲದ ಖಾಲಿ ಜೇಬಿನ ನಾನೊಬ್ಬ ಮಾತ್ರ ಒಂಟಿಯಾಗಿ  ಕುಳಿತು ಓದು-ಬರೆಹದಲ್ಲಿ ತೊಡಗಿರುತ್ತಿದ್ದುದನ್ನು ಗಮನಿಸಿಯೋ, ಗೋಮೇಝ್‌ ಮತ್ತು ಸುಸ್ಮಿತಾ ಇಬ್ಬರೂ ಪ್ರೀತಿ ಬೆರೆತ ಕಾಳಜಿಯೊಂದಿಗೆ ಹಲವು ಚಿಕ್ಕಪುಟ್ಟ ಜವಾಬ್ದಾರಿಗಳನ್ನು ನನಗೆ ವಹಿಸಲಾರಂಭಿಸಿದರು. ಹಾಗಾಗಿ, ಎನ್.ಸಿ.ಆರ್.ಟಿ. ಆವರಣದಲ್ಲೇ ಇದ್ದ ಸುಸ್ಮಿತಾ ಅವರ ಮನೆಗೂ, ಏಷಿಯನ್‌ ಗೇಮ್ಸ್‌ ವಸತಿ ನಿಲಯದಲ್ಲಿದ್ದ ಡಾ. ಗೋಮೇಝ್‌ ಅವರ ಮನೆಗೂ ಹೋಗಿಬರುವುದು ಅನಿವಾರ್ಯವಾಗಿತ್ತು.  

ಹೀಗೆ ಸುಸ್ಮಿತಾ ಅವರ ಮನೆಗೆ ಮೊದಲ ಬಾರಿಗೆ ಹೋದಾಗ ನಾನು ಕಂಡದ್ದು ಒಂದು ರೆಕ್ಕೆ ಕಟ್ಟಿದ್ದ ಹಕ್ಕಿ! 

ಆ ಹೊತ್ತು ಮನೆಗೆ ಹೋದ ಕೂಡಲೇ ಸುಸ್ಮಿತಾ ಮೇಡಂ ಕೂರಲು ಹೇಳಿದರು ಮತ್ತು ಕೆಲವೇ ನಿಮಿಷಗಳಲ್ಲಿ ಮನೆಯೊಳಗಿಂದ ಒಬ್ಬ ಬಾಲಕಿ ಟ್ರೇನಲ್ಲಿ ನೀರು ತುಂಬಿದ ಗಾಜಿನ ಲೋಟವಿಟ್ಟುಕೊಂಡು ಬಂದಳು. ಅದನ್ನು ನೋಡುತ್ತಿದ್ದಂತೆಯೇ ನನ್ನೊಳಗೊಂದು ತಳಮಳ ಆರಂಭವಾಗಿತ್ತು. ಆ ಹುಡುಗಿ ಅದೇಕೋ ಏನೋ ಎದುರಿದ್ದ ಟೀಪಾಯ್‌ ಮೇಲೆ ಲೋಟವನ್ನು ಇಡುವಾಗ ನೀರು ತುಳುಕಿತು.ಕೂಡಲೇ ಸುಸ್ಮಿತಾ ಅವರ ಬಾಯಿಂದ ಹಿಂದಿಯ ಯಾವುದೋ ಉಪಭಾಷೆಯಲ್ಲಿ ಬೈಗುಳದ ಮಾತೊಂದು ಥಟ್ ಅಂತ ಹೊರಬಿತ್ತು… ಆ ಹುಡುಗಿ  ಕಣ್ಣಲ್ಲಿ ನೀರು ತುಂಬಿತು, ‘ಕ್ಷಮಿಸಿ’ ಎಂದೇನೋ ಹೇಳಿ ಒಳಗೋಡಿದಳು.

ಆ ಹೊತ್ತು ತಕ್ಷಣಕ್ಕೆ ನಾನು ಏನೂ ಪ್ರತಿಕ್ರಿಯಿಸಲಿಲ್ಲ. ಹಾಸ್ಟೆಲ್‌ ಕೋಣೆಗೆ ಬಂದವನಿಗೆ ಮನಸ್ಸಿನಲ್ಲಿ ಏನೋ ಆಂದೋಲನ; ಆ ಬಾಲಕಾರ್ಮಿಕಗಳನ್ನು ನೋಡಿಯೂ ನಾನು ಸುಮ್ಮನೆ ಬಂದದ್ದು ಎಷ್ಟು ಸರಿ? ಕಾಲೇಜಿನಲ್ಲಿ ಸಮಾಜಕಾರ್ಯ ಅಭ್ಯಾಸದ ಕಾಲಕ್ಕೆ ಬಾಲಕಾರ್ಮಿಕ ಪದ್ಧತಿಯನ್ನು ಕುರಿತು ಅರಿತಿದ್ದೇನೆ, ಮನೆಗೆಲಸಕ್ಕೆ ಮಗುವನ್ನು ಇಟ್ಟುಕೊಳ್ಳುವುದು ಸರಿಯಲ್ಲ… ಇತ್ಯಾದಿ. ತರಬೇತಿ ಕಾರ್ಯಕ್ರಮ ಮುಗಿಯುವವರೆಗೆ ನಾನು ಸುಸ್ಮಿತಾ ಅವರ ಮನೆಗೆ ಹಲವು ಬಾರಿ ಹೋಗಿದ್ದೆ. ಆ ಕೆಲಸದ ಹುಡುಗಿ ನೀರು ತಂದಿಟ್ಟಾಗ,ಟೀ ಕೊಟ್ಟಾಗ, ಕುಡಿದಿಟ್ಟ ಬಟ್ಟಲುಗಳನ್ನು ತಗೆದಿಡುವಾಗ ನನ್ನನ್ನು ಏನೋ ಅಪರಾಧೀ ಭಾವನೆ ಕಾಡುತ್ತಿತ್ತು. 

ಡಾ. ಗೋಮೇಝ್‌ ಅವರೊಡನೆ ಒಂದು ಸಂಜೆ ಮಾತನಾಡುತ್ತಾ ಹೆಜ್ಜೆ ಹಾಕುತ್ತಿದ್ದಾಗ ನನ್ನ ದುಗುಡವನ್ನು ಹೊರ ಹಾಕಿದೆ. ಆತ ಗಂಭೀರವಾಗಿ ನಡೆಯುತ್ತಾ, ‘ಶಿಕ್ಷಣವೊಂದೇ ಈ ಸಮಸ್ಯೆಯನ್ನು ಬಗೆಹರಿಸಲು ಇರುವ ಅಸ್ತ್ರ. ವಯಸ್ಕರ ಶಿಕ್ಷಣ ಅದಕ್ಕೊಂದು ಆರಂಭ. ಮುಂದೊಂದು ದಿನ ಶಿಕ್ಷಣದ ಮೌಲ್ಯವನ್ನು ಜನರೆಲ್ಲರೂ ಅರಿತುಕೊಂಡರೆ, ನೀನೀಗ ಹೇಳಿದ ಮಕ್ಕಳ ಶೋಷಣೆ ನಿಲ್ಲುತ್ತೆ. ಮುಖ್ಯವಾಗಿ ತಳಸಮುದಾಯಗಳ ಮಕ್ಕಳ ರಕ್ಷಣೆ/ಏಳ್ಗೆ ಆಗುತ್ತದೆ. ನೀನು ನೋಡಿದ್ದು ಒಬ್ಬರ ಮನೆಯಲ್ಲಿ. ಇದು ಎಲ್ಲ ನಗರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಶಿಕ್ಷಿತರು, ಉದ್ಯೋಗ ಉಳ್ಳವರು ಮತ್ತು ‍ಶ್ರೀಮಂತರ ಮನೆಗೆಲಸಕ್ಕೆ ಒಂದು ಮಗು ಬೇಕೇಬೇಕು ಎನ್ನುವುದು ಇಲ್ಲಿನ ಜನರ ಜೀವನ ವಿಧಾನವೇ ಆಗಿಬಿಟ್ಟಿದೆ’ ಎಂದರು.

ಈ ಮುಖಾಮುಖಿ ಅನುಭವ ಆಗಿ ಮೂರು ದಶಕಗಳೇ ಕಳೆದಿವೆ. ಉತ್ತರೋತ್ತರ ನನ್ನ ವೃತ್ತಿಯ ಕ್ಷೇತ್ರದಲ್ಲಿ ಗಳಿಸಿದ ಅನುಭವ, ಮೈಗೂಡಿದ ಮೌಲ್ಯಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಅದರಲ್ಲೂ ಮನೆಗೆಲಸಕ್ಕೆ ಮಕ್ಕಳನ್ನು ನೇಮಿಸಿಕೊಳ್ಳುವುದನ್ನು ತಡೆಯಲು, ಅಂತಹ ಮಕ್ಕಳನ್ನು ಬಿಡುಗಡೆಗೊಳಿಸಿ ಪುನರ್ವಸತಿಗೊಳಿಸಲು ಹಲವು ತರಹದ ಕೆಲಸಗಳಲ್ಲಿ ತೊಡಗಿಕೊಂಡು ನೂರಾರು ಮಕ್ಕಳಿಗೆ ನ್ಯಾಯ ದೊರಕಿಸುವ ಯತ್ನ ಮಾಡಿದ್ದೇನೆಯಾದರೂ ಅಂದು ದೆಹಲಿಯ ಆ ಸರ್ಕಾರೀ ಶಿಕ್ಷಣ ಸಂಪನ್ಮೂಲ ಸಂಸ್ಥೆಯಲ್ಲಿ ಮನೆಗೆಲಸದಲ್ಲಿದ್ದ ಆ ಪುಟ್ಟ ಹುಡುಗಿಯ ಕಣ್ಣೀರು ತುಂಬಿದ ಎಳೆಯ ಮುಖ ಆಗಾಗ ನನ್ನನ್ನು ಕಾಡುತ್ತಲೇ ಇರುತ್ತದೆ 

ನಾನು ಕ್ರೈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ತೊಂಬತ್ತರ ದಶಕದುದ್ದಕ್ಕೂ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ ಮತ್ತು ಮಕ್ಕಳ ಸಾಗಣೆ ತಡೆ ಆಂದೋಲನಗಳಲ್ಲಿ ಭಾಗಿಯಾಗಿದ್ದೆ ಮತ್ತು ಶಿಕ್ಷಣ ಹಕ್ಕು ಜಾರಿಯಾಗಬೇಕೆಂಬ ಚಳವಳಿಯಲ್ಲಿ ತೊಡಗಿಕೊಂಡಿದ್ದೆ. ಆಗ ವರ್ಷಗಳುದ್ದಕ್ಕೂ ಮನೆಗೆಲಸ, ಹೊಟೆಲ್‌ ಕೆಲಸ, ಗ್ಯಾರೇಜು, ಕಾರ್ಖಾನೆಗಳು, ತೋಟ, ಕೋಳಿ ಫಾರಂ, ಹಂದಿ ಸಾಕಣೆ, ಊದಿನ ಕಡ್ಡಿ  / ಪಟಾಕಿ ತಯಾರಿಕೆ, ಬ್ಯಾಗ್‌ ತಯಾರಿಕೆ, ಕಟ್ಠಡ ಕೆಲಸವೇ ಮೊದಲಾದವುಗಳಲ್ಲಿದ್ದ ಮಕ್ಕಳನ್ನು ಗುರುತಿಸುವುದು, ಬಿಡಿಸುವುದು ಇವೆಲ್ಲವನ್ನೂ ಮಾಡಲು, ಆಗ್ಗೆ ಅಷ್ಟೇನೂ ಗಟ್ಟಿಯಾಗಿಲ್ಲದಿದ್ದ ಮತ್ತು ಪರಿಣಾಮಕಾರಿಯಾಗಿಲ್ಲದಿದ್ದ ಕಾನೂನುಗಳನ್ನೆ ಆಶ್ರಯಿಸಿ ಹೆಣಗಾಡುತ್ತಿದ್ದೆವು.

ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೪ ವರ್ಷದೊಳಗಿನವರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು ಎಂದು ಹೇಳಿದರೂ, ಅದು ಅಪಾಯಕಾರಿ ಉದ್ದಿಮೆಗಳಲ್ಲಿ ಇಟ್ಟುಕೊಳ್ಳಬಾರದು ಎಂದು ಒಂದು ಮಾತು ಸೇರಿಸಿ ಅಡ್ಡಗೋಡೆಯ ಮೇಲೆ ದೀಪವಿಟ್ಟಿತ್ತು. ಜೊತೆಗೆ ಮಕ್ಕಳು ದುಡಿಯಲೇಬೇಕೆನ್ನುವ ಪರಿಸ್ಥಿತಿಗೆ ಕಾರಣವಾಗಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳನ್ನು ಮೊದಲು ಸರಿಪಡಿಸಿ, ಆಮೇಲೆ ಕಾಯಿದೆ ಜಾರಿಗೆ ತನ್ನಿ ಎನ್ನುವ ಮನೋಸ್ಥಿತಿಗಳು ಕೂಡಾ ಇದ್ದವು. ಮಕ್ಕಳಿಗೆ ದುಡಿಮೆಯಲ್ಲದಿದ್ದರೆ ಅವರು ಶಾಲೆಯಲ್ಲಿರಬೇಕು ಎನ್ನುವ ವಾದ ಮುಂದಿಟ್ಟರೂ, ಅಷ್ಟೊಂದು ಶಾಲೆಗಳ ವ್ಯವಸ್ಥೆಯೇ ಸಮರ್ಪಕವಾಗಿಲ್ಲವಲ್ಲ ಎನ್ನುವ ಪ್ರಶ್ನೆಯೂ ಏಳುತ್ತಿತ್ತು. 

ಮನೆಗೆಲಸದ ಮಕ್ಕಳನ್ನು ಹೊಡೆಯುವುದು, ಬೈಯ್ಯುವುದು, ಅವರ ಮೈಮೇಲೆ ಬಿಸಿನೀರು, ಎಣ್ಣೆ ಎರಚುವುದು, ಊಟ ಕೊಡದಿರುವುದು, ಅವರಿಗೆ ಮಲಗಲು ಕಸ ತುಂಬಿದ ಮೂಲೆಗೆ ದೂಡುವುದು, ಅವರು ಬಚ್ಚಲ ಮನೆ, ಶೌಚಾಲಯ ಬಳಸುವುದನ್ನು ನಿಷೇಧಿಸುವುದು, ಸಂಬಳ ಕೊಡದಿರುವುದು, ಮನೆಯಲ್ಲಿ ಕೂಡಿ ಹಾಕಿ ಹೋಗುವುದು, ಅವರ ಮೇಲೆ ಕಳ್ಳತನದ ಆಪಾದನೆ ಹೊರೆಸುವುದು, ಕೆಲಸದವಳು ಹುಡುಗಿಯಾಗಿದ್ದರೆ ಅವಳ ಮೇಲೆ ಲೈಂಗಿಕವಾಗಿ ವರ್ತಿಸುವುದು, ಇಲ್ಲವೇ ಅವಳೇ ಮನೆಯ ಪ್ರಾಯದ ಹುಡುಗರನ್ನು, ಗಂಡಸರ ಮನಸ್ಸನ್ನು ಕೆಡಿಸುತ್ತಿದ್ದಾಳೆ ಎಂದು ಆಪಾದಿಸುವುದು, ಇದೆಲ್ಲದರ ಜೊತೆಯಲ್ಲಿ ಕೊಂದು ಹಾಕುವುದು, ಅವಳೇ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಳು, ಸುಟ್ಟುಕೊಂಡಳು ಎಂದು ಸುದ್ದಿ ಸೃಷ್ಟಿಸಿಬಿಡುವುದು ಬಹಳ ಸಾಮಾನ್ಯವಾಗಿತ್ತು. ಇದು ಕೇವಲ ನಮ್ಮ ಬೆಂಗಳೂರಿನದೊಂದೇ ಅಲ್ಲ , ರಾಜ್ಯ ಮತ್ತು ದೇಶದುದ್ದಕ್ಕೂ ಬಹುತೇಕ ನಗರಗಳಲ್ಲಿ ಇದ್ದಂತಹ, ಈಗಲೂ ಇರುವಂತಹ ಪರಿಸ್ಥಿತಿ ಎಂದೇ ಹೇಳಬಹುದು. 

ಆಗೆಲ್ಲಾ ನಾನು ಭಾಗವಹಿಸುತ್ತಿದ್ದ ಎಲ್ಲ ಸಭೆಗಳಲ್ಲಿ, ಚರ್ಚಾಕಾಲಕ್ಕೆ ಒಂದು ಪ್ರಶ್ನೆ  ಎತ್ತುತ್ತಿದ್ದೆ :  ಅಪಾಯಕಾರಿ ಉದ್ದಿಮೆಯೆಂದರೆ ಯಂತ್ರಗಳು, ರಾಸಾಯನಿಕಗಳು, ವಿದ್ಯುತ್‌ ಬಳಕೆಯೇ ಮೊದಲಾದವು ಇರುವ ಕೆಲಸಗಳು ಎನ್ನುತ್ತಾರೆ, ಆದರೆ ಯಂತ್ರಗಳು ತಾವೇ ತಾವಾಗಿ ಯಾವುದೇ ಮಗುವನ್ನು ಹಿಂಸೆಗೆ ತಳ್ಳುವುದಿಲ್ಲ. ಕೈಹಿಡಿದೆಳೆದು ಸಿಕ್ಕಿಸಿಕೊಂಡು ಮುರಿಯುವುದಿಲ್ಲ. ಆದರೆ, ಮನುಷ್ಯರ ನಡುವೆ ಮತ್ತು ಮನುಷ್ಯರಿಗಾಗಿ ಕೆಲಸ ಮಾಡುವುದೇ ಅತ್ಯಂತ ಅಪಾಯಕಾರಿ.

ತಿಳಿದೂ ತಿಳಿದೂ ಹೊಡೆಯುವುದು, ಬರೆ ಹಾಕುವುದು, ಕೆಟ್ಟದಾಗಿ ಬಯ್ಯುವುದು, ಕೈ-ಕಾಲು 

ಕತ್ತರಿಸುವುದು ಇತ್ಯಾದಿ ಹೀನ ಕೃತ್ಯಗಳು ನಡೆಯುವುದು ಬುದ್ಧಿ-ಮನಸ್ಸುಗಳಿದ್ದರೂ ದಯಾ-ಧರ್ಮವಿಲ್ಲದ ಕ್ರೂರಿ ಮನುಷ್ಯರಿಂದಲೇ…  ಹೀಗಾಗಿ, ಇಂಥ. ಜನರಿರುವ ಕಡೆ ಮನೆಗೆಲಸವಾದರೇನು  ಹೊಟೆಲ್‌ ಕೆಲಸವಾದರೇನು, ಅದೂ  ಕೂಡ ಅಪಾಯಕಾರಿ ಕೆಲಸಗಳು ಎಂದೇ ಪರಿಗಣಿಸಬೇಕು ಎಂಬುದು ನನ್ನ ವಾದವಾಗಿತ್ತು.

ಮಕ್ಕಳನ್ನು ದುಡಿಮೆಗೆ ಇಟ್ಟುಕೊಂಡಿದ್ದವರ ಮೇಲೆ ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರಕರಣಗಳು ನ್ಯಾಯಾಲಯದ ತನಕ ಹೋಗುವುದು, ಅವುಗಳಲ್ಲಿ ಎಲ್ಲೋ ಕೆಲವು ಪ್ರಕರಣಗಳಲ್ಲಿ ಆಪಾದನೆಯ ಪಟ್ಟಿ/ಚಾರ್ಜ್‌ ಶೀಟ್‌ ದಾಖಲಾದರೆ, ಅಪರೂಪಕ್ಕೆ ಆಪಾದಿತರಿಗೆ ಶಿಕ್ಷೆ ಆಗುವುದು ಇತ್ತು. ಬಹುತೇಕ ಪ್ರಕರಣಗಳು ಪೊಲೀಸ್‌ ಠಾಣೆಯಿಂದ ಮುಂದಕ್ಕೆ ಹೋಗುತ್ತಿರಲಿಲ್ಲ, ನ್ಯಾಯಾಲಯಗಳ ಮುಂದೆ ಬಂದಾಗ ಸೂಕ್ತ ಸಾಕ್ಷಿಗಳ ಕೊರತೆಯ ಕಾರಣ ಪ್ರಕರಣಗಳು ಬಿದ್ದು ಹೋಗುತ್ತಿದ್ದವು. ಸಾಕ್ಷಿಯ ಕೊರತೆಯೋದೇ ಅಲ್ಲ, ಇನ್ನೂ ನೂರಾರು ಕಾರಣಗಳು ಇರುತ್ತಿದ್ದವು.

ಮನೆಗೆಲಸಕ್ಕೆ ಈಡಾಗುವ ಮಕ್ಕಳು ಸಾಮಾನ್ಯವಾಗಿ ಮಾಲೀಕರಿಗೆ ಪರಿಚಯದ ಬಡವರ ಮಕ್ಕಳೇ ಆಗಿರುತ್ತಾರೆ. ಒಂದೇ ಊರಿನವರಾಗಿದ್ದರೆ ಮಕ್ಕಳ ತಂದೆ-ತಾಯಿಯರನ್ನು ಒಪ್ಪಿಸಿಯೇ ಕರೆತರಲಾಗಿರುತ್ತದೆ. ಮಗುವಿಗೆ ಒಳ್ಳೆಯ ಪರಿಸರ, ಶಿಕ್ಷಣ ಕೊಡಿಸಿ ದೊಡ್ಡವಳನ್ನಾಗಿಸುವ ಭರವಸೆಯೂ ಇರುತ್ತದೆ. ಇಷ್ಟರ ಮೇಲೆ ಮುಂಗಡವಾಗಿ ಹಣ ಕೊಟ್ಟಿರಲೂಬಹುದು, ಇಲ್ಲವೇ ತಿಂಗಳಿಗಿಷ್ಟು ಎಂದು ಹಣದ ಭರವಸೆ  ನೀಡಿರಬಹುದು. ಮನೆಗೆಲಸಕ್ಕೆಂದೇ ಮಕ್ಕಳನ್ನು ಒದಗಿಸುವ ಏಜೆನ್ಸಿಗಳು ಅಥವಾ ಏಜೆಂಟರುಗಳು ಇರುವುದು ವಾಸ್ತವ. ಮಕ್ಕಳನ್ನು ಕದ್ದುಕೊಂಡು ಬಂದು, ಕೊಂಡುಕೊಂಡು ಬಂದು ಮನೆಗೆಲಸಕ್ಕೆ ಹಾಕಿರುವ ಪ್ರಕರಣಗಳೂ ಇವೆ. 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರ ಪರಿಚ್ಛೇದ ೩೨ರಲ್ಲಿ ಮಕ್ಕಳು ಹಣ ಸಂಪಾದನೆಗಾಗಿ ದುಡಿಯುವಂತಹ ಪರಿಸ್ಥಿತಿಗೆ ದೂಡಲ್ಪಡಬಾರದು ಎಂದು ಹೇಳಿ, ದುಡಿಮೆಗೆ ಪ್ರವೇಶಿಸುವುದಕ್ಕೆ ಕನಿಷ್ಠ ವಯಸ್ಸನ್ನು ಸರ್ಕಾರಗಳು ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಮಕ್ಕಳು ದುಡಿಮೆಗೆ ಬೀಳದಂತೆ ನೋಡಿಕೊಳ್ಳಲು ಪೂರಕವಾಗಿ ಶಿಕ್ಷಣ, ಆಹಾರ, ಆರೋಗ್ಯ ವ್ಯವಸ್ಥೆಗಳನ್ನು ಮಾಡಬೇಕೆಂದೂ ಈ ಒಡಂಬಡಿಕೆ ಬಯಸುತ್ತದೆ.

ಭಾರತ ಈ ಒಡಂಬಡಿಕೆಗೆ ೧೯೯೨ರಲ್ಲಿ ಒಪ್ಪಿಗೆ ನೀಡಿದ್ದರೂ, ಈ ಪರಿಚ್ಛೇದ ೩೨ಕ್ಕೆ ತನ್ನದೊಂದು ಆಕ್ಷೇಪಣೆಯನ್ನು ಇಟ್ಟುಕೊಂಡೇ ಇಲ್ಲಿಯವರೆಗೂ ತಳ್ಳಿಕೊಂಡು ಬಂದಿದೆ. ಈಗ ೨೦೧೫ರಲ್ಲಿ ಯಾವುದೇ ೧೮ ವರ್ಷದೊಳಗಿನ ಮಕ್ಕಳು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯಬಾರದು ಎಂದು ಅಧಿಕೃತವಾಗಿ ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ತಿದ್ದುಪಡಿ ಮಾಡಿ ಹೇಳಿದೆ. 

ಕಟ್ಟಿದ ರೆಕ್ಕೆಗಳಿಗೆ ಬಿಡುಗಡೆ

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ೨೦೦೦ದಲ್ಲಿ ಜಾರಿಗೆ ಬಂದಾಗ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಭಾರತ ಸರ್ಕಾರ ಒಂದಷ್ಟು ಕ್ರಾಂತಿಕಾರಕವಾದ ಕಲ್ಪನೆಗಳನ್ನು ಜಾರಿಗೆ ತಂದಿತು. ಅವುಗಳಲ್ಲಿ ಈ  ಮುಂದಿನದು ಪ್ರಮುಖವಾದುದು: ʼಪೋಷಣೆ ಮತ್ತು ರಕ್ಷಣೆ ಆವಶ್ಯಕತೆ ಇರುವ ಮಕ್ಕಳುʼ ಎಂಬ ದೊಡ್ಡ ಪಟ್ಟಿ ಕೊಟ್ಟು, ಈ ಎಲ್ಲ ಮಕ್ಕಳು ರಕ್ಷಣೆಗೆ ಅರ್ಹರು ಎಂದು ಘೋಷಿಸಿರುವುದು. ಅದರಲ್ಲಿ ಕೆಲಸಕ್ಕೆ ದೂಡಲ್ಪಟ್ಟ ಮಕ್ಕಳನ್ನು ಪ್ರಮುಖವಾಗಿ ಗುರುತಿಸಿದ್ದು; ಎರಡನೆಯದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳನ್ನು ಆಯೋಜಿಸಿದ್ದು.

ಮೂರನೆಯದು ತೊಂದರೆಯಲ್ಲಿರುವ ಮಕ್ಕಳನ್ನು ಚೈಲ್ಡ್‌ಲೈನ್‌ ೧೦೯೮, ಪೊಲೀಸರು, ಸರ್ಕಾರಿ ನೌಕರರು, ಸ್ವಯಂಸೇವಾ ಸಂ‍ಸ್ಥೆಗಳ ಪ್ರತಿನಿಧಿಗಳು ಮತ್ತು ನಾಗರಿಕರು ಮಕ್ಕಳ ಕಲ್ಯಾಣ ಸಮಿತಿಯೆದುರು ಹಾಜರು ಪಡಿಸಬಹುದು ಎಂದು ಅವಕಾಶ ನೀಡಿದ್ದು. ಇಷ್ಟಲ್ಲದೆ ಯಾವುದಾದರೂ ಮಗು ತಾನು ತೊಂದರೆಯಲ್ಲಿದ್ದೇನೆ ನನ್ನನ್ನು ರಕ್ಷಿಸಿ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಕೊಡಬಹುದು ಅಥವಾ ತಾನೇ ಬರಬಹುದು. 

ಡಾ. ಪದ್ಮಿನಿ ಮತ್ತು ಆನ್ಸ್ಲೆಂ ರೊಸಾರಿಯೋ ಜೊತೆ ಸೇರಿ ೨೦೦೨ರಲ್ಲಿ ನಾನು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಸ್ವಯಂಸೇವಾ ಸಂಸ್ಥೆ ಶುರು ಮಾಡಿದ್ದೆ. ಅದೇ ಕಾಲಕ್ಕೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ೨೦೦೨ರ ಕೊನೆಯಲ್ಲಿ ಮೊದಲ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಸ್ತಿತ್ವಕ್ಕೆ ಬಂದಿತು. ನೀನಾ ನಾಯಕ್‌ ಅವರು ಅಧ್ಯಕ್ಷರಾಗಿದ್ದ ಸಮಿತಿಗೆ ನಾನು ಸದಸ್ಯನಾಗಿ ಸೇರಿದ್ದು ೨೦೦೩ರಲ್ಲಿ. ನನ್ನೊಡನೆ ಅಪ್ಸಾ ಸಂಸ್ಥೆಯ ಶೀಲಾ ದೇವರಾಜ್‌ ಅವರಲ್ಲದೆ ಇನ್ನೂ ಇಬ್ಬರು ಸದಸ್ಯರಿದ್ದರು. ತೊಂದರೆಗೀಡಾದ, ಹಿಂಸೆಗೆ ಸಿಲುಕಿದ, ಕಷ್ಟದಲ್ಲಿರುವ ಮಕ್ಕಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ರಕ್ಷಣೆ, ಪೋಷಣೆಗಾಗಿ ಬರಬೇಕು ಎಂದರೆ ಅವರನ್ನು ಕರೆತರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗ್ಗೆ ಚೈಲ್ಡ್‌ಲೈನ್‌ ೧೦೯೮ರ  ಸಿಬ್ಬಂದಿಯೇ ಆಗಿದ್ದರು.

ಬೀದಿಯಲ್ಲಿ ಅನಾಥವಾಗಿದ್ದ ಮಗು, ಭಿಕ್ಷೆ ಬೇಡುತ್ತಿದ್ದ ಮಕ್ಕಳು, ಕಳೆದು ಹೋದವರು, ರೈಲ್ವೆ ನಿಲ್ದಾಣದಲ್ಲಿ ಪೋಷಕರಿಲ್ಲದೆ ಸಿಕ್ಕಿದ ಮಕ್ಕಳು, ಹೊಟೆಲ್‌, ಗ್ಯಾರೇಜ್‌, ಮನೆ ಕೆಲಸದಲ್ಲಿದ್ದ ಮಕ್ಕಳು ಹೀಗೆ ಪಟ್ಟಿ ಬೆಳೆಯುತ್ತಲೇ ಇತ್ತು. ಆ ಸಂದರ್ಭದಲ್ಲಿ ನಾವು ಮತ್ತೆ ಮತ್ತೆ ಗಮನಿಸಿದ್ದು ಮನೆಗೆಲಸದಲ್ಲಿದ್ದ ಮಕ್ಕಳ ಸಂಖ್ಯೆ ಸಾಕಷ್ಟು ದೊಡ್ಡದಿದ್ದುದ್ದು. ಕೇವಲ ಕನ್ನಡ ಮಾತನಾಡುವ ಮಕ್ಕಳಷ್ಟೇ ಅಲ್ಲ, ತೆಲುಗು, ತಮಿಳು, ಮರಾಠಿ, ಹಿಂದಿ, ಉರ್ದು, ಬೆಂಗಾಲಿ, ರಾಜಸ್ಥಾನಿ, ಒಡಿಯಾ, ಬಿಹಾರಿ, ಅಸ್ಸಾಂ, ನಮಗೆ ಅರ್ಥವೇ ಆಗದ ಹಿಂದಿಯ ಯಾವುದೋ ಉಪಭಾಷೆಯಾಡುವ ಮಕ್ಕಳು, ನೇಪಾಳ ಮತ್ತು ಬಾಂಗ್ಲಾ ದೇಶದ ಮಕ್ಕಳು… ಕೆಲಸ ಮಾಡುತ್ತಿದ್ದುದು ಸಾಕಷ್ಟು ಸ್ಥಿತಿವಂತರೂ, ಸುಶಿಕ್ಷಿತರೂ ಆದವರ ಮನೆಗಳಲ್ಲೇ. ಅದರಲ್ಲೂ ಸಾಫ್ಟ್‌ವೇರ್‌ ಕೆಲಸಗಳು ಮತ್ತು ಮಾರ್ಕೆಟಿಂಗ್‌, ವೈದ್ಯರು, ವ್ಯಾಪಾರಿಗಳು, ಬ್ಯಾಂಕ್‌ ಉದ್ಯೋಗಿಗಳು, ಶಿಕ್ಷಕರು, ಸರ್ಕಾರಿ ನೌಕರರು, ರಾಜಕಾರಣಿಗಳು ಇಂಥವರ  ಮನೆಗಳಲ್ಲೂ ದುಡಿಯುವ ಮಕ್ಕಳು! 

ಶಿಕ್ಷಣ, ಪೊಲೀಸ್‌ ಮತ್ತು ಕಾರ್ಮಿಕ ಇಲಾಖೆಯವರು ಮನೆಗೆಲಸದ ಮಕ್ಕಳನ್ನು ಕುರಿತು ನಿಶ್ಚಿತ ನಿಲುವನ್ನು ತೆಳೆದಿರಲಿಲ್ಲ. ಮಕ್ಕಳಿಗೆ ಮಾರಣಾಂತಿಕವಾದ ಹೊಡೆತ ಅಥವಾ ಸುಟ್ಟಿರುವುದು ಇಲ್ಲವೇ ಸಾವು ಆಗಿದ್ದಲ್ಲಿ ಮಾತ್ರ ಆ ಕುರಿತು ತನಿಖೆ ಇತ್ಯಾದಿ ನಡೆಯುತ್ತಿತ್ತು. 

ಇಂತಹದೊಂದು ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸುಚಿತ್ರ ರಾವ್‌ ಅವರ ಮುಂದಾಳತ್ವದಲ್ಲಿ ೨೦೦೪ರಲ್ಲಿ ಮೂಡಿ ಬಂದದ್ದು ʼಮನೆಗೆಲಸದಲ್ಲಿರುವ ಮಕ್ಕಳಿಗೊಂದು ಆಶಾಕಿರಣ (ಹೋಪ್‌)ʼ ಯೋಜನೆ. ಬೆಂಗಳೂರು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಯುನಿಸೆಫ್‌ ಒಗ್ಗೂಡಿದ ಯೋಜನೆಗೆ ಬೆಂಗಳೂರಿನ ಅಪ್ಸಾ, ಪರಸ್ಪರ ಮತ್ತು ಸ್ತ್ರೀ ಜಾಗೃತಿ ಸಮಿತಿ ಸಂಸ್ಥೆಗಳು ಕೈಜೋಡಿಸಿದವು. ಮೊದಲ ಹಂತದಲ್ಲಿ ಬೆಂಗಳೂರಿನ ೧೫ ಸ್ಲಂಗಳು ಮತ್ತು ೧೨ ವಾರ್ಡ್‌ಗಳಲ್ಲಿ ಮುಂಚೂಣಿಯಾಗಿ ಕೆಲಸವನ್ನು ಆರಂಭಿಸಲಾಯಿತು.

ಸ್ಲಂ ಸಮುದಾಯಗಳಲ್ಲಿ ತಾಯಂದಿರ ಸಭೆಗಳು, ಕಿಶೋರಿಯರ ಸಭೆಗಳು, ಸ್ಥಳೀಯ ನಾಯಕರ ಸಭೆಗಳನ್ನು ನಡೆಸಿ ಮಕ್ಕಳ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣ ಕುರಿತು ಬಿರುಸಿನ ಚರ್ಚೆಗಳು ನಡೆಯಿತು. ಮಕ್ಕಳನ್ನು ಶಾಲೆಗೆ ಸೇರಿಸುವ ಆಂದೋಲನಗಳ ಜೊತೆಜೊತೆಯಲ್ಲೇ ಮಕ್ಕಳು ದುಡಿಯುವದಕ್ಕೆ ಹೋಗದಂತೆ ತಡೆಯುವ ಮತ್ತು ಕೆಲಸಕ್ಕೆ ಹೋಗುತ್ತಿದ್ದರೆ ಅಲ್ಲಿಂದ ಬಿಡಿಸುವ ಕೆಲಸಗಳು ನಡೆದವು. ಇದೇನೂ ಅಷ್ಟು ಸುಲಭವಾಗಿ ಆಗಲಿಲ್ಲ. ಸಾಕಷ್ಟು ಪ್ರತಿರೋಧ, ಒತ್ತಡ, ಬೆದರಿಕೆ ಎಲ್ಲವೂ ಇತ್ತು.  

ಮನೆಗೆಲಸದಿಂದ ಬಿಡಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯೆದುರು ತರುವುದೇ ದೊಡ್ಡ ಕೆಲಸವಾಗುತ್ತಿತ್ತು. ಒಂದು ರೀತಿಯಲ್ಲಿ ಹೋರಾಟವೇ ಆಗಿತ್ತು. ಎಷ್ಟೋ ಬಾರಿ ಮಕ್ಕಳ ಹಕ್ಕುಗಳನ್ನು, ಹಿತವನ್ನು ರಕ್ಷಿಸಬೇಕಿರುವ ಸರ್ಕಾರದ ವ್ಯವಸ್ಥೆಯೇ ಮಕ್ಕಳನ್ನು ರಕ್ಷಿಸಿದವರ ವಿರುದ್ಧ ಸಂಚು ಹೂಡುತ್ತಿತ್ತು. ದೊಡ್ಡ ಅಧಿಕಾರಿಗಳ ಮನೆಯಲ್ಲಿ , ಹೆಸರು ಮಾಡಿರುವ ವಕೀಲರ ಮನೆಯಲ್ಲಿ, ದೊಡ್ಡ ಪ್ರೊಫೆಸರ್‌, ವೈದ್ಯರು, ಪೊಲೀಸರು, ರಾಜಕಾರಣಿಗಳು, ಸಿನೆಮಾ ನಟರು, ಪ್ರಖ್ಯಾತ ಉದ್ಯಮಿಗಳು, ಹೆಸರಾಂತ ಸಮಾಜಕಾರ್ಯಕರ್ತರ ಮನೆಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದುದನ್ನು ಬಹಿರಂಗಪಡಿಸಿದಾಗ, ಅಂಥ ಮಕ್ಕಳನ್ನು ರಕ್ಷಿಸಿದಾಗ ಏನೇನೋ ವ್ಯೂಹ ಪ್ರತಿವ್ಯೂಹಗಳು, ಕುಂಟುನೆಪಗಳು ಹುಟ್ಟಿಕೊಳ್ಳುತ್ತಿದ್ದವು. 

‘… ಆ ಮಗು ಬೆಂಗಳೂರು ನೋಡಲು ಬಂದಿತ್ತು, ನೋಡಿ ಹಿಂದಿರುಗಿ ಹೋಗಲು ಇದೋ ಟಿಕೆಟ್‌’ (ಕೆಲವು ಬಾರಿ ವಿಮಾನದ ಟಿಕೆಟ್‌ ಕೂಡಾ!!); … ಶಾಲೆಗೆ ಸೇರಿಸಲಾಗಿದೆ, ಇಲ್ಲಿದೆ ನೋಡಿ ದಾಖಲೆಗಳು; … ಆ ಹುಡುಗಿ ಕೆಲಸವನ್ನೇ ಮಾಡುತ್ತಿರಲಿಲ್ಲ, ವಾಸ್ತವವಾಗಿ ಅವಳು ಇಲ್ಲಿ ಇರಲೇ ಇಲ್ಲ, ನೋಡಿ ಅವಳೂರಿನಲ್ಲಿ ಆ ದಿನ ಆ ಹುಡುಗಿ ಶಾಲೆಗೆ ಹಾಜರಾಗಿದ್ದ ದಾಖಲೆ’ (!!!)… ಒಂದೇ ಎರಡೇ. ಇಷ್ಟರ ಮೇಲೆ ಕೆಲವು ಅಧಿಕಾರಿಗಳು, ರಾಜಕಾರಣಿಗಳು, ಪೊಲೀಸರು ದೂರವಾಣಿ ಮೂಲಕ ಪ್ರಕರಣದ ಪರ ವಕಾಲತ್ತು ಮಾಡುವುದಷ್ಟೇ ಅಲ್ಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ತಮ್ಮ ಅಧಿಕಾರದ ತೂಕ ತೋರಿಸಲು ಬಂದೇ ಬಿಡುತ್ತಿದ್ದರು. ಕೆಲವೊಮ್ಮೆ ಹೆಸರಾಂತ ವಕೀಲರ ದಂಡೇ ಬಂದುಬಿಡುತ್ತಿತ್ತು. 

‘ಮನೆಗೆಲಸದಲ್ಲಿ ಮಕ್ಕಳನ್ನು ಇರಿಸಿಕೊಳ್ಳಬಾರದು’ ಎಂಬುದೊಂದೇ ಸಂದೇಶವನ್ನು ವಿವಿಧ ಸಾಧನಗಳ ಮೂಲಕ, ವಿವಿಧ ಸಮುದಾಯಗಳಿಗೆ ತಲುಪಿಸಲು ಹೋಪ್‌ ಯೋಜನೆ ನಿರತವಾಗಿತ್ತು. ನಿವಾಸಿಗಳ ಸಂಘಗಳು, ಸ್ಥಳೀಯ ಸ್ವಯಂಸೇವಾ ಸಂಘಟನೆಗಳು ಜೊತೆಗೆ ಮುಖ್ಯವಾಗಿ ಶಾಲೆಗಳಲ್ಲಿ ಪ್ರಚಾರ ನಡೆಸುತ್ತಿತ್ತು. ಅದಕ್ಕಾಗಿ ಬೀದಿ ನಾಟಕ, ಭಿತ್ತಿ ಪತ್ರಗಳು, ಕರಪತ್ರಗಳು, ಬ್ಯಾನರ್‌, ಗೋಡೆ ಬರಹ, ಸಮಾಲೋಚನೆಗಳು ಇತ್ಯಾದಿ. ಹೋಪ್‌ ಯೋಜನೆಗೆ ಅತ್ಯಂತ ಹೆಚ್ಚಿನ ಫಲಿತಾಂಶ ಕೊಟ್ಟಿದ್ದು ‘ಶಾಲಾ ಕಾಲೇಜುಗಳ ಕಾರ್ಯಕ್ರಮಗಳು’.

ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಯೋಜನೆಯ ಗೆಳೆಯರು ಹೋಗಿ, ‘ಮನೆಗೆಲಸದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಅಪರಾಧ’ ಎಂದು ಪ್ರಚಾರ ಸಮಾಲೋಚನೆ ಮಾಡಿ ‘ನಿಮಗೆ ಎಲ್ಲಿಯಾದರೂ ಮನೆಗೆಲಸದಲ್ಲಿ ಮಕ್ಕಳಿರುವುದು ತಿಳಿದಿದ್ದರೆ ದೂರು ಕೊಡಿ’ ಎಂದು ಹೇಳಿ ಹೋಗುತ್ತಿದ್ದಂತೆಯೇ, ಇತ್ತ ಚೈಲ್ಡ್‌ಲೈನ್‌ ೧೦೯೮ಕ್ಕೆ ಕನಿಷ್ಠ ಹತ್ತರಿಂದ ಇಪ್ಪತ್ತು ಅನಾಮಿಕ ದೂರವಾಣಿ ಕರೆಗಳು ಹೋಗುತ್ತಿತ್ತು. ‘ಇಂತಹ ಮನೆಯಲ್ಲಿ ಮಗು ಕೆಲಸ ಮಾಡುತ್ತಿದೆ’. ನಿಖರವಾದ ವಿಳಾಸ, ಮಗುವಿನ ಹೆಸರು, ವಯಸ್ಸು, ಯಾವ ಊರು, ಎಷ್ಟು ಕಾಲದಿಂದ, ಏನು ಕೆಲಸ ಮಾಡುತ್ತಿದೆ, ಎಷ್ಟು ಹಣ ಕೊಡುತ್ತಾರೆ ಹೀಗೆ ಎಲ್ಲ ಎಲ್ಲ. ದೂರು ಕೊಡುತ್ತಿದ್ದವರು ಯಾರು ಎಂದು ಹೇಳಬೇಕಿಲ್ಲವಲ್ಲ. ಚೈಲ್ಡ್‌ಲೈನ್‌ ೧೦೯೮ ಮತ್ತು ಹೋಪ್‌ ಯೋಜನೆಯ ಸ್ವಯಂಸೇವಕರು ದೂರಿನ ಮೂಲವನ್ನು ಬಹಿರಂಗಪಡಿಸುವುದಿಲ್ಲ ಎಂದು ಮೇಲಿಂದ ಮೇಲೆ ಹೇಳುತ್ತಿದ್ದುದು ಸಹಕಾರಿಯಾಗಿತ್ತು. 

೨೦೦೪ರಿಂದ ಮೂರು ವರ್ಷಗಳ ಕಾಲ ನಡೆದ ಯೋಜನೆ ಬೆಂಗಳೂರು ನಗರದ ಕೇವಲ ಕೆಲವೇ ವಾರ್ಡ್‌ಗಳ ಪ್ರದೇಶದಲ್ಲಿ ೧೩೦೦ ಮನೆಗೆಲಸದ ಮಕ್ಕಳನ್ನು ಗುರುತಿಸಿ ಬಿಡುಗಡೆಗೆ ಏರ್ಪಾಟು ಮಾಡಿತು. ೩೦೦ಕ್ಕೂ ಹೆಚ್ಚು ಮಕ್ಕಳನ್ನು ಪೊಲೀಸರನ್ನು ಮುಂದಿಟ್ಟುಕೊಂಡೇ ಮನೆಗಳಿಂದ ಹೊರತಂದು ಪುನರ್ವಸತಿಗೆ ತೊಡಗಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸುಮಾರು ೧೪ ಲಕ್ಷ ರೂಪಾಯಿಗಳಷ್ಟು ಕೂಲಿ/ವೇತನವನ್ನು ಮಕ್ಕಳಿಗೆ ವಿವಿಧ ರೂಪಗಳಲ್ಲಿ ಕೊಡಿಸಲಾಯಿತು. ನೂರಾರು ಮಕ್ಕಳು ಸೇತು ಶಾಲೆಗಳ ಮೂಲಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಯಿತು. ಇಷ್ಟೇ ಅಲ್ಲ, ೧೮ ಪ್ರಕರಣಗಳನ್ನು ದಾಖಲಿಸಿ, ಅದರಲ್ಲಿ ಇಬ್ಬರು ಮಾಲೀಕರನ್ನು ದಸ್ತಗಿರಿ ಮಾಡಿ ಜೈಲಿಗೂ ಅಟ್ಟಲಾಗಿತ್ತು. 

ಈ ಮಧ್ಯೆ ಮನೆಗೆಲಸದಲ್ಲಿ ತೊಡಗಿರುವರ ಕಾರ್ಮಿಕ ಸಂಘಟನೆಯ ಮೂಲಕ ಕರ್ನಾಟಕ ಸರ್ಕಾರದೊಡನೆ ವಕೀಲಿಯಲ್ಲೂ ತೊಡಗಿದ್ದರ ಫಲವಾಗಿ ೨೦೦೪ರಲ್ಲಿ ಹೊರಬಿದ್ದ ಮನೆಗೆಲಸದವರಿಗೆ ಕನಿಷ್ಠ ಕೂಲಿ ಕುರಿತಾದ ಸುತ್ತೋಲೆ, ಬಹಳ ಸ್ಪಷ್ಟವಾಗಿ ೧೪ ವರ್ಷದೊಳಗಿನ ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ನಿರ್ದೇಶಿಸಿತು. ಇಡೀ ಭಾರತದಲ್ಲೇ ಇಂತಹದೊಂದು ಕ್ರಮ ಪ್ರಥಮ ಎನ್ನುವ ಹೆಗ್ಗಳಿಕೆಯೂ ಸಂದಿತು.

ಇಡೀ ಆಂದೋಲನಕ್ಕೆ ದೊಡ್ಡದೊಂದು ಬೆಂಬಲ ಸಿಕ್ಕಿದ್ದು ೨೦೦೬ರಲ್ಲಿ ಭಾರತ ಸರ್ಕಾರ ಹೊರಡಿಸಿದ ನಿರ್ದೇಶನದಂತೆ ಹೊಟೆಲ್‌ ಕೆಲಸದೊಂದಿಗೆ ಮನೆಗೆಲಸವನ್ನೂ ಅಪಾಯಕಾರಿ ಉದ್ದಿಮೆಯೆಂದು ಪರಿಗಣಿಸಿದ್ದು. ಕರ್ನಾಟಕ ಸರ್ಕಾರ ೨೦೦೫ರಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು ೧೯೬೬ರ ನಿಯಮ ೨೯ಎ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿರುವ ಸರ್ಕಾರಿ ನೌಕರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿತು. 

ಈ ಮಧ್ಯೆ ಬೆಂಗಳೂರಿನ ಒಂದು ಪ್ರಖ್ಯಾತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದ ಒರಿಸ್ಸಾ ಮೂಲದ ಗಂಡ ಹೆಂಡಿರಿಬ್ಬರ ಮೇಲೊಂದು ಆಪಾದನೆ ಬಂದಿತು. ಅವರ ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ಬಾಲಕಿಗೆ ಮೈಯೆಲ್ಲಾ ಹೊಡೆತ ಬಡಿತದ ಗಾಯವಾಗಿದ್ದು, ಹಿಂಸೆ ತಾಳಲಾರದೆ ಮನೆಯ ಉಪ್ಪರಿಗೆಯಿಂದ ನೆಗೆದು ಬಿದ್ದಿದ್ದಳು. ಅವಳನ್ನು ರಕ್ಷಿಸಿದ್ದಷ್ಟೇ ಅಲ್ಲ, ಆ ಮಾಲೀಕರ ಮೇಲೆ ಪೊಲೀಸ್‌ ದೂರು ನೀಡಲಾಗಿತ್ತು.

ಪ್ರಕರಣ ನಡೆದು ಅವರು ತಪ್ಪಿತಸ್ಥರೆಂದು ನಿರ್ಧಾರವೂ ಆಯಿತು. ಈ ಕುರಿತು ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ಆಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷನಾಗಿ ನಾನೊಂದು ಪತ್ರ ಬರೆದಿದ್ದೆ. ‘ನಿಮ್ಮ ನೌಕರರು ಇಂತಹದೊಂದು ಹೇಯ ಕೃತ್ಯ ಮಾಡಿದ್ದಾರೆ ನೀವು ಏನು ಕ್ರಮ ಕೈಗೊಳ್ಳುತ್ತೀರಿ?ʼ ನನಗೆ ಬಂದ ಉತ್ತರ, ‘ಅದು ಅವರ ಖಾಸಗಿ ವಿಚಾರ. ಅದಕ್ಕೂ ಕಂಪನಿಗೂ ತಳಕು ಹಾಕಬೇಡಿ’. ನಾನು ಮತ್ತೆ ಬರೆದೆ, ‘ನಿಮ್ಮ ನೌಕರ ತನ್ನ ಸ್ವಪ್ರಯತ್ನದಿಂದ ಏನಾದರೂ ಕ್ರೀಡೆಯಲ್ಲೋ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೋ, ಸಾಹಿತ್ಯಕ್ಷೇತ್ರದಲ್ಲೋ ಯಶಸ್ಸುಗಳಿಸಿ ಬಹುಮಾನ ಪಡೆದರೆ, ಆ ಕುರಿತು ತಾವು ಪ್ರಶಂಸೆಯನ್ನು ನೀಡುತ್ತೀರಿ ತಾನೆ, ಹಾಗೆಯೇ ನಿಮ್ಮ ಹೌಸ್‌ ಮ್ಯಾಗಝೈನ್‌ಗಳಲ್ಲಿ ಸುದ್ದಿ ಪ್ರಕಟಿಸುತ್ತೀರಿ ತಾನೆ, ಎಲ್ಲ ಕಡೆ ಅವರ ಹೆಸರಿನೊಂದಿಗೆ ನಿಮ್ಮ ಕಂಪನಿಯ ಹೆಸರನ್ನೂ ಬಳಸುತ್ತೀರಿ ತಾನೆ, ಅವರ ದುಷ್ಕೃತ್ಯಗಳಿಗೆ ಏಕೆ ಬೇಡ?…’ ಮುಂದಿನ ದಿನಗಳಲ್ಲಿ ಕಂಪನಿ ತನ್ನ ನೌಕರರಿಗೆ ಯಾರೂ ಮನೆಗೆಲಸಕ್ಕೆ ಮಕ್ಕಳನ್ನು ನೇಮಿಸಬಾರದು ಎಂದು ನಿರ್ದೇಶನವನ್ನು ನೀಡಿತು. 

ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವುದರ ವಿರುದ್ಧ ಸ್ಪಷ್ಟವಾದ ಮಾತುಗಳು ಕಂಡುಬಂದದ್ದು ೨೦೧೦ರಲ್ಲಿ ಕೇಂದ್ರ ಸರ್ಕಾರದಿಂದ ಹೊರಬಂದ ಮನೆಗೆಲಸದವರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಕಾಯಿದೆ. ಈ ಕಾಯಿದೆ ಮಗುವೆಂದರೆ ೧೮ ವರ್ಷದೊಳಗಿನವರು ಎಂದು ಸ್ಪಷ್ಟ ಮಾಡಿತಲ್ಲದೆ, ತನ್ನ ಮೂರನೇ ಅ‍ಧ್ಯಾಯದ ಸೆಕ್ಷನ್‌ ೧೮ರಲ್ಲಿ, ‘೧೮ ವರ್ಷದೊಳಗಿನ ಯಾವುದೇ ಮಗುವನ್ನು ಮನೆಗೆಲಸ ಮತ್ತು ತತ್ಸಂಬಂಧಿತ ಕೆಲಸಗಳಿಗೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆʼ ಎಂದಿದೆ. 

ಕಟ್ಟಿದ ರೆಕ್ಕೆ ಬಿಚ್ಚುವಲ್ಲಿ ಮಹತ್ತರ ಹೆಜ್ಜೆ…

ಕಳೆದ ವರ್ಷ ಕರ್ನಾಟಕ ಸರ್ಕಾರ ನಾಗರಿಕ ಸೇವಾ (ನಡತೆ) ನಿಯಮಗಳನ್ನು ತಿದ್ದುಪಡಿ ಮಾಡಿ ಕರಡು ಪ್ರತಿಯನ್ನು ಪ್ರಕಟಿಸಿ (27.10.2020) ಸಲಹೆ ಸೂಚನೆಗಳಿಗಾಗಿ ಸಾರ್ವಜನಿಕ ಪ್ರಕಟನೆ ಹೊರಡಿಸಿತ್ತು. ಆ ತಿದ್ದುಪಡಿ ನಿಯಮದಲ್ಲಿ ಎಂದಿನಂತೆ ‘ಯಾವುದೇ ಸರ್ಕಾರಿ ನೌಕರರು ೧೪ ವರ್ಷದೊಳಗಿನ ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ’ ಎಂದೇ ದಾಖಲಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ರಾಜ್ಯ ಸಂಚಾಲಕನಾಗಿ ನಾನು ವಿವಿಧ ದಾಖಲೆಗಳನ್ನು ಲಗತ್ತಿಸಿ, ಉಲ್ಲೇಖಿಸಿ ಸರ್ಕಾರಕ್ಕೆ ಒಂದು ಪತ್ರ ಬರೆದೆ. ಸರ್ಕಾರಿ ನೌಕರರು ೧೮ ವರ್ಷದೊಳಗಿನ ಯಾವುದೇ ವ್ಯಕ್ತಿಯನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವುದನ್ನು ನೀವು ನಿಷೇಧಿಸಬೇಕು ಎಂದು ಆಗ್ರಹಿಸಿದೆ.  

ಸರ್ಕಾರ ಜನವರಿ 7, 2021ರಂದು ಹೊರಡಿಸಿದ ಅಂತಿಮ ನಿಯಮಗಳಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತು. ಇನ್ನು ಮುಂದೆ ಯಾವುದೇ ಸರ್ಕಾರಿ ನೌಕರರು ೧೮ ವರ್ಷದೊಳಗಿನ ಯಾವುದೇ ಮಗುವನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. 

ಇನ್ನು ಮುಂದಿನ ನಡೆ ಇಂತಹದೊಂದು ನಡವಳಿಕೆ ನಿಯಮವನ್ನು ಖಾಸಗಿ ರಂಗದಲ್ಲಿ, ಸಾರ್ವಜನಿಕ ಜೀವನದಲ್ಲಿ ಅಳವಡಿಸುವ ದಿಶೆಯತ್ತ ಆಂದೋಲನ. ಮನೆಗೆಲಸದಲ್ಲಿ ಯಾವುದೇ ಮಗುವನ್ನು ಕಟ್ಟಿ ಹಾಕುವುದನ್ನು ತಡೆಯುವ, ಬಿಡಿಸುವ ಪ್ರಕ್ರಿಯೆ ಮುಂದುವರೆದಿದೆ. ಇಂತಹದಕ್ಕೆ ಪೂರಕವಾಗಿ ವಿಶ್ವಸಂಸ್ಥೆ ಮತ್ತು ಐ.ಎಲ್.ಓ (ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ) ೨೦೨೧ನ್ನು ಬಾಲಕಾರ್ಮಿಕ ಪದ್ಧತಿ ನಿರ್ಮೂಲನ ವರ್ಷ ಎಂದು ಘೋಷಿಸಿದೆ. ನಾವೂ ಈ ದಿಶೆಯಲ್ಲಿ ಕೊಡುಗೆ ಕೊಡಬಹುದು. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಬೇಡ ಮತ್ತು ಎಲ್ಲಿಯಾದರೂ ಮಕ್ಕಳು ದುಡಿಯುತ್ತಿರುವುದು ಕಂಡು ಬಂದರೆ ಚೈಲ್ಡ್‌ಲೈನ್‌ ೧೦೯೮ಗೆ ದೂರು ಕೊಡೋಣ.

‍ಲೇಖಕರು ವಾಸುದೇವ ಶರ್ಮ

May 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: