ಪಾಲಹಳ್ಳಿ ವಿಶ್ವನಾಥ್ ಅವರ ‘ನೂರು ವರ್ಷಗಳ ನಿದ್ರೆ’

ಪಾಲಹಳ್ಳಿ ವಿಶ್ವನಾಥ್

ಅವನ ನೆಚ್ಚಿನ ನಾಯಕ ಸತ್ತು ಮೂರು ತಿಂಗಳುಗಳಾಗಿದ್ದವು. ಬರೇ ಸತ್ತಿದ್ದಲ್ಲ, ಕೊಲೆಯಾಗಿದ್ದು. ಸಂಸದ ಭವನದಲ್ಲೇ ಅವನಿಗೆ ಚೂರಿಯಿಂದ ಇರಿದಿದ್ದರು, ಹಿಂದೆ, ಮುಂದೆ, ಎಲ್ಲ ಕಡೆಗಳಲ್ಲೂ! ಅವನ ಶತ್ರುಗಳೇನೋ ಸರಿ, ಆದರೆ ಅವನ ಮಿತ್ರರು ಕೂಡ!. ಇದನ್ನೆಲಾ ನೆನಪು ಮಾಡಿಕೊಂಡು ಮಾರ್ಕಸ್ ಬೇಸರದಿಂದ ರೋಮ್ ನಗರದ ಹೊರಗೆ ಹೊರಟಿದ್ದ. ಬಿಸಿಲು ಹೆಚ್ಚಾಗುತ್ತಿತ್ತು. ರಸ್ತೆಯಿಂದ ದೂರದಲ್ಲಿಯ ಒಂದು ಗಿಡ ಕಾಣಿಸಿತು. ನೆರಳೇನೋ ಹೆಚ್ಚಿರಲಿಲ್ಲ. ಆದರೂ ಆಯಾಸ ಪಟ್ಟಿದ್ದ ಮಾರ್ಕಸ್ ಆ ನೆರಳಿನಲ್ಲೇ ಮಲಗಿದ. ಹಾಗೇ ಮಾರ್ಕಸ್ ಮಲಗಿದ. ನಿದ್ರೆ ಮಾಡಿದ, ನಿದ್ರೆ ಮಾಡುತ್ತಲೆ ಹೋದ.

ಒಂದು ದಿನ ಎದ್ದು ಕುಳಿತ. ಅಗಾಧ ಮರದ ನೆರಳಿನಲ್ಲಿ ಕುಳಿತಿದ್ದ ತನ್ನನ್ನೇ ನೋಡಿಕೊಂಡ. ಬಿಳಿ ಕೂದಲಿನ ರಾಶಿ! ಎಲ್ಲಿಂದ ಬಂತು ಎಂದು ನೋಡಿದಾಗ ಅದು ತನ್ನದೇ ದಾಡಿ ಎಂದು ತಿಳಿಯಿತು. ಏನಾಯಿತು ನನಗೆ ಎಂದು ಎದ್ದು ನಿಂತ. ದಾಡಿ ಅವನಷ್ಟೇ ಉದ್ದವಿತ್ತು. ತಾನ ಮಲಗಿದ್ದು ಒಂದು ವಿಶಾಲ ಮೈದಾನದಲ್ಲಿ ಪುಟ್ಟ ಗಿಡದ ಕೆಳಗೆ. ಇಲ್ಲೋ ಬೇಕಾದಷ್ಟು ಮರಗಳು. ಮರಗಳಾಚೆ ಎತ್ತರದ ಮನೆಗಳು. ಏನೆಲ್ಲ ಬದಲಾಗಿದೆ, ಎಷ್ಟು ಹೊತ್ತು ಮಲಗಿದ್ದೆನೋ ಎಂದುಕೊಂಡ. ತಾನೇ ಏನೋ ಎಂದು ಪರಿಶೀಲಿಸಿಕೊಳ್ಳಲು ಸರಕಾರ ಕೊಟ್ಟಿದ್ದ ಗುರುತು ಚೀಟಿಯನ್ನು ತೆಗೆದ. ಅಕ್ಷರಗಳೆಲ್ಲಾ ಅಳಸಿ ಹೋಗಿದ್ದವು. ಎಲ್ಲೋ ಕೆಳಗೆ ಸೀಸರನ ಹಸ್ತಾಕ್ಷರವಿದ್ದಿತು. ಅಂತೂ ತಾನೇ, ಅಂದರೆ ಬಡಗಿ ಮಾರ್ಕಸ್, ಎಂದು ಧೃಡವಾಯಿತು.

ನೋಡುವವರಿಗೆ ಅವನು ಬಹಳ ವಿಚಿತ್ರವಾಗಿ ಕಂಡಿರಬೇಕು. ಏಕೆಂದರೆ ಜನ ಅವನ ಸುತ್ತ ನೆರೆಯುತ್ತಿದ್ದರು. ಅಲ್ಲಿ ಬಂದ ಒಬ್ಬ ವೃದ್ಧರನ್ನು ಮಾರ್ಕಸ್ ಕೇಳಿದ.

‘ತಾತ !ಊರಿನಲ್ಲಿ ಬಡಗಿ ಮಾರ್ಕಸ್ ಮನೆಯವರು ಯಾರಾದರೂ ಇದ್ದಾರೆಯೇ ?’

‘ಏ ! ನನ್ನನ್ನು ತಾತ ಎಂದು ಕರೆಯುತ್ತೀಯಾ! ನೀನು ನೋಡಿದರೆ ನನ್ನ ಮುತ್ತಾತನ ತರಹ ಇದ್ದೀಯ!’ ಎಂದು ಆ ಮುದುಕನಿಂದ ಉತ್ತರ ಬಂದಿತ್ತು.

ಮತ್ತೆ ಮಾರ್ಕಸ್ ಕೂಗಿದ : ‘ಊರಿನಲ್ಲಿ ಬಡಗಿ ಮಾರ್ಕಸ್ ಮನೆಯವರು ಯಾರಾದರೂ ಇದ್ದಾರೆಯೇ?’

ಒಬ್ಬ ಮುದುಕ ಮುಂದೆ ಬಂದ. ಅವನಿಗೆ  ಸುಮಾರು ಎಂಬತ್ತು ವಯಸ್ಸಿದ್ದಿರಬಹುದು.

ಮಾರ್ಕಸ್ ಅವನ ಹೆಸರು ಕೇಳಿದಾಗ

‘ನನ್ನ ಹೆಸರು ಮಾರ್ಕಸ್ ! ನಮ್ಮ ಅಜ್ಜ ಬಡಗಿ ಮಾರ್ಕಸನ ನೆನಪಿಗೆ ಇಟ್ಟಿರುವುದು. ನೂರು ವರ್ಷಗಳ ಹಿಂದೆ ಅವರು ಮನೆ ಬಿಟ್ಟು ಹೋದರಂತೆ. ಆಮೇಲೆ ಎಷ್ಟು ಹುಡುಕಿದರೂ ಸಿಗಲಿಲ್ಲವಂತೆ… ನೀವು ಯಾರು ?’

‘ನೀನು ಹೇಳುತ್ತಿರುವುದು ನಿಜವಾದರೆ, ನಾನು ನಿನ್ನ ಅಜ್ಜ! ಬಡಗಿ ಮಾರ್ಕಸ್! ಅಂದರೆ ನಾನು ನೂರು ವರ್ಷ ನಿದ್ರ ಮಾಡಿದ್ದೇನೆಯೇ?’

‘ಓ! ನೀವೇನೇ ಮಾರ್ಕಸ್ ಅಜ್ಜ!’ ಎಂದು  ಆತ ಬಂದು ತಬ್ಬಿಕೊಂಡ.’ ನೀವು ಸೀಸರನ ಕಾಲದವರಲ್ಲವೇ?

‘ಹೌದು. ಅವರ ಕೊಲೆಯಾದಾಗ ಸೆನೇಟಿನ ಭವನದ ಹತ್ತಿರವೆ ಇದ್ದೆ. ಅವರ ಶವವನ್ನೂ ಹತ್ತಿರದಿಂದ ನೋಡಿದ್ದೇನೆ’

‘ಅವರ ಬಗ್ಗೆ ಈಗ ಜನರಿಗೆ ಹೆಚ್ಚು ಗೊತ್ತಿಲ್ಲ. ಎಲ್ಲರಿಗೂ ತಿಳಿದಿರುವುದು ಕ್ಲಿಯೊಪಾತ್ರ ವಿಷಯ ಮಾತ್ರ. ಅವರಿಬ್ಬರೂ ಪ್ರೇಮಿಗಳಾಗಿದ್ದರಂತೆ.. ಅದಿರಲಿ, ಸೀಸರ್ ಸರ್ವಾಧಿಕಾರಿಯಾಗಿದ್ದನಂತೆ’

‘ಹೌದು, ಸರ್ವಾಧಿಕಾರದತ್ತ ವಾಲುತ್ತಿದ್ದ. ಆದರೆ ರೋಮಿನ ಬಗ್ಗೆ ಅವನಿಗೆ ಅಪಾರ ಪ್ರೀತಿ ಇದ್ದಿತು. ದಿನ, ರಾತ್ರಿ ರೋಮನ್ನು ಹೇಗೆ ಮುಂದಕ್ಕೆ ತರುವುದು ಎನ್ನುದೇ ಅವನ ಆಲೋಚನೆಯಾಗಿತ್ತು. ಅವನ ಸುತ್ತ ಕೆಲಸಕ್ಕೆಬಾರದ ಸೆನೆಟರುಗಳು. ಅವರಿಗೆ ಅವನ ಮೇಲೆ ದ್ವೇಷ. ಆದರೆ  ನಮ್ಮಂತಹವರಿಗೆ ಅಚ್ಚುಮೆಚ್ಚಿನ ನಾಯಕ ಅವನೇ ಇದ್ದಿದ್ದರೆ ನಮ್ಮದು ಮಾದರಿ ಗಣರಾಜ್ಯವಾಗಿರುತ್ತಿತ್ತು’

‘ಅವನ ಕಡೆಯವರೇ ಅವನಿಗೆ ಚೂರಿ ಇರಿದರಂತೆ’

‘ಹೌದು, ಆ ಬ್ರೂಟಸನ್ನು ಅವನೇ ಮೇಲೆ ತಂದಿದ್ದ. ಆದರೆ ಕಡೆಗೂ ಬ್ರೂಟಸ್ ತಪ್ಪು ದಾರಿ ಹಿಡಿದ.’

‘ಸರಿ ಬಿಡು ಅಜ್ಜ, ಹಳೆಯದ್ದು ಯಾರಿಗೆ ಬೇಕುಈಗ? ಬಾ ಮನೆಗೆ ಹೋಗೋಣ.’

‘ಗಣರಾಜ್ಯಕ್ಕೆ ಏನಾಯಿತು?

‘ಯಾವ ಗಣರಾಜ್ಯ! ಅದು  ಸೀಸರನ ಜೊತೆಯೆ ಹೋಯಿತು. ಕೆಲವೇ ವರುಷಗಳಲ್ಲಿ ಸೋದರಳಿಯ ಆಕ್ಟೇವಿಯನ ಆಗಸ್ಟಸ್ ಸೀಸರ್ ಆಗಿ ಸಾಮ್ರಾಟನಾದ. ಅದಾದ ನಂತರ ಎಷ್ಟೋ ಸಾಮ್ರಾಟರು ಬಂದು ಹೋಗಿದ್ದಾರೆ.’

ಅಜ್ಜ ಮೊಮ್ಮಗ ಮನೆಗೆ ಹೋದರು. ಮನೆಯ ಮಕ್ಕಳಿಗೆಲ್ಲಾ ಈ ಹೊಸ ಮುತ್ತಜ್ಜನನ್ನು ಕಂಡರೆ ನಗು. ಅವನನ್ನು, ಅವನ ಬಟ್ಟೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದರು. ಅಕ್ಕ ಪಕ್ಕದವರೂ ಇವನನ್ನು ಕಂಡು ನಗುತ್ತಿದ್ದರು. ತನ್ನ ಮೊಮ್ಮಗನ ಮನೆಯನ್ನು ನೋಡಿದಾಗ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ್ದು ಎದ್ದು ಕಾಣುತ್ತಿತ್ತು; ಹರಿದ ಬಟ್ಟೆಗಳಲ್ಲಿ ಜೀವನ ನಡೆಸುತ್ತಿದ್ದರು, ಅರ್ಧ ತುಂಬಿದ ತಟ್ಟೆಗಳಲ್ಲಿ ತಿನ್ನುತ್ತಿದ್ದರು. ಸಾಮ್ರಾಜ್ಯವೇನೋ ಬಂದಿತ್ತು. ಆದರೆ ಕೆಳಗಿದ್ದವರು ಅಲ್ಲೆ ಇದ್ದರು.

ಹೀಗೇ ಕೆಲವು ದಿನಗಳಾದ ಮೆಲೆ, ಒಂದು ಭಾನುವಾರ ಮಧ್ಯಾಹ್ನ ಮನೆಯವರೆಲ್ಲ ಹೊರಗೆ ಹೊರಟರು. ಅಜ್ಜ ಮಾರ್ಕಸನ್ನು ಬರುತ್ತೀರಾ ಎಂದು ಕೇಳಿದರು. ಎಲ್ಲಿಗೆ ಎಂದು ಅವನು ಕೇಳಿದಾಗ

‘ಕಾಲಸಿಯಮ್ಮಿಗೆʼ ಎಂದು ಒಬ್ಬ ಮರಿಮಗ ಹೇಳಿದ.

‘ದೊಡ್ಡ ಆಟದ ಮೈದಾನವನ್ನು ಕಟ್ಟುತ್ತೇವೆ ಎಂದು ಆಗಲೂ ಹೇಳುತ್ತಿದ್ದರು.’

‘ಹೌದು, ಶುರುಮಾಡಿದ್ದಾರೆ. ಆದರೆ ಇನ್ನೂ ಪೂರ್ತಿಯಾಗಿಲ್ಲ. ಆದರೂ ಅಲ್ಲಿ ಏನಾದರೂ ನಡೆಯುತ್ತಲೇ ಇರುತ್ತೆ’

‘ಇಂದು ಎನು ?’

‘ಈವತ್ತ ಯಾರೋ ಕ್ರೈಸ್ತರನ್ನು ಶಿಲುಬೆಗೆ ಏರಿಸುತ್ತಾರಂತೆ’

‘ಏನಿದು?  ಕ್ರೈಸ್ತರಾರು?’

‘ಜೆರೂಸಲಮ್ಮಿನ ಯಾವುದೋ ಪ್ರವಾದಿಯ ಆನುಯಾಯಿಗಳು. ಇಲ್ಲಿ ಬಂದು ರೋಮಿನ ಜನರಿಗೆ ತೊಂದರೆ  ಕೊಡುತ್ತಿದ್ದಾರೆ. ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ’

‘ಶಿಲುಬೆಯೇಕೆ? ಹಿಂದೆಯೂ ಇಂತಹವರಿದ್ದರು. ಆದರೆ ಅವರ ಜೊತೆ ಮಾತುಕತೆ ನಡೆಯುತ್ತಿತ್ತು. ಸೀಸರನೇ ಸಂಧಾನ ನಡೆಸುತ್ತಿದ್ದ’

‘ಇಲ್ಲ, ಈಗ ಅದಕ್ಕೆಲ್ಲಾ ಸಮಯವಲ್ಲ! ಅಜ್ಜ! ಅವರಿಗೆ ಬುದ್ದಿ ಕಲಿಸಲೇ ಬೇಕು’

ಎಷ್ಟು ಅಸಹನೆ ಎಂದುಕೊಂಡು ಮಾರ್ಕಸ್ ಬರುವುದಿಲ್ಲ ಎಂದು ಹೇಳಿದ. ಮನೆಯವರೆಲ್ಲಾ ಹೊರಟುಹೋದರು. ಕಳೆದ ಒಂದು ವಾರ ಮಾರ್ಕಸನಿಗೆ ಬಹಳ ಬೇಸರ ತಂದಿತ್ತು. ತಾನು ಎಲ್ಲಿ ಹೋದರೂ ಜನ ಏನೋ ವಿಚಿತ್ರ ಕಂಡಂತೆ ಆಡುತ್ತಿದ್ದರು.. ಪುಟ್ಟ ಹುಡುಗರು ಕೇಕೆ ಹಾಕುತ್ತಾ ಹಿಂಬಾಲಿಸುತ್ತಿದ್ದರು. ತಾನು ಏನು ಮಾತನಾಡಿದರೂ ಮನೆಯವರೆಲ್ಲಾ ‘ಇನ್ನೂ ಹಳೆಯದ್ದೇ ಹೇಳುತ್ತೀಯಲ್ಲಾ. ಸೀಸರ್ ಹೋಗಿ ನೂರು ವರ್ಷವಾಯಿತು’ ಎಂದು ತಮಾಷೆ ಮಾಡುತ್ತಿದ್ದರು. ತನಗೆ ಈ ಜಾಗ ಸರಿಯಲ್ಲ ಎಂದು ಅವನಿಗೆ ಮೊದಲಿಂದಲೂ ಅನಿಸತೊಡಗಿತ್ತು. ಈಗ ಆಭಾವನೆ ಇನ್ನೂ ಧೃಡವಾಯಿತು. ಮನೆಯವರು ವಾಪಸ್ಸು ಬಂದಾಗಅವರೆಲ್ಲ ಖುಷಿಯಿಂದ ಇದ್ದರು.. ಏನಾಯಿತು ಎಂದಾಗ ‘ಪೀಟರನನ್ನು ಶಿಲುಬೆಗೆ ಏರಿಸಿದರು’ ಎಂದು ಒಬ್ಬಮರಿಮಗ ಹೇಳಿದ..

ಮುಂದಿನ ದಿನ ಬೆಳಿಗ್ಗೆ ಮನೆಯವರನ್ನೆಲ್ಲ  ಕರೆದು ಮಾರ್ಕಸ್  ತಾನು ಹೊರಟುಹೋಗುತ್ತೇನೆಂದು ಹೇಳಿದ: ಅವರು ಅವನನ್ನು ಸಮಜಾಯಿಸಲು ಪ್ರಯತ್ನಿಸಿದರು. ಆಗ ಮಾರ್ಕಸ್ಉದ್ವೇಗದಿಂದ ‘ಇಲ್ಲ ಮಕ್ಕಳೇ! ಇದು ಬೇರೆಯದೇ ಸಮಯ! ನೀವು, ನಿಮ್ಮ ನಡತೆ, ನಿಮ್ಮ ವೇಶಭೂಷಣ, ನಿಮ್ಮಭಾಷೆ, ನಿಮ್ಮ ಅಭಿಪ್ರಾಯಗಳು.. ಇವೆಲ್ಲಾ  ನನಗೆ ಹೊಸತು.. ನನಗೆ ಇಲ್ಲಿ ಒಗ್ಗುತ್ತಿಲ್ಲ. ನನಗೆ ಇದು ತಡೆಯಲಾಗುತ್ತಿಲ್ಲ ನಿಮ್ಮ ಜೊತೆ ನಾನು ಹೊಂದಿಕೊಳ್ಳಲಾರೆ. ಇಂದು  ಸಂಜೆ ನಾನು ನಿಮಗೆ ಎಲ್ಲಿ ಸಿಕ್ಕೆನೋ ಅಲ್ಲಿಗೇ ಕರೆದುಕೊಂಡುಹೋಗಿಬಿಡಿ“

ಸಂಜೆ ಆ ಉದ್ಯಾನಕ್ಕೆ ಹೋದನಂತರ ತನ್ನ ಮನೆಯವರಿಗೆ ಮಾರ್ಕಸ್ ವಿದಾಯ ಹೇಳಿದ. ನಾನು ಮತ್ತೆ ಮಲಗುತ್ತೇನೆ ಎಂದು ಮಧ್ಯದಲ್ಲಿದ್ದ ದೊಡ್ಡ ಮರದ ಬಳಿ ಹೋಗಿ ಅದರ ಕೆಳಗೆ ಮಲಗಿದ. ಮಾರ್ಕಸ್ ಮತ್ತೆ  ಎದ್ದನೆ ? ತಿಳಿಯದು. ನಮಗೆ ಇರುವುದು ಇಷ್ಟೇಮಾಹಿತಿ.. (ಯಹೂದಿ ಜಾನಪದ ಕತೆಯೊಂದನ್ನುಆಧರಿಸಿ) https://www.sacred-texts.com/jud/jftl/jftl19.htm

‍ಲೇಖಕರು Avadhi

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: