ಪಾರ್ವತಿ ಜಿ ಐತಾಳ್ ಓದಿದ ‘ಮನುಷ್ಯರು ಬದಲಾಗುವರೆ?’

ಪಾರ್ವತಿ ಜಿ ಐತಾಳ್

‘ಮನುಷ್ಯರು ಬದಲಾಗುವರೆ?’ ಹೆಸರಾಂತ ಕಥೆಗಾರ ಕೆ.ಸತ್ಯನಾರಾಯಣರ ಹನ್ನೆರಡು ಕಥೆಗಳ ಸಂಕಲನ. ಒಟ್ಟೂ ಕಥೆಗಳಿಗೆ ಅವರಿಟ್ಟ ಶೀರ್ಷಿಕೆಯಿದು. ಇದೊಂದು ರೆಟೊರಿಕ್ ಧ್ವನಿಯುಳ್ಳ ಪ್ರಶ್ನೆ. ಇಲ್ಲ ಎನ್ನುವುದೇ ಉತ್ತರ ಹೌದು. ಆದರೆ ಇಲ್ಲಿ ಹೌದು ಎನ್ನುವ ಉತ್ತರವೂ ಇದೆ. ಮನುಷ್ಯನ ಹೊರಜಗತ್ತು ಬದಲಾವಣೆಗೆ ಪಕ್ಕಾಗುತ್ತಲೇ ಇರುತ್ತದೆಂದೂ ಒಳಜಗತ್ತಿನ ಗುಣಗಳು ಸ್ಥಾಯಿಯಾಗೇ ಇರುತ್ತವೆಂದೂ ಇಲ್ಲಿನ ಕಥೆಗಳು ಸಾರಿ ಹೇಳುತ್ತವೆ. ಕಥೆಗಾರರು ತಾವು ಮಹಾ ಬುದ್ಧಿಜೀವಿಗಳೆಂದು ಅಹಂಕಾರ ಪಡುವುದರ ಬಗ್ಗೆ ಹೇಳುತ್ತ ‘ಕಥೆಗಳು ಇರುತ್ತವೆ. ಅವುಗಳನ್ನು ಕಾಣುವ ಮನಸ್ಸಿದ್ದವರು ಕಥೆ ಬರೆಯುತ್ತಾರೆ’ ಎಂದು ಲೇಖಕರು ತಮ್ಮ ಮುಮ್ಮಾತಿನಲ್ಲಿ ಉದಾಹರಣೆ ಸಮೇತ ಹೇಳುತ್ತಾರೆ. ಇತರರ ಕಷ್ಟ ಸುಖಗಳಿಗೆ ಮನಸ್ಸನ್ನು ತೆರೆದು ಅವರನ್ನು ಪ್ರೀತಿಸಿ ಅವರ ಕಷ್ಟಗಳಿಗೆ ಸ್ಪಂದಿಸುವವವರ ಪಾಲಿಗೆ ಕಥೆಗಳ ಕಣಜ ಎಂದೂ ಬರಿದಾಗುವುದಿಲ್ಲವೆಂದೂ ಹೇಳುತ್ತಾರೆ.

‘ವಾಷಿಂಗ್ಟನ್ ಮೆಮೋರಿಯಲ್ ಮುಂದೆ’ ಎಂಬ ಕಥೆ ಮಾತೇ ಬಂಡವಾಳವಾಗಿದ್ದ ಒಬ್ಬ ಯಶಸ್ಸಿನ ಬೆಂಬತ್ತಿ ಅದಕ್ಕಾಗಿ ‘ಬಹುಕೃತ’ ವೇಷಗಳಲ್ಲಿ ಕಾಣಿಸಿಕೊಳ್ಳುವ ಕಥೆ. ಕಲಿತು ಪದವಿ ಸಂಪಾದಿಸಿ ವಕೀಲಿ ವೃತ್ತಿ ಹಿಡಿದರೂ ಅದು ಬೇಡವೆನಿಸಿ ಅವನು ತನ್ನ ಮಾತಿನ ಜಾಣ್ಮೆಯ ಅಗತ್ಯವಿರುವ ಬೇರೆ ಬೇರೆ ಉದ್ಯೋಗಗಳನ್ನು ಹಿಡಿದು ಹಣ ಸಂಪಾದನೆ ಮಾಡುತ್ತಾನಲ್ಲದೆ ಅವನು ಬಯಸಿದ ವಿದೇಶಿ ಹೆಂಡತಿ ಕೆಲ್ಲಿಯನ್ನೂ ಪಡೆಯುತ್ತಾನೆ. ಹೆಂಡತಿಗೆ ತನ್ನ ನಿಜಸ್ಥಿತಿಯ ಬಗ್ಗೆ ಹೇಳಲಾಗದ್ದಕ್ಕೆ ಪರಿತಪಿಸುವ ಅವನಿಗೆ ತನ್ನ ತಾತ ದಾಂಪತ್ಯ ಬದುಕಿನ ಕುರಿತಾಗಿ  ಹೇಳಿದ್ದ ಮಾತು ನೆನಪಾಗುತ್ತದೆ :
‘ಎಲ್ಲ ಮದುವೆಗಳೂ ಶೇಕಡಾ ೫೧ಕ್ಕಿಂತ ಹೆಚ್ಚು ಯಶಸ್ವಿಯಾಗೊಲ್ಲ. ಎಲ್ಲ ಕಾಲದಲ್ಲೂ ಎಲ್ಲ ಸಂಸ್ಕೃತಿಯಲ್ಲೂ. ದಾಂಪತ್ಯವು ಜೀವನದ peak performance ಅಷ್ಟೇ. ಮನುಷ್ಯನ ಜಾಣತನ ಎಲ್ಲಿದೆ ಅಂದರೆ ಅದು ಯಾವಾಗಲೂ ಶೇಕಡಾ ೪೯ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳೋದು.'(ಪು.೧೩)
ಇದು ಆಂತರಿಕವಾಗಿ ಬದಲಾಗದ ಮನುಷ್ಯ ಸ್ವಭಾವದ ಸಾಮಾನ್ಯೀಕರಣ ಕೂಡಾ ಹೌದು.

‘ಜಯನಗರ ಕ್ರಾಸಿಂಗ್ನಲ್ಲಿ’ ಮುಖ್ಯವಾಗಿ ಓರ್ವ ಸತ್ತು ಹೋದ ವ್ಯಕ್ತಿಯ ಕುರಿತಾದದ್ದು. ಆತನ ಮಗಳು ಮಮತಾ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ತಾಯಿಯ ಬಗ್ಗೆ ಸದಾ ಯೋಚನೆ ಮಾಡುತ್ತಲೇ ಇರುವ ಅವಳಿಗೆ ಇಲ್ಲಿ  ಅವಳ ಅಜ್ಜಿ ತಾಯಿ ಸತ್ತ ಸಂದರ್ಭವನ್ನು ವಿವರಿಸಿ ತಂದೆ ಅನಂತರ ಮಗಳಿಗಾಗಿ ಇನ್ನೊಂದು ಮದುವೆಯಾಗದೇ ಕುಳಿತ ಬಗ್ಗೆ ಹೇಳುತ್ತಾಳೆ. ಆದರೆ ಗುಟ್ಟಾಗಿ ಹೆಣ್ಣು ಮಕ್ಕಳ ಜತೆಗೆ ಸಂಬಂಧವನ್ನಿಟ್ಟುಕೊಂಡದ್ದು ಗೊತ್ತಾದಾಗ ತಾನು ಆತನಲ್ಲಿ ಮಗಳನ್ನು ವಂಚಿಸಬಾರದೆಂದು ಬೇಡಿಕೊಂಡೆನೆಂದೂ ಅನಂತರ ಅವರು ಆ ಚಟವನ್ನು ಬಿಟ್ಟು ಬಿಟ್ಟು ಸಭ್ಯನಾದನೆಂದೂ ಹೇಳುತ್ತಾಳೆ. ಮಗಳ ಮೇಲೆ ಪ್ರೀತಿ ಇದ್ದರೂ ಲೈಂಗಿಕತೆಯ ವಿಚಾರದಲ್ಲಿ ಎಂದೂ ಬದಲಾಗದ (ಬಾಹ್ಯ ಒತ್ತಡ ಬಿದ್ದಾಗಲಷ್ಟೇ ತಾತ್ಕಾಲಿಕವಾಗಿ ಬದಲಾಗುವ)ಪುರುಷನ ಕಥೆಯಿದು.

ಮನುಷ್ಯರು  ಆಂತರಿಕವಾಗಿ ಬದಲಾಗುವುದಿಲ್ಲ ಅನ್ನುವುದಕ್ಕೆ ಶಿವಗಾಮಿಯ ಕಥೆ ಬಹಳ ಒಳ್ಳೆಯ ಉದಾಹರಣೆ. ಪ್ರತಿಭಾವಂತೆ ಪ್ರಭಾವಿ ಮಹಿಳೆ ಶಿವಗಾಮಿ ದಲಿತರ ಪರವಾಗಿ ಎಷ್ಟೇ ಹೋರಾಟ ನಡೆಸಿದರೂ ಆಂತರಿಕವಾಗಿ ತನ್ನ ಬ್ರಾಹ್ಮಣ್ಯದ ಬಗ್ಗೆ ಅವಳಿಗೆ ಹಮ್ಮೆಯಿದೆ. ಬಾಹ್ಯವಾಗಿ ಅವಳು ಬದಲಾಗುತ್ತಲೇ ಹೋಗುತ್ತಾಳೆ. ಕೊನೆಯಲ್ಲಿ ಓರ್ವ ಮಹಿಳಾ ದಲಿತ ಧಾರ್ಮಿಕ ಗುರುವಿನ ಸಲಹೆಗಾರಳಾಗುತ್ತಾಳೆ. ಆ ಧಾರ್ಮಿಕ ಗುರುವೂ ಅಷ್ಟೆ. ಅತ್ಯಂತ ಪ್ರಗತಿ ಪರವೆಂದು ಕಂಡರೂ ಅವಳಿಗೆ ತನ್ನ ಧಾರ್ಮಿಕ ಚಿಂತನೆಗಳ ಪ್ರಚಾರ ಬ್ರಾಹ್ಮಣರಿಂದಲೇ ಆಗಬೇಕೆಂದಿದೆ.(ಶಿವಗಾಮಿ ಬದಲಾದಳೆ? ಪು : ೫೪)

‘ಕದ್ದು(!)ಕೇಳಿಸಿಕೊಂಡ ಕಥೆ'(ಪು.೭೬)ಯಲ್ಲೂ ಹೊರಗಿನಿಂದ ಅಷ್ಟು ಪ್ರಗತಿಪರರೆಂದು ತೋರಿಸಿಕೊಳ್ಳುವ ಸಂಧ್ಯಾ-ಪ್ರಶಾಂತ್ ಆಂತರಿಕವಾಗಿ ಬದಲಾಗಿಲ್ಲ. ಮಕ್ಕಳಿಗೆ ತಮ್ಮ ಜೀವನದ ದಾರಿಯನ್ನು ಅವರಿಷ್ಟದಂತೆ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ಅವರು ಕೊಡುವುದಿಲ್ಲ. ಸಮುದಾಯಗಳು ಬಿಟ್ಟೂ ಬಿಡಲಾಗದ ಜಾತಿಪ್ರಜ್ಞೆಯಿಂದ ಉಂಟಾಗುವ ಬಿರುಕುಗಳು (ಒಂದು ಭೋಜನ ಮೀಮಾಂಸೆ), ಹೆಣ್ಣುಮಕ್ಕಳಿಂದ ಎಲ್ಲಾ ರೀತಿಯ ಸೇವೆ ಮಾಡಿಸಿಕೊಳ್ಳುವ ಸಮಾಜವು ಅವರ ಲೈಂಗಿಕತೆಯ ವಿಚಾರದಲ್ಲಿ ಮಾತ್ರ ಅವರಿಗೆ ಸ್ವಾತಂತ್ರ್ಯವನ್ನು ನಿರಾಕರಿಸುವುದು (ರಾಕ್ಸ್ ಮದಾಂಗಳು)-ಇವೆರಡು ಕಥೆಗಳಲ್ಲಿ ನಿಗೂಢ ಶೈಲಿಯಿದೆ.

ಮನುಷ್ಯ ಸತ್ತ ಸಂದರ್ಭದಲ್ಲಿ ಇತರರ‌  ಪ್ರತಿಕ್ರಿಯೆ ಕೆಲವೊಮ್ಮೆ ಎಷ್ಟು ಯಾಂತ್ರಿಕವಾಗಿರುತ್ತದೆಯೆಂದರೆ  ಸತ್ತವರು ಯಾರೇ ಆಗಲಿ ಅವರ ಸಹತಾಪದ ಮಾತುಗಳು ಅವೇ ಆಗಿರುತ್ತವೆ. ಅಲ್ಲಿ ಯಾವ ಭಾವನೆಗಳೂ ಇರುವುದಿಲ್ಲ. ಆಧುನಿಕತೆ ತಂದ ಬದಲಾವಣೆಯೆಂದರೆ ಇಂದು ಸೆಲೆಬ್ರಿಟಿಗಳು ಸತ್ತಾಗ ಟಿ.ವಿ.ಚಾನೆಲ್ ಗಳು ರೆಡಿಮೇಡ್ ಆದ ನಾಟಕದ ಮಾತುಗಳು, ಹಾಡುಗಳು ಹಾಗೂ ವೇಷಭೂಷಣಗಳನ್ನು ಸಿದ್ಧಗೊಳಿಸುವ ಪರಿಪಾಠ ಆರಂಭಿಸಿದ್ದು. ಈ ಕೃತಕತೆಯನ್ನು ವಿರೋಧಿಸುವ ಹನುಮಂತಾಚಾರ್ ಚಿತ್ರ ‘ಹನುಮಂತಾಚಾರ್’ ಕಥೆಯಲ್ಲಿದೆ.
‘ಕಾಮತರ ಪಂಜಾಬಿ ಸೊಸೆ’ ಕಥೆಯಲ್ಲಿ ಒಂದು ವಿದ್ಯಾವಂತ , ಶ್ರೀಮಂತ ಹಾಗೂ ಸಮಾಜದಲ್ಲಿ ಹೆಸರು ಪಡೆದ ಪ್ರತಿಷ್ಠಿತ ಕುಟುಂಬದಲ್ಲಿ ನಡೆಯುವ ವಿಚಿತ್ರ ವಿದ್ಯಮಾನಗಳ ಕಥೆಯಿದೆ. ಕಾಮತರಿಗೆ ಮನೆಯಿಂದ ಹೊರಗೆ ಹೋದವರಿಗೆ ಅಪಘಾತವಾಗಿ ಅವರು ಸತ್ತು ಹೋಗ್ತಾರೆ ಅನ್ನುವ ವಿಚಿತ್ರ ಭಯ. ಅದಕ್ಕೆ ಸರಿಯಾಗಿ ಒಂದು ದಿನ ಹೊರಗೆ ಹೋದ ಜಯವಂತ್ ಯಾವುದೋ ದುಷ್ಟರ ಗ್ಯಾಂಗ್ ಮಾಡಿದ ಮಿಸ್ಟೇಕನ್ ಐಡೆಂಟಿಟಿಗೆ ಬಲಿಯಾಗುತ್ತಾನೆ ಕೂಡಾ. ಅಂತರಜಾತೀಯ ವಿವಾಹವಾಗಿ ಪಂಜಾಬಿ ಹೆಣ್ಣನ್ನು ಮನೆಗೆ ಕರೆತರುವ ಜಯವಂತನಿಗೆ ತನಗೆ ಹುಟ್ಟುವ ಮಗು ಅಂಗವಿಕಲವಾಗಿರುತ್ತದೆ ಎಂಬ ವಿಚಿತ್ರ ಭಯ. ಆದ್ದರಿಂದ ಮಗು ಬೇಡವೆಂದು ಹೆಂಡತಿಯ ಮೇಲೆ ಒತ್ತಾಯ ಹೇರುತ್ತಾನೆ. ಅವಳಿಗೋ ಮಗುವೆಂದರೆ ಪ್ರಾಣ. ಅವಳು ಕೊನೆಗೂ ಸೀಮಂತಗಳನ್ನು ನೋಡುವುದರಲ್ಲೇ ತೃಪ್ತಿ ಪಡುತ್ತಾಳೆ. ದೊಡ್ಡ ಮನುಷ್ಯರು ಯಾವಾಗಲೂ ದೊಡ್ಡವರಾಗಿರುವುದಿಲ್ಲ ಅನ್ನುವುದನ್ನು ಈ ಕಥೆ ಸಾಕ್ಷೀಕರಿಸುತ್ತದೆ.

ಸತ್ಯನಾರಾಯಣರ ಎಲ್ಲ ಕಥೆಗಳಲ್ಲೂ ಹೊಸತನವಿದೆ. ಸಣ್ಣ ಕಥೆಗಳ ಸಿದ್ಧ ಮಾದರಿಯನ್ನು ಅವರು ಬಿಟ್ಟಿದ್ದಾರೆ.‌ ನಿಜ ಹೇಳಬೇಕೆಂದರೆ ಇಲ್ಲಿ ಕಥೆಗಾರ ಕಟ್ಟುವ ಕಥೆಗಳಿಲ್ಲ. ಅವು ಒಂದು ಮುಖ್ಯ ಘಟನೆಯ ಸುತ್ತ ಸುತ್ತುವುದೂ ಇಲ್ಲ. ಆರಂಭದಲ್ಲಿ ‘ಕಥೆಗಳು ಕಾಣಿಸುತ್ತವೆ’ ಎಂದು ಅವರೆಂದಂತೆ ಅವರ ಕಣ್ಣುಗಳಿಗೆ ಕಾಣಿಸುವ ಚಿತ್ರಗಳನ್ನು ಚಿತ್ರ ಕಲಾವಿದನಂತೆ ನಾಜೂಕಾಗಿ ಓದುಗನ ಕಣ್ಣಿಗೆ ಕಟ್ಟುವಂತೆ ಜಾಣ್ಮೆಯಿಂದ ಅವರು ಶಬ್ದ ಚಿತ್ರಗಳಾಗಿಸುತ್ತಾರೆ. ಅವರ ಜಿಡುಕಿಲ್ಲದ ಸರಳ ನಿರೂಪಣಾ ಶೈಲಿಯ ಸೊಗಸಿನಿಂದಾಗಿ ಕಥೆಗಳು ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. 

‍ಲೇಖಕರು avadhi

March 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: