ಪಾರ್ವತಿ ಜಿ ಐತಾಳ್ ಓದಿದ ‘ಜಾತಿಯವನೇ ಬೇಕು’

ಪಾರ್ವತಿ ಜಿ ಐತಾಳ್

ಇಂಗ್ಲಿಷ್ ಸಾಹಿತ್ಯಕ್ಕೆ ಶೇಕ್ಸ್‌ಪಿಯರ್ ಹೇಗೋ ಮರಾಠಿ ನಾಟಕ ಸಾಹಿತ್ಯಕ್ಕೆ ವಿಜಯ ತೆಂಡೂಲ್ಕರ್. ಸಮಾಜದ ಓರೆಕೋರೆಗಳ ಬಗ್ಗೆ, ಬದುಕಿನ ಕಠೋರ ಸತ್ಯಗಳ ಬಗ್ಗೆ, ಮನುಷ್ಯ ಸ್ವಭಾವದ ವೈಚಿತ್ರ್ಯಗಳ ಬಗ್ಗೆ ಮನಶ್ಶಾಸ್ತ್ರೀಯ ನೆಲೆಗಳಿಂದ ೪೦ಕ್ಕೂ ಹೆಚ್ಚು ನಾಟಕಗಳನ್ನು ಬರೆದವರು ಅವರು. ಅವರ ಹೆಚ್ಚಿನ ನಾಟಕಗಳೂ ದೇಶದಾದ್ಯಂತ ಅನುವಾದಗೊಂಡು ರಂಗದ ಮೇಲೇರಿ ಜನಜನಿತವಾಗಿವೆ. ಅವರ ‘ಜಾತಿಯವನೇ ಬೇಕು’ ಮತ್ತು ಐದು ಮಕ್ಕಳ ನಾಟಕಗಳನ್ನು ಕನ್ನಡದ ಹಿರಿಯ ಲೇಖಕಿ ಹಾಗೂ ರಂಗಕರ್ಮಿ ಹೇಮಾ ಪಟ್ಟಣಶೆಟ್ಟಿಯವರು ಅನುವಾದಿಸಿ ತಮ್ಮದೇ ಅನನ್ಯ ಪ್ರಕಾಶನದಿಂದ ಇತ್ತೀಚೆಗೆ ಪ್ರಕಟಿಸಿದ್ದಾರೆ. ತಾಜಾ ಧಾರವಾಡ ಭಾಷೆಯ ಸೊಗಡಿನಿಂದ ತುಂಬಿರುವ ಅವರ ಸಂಭಾಷಣಾ ಶೈಲಿಯ ಸೊಗಸು ನಾಟಕಗಳನ್ನು ಓದುವಾಗಲೇ ರಂಗದ ನೋಟವು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಅನುವಾದಕಿಯ ಸೃಜನಶೀಲತೆಗೆ ಎರಡೂ ನಾಟಕಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಶೀರ್ಷಿಕೆಯೇ ಸೂಚಿಸುವಂತೆ ‘ಜಾತಿಯವನೇ ಬೇಕು’  ನಾಟಕವು ಜಾತಿ ಸಮಸ್ಯೆಯ ಬಗ್ಗೆ ಇದೆ. ಇಲ್ಲಿ ದಲಿತನೊಬ್ಬ ಅತ್ಯಂತ ಕಷ್ಟ ಪಟ್ಟು ಓದಿ ಎಂ.ಎ.ಮಾಡಿ ಕಾಲೇಜಿನಲ್ಲಿ ಪ್ರೊಫೆಸರ್ ಆಗುವ ಕನಸು ಕಂಡು ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ಕಥೆ. ಆಯ್ಕೆಗೆ ಜಾತಿಯೇ ಮಾನದಂಡವಾಗಿರುವ ವಿದ್ಯಾಸಂಸ್ಥೆಗಳ ಮಧ್ಯೆ ಉದ್ಯೋಗ ದಕ್ಕಿಸಿಕೊಳ್ಳಲು ಆತ ಪಡುವ ಪಡಿಪಾಟಲು, ಯಾವುದೋ ಹಳ್ಳಿಯ ಮೂಲೆಯಂದರ ಕಾಲೇಜಿನಲ್ಲಿ ಅವನಿಗೆ ಕೆಲಸ ಸಿಗುವುದು, ಅಲ್ಲಿನ ಅವ್ಯವಸ್ಥೆ, ಮಾನವೀಯತೆಗೆ ಬೆಲೆ ಕೊಡದ ಮೇಲುಜಾತಿಯ ಮೂರ್ಖರನ್ನೇ ಒಳಗೊಂಡಂತಹ ಆಡಳಿತ ಮಂಡಳಿ, ಅವನ ಜಾಣ್ಮೆ-ಪ್ರತಿಭೆಗಳಿಗೆ ಬೆಲೆ ಸಿಕ್ಕಿದರೂ ಚೇರ್ ಮನ್ ಮಗಳನ್ನು ಪ್ರೀತಿಸಿದ ಕಾರಣಕ್ಕೆ ಮಾನಸಿಕ ಹಾಗೂ ದೈಹಿಕ ಹಿಂಸೆಗಳಿಗೆ ಬಲಿಯಾಗಿ ತನ್ನ ಕೆಲಸವನ್ನೂ ಕಳೆದುಕೊಳ್ಳುವ ದುಸ್ಥಿತಿಗೆ ತಲುಪುವಲ್ಲಿಗೆ ನಾಟಕ ಮುಗಿಯುತ್ತದೆ. 

ಕನ್ನಡಕ್ಕೆ ಸಹಜವಾಗುವಂತೆ ಹದಗೊಳಿಸಿದ ಆಡುಭಾಷೆಯ ಸೌಂದರ್ಯವು ನಾಟಕದ ರಂಗ ಸಾಧ್ಯತೆಯನ್ನು ಹೆಚ್ಚಿಸಿದೆ. ಅಲ್ಲದೆ ತೆಂಡೂಲ್ಕರ್ ಬಳಸುವ ಪಾತ್ರ ಪ್ರವೇಶಗಳ ವೈಶಿಷ್ಟ್ಯ, ಹಾಗೂ ಅಲ್ಲಲ್ಲಿ ಬರುವ ಫ್ರೀಜ್ ದೃಶ್ಯಗಳು ರಂಗಪ್ರದರ್ಶನಗಳ ಪರಿಣಾಮವನ್ನು ಪ್ರಖರಗೊಳಿಸುವ ಸಾಧ್ಯತೆಯನ್ನು ಸೂಚಿಸುತ್ತವೆ.

ಪರಿಣಾಮಕಾರಿ ಮಕ್ಕಳ ನಾಟಕಗಳ ಕೊರತೆಯಿರುವ ಕನ್ನಡ ರಂಗಭೂಮಿಗೆ ಹೇಮಾ ಅವರು ಅನುವಾದಿಸಿದ ತೆಂಡೂಲ್ಕರ್ ಮಕ್ಕಳ ನಾಟಕಗಳ ಈ ಸಂಕಲನ  ಒಂದು ಉತ್ತಮ ಕೊಡುಗೆಯಾಗಿದೆ.ಇಲ್ಲಿ  ‘ಅಪ್ಪಯ್ಯ ಕಳೆದುಹೋಗಿದ್ದಾರೆ'(ಕಿಡ್ ನ್ಯಾಪ್ ಆದ ಮಗುವನ್ನು ರಕ್ಷಿಸುವಲ್ಲಿ ನಿರ್ಜೀವ ವಸ್ತುಗಳೂ ಸಕ್ರಿಯ ಪಾತ್ರ ವಹಿಸುವ ಕಥೆ) ‘ಬಾಬಿಕತೆ’ (ಉದ್ಯೋಗದಲ್ಲಿರುವ ಅಪ್ಪ ಅಮ್ಮ ಮನೆಗೆ ತಡವಾಗಿ ಬರುವಾಗ ಒಂಟಿ ಮಗು ತನ್ನ ಕಲ್ಪನೆಯೊಳಗೆ ಹತ್ತಾರು ಪಾತ್ರಗಳನ್ನು ಸೃಷ್ಟಿಸಿಕೊಂಡು ಅವರೊಂದಿಗಿನ ಮಾತುಕತೆಗಳಲ್ಲೇ ಮುಳುಗಿ ತನ್ನ ಅಸಹಾಯಕತೆಯನ್ನು ತಾನೇ ಹೇಗೆ ನೀಗಿಕೊಳ್ಳುತ್ತದೆ ಎಂಬ ಕಥೆ) ‘ರಾಜಾ-ರಾಣಿಗೆ ಬೆವರು ಬೇಕು’ (ಮಕ್ಕಳಿಗೆ ಕಾಯಕದ ಮಹತ್ವವನ್ನು ತಿಳಿಯಹೇಳುವ ಕತೆ) ‘ಅಧಿಕ ಪ್ರಸಂಗಿ ಪ್ರಹಸನ’ (ಮೂರ್ಖ ರಾಜ ಹಾಗೂ ಅವನ ಮೂರ್ಖ ಪ್ರಜೆಗಳಿರುವಲ್ಲಿಗೆ ಬರುವ ಬುದ್ಧಿವಂತನ ಅಧಿಕ ಪ್ರಸಂಗವೇ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕಥೆ) ಮತ್ತು ‘ಗೌಡರ ಮಗಳ ಮದುವೆ’ (ಸುಂದರವಾದ ದೇಸೀ ಸಂಸ್ಕೃತಿಯನ್ನು ದೂರಮಾಡಿ ಅರ್ಥಹೀನ ಆಧುನಿಕತೆಯ ಬೆನ್ನುಹತ್ತಿ  ನಗರೀಕರಣದತ್ತ ಮುನ್ನುಗ್ಗುವ ಜನತೆಗೊಂದು ಪಾಠ) ಎಂಬ ಐದು ನಾಟಕಗಳಿವೆ.

ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಮಕ್ಕಳಿಗೆ ನಾಟಕದ ಆಟದ ಮೂಲಕ ಪಾಠಗಳನ್ನು ಹೇಳುತ್ತವೆ. ಇಲ್ಲಿಯೂ ಸ್ವಗತದ ಮಾತುಗಳು, ಫ್ರೀಜ್ ತಂತ್ರಗಳು, ಉದ್ದಕ್ಕೂ ಬರುವ ಹಾಸ್ಯಮಯ ಸಂಭಾಷಣೆಗಳು, ನಿರ್ಜೀವ ವಸ್ತುಗಳು ಜೀವಂತವಾಗಿ ನಿಂತು ಮಾತನಾಡುವ ದೃಶ್ಯಗಳು ಮಕ್ಕಳ ಅಭಿರುಚಿಗೆ ಹೇಳಿ ಮಾಡಿಸಿದಂತಿವೆ. ಅಲ್ಲಲ್ಲಿ ಬರುವ ಲವಲವಿಕೆಯ ನೃತ್ಯಗಳು ಮತ್ತು ಲಯಬದ್ಧವಾದ ಹಾಡುಗಳು (ಇವುಗಳನ್ನು ಅನುವಾದಿಸುವುದು ಒಂದು ಸವಾಲು ಹಾಗೂ ಹೇಮಾ ಅವರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ) ನಾಟಕದ ಅಂದವನ್ನು ಹೆಚ್ಚಿಸಿವೆ.   ಹೆಚ್ಚು ಸಂಖ್ಯೆಯ ಪಾತ್ರಗಳು ರಂಗದಲ್ಲಿ ಸಮಸ್ಯೆಯಾಗಬಹುದಾದರೂ ಒಬ್ಬನೇ ನಟನಿಗೆ ಎರಡು ಮೂರು ಪಾತ್ರಗಳನ್ನು ನೀಡುವ ಮೂಲಕ ಆ ತೊಂದರೆಯನ್ನು ಪರಿಹರಿಸ ಬಹುದು.  

ತೆಂಡೂಲ್ಕರ್ ಅವರು ರಚಿಸಿದ  ದೊಡ್ಡವರ ಮತ್ತು ಮಕ್ಕಳ ನಾಟಕಗಳೆರಡರಲ್ಲೂ ನಾವು ಕಾಣುವ ಒಂದು ಅಂಶವೆಂದರೆ ತುಸು ಹೆಚ್ಚೇ ಅನ್ನಿಸುವ ಸೂಚನೆಗಳು. ಹಲವು ರಂಗ ಪರಿಕರಗಳಿಗೆ ‘ಕಾಲ್ಪನಿಕ’ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ರಂಗಭೂಮಿಯ ಭಾಷೆಯ ಪರಿಚಯವಿದ್ದವರಿಗೆ ಅಭಿನಯ-ಹಾವಭಾವಗಳೇ ಸಾಕಾಗುತ್ತವೆ. ಏನೇನು ಪರಿಕರಗಳು ಬೇಕು, ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು, ಪಾತ್ರಗಳ ಚಲನವಲನಗಳು ಹೇಗಿರಬೇಕು ಅನ್ನುವುದನ್ನು ನಿರ್ದೇಶಕರು ನಿರ್ಧರಿಸುತ್ತಾರೆ. ಆದರೆ ತೆಂಡೂಲ್ಕರ್ ಎಲ್ಲವನ್ನೂ ತಾವೇ  ಒಂದು ಚಿತ್ರಕಥೆಯಲ್ಲಿ ನಮೂದಿಸುವಂತೆ ಬರೆಯುತ್ತಾರೆ. ಇದಕ್ಕೆ ಕಾರಣ ನಾಟಕ ಹೀಗೆಯೇ ಇರಬೇಕು ಅನ್ನುವ ಅವರ ಕಾಳಜಿಯೂ ಆಗಿರಬಹುದು. 

‍ಲೇಖಕರು Admin

October 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: