ಪಾರ್ವತಿ ಜಿ ಐತಾಳ್ ಓದಿದ ‘ಜಲಪ್ರಳಯ’

ಪಾರ್ವತಿ ಜಿ ಐತಾಳ್

ಇದು ೨೦೧೮-೧೯ರ ವರ್ಷಗಳಲ್ಲಿ ಕೊಡಗಿನಲ್ಲ ಸಂಭವಿಸಿದ ಐತಿಹಾಸಿಕ ಜಲಪ್ರಳಯವು ಉಂಟು ಮಾಡಿದ ಘನಘೋರ ಹಾನಿ ಹಾಗೂ ವಿನಾಶಗಳನ್ನು ಸರಕಾರ, ಸಂಘ-ಸಂಸ್ಥೆಗಳು, ಸಮಾಜ ಸೇವಾ ಧುರೀಣರು ಮತ್ತು ಸಾಮಾಜಿಕ ಸಂಘಟನೆಗಳು ನಿರ್ವಹಿಸಿದ ಬಗೆಯನ್ನು ಎಲ್ಲ ವಿವರಗಳೊಂದಿಗೆ ಕಟ್ಟಿಕೊಡುವ ಅನುಭವ ಕಥನ. ಆ ಸಂದರ್ಭದಲ್ಲಿ ಹಗಲಿರುಳೆನ್ನದೆ ನಿಸ್ವಾರ್ಥವಾಗಿ ದುಡಿದ ‘ನಮ್ಮ ಕೊಡಗು’ ಎಂಬ ಸೇವಾ ತಂಡದ ನೇತೃತ್ವ ವಹಿಸಿದ ನೌಶಾದ್ ಜನ್ನತ್ ಇದರ ಲೇಖಕರು.

ವಿವರಗಳಿಗೆ ಪೂರ್ವಭಾವಿಯಾಗಿ ಲೇಖಕರು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸುತ್ತ ಈಚೆಗೆ ಎಲ್ಲವೂ ಹೇಗೆ ಪಲ್ಲಟಗೊಂಡಿದೆ ಎಂಬುದನ್ನು ವಿಷಾದದೊಂದಿಗೆ ಹೇಳುತ್ತಾರೆ. ಕೊಡಗನ್ನು ಪ್ರವಾಸಿಧಾಮವನ್ನಾಗಿ ಮಾಡಿ ದೇಶ ವಿದೇಶಗಳ ಪ್ರವಾಸಿಗಳನ್ನು ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಕಾಡು-ಗುಡ್ಡಗಳನ್ನು ಕಡಿದು ನೆಲಸಮ ಮಾಡಿ ರೆಸಾರ್ಟುಗಳನ್ನು ಕಟ್ಟಿಸಿದ್ದು ಮತ್ತು ನಗರಗಳಿಂದ ಅಲ್ಲಿಗೆ ಬಂದು ಮೋಜು ಮಾಡುವವರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟದ್ದರಿಂದಲೇ ಪ್ರಕೃತಿ ತಮ್ಮ ಮೇಲೆ ಮುನಿದು ಶಾಪವಿತ್ತಳು ಎಂಬ ಪರಿತಾಪದ ದನಿಯಲ್ಲಿ ಲೇಖಕರು ತಮ್ಮ ಕಥನವನ್ನು ಆರಂಭಿಸುತ್ತಾರೆ.

೨೦೧೮ ಆಗಸ್ಟ್ ತಿಂಗಳ ಆ ದಿನ ಮನೆಗಳ ಮೇಲೆ ಗುಡ್ಡ ಬೆಟ್ಟಗಳು ಕುಸಿದು, ಮನೆಗಳು ಯಮಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಮಡಿಕೆರಿಯ ಆಸುಪಾಸಿನ ತಗ್ಗು ಪ್ರದೇಶಗಳಲ್ಲಿ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ನೂರಾರು ಮಂದಿ ಭೂಮಾಲೀಕರುಗಳು ಮತ್ತು ಅವರ ಕೈಕೆಳಗೆ ದುಡಿಯುತ್ತಿದ್ದ ಕೂಲಿ ವರ್ಗದ ಜನತೆ ಎದುರಿಸಿದ ಭಯಾನಕ ಸನ್ನಿವೇಶಗಳು, ಅನುಭವಿಸಿದ ಕಷ್ಟನಷ್ಟಗಳು, ಕೊನೆಗೆ ದಿನಬೆಳಗಾಗುವುದರೊಳಗಾಗಿ ತಮ್ಮ ತೋಟಗಳಲ್ಲಿ ಕೂಲಿ ಮಾಡುತ್ತಿದ್ದ ಬಡಮಂದಿಯ ಜತೆಗೆ ಅವರ ಶ್ರೀಮಂತ ಮಾಲೀಕರೂ ಎಲ್ಲವನ್ನೂ ಕಳೆದುಕೊಂಡು ದಿನ ನಿತ್ಯದ ದವಸಧಾನ್ಯಗಳಿಗಾಗಿ ಕೈಯೊಡ್ಡುತ್ತ ನಿರಾಶ್ರಿತರ ಕೇಂದ್ರಗಳಲ್ಲಿ ದಿನಗಟ್ಟಲೆ ಕಳೆದ ಹೃದಯ ವಿದ್ರಾವಕ ಸನ್ನಿವೇಶಗಳ ಚಿತ್ರಣ ಇಲ್ಲಿದೆ.

ಕಷ್ಟಪಟ್ಟು ಒದ್ದಾಡಿ ಆರ್ಥಿಕವಾಗಿ ಸುಭದ್ರಗೊಳ್ಳುವತ್ತ ಸಾಗುತ್ತಿದ್ದ ಹಲವರಿಗೆ ಜಲಪ್ರಳಯ ಮತ್ತು ಭೂಕುಸಿತಗಳಿಂದುಂಟಾದ ಆಘಾತಗಳಿಗೆ ಉದಾಹರಣೆಯಾಗಿ ಪಾಣತ್ತಲೆ ಗಣೇಶ್, ಹರೀಶ ರೈ ಮತ್ತು ಚಂದ್ರಾವತಿ, ಲಾರೆನ್ಸ್ ಮತ್ತು ಕುಟುಂಬ, ಸೈಕಲ್ ಕುಮಾರ್, ದುಬೈಯಿಂದ ಬಂದು ಆಗಷ್ಟೇ ಬದುಕು ಕಟ್ಟಿಕೊಳ್ಳುತ್ತಿದ್ದ ನಾಸೀರ್, ಮೊದಲಾದವರ ಕಥೆಗಳನ್ನು ಲೇಖಕರು ಹೇಳುತ್ತಾರೆ. ಎಲ್ಲವನ್ನು ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥರಾದ ‘ಕುಡಿಯರ ಪೂಣಚ್ಚ’ರ ವಿಚಿತ್ರ ವರ್ತನೆಯ ಬಗ್ಗೆ ಅನುಕಂಪ ಸೂಸುತ್ತಾರೆ.

ಈ ಸಂದರ್ಭದಲ್ಲಿ ತಮ್ಮ ನೇತೃತ್ವದಲ್ಲಿ ರೂಪುಗೊಂಡ ‘ನಮ್ಮ ಕೊಡಗು’ ಎಂಬ ಯುವಕರ ತಂಡವು ಯಾವ ಯಾವ ರೀತಿಯಲ್ಲಿ ಸಂತ್ರಸ್ತರಿಗೋಸ್ಕರ ಕಾರ್ಯಾಚರಣೆ ಮಾಡಿತು, ಬೆಂಗಳೂರು ಹಾಗೂ ಇತರ ಕೆಲವು ಊರುಗಳಿಂದ ಸಂತ್ರಸ್ತರ ಮೇಲೆ ಕಾಳಜಿ ಹೊಂದಿದ ವಿವಿಧ ಸಮಾಜ ಸೇವಾ ಸಂಘಟನೆಗಳು ತಂದು ಕೊಟ್ಟ ಸಾಮಗ್ರಿಗಳನ್ನು ಸರಿಯಾಗಿ ವಿತರಣೆ ಮಾಡಲು ತಮ್ಮ ತಂಡವು ಹೇಗೆ ಶಿಸ್ತುಬದ್ಧವಾಗಿ ಕೆಲಸ ಮಾಡಿತು, ಸೋಮವಾರ ಪೇಟೆ, ವಿರಾಜಪೇಟೆ ಮೊದಲಾದೆಡೆಗಳಿಗೆ ಸಂತ್ರಸ್ತರು ಕರೆದಾಗೆಲ್ಲ ಹೋಗಿ ಹೇಗೆ ಅವರಿಗೆ ತನ್ನಿಂದಾದ ರೀತಿಯಲ್ಲಿ ಸಹಾಯ ಮಾಡಿತು ಮೊದಲಾದ ವಿವರಗಳನ್ನು ಛಾಯಾ ಚಿತ್ರಗಳ ಸಮೇತ ಕೊಡುತ್ತಾರೆ.

ಇವುಗಳ ಮಧ್ಯೆ ‘ಹೊತ್ತಿ ಉರಿಯುತ್ತಿರುವ ಮನೆಯ ಮುಂದೆ ಕುಳಿತು ಚಳಿ ಕಾಣಿಸಿಕೊಳ್ಳುವ’ ಧೋರಣೆಯ ಕೆಲವು ಆಷಾಢಭೂತಿಗಳ ಬಗ್ಗೆಯೂ ಬರೆಯುತ್ತ ನೌಶಾದ್ ತಮ್ಮ ದುಃಖ ವ್ಯಕ್ತ ಪಡಿಸುತ್ತಾರೆ. ಸಿನಿಮಾ ನಟರು, ನಿರ್ಮಾಪಕರು, ಕಲಾವಿದರು ಎಲ್ಲರೂ ಪರಿಹಾರ ಕಾರ್ಯಗಳ ಬಗ್ಗೆ ಮಾತನಾಡಲು ಕಾರ್ಯಕ್ರಮಗಳನ್ನೇರ್ಪಡಿಸಿ ವೇದಿಕೆಯ ಮೇಲೆ ಸಂತ್ರಸ್ತರಿಗೆ ಬೇಕಾದದ್ದನ್ನೆಲ್ಲ ನೀಡುತ್ತೇವೆಂಬ ಭರ್ಜರಿ ಭರವಸೆ ನೀಡಿ ಅನಂತರ ಯಾವುದೇ ರೀತಿಯ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಂಡದ್ದು ಲೇಖಕರ ಆಕ್ರೋಶವನ್ನು ಭುಗಿಲೆಬ್ಬಿಸುತ್ತದೆ. ಅದೇ ರೀತಿ ನಿಸ್ವಾರ್ಥ ಮನೋಭಾವದಿಂದ ಜಾತಿ-ಧರ್ಮ-ಪಂಥ-ಪಕ್ಷಗಳ ಭೇದ ಮರೆತು ಕೆಲಸ ಮಾಡುತ್ತಿದ್ದ ತಮ್ಮ ತಂಡವನ್ನು ರಾಜಕೀಯ ಪ್ರೇರಿತ ಕಾಮಾಲೆ ಕಣ್ಣುಗಳಿಂದ ಸಂದೇಹ ಪಟ್ಟು ನೋಡಿದ ಅನೇಕರ ಬಗ್ಗೆ ತಮ್ಮ ಅಸಮಾಧಾನವನ್ನೂ ಅವರು ತೋಡಿಕೊಳ್ಳುತ್ತಾರೆ.

ಸಂತ್ರಸ್ತರ ಒಳಗೂ ರಾಜಕೀಯ ನಡೆದು, ಸಂಘಟನೆಗಳು ಹುಟ್ಟಿಕೊಂಡು ಆ ನೆಪದಲ್ಲಿ ನಡೆದ ಸಂಚು, ಒಳಜಗಳ, ಸರಕಾರವು ಉದಾರ ಮನಸ್ಸಿನಿಂದ ನೀಡಿದ ಸವಲತ್ತುಗಳ ಅಸಮರ್ಪಕ ನಿರ್ವಹಣೆ, ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರ ಭ್ರಷ್ಟಾಚಾರ, ಸಂತ್ರಸ್ತರನ್ನು ವಿಚಾರಿಸಲೆಂದು ಬಂದ ಸಚಿವರ ಹಾರಿಕೆಯ ಉತ್ತರಗಳು, ತನ್ನ ಹೆಸರು ಹೇಳಿದ ಕೂಡಲೇ ಬದಲಾದ ಅಧಿಕಾರಿಗಳ ನೋಟ- ಇವೆಲ್ಲವೂ ಲೇಖಕರನ್ನು ಚಿಂತೆಗೀಡು ಮಾಡಿದ ನೂರಾರು ವಿಚಾರಗಳಲ್ಲಿ ಕೆಲವು..

ಪ್ರಾಕೃತಿಕ ವಿಕೋಪಕ್ಕೆ ಮೊದಲು ದುರಾಸೆಗೊಳಗಾಗಿ ಪ್ರಕೃತಿಯನ್ನು ಶೋಷಣೆಗೊಳಿಸಿ ಸಂಕಷ್ಟದಲ್ಲಿ ಬಿದ್ದ ಮನುಷ್ಯರ ಮೇಲೆ ಮಾನವೀಯ ಕಾಳಜಿ ತೋರಿ ಅವರನ್ನು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ರಕ್ಷಿಸ ಬಯಸಿದ ತಮ್ಮ ತಂಡದವರನ್ನು ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸುವುದನ್ನು ಬಿಟ್ಟು ಅವರ ಆತ್ಮವಿಶ್ವಾಸವೇ ಕುಸಿಯುವ ರೀತಿಯಲ್ಲಿ ಹಲವರು ವರ್ತಿಸಿದ್ದಕ್ಕೆ ಜ್ವಲಂತ ಸಾಕ್ಷಿಯಾಗಿ ಲೇಖಕರು ಹಲವಾರು ಘಟನೆಗಳನ್ನು ಉಲ್ಲೇಖಿಸುತ್ತಾರೆ. ಜತೆಗೇ ತಮಗೆ ಸಹಕಾರ ನೀಡಿ ಬೆನ್ನು ತಟ್ಟಿದ ನೂರಾರು ಮಂದಿಯನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಎಲ್ಲವನ್ನೂ ನಿರಪೇಕ್ಷ ಭಾವದಿಂದ ದಾಖಲೆಗೊಳಿಸಿ ಲೇಖಕರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.

ಅಲ್ಲಲ್ಲಿ ಕೆಲವು ಭಾಷಾದೋಷಗಳೂ ಮುದ್ರಣ ದೋಷಗಳೂ ತೂರಿಕೊಂಡಿವೆಯಾದರೂ ಲೇಖಕರ ನಿರೂಪಣಾ ಶೈಲಿ ಸೊಗಸಾಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

‍ಲೇಖಕರು Admin

September 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: