ಪಾರ್ವತಿ ಜಿ ಐತಾಳ್ ಅನುವಾದಿತ ಕಥೆ- ನೀಲಾಕಾಶ…

ಮೂಲ : ಪಿ ಸುರೇಂದ್ರನ್
ಕನ್ನಡಕ್ಕೆ : ಪಾರ್ವತಿ ಜಿಐತಾಳ್

ಹಚ್ಚ ಹಸುರಿನ ವಿಶಾಲವಾದ ಬಯಲುಗಳ ಮೂಲಕ ಪ್ರಯಾಣ. ಧಾನ್ಯಗಳಿಗೂ ಹೂಹಣ್ಣುಗಳಿಗೂ ಪ್ರಸಿದ್ಧವಾದ ಹಳ್ಳಿಗಳು ಒಂದೊಂದಾಗಿ ಹಿಂದೆ ಸರಿಯುತ್ತಿದ್ದವು. ಉಬ್ಬಸ ಬಿಡುತ್ತ ಸಾಗುವ ಉಗಿಬಂಡಿಯ ವೇಗ ಕಡಿಮೆಯಾಗಿತ್ತು. ಆ ಹಳ್ಳಿಗಳ ಪರಿಸರದಲ್ಲಿಯೇ ಸುತ್ತಾಡುತ್ತಿದೆಯೆಂದು ಮಹಾದೇವನಿಗೆ ಅನ್ನಿಸಿತು. ವೇಗವನ್ನು ತಿಳಿಯಲು ಅವನು ಉಗಿಬಂಡಿಯ ತಾಳಕ್ಕನುಸಾರವಾಗಿ ಎರಡು ಶಬ್ದಗಳನ್ನು ಹೆಣೆದು ಜೋಡಿಸಿದ :
ಹೂ…ವೂ…ಕಾ…ಯೂ..ಹೂ..ವೂ..ಕಾ…ಯೂ..ಹೂ….ವೂ..
ಉಹುಂ..ಕಡಿಮೆ..ವೇಗ ಬಹಳ ಕಡಿಮೆ..

ಆ ವೇಗದಲ್ಲಿ ಪ್ರಯಾಣಿಕರು ಎಲ್ಲಿ ಬೇಕಾದರೂ ಗಾಡಿಯಿಂದ ಇಳಿಯುವುದಾಗಲಿ, ಹಿಡಿದು ನೇತಾಡುವುದಾಗಲಿ ಮಾಡಬಹುದಿತ್ತು.
ರೈಲು ನಿಲ್ದಾಣಗಳ ನಡುವಿನ ದೂರಗಳಿಂದ ಫಕ್ಕನೆ ರೈಲು ಹತ್ತಿ ಬರುವ ಕೆಲವೂ ಗ್ರಾಮಸ್ಥರನ್ನು ಮಹಾದೇವ ಗಮನಿಸಿದ. ಹುಲ್ಲು ಹಾಗೂ ಕೊತ್ತಂಬರಿ ಸೊಪ್ಪಿನ ಪರಿಮಳ ಸೂಸುವ ಮನುಷ್ಯರು.

ನಿಲ್ದಾಣಗಳಲ್ಲಿ ಬೋಗಿಗಳು ತುಂಬುತ್ತಲೂ ಖಾಲಿಯಾಗುತ್ತಲೂ ಇದ್ದವು. ತರಕಾರಿಗಳೂ ಮನುಷ್ಯರೂ ಒಂದೇ ಥರ. ಆ ಪ್ರಯಾಣ ಉಲ್ಲಾಸಕರವಾಗಿತ್ತು.

ಹೂ..ವೂ…ಕಾ..ಯೂ..
ಹಾಗೆ ಒರಗಿ ಮಲಗಿದ್ದಂತೆ ದೂರದ ಬೈಲುಗಳಿಗೂ ಗುಡ್ಡಗಳಿಗೂ ಆಚೆ ಆಕಾಶ ತಿಳಿಯಾಗುತ್ತಿದೆಯೆಂದು ಅನ್ನಿಸಿತು. ಯಾವುದೋ ಹಳ್ಳಿಯಿಂದ ಹತ್ತಿ ಮಹಾದೇವನ ಎದುರು ಸೀಟಿನಲ್ಲಿ ಕುಳಿತಿದ್ದ ವೃದ್ಧೆ ವಿದಾಯ ಹೇಳಿ ಹೋಗುವಾಗ ಒಂದು ಬುಟ್ಟಿ ತುಂಬಾ ಟೊಮೆಟೋ ಹಣ್ಣನ್ನು ಮಹಾದೇವನಿಗೆ ಕೊಟ್ಟಳು. ಆ ವೃದ್ದೆಯ ದೈನ್ಯತೆ ತುಂಬಿದ ಗೋಳುಗಳೊಂದಕ್ಕೂ ತಾನು ಸ್ವಲ್ಪವೂ ಕಿವಿಗೊಡಲಿಲ್ಲವಲ್ಲಾ ಎಂದು ಮಹಾದೇವ ಪರಿತಪಿಸಿದ. ಟೊಮೆಟೋ ತೋಟಗಳನ್ನು ಪೂರ್ತಿಯಾಗಿ ಆಕ್ರಮಿಸುವ ಹುಳಗಳ ಕುರಿತು ಹೇಳುವಾಗಲೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಅವನು.

ಒಂದು ಟೊಮೆಟೋ ತೆಗೆದು ಕಚ್ಚಿ ನೋಡಲು ಅದರ ಮೃದುವಾದ ತಿರುಳಿನಾಳಕ್ಕೆ ಹಲ್ಲು ಹಾಕಲಾಗದೆ ಸುಮ್ಮನೆ ಕೆನ್ನೆಯೊಳಗೆ ಒತ್ತಿ ಹಿಡಿದಿದ್ದ. ಆಗ ಆಕಾಶದಲ್ಲಿ ಕುಂಕುಮ ಬೊಟ್ಟುಗಳು. ಈ ಬಾರಿಯಾದರೂ ಮಹಾಗೋಪುರಗಳ ಮೇಲಿಂದ ಆಕಾಶದ ನೀಲಿ ತಿಳಿಯಾಗಿ ಕಾಣಸಿಗಲಪ್ಪಾ ಎಂದು ಮಹಾದೇವ ಆರ್ತನಾಗಿ ಪ್ರಾರ್ಥಿಸಿದ.

ಆ ಕ್ಷೇತ್ರಕ್ಕೆ ಆವನು ಯಾತ್ರೆಗೈಯುತ್ತಿರುವುದು ಇದು ಮೂರನೇ ಸಲವಾಗಿತ್ತು. ಈ ಬಾರಿ ಮಲೆಯ ಮೇಲಿನ ಆಶ್ರಮವನ್ನು ಬಿಟ್ಟು ಬರಬೇಕು. ಅಶಾಂತ ಮನಸ್ಸನ್ನು ಹೊತ್ತು ತಿರುಗಾಡ ತೊಡಗಿ ತುಂಬಾ ಕಾಲವಾಯಿತು. ಮಲೆಯ ಮೇಲಿನ ಆಶ್ರಮಕ್ಕೆ ಹೋದದ್ದು ಮನಸ್ಸು ತಿಳಿಯಾಗಲಿ ಎಂದು. ಪ್ರಜ್ಞೆಯ ಪಾರದರ್ಶಕತೆಯ ಮೂಲಕ ಒಂದು ತುಂಡು ನೀಲಾಕಾಶ ಕಾಣಸಿಗಲೆಂಬುದು ಅವನ ಎಂದಿನ ಕನಸಾಗಿತ್ತು.
ಆಶ್ರಮವು ದುಃಖದ ಹೊರೆ ಇಳಿಸುವ ತಾಣವಾಗ ಬಹುದೆಂದೆಣಿಸಿಯಾಗಿತ್ತು ಮಲೆ ಹತ್ತಿದ್ದು. ಹಿರಿಯಸ್ವಾಮೀಜ ಎಲ್ಲವನ್ಪೂ ಕರುಣಾಪೂರ್ಣವಾಗಿ ಕೇಳಿದರು. ಕತ್ತಲಾವರಿಸಿದ ಓಣಿಗಳಿಂದ ಬೆಳಕಿನ ರಾಜಮಾರ್ಗದತ್ತ ಕರೆದೊಯ್ಯುವುದಾಗಿ ಹೇಳಿದರು. ಆಗ ಮಲೆಯ ಮೇಲೆ ಶಿಶಿರವಾಗಿತ್ತು . ನರಗಳಲ್ಲಿ ರಕ್ತ ಹೆಪ್ಪುಗಟ್ಟುವಂಥ ಚಳಿ. ಶೀತ ತಲೆಗೇರುವ ನೀರನ್ನು ಮೈಗೆ ತಾಗಿಸುತ್ತ ಕುಳಿತುಕೊಳ್ಳುವುದು ಅಸಹನೀಯವಾಗಿತ್ತು.

ಧ್ಯಾನದ ಪಾಠಗಳ ಮೂಲಕ ಒಂದಷ್ಟು ಯಾತ್ರೆ ಮಾಡಿದ ಆದರೂ ಆನಂದ ಪ್ರಾಪ್ತಿಸಿಕೊಳ್ಳಲಾಗಲಿಲ್ಲ . ಬೆಳಕಿನ ಲೋಕದ ಬಾಗಿಲು ತೆರೆಯಲಿಲ್ಲ. ಆಶ್ರಮದ ಕಿಟಿಕಿಯ ಗಾಜಿನ ಅಂಚಿನಲ್ಲಿ ಬೂದುಬಣ್ಣದಿಂದ ತುಂಬಿದ ಆಕಾಶ ಮಾತ್ರ ಉಳಿಯಿತು.

ಯಾರೋ ಒಳಗೆ ಕುಳಿತು ಕೇಳಿದರು.
‘ನೀನು ಯಾಕೆ ಹೀಗೆ ಮಲೆಯ ಮೇಲೆ ಬಾಳ್ವೆ ಮಾಡುತ್ತೀ?’
ಅನಂತರ ಮಲೆಯಿಂದಿಳಿದು ತೊಟ್ಟಿಮನೆಗೆ ಹೋದ. ಕೊಯಿಲು ಗದ್ದೆಗೆ ಹೋಗದೆ ಬಾವಲಿಯ ವಾಸನೆ ಬರುವ ಕೋಣೆಯೊಳಗೆ ಮುಚ್ಚಿ ಕುಳಿತ. ಚಿಕ್ಕದೊಂದು ಮಧ್ಮಂತರ. ಪುನಹ ಮಹಾಕ್ಷೇತ್ರದತ್ತ.

ಗುಡಿಯೊಳಗಿನ ವಿಗ್ರಹದ ಕತ್ತಲಲ್ಲಿ ಆಕಾಶ ನೀಲಿಮೆ ಕಾಣಿಸಿದರೆ ಅಶಾಂತ ಯಾತ್ರೆಗಳಿಗೆ ವಿಶ್ರಾಂತಿ. ಕಳೆದ ಎರಡೂ ಯಾತ್ರೆಗಳನ್ನು ಮಾಡಿದ್ದು ಶುಭ್ರವಾದ ವಾತಾವರಣವಿದ್ದಾಗ ಆಗಿತ್ತು. ಆದರೆ ಕ್ಷೇತ್ರದ ಮುಂದೆ ಬಸ್ಸಿಳಿಯುತ್ತಲೇ ಗೋಪುರಗಳ ಮೇಲೆ ಬೂದು ಬಣ್ಣ ಬಂದು ಆವರಿಸಿಕೊಂಡಾಗಿತ್ತು.

ದೇವರೆ, ಇನ್ನಾದರೂ ನೀನು ನನಗೆ ನೀಲಾಕಾಶ ತೋರಿಸು. ಮಹಾದೇವ ಕಣ್ಣುಮುಚ್ಚಿದ.ನರಗಳನ್ನು ಎಳೆದು ಬಿಗಿಗೊಳಿಸಿದ. ನಂತರ ರೈಲು ಪೂರ್ತಿಯಾಗಿ ಉಬ್ಬಸ ಬಿಟ್ಟು ನಿಂತಾಗ ಕೈಯಲ್ಲಿ ಒತ್ತಿ ಹಿಡಿದಿದ್ದ ಟೊಮೆಟೋ ಹಣ್ಣು ಒಡೆದು ಹೋಗಿತ್ತು. ಅದನ್ನು ಹೊರಗೆಸೆದು ಎದ್ದು ನಿಂತ. ರೈಲಿಳಿದು ಚಿಕ್ಕದೊಂದು ಬಸ್ ಪ್ರಯಾಣ. ಆ ಪ್ರಯಾಣದಿಂದ ಮಹದೇವನಿಗೆ ತುಂಬಾ ಸುಸ್ತಾಯಿತು. ಹೊರಗೆ ಮಳೆ ಹನಿಯುತ್ತಿತ್ತು. ಬಸ್ಸಿಳಿಯುವಾಗ ದೂರದ ಗೋಪುರಗಳನ್ನು ಹಾಲುಬಣ್ಣದ ಗಾಜಿನ ಮೂಲಕವೆಂಬಂತೆ ನೋಡುತ್ತ ನಿಲ್ಲಬೇಕಾಗಿ ಬಂತು.
* **** ****
ಶಿಲೆಗಳ ಹೃದಯವನ್ನು ಒಡೆದು ಕೆತ್ತಿದ ಮಹಾಶಿಲ್ಪಗಳನ್ನೂ ನೋಡಲಾಗದೆ , ಗಲಿಬಿಲಿಗೊಂಡ ಮನಸ್ಸಿನೊಂದಿಗೆ ಪ್ರದಕ್ಷಿಣ ಪಥಗಳ ಮೂಲಕ ಸುತ್ತುತ್ತಿದ್ದುದರ ಎಡೆಯಲ್ಲಿ ಯಾವಾಗಲೋ ಒಬ್ಬಳು ಮಹಾದೇವನನ್ನು ಹಿಂಬಾಲಿಸ ತೊಡಗಿದಳು. ಕೆಂಪು ಪಟ್ಟೆ ಸೀರೆ. ಜ್ವಲಿಸುವ ಬೆಂಕಿಯಂತೆ. ಅದರೊಳಗೆ ಅಂಜನದ ಹೊಳಪು.

ಯಾರು ಎಂದು ಕೇಳಿದ್ದಕ್ಕೆ ಉತ್ತರ ಸಿಗಲಿಲ್ಲ. ಶಿಲೆಕಲ್ಲುಗಳ ಮೇಲಿನ ಕಾವ್ಯಗಳನ್ನು ವ್ಯಾಖ್ಯಾನಿಸಿ ಹೇಳಲೇ ಎಂದಷ್ಟೇ ಕೇಳಿದರು. ಮಹಾದೇವ ತಪ್ಪಿಸಿಕೊಳ್ಳಲು ನೋಡಿದ. ಕಲ್ಲುಕಂಬಗಳ ಮರೆಯಲ್ಲಿ ಅಡಗಲು ಪ್ರಯತ್ನಿಸಿದ. ಆದರೆ ಪ್ರಯೋಜನವಾಗಲಿಲ್ಲ. ಮಹಾದೇವ ಕೇಳದೆಯೇ ಶಿಲೆಗಳಲ್ಲಿ ಉದಾಭೂತವಾಗಿದ್ದ ಕೆಲವು ಜ್ಯಾಮಿತೀಯ ಮುದ್ರೆಗಳ ಅರ್ಥವನ್ನು ಅವಳು ಹೇಳತೊಡಗಲು ಕೆಲವು ಮರು ಪ್ರಶ್ನೆಗಳನ್ನು ತನಗರಿವಿಲ್ಲದೆಯೇ ಕೇಳಿಬಿಟ್ಟ ಮಹಾದೇವ. ಅವಳು ಆಗ ಮಹಾದೇವನ ಮುಂದಿನಿಂದ ನಡೆದಳು.

ಪ್ರಶ್ನೇಗಳು….ಉತ್ತರಗಳು..
ಉಳಿಯ ಕೆತ್ತನೆಗೆ ಹೊಸ ಅರ್ಥನೆಲೆಗಳು !
ಯಾವಾಗಲೋ ಅವಳು ಹಿಂದೆ ತಿರುಗಿ ನೋಡಿದಾಗ ಆ ಕಣ್ಣುಗಳ ಆಳಕ್ಕೆ ಮಹಾದೇವ ಕಾಲು ಜಾರಿ ಬಿದ್ದ. ಒಕದು ಪ್ರದಕ್ಷಿಣೆ ಕಳೆಯುವಷ್ಟರಲ್ಲಿ ಅಶರು ಶಿಲ್ಪಗಳ ವಿಚಾರ ಕೈಬಿಟ್ಠರು. ನೃತ್ಯಗಳ ಶಕ್ತಿಯಿಂದ ತುಂಬಿದ ಶಿಲ್ಪಗಳ ಬಡಗು ಗೋಪುರದ ಮೂಲಕ ಅವರು ದೇವಸ್ಥಾನದಿಂದ ಹೊರಬರಲು ಕಾಲಿಡುವ ಹೊತ್ತಿಗೆ ಮಳೆಯಾಗಿತ್ತು. ಮಳೆಯಲ್ಲಿ ನೆನೆಯಲು ಮನಸ್ಸಾಗದೆ ಮಹಾದೇವ ನಿಂತ. ಸಮಯದ ಬಗ್ಗೆ ತಾನು ಚಿಂತಿಸುವಶಳಲ್ಲವೆಂದು ಹೇಳಿ ಅವಳೂ ಒಟ್ಟಿಗೆ ನಿಂತಳು. ಹಾಗೆ ಮಳೆ ನೋಡುತ್ತ ನಿಂತಿದ್ದಂತೆ ಅವರು ವೈಯಕ್ತಿಕ ವಿಚಾರಗಳ ಬಾಗಿಲು ತೆರೆದರು.

ಭೌತಿಕವಾದ ಆತಂಕಗಳ ಬೇಟೆಗೆ ಸಿಲುಕಿ ಕಂಗಾಲಾದ ಒಬ್ಬ ಹೆಣ್ಣಿನ ಬಿಕ್ಕಳಿಕೆಯಾಗಿತ್ತು ಅವಳದು. ಬಡತನ…ಅಸಹಾಯಕತೆ..
ಈ ಮಹಾಕ್ಷೇತ್ರವೂ ತೀರ್ಥಯಾತ್ರಿಕರೂ ಇಲ್ಲದಿದ್ದಲ್ಲಿ ತಾನು ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎಂದು ಅವಳು ಹೇಳಿದಳು. ಶಿಲೆಗಳ ಬಗ್ಗೆ ಎಷ್ಟು ವ್ಯಾಖ್ಯಾನ ನೀಡಿದರೂ ಹಸಿವು ಹಿಕಗುವುದಿಲ್ಲವೆಂದೂ ಹೇಳಿದಳು.‌ ಹೇಳುತ್ತಿದ್ದಂತೆ ಅವಳ ಕಣ್ಣುಗಳು ತುಂಬಿದವು.

ತಿಳಿಯಾಗದ ನೀಲಾಕಾಶವೂ ಮುಗಿಯದ ಯಾತ್ರೆಗಳೂ ಆಗಿದ್ದವು ಮಹಾದೇವನ ಬಿಕ್ಕಳಿಕೆಗೆ ಕಾರಣ. ಆದರೆ ಅದ್ಯಾವುದೂ ಅವಳಿಗೆ ಸರಿಯಾಗಿ ಅರ್ಥವಾದಂತೆ ಕಾಣಲಿಲ್ಲ. ಈ ಬಾರಿ ನೀಲಾಕಾಶ ಕಾಣದಿರಲಿಕ್ಕಿಲ್ಲವೆಂದು ಅವಳು ಅವನಿಗೆ ಸಾಂತ್ವನ ಹೇಳಿದಳು. ವಿಶ್ರಾಂತಿ ಭವನಕ್ಕೆ ಹೋಗಲೆಂದು ಅವನು ಅವಳಿಗೆ ವಿದಾಯ ಹೇಳೀದ. ಬೆಳಗ್ಗೆ ಬಡಗು ಗೋಪುರದ ಬಳಿ ಕಾದು ನಿಲ್ಲುತ್ತೇನೆಂದು ಅವಳು ಹೇಳಿದಳು. ಒಂದು ದಶಕದಿಂದ ಶಿಲಾಕಾವ್ಯದ ಅರ್ಥ ವ್ಯಾಖ್ಯಾನಿಸಿ ಹೇಳುತ್ತಿದ್ದರೂ ಇವತ್ತು ಸಿಕ್ಕಿದ ತೃಪ್ತಿ ಅವಳನ್ನು ಉಲ್ಲಸಿತಳನ್ನಾಗಿಸಿತ್ತು.

ರಾತ್ರಿ ದೀಪವಾರಿಸಿ ಹಾಸಿಗೆಯಲ್ಲೀ ಮೈಚಾಚಿದಾಗ ಕತ್ತಲೆಗೂ ಪರಿಮಳವಿದೆಯೆಂದು ಮಹಾದೇವನಿಗೆ ತೋರಿತು. ಏನೋ ಒಂಥರಾ ಭಾರವಿಳಿದ ಭಾವ. ಹತ್ತಿಬೀಜ ರೆಕ್ಕೆ ಬಿಚ್ಚಿ ಗಾಳಿಯಲ್ಲಿ ತೇಲಿಕೊಂಡು ಹೋದ ಹಾಗೆ. ಇಷ್ಟರ ತನಕ ಇಂಥ ಅನುಭವ ಅವನಿಗಾಗಿರಲಿಲ್ಲ.
ಪ್ರಭಾತಕಾಲದಲ್ಲಿ ಆಕಾಶ ತಿಳಿಯಾಗಿರಬಹುದೆಂದು ನಿರೀಕ್ಷಿಸಿದ್ದು ವ್ಯರ್ಥವಾಯಿತು. ತುಂತುರುಮಳೆಯೇ ಎದೂರಾಯಿತು. ಆದರೂ ಸ್ನಾನ ಮುಗಿಸಿ ಕ್ಷೇತ್ರದತ್ತ ನಡೆದ. ಬಡಗು ಗೋಪುರಧ ಬಳಿ ಅವಳಿದ್ದಳು. ಅವಳ ಸೀರೆ ಇನ್ನಷ್ಟು ಕೆಂಪಾಗಿತ್ತು. ಇನ್ನಷ್ಟು ಹೊಳಪಿನಿಂದ ಕೂಡಿತ್ತು.
ಅಶರು ಜತೆಯಾಗಿ ಬೆಳಗಿನ ಉಪಾಹಾರ ಸೇವಿಸಿದರು. ಜರಿದು ಬಿದ್ದಿದ್ದ ಕ್ಷೇತ್ರದ ಅವಶೇಷಗಳತ್ತ ಅವಳು ಮಹಾದೇವನನ್ನು ಆಹ್ವಾನಿಸಿದಳು. ಆ ಮೌನದಲ್ಲಿ ಬೇರೆಯೇ ಅರ್ಥವನ್ನು ಹುಡುಕುತ್ತ ಅವರು ನಡೆದರು.

ದಿವಸಗಳು ಕಳೆದರೂ ಆಕಾಶ ತಿಳಿಯಾಗಲಿಲ್ಲ. ಸೂರ್ಯನ ಬೆಳಕೂ ಅಪರೂಪವಾಯಿತು. ಗರ್ಭಗುಡಿಯ ವಿಗ್ರಹದ ದಳದಲ್ಲಿ ಆಕಾಶದ ನೀಲಹೃದಯವು ತನಗಾಗಿ ತಿಳಿಯಾಗಿ ಕಾಣಲಾರದೆಂದು ಖಚಿತವಾಗಿ ಮಹಾದೇವನು ಹಿಂದಿರುಗಿ ಹೋಗಲು ಸಿದ್ಧತೆಗಳನ್ನು ನಡೆಸಿದ.
ಕೊನೆಗೆ ಬೀಳ್ಕೊಳ್ಳುವಾಗ ಬಹಳ ಸಂಕೋಚದೀಂದಲೇ ಅವಳು ಮಹಾದೇವನನ್ನು ಮನೆಗೆ ಆಹ್ವಾನಿಸಿದಳು. ದೀನಳಾಗಿ ಬೇಡಿದಳು.ಕಣ್ಣುಗಳ ಸ್ಫಟಿಕಾಭರಣವುಳ್ಳ ಎರಡು ಕೈಗಳು ತನ್ನನ್ನು ಮುದ್ದಿಸುತ್ತಿರುವ ಅನುಭವವಾಯಿತು ಮಹಾದೇವನಿಗೆ. ಆ ಕೈಗಳನ್ನು ದೂರ ತಳ್ಳಲಾಗಲಿಲ್ಲ. ವಿಶ್ರಾಂತಿ ಭವನದ ಕೋಣೆಯನ್ನು ಖಾಲಿ ಮಾಡಿ ಕೊಟ್ಟು ಮಹಾದೇವನು ಅವಳ ಜತೆಗೆ ಹೋಗಲನುವಾದ. ಕ್ಷೇತ್ರನಗರದ ಆಚೆ ಖಾಲಿಯಾದ ಒಂದು ಜಾಗದಲ್ಲಿತ್ತು ಅವಳ ಮನೆ. ಒಬ್ಬ ಅನಾಥಳ ಮನೆಯೆಂದು ಅನ್ನಿಸಲೇ ಇಲ್ಲ.

ಸುತ್ತಲೂ ವಿಶಾಲವಾದ ಜಾಗ. ಅಲ್ಲಿ ನಿಂತರೆ ದೇವಾಲಯದ ಗೋಪುರವನ್ನು ಕಾಣಬಹುದಾಗಿತ್ತು. ರಂಗೋಲಿ ಹಾಕಿದ ಅಂಗಳ ದಾಟಿ ಅವಳು ತೆರೆದ ಬಾಗಿಲಿನ ಮೂಲಕ ಪ್ರವೇಶಿಸಿದ್ದು ಕನಸಿನ ಅದ್ಭುತ ಲೋಕಕ್ಕಾಗಿತ್ತು. ಒಳಗೆ ಪ್ರವೇಶಿಸುತ್ತಲೇ ಬಾಗಿಲು ಮುಚ್ಚಿಕೊಂಡಿತು.

ನಂತರ ಕೆಂಪು ಪ್ರಜ್ವಲಿಸಿತು. ಆ ಕೆಂಪಿನ ಜಾಲದೊಳಕ್ಕೆ ಮಹಾದೇವ ಜಾರಿ ಬಿದ್ದ. ಒಮ್ಮೆಯೂ ಕೇಳದ ಭಾಷೆಯಲ್ಲಿ ಅವಳು ಪಿಸಪಿಸನೆ ಏನೇನೋ ಹೇಳಿದಳು. ಒಂದೊಂದು ಮಾತೂ ಒಂದೊಂದು ಪ್ರಾರ್ಥನೆಯಾಗಿತ್ತು. ಸ್ಥಳ-ಕಾಲಗಳ ಹಂಗಿಲ್ಲದ ತೀರ್ಥಯಾತ್ರೆ ಅಲ್ಲಿಂದ ಆರಂಭವಾಯಿತು.

ಯಾವಾಗಲೋ ಕೆಂಪಿನ ಜಾಲಗಳು ಅಮರಿ ಅಡಗಿದವು. ಕಣ್ಣು ಮುಚ್ಚಿ ತೆರೆಯುವುದರೊಳಗೆ ಅವಳು ಮಹಾದೇವನ ಪಕ್ಕ ವಿವಸ್ತ್ರಳಾಗಿ ಕುಳಿತಿದ್ದಳು. ತಾನೂ ನಗ್ನನಾಗಿಬಿಟ್ಟಿದ್ದೇನೆಂದು ಮಹಾದೇವನಿಗೆ ಅರಿವಾಯಿತು.

ಯಾತ್ರೆ ಮುಗಿಯಿತೆಂದೂ ತಿಳಿಯಿತು.
ಅವಳ ನಗು ಒಂದು ಅನುಭೂತಿಯಾಯಿತು.
ಆ ಇಕ್ಕಟ್ಟಾದ ಕೋಣೆಯಲ್ಲಿ ಒಂದೇ ಒಂದು ಕಿಟಿಕಿ ಇದ್ದದ್ದು. ಅದರ ಮೂಲಕ ಬೆಳಕು ಹರಿದು ಬಂತು. ಆ ಬೆಳಕು ಕಣ್ಣಿಗೆ ಹೊಡೆದು ರೆಪ್ಪೆ ಮುಚ್ಚಿದಾಗ ಅವಳು ಮಹಾದೇವನನ್ನು ಹಿಡಿದೆಬ್ಬಿಸಿದಳು.

ಗವಾಕ್ಷದ ಬದಿಗೆ ಅವಳು ಮಹಾದೇವನನ್ನು ಕರೆದುಕೊಂಡು ಹೋಗಿ ಹೊರಗೆ ಬೆರಳು ತೋರಿಸಿದಳು. ದೂರ, ತಿಳಿಯಾದ ವೈಶಾಲ್ಯದಲ್ಲಿ ಕ್ಷೇತ್ರಗೋಪುರ. ಗೋಪುರದ ಮೇಲೆ ನೀಲಾಕಾಶ. ನಿಜಾನಂದದ ಲಹರಿಯಲ್ಲಿ ಮಹಾದೇವ ಕಣ್ಣುಗಳನ್ನು ಮುಚ್ಚಿದ.

‍ಲೇಖಕರು Admin

December 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: