ಪಾರ್ವತಿಯ ಮಡಿಲಲ್ಲಿ ಆ ಕಾಡಹಾದಿಯ ಕಥೆಗೆ ಕಿವಿಗೊಟ್ಟಾಗ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಮೊನ್ನೆ ಮೊನ್ನೆ ನಾವು ಅಂದುಕೊಂಡದ್ದಕ್ಕಿಂತ 3 ಗಂಟೆ ತಡವಾಗಿ ಗ್ರಹಣವೆಂಬ ಆ ಪುಟಾಣಿ ಹಳ್ಳಿಯ ಆ ಕೊನೇ ಮನೆಗೆ ತಲುಪುವಷ್ಟರಲ್ಲಿ ಭಯಂಕರ ಅಂದ್ರೆ ಭಯಂಕರ ಹಸಿವಾಗಿತ್ತು. ಬೆಳಗ್ಗಿನಿಂದ ಕ್ಯಾಮರಾದೊಂದಿಗಿದ್ದಿದ್ದರಿಂದ ಅಷ್ಟರವರೆಗೆ ಹಸಿವಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿರದೆ ಅವರ ಮನೆ ತಲುಪಿದ ತಕ್ಷಣ ಹೊಟ್ಟೆಯ ಪರಿಸ್ಥಿತಿ ಅರಿವಾಗಿ ತುರ್ತಾಗಿ ಏನಾದರೂ ಹೊಟ್ಟೆಗಿಳಿಸೋಣ ಅಂದರೆ, ಅಲ್ಲಿ ಯಾರೂ ಇಲ್ಲ!

ಪಕ್ಕದ ಮನೆಯಿಂದ ಅಜ್ಜಿಯೊಬ್ಬರು ಕೂತಲ್ಲಿಂದಲೇ ಇಣುಕಿ, ʻರಾಮಲಾಲಂಗೆ ಮೊದಲೇ ಹೇಳಿದ್ದೀರಾ?ʼ ಅಂದರು. ʻಫೋನ್ ಸಿಗಲಿಲ್ಲ ಅಂತ ಅವರ ಮಗನಿಗೆ ವಿಷಯ ಮುಟ್ಟಿಸಲು ಹೇಳಿದ್ದೇವೆʼ ಅಂದೆವು. ʻಹಂಗಾರೆ ಬರ್ತಾರೆ ಬಿಡಿ, ಕೂತಿರಿ, ಗದ್ದೆಗೆ ಹೋಗಿದ್ದಾರೆ. ಇನ್ನೇನು ಒಂದು ಗಂಟೇಲಿ ಕತ್ತಲಾಗೋ ಮೊದ್ಲು ಬರ್ತಾರೆʼ ಅಂತ ಹೇಳಿ ಅಜ್ಜಿ ಕಿಟಕಿ ಪರದೆ ಮುಚ್ಚಿದರು.

ಅರೆ, ಇದೊಳ್ಳೆ ಕಥೆಯಾಯ್ತಲ್ಲ, ಬೆಳಗ್ಗೆ ತಿಂಡಿ ತಿಂದಿದ್ದು ಬಿಟ್ಟರೆ, ಚಾರಣದಲ್ಲಿ ಮಧ್ಯಾಹ್ನದೂಟ ಹೊಟ್ಟೆಗೆ ಹೋಗಿರಲಿಲ್ಲ. ಹಣ್ಣು ಹಂಪಲು, ಮನೆಯಿಂದಲೇ ಮಾಡಿಕೊಂಡು ಹೋಗಿದ್ದ ಹಾಳುಮೂಳು ಕುರುಕಲು, ಹೆಚ್ಚೆಂದರೆ ಚಾಕಲೇಟು ಇಷ್ಟೇ. ಹೊಟ್ಟೆ ಮಾತ್ರ ಹಸಿವು ಎಂದು ಕೂಗಿ ಕೂಗಿ ಹೇಳುತ್ತಿತ್ತು.

ಇನ್ನು ರಾಮಲಾಲನಿಗೆ ಕಾದರೆ, ನಾವು ಹಸಿವಿನಿಂದ ಸಾಯುವುದು ಗ್ಯಾರೆಂಟಿ ಎಂದು ತಿಳಿದು, ಅಜ್ಜಿಯನ್ನು ಕರೆದು, ʻನೋಡಿ, ಅವರು ಬಂದರೆ ಹೇಳಿಬಿಡಿ. ಬ್ಯಾಗು ಇಲ್ಲೇ ಬಿಟ್ಟು, ಇಲ್ಲೇ ಹತ್ತಿರದ ಕೆಫೆಗೆ ಹೋಗಿ ಏನಾದರೂ ಹೊಟ್ಟೆಗೆ ಹಾಕಿ ಬರುತ್ತೇವೆ. ಸಿಕ್ಕಾಪಟ್ಟೆ ಹಸಿವುʼ ಎಂದೆವು. ಅಷ್ಟರಲ್ಲಿ ಚುರುಕಾದ ಅಜ್ಜಿ, ʻಇರಿ ಇರಿ, ಹತ್ತೇ ನಿಮಿಷ, ಇನ್ನೇನು ಬಂದು ಬಿಡ್ತಾನೆ ರಾಮ್ಲಾಲ್ʼ, ಅಂತ ಗಡಿಬಿಡಿಯಲ್ಲಿ ಮೊಮ್ಮಗಳನ್ನು ಕರೆದು, ರಾಮ್ ಲಾಲನನ್ನು ಕರಕೊಂಡು ಬಾ, ಬೇಗ ಅನ್ನುತ್ತಾ ಗದ್ದೆಯ ಕಡೆಗೆ ಓಡಿಸಿದಳು.

ಇಷ್ಟು ಹೇಳಿದ ಮೇಲೆ ಹೋದರೆ ಸರಿಯಿರುವುದಿಲ್ಲ ಎಂದು ನಾವು ಮತ್ತೆ ಅಲ್ಲೇ ಕೂತೆವು. ನಾಯಿಯೊಂದು ನಮ್ಮ ಹಿಂದಿಂದಲೇ ಬಂದ ಕಾರಣದಿಂದ ಅದರೊಂದಿಗೆ ಆಡುತ್ತಾ ಈ ಲೋಕದಲ್ಲಿರದ ಕಾರಣ, ಪುಣ್ಯಕ್ಕೆ ಮಗರಾಯನ ಹಸಿವಿನ ಕೂಗು ಇರಲಿಲ್ಲ. ಅಜ್ಜಿ ಅಂದಂತೆಯೇ, ಹೆಚ್ಚೆಂದರೆ, ಹತ್ತೇ ನಿಮಿಷ, ರಾಮ್ಲಾಲನೂ ಅವರ ಮಗನೂ ಓಡೋಡಿ ಬಂದರು.

ʻಅರೆ, ನೀವು ಇವತ್ತು ಬರ್ತೀರಿ ಅಂತ ಗೊತ್ತಿರ್ಲಿಲ್ಲ ನೋಡಿ, ಫೋನ್ ಸರಿಯಿಲ್ಲ, ವಿಷಯ ಇಲ್ಲಿಗೆ ತಲುಪಿಲ್ಲʼ ಅಂದು ನಗುನಗುತ್ತಾ, ʻಚಹಾ ಮಾಡಲಾ? ಅರ್ಜೆಂಟು ಹಸಿವಿಗೆ ತಿಂಡಿ ಏನು ಕೊಡಲಿ? ಟೋಸ್ಟ್‌ ತರಲಾʼ ಅನ್ನುತ್ತಾ ಹೊರಟರು. ʻಟೋಸ್ಟ್ ಗೀಸ್ಟೆಲ್ಲ ನಾಟಲ್ಲ ಅನ್ಸತ್ತೆ, ಅಷ್ಟು ಹಸಿವು.

ಹಾಗಾಗಿ ಚಹಾ ಜೊತೆಗೆ, ನಿಮ್ಗೇನೂ ತೊಂದ್ರೆ ಇಲ್ಲಾಂದ್ರೆ ಒಂದೊಂದು ಪರಾಠಾನೇ ಕೊಟ್ಬಿಡಿʼ ಅನ್ನುತ್ತಾ ನಾನು, ಆಗಸದೆತ್ತರಕ್ಕೆ ಚಾಚಿಕೊಂಡಿರುವ ಆ ಅನಂತ ಕಾಡು ಸಂಜೆಯಾಗುತ್ತಲೇ ನಿಧಾನವಾಗಿ ಗಾಢ ಹಸಿರಿನಿಂದ ನಿಗೂಢ ನೀಲಿಗೆ ತಿರುಗುವುದನ್ನು ನೋಡುತ್ತಾ ಮತ್ತೆ ಹಸಿವು ಮರೆತೆ.

ಹತ್ತೇ ನಿಮಿಷ, ರಾಮ್ ಲಾಲಾನ ಮಗ ದೋಣಿ, (ದೋಣಿ ಎಂದವನ ಹೆಸರು, ಎಲ್ಲರ ಬಾಯಲ್ಲಿ ಧೋನಿ ಆಗಿಬಿಟ್ಟಿರುವ ಈತ ನಿರಾಯಾಸವಾಗಿ ತಾನು ಧೋನಿ ಎನ್ನುತ್ತಾನೆ!) ಬಿಸಿಬಿಸಿ ಪರಾಠಾದೊಂದಿಗೆ ಬಂದ. ಜೊತೆಗೆ ಶುಂಠಿ ಹಾಕಿದ ಬಿಸಿಬಿಸಿ ಚಹಾ ಕೂಡಾ. ಆರಾಮಾಗಿ ತಿಂದು ರಾತ್ರಿ ಊಟಕ್ಕೇನು ಮಾಡಲಿ ಅಂತ ಹೇಳಿ ಆಮೇಲೆ ಅನ್ನುತ್ತಾ ಹೊರಟು ಹೋದ.

ಜೊತೆಗೇ ಹಿಂದಿಂದ ಬಂದ ರಾಮ್‌ ಲಾಲ, ʻಹೆಂಗಾಯ್ತು ಚಾರಣ, ಏನೂ ತೊಂದ್ರೆ ಆಗಿಲ್ಲ ತಾನೇ? ನೀವು ಇವತ್ತೇ ಬರ್ತೀರಿ ಅಂತ ವಿಷಯ ಮುಟ್ಟಿರಲಿಲ್ಲ. ಬರ್ತೀರಿ ಅಂತ ಮಾತ್ರ ಗೊತ್ತಿತ್ತು. ಒಂದೆರಡು ದಿನದಿಂದ ಫೋನ್‌ ಸರಿಯಿರಲಿಲ್ಲ. ಮಗನೂ ಕಸೋಲ್‌ನಿಂದ ಬಂದಿಲ್ಲ ನೋಡಿ. ಗೊತ್ತೇ ಆಗಲಿಲ್ಲ. ಅದ್ಸರಿ,  ನೀವಿವಾಗ ಕಷ್ಟದ ಶಾರ್ಟ್‌ ಕಟ್‌ ದಾರೀಲಿ ಬಂದ್ರಾ ಅಥವಾ ದೂರದ ಸುಲಭದ ದಾರಿನಲ್ಲೋ?ʼ ಅನ್ನುತ್ತಾ ಕಾಲು ಚಾಚಿ ಮಾತಿಗಿಳಿದ. ಆಗಷ್ಟೇ ನಮಗೆ ಸ್ವಲ್ಪದರಲ್ಲೇ ತಪ್ಪಿದ ಅನಾಹುತವೊಂದರ ಸುಳಿವು ಸಿಕ್ಕಿ ಒಮ್ಮೆ ಮೈಜುಂ ಎಂದಿತು.

ನಾವೂ ಎಲ್ಲರಂತೆ ಆ ಜಾಗದಲ್ಲೊಮ್ಮೆ ನಿಂತು ಒಂದು ಕ್ಷಣ ಯೋಚನೆ ಮಾಡಿದ್ದೆವು. ಅದೊಂದು ಜಾಗದಲ್ಲಿ ಅರೆ ಮಾಸಿದ ಕೆಂಪು ಬಣ್ಣದಲ್ಲಿ ʻಗ್ರಹಣ್-‌ ಟಫ್‌ ರೂಟ್‌ʼ ಎಂದು ಬರೆದು ಬಲಕ್ಕೆ ಬಾಣದ ಗುರುತು, ʻಈಸೀ ರೂಟ್‌ʼ ಎಂದು ಎಡಕ್ಕೆ ಬಾಣದ ಗುರುತಿತ್ತು. ಯಾರಲ್ಲಾದರೂ ದಾರಿ ಕೇಳೋಣವೆಂದರೆ ಅಲ್ಯಾರೂ ಇರಲಿಲ್ಲ. ಈಗ ನಾವು ಇಕ್ಕಟ್ಟಿನಲ್ಲಿ ಸಿಲುಕಿದ್ದೆವು.

ಒಂದೆರಡು ನಿಮಿಷ ಗೊಂದಲವಾಗಿ ಅಲ್ಲೇ ನಿಂತು ಮಹೇಶ ಬಲಕ್ಕೆ ತಿರುಗಲು ಯೋಚನೆಯಲ್ಲಿದ್ದಾಗ, ನಾನೇ ತಡೆದು, ಟಫ್‌ ರೂಟಲ್ಲಿ ಒಂದೇ ನೆಗೆತಕ್ಕೆ ಮೇಲೇರೋದಿರುತ್ತೆ, ಮಗನೂ ಇರೋದ್ರಿಂದ ಈಸೀ ರೂಟಲ್ಲಿ ನಿಧಾನಕ್ಕೆ ಆರಾಮವಾಗಿ ಹೋದರಾಯಿತು ಬಿಡು, ಬರೋವಾಗ ಆ ರೂಟಲ್ಲಿ ಬಂದರಾಯಿತು ಅಂದೆ. ಅವನೂ ತಲೆಯಾಡಿಸಿ ಒಮ್ಮತದಿಂದ ಮೂವರೂ ಸುಲಭದ ದಾರಿಗೆ ಜೈ ಅಂದಿದ್ದೆವು.

ಆಶ್ಚರ್ಯವೆಂದರೆ, ಹೊರಡೋ ಮೊದಲು ಈ ಬಗ್ಗೆ ಯಾರೂ ಅಷ್ಟಾಗಿ ಸುಳಿವೂ ನೀಡಿರಲಿಲ್ಲ. ದರೋಡೆಕೋರನೊಬ್ಬ ವಾಲ್ಮೀಕಿಯಾಗಿ ಪರಿವರ್ತನೆಯಾಗುವ ಮೊದಲು ಅವನ ಕಣ್ಣುತೆರೆಸುವ ಸಪ್ತಋಷಿಗಳು, ʻವಿಧಿ ನಿನ್ನನ್ನು ಕರಕೊಂಡು ಹೋದಲ್ಲಿಗೆ ಹೋಗು, ಹೇಗೆ ಎಲ್ಲಿಗೆ ಎಂದು ಕೇಳಬೇಡʼ ಅನ್ನುತ್ತಾರಲ್ಲ, ಥೇಟ್‌ ಅದೇ ಧಾಟಿಯಲ್ಲಿ ನಮಗೆ  ಸಿಕ್ಕವರೆಲ್ಲರೂ, ʻಈ ದಾರಿ ಕರಕೊಂಡು ಹೋದಂಗೆ ಹೋಗಿ.  ಗೊಂದಲ ಎಲ್ಲೂ ಆಗಲ್ಲ. ಎಲ್ಲವೂ ಗ್ರಹಣಕ್ಕೇ ಹೋಗುತ್ತೆ ಬಿಡಿʼ ಎಂದು ನಿರಾಳರಾಗಿದ್ದರು. ಪುಣ್ಯಕ್ಕೆ ನಮ್ಮ ವಿಧಿ ಸರಿಯಿತ್ತು ಅಂತ ಕಾಣುತ್ತದೆ!

ಹಂಗೆ ಹೊರಟ ದಾರಿ ಮುಗಿದೇ ಇರಲಿಲ್ಲ. ನಡೆದಷ್ಟೂ ಮುಗಿಯುತ್ತಿಲ್ಲ ಅಂತ ಗೊತ್ತಾಗಿದ್ದು ಮಧ್ಯಾಹ್ನ ದಾಟುತ್ತಾ ಬಂದಾಗಲೇ. ಕೈಲಿದ್ದ ನೀರೂ ಖಾಲಿಯಾಗುತ್ತಿತ್ತು. ಇನ್ನೇನು ಬಂದು ಬಿಡ್ತು ಅಂದುಕೊಂಡು ದಾರಿಯಲ್ಲಿ ಸಿಕ್ಕ ಆ ಸ್ಫಟಿಕ ಶುದ್ಧ ಸಿಹಿನೀರ ತೊರೆಯಲ್ಲೂ ಸ್ವಲ್ಪ ಮಾತ್ರ ತುಂಬಿಸಿಕೊಂಡು ಬಂದಿದ್ದೆವು. ಅದೂ ಖಾಲಿಯಾಗುತ್ತಾ ಬಂದಿತ್ತು.

ʻಆ ಬೋರ್ಡೇ ನೋಡಿ ಜನರನ್ನು ಗೊಂದಲ ಮಾಡೋದುʼ ಅಂದರು ರಾಮ್‌ ಲಾಲ್. ʻಗೊಂದಲ ಮಾಡೋ ಬೋರ್ಡನ್ನು ಇಟ್ಟಿರೋದಾದ್ರೂ ಯಾಕೆ? ಯಾಕದನ್ನು ನೀವು ಮುಟ್ಟಿಲ್ಲ?ʼ ಎಂದೆ. ಅಯ್ಯೋ ಅದೊಂದು ದೊಡ್ಡ ಕಥೆ. ಇದು ಎರಡು ಸಣ್ಣ ಹಳ್ಳಿಗಳ ಶೀತಲ ಯುದ್ಧ ನೋಡಿ!ʼ ಅಂದರು.

ʻಯುದ್ಧವಾ!ʼ ಅಂತ ನಾನು ಕೇಳಿದ ವಿಚಿತ್ರ ಶೈಲಿಗೇ ಅವರು ನಕ್ಕು, ʻನೀವು ಆ ದಾರಿಯಾಗಿ ಬಂದರೆ ನಿಮಗೆ ಪುಲ್ನಾ ಹಳ್ಳಿ ಸಿಕ್ಕಿರಬಹುದಲ್ವಾʼ ಅಂದರು. ʻಹುಂ ಹೌದು, ದೂರದಿಂದ ಕಾಣಿಸ್ತು, ಅಷ್ಟರಲ್ಲಿ ಈ ಬದಿಯಲ್ಲಿ ಗ್ರಹಣವೂ ಕಾಣಿಸ್ತುʼ ಅಂದೆ. ʻಅದೇ ಅದೇ, ಆ ಹಳ್ಳಿಯವರ ಕೆಲಸ ಇದುʼ ಎಂದರು.

ʻಅವರ ಹಳ್ಳಿಯ ದಾರಿಯಲ್ಲೆಲ್ಲ ಗ್ರಹಣ ಹಾಗೂ ಪುಲ್ನಾಕ್ಕೆ ದಾರಿ ಎಂದು ಬರೆದು ಚಾರಣಿಗರನ್ನು ಗೊಂದಲಕ್ಕೊಳಗಾಗುವಂತೆ ಮಾಡಿ, ತಮ್ಮ ಹಳ್ಳಿಗೆ ಬರಲು ಆಕರ್ಷಿಸುವಂತೆ ಮಾಡಲು ಇರುವ ಹುನ್ನಾರವಿದುʼ ಅಂದುಬಿಟ್ಟರು. ʻಎಲ್ಲರೂ ಹುಡುಕಿಕೊಂಡು ಬರುವುದು ಗ್ರಹಣವನ್ನೇ ಹೊರತು, ಪುಲ್ನಾವನ್ನಲ್ಲ. ಅವರ ಹಳ್ಳಿಯಲ್ಲೂ ಒಂದಷ್ಟು ಕೆಫೆಗಳಿವೆ. ಈಗಷ್ಟೇ ಹೋಂಸ್ಟೇಗಳು ಶುರುವಾಗಿವೆ. ಇದಕ್ಕಾಗಿ ಈ ತೆರೆಮರೆಯ ಯುದ್ಧʼ ಎಂದರು. ನಾನು ನಿಟ್ಟುಸಿರುಬಿಟ್ಟೆ.

ಮೌನಕ್ಕೆ ತಿರುಗಿದ ಆ ಸಂಭಾಷಣೆಯ ಮೌನ ಮುರಿದು ನಾನು ಮತ್ತೆ, ʻಆದರೆ, ಆ ಸುಲಭದ ದಾರಿಯಿದೆಯಲ್ಲ, ಅದರಲ್ಲಿ ಎರಡು ಜಾಗಗಳಲ್ಲಿ ತುಂಬಾ ಗೊಂದಲವಾಗಿಬಿಡುತ್ತದೆ. ನಾವಂತೂ ಒಂದು ಜಾಗದಲ್ಲಿ ನಿಂತು ಯಾವ ದಿಕ್ಕಿಗೆ ಅಂತ ಅರಿಯದೆ, ಆಮೇಲೆ, ಆಫ್ಲೈನ್‌ ಮ್ಯಾಪಿನ ದಯದಿಂದ‌ ಹಳ್ಳಿ ಯಾವ ದಿಕ್ಕಿನಲ್ಲಿದೆ ಎಂಬ ಅಂದಾಜಿನಿಂದ ಒಂದು ದಿಕ್ಕಿನ ದಾರಿಯನ್ನು ಫೈನಲ್‌ ಮಾಡಿದ್ದೆವು.

ಇನ್ನೂ ಒಂದು ಜಾಗದಲ್ಲಿ ದಾರಿ ಮತ್ತೆ ಕವಲೊಡೆಯಿತು. ಆಗಲೂ ಎಲ್ಲಿಗೆ ಎಂದು ಯೋಚಿಸಿ ಯೋಚಿಸಿ, ಮೊದಲಿಂದ ಗಮನಿಸಿದಂತೆ ಅಲ್ಲಿ ಅಳಿಸಿಹೋಗಿದ್ದರೂ ಕೆಂಪು ಬಣ್ಣದ ಗುರುತನ್ನೇ ದಾರಿಯೆಂದು ತಿಳಿದು ಬಂದಿದ್ದೆವು. ಹಾಗಾಗಿ ಕೆಂಪು ಗುರುತಿನದರಲ್ಲೇ ಮುಂದುವರಿಯೋಣ ಎಂದು ನಿರ್ಧರಿಸಿ ಬಂದೆವುʼ ಎಂದೆ. ʻಒಳ್ಳೆ ಕೆಲಸ ಮಾಡಿದ್ರಿ ನೋಡಿ. ಅದು ಹಳೇ ಮಾರ್ಕು. ಅದು ಅಳಿಸಿಹೋಗುತ್ತಿರುತ್ತದೆ.

ಯಾವ ದಾರಿಯಲ್ಲಿ ನೀವು ಹೋಗಲಿಲ್ಲವೋ ಆ ದಾರಿಯಲ್ಲಿ ಹೋಗಿದ್ದರೆ, ನೀವಿವತ್ತು ಇಲ್ಲಿ ತಲುಪುತ್ತಿರಲಿಲ್ಲ ಬಿಡಿ. ಅದು ದಟ್ಟಾರಣ್ಯದೊಳಗೆ ಹೋಗಿ, ಅಲ್ಲಿಂದ ಬರುವುದು ಹೇಗೆ ಎಂದು ಗೊತ್ತಾಗದೆ ರಾತ್ರಿ ಕಾಡೊಳಗೇ ಕಳೆದು ಆಮೇಲೆ ಬಂದಿದ್ದೂ ಇದೆʼ ಎಂದರು. ವಿಷಯವೇನೆಂದರೆ, ಆ ದಾರಿಯನ್ನು ಹಳ್ಳಿಯವರ್ಯಾರೂ ಬಳಸೋದೇ ಇಲ್ಲ.

ಹಾಗಾಗಿ, ನಿಮಗೆ ಗೊಂದಲವಾದರೂ ಕೇಳೋದಕ್ಕೆ ದಾರಿ ಮಧ್ಯ ಯಾರೂ ಸಿಗಲ್ಲ. ನಮಗೆ ಇಂಥೋರು ಬರ್ತಾರೆ ಅಂತ ಮೊದಲೇ ಗೊತ್ತಿದ್ರೆ, ಯಾಕೆ ಬಂದಿಲ್ಲ ಅಂತ ಹುಡ್ಕೊಂಡು ಹೋಗ್ಬೋದು. ಆದರೆ, ಈ ಫೋನ್‌ ಬೇರೆ ಸರಿಯಿರೋದಿಲ್ಲ ನೋಡಿ, ಅದ್ರಿಂದ ತುಂಬಾ ಸಾರಿ ವಿಷಯ ಇಲ್ಲಿಗೆ ಮುಟ್ಟಿರಲ್ಲʼ ಅಂದರು.

ʻಇರಲಿ ಬಿಡಿ, ನೀವು ಯಾವುದೇ ತೊಂದರೆಯಾಗದೆ ಬಂದುಬಿಟ್ಟಿರಿ ನೋಡಿ ಅದೇ ಸಂತೋಷ. ಹಿಂದೆಯೂ ಒಮ್ಮೆ ಹೀಗಾಗಿತ್ತುʼ ಅನ್ನುತ್ತಾ ಸಾವಕಾಶವಾಗಿ ಗೋಡೆಗೊರಗಿ ಕೂತು ಕಥೆ ಹೇಳತೊಡಗಿದರು. ʻಇದು ಎರಡು ವರ್ಷದ ಹಿಂದಿನ ಕಥೆ. ಚಳಿಗಾಲವದು. ಹಿಮ ಸುರಿಯುತ್ತಿತ್ತು. ಜನರು ವರ್ಷದ ೧೨ ತಿಂಗಳುಗಳೂ ಇಲ್ಲಿಗೆ ಚಾರಣ ಮಾಡಲು ಬರುತ್ತಾರೆ. ಚಳಿಗಾಲಕ್ಕೆಂದೇ ಇಲ್ಲಿಗೆ ಬರೋರೂ ಇದ್ದಾರೆ. ಹಾಗೇ ಒಂದು ತಂಡ ಬಂತು. ದೊಡ್ಡ ತಂಡ.

ಕಸೋಲ್‌ನಿಂದ ಬೆಳಗ್ಗೆ ಸ್ವಲ್ಪ ತಡವಾಗಿ ಹೊರಟಿದ್ದರು ಅನಿಸುತ್ತೆ. ನಮಗೆ ಅವರು ಬರ್ತಾರೆಂಬ ಮಾಹಿತಿ ಇತ್ತು. ದೊಡ್ಡ ಗುಂಪಿನಲ್ಲಿ ಒಬ್ಬಾತ ಮಾತ್ರ ಒಬ್ಬರೇ ಸ್ವಲ್ಪ ಮುಂದೆ ಹೋಗಿಬಿಟ್ಟರು ಅನಿಸುತ್ತೆ. ಬೋರ್ಡು ಗಮನಿಸಲಿಲ್ಲವಾ ಅಥವಾ ಗಮನಿಸಿದರೂ ಸುಲಭದ ದಾರಿ ಎಂದು ಆ ದಾರಿಯನ್ನು ಆಯ್ದುಕೊಂಡರಾ ಗೊತ್ತಿಲ್ಲ. ಗುಂಪಿನಿಂದ ಬೇರೆಯಾದ ಇವರು ದಾರಿ ತಪ್ಪಿ ದಟ್ಟಾರಣ್ಯದೊಳಗೆ ಹೋಗಿ ಬಿಟ್ಟಿದ್ದರು.

ಎಷ್ಟು ನಡೆದರೂ ಮುಗಿಯದ ದಾರಿ ಕಂಡು ಅವರಿಗೆ ತಾವು ದಾರಿ ತಪ್ಪಿದ್ದು ಅರ್ಥವಾಗಿ, ಅದೇ ದಾರಿಯಲ್ಲಿ ಮರಳಿದ್ದಾರೆ. ಮೊದಲು ಅಲ್ಲೊಂದು ಮಧ್ಯದಲ್ಲಿ ಗೂಡಂಗಡಿಯಿತ್ತು. ಮ್ಯಾಗಿ, ಚಹಾ, ಒಂದಿಷ್ಟು ಕುರುಕಲು ಸಿಗುವ ಅಂಗಡಿ. ಕವಲೊಡೆಯುವ ದಾರಿಗಿಂತ ಸ್ವಲ್ಪಮೊದಲು ಅದಿತ್ತು. ಈತ ಅಲ್ಲಿಗೆ ಕತ್ತಲಾವರಿಸಿದ ಮೇಲೆ ತಲುಪಿದ್ದಾರೆ. ಆದರೆ, ಗೂಡಂಗಡಿ ಮನುಷ್ಯ ಬೀಗ ಹಾಕಿ ಹೋಗಿದ್ದಾನೆ. ಇವರಿಗೆ ಸಿಕ್ಕಪಟ್ಟೆ ಸುಸ್ತಾಗಿತ್ತು.

ಜೊತೆಗೆ ಸುರಿವ ಹಿಮ. ಏರುತ್ತಲಿದ್ದ ಚಳಿ. ಬಹುಶಃ ಹೆದರಿ ಬಿಟ್ಟರಿರಬೇಕು. ಅಷ್ಟರಲ್ಲಾಗಲೇ, ಅವರ ಗುಂಪಿನವರೆಲ್ಲ, ಈತ ಮುಂದೆ ಹೋಗಿದ್ದಾನೆ ಅಂದುಕೊಂಡು ಇಲ್ಲಿ ಬಂದು ತಲುಪಿದ್ದಾರೆ, ಈತ ಯಾಕೆ ಬರಲಿಲ್ಲ ಎಂದು ಮತ್ತೆ ಅನುಮಾನ ಬಂದು ಹುಡುಕಲು ಹೊರಟಾಗ ರಾತ್ರಿಯಾಗಿ ಬಿಟ್ಟಿತ್ತು. ನಾವೊಂದು ಮೂರ್ನಾಲ್ಕು ಮಂದಿ ಮೂರ್ನಾಲ್ಕು ದಾರಿಗಳಲ್ಲಿ ಹುಡುಕಾಡಿದಾಗ, ನನಗೆ ಈತ ಆ ಗೂಡಂಗಡಿ ಬಳಿ ಬಿದ್ದಿರುವುದು ಕಂಡಿತು.

ಪ್ರಜ್ಞಾಹೀನ ಸ್ಥಿತಿಯಲ್ಲಿ. ಆತನನ್ನು ಎಚ್ಚರಗೊಳಿಸಿದರೂ ಎದ್ದು ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಆ ದಿನ ರಾತ್ರಿ ನಾವವನನ್ನು ಹುಡುಕಿರದಿದ್ದರೆ ಆತ ಮರುದಿನ ಬೆಳಗ್ಗೆ ಆ ಹಿಮದಲ್ಲಿ ಹೆಣವಾಗಿರುತ್ತಿದ್ದ. ಸರಿಯಾದ ಸಮಯಕ್ಕೆ ನಾವು ಹೋದ ಕಾರಣ ಬಚವಾದರು.‌ ಅವರನ್ನು ಆ ಸ್ಥಿತಿಯಲ್ಲಿ ಅಲ್ಲಿಂದ ಇಲ್ಲಿಯವರೆಗೆ ಹೊತ್ತು ತಂದಿದ್ದೇವೆ. ಇಲ್ಲಿಗೆ ಬಂದು ಆತನ ಮೈಗೆ ಶಾಖ ನೀಡಿ ನೀಡಿ ಮರುದಿನದ ಹೊತ್ತಿಗೆ ಆತ ಏಳುವಂತಾದʼ ಎಂದು ಉಸಿರು ಬಿಟ್ಟರು.

ಮೊದಲೇ ಚಳಿ. ಕಥೆ ಕೇಳಿ ಇನ್ನೂ ತಣ್ಣಗಾಗಿಬಿಟ್ಟಿದ್ದೆ. ಅಲ್ಲೇ ಮನೆಮುಂದೆ ಹಾಕಿದ್ದ ಅಗ್ಗಿಷ್ಟಿಕೆ ಮುಂದೆ ಕುಳಿತು, ನಡೆದು ಸುಸ್ತಾದ ಕಾಲುಗಳನ್ನು ಬಿಸಿ ಮಾಡಿದಾಗ ಆಹಾ ಅನಿಸಿತು. ಹೊತ್ತು ಹೋದದ್ದೇ ತಿಳಿಯಲಿಲ್ಲ. ದೋಣಿ ಆ ತಂದೂಕ್‌ ತಂದು ಎದುರಿಗಿಟ್ಟಾಗಲೇ ಗೊತ್ತಾಗಿದ್ದು ಗಂಟೆ ಹತ್ತಾಯ್ತು ಎಂದು.

ದೋಣಿಯ ಕೈಯ ಹೊಸ ತಿಂಡಿಯನ್ನು ನೋಡಿ ಪಕ್ಕದ ರೂಮಿನಲ್ಲಿದ್ದ ಅವರು, ʻಅರೆ, ನಾವು ತಿಂಗಳಿಂದ ಇಲ್ಲಿ ಹೋಗಿ ಬಂದು ಮಾಡುತ್ತಿದ್ದೇವೆ. ನಮಗೇ ಗೊತ್ತಿಲ್ಲದ ತಿಂಡಿ ಈವತ್ತಷ್ಟೆ ಬಂದ ಇವರಿಗೆಂಗೆ ಸಿಗ್ತು!ʼ ಅಂತ ಹುಬ್ಬೇರಿಸಿ, ಬಾಯಿಗಿಟ್ಟರು. ʻಆಹಾ ಎಂಥಾ ರುಚಿ, ನಮಗ್ಯಾಗೆ ಮಾಡಿಯೇ ಕೊಟ್ಟಿಲ್ಲ ಇದನ್ನ ರಾಮ್  ಲಾಲಾ?ʼ ಎಂದು ಮತ್ತೆ ಮನೆಮಂದಿಯ ಸಲುಗೆಯಿಂದೆಂಬಂತೆ ಅವನಿಗೆ ಕುಟುಕಿದರು.

ʻಅಯ್ಯೋ ನೀವು ಕೇಳೇ ಇಲ್ಲ ನೋಡಿ. ಅವರು ಬಂದ ತಕ್ಷಣ ಕೇಳಿದ್ದು ಲೋಕಲ್ ಏನಿದೆ ಅಂತ. ಹಾಗಾಗಿ ಮಾಡಿದ್ದು, ನಿಮ್ಗೂ ಈಗ್ಲೇ ಕೊಡ್ತೇನೆ ಬಿಡಿ, ರೆಡಿ ಇದೆ ಅನ್ನುತ್ತಾ ಮತ್ತೊಂದು ಪ್ಲೇಟ್‌ ತಂದೂಕ್‌ ತರಲು ಒಳ ಹೋದರು.

ಇಷ್ಟೆಲ್ಲ ಕಥೆಯಾಗಿ ಅರ್ಧ ಗಂಟೆಯೂ ಕಳೆದಿರಲಿಲ್ಲ. ಸುಸ್ತಿನಿಂದ ಇನ್ನೇನು ಮಲಗಬೇಕು ಅಂದುಕೊಳ್ಳುವಷ್ಟರಲ್ಲಿ, ಮಾತು ಕೇಳಿ ಹೊರಗಿಣುಕಿದರೆ, ಮಣಭಾರದ ಬ್ಯಾಗುಗಳನ್ನು ಹೊತ್ತ  ಮೂರುಮಂದಿ ರಾಮ್‌ ಲಾಲನ ಅಂಗಳದಲ್ಲಿ ನಿಂತಿದ್ದರು. ಏನೋ ಮಾತುಕತೆಗಳಾದ ಮೇಲೆ ಕೀ ಹಿಡಿದುಕೊಂಡು ಪಕ್ಕದ ರೂಮಿಗೇ ಬಂದರು.

ನಾನು ಮಲಗಿ ನಿದ್ದೆ ಹೋದೆ. ಬೆಳಗ್ಗೆ ಎದ್ದ ಮೇಲೆ ಗೊತ್ತಾಯಿತು. ಈ ಮೂವರಲ್ಲಿ ಒಬ್ಬ, ಇದಕ್ಕೂ ಮೊದಲೇ ಈ ಗ್ರಹಣಕ್ಕೆ ಎರಡು ಬಾರಿ ಬಂದಿದ್ದರೂ ಈ ಬಾರಿ ದಾರಿ ತಪ್ಪಿ ಎಲ್ಲೆಲ್ಲೋ ಸುತ್ತಾಡಿ ಕೊನೆಗೂ ರಾತ್ರಿ ಹತ್ತು ದಾಟಿದ ಮೇಲೆ ತಲುಪಿದ್ದರು!

ಪಾರ್ವತೀ ಕಣಿವೆಯ ಬಗ್ಗೆ ಸಾಕಷ್ಟು ಕೇಳಿದ್ದೆ, ಓದಿದ್ದೆ. ಒಂದೆರಡು ಚಾರಣ ಕೂಡಾ ಹಿಂದೆ ಮಾಡಿದ್ದೆ. ಸ್ಪಿತಿ ಕಣಿವೆಯೊಂದಿಗಿನ ಇದು ಸಂಪರ್ಕ ಸಾಧಿಸುವ ಪಿನ್ ಕಣಿವೆಯಲ್ಲೂ ಅಲ್ಪ ಸ್ವಲ್ಪ ಸುತ್ತಾಡಿದ್ದೆ. ಎಷ್ಟೋ ಮಂದಿ ಸೋಲೋ ಮರುಳಿನಲ್ಲಿ ಈ ಕಣಿವೆಯಲ್ಲಿ ಕಳೆದುಹೋಗಿ ಹೆಣವಾದದ್ದೂ ಇದೆ.

ಹಿಮಾಲಯವಷ್ಟೇ ಅಲ್ಲ, ಯಾವುದೇ ಪರ್ವತ ಕಣಿವೆಗಳು ರುದ್ರ ರಮಣೀಯವೆನಿಸುವುದು ಅದಕ್ಕೇ. ಇಲ್ಲಿ ಅತೀ ಹುಚ್ಚು/ ಮೋಜು ಸಲ್ಲ. ಭಕ್ತಿ-ಗೌರವದೊಂದಿಗೆ ಭಯವೂ ಇರಬೇಕು. ಅದಕ್ಕೇ, ಈ ಕಾಡೆಂಬುದು ನಿಗೂಢ, ವಿಸ್ಮಯ, ಅನೂಹ್ಯ.

ಹಾಂ, ಒಂದು ವಿಷಯ ಹೇಳಲು ಮರೆಯಬಾರದು, ಆಗೋದೆಲ್ಲ ಒಳ್ಳೇದಕ್ಕೆ ಅಂತಾರಲ್ಲ, ಈ ಮಾತು ನಿಜ ಅನಿಸಿದ್ದು ಕಷ್ಟದ ಹಾದಿಯಾಗಿ ಇಳಿದಾಗ. ಸುಲಭದ ಹಾದಿಯ ಮನಮೋಹಕ ದಟ್ಟ ಕಾಡು ಕಷ್ಟದ ಹಾದಿಯಲ್ಲಿರಲಿಲ್ಲ. ಮೈಲುಗಟ್ಟಲೆ ಗಂಟೆಗಟ್ಟಲೆ ಮಧ್ಯಾಹ್ನದಲ್ಲೂ ತಂಪು ನೆರಳು ಹಾಸಿದ್ದ ಆ ಕಾಡಿನ ನಡಿಗೆಯ ಸುಖ ಇಳಿಯುವಾಗ ಬಂದ ದಾರಿಯಲ್ಲಿರಲಿಲ್ಲ. ಹತ್ತಲು ಆ ದಾರಿ, ಇಳಿಯಲು ಈ ದಾರಿ, ನಮ್ಮ ಆಯ್ಕೆ ಸರಿಯಾಗಿಯೇ ಇತ್ತು ಅಂದುಕೊಳ್ಳುತ್ತಲೇ ನೆಮ್ಮದಿಯಿಂದ ಆ ಕಣಿವೆ ʻಪಾರ್ವತಿʼಗೆ ಮನದಲ್ಲೇ ನಮಿಸಿದೆ.

‍ಲೇಖಕರು ರಾಧಿಕ ವಿಟ್ಲ

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: