ಪೂರಿ ಜೊತೆಗೆ ಸವಿಪಾಯಸ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ…

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ನವರಾತ್ರಿ ಬಂದ್ರ ನನಗ ಕನ್ಯಾಭೋಜ್‌ ಊಟದ್ದೇ ಧ್ಯಾನ. ನಮ್ಮೂರಾಗ ಉತ್ತರ ಭಾರತದವರು ಭಾಳ ಮಂದಿ. ಹಂಗಾಗಿ ನವರಾತ್ರಿ ಅಂದ್ರ ನಮಗ ರಾಮ್‌ಲೀಲಾ ನಡೆಯುವ ಚಳಿರಾತ್ರಿಗಳು. 

ನವರಾತ್ರಿ ಅಂದ್ರ ಸಪ್ತಮಿ, ಅಷ್ಟಮಿ ಹಾಗೂ ಮಹಾನವಮಿಗೆ ನಡಿಯುವ ಕನ್ಯಾಭೋಜ್‌ಗಳು

ನವರಾತ್ರಿ ಅಂದ್ರ ಬನ್ನಿಮುಡದು, ಬಂಗಾರದ್ಹಂಗ ಇರೂನು ಅಂತ ಪರಸ್ಪರ ಹಾರೈಸಿ, ದೊಡ್ಡೋರಿಂದ ಆಶೀರ್ವಾದದ ರೂಪದೊಳಗ ನಾಣ್ಯ ಕೂಡಿಡೂದು.

ಈ ಕನ್ಯಾಭೋಜ್‌ ಅಂತ ಹತ್ತರೊಳಗಿನ ಪುಟ್ತಾಯಿಗಳಿಗೆ  ಸಾಲಕ್ಕ ಕುಂದರಸಿ, ಪಾದ ಪೂಜೆ ಮಾಡಿ, ಆರತಿ ಎತ್ತಿ, ರುಚಿರುಚಿ ಊಟ ಮಾಡಿಸಿ, ತಮ್ಮ ತಮ್ಮ ಶಕ್ತ್ಯಾನುಸಾರ ಉಡುಗೊರೆ ಕೊಡೂದು. 

ನಮ್ಮಪ್ಪನ ಸ್ನೇಹಿತರ ಬಳಗದೊಳಗ ಭಾಳ ಹೆಣ್ಮಕ್ಕಳು ಇರಲಿಲ್ಲ. ಎಲ್ಲ ಗಂಡುಜೀವಗಳೇ. ಹಿಂಗಾಗಿನೂ ನಾನು ಅಗ್ದಿ ಪ್ರೀತಿಯಿಂದ ‘ಕಾಂಚ್‌ ಕಿ ಗುಡಿಯಾ, ಮಿಶ್ರ ದಿ ಪುಡಿಯಾ’ ಅನ್ನೂಹಂಗ ಬೆಳದೆ. ಅಂದ್ರ ಗಾಜಿನ ಗೊಂಬೆ ಹಂಗ, ಸಕ್ಕರೆಯ ಮೂಟೆ ಹಂಗ ಪ್ರೀತಿ ಮಾಡ್ತಿದ್ರು. 

ನವರಾತ್ರಿಯೊಳಗ ಘಟ್ಟ ಸ್ಥಾಪನೆ ಅತಿ ಪ್ರಮುಖ ಆಚರಣೆ. ಮೂರು ದಿನ, ಐದು ದಿನ, ಏಳು ದಿನ, ಒಂಬತ್ತು ದಿನ ಹಿಂಗ ಅವರವರ ಮನ್ಯಾಗ ಅನುಕೂಲ ಇದ್ದಷ್ಟು ದಿನದ ಘಟ ಸ್ತಾಪನೆ ಮಾಡ್ತಾರ. ತಮ್ಮ ಹೊಲದಿಂದ (ಈಗ ಯಾರ ಹೊಲದಿಂದಾದ್ರೂ ಆದೀತು) ಮಣ್ಣು ತಂದು, ಜಗುಲಿ ಮ್ಯಾಲೆ ಹಾಕ್ತಾರ. ಅದೆಷ್ಟು ದಿನದ ಘಟ ಇರ್ತದೊ ಅಷ್ಟು ಬಗೆಯ ಧಾನ್ಯ ಅದರೊಳಗ ಹಾಕ್ತಾರ. ಅವು ಮೊಳಕಿಯೊಡದು ಸಸಿ ಆಗ್ತಾವ. ಪೂರ್ತಿ ಒಂಬತ್ತು ದಿನ ಸ್ತಾಪನೆ ಮಾಡಿದವರ ಮನ್ಯಾಗಂತೂ ಪೈರು ಬೆಳ್ದಂಗ ಬೆಳದು, ದೇವರು ಕಾಣದ್ಹಂಗ ಆಗಿರ್ತದ.

ನಮ್ಮನ್ಯಾಗ ಈ ಪದ್ಧತಿ ಇರಲಿಲ್ಲ. ಹಂಗಾಗಿ ನನಗ ಯಾವಾಗಲೂ ಈ ಪದ್ಧತಿ ಇರೋರ ಮನೀಗೆ ಹೋಗೂದು ಭಾರಿ ಖುಷಿ ಕೊಡ್ತಿತ್ತು. ಅವರೂ ಐನಾರ ಹುಡುಗಿ, ಪುಟ್ತಾಯಿ, ಪುಟ್ತಾಯವ್ವ, ಗುರ್ತಾಯಿ ಅಂತ ಕರೀತಿದ್ರು. ಕರದು ಉಣ್ಣಾಕ ಕೊಡ್ತಿದ್ರು. ಅವರ ಮನ್ಯಾಗೊಂದು ನನ್ನಿಂದ ಆರತಿ ಮಾಡಸೂದು ಕಾಯಂ ಇತ್ತು. 

ಗಂಟೆ ಬಾರಸ್ಕೊಂತ ಆರತಿ ಬೆಳಗೂದು ಅಷ್ಟು ಸರಳಲ್ಲ. ಆದರೂ ಮಾಡ್ತಿದ್ದೆ. ಯಾಕಂದ್ರ ನಂತರದ ಪೂರಿ ಪಾಯಸದ ಭೂರಿ ಭೋಜನದ ಕಡೆಗೆ ಆಕರ್ಷಣೆ ಇರ್ತಿತ್ತು. 

ರಂಜಾನಿನ ಶೀರ್‌ಖುರ್ಮಾ (ಸುರಕುಂಬಾ ಇದರ ಅಪಭ್ರಂಶ) ನವರಾತ್ರಿಯ ಖೀರು ಅಗ್ದಿ ಅವಳಿ ಜವಳಿ ಇದ್ದಂಗ್ರಿ. 

ಗಟ್ಟಿ ಹಾಲು, ಹುಡುಗಿ ಗ್ರಾಮದ ಹಾಲು ಇದ್ರಂತೂ ಭಾರಿ ರುಚಿ. ಆ ಹಾಲು ಕಾಯಾಕ ಇಟ್ಟು, ಮೊದಲೇ ಒಂದಷ್ಟು ಖರ್ಜೂರ ಹಾಗೂ ಅಂಜೀರು ನೀರಾಗ ನೆನಿಸಿ ಇಟ್ಟಿರ್ತಾರ. ಹಾಲು ಉಕ್ಕಿ ಬಂದಾಗ ಒಂದ್ಹನಿ ನೀರು ಹಾಕಿ, ಅದರೊಳಗ ಈ ನೆನೆಸಿಟ್ಟ ಖರ್ಜೂರು ಮತ್ತು ಅಂಜೀರು ಅದರೊಳಗ ಕುದಿಯಾಕ ಹಾಕ್ತಾರ. ಹಾಲಿಗೆ ಅಗ್ದಿ ತಿಳಿಗುಲಾಬಿ ಬಣ್ಣ ಬರೂಹಂಗ ಅವು ನೆನೀತಾವ. ತಮ್ಮ ರುಚಿ ಬಿಟ್ಕೊತಾವ. 

ಹಿಂಗ ಕುದಿಯೂ ಹಾಲಿಗೆನೆ, ಒಂಚೂರು, ಚೂರೆ ಚೂರು… ಶುಂಠಿ ಪುಡಿ, ಸ್ವಲ್ಪ ಹೆಚ್ಗಿ ದಾಲ್ಚಿನ್ನಿ (ಚಕ್ಕೆ) ಪುಡಿ ಹಾಕ್ತಾರ. ಈಗ ಮತ್ತ ಹಾಲಿನ ಬಣ್ಣ ಚೂರು ಬದಲಾಗ್ತದ.  

ಹಿಂಗ ಬಣ್ಣ ಬದಲಾಗುವಾಗಲೇ ಏಲಕ್ಕಿಯನ್ನೂ ಹಾಕಲಾಗುತ್ತದೆ. ಸಣ್ಣಗೆ ಏಲಕ್ಕಿ ಮತ್ತು ಚಕ್ಕೆಯ ವಾಸನೆ ಬರೂಮುಂದ, ಕುದಿಯಲು ಹಾಕಿದ ಖರ್ಜೂರ ಪೂರ್ತಿ ತನ್ನ ರುಚಿ ಬಿಟ್ಟದ ಅಂತನಿಸಿದಾಗ, ಒಣ ಕೊಬ್ಬರಿ ಹೆರದು ಹಾಲಿಗೆ ಹಾಕ್ತೇವಿ. ಅದು ಸಾವಕಾಶ ತನ್ನ ಎಣ್ಣಿ ಬಿಡಾಕ ಶುರು ಮಾಡ್ತದ. ಹಂಗ ಎಣ್ಣಿ ಬಿಡೂಮುಂದ ಗಸಗಸೆಗೆ ಚೂರು ತುಪ್ಪ ಹಾಕಿ, ಹುರದು ಅದನ್ನೂ ಹಾಲಿಗೆ ಹಾಕ್ತೀವಿ. ಹಿಂಗ ಹಾಕೂಮುಂದ ಹಾಲಿನೊಳಗ ಕೈ ಆಡಿಸೂದು ಮರಿಬಾರದು. ಅಡುಗೆ ಮಾಡಾಕ ಉಳ್ಳಾಗಡ್ಡಿ ಹೆಚ್ಚಬಾರದು. ಮುಟ್ಟಬಾರದು. ಇಲ್ಲಾಂದ್ರ ಆಲು ಒಡೀತಾವ.

ಹಿಂಗ ಹಾಲು ಕುದ್ದುಕುದ್ದು ಕಾಲು ಭಾಗ ನಮ್ಮ ಅಡುಗೆ ಮನಿಯಮಾಡು ಮುಟ್ಟಿರ್ತದ. ಪಾತ್ರೆಯ ಕಾಲು ಭಾಗ ಖಾಲಿ ಆಗಿರ್ತದ. ಹಿಂಗಾದಾಗ ಗೋಡಂಬಿ, ಬದಾಮಿ, ಪಿಸ್ತಾ, ಚಿರೊಂಜಿಗಳನ್ನು ನೆನಿ ಇಟ್ಟು, ಸಣ್ಣಗೆ ಕಟ್‌ ಮಾಡಿ, ಅವನ್ನೂ ತುಪ್ಪದಾಗ ಘಂ ಅಂತ ಹುರುದು ಇಡೂದು. ಚಿರೊಂಜಿ ಸಿಪ್ಪಿ ತಾನೇಬಿಚ್ಕೊಂಡಿರ್ತಾವ. 

ಹಾಲು ತಿಳಿಗುಲಾಬಿ ಬಣ್ಣಕ್ಕ ಬಂದಿರ್ತದ. ಕೊಬ್ಬರಿ ಎಣ್ಣಿ ಬಿಟ್ಟು, ತೇಲ್ತಿರ್ತದ. ಗಸಗಸೆ ಹೊಟ್ಟಿಯುಬ್ಬಿಸಿಕೊಂಡಿರ್ತಾವ. ಶ್ಯಾವಿಗೆ ಹಾಕಿ ಮುಚ್ಚಿಟ್ಬಿಡೂದು. ಆಮೇಲೆ ಶ್ಯಾವಿಗಿ ಸೈತ ತನ್ನ ಸೆಡವು ಕಳಕೊಂಡು, ಹಾಲಿನ ಪ್ರೀತಿಗೆ ಮೃದುಕೋಮಲವಾಗದಾಗ ಈ ಎಲ್ಲ ಒಣಹಣ್ಣುಗಳನ್ನೂ ಹಾಕೂದು. 

ಮತ್ತ ಇದರ ಜೊತಿಗೆ ಬಿಸಿಬಿಸಿ ಪೂರಿ ಜೊತಿಗೆ ಈ ಖೀರ್‌ ಸವಿಯೂದಂದ್ರ… ನವರಾತ್ರಿಯ ಎಲ್ಲ ತಾರೆಗಳೂ ಕಣ್ಮುಂದ, ಮನಸಿನಾಗ ಮಿಣಮಿಣ ಅಂತಿರ್ತಾವ. 

ಕೆಲವರು ಬಿಸಿಪೂರಿ, ಬಿಸಿ ಪಾಯಸ ತಿಂತಾರ. ಇನ್ನೂ ಕೆಲವರು ಪಾಯಸ ಬೆಳಗ್ಗೆನೆ ಮಾಡಿ, ಫ್ರಿಜ್‌ನಾಗಿಟ್ಟು, ಬಿಸಿಬಿಸಿ ಪೂರಿ, ತಣ್ಣನೆಯ ಪಾಯಸದ ಜೊತಿಗೆ ಸವೀತಾರ. 

ಇನ್ನೂ ಕೆಲವರು, ಶ್ಯಾವಿಗೆಯ ಬದಲು ಅಕ್ಕಿ ನುಚ್ಚು ಹಾಕಿನೂ ಖೀರ್‌ ಮಾಡ್ತಾರ. ಬಾಸುಂದಿ ಸಹ ಅಗ್ದಿ ಛೊಲೊ ಜೋಡಿ ಖಾದ್ಯ. ಈ ನವರಾತ್ರಿಯೊಳಗ ಪೂರಿ, ಖೀರು, ಪೂರಿ ಬಾಸುಂದಿ, ಪೂರಿ ಹಲ್ವಾ, ಹಿಂಗ ದಿನಾ ಬಿಟ್ಟು ದಿನಾ ಪೂರಿ ಇರೂದೆನೆ. 

ಪೂರಿ ಖೀರು… ಅದಾದ ಮೇಲೆ ಚಿತ್ರಾನ್ನ, ಅದನ್ನಲ್ಲಿ ಬಗಾರ್‌ ಅನ್ನ ಅಂತಾರ. ಅದಕ್ಕ ಮೊಸರು ಬಜ್ಜಿ ಇಲ್ಲಾಂದ್ರ ಖಮ್ಮನ್ನುವ ಸೋರೆಕಾಯಿ ಸಾರು. ಇಷ್ಟು ಉಣಿಸಿ, ಕಣ್ತುಂಬಿಕೊತಾರ. ಮಕ್ಕಳಿಗೆ ಇಷ್ಟ ಅಂತ ಹಪ್ಪಳ, ಪಾಪಡಿ, ಬೋಟಿಗಳಿಗೆ ಕೊರತೆ ಇರೂದಿಲ್ಲ.

ಚಕ್ಕಳಂಬಕ್ಕಳ ಹಾಕ್ಕೊಂಡು ಕುಂತಿರುವ ಪುಟ್ಟ ಪಾದ ಉಂಡು ಮುಗಸೂದ್ರೊಳಗ ಜೋಮು ಬಂದಿರ್ತಾವ. ಆ ಪುಟ್ಟ ಪಾದಗಳ ಸೇಂಗಾ ಕಾಳಿನ್ಹಂಗ ಕಾಣುವ ಪುಟ್ಟ ಬೆರಳುಗಳನ್ನು ಸಾವಕಾಶಗೆ ನೇವರಿಸಿ, ಮತ್ತೊಮ್ಮೆ ಅರಿಸಿಣ, ಕುಂಕುಮ ಹಚ್ಚಿ ಮತ್ತ ಕಳಸ ಬೆಳಗ್ತಾರ. 

ಹಣಿಗೆ ದುಂಡಗೆ ಕುಂಕುಮ ಹಚ್ಕೊಂಡು, ಹೊಳೆಯುವ ದೀಪಗಳ ಬಿಂಬವನ್ನೇ ಕಣ್ತುಂಬಿಕೊಂಡು ಕುಂತ ಪುಟ್ಟ ದೇವತೆಯರು, ದೀಪಕ್ಕ ಕೈ ಮುಗಿದು ಕುಂತಿರ್ತಾರ. 

ಹಿಂಗ ಪುಟ್ತಾಯಿಗಳನ್ನು ಗೌರವದಿಂದ ನಮಿಸುವ ಮನಿ ಯಜಮಾನರು, ಪುಟ್ತಾಯಿ ಬಂದು, ವಿರಾಜಮಾನ ಆಗಿದ್ದಕ್ಕ ಉಡುಗೊರೆ ಕೊಡ್ತಾರ. ಸೋಲಾಸಿಂಗಾರದ ಎಲ್ಲ ಪ್ರಸಾಧನಗಳನ್ನೂ ಉಡಿ ತುಂಬ್ತಾರ. 

ಅವು ಲುಟುಲುಟು ಅಂತ ಎಲ್ಲಾನೂ ಉಡೆಯೊಳಗ ಇಟ್ಕೊಂಡು ಪುಟ್ಟ ಹೆಜ್ಜಿ ಇಟ್ಕೊಂಡು ಅಮ್ಮನ ಹತ್ರ ಹೋಗ್ತಾವು. ಈ ಹಬ್ಬದ ಸಂಭ್ರಮನೆ ಚಂದ.

ಹಾಲುಗೆನ್ನೆಯ ಬಾಲೆಯರು ಮತ್ತು ಬಾಳೆಲೆ ಅಥವಾ ಮುತ್ತುಗದೆಲೆಯ ಮೇಲಿನ ಪೂರಿ ಖೀರು.. ಮರೆತೆನೆಂದರೂ ಮರೆಯಲಾರೆ ಈ ನವರಾತ್ರಿಯ ಸಂಭ್ರಮವ…

‍ಲೇಖಕರು ಅನಾಮಿಕಾ

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: