ಹೌದು ಅದು ಅವಳೇ.. ದಿಯಾ ಪಾಲಕ್ಕಲ್

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

। ಕಳೆದ ವಾರದಿಂದ ।

ʼಅಮ್ಮಚ್ಚಿ’ ಸಿನೆಮಾ ಆದ ನಂತರ ರಿಲೀಸ್ ಆದದ್ದು ತೆಲುಗಿನ “ಮಹಾನಟಿ” ಸಿನೆಮಾ. ಆದರೆ, ಎಂತಾ ಆಶ್ಚರ್ಯವೆಂದರೆ, ಆ ಸಿನೆಮಾದಲ್ಲಿ ಇರುವ ದೃಶ್ಯವೊಂದನ್ನು ನಮ್ಮ ಅಮಚ್ಚಿ‌ ಶೂಟಿಂಗ್ ನೋಡಿಯೇ ಮಾಡಿದ್ದರೇನೋ ಅನ್ನುವಷ್ಟು ಹೋಲುವಂತಾ ಸನ್ನಿವೇಶವೊಂದು ನಮ್ಮ ಶೂಟಿಂಗ್ನಲ್ಲಿ ನಡೆದಿತ್ತು…

“ಮಹಾನಟಿ” ಯಲ್ಲಿ ಒಂದು ಸನ್ನಿವೇಶವಿದೆ, ಹೀರೋಯಿನ್ ಮಹಾನಟಿ (ಸಾವಿತ್ತಿ ) ಶಾಟ್ ಗೆ ತಯಾರಾಗಿ ಕೂತಿದ್ದಾರೆ.. ಶಾಟ್ ನಲ್ಲಿ ಆಕೆ ಆಳಬೇಕು, ಗ್ಲಿಸರಿನ್ ಇಲ್ಲ ಎನ್ನುವ ಕಾರಣಕ್ಕೆ ನಿರ್ದೇಶಕರು ಶೂಟಿಂಗ್ ಪ್ಯಾಕಪ್ ಮಾಡುವ ನಿರ್ಧಾರ ಮಾಡುತ್ತಾರೆ. ಆಗ ಆ ಮಹಾನಟಿ ಗ್ಲಿಸರಿನ್ ಇಲ್ಲದೆ ಅಳುತ್ತೇನೆ‌ ಶೂಟಿಂಗ್ ಮುಂದುವರೆಸಿ ಎನ್ನುತ್ತಾಳೆ ಅದಕ್ಕೆ ನಿರ್ದೇಶಕರು ಬೇಡಾ, ಅದು ಕಷ್ಟ ಒಂದೇ ಕಣ್ಣಲ್ಲಿ ನೀರು ಬರಬೇಕು ಅಂದಾಗ ಮಹಾನಟಿ ಯಾವ ಕಣ್ಣಲ್ಲಿ ಬೇಕು? ಅಂತಾ ಕೇಳಿ ಎಲ್ಲರನ್ನೂ ಬೆರಗುಗೊಳಿಸುತ್ತಾಳೆ.

ಅಂತಹಾ ಪುಟ್ಟ ಮಹಾನಟಿಯೊಬ್ಬಳು ನಮ್ಮಲ್ಲಿದ್ದಳು… ಸಿನೆಮಾ ನೋಡಿದವರಿಗೆ ಸುಳಿವು ಸಿಕ್ಕಿರಲೂಬಹುದು… ಹೌದು ಅದು ಅವಳೇ, ಅಮ್ಮಚ್ಚಿಯ ಪುಟ್ಟ ಗೆಳತಿ ಸೀತಾ ಪಾತ್ರದಾರಿ ದಿಯಾ ಪಾಲಕ್ಕಲ್.. ಶೂಟಿಂಗ್ ನ ಮೊದಲ ದಿನದಿಂದ ಕಡೆಯವರೆಗೂ ಅದೇ ಉತ್ಸಾಹ, ಅದೇ ಡೆಡಿಕೇಷನ್,. ಎಷ್ಡು ಹೊತ್ತಿಗೆ ಏಳಬೇಕು, ಎಷ್ಟು ನಡೆಯಬೇಕು, ಎಷ್ಟು ಕುಣಿಯಬೇಕು ಎಲ್ಲಕ್ಕೂ ಸೈ.

ನಗಬೇಕೆಂದಾಗ ಮನಸ್ಪೂರ್ತಿ ನಗುತ್ತಾಳೆ. ಅಳಬೇಕೆಂದಾಗ ಶಾಟ್ ಗೆ ಮೊದಲು, ಹತ್ತು ನಿಮಿಷ ಯಾರೊಡನೆಯೂ ಮಾತಾಡದೇ ಕುಳಿತು ಅದೇನು ಯೋಚಿಸುತ್ತಾಳೋ ಗೊತ್ತಿಲ್ಲ ಶಾಟ್ ನಲ್ಲಿ ಮನಸಾರೆ ಅಳುತ್ತಾಳೆ (ಗ್ಲಿಸರಿನ್ ಇಲ್ಲದೆ,).. ಅಂತಹಾ ಮಹಾನ್ ಪ್ರತಿಭೆ ನಮ್ಮ ಸೀತಾ.. ಒಮ್ಮೆ ಒಂದು ಶಾಟ್ ಇತ್ತು. ಅಮ್ಮಚ್ಚಿ ಸೀತಾಳನ್ನು ಬಿಟ್ಟು ತಿರುಪತಿಗೆ ಹೊರಟು ಹೋಗಿದ್ದಾಳೆ, ಅಸಾಧ್ಯ ನೋವಲ್ಲಿರುವ ಸೀತಾ ಹುಲ್ಲುರಾಶಿಯ ಬಳಿ ಕೂತು ಅವಳ ನೆನಪಿನಲ್ಲಿರುತ್ತಾಳೆ.

“ಅಮ್ಮಚ್ಚಿಯನ್ನು ಕಾಣದೆ ಹೇಗಿರಲಿ?” ಎಂಬ ವೈದೇಹಿ ಮೇಡಂ ವಾಯ್ಸ್ ಓವರ್ ಬರುತ್ತದೆ. ಟ್ರಾಲಿಯಲ್ಲಿ ಕ್ಯಾಮೆರಾ ಸಿಧ್ಧವಾಗಿದೆ. ನಾನು, “ದಿಯಾ ಪುಟ್ಟಾ ಈ ಶಾಟ್ ನಲ್ಲಿ ನೀನು ಅಳಬೇಕು, ಅದೂ, ಕ್ಯಾಮೆರಾ ನಿನ್ನ ಬಳಿ ಬಂದಾಗ ಕಣ್ಣೀರು ಬಂದರೆ ಇನ್ನೂ ಚೆಂದಾ”. ಅಂದೆ. ಅದಕ್ಕೆ, “ಓಕೆ ಆಂಟಿ …. ಕಣ್ಣೀರು ಡ್ರಾಪ್ ಆಗಲೋ ಇಲ್ಲಾ ಹೋಲ್ಡ್ ಮಾಡಲೋ” ಅನ್ನುವುದೇ! ಅಂದಿದ್ದು ಮಾತ್ರವಲ್ಲ ಹೇಳಿದ ಹಾಗೇಯೇ ಸರಿಯಾಗಿ ಕ್ಯಾಮೆರಾ ಹತ್ತಿರ ಬಂದಾಗ ಕಣ್ಣೀರನ್ನು ಬೀಳಿಸಿ, ಇಡೀ ತಂಡವನ್ನು ಬೆಚ್ಚಿ ಬೀಳಿಸಿದ್ದಳು, ನಮ್ಮ ಆ ಪುಟ್ಟ ಮಹಾನಟಿ….

ನಟನೆ ನಮ್ಮ ಸಿನೆಮಾದ ಬಹು ದೊಡ್ಡ ಪ್ಲಸ್ ಪಾಯಿಂಟ್… ಬಹಳಷ್ಟು ಜನರ ಅಭಿಪ್ರಾಯವೇನೆಂದರೆ, ನಮ್ಮ ಕಲಾವಿದರು ಒಬ್ಬರಿಗಿಂತಾ ಒಬ್ಬರು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ ಎಂಬುದು.. ಅದು ನಿಜವಾದರೆ ಅದಕ್ಕೆ ಕಾರಣ ನಮ್ಮ ನಾಟಕ.‌ ಎರಡು ವರ್ಷ ಆಯಾ‌ ಪಾತ್ರಗಳೊಳಗೆ ಪರಕಾಯ ಪ್ರವೇಶ ಮಾಡಿದ್ದ ಕಲಾವಿದರೆಲ್ಲರೂ ಪಾತ್ರಗಳೇ ತಾವಾಗಿಬಿಟ್ಟಿದ್ದರು.

ಸಿನೆಮಾದ ಶೂಟಿಂಗ್ ಅಂದುಕೊಂಡದ್ದಕ್ಕಿಂತಾ ಮೂರು ದಿನ ಮೊದಲು ಮುಗಿಯಲು ಬಹುಶಃ ಇದೂ ಒಂದು ಕಾರಣವಿರಬಹುದು…ಶೂಟಿಂಗ್ ಮಾತ್ರವಲ್ಲ, ಡಬ್ಬಿಂಗ್ ಸ್ಟುಡಿಯೋದಲ್ಲೂ ಪಟ್‌ಪಟ್ ಅಂತಾ ಡಬ್ಬಿಂಗ್ ಮಾಡಿ ಹೋಗುತ್ತಿದ್ದ ನಮ್ಮ ಕಲಾವಿದರ ಸ್ಪೀಡ್ ಗೆ ಸೌಂಡ್ ಇಂಜಿನಿಯರ್ರೇ ಶಾಕ್ ಆಗಿದ್ದರು…

ನಮ್ಮ ತಂಡದ ವಿಶೇಷತೆಯೆಂದರೆ,. ಸಣ್ಣ ಪಾತ್ರ, ದೊಡ್ಡ ಪಾತ್ರ ಎಂಬ ಭೇದವಿಲ್ಲದೆ, ಎಲ್ಲಾ ಪಾತ್ರಗಳನ್ನೂ, ಪಾತ್ರಕ್ಕೆ ಸರಿಯಾಗಿ ಹೊಂದುವ ಕಲಾವಿದರಿಂದಲೇ ಮಾಡಿಸಿರುವುದು…. ಈ ಸಂದರ್ಭದಲ್ಲಿ ಹೇಳಬೇಕಾದ ಮತ್ತೊಂದು ವಿಶೇಷವಿದೆ… ನಮ್ಮ ಪುಟ್ಟಮ್ಮತ್ತೆ ರಾಧಾಕೃಷ್ಣ ಉರಾಳರ ಕುಟುಂಬವೇ ಕಲಾವಿದರ ಕುಟುಂಬ.. ಅಂದಮೇಲೆ ಬಿಡುವುದುಂಟೇ.?

ಪುಟ್ಟಮತ್ತೆ ,(ರಾಧಾಕೃಷ್ಣ ಉರಾಳ) ಚಿಕ್ಕ ಪುಟ್ಟಮ್ಮತ್ತೆ (ಅಧಿತಿ ಉರಾಳ) ಪರದೆ ಮೇಲೆ ಮತ್ತು ಪರದೆ ಹಿಂದೆ ಎಲ್ಲರ ಗಮನ ಸೆಳೆದ ಚುರುಕಿನ ಪುಟ್ಟಮಾಣಿ, (ವಾಸುದೇವ ಉರಾಳ) ವಾಸು (ವಿಶ್ವನಾಥ ಉರಾಳ) ಶಂಭಟ್ರು,( ಆನಂದ ಉರಾಳ ) ಬಾಣಂತಿ ತಾಯಿ( ರತ್ನ ಉರಾಳ)
ಒಟ್ಟಿನಲ್ಲಿ, ಫ್ಲಾಷ್ ಬ್ಯಾಕ್ ನಲ್ಲಿ ಬರುವ ಪುಟ್ಟಮತ್ತೆಯ ಮಗು ಶ್ರೀನಿವಾಸ ಉರಾಳನಿಂದ , ಹಿರಿಯ ಕಲಾವಿದರಾದ, ದೀಪಾವಳಿಯ ಭಜನೆಯನ್ನು ಹಾಡಿದ ಗೋವಿಂದ ಉರಾಳರವರೆಗೆ ಇಡೀ ಉರಾಳ ಕುಟುಂಬವೇ ಅಮ್ಮಚ್ವಿಯಲ್ಲಿ ಅಭಿನಯಿಸಿದ್ದು,, ಅಮ್ಮಚ್ಚಿ ಸಿನೆಮಾ ಅಥೆಂಟಿಕ್ ಕುಂದಾಪ್ರ ಭಾಷೆಯ ಸಿನೆಮಾವಾಗಲಿಕ್ಕೆ ಬಹು ಮುಖ್ಯ ಕಾರಣವಾಯಿತು….

ಬಹುತೇಕ ಎಲ್ಲಾ ಕಲಾವಿದರನ್ನೂ ಮೊದಲೇ ನಿರ್ಧರಿಸಿಯಾಗಿದ್ದರೂ, ಪುಟ್ಟಮ್ಮತ್ತೆ ತಾಯಿಯನ್ಬು ಬಾವಿಗೆ ತಳ್ಳಿದಾಗ ಕೂಗಾಡುವ ಎದುರು ಮನೆ ಅಜ್ಜಿ ಪಾತ್ರಕ್ಕೆ ಮಾತ್ರ ಕಲಾವಿದರು ಸಿಕ್ಕಿರಲಿಲ್ಲ, ಎಲ್ಲರೂ ಆ ನಿಟ್ಟಿನಲ್ಲಿ ಹುಡುಕಾಟ ನಡೆಸಿದ್ದೆವು. ಅದಾಗಲೇ ನಮ್ಮ ಚಿಕ್ಜಪ್ಪನ ಮಕ್ಕಳಾದ ರಶ್ಮೀ ರಕ್ಷಾ, ನಟಿಸಿದ್ದರು. ಅವರ ಮೊಮ್ಮಗಳು ಪುಟ್ಟ ಆನ್ಯಾಳಂತೂ ಪುಟ್ಟಮ್ಮತ್ತೆ ತಾಯಿ ಬಾವಿಗೆ ಬಿದ್ದಾಗ ಅತ್ತು ಅತ್ತು ನೋಡಿದವರ ಕರುಳು ಕಿವುಚುವ ಹಾಗೇ ಮಾಡಿಬಿಟ್ಟಿದ್ದಳು ಎಲ್ಲಾ ಪಾತ್ರ್ರಗಳಿಗೂ ಕಲಾವಿದರು ಸಿಕ್ಕಿದರೂ, ಅಜ್ಜಿ ಪಾತ್ರಕ್ಕೆ ಸಿಕ್ಕಿರಲಿಲ್ಲಾ.

ಎಲ್ಲರಲ್ಲೂ ಈ ಬಗ್ಗೆ ವಿಚಾರಿಸುವಾಗ ನಮ್ಮ ಚಿಕ್ಕಮ್ಮ ಕುತೂಹಲದಿಂದ ನನ್ನನ್ನು ನೋಡುತ್ತಿದ್ದುದನ್ನು ಗಮನಿಸಿಯೇ, ಮೂಲತಃ ನಟಿಯಾದ ನನಗೆ ಅವರಲ್ಲಿದ್ದ ನಟಿಸಬೇಕೆಂಬ ಆಸೆ ಕಾಣಿಸಿತ್ತು. ಆದರೆ ಅವರು ಈ ಪಾತ್ರಕ್ಕೆ ಸೂಟ್ ಆಗುತ್ತಾರ? ಆ್ಯಕ್ಟ್ ಮಾಡುತ್ತಾರ? ವಯಸ್ಸು ಸರಿಯಾಗುತ್ತದಾ? ಎಂಬ ಸಂದೇಹಗಳಿಂದ ಅವರನ್ನು ಕೇಳಲು ಹಿಂಜರಿದಿದ್ದೆ.

ಒಮ್ಮೆ ರಾತ್ರಿ ಮಲಗುವಾಗ ಅವರು ತಮ್ಮ ಹಲ್ಲು ಸೆಟ್ಟನ್ನು ತೆಗೆದು ಬಟ್ಡಲಿನಲ್ಲಿಟ್ಟು ಅವರನ್ನೇ ನೋಡುತ್ತಿದ್ದ ನನ್ನನ್ನು ನೋಡಿ ತಮ್ಮ ಬೊಚ್ವು ಬಾಯಲ್ಲಿ ನಕ್ಕಾಗ ಅರೇ, ಇಲ್ಲೇ ಇದ್ದಾರಲ್ಲಾ ನಮ್ಮ ಅಜ್ಜೀ ಎಂದು ಮನದೊಳಗೇ ಕುಣಿದಾಡಿದ್ದೆ…ಕೇಳುವುದಕ್ಕೆ ಮುಂಚೆಯೇ ಅವರು ಒಪ್ಪಿಯೂ ಆಯಿತು .. ಮುಖವೇನೋ ಪರ್ಫೆಕ್ಟ್ ಮ್ಯಾಚ್ ಆಯಿತು ಇನ್ನು ಪರ್ಫಾರ್ಮೆನ್ಸ್ ಹೇಗೆ? ಅಂತಾ ಅನುಮಾನದಲ್ಲಿದ್ದ ನಮ್ಮೆಲ್ಲರನ್ನೂ ದಂಗುಬಡಿಸುವಂತೆ ಮಾಡಿದ್ದು ಚಿಕ್ಕಮ್ಮನ ನಟನೆ…..

ಶೂಟಿಂಗ್ ನೋಡಲು ಬಂದಿದ್ದ ಊರ ಜನರು, ತಮ್ಮ ಗಂಡ, ಮಕ್ಕಳು ಎಲ್ಲರೆದುರು ಒಂದಿಷ್ಟೂ ಆಳುಕಿಲ್ಲದೆ ಬೋಳುಮಂಡೆ ಮಾಡಿಕೊಂಡು ಕೆಂಪುಸೀರೆಯುಟ್ಡು ಪಾತ್ರಕ್ಕೆ ತಯಾರಾಗಿ ನಿಂತ ಚಿಕ್ಜಮ್ಮ, ಆ್ಯಕ್ಷನ್ ಅಂದದ್ದೇ ತಡ, ಯಾರೋ ನಿಜವಾಗಿ ಬಾವಿಗೆ ಬಿದ್ದರೇನೋ ಎಂಬಂತೆ ಬಾಯಿಬಡೆದುಕೊಳ್ಳುತ್ತಾ ಕೂಗಾಡಲು ಶುರುಮಾಡಿದವರು, ಪಾತ್ರದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಕಟ್ ಹೇಳಿದರೂ ನಿಲ್ಲಿಸಿರಲಿಲ್ಲ. ಸಹ ನಿರ್ದೇಶಕರು ಹೋಗಿ, ” ಚಿಕ್ಕಮ್ಮಾ , ಶಾಟ್ ಮುಗೀತು” .ಎಂದಾಗ ಕೂಗಾಟ ನಿಲ್ಲಿಸಿದ ಚಿಕ್ಕಮ್ಮನಿಗೆ. ಇಡೀ ತಂಡ ಚಪ್ಪಾಳೆಯ ಸುರಿಮಳೆಯೇ ಸುರಿಸಿತ್ತು..

ಆಶ್ಚರ್ಯವೆಂದರೆ, ಬೇರೆ ಬೇರೆ ಆ್ಯಂಗಲ್ ಗಳಿಗಾಗಿ ಶಾಟ್ ರಿಪೀಟ್ ಅಂದಾಗ ಕೂಡಾ ಅವರು ಆಷ್ಟೇ ಎಮೋಷನ್ ಕೊಟ್ಟು ನಟಿಸಿದ್ದು….. ನಿಜಕ್ಕೂ ಇದು ನಮ್ಮ ಚಿಕ್ಕಮ್ಮನಾ ಎಂದು ಶಾಕ್ ನಲ್ಲಿದ್ದ ಶೆಟ್ರಿಗೆ, ಅವರಿಗೇ ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು ತುಂಬಿತ್ತು…. ನಂತರ ಇಡೀ ಸೆಟ್ ನಲ್ಲಿ ಎಲ್ಲರ ಬಾಯಲ್ಲೂ ಚಿಕ್ಕಮ್ಮನೇ…. ಒಮ್ಮೆ ನಮ್ಮಲ್ಲೇ ಯಾರೋ ಚಿಕ್ಕಮ್ಮನಿಗೆ ನಿಮ್ಮ ಹೆಸರು ಶಕುಂತಲ ಅಲ್ವಾ ಅಂದಾಗ ಅಲ್ಲೇ ಇದ್ದ ಚಿಕ್ಕಪ್ಪ,

” ಹಾ..ದುಂಬು ಖಾಲಿ ಸಕ್ಕು ಇತ್ತಿನಿ .. ತಲಾ ಬಲಾ ಪೂರಾ ಇತ್ತೆ ಬೈದ್ಂಡ್” ( ಹಾ‌..ಮೊದ್ಲು ಬರೀ ಶಕ್ಕು ಇತ್ತು ತಲಾ ಬಲಾ ಎಲ್ಲಾ ಈಗ ಬಂತು) ಆಂತಾ ತುಳು ಭಾಷೆಯಲ್ಲಿ ತಮಾಷೆ ಮಾಡುತ್ತಾ ಅಂದಾಗ ಚಿಕ್ಕಮ್ಮನ ಮುಖದಲ್ಲಿ ಖುಷಿ, ನಾಚಿಕೆ, ಹೆಮ್ಮೆ ಎಲ್ಲವೂ ತುಂಬಿದ ನಗು….ಕಲಾವಿದೆಗಾಗಿ ಅಷ್ಟೆಲ್ಲಾ ಹುಡುಕಾಡುತ್ತಿದ್ದ ನಮಗೆ, ನಮ್ಮೊಳಗೇ ಇಂತೊಬ್ನ ಕಲಾವಿದೆ ಅಡಗಿದ್ದಾರೆ ಎಂಬುದು ಹೇಗೆ ತಿಳಿಯಬೇಕಿತ್ತು?….

ಅಮ್ಮಚ್ಚಿ ಸಿನೆಮಾದ ಮತ್ತೊಂದು ಮಹತ್ತರ ವಿಷಯವೆಂದರೆ, ನಮ್ಮ ವೈದೇಹಿ ಮೇಡಂ ಕೂಡಾ ತೆರೆಯ ಮೇಲೆ ಕಾಣಿಸಿಕೊಂಡದ್ದು…. ನಾನು ಸಿನೆಮಾ ಚಿತ್ರಕತೆಗಾಗಿ ಮತ್ತೊಮ್ಮೆ ಅಮ್ಮಚ್ಚಿ ಕತೆ ಓದುವಾಗಲೇ ಸೀತಾ ಪಾತ್ರದ ಮೂಲಕ ತಾವೇ ಕತೆ ಹೇಳುವ ವೈದೇಹಿ ಮೇಡಂ ಅವರನ್ನು ತೆರೆಮೇಲೆ ತರಬೇಕೆಂದು ನಿಶ್ಚಯಿಸಿದ್ದೆ..

ಸಮುದ್ರ ತೀರದಲ್ಲಿ ಕುಳಿತು ತಮ್ಮ ಮುದ್ದಾದ ದನಿಯಲ್ಲೇ ವೈದೇಹಿ ಮೇಡಂ ಕತೆ ಶುರುಮಾಡುವಾಗ, ಆಗುವ ರೋಮಾಂಚನ ನನಗೆ ಮಾತ್ರವೇನೋ ಅಂದುಕೊಂಡಿದ್ದೆ. . ಆದರೆ ಆ ಘಳಿಗೆಯ ರೋಮಾಂಚನ ನನಗೆ ಮಾತ್ರವಲ್ಲ. ಎಲ್ಲಾ ಸಾಹಿತ್ಯಾಭಿಮಾನಿಗಳಿಗೆ ಎಂಬುದು ಗೊತ್ತಾದದ್ದು ಚಿತ್ರ ರಿಲೀಸ್ ಆದಾಗ ಬಂದ ಪ್ರತಿಕ್ರಿಯೆಗಳಿಂದ..

ಎಷ್ಟೋ ಜನ ವೈದೇಹಿಯವರ ಅಭಿಮಾನಿಗಳು ಅದಕ್ಕಾಗಿ ನನಗೆ ಧನ್ಯವಾದ ಕೂಡಾ ಹೇಳಿದ್ದುಂಟು. ಆಗೆಲ್ಲಾ ಖುಷಿಯಲ್ಲಿ ನಾನು ಮಾತೇ ಬಾರದ ಸ್ಥಿತಿಗೆ ತಲುಪುತ್ತಿದ್ದೆ…. ಇಂತಹ ಪ್ರತಿಯೊಂದು ಘಳಿಗೆ, ಪ್ರತಿಯೊಂದು ಕ್ಷಣವನ್ನೂ ನಾವೆಲ್ಲರೂ ಎಷ್ಟು ಅನುಭವಿಸುತ್ತಿದ್ದೆವೆಂದರೆ, ಪ್ರತಿದಿನವೂ ನಮಗೆ ಹಬ್ಬವೇ….ಹಬ್ಬ ನಮಗೆ ಮಾತ್ರವೇ? ಟೆಕ್ನಿಕಲ್ ಟೀಂ ಏನು ಹೇಳುತ್ತದೆ ಎಂಬುದು ಮುಂದಿನ ಸಂಚಿಕೆಯಲ್ಲಿ….

‍ಲೇಖಕರು ಚಂಪಾ ಶೆಟ್ಟಿ

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಸೊಗಸಾಗಿದೆ ಅಮ್ಮಚ್ಚಿ ಸರಣಿ . ಚಂಪಾ , ಧನ್ಯವಾದಗಳು.

    ಪ್ರತಿಕ್ರಿಯೆ
  2. ಪ್ರೇಮನಾಥ್

    ಸೃಜನಶೀಲ ನವ ನಿರ್ದೇಶಕಿ. ಶ್ರೀಮತಿ ಚಂಪಾ ರವರ ಈ ಅನುಭವ ಮಾಲಿಕೆ ಸಾಹಿತ್ಯ ಕಲೆ ಸಿನಿಮಾ ಆಸಕ್ತಿಯ ಆದರೆ ಅವಕಾಶ ಸಿಗದ ಮತ್ತು ಸರಿ ದಾರಿಗಳ ಕಾಣದ ಹಲವು ಉತ್ಸಾಹಿ ಪ್ರತಿಭಾವಂತರಿಗೆ ವಿಶೇಷವಾಗಿ ಯುವಕ ಯುವತಿಯರಿಗೆ ಬಹಳ ಸರಳವಾಗಿ ಮತ್ತು ಅಷ್ಟೇ ಆಕರ್ಷಕವಾಗಿ ಸಿನಿ ರಂಗದ ಬಗ್ಗೆ. ಉತ್ಸಾಹವನ್ನು ದುಪ್ಪಟ್ಟು ಗೊಳಿಸುವುದಲ್ಲದೆ ದೊಡ್ಡಮಟ್ಟದ ಉತ್ತೇಜನ ದೊಂದಿಗೆ ಧೈರ್ಯ ವನ್ನೂ ನೀಡಿ ಈ ರಂಗಕ್ಕೆ ಮುನ್ನುಗ್ಗಲು ಪ್ರೇರೇಪಿಸುತ್ತದೆ. ಪ್ರತಿವಾರದ ಲೇಖನಗಳು ತುಂಬಾ ಆಸಕ್ತಿದಾಯಕವಾಗಿ ಮೂಡಿಬರುತ್ತಿದೆ .ಅಭಿನಂದನೆಗಳು ಚಂಪಾ ರವರಿಗೆ ./ ಅವಧಿ ಗೆ ಸಹ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: